"ಅಟ್ಟೆಮಟ್ಟೆ,ಕೋಳಿಮಟ್ಟೆ….ಟೂ…”ಎಂದಗೆಳೆಯರು    -ಡಾ.ಹೆಚ್.ವಿ.ರಂಗಸ್ವಾಮಿ     

 "ಅಟ್ಟೆಮಟ್ಟೆ,ಕೋಳಿಮಟ್ಟೆ….ಟೂ…”ಎಂದಗೆಳೆಯರು                                                                 =ಡಾ.ಹೆಚ್.ವಿ.ರಂಗಸ್ವಾಮಿ     

 "ಅಟ್ಟೆಮಟ್ಟೆ,ಕೋಳಿಮಟ್ಟೆ….ಟೂ…”ಎಂದಗೆಳೆಯರು    -ಡಾ.ಹೆಚ್.ವಿ.ರಂಗಸ್ವಾಮಿ     

 "ಅಟ್ಟೆಮಟ್ಟೆ,ಕೋಳಿಮಟ್ಟೆ….ಟೂ…”ಎಂದಗೆಳೆಯರು                                                                 =ಡಾ.ಹೆಚ್.ವಿ.ರಂಗಸ್ವಾಮಿ                  

              

                           

   ನಾನು ಐದನೇ ತರಗತಿಯಲ್ಲಿದಾಗ ಯಾವುದೋ ಪ್ರಬಂಧವೊಂದನ್ನು ಬರೆಯಲು ನಮ್ಮ ಕನ್ನಡ ಮಾಸ್ತರು ನಮಗೆಲ್ಲಾ ಕೊಟ್ಟಿದ್ದುದು ನೆನಪಿದೆ.  ಆದರೆ ಪ್ರಬಂಧದ ವಿಷಯ ಯಾವುದೆಂದು ತಿಳಿದಿಲ್ಲ.  ನಾನು ಬರೆದ ಪ್ರಬಂಧದ ಬರವಣಿಗೆ ಮತ್ತು ನಿರೂಪಣೆಯನ್ನ ಮೆಚ್ಚಿದ ನಮ್ಮ ಕನ್ನಡ ಮಾಸ್ತರು-ಸಮಾದಪ್ಪನವರು-ಅದನ್ನ ಆರು, ಏಳನೇ ಕ್ಲಾಸಿನ ಹುಡುಗರಿಗೆಲ್ಲಾ ತೋರಿಸಿ ಒಂದೊಂದು ಏಟು ಕೊಟ್ಟಿದ್ದರಂತೆ.  ಅವರಿಗೂ ಅದೇ ವಿಷಯದ ಬಗ್ಗೆ ಬರೆಯಲು ತಿಳಿಸಿದ್ದಾಗ್ಯೂ ಅವೆಲ್ಲಾ ಅಂತಹ ಪ್ರಬುದ್ಧವಾಗಿರಲಿಲ್ಲವೆಂತಲೋ, ತಪ್ಪುಗಳಿದ್ದದ್ದಕ್ಕೋ ನನಗೆ ಸರಿಯಾಗಿ ತಿಳಿದಿಲ್ಲ. ಶಾಲೆ ಬಿಟ್ಟಾದ ಮೇಲೆ ನನ್ನ ಗೆಳೆಯರೆಲ್ಲಾ " ಅಟ್ಟೆ ಮಟ್ಟೆ, ಕೋಳಿಮಟ್ಟೆ…. ಟೂ…ಟೂ.” ಅಂತ ನನ್ನ ಮೇಲೆ ಮುನಿಸಿಕೊಂಡು ನನ್ನಿಂದ ಅಂತರ ಕಾಯ್ದುಕಂಡು ಹೋಗತೊಡಗಿದರು.  ಏನೂ ತಿಳಿಯದ ನಾನು ಕಕ್ಕಾ ಬಿಕ್ಕಿಯಾದೆ.  ಕೂಡಲೆ ನಾನು ನನ್ನ ಪರಮಾಪ್ತ ಗೆಳೆಯ ಓಂಕಾರನ ಮೊರೆ ಹೋಗಲಾಗಿ ವಸ್ತುಸ್ಥಿತಿಯೇನು ಅಂತ ತಿಳಿಯಿತು.  ಸಮಾದಪ್ಪ ಮಾಸ್ತರಿಗೆ ನನ್ನ ಪ್ರಬಂಧದ ವೈಖರಿಗಿಂತಲೂ ತನ್ನ ಕನ್ನಡ ಬೋಧನೆ ಅದೆಷ್ಟು ಪರಿಣಾಮಕಾರಿಯಾಗಿದೆ ಅಂತ ಅನ್ನುವುದನ್ನ ಸಾಕ್ಷೀಕರಿಸಲು ಒಬ್ಬ ಶಿಷ್ಯನ ಹುಡುಕಾಟದಲ್ಲಿದ್ದರು ಅನ್ನಿಸುತ್ತದೆ.  ಅದು ನನ್ನಿಂದ ಸಾರ್ಥಕವಾಗಲಾಗಿ ಪುಳಕಗೊಂಡ ಅವರು ನಮ್ಮಗಳ ಮಧ್ಯೆ ಮನಸ್ತಾಪ ತಂದಿಟ್ಟಿದ್ದರು. 

                          ನಮ್ಮ ಊರಿನ ಹತ್ತಿರದ ದೊಡ್ಡ ಊರೆಂದರೆ ನಮಗೆಲ್ಲಾ ಗೊತಿದ್ದದ್ದು ಪಂಚನಹಳ್ಳಿ.  ಕಣಕಟ್ಟೆ ಮತ್ತು ಬೆಲಗೂರುಗಳೂ ನಮಗೆ ಹತ್ತಿರವಿದ್ದ ಊರುಗಳೆ.  ಆದರೆ ಅವು ನಮ್ಮ ಜಿಲ್ಲೆಯ ಹೊರಗಿನ ಊರುಗಳು.  ಕಣಕಟ್ಟೆ ಹಾಸನ ಜಿಲ್ಲೆಗೂ, ಬೆಲಗೂರು ಚಿತ್ರದುರ್ಗ ಜಿಲ್ಲೆಗೂ ಸೇರಿದ್ದವು.  ಸಿನಿಮಾ, ಸಂತೆ ಇತ್ಯಾದಿಗಳಿಗೆ ನಾವು ಕಣಕಟ್ಟೆಗೆ, ಸಿನಿಮಾ, ಫೋಟೋ ತೆಗೆಸುವುದಿದ್ದರೆ ಬೆಲಗೂರಿಗೆ ಹೋಗುವುದಿತ್ತು.  ಆದರೆ ಸಂತೆ, ಬ್ಯಾಂಕು, ದೈನಂದಿನ ವ್ಯವಹಾರಕ್ಕೆಲ್ಲಾ ಪಂಚನಹಳ್ಳಿಯೇ ನಮಗೆ ಸಲೀಸಿತ್ತು.  ಕಣಕಟ್ಟೆ, ಬೆಲಗೂರುಗಳಿಗೆ ಹೋಗಬೇಕಾದರೆ ಅಡ್ಡ ದಾರಿಯಲ್ಲಿ ಹೋದರೆ ಮಾತ್ರ ಹತ್ತಿರವಾಗುತ್ತಿದ್ದುದು.  ರಸ್ತೆ ಮಾರ್ಗವಾಗಿ ಹೋಗಬೇಕೇಂದರೆ, ರಸ್ತೆ ಯಾವ ಯಾವ ಊರುಗಳ ಮೂಲಕ ಹಾದು ಹೋಗುತ್ತದೋ ಅಲ್ಲೆಲ್ಲಾ ಹೋಗಿಯೇ ಈ ಊರುಗಳನ್ನು ತಲುಪಬೇಕಿತ್ತು.  ಪಂಚನಹಳ್ಳಿಗೆ ನಮ್ಮೂರಿನಿಂದ ನೇರ ರಸ್ತೆ ಮಾರ್ಗವಿತ್ತಾಗಿ ಆಗ ನಡೆದಾಗಲಿ, ಸೈಕಲ್ಲಿನಲ್ಲಾಗಲಿ ಅಥವಾ ಆಗೊಮ್ಮೆ, ಈಗೊಮ್ಮೆ ಬರುವ ಬಸ್ಸಿಗಾಗಲಿ ಹೋಗಿ ಬರುವುದು ಅನುಕೂಲಕರವಾಗಿತ್ತು.  ಆದರೆ ನಮ್ಮೂರು ಡಿ.ಹೊಸಹಳ್ಳಿಯಿಂದ ಮಾಧ್ಯಮಿಕ ಶಾಲೆಗೆ ಹೋಗಬೇಕೆಂದರೆ ಆಣೆಗೆರೆಗೆ;  ಪ್ರೌಡಶಾಲೆ, ಕಾಲೇಜಿಗೆ ಹೋಗಬೇಕೆಂದರೆ ಪಂಚನಹಳ್ಳಿಗೇ ಹೋಗಬೇಕಿತ್ತು.  ಈ ಪ್ರಕಾರ ನಾನು ಆರು ಮತ್ತು ಏಳನೇ ಕ್ಲಾಸನ್ನು ಆಣೇಗೆರೆಯಲ್ಲಿಯೇ ಮುಗಿಸಬೇಕಿತ್ತು.  ಆದರೆ ಅಪ್ಪನ ಲೆಕ್ಕಾಚಾರ ಬೇರೆಯದೇ ಇತ್ತು. 

   ಪಂಚನಹಳ್ಳಿ ಮರುಳಪ್ಪನವರ ತೋಟಕ್ಕೆ ಮಂದೆ ಹಾಕುವುದು ಮತ್ತು ನನ್ನನ್ನ ಅಲ್ಲಿಯ ಜನರಲ್‌ ಹಾಸ್ಟಲ್‌ ಗೆ ಸೇರಿಸುವುದು ಅಂತ ತೀರ್ಮಾನಿಸಿ ಅಮ್ಮನ್ನ ಒಪ್ಪಿಸಿ ನನ್ನ ಹತ್ತಿರ ಪ್ರಸ್ತಾಪಿಸಿದರು.  ನಾನಾಗಲೇ ಆಣೇಗೆರೆ ಶಾಲೆಗೆ ಹೊಂದಿಕೊಂಡ್ಡದ್ದಾಗಿತ್ತು.  ಅಲ್ಲದೆ ಜಾಣ ವಿದ್ಯಾರ್ಥಿ ಎಂಬ ಖ್ಯಾತಿ ಬೇರೆ ದಕ್ಕಿತ್ತಾಗಿ,ನನಗೆ ಯಾಕೋ ಅಪ್ಪನ ಯೋಜನೆ ಅಷ್ಟಾಗಿ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ.  ಆದರೆ ಅಪ್ಪ ಒಂದು ದಿನ ಪಂಚನಹಳ್ಳಿಗೆ ಕರೆದುಕೊಂಡು ಹೊರಟೇಬಿಟ್ಟರು.  ಪಂಚನಹಳ್ಳಿಯ ಹಾಸ್ಟಲ್‌ ಮ್ಯಾನೇಜರ್‌ ಭೇಟಿಯಾಗಿ ನನ್ನನ್ನ ಅವರಿಗೆ ಪರಿಚಯಿಸಿ, ಹಾಸ್ಟಲ್‌ ವಾತಾವರಣವನ್ನ ಪರಿಚಯಿಸಿದರು. ಬೆಲಗೂರಿನಿಂದ ಹೊಸ ಟ್ರಂಕ್‌ ತಂದುಕೊಂಡು ಒಂದು ವಾರ ಮನೆಯಿಂದಲೇ ಶಾಲೆಗೆ ಹೋಗಿ ಬರುವುದು ನಡೆಯಿತು.  ಆಮೇಲೆ ಹಾಸ್ಟಲ್ನಲ್ಲಿ ವಾಸ್ತವ್ಯ.     

                               

 ಪಂಚನಹಳ್ಳಿ

 ನಾನು ಇಲ್ಲಿನ ನನ್ನ ವಿದ್ಯಾರ್ಥಿ ಜೀವನದ ಅನುಭವಗಳಿಗೆ ಪ್ರವೇಶಿಸುವ ಮೊದಲು ಪಂಚನಹಳ್ಳಿಯ ಸರಹದ್ದನ್ನ್ನು ಪರಿಚಯಿಸುವುದು ಸೂಕ್ತ ಅಂದುಕೊಂಡಿದ್ದೇನೆ.  ನೀವು ಒಂದು ʼ+ʼ ಆಕಾರವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದು ಅಗತ್ಯವಿದೆ.  ಈ + ನ ಕೇಂದ್ರ ಬಿಂದು ಸೇರುವ ಭಾಗವೇ ನಾಲ್ಕು ಜಿಲ್ಲೆಗಳ ಮಾರ್ಗಗಳು ನಾಲ್ಕೂ ಕಡೆಗಳಿಂದ ಬಂದು ಸೇರುವ ಪಂಚನಹಳ್ಳಿ ಸರ್ಕಲ್‌.  ಇಂದೂ ಕೂಡ ಅಂದಿನಂತೆಯೇ ಈ ಊರಿನ ಹೃದಯ ಭಾಗ.  ಶಾಲಾ ಕಾಲೇಜುಗಳಿಂದ ಹಿಡಿದು, ಬಸ್‌ ನಿಲ್ದಾಣ, ಸಂತೆ ಮೈದಾನ, ಪೆಟ್ಟಿಗೆ ಅಂಗಡಿಗಳು, ತಿಂಡಿ-ಕಾಫಿ ಹೋಟೆಲ್‌, ಆಸ್ಪತ್ರೆ, ಆಸ್ಪತ್ರೆ ಎದುರು ರಸ್ತೆಯ ಇನ್ನೊಂದು ಭಾಗದಲ್ಲಿ ಪಂಚಾಯ್ತಿಯಿಂದ ಕಟ್ಟಿಸಿದ್ದ ನಮ್ಮೆಲ್ಲಾ ಮಾಸ್ತರುಗಳಿಗೆ ವಸತಿ ಒದಗಿಸಿದ್ದ, ಒಂದೇ ಸಾಲಿನಲ್ಲಿ ಒಂದೇ ತರ ಕಟ್ಟಲಾಗಿದ್ದ ಕೆಂಪಂಚಿನ ಮನೆಗಳು.

ಈ ಪಂಚನಹಳ್ಳಿ ವೃತ್ತದಲ್ಲಿ ಚಿಕ್ಕಮಗಳೂರು ಕಡೆಗೆ_ಅಂದರೆ ಪಶ್ಚಿಮಕ್ಕೆ ಮುಖ ಮಾಡಿ ನಿಂತರೆ ಮುಂಭಾಗ ಚಿಕ್ಕಮಗಳೂರು ಜಿಲ್ಲೆ, ಹಿಂಭಾಗಕ್ಕೆ ತುಮಕೂರು ಜಿಲ್ಲೆ, ಎಡಕ್ಕೆ ಹಾಸನ ಜಿಲ್ಲೆ, ಬಲಕ್ಕೆ ಚಿತ್ರದುರ್ಗ ಜಿಲ್ಲೆಗಳು ಅನತಿ ದೂರದಲ್ಲಿಯೇ ಸಿಕ್ಕಿಬಿಡುತ್ತವೆ.  ಅದೇ ರೀತಿ ನಾಲ್ಕೂ ದಿಕ್ಕನ ಪ್ರಮುಖ ಊರುಗಳೆಂದರೆ ಚಿಕ್ಕಮಗಳೂರು ಮಾರ್ಗದಲ್ಲಿ ಸಿಂಗಟಿಗೆರೆ, ತುಮಕೂರು ಮಾರ್ಗದಲ್ಲಿ ಹುಳಿಯಾರು, ಹಾಸನ ಮಾರ್ಗದಲ್ಲಿ ಕಣಕಟ್ಟೆ ಮತ್ತು ಚಿತ್ರದುರ್ಗ ಮಾರ್ಗದಲ್ಲಿ ಬೆಲಗೂರು.  ಸಮೀಪದ ಊರುಗಳೆಂದರೆ ಅಷೇನು ಪ್ರಮುಖವಲ್ಲದ ಬಿ.ಕಾವಲಹಟ್ಠಿ ಚಿಕ್ಕಮಗಳೂರು ಕಡೆಗೆ-ಅಂದೆರೆ ನಮ್ಮೂರು ದೇವರ ಹೊಸಹಳ್ಳಿ ಮತ್ತು ಪಂಚನಹಳ್ಳಿ ಮಧ್ಯೆ-, ತುಮಕೂರು ಕಡೆಗೆ ಬೊಮ್ಮನಹಳ್ಳಿ, ಹಾಸನ ಕಡೆಗೆ ತಿಮ್ಮಳಾಪುರ ಮತ್ತು ಚಿತ್ರದುರ್ಗ ಕಡೆಗೆ ನಿಡುವಳ್ಳಿ.  ಹಂಗಾಗಿ ಪಂಚನಹಳ್ಳಿ ಯಾವ ಜಿಲ್ಲೆಗೆ ಸೇರಿದ್ದು ಅನ್ನುವ ಬಗ್ಗೆ ಇನ್ನೂ ದೂರದೂರಿನವರಿಗೆ ಗೊಂದಲ ಇದ್ದೇ ಇದೆ.  

     +ನ ಎಡ ಮೇಲು ಭಾಗದ ಕೋನದಲ್ಲಿ ಸರ್ಕಾರಿ ಪ್ರೌಢಶಾಲೆಯನ್ನೂ ಒಳಗೊಂಡ ಕೆಂಪಂಚಿನ, ಗಾರೆ ನೆಲದ H ಆಕಾರದಲ್ಲಿರುವ ಸರ್ಕಾರಿ ಕಿರಿಯ ಕಾಲೇಜು ಮತ್ತು ಹಿಂಭಾಗಕ್ಕೆ ವಿಶಾಲವಾದ ಆಟದ ಮೈದಾನ.  ಎಡ ಕೆಳ ಭಾಗದ ಕೋನಕ್ಕೆ ಹೊಂದಿಕೊಂಡಂತೆ ಬಸ್‌ ನಿಲ್ದಾಣ, ಹಾಗೇ ಕಣಕಟ್ಟೆ ಕಡೆಗೆ ಒಂದು ಪರ್ಲಾಂಗು ದೂರದಲ್ಲಿ ನಮ್ಮ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯ, ಆಮೇಲೆ ತೋಟ, ತುಡಿಕೆ ಇತ್ಯಾದಿ.  ಬಲ ಮೇಲು ಭಾಗದ ಕೋನದಲ್ಲಿ ಆಗ ಪೋಲೀಸ್‌ ಠಾಣೆ, ನಂತರದ್ದು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ, ಆ ನಂತರ ಶಾಸಕರಾಗಿದ್ದ ಓಂಕಾರಮೂರ್ತಿ, ಅವರ ತಮ್ಮ ಪ್ರಕಾಶಮೂರ್ತಿ ಮತ್ತು ಜಂಸಾರಿ ನಾಗಪ್ಪನವರ ಮನೆಗಳು.  ಬಲ ಕೆಳ ಭಾಗದ ಕೋನದಲ್ಲಿ ನೀರಿನ ಟ್ಯಾಂಕ್ ಗೆ ಹೊಂದಿಕೊಂಡತೆ ಸಂತೆ ಮೈದಾನ ಮತ್ತು ಸಾಲಿಗೆ ಪೆಟ್ಟಿ ಅಂಗಡಿಗಳು, ನಂತರದ್ದು ಮಾಧ್ಯಮಿಕ ಶಾಲೆ.   ಮಾಧ್ಯಮಿಕ ಶಾಲೆಯ ಮುಂಭಾಗದ ಆಟದ ಮೈದಾನ ನಂತರವೇ ಪಂಚನಹಳ್ಳಿ ಮುಕ್ಕಾಲು ಭಾಗ ಬೆಳೆದಿರುವುದು.  ಈ ಭಾಗದಲ್ಲಿ ಊರು ಕೊನೆಗೊಂಡ ಅಂಚಿನಲ್ಲೇ ಪಂಚನಹಳ್ಳಿ ಕೆರೆ. ಈ ಕೆರೆ ಮಧ್ಯದಲ್ಲಿ ಸೇದೋ ಬಾವಿ.  ಪಂಚನಹಳ್ಳಿಗೆ ಮತ್ತೊಂದು ಆಗಿನ ಅನ್ವರ್ಥ ನಾಮ ʼನೀರಿಲ್ಲದ ಊರುʼ.  ಇಡೀ ಪಂಚನಹಳ್ಳಿಗೆ ಕುಡಿಯುವ ನೀರಿನ ಮೂಲ ಆಗ ಇದ್ದದ್ದು ಇದೊಂದೇ.  ನಾವೆಲ್ಲಾ ನಮ್ಮ ಮಾಸ್ತರ ಮನೆಗಳಿಗೆ ಈ ಬಾವಿಯಿಂದ ನೀರು ಹೊತ್ತು ತರಬೇಕಿತ್ತು.  ಆಮೇಲೆ ಸ್ವಲ್ಪ ದಿನಗಳ ನಂತರ ಸಾರ್ವಜನಿಕ ನಲ್ಲಿಯಲ್ಲಿ ನೀರು ಆಗೊಮ್ಮೆ ಈಗೊಮ್ಮೆ ಬಂದು ಅಲ್ಲಿ ಜನ ಜಮಾಯಿಸತೊಡಗಿದರು.  ಎಲ್ಲೋ ಸ್ವಲ್ಪ ಹೊತ್ತು ಬರುವ ನೀರಿಗಾಗಿ ತಿಕ್ಕಾಟ, ಸರತಿ ಗದ್ದಲಗಳು ಮಾಮೂಲಿಯಾಗಿಬಿಟ್ಟವು. 

    ಪಂಚನಹಳ್ಳಿಯನ್ನು ಇಷ್ಟು ಪರಿಚಯಿಸಲು ಒಂದು ಕಾರಣವಿದೆ.  ಈ ಊರಿನಲ್ಲಿ ಓದಿದವರು, ಸೇವೆ ಸಲ್ಲಿಸಿದ ಕೆಲವಾರು ಅಧಿಕಾರಿಗಳು ಸಾರ್ವಜನಿಕ ಜೀವನದ ಭಾಗವಾಗಿದ್ದಾರೆ.  ಶಕೀಲ್‌ ಅಹಮದ್‌ ಅನ್ನುವ ಸಬ್‌ ಇನಸ್ಪೆಕ್ಟರ್‌ ಆಗಿದ್ದ ಅಧಿಕಾರಿ ವಿಶಿಷ್ಠ ಪೋಲೀಸ್‌ ಅಧಿಕಾರಿ.  ಪೋಲೀಸ್ಗಿರಿಗಿಂತ ಸಮಾಜ ಸಧಾರಣಾ ಕಾರ್ಯಗಳಿಗಾಗಿಯೇ ಜನಪ್ರಿಯರಾದವರು.  ಇಸ್ಪೀಟು, ಹೆಡ್ ಬೂಡ್ಸು ಆಡುವವರಿಗೆ ಸಿಂಹ ಸ್ವಪ್ನವಾಗಿದ್ದವರು. ಕೆಳ ಜಾತಿಯ ಜನರು, ಮೇಲ್ಜಾತಿಯವರು ನೀರು ಸೇದಿ ಹಾಕುವವರೆಗೂ ಬಾವಿ ಕಟ್ಟೆಯಿಂದ ದೂರವೇ ನಿಂತು ಕಾಯುವುದನ್ನು ಕಂಡು ಕೆಂಡಾ ಮಂಡಲವಾಗಿ, ಕಾದು ನಿಂತವರ ಕೈಗೆ ಹಗ್ಗ ಕೊಟ್ಟು “ನೀರು ಸೇದ್ಕಳ್ರೀ ನೀವು, ಅದ್ಯಾವನು ಬತ್ತಾನೋ ನೋಡಾನ” ಅಂತ ಪೋಲೀಸ್‌ ಧಿರಿಸಿನಲ್ಲಿ ಬಾವಿ ಕಟ್ಟೆಯ ಮೇಲೆ ನಿಂತವನು.  ʼಸಬ್‌ ಇನ್ಸಪೆಕ್ಟರ್‌ʼ ಅಂತ ಭೀತಿಯ ಕಾರಣಕ್ಕೋ, ಪ್ರೀತಿಯ ಕಾರಣಕ್ಕೋ ಎಳನೀರು ಕೊಚ್ಚಿಕೊಟ್ಟರೆ ದುಡ್ಡು ಕೊಟ್ಟು ಕೈ ಮುಗಿದು ಬರುತ್ತಿದ್ದವನು.  ದುಡ್ಡು ಬೇಡ ಅಂದರೆ ನಡೀ ಸ್ಟೇಶನ್ನಿಗೆ ಅಂತಿದ್ದವನು. ಅದಷ್ಠೇ ಅಲ್ಲ ಅದ್ಯಾವುದೋ ಕಡೆಯಿಂದ ಕದ್ದ ನೂರಾರು ಕುರಿಗಳನ್ನ ಲಾರಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದರೆ ಹಿಡಿದು ಪೋಲೀಸ್‌ ಸ್ಟೇಶನ್‌ ಮುಂದೆ ಕುರಿಗಳನ್ನೆಲ್ಲಾ ಇಳಿಸಿಕೊಂಡು, ಮೂರ್ನಾಲ್ಕು ಜನ ಪೋಲೀಸರನ್ನ ನಿಯೋಜಿಸಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ವಾರಗಟ್ಟಲೆ ಮೇಯಿಸಲು ಆದೇಶ ಮಾಡಿದವನು.  ನಮ್ಮೂರಿನ ಪಚಡಿ ರಂಗಪ್ಪ ದೇವಸ್ಥಾನದಲ್ಲಿ ಇಸ್ಪೀಟಾಡುತ್ತಿದ್ದಾಗ ಯಾರೋ ʼಶಕೀಲ್‌ ಬಂದʼ ಅಂದಿದ್ದಕ್ಕೆ ಮೂರು ದಿನ ಅಟ್ಟ ಹತ್ತಿ ಕೂತಿದದ್ದುದು ಎಲ್ಲರ ಬಾಯಲ್ಲಿ ಹರಿದಾಡುತ್ತಿತ್ತು.  ಇನ್ನೂ ಈ ವ್ಯಕ್ತಿಯ ಬಗ್ಗೆ ಬರೆಯುವುದಿದೆ. ಈಗ ಇಷ್ಟು ಸಾಕು.  ನಾನು ಮೈಸೂರಿನಲ್ಲಿ ಕ್ಷಯ ಮತ್ತು ಎದೆರೋಗಗಳ ವಿಷಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುವಾಗ ವೀರಪ್ಪನ್‌ ನಿಂದ ಹತನಾದ ಒಂಭತ್ತೋ, ಹತ್ತು ಜನರಲ್ಲಿ ಈತನೂ ಒಬ್ಬನಿದ್ದು ಶವಪರೀಕ್ಷೆಗೆ ಬಂದ ದೇಹಗಳ ಸಾಲಿನಲ್ಲಿ ಈತನ ದೇಹವೂ ಇರಲಾಗಿ ನನ್ನ ದುಖದಿಂದ ಎದೆ ಭಾರವಾಯ್ತು.

    ಇನ್ನು ಸಂಚಾರಿ ವಿಜಯ್. ನರ್ಸ್‌ ಗೌರಮ್ಮನ ಮಗ.  ಪಂಚನಹಳ್ಳಿ ಆಸ್ಪತ್ರೆ ಆವರಣದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ವಸತಿ ಗೃಹದಲ್ಲಿದ್ದುಕೊಂಡು, ರಸ್ತೆ ಆ ಪಕ್ಕದ ಕೆಂಚಮಾರಯ್ಯನವರ ಮನೆಗೆ ಅವರ ಮಕ್ಕಳಾದ ರವಿ, ಬಾಲಕೃಷ್ಣರೊಂದಿಗೆ ಆಟವಾಡಲು ಬರುತ್ತಿದ್ದವನು.  ಅಲ್ಪಾವಧಿಯಲ್ಲಿಯೇ ಅದ್ಭುತ ನಟನೆಂಬ ಖ್ಯಾತಿ ಪಡೆದು ಅಕಾಲ ಮರಣ ಹೊಂದಿದವನು.