ಕಡು ವಾಸ್ತವ

ಆದರೂ ಏಕೆ ಜನಸಾಮಾನ್ಯರ ನಡುವಿನಿಂದ ಆಕ್ರೋಶ ಇಲ್ಲದಿದ್ದರೂ ಅಸಮಾಧಾನದ ಧ್ವನಿಯೂ ಮೂಡಿಬರುತ್ತಿಲ್ಲ ?

ಕಡು ವಾಸ್ತವ

ಕಡು ವಾಸ್ತವ

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ಘೋಷಣೆಯಾಗಿದೆ. ಇನ್ನು 45 ದಿನಗಳಲ್ಲಿ ಹೊಸ ಸರ್ಕಾರವೊಂದು ಅಧಿಕಾರ ವಹಿಸಿಕೊಳ್ಳಲಿದೆ. ನವ ಉದಾರವಾದ ಮತ್ತು ಕಾರ್ಪೋರೇಟ್‌ ಮಾರುಕಟ್ಟೆ ಪ್ರೇರಿತ ಆರ್ಥಿಕ ನೀತಿಗಳನ್ನು ವಿರೋಧಿಸುವುದಿರಲಿ, ಪರಾಮರ್ಶಿಸುವ ಇಂಗಿತವೂ ಇಲ್ಲದ ಬಂಡವಾಳಿಗ ಪಕ್ಷಗಳು ಈ ಚುನಾವಣೆಗಳಲ್ಲಿ ಗೆಲುವಿಗಾಗಿ ಶ್ರಮಿಸಲಿವೆ. ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ದೂರದೃಷ್ಟಿ ಇಲ್ಲದ ಅಧಿಕಾರ ಕಾರ್ಯಸೂಚಿಗಳಾಗಿರುವುದರಿಂದ, ಈ ಕಡತಗಳಲ್ಲಿ ಇಣುಕಿ ನೋಡಿದರೂ ಸಹ ದೂರಗಾಮಿ ಚಿಂತನೆಯ ಯಾವುದೇ ಸೂಚನೆಗಳನ್ನು ಕಾಣಲಾಗುವುದಿಲ್ಲ. ಅಧಿಕಾರಕ್ಕೆ ಬಂದರೆ ಜನಸಾಮಾನ್ಯರಿಗೆ ಉಚಿತವಾಗಿ ಏನನ್ನು ಹಂಚಲಾಗುತ್ತದೆ ಅಥವಾ ರಿಯಾಯಿತಿ ದರದಲ್ಲಿ ಯಾವ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂಬ ಮಾಹಿತಿಯನ್ನು ಹೊರತುಪಡಿಸಿ ಮತ್ತೇನನ್ನೂ ಈ ಪ್ರಣಾಳಿಕೆಗಳಲ್ಲಿ ಕಾಣಲಾಗುವುದಿಲ್ಲ. ಪ್ರಣಾಳಿಕೆಗಳನ್ನು ಮತಗಳಿಕೆಯ ಒಂದು ಸಾಧನ ಎಂದಷ್ಟೇ ಪರಿಗಣಿಸಲು ಸಾಧ್ಯ.

 

ಈ ಚುನಾವಣೆಗಳ ಅಟಾಟೋಪಗಳ ನಡುವೆಯೇ ಯಾವುದೇ ಪ್ರಜ್ಞಾವಂತ ನಾಗರಿಕನಿಗೆ ನೆಲದ ಮೇಲೆ ನಿಂತು ಸುತ್ತ ಕಣ್ಣಾಡಿಸಿದಾಗ ಕಾಣುವ ದೃಶ್ಯಗಳು ಗಾಬರಿ ಮೂಡಿಸುವಂತಿರುತ್ತವೆ. ತಮ್ಮ ಬದುಕು ರೂಪಿಸಿಕೊಳ್ಳಲು ಯಾವುದೋ ಒಂದು ಕಸುಬು/ವೃತ್ತಿ/ನೌಕರಿ/ವ್ಯಾಪಾರವನ್ನು ಅವಲಂಬಿಸಿರುವ ಶ್ರೀಸಾಮಾನ್ಯನಲ್ಲಿ ಈ ದೃಶ್ಯಗಳು ತಲ್ಲಣ, ಆತಂಕ ಮತ್ತು ಭಯವನ್ನೂ ಸೃಷ್ಟಿಸುತ್ತವೆ. ದಿನನಿತ್ಯ ಬಳಸುವ ಹಾಲು ತರಕಾರಿಯಿಂದ ಹಿಡಿದು ಐಷಾರಾಮಿ ಬದುಕಿನ ಚಿನ್ನ-ಬೆಳ್ಳಿಯವರೆಗೆ ಎಲ್ಲ ಪದಾರ್ಥಗಳ ಬೆಲೆಗಳೂ ನಿರಂತರವಾಗಿ ಏರಿಕೆಯಾಗುತ್ತಲೇ ಇರುವುದನ್ನು ಗಮನಿಸದೆ ಇರಲಾಗುವುದಿಲ್ಲ. ಸಾರಿಗೆ, ಶಿಕ್ಷಣ, ಆರೋಗ್ಯ, ಸಾರ್ವಜನಿಕ ಸೌಲಭ್ಯ ಮತ್ತು ಆಹಾರ ಪದಾರ್ಥಗಳು ಎಲ್ಲವೂ ಸಹ ದಿನದಿಂದ ದಿನಕ್ಕೆ ದುಬಾರಿಯಾಗುತ್ತಲೇ ಇದ್ದು, ಸದ್ದಿಲ್ಲದೆ ಏರುವ ದರಗಳು ಜನಸಾಮಾನ್ಯರ ಬದುಕನ್ನು ಹೈರಾಣಾಗಿಸುತ್ತಿವೆ. ಏಪ್ರಿಲ್‌ ಒಂದರಿಂದ ಹಲವು ಔಷಧಿಗಳ ಬೆಲೆಗಳೂ ಹೆಚ್ಚಾಗುತ್ತಿರುವುದು ಮತ್ತೊಂದು ಹೊಡೆತವಾಗಿದೆ.

 

ಎರಡು ಆಯಾಮಗಳ ನಡುವೆ

 

ಆದರೂ ಏಕೆ ಜನಸಾಮಾನ್ಯರ ನಡುವಿನಿಂದ ಆಕ್ರೋಶ ಇಲ್ಲದಿದ್ದರೂ ಅಸಮಾಧಾನದ ಧ್ವನಿಯೂ ಮೂಡಿಬರುತ್ತಿಲ್ಲ ? ಈ ಜಿಜ್ಞಾಸೆಗೆ ಉತ್ತರ ಶೋಧಿಸುವಾಗ ನಮಗೆ ಸರ್ಕಾರಗಳು ಅನುಸರಿಸುವ ʼ ಅಭಿವೃದ್ಧಿಯ ಮಾದರಿಗಳು ʼ ಮತ್ತು ಅದರ ಸುತ್ತ ಸೃಷ್ಟಿಯಾಗುವ ಅಭಿಪ್ರಾಯಗಳು ಮುಖ್ಯವಾಗಿ ಕಾಣುತ್ತವೆ. ʼ ಆರ್ಥಿಕ ಅಭಿವೃದ್ಧಿ ʼಯನ್ನು ಎರಡು ಮಜಲುಗಳಲ್ಲಿ ಗುರುತಿಸಲಾಗುತ್ತದೆ. ಮೊದಲನೆಯದು ಈ ಅಭಿವೃದ್ಧಿಯ ಫಲಾನುಫಲಗಳು ಯಾರನ್ನು ತಲುಪುತ್ತವೆ ಎನ್ನುವುದು, ಎರಡನೆಯದು ಈ ಮಾದರಿಯನ್ನು ನಿರ್ವಹಿಸುವವರು ಯಾರು ಎನ್ನುವುದು. ಮೊದಲನೆಯ ಮಜಲು ಸಾರ್ವಜನಿಕ ಜೀವನದ ಫಲಾನುಭವಿಗಳ ನಡುವೆ ತನ್ನದೇ ಆದ ಅಭಿಪ್ರಾಯಗಳನ್ನು ಸೃಷ್ಟಿಸಿದರೆ, ಎರಡನೆಯ ಮಜಲು ಅಧಿಕಾರ ಕೇಂದ್ರಗಳಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಆಡಳಿತಾರೂಢ ಸರ್ಕಾರಗಳ ಅಥವಾ ಪ್ರಭುತ್ವದ ಪ್ರತಿಪಾದನೆಗಳನ್ನು ನಿರ್ಮಿಸುತ್ತದೆ. ಇವೆರಡರ ನಡುವೆ ಇರುವ ಸೂಕ್ಷ್ಮ ಅಂತರವನ್ನು ಭೇದಿಸಿದಾಗ ನಮಗೆ ಅಭಿವೃದ್ಧಿ ಯಾರಿಗಾಗಿ ? ಯಾರ ಶ್ರೇಯಸ್ಸಿಗಾಗಿ ? ಯಾರ ವೆಚ್ಚದಲ್ಲಿ ? ಎಂಬ ಹಲವು ಜಟಿಲ ಪ್ರಶ್ನೆಗಳೂ ಎದುರಾಗುತ್ತವೆ. ಆರ್ಥಿಕ ಅಭಿವೃದ್ಧಿಯ ಸಾಮಾಜಿಕ ವೆಚ್ಚಗಳ ಬಗ್ಗೆ ಬೌದ್ಧಿಕ ವಲಯದಲ್ಲಿ ಸಾಕಷ್ಟು ಚರ್ಚೆಗಳು ಹರಿದುಹೋಗಿವೆ.

 

ವರ್ತಮಾನದ ಸಂದರ್ಭದಲ್ಲಿ ಸಾಮಾನ್ಯ ನಾಗರಿಕರಿಂದಲೂ ಬಹುತೇಕ ಸ್ವೀಕೃತವೇ ಆಗಿರುವ ನವ ಉದಾರವಾದದ ವಾತಾವರಣದಲ್ಲಿ, ಕಾರ್ಪೋರೇಟ್‌ ಮಾರುಕಟ್ಟೆ ಬಂಡವಾಳಶಾಹಿ ಆರ್ಥಿಕ ಅಭಿವೃದ್ಧಿಯ ಮಾರ್ಗಗಳು ಆಡಳಿತಾರೂಢ ಪಕ್ಷಗಳ ದೃಷ್ಟಿಯಲ್ಲಿ ಸರ್ವತೋಮುಖ-ಸರ್ವಾಂಗೀಣ ಅಭಿವೃದ್ಧಿಯ ಸಂಕೇತವಾಗಿಯೇ ಕಾಣುತ್ತವೆ. ಮಾರುಕಟ್ಟೆ ಮತ್ತು ತತ್ಸಂಬಂಧೀ ತಂತ್ರಜ್ಞಾನಗಳು ಸಮಾಜದ ಅತ್ಯಂತ ಕೆಳಸ್ತರದ ಜನರನ್ನೂ ತಲುಪಿರುವುದರಿಂದ, ಈ ಅಭಿವೃದ್ಧಿ ಪಥದಲ್ಲಿ ಎಲ್ಲರೂ ಸಮಾನ ಫಲಾನುಭವಿಗಳಾಗಿರುತ್ತಾರೆ ಎಂಬ ಕಲ್ಪನೆ ಮಾರುಕಟ್ಟೆ ವ್ಯವಸ್ಥೆಯನ್ನು ಆವರಿಸಿರುತ್ತದೆ. ಸರ್ಕಾರಗಳೂ ಸಹ ತಮ್ಮ ವಾರ್ಷಿಕ ಬಜೆಟ್‌ಗಳಲ್ಲಿ, ಹಣಕಾಸು ನೀತಿಗಳಲ್ಲಿ ಇದನ್ನೇ ಪ್ರತಿಬಿಂಬಿಸುತ್ತಿರುತ್ತವೆ. ಈ ನೀತಿಗಳ ಅನುಸಾರ ರೂಪಿಸಲಾಗುವ ನಿಯಮಗಳನ್ನು ಸಾರ್ವಜನಿಕ ಬದುಕಿನಲ್ಲಿ ಜಾರಿಗೊಳಿಸುವ ಸಲುವಾಗಿಯೇ ಸರ್ಕಾರಗಳು ಮಾಧ್ಯಮಗಳನ್ನು, ಚಿಂತಕರನ್ನು, ಅಧ್ಯಯನ-ಸಂಶೋಧನೆಯ ಪರಿಚಾರಕರನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿರುತ್ತದೆ.

 

ಮತ್ತೊಂದು ಬದಿಯಲ್ಲಿ ನಿಂತು ನೋಡಿದಾಗ ದುಡಿಮೆಯಿಂದಲೇ ಬದುಕುವ ಬಹುಸಂಖ್ಯೆಯ ಸಾಮಾನ್ಯ ಜನತೆಯ ದೃಷ್ಟಿಯಲ್ಲಿ ಈ ಬೃಹದಾರ್ಥಿಕ ಮಾರ್ಗಗಳು ಮರೀಚಿಕೆಯಂತೆಯೋ, ಮಾಯಾಜಿಂಕೆಯಂತೆಯೋ ಕಂಡುಬರುತ್ತದೆ. ಅನೇಕ ಸಂದರ್ಭಗಳಲ್ಲಿ ದುಬಾರಿಯಾಗಿಯೂ ಕಂಡುಬರುತ್ತದೆ. ಒಂದೆಡೆ ಐಷಾರಾಮಿ ಬದುಕನ್ನು ಪೋಷಿಸುವ ಮತ್ತೊಂದೆಡೆ ನಿರ್ಗತಿಕತೆಗೆ ಕಾರಣವಾಗುವ ಈ ಆರ್ಥಿಕ ನೀತಿಗಳ ನಡುವೆ ನಿಂತ ಶ್ರೀಸಾಮಾನ್ಯನಿಗೆ ಮಾರುಕಟ್ಟೆ ಅರ್ಥನೀತಿಗಳು ಅರ್ಥವಾಗಬೇಕಾದರೆ, ತನ್ನ ಸುತ್ತಲೂ ನಿರ್ಮಿಸಲಾಗಿರುವ ಮಂಜಿನ ಪರದೆಯನ್ನು ಬದಿಗೆ ಸರಿಸಿ ಇಣುಕಿ ನೋಡಬೇಕಾಗುತ್ತದೆ. ಆದರೆ ನವ ಉದಾರವಾದ ಮತ್ತು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಪೋಷಿಸಲಾಗುವ ಅಭಿವೃದ್ಧಿ ಪಥದಲ್ಲಿ ಆರ್ಥಿಕ ಪ್ರಗತಿಯ ಭಾಗಿದಾರರ ವಾರಸುದಾರಿಕೆಯನ್ನು ಮಾರುಕಟ್ಟೆಯೇ ವಹಿಸಿಕೊಳ್ಳುವುದರಿಂದ, ವಾಸ್ತವದಲ್ಲಿ ಈ ಪಥದ ಫಲಾನುಭವಿಗಳೋ-ಸಂತ್ರಸ್ತರೋ ಆಗಿರುವ ಜನಸಾಮಾನ್ಯರು ಕೇವಲ ಮೂಕ ಪ್ರೇಕ್ಷಕರಾಗಿ ಉಳಿದುಬಿಡುತ್ತಾರೆ.

 

ಮಾರುಕಟ್ಟೆ ಸದ್ದು ಮತ್ತು ಜನಧ್ವನಿ

 

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಧ್ವನಿ ಮತ್ತು ಅಭಿವ್ಯಕ್ತಿಗಳೇ ನಿರ್ಣಾಯಕವಾದರೂ ಈ ದನಿಗಳು ಶಾಸನ ಸಭೆಗಳ ಹೊಸ್ತಿಲಲ್ಲೇ ಪರಿಸಮಾಪ್ತಿಯಾಗುತ್ತವೆ. ತದನಂತರದ ಫಲಿತಾಂಶಗಳನ್ನು ಸ್ವೀಕರಿಸುವ ಅಥವಾ ವಿರೋಧಿಸುವ ಆಯ್ಕೆ ಮಾತ್ರ ಪ್ರಜೆಗಳ ಮುಂದಿರುತ್ತದೆ. ಇದು ಬಂಡವಾಳಶಾಹಿ ವ್ಯವಸ್ಥೆಯ ಮೂಲಭೂತ ಲಕ್ಷಣ. ಹಾಗಾಗಿ ದೇಶದ ಪ್ರಗತಿಯನ್ನು ನಾವು ಯಾವ ನೆಲೆಯಲ್ಲಿ ನಿಂತು ನೋಡುತ್ತೇವೆ ಎನ್ನುವುದರ ಮೇಲೆ ನಮ್ಮ ಅಭಿಪ್ರಾಯಗಳೂ ರೂಪುಗೊಳ್ಳುತ್ತವೆ. ಮಾರುಕಟ್ಟೆ ಆವರಣದೊಳಗೆ ನಿಂತು, ಔದ್ಯಮಿಕ-ಔದ್ಯೋಗಿಕ ಜಗತ್ತಿನ ವಾತಾವರಣವನ್ನು ಒಪ್ಪಿಕೊಂಡು ಯೋಚಿಸಿದಾಗ ನಮಗೆ ಸೂಪರ್‌ ಮಾರುಕಟ್ಟೆಗಳು, ಬೃಹತ್‌ ಷಾಪಿಂಗ್‌ ಮಾಲ್‌ಗಳು, ರಾತ್ರಿವೇಳೆ ಝಗಮಗಿಸುವ ಸುಂದರ ರಸ್ತೆಗಳು, ಮೆಟ್ರೋ ರೈಲುಗಳು, ಮೇಲ್ಸೇತುವೆ-ಹೆದ್ದಾರಿಗಳು, ಭೂಮಿ-ಆಕಾಶ ಒಂದು ಮಾಡುವ ವಿಶಾಲ ವಸತಿ ಸಮುಚ್ಚಯಗಳು, ಬೃಹದಾಕಾರದ ಕಾರ್ಪೋರೇಟ್‌ ಕಟ್ಟಡಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಕದ ಉಪಕರಣಗಳನ್ನು ಹೊತ್ತು ಐಷಾರಾಮಿ ಕಾರುಗಳಲ್ಲಿ ಓಡಾಡುವ ಶ್ರೀಮಂತಿಕೆಯ ವಾರಸುದಾರರು,  ಇವುಗಳು ಮಾತ್ರ ಕಾಣಲು ಸಾಧ್ಯ. ʼಎಲ್ಲವೂ ಸುಂದರವಾಗಿದೆ ʼ  All is Well ಎಂಬ ಮನಸ್ಥಿತಿಗೆ ತಲುಪಲು ಇಷ್ಟು ಸಾಕಲ್ಲವೇ ?

 

ಇದೇ ವೇಳೆ ಈ ಹಿತವಲಯದ ಸುಂದರ ಲೋಕದಿಂದಾಚೆಗೂ ಒಂದು ಪ್ರಪಂಚ ನಮ್ಮ ನಡುವೆ ಇದೆ ಎಂದರಿತು, ನೆಲದ ಮೇಲೆ ಪಾದ ಊರಿ ನಿಂತು ನೋಡಿದಾಗ ನಮಗೆ ಜೋಪಡಿಗಳು, ಸ್ಲಂಗಳು, ಕೂಲಿ ಕಾರ್ಮಿಕರ ಕಾಲೊನಿಗಳು, ಕಿರಿದಾದ-ಅಂಕುಡೊಂಕಾದ ʼ ಕೀಲುಮೂಳೆ ವೈದ್ಯ ಸ್ನೇಹಿʼ ರಸ್ತೆಗಳು, ಶಿಥಿಲವಾದ ಸರ್ಕಾರಿ ಶಾಲಾ ಕಟ್ಟಡಗಳು, ಸಾರ್ವಜನಿಕ ಆಸ್ಪತ್ರೆಗಳು ಮತ್ತು ಸೂರಿಲ್ಲದೆ ದಿನ ಕಳೆಯುವ ಸಾವಿರಾರು ಜನರು ಕಾಣುತ್ತಾರೆ. ಅತಿ ಕಡಿಮೆ ದರದ ಪ್ಯಾಸೆಂಜರ್‌ ರೈಲುಗಳಲ್ಲಿ, ಸುಲಭ ದರದ ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಬಾಗಿಲಿಗೆ ನೇತುಹಾಕಿಕೊಂಡು, ಚಾವಣಿಯ ಮೇಲೆ ಕುಳಿತು ತಮ್ಮ ನಿತ್ಯ ದುಡಿಮೆಯತ್ತ ಸಾಗುವ ಅಪಾರ ಸಂಖ್ಯೆಯ ನೌಕರರೂ ಕಾಣುತ್ತಾರೆ. ಹಾಗೆಯೇ ಈ ಸೌಲಭ್ಯವನ್ನೂ ಬಳಸುವ ಶಕ್ತಿ ಇಲ್ಲದೆ, ಕಾಲ್ನಡಿಗೆಯಲ್ಲೇ ದಿನಗೂಲಿ ಸಂಪಾದಿಸಲು ಓಡಾಡುವ ಅಷ್ಟೇ ಸಂಖ್ಯೆಯ ಶ್ರಮಜೀವಿಗಳೂ ನಮ್ಮ ಕಣ್ಣಿಗೆ ಕಾಣುತ್ತಾರೆ. ಮುಸ್ಸಂಜೆ ಕಳೆದರೆ, ತಮ್ಮದೇ ಆದ ಸೂರಿಲ್ಲದೆ ಪಾದಚಾರಿ ರಸ್ತೆಗಲ್ಲಿ, ಬಸ್‌ ನಿಲ್ದಾಣಗಳಲ್ಲಿ, ರೈಲು ನಿಲ್ದಾಣಗಳಲ್ಲಿ ಮಲಗಿ ರಾತ್ರಿ ಕಳೆಯುವ ನಿರಾಶ್ರಿತರೂ ಕಾಣುತ್ತಾರೆ.

 

ಈ ಎರಡು ನೋಟಗಳ ನಡುವೆ ಸಮಾಜದಲ್ಲಿ ತಮ್ಮದೇ ಆದ ಭದ್ರಕೋಟೆಗಳನ್ನು ನಿರ್ಮಿಸಿಕೊಂಡಿರುವ ಆಧುನಿಕತೆಯ ವಾರಸುದಾರರೂ, So called ಆರ್ಥಿಕ ಪ್ರಗತಿಯ ನೇರ ಫಲಾನುಭವಿಗಳೂ ಆದ ಮಧ್ಯಮ ವರ್ಗಗಳು ಸಹ ನಮಗೆ ಕಾಣುತ್ತಾರೆ. ಸಾರ್ವಜನಿಕ ಬದುಕಿನ ನಿತ್ಯ ಆಗುಹೋಗುಗಳೊಡನೆ ಯಾವುದೇ ಸಂಬಂಧವೇ ಇಲ್ಲದವರಂತೆ, ತಮ್ಮದೇ ಆದ ಬದುಕು ಕಟ್ಟಿಕೊಳ್ಳುವ ಈ ವರ್ಗಗಳೇ ಸಾರ್ವಜನಿಕ ಅಭಿಪ್ರಾಯದ ಆಕರಗಳೂ ಆಗಿರುವುದನ್ನು ಪ್ರಸ್ತುತ ಸಂದರ್ಭದಲ್ಲಿ ಗಮನಿಸಬೇಕಿದೆ. ಸಾರ್ವಜನಿಕ ಜೀವನದಲ್ಲಿ ಸಾಮಾನ್ಯ ಜನತೆಯ ನಿತ್ಯ ಬದುಕಿನ ಸುತ್ತ ನಡೆಯುವ ಸಂವಾದಗಳು, ಚರ್ಚೆಗಳು, ರೂಪುಗೊಳ್ಳುವ ಸಂಕಥನಗಳು ಮತ್ತು ಉತ್ಪಾದನೆಯಾಗುವ ಅಭಿಪ್ರಾಯಗಳು ಇವೆಲ್ಲವೂ ಸಹ ಇದೇ ಭದ್ರಕೋಟೆಗಳ ಮೂಲಕವೇ ಹೊರಹರಿಯುತ್ತವೆ.  ಮಾಧ್ಯಮ ಲೋಕ ಎಷ್ಟೇ ತೆರೆದುಕೊಂಡಿದ್ದರೂ, ಸರ್ವವ್ಯಾಪಿಯಾಗಿದ್ದರೂ, ಮುದ್ರಣ-ವಿದ್ಯುನ್ಮಾನ-ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತಲಾಗುವ ಅಭಿಪ್ರಾಯಗಳ/ವಿರೋಧಗಳ ಉತ್ಪಾದಕರು ಇವರೇ ಆಗಿರುತ್ತಾರೆ. ಚುನಾವಣಾ ರಾಜಕಾರಣದಲ್ಲೂ ಈ ವರ್ಗದ ಪಾತ್ರ ನಿರ್ಣಾಯಕವಾಗಿರುತ್ತದೆ.

 

ಇದರ ನೇರ ಪ್ರಾತ್ಯಕ್ಷಿಕೆಯನ್ನು ಕೋವಿದ್‌ ಸಂದರ್ಭದಲ್ಲಿ ವಲಸಿಗರ ಸಮಸ್ಯೆ ಉದ್ಭವಿಸಿದಾಗ ಕಂಡಿದ್ದೇವೆ. ಸಾವಿರಾರು ಮೈಲು ನಡೆದು, ಜೀವ ಸವೆಸಿದ, ಜೀವ ತೆತ್ತ ಲಕ್ಷಾಂತರ ವಲಸಿಗರ ಕಠೋರ ಬದುಕಿನ ಬಗ್ಗೆ ಟಿವಿ ಸಂವಾದಗಳಲ್ಲಿ ತಮ್ಮ ನೋವು ತೋಡಿಕೊಳ್ಳುವ ಅವಕಾಶ ಸಂತ್ರಸ್ತರಿಗೆ ಲಭಿಸಲೇ ಇಲ್ಲ. ಬದಲಾಗಿ ವಲಸಿಗರ ಸಮಸ್ಯೆಯನ್ನು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಭೂಮಿಕೆಯಾಗಿ ಬಳಸಿಕೊಳ್ಳಲಾಯಿತು. ಟಿವಿ ಪ್ಯಾನೆಲ್‌ ಚರ್ಚೆಗಳಲ್ಲಿ ಇವರ ಪ್ರಾತಿನಿಧ್ಯ ಇತ್ತಾದರೂ, ಆ ಪ್ರಾತಿನಿಧಿಕ ಧ್ವನಿ ಅನುಭವಾತ್ಮಕವಾಗಿರಲಿಲ್ಲ. ಹಾಗಾಗಿ ಅನೇಕ ಸಂದರ್ಭಗಳಲ್ಲಿ ಶುಷ್ಕ ಎನಿಸಿದ್ದೂ ಹೌದು. ಬೌದ್ಧಿಕವಾಗಿ ತಮ್ಮದೇ ಆದ ಪ್ರಭಾವಳಿಯನ್ನು ರೂಪಿಸಿಕೊಂಡಿರುವ ಹಿತವಲಯದ ಮಧ್ಯಮವರ್ಗಗಳು ಹೇಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಶೂನ್ಯದಿಂದಲೂ ಉತ್ಪಾದಿಸುತ್ತವೆ ಎನ್ನುವುದಕ್ಕೆ ಕೋವಿದ್‌ ಸಾಂಕ್ರಾಮಿಕದ ಸನ್ನಿವೇಶಗಳು ಸಾಕ್ಷಿಯಾಗಿದ್ದವು. ಇದು ಇಂದಿಗೂ ಕಾಣಬಹುದಾದ ವಿದ್ಯಮಾನ.

 

ಎಷ್ಟೇ ಪೂರ್ವಗ್ರಹ ಪೀಡಿತವಾಗಿದ್ದರೂ ಈ ಉತ್ಪಾದಿಸಲ್ಪಟ್ಟ ಅಭಿಪ್ರಾಯಗಳನ್ನೇ ಸಾರ್ವಜನಿಕ ಸಮ್ಮತಿ ಎಂದು ಬಿಂಬಿಸಲು ಅಥವಾ ಸಾರ್ವತ್ರೀಕರಿಸಲು ಮಾಧ್ಯಮಗಳು ಹರಸಾಹಸ ಮಾಡುವುದನ್ನೂ ಸೂಕ್ಷ್ಮವಾಗಿ ಗಮನಿಸಬೇಕಿದೆ. ನವ ಉದಾರವಾದದ ಸಂದರ್ಭದಲ್ಲಿ ಬಹುತೇಕ ಮುದ್ರಣ/ವಿದ್ಯುನ್ಮಾನ ಮಾಧ್ಯಮಗಳು ಮಾರುಕಟ್ಟೆ ಆರ್ಥಿಕತೆಯ ಕಾರ್ಪೋರೇಟ್‌ ಔದ್ಯಮಿಕ ಹಿಡಿತದಲ್ಲೇ ಇರುವುದರಿಂದ, ಅಭಿಪ್ರಾಯ ಸಾರ್ವತ್ರೀಕರಣದ ಪ್ರಯತ್ನಗಳೂ ಅಡ್ಡಿ ಆತಂಕಗಳಿಲ್ಲದೆ ಸಾಗುತ್ತವೆ.  ನವಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕ ನೀತಿಗಳ ಫಲಾನುಭವಿಗಳಾಗಿ ಸುಂದರ ಬದುಕು ಕಟ್ಟಿಕೊಳ್ಳುವ ಈ ವರ್ಗದ ವಾರಸುದಾರರಾಗಿ ಸರ್ಕಾರಿ ಅಧಿಕಾರಿಗಳು, ಕೆಳಹಂತದ ಸರ್ಕಾರಿ ನೌಕರರು, ಆಧುನಿಕ ಐಟಿ-ಬಿಟಿ ಜಗತ್ತಿನ ಶ್ರಮಿಕರು, ಸಣ್ಣ ವ್ಯಾಪಾರಿಗಳು/ಉದ್ಯಮಿಗಳು ಮತ್ತು ಆಧುನಿಕ ಜಗತ್ತಿನ ಮತ್ತು ಮೀಸಲಾತಿ ಮುಂತಾದ ಸಾಂವಿಧಾನಿಕ ಸವಲತ್ತುಗಳ ಫಲಾನುಭವಿಗಳೂ ಕಂಡುಬರುತ್ತಾರೆ.

 

 ಈ ಫಲಾನುಭವಿ ವರ್ಗ ತನ್ನ ಒಳನೋಟವನ್ನು ಕಳೆದುಕೊಂಡಿರುವುದರಿಂದ, ಮತ್ತೊಂದು ಜಗತ್ತಿನ ಕರಾಳ ದೃಶ್ಯವನ್ನು ನೋಡಲೂ ಹಿಂಜರಿಯುತ್ತದೆ. ಹಾಗಾಗಿಯೇ ಸಾಂವಿಧಾನಿಕ ಸವಲತ್ತುಗಳ ಫಲಾನುಭವಿ ವರ್ಗಗಳೂ ಸಹ ಅವಕಾಶವಂಚಿತರತ್ತ ಕಣ್ಣೆತ್ತಿಯೂ ನೋಡದಂತಹ ವಾತಾವರಣವನ್ನು ನಾವು ಎದುರಿಸುತ್ತಿದ್ದೇವೆ. ಕೆಲವೇ ಸಹೃದಯ ಮನಸುಗಳು, ಸಮಾಜಮುಖಿ ಹೃದಯಗಳನ್ನು ಹೊರತುಪಡಿಸಿದರೆ, ಬಹುಮಟ್ಟಿಗೆ ಇದು ಸಾರ್ವತ್ರಿಕ ಸತ್ಯ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಿದೆ. ಈ ಮನಸ್ಥಿತಿಯನ್ನು ಸಾಂಕೇತಿಕವಾಗಿ ನಮ್ಮ ಮೆಟ್ರೋ ರೈಲು ಪ್ರಯಾಣವು ಧ್ವನಿಸುತ್ತದೆ. ಮೆಟ್ರೋ ಪ್ರಯಾಣಿಕರಿಗೆ ನೆಲದ ಮೇಲಿನ ವಾಸ್ತವಗಳು  ಎಲ್ಲಿ ಗೋಚರಿಸುತ್ತವೆ ? ಮನಸುಗಳು ನೆಲ ಮುಟ್ಟಿದಾಗ ಮಾತ್ರವೇ ಇದು ಸಾಧ್ಯ. ಹಾಗೊಮ್ಮೆ ನೋಡಿದರೂ, ʼಅದು ಅವರ ಸಮಸ್ಯೆ ʼ ಎಂಬ ಅವಗಣನೆಯ ಮಾತುಗಳು ಸಹಜವಾಗಿ ʼಅನ್ಯʼರನ್ನು ಸೃಷ್ಟಿಸಿಕೊಂಡುಬಿಡುತ್ತವೆ.  ಸುತ್ತಲಿನ ಸಮಾಜದ ಹಿತವೇ ನಮ್ಮ ಹಿತ ಎಂದು ಭಾವಿಸುವ ಉದಾತ್ತ ಮನೋಭಾವವನ್ನು ಮಾರುಕಟ್ಟೆ ವ್ಯವಸ್ಥೆ ಅನೇಕ ವಿಧಾನಗಳ ಮೂಲಕ ಕೊಲ್ಲುತ್ತಲೇ ಬರುವುದರಿಂದ, ಆಧುನಿಕತೆ ಮತ್ತು ʼ ಅಭಿವೃದ್ಧಿʼಯ ಫಲಾನುಭವಿ ವರ್ಗಗಳಲ್ಲಿ ʼ ತಮ್ಮ ಹಿತವೇ ಸಕಲಜನರ ಹಿತ ʼ ಎಂಬ ಕಲ್ಪನೆ ದಟ್ಟವಾಗಿ ಬೇರೂರಿರುತ್ತದೆ. ಈ ಬೌದ್ಧಿಕ ಮಂಜಿನ ಪರದೆಯನ್ನು ಬದಿಗೆ ಸರಿಸಿ ಮತ್ತೊಂದು ಪ್ರಪಂಚದತ್ತ ನೋಡಲು ಪ್ರೇರೇಪಿಸುವ ಕೆಲವೇ ಪ್ರತಿರೋಧದ ಧ್ವನಿಗಳೂ ಸಹ ಈ ವರ್ಗಗಳ ದೃಷ್ಟಿಯಲ್ಲಿ ಕಂಟಕಪ್ರಾಯವಾಗಿಯೇ ಕಾಣುತ್ತವೆ.

 

ಹಾಗಾಗಿಯೇ ನಮ್ಮ ನಡುವೆ ಬೆಲೆ ಏರಿಕೆ-ನಿರುದ್ಯೋಗ-ಹಸಿವೆ-ಬಡತನ-ನಿರ್ಗತಿಕತೆ ಯಾವುದೂ ಸಹ ಜನಧ್ವನಿಯ ಒಂದು ಭಾಗವಾಗಿ ಹೊರಹೊಮ್ಮುತ್ತಿಲ್ಲ.

-