ನನ್ನನ್ನು ಕವಿಯಾಗಿ ರೂಪಿಸಿದ ಹರೆಯ

ಸ್ವ-ಅನುಭವಗಳು

ನನ್ನನ್ನು ಕವಿಯಾಗಿ ರೂಪಿಸಿದ ಹರೆಯ

     ಡಾ.ಹೆಚ್.ವಿ.ರಂಗಸ್ವಾಮಿ

(ಹಿಂದಿನ ಸಂಚಿಕೆಯಿಂದ)

    ನಾನು ಪಂಚನಹಳ್ಳಿಯಲ್ಲಿದ್ದಾಗ ಪಠ್ಯ ಮತ್ತು ಆಟೋಟಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದೆ.  ಜಾವಳಿಗೆ ಪ್ರೌಢಶಾಲಾ ವ್ಯಾಸಂಗಕ್ಕೆ ಬಂದ ನಂತರ ಪಠ್ಯ ಮತ್ತು ಪಠ್ಯೇತರ ಸೃಜನಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಮುಂದುವರೆಸಿದೆನಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಸ್ಪರ್ಧಾತ್ಮಕವಾಗಿ ಮುಂದುವರೆಯಲಿಲ್ಲ.  ಆಟೋಟಗಳಲ್ಲಿ ಭಾಗವಹಿಸುತ್ತಿದ್ದೆನಾದರೂ ಅದು ಪಿ.ಟಿ ಪೀರಿಯಡ್‌ ನ ಭಾಗವಾಗಿ ಮಾತ್ರ.  ಆದರೆ ರವೀಂದ್ರವವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸವನ್ನು ನಿಯಮಿತವಾಗಿ ಮಾಡತೊಡಗಿದೆ.  ಕ್ರಿಕೆಟ್ ಮತ್ತು ಫುಟ್‌ ಬಾಲ್‌ ಆಟಗಳಲ್ಲಿ ತಂಡದ ಕೂಡ ಭಾಗವಹಿಸುತ್ತಿದ್ದೆನಾದರೂ ಆಟದ ನಿಯಮಗಳನ್ನು ಮಾತ್ರ ತಿಳಿದುಕೊಂಡೆನಾದರೂ, ಹೆಚ್ಚಿನ ಆಸಕ್ತಿಯಿಂದ ಭಾಗವಹಿಸುತ್ತಿರಲಿಲ್ಲ. ನಾನು ಆಟದಲ್ಲಿ ಸ್ಲಲ್ಪ ಹಿಂಜರಿಯಲು ನಾನು ಫುಟ್‌ ಬಾಲ್‌ ಆಡುವಾಗಿನ ಒಂದು ಅನುಭವ ಕಾರಣವೇನೋ ಅಂದುಕೊಳ್ಳುತ್ತೇನೆ.

         ಒಂದು ಬಾರಿ ನಮ್ಮ ಶಾಲೆಯ ಮುಂಭಾಗದ ಆಟದ ಮೈದಾನದಲ್ಲಿ ತಂಡದೊಂದಿಗೆ ಆಡುತ್ತಿದ್ದಾಗ ಅದೆಂಥಾ ಜೋಶ್‌ ನಲ್ಲಿ ಆಡುತ್ತಿದ್ದೆವೆಂದರೆ ಅದೆಷ್ಟೋ ಹೊತ್ತು ಎದರು ಗುಂಪಿಗೆ ಬಾಲನ್ನು ಮುಟ್ಟಲೂ ಸಾಧ್ಯವಾಗದಂತೆ ನಮ್ಮ ತಂಡ ಮುಂದುವರೆಯುತ್ತಿತ್ತು.  ನಮ್ಮ ತಂಡದಲ್ಲಿ ಚೆಂಡನ್ನು ಗೋಲಿಗೆ ತಲುಪಿಸಲು ವಿನಾಯಕ ಮತ್ತು ರೋಡ್ರಿಗಸ್‌ ಛಲಬಿಡದೆ ಪ್ರಯತ್ನಿಸುತ್ತಿದ್ದರು.  ಇವರಿಬ್ಬರೂ ನನಗಿಂತ ಜೋರಾದ ಮೈ ಕಟ್ಟಿನವರು.  ನಾನು ಸ್ವಲ್ಪ ಓಟದಲ್ಲಿ ಪರವಾಗಿರಲಿಲ್ಲವಾಗಿ ಇವರ ಅಕ್ಕ ಪಕ್ಕದಲ್ಲೇ ಇದ್ದುಕೊಂಡು ಚೆಂಡನ್ನು ಇವರಿಬ್ಬರಲ್ಲಿ ಯಾರಿಗೆ ಸರಿಯೋ ಅವರಿಗೆ ತಲುಪಿಸುತ್ತಿದ್ದೆ.  ಇನ್ನೇನು ಗೋಲಿಗೆ ಸಮೀಪಿಸುತ್ತಿದ್ದೇವೆ ಅನ್ನುವಷ್ಟರಲ್ಲಿ ಎದುರು ತಂಡದ ಎಲ್ಲರೂ ರಕ್ಷಣಾತ್ಮಕವಾಗಿ ಗೋಲಿನ ಎದರು ಜಮಾಯಿಸುತ್ತಿದ್ದನ್ನ ಗಮನಿಸಿದ ರೋಡ್ರಿಗಸ್‌ ಅವರ ತಲೆ ಮೇಲಿನಿಂದ ಚೆಂಡನ್ನು ಗೋಲಿಗೆ ತಲುಪಿಸಲು ನನ್ನತ್ತ ನುಗ್ಗುತ್ತಿದ್ದ ಚೆಂಡಿನ ಕಡೆ ಆವೇಶದಲ್ಲಿ ನುಗ್ಗಿದ.  ನಾನೂ ಆತನಿಗೆ ಚೆಂಡನ್ನು ತಲುಪಿಸಲು ಅವನ ಕಡೆಯೇ ಮುಂದುವರೆದು ಚೆಂಡನ್ನು ಒದೆಯಲು ನನ್ನ ಬಲಗಾಲನ್ನು ಎತ್ತಿದೆ.  ಅದೇ ಸಮಯಕ್ಕೆ ಸರಿಯಾಗಿ ರೋಡ್ರಿಗಸ್‌ ಕೂಡ ತನ್ನ ಬಲಗಾಲನ್ನು ಚೆಂಡಿನೆಡೆಗೆ ಅದು ಯಾವ ವೇಗದಲ್ಲಿ ಎತ್ತಿದನೋ, ಚೆಂಡನ್ನು ನಾನು ಒದ್ದೆನಾಗಿ ಅದು ಆತನ ಹಿಂದಕ್ಕೆ ಪಕ್ಕದಿಂದ ಮುಂದುವರೆದು ವಿನಾಯಕನ ಕಡೆ ಮುಂದುವರೆಯಿತು.  ರೋಡ್ರಿಗಸ್‌ ಎತ್ತಿದ್ದ ಕಾಲು ನಾನು ಆತನ ಹತ್ತಿರ ಸಮೀಪಿಸಿದ್ದೆನಾಗಿ ಅದೇ ಬಿರುಸಿನಲ್ಲಿ ನನ್ನ ಎರಡೂ ತೊಡೆಗಳ ಮಧ್ಯದ ಆಯಕಟ್ಟಿನ ಭಾಗಕ್ಕೆ ಬಡಿಯಲಾಗಿ ನಾನು ಕೂಡಲೆ ಆಘಾತದಿಂದ ನೆಲದ ಮೇಲೆ ಕುಸಿದುಬಿದ್ದೆ.  ನಾನು ನೋವು ಮತ್ತು ಉಸಿರು ನಿಂತಂತಾಗಿ ನೆಲದ ಮೇಲೆ ಒದ್ದಾಡುತ್ತಿದ್ದರೂ ಅದನ್ನ ಗಮನಿಸುವ ಪರಿಸ್ಥತಿಯಲ್ಲಿ ಯಾರೂ ಇರಲಿಲ್ಲ.  ಮತ್ತೆಲ್ಲಿ ಇವರು ಓಟದ ಭರದಲ್ಲಿ ನನ್ನನ್ನೂ ತುಳಿದುಬಿಡುವರೋ ಅನ್ನಿಸಿ ನಾನೇ ನಿದಾನಕ್ಕೆ ನೆಲದ ಮೇಲೆ ಉರುಳಿಕೊಂಡು ಮೈದಾನದ ಅಂಚಿಗೆ ಸರಿದೆ.  ಆಗ ನನ್ನನ್ನು ಗಮನಿಸಿದ ಪಿಟಿ ಮಾಸ್ಟರಾದ ಸುರೇಂದ್ರ ಓಡಿ ಬಂದು ನನ್ನ ಹಣೆಗೆ ನೀರು ಹಾಕಿ ನನ್ನ ಬೆನ್ನ ಮೇಲೆ ಮಲಗಿಸಿ ಎರಡೂ ಕಾಲನ್ನ ಎತ್ತಿ ಹಿಡಿದು ಪ್ರಥಮ ಚಿಕಿತ್ಸೆ ಮಾಡಿದರು.  ನನಗೆ ಹೋದ ಜೀವ ಮತ್ತೆ ಬಂದಂತಾಯ್ತು. 

        ಮತ್ತೊಂದು ಪ್ರಕರಣ ಕ್ರಿಕೆಟ್‌ ಹುಚ್ಚಿಗೆ ಸಂಬಂಧಿಸಿದ್ದು.  ಆಗ ಗವಾಸ್ಕರ್‌, ಜಿ.ಆರ್.ವಿಶ್ವನಾಥ್‌, ಬೇಡಿ ಇಂಥವರೆಲ್ಲಾ ಕ್ರಿಕೆಟ್‌ ದಂತ ಕತೆಗಳಾಗಿದ್ದರು.  ನಮ್ಮ ಹೈಸ್ಕೂಲಿನಲ್ಲಿ ಅತ್ಯುತ್ತಮವಾಗಿ ಕ್ರಿಕೆಟ್‌ ಆಡುವ ತಂಡವೊಂದಿತ್ತು.  ಆದರೆ ಮೆರಿಟ್‌ ಹುಡುಗರು ಅನ್ನಿಸಿಕೊಂಡ ನಾವು ಇವರ ಮುಂದೆ ಆಟದಲ್ಲಿ ಅಂಥ ಗಮನ ಸೆಳೆಯಲಾಗಲಿಲ್ಲ.  ನಮ್ಮ ತರಗತಿಯಿಂದ ಮೆರಿಟ್‌ ವಿದ್ಯಾರ್ಥಿಗಳಲ್ಲಿ ಕೆಂಚಿಕೊಪ್ಪದ ಚಂದ್ರಶೇಖರ್‌ ಮಾತ್ರ ಬೌಲಿಂಗ್‌ ನಲ್ಲಿ ಸ್ವಲ್ಪ ಹೆಸರು ಮಾಡಿದ್ದ.  ಅದೂ ಸ್ಪಿನ್‌ ಬೌಲಿಂಗ್‌ ನಲ್ಲಿ ಈತನ ಕೈಚಳಕಕ್ಕೆ ವಿಕೆಟ್‌ ಗಳು ಉರುಳುತ್ತಿದ್ದವಾಗಿ ತಂಡದಲ್ಲಿ ಈತನಿಗೆ ಅವಕಾಶವಿತ್ತು.  ಇನ್ನುಳಿದ ನಾವೆಲ್ಲಾ ಆಟಕ್ಕುಂಟು, ಲೆಕ್ಕಕ್ಕಿಲ್ಲ ಅನ್ನುವಂತಿದ್ದೆವು.  ಹನ್ನೊಂದನೆ ಆಟಗಾರ ಅಂದು ಹಾಜರಿಲ್ಲದಿದ್ದರೆ, ಅವನಿಗೆ ಹುಷಾರಿಲ್ಲದಿದ್ದರೆ ಮಾತ್ರ ಕೂಚುಬಟ್ಟರಾದ ನಮಗೆ ಒಂದೊಂದು ಬಾರಿ ಅವಕಾಶ ಸಿಕ್ಕತ್ತಿತ್ತು.  ಆಗ ನಾವು ನಮ್ಮದೆ ಒಂದು ಕೂಚುಬಟ್ಟರ ತಂಡ ಕಟ್ಟಿಕೊಂಡು, ನಮ್ಮವೆ ಬ್ಯಾಟು ಬಾಲುಗಳನ್ನು ಸಿದ್ಧಪಡಿಸಿಕೊಂಡು ಆಡತೊಡಗಿದೆವು.  ಇದು ಆಟ ಆಡುವುದಕ್ಕಿಂತ, ಓದಿನ ಏಕತಾನತೆಯನ್ನು ಕಳೆಯುವ ಪ್ರಯತ್ನವಾಗಿತ್ತಷ್ಟೆ.

          ಆಗ ಟೆಸ್ಟ್‌ ಕ್ರಿಕೆಟ್‌ ನ ಕಾಲ.  ಆಗಿನ್ನೂ ಐವತ್ತು ಓವರ್‌ ಗಳ ಮತ್ತು ಇಪ್ಪತ್ತು ಓವರ್‌ ಗಳ ಕಡಿಮೆ ಅವಧಿಯ ರೋಚಕತೆಯ ಸಮಯವೂ ಅಲ್ಲ.  ಆಗಿನ್ನೂ ನಮಗೆ ಟಿವಿ ಬಗ್ಗೆ ವಿಜ್ಞಾನದ ಪಾಠದ ಮಧ್ಯೆ-ಮಧ್ಯೆ ರವೀಂದ್ರ ಮಾಸ್ತರು ಮುಂದೆ ಬರಬಹುದಾದ ಈ ದೃಶ್ಯ ವಿಧಾನದ ಬಗ್ಗೆ ಹೇಳಿ ನಮ್ಮನ್ನು ಬೆರಗುಗೊಳಿಸುತ್ತಿದ್ದರು.  ಆಗ ನಮಗೆ ಕಿಕೆಟ್‌ ಕಾಮೆಟ್ರಿ ಕೇಳಲು ರೇಡಿಯೋ, ಟ್ರಾನ್ಸಿಸ್ಟರ್‌ ಗಳೇ ಗತಿ.  ಒಂದು ರೇಡಿಯೋವೋ, ಟ್ರಾಸಿಸ್ಟರ್‌ ಯಾರದ್ದೋ ಸಿಕ್ಕಿದರೆ ಸಾಕು; ನಾವು ಹತ್ತೋ, ಹದಿನೈದೋ ಜನ ಅದನ್ನು ಮಧ್ಯೆ ಇಟ್ಟುಕೊಂಡು ಕಿವಿ ಆನಿಸಿ ಕಾಮೆಟ್ರಿ ಕೇಳಿಸಿಕೊಳ್ಳುತ್ತಿದ್ದೆವು.  ಜಗತ್ತಿನ ಅದು ಯಾವದೋ ಮೂಲೆಯ ಮೈದಾನವೊಂದರಲ್ಲಿ ಗವಾಸ್ಕರ್‌ ಒಂದು ಬೌಂಡರಿಯನ್ನೋ, ಸಿಕ್ಸರನ್ನೋ ಬಾರಸಿದಾಗ ಕಾಮೆಟ್ರಿ ಹೇಳುವವನ ಧ್ವನಿಯ ಏರಿಳಿತ ಮತ್ತು ಧಾವಂತದ ಧ್ವನಿಯಲ್ಲಿಯೇ ನಮಗೆ ಅರ್ಥವಾಗಿಬಿಡುತ್ತಿತ್ತಾಗಿ ನಾವಲ್ಲಾ ಇಲ್ಲೇ ಕುಣಿದು ಕುಪ್ಪಳಿಸಿಬಿಡುತ್ತಿದ್ದೆವು.  ಈ ಐದು ದಿನದ ಟೆಸ್ಟ್‌ ಕ್ರಿಕೆಟ್‌ ಮುಗಿಯುವರೆಗೂ ನಾವು ಪುಸ್ತಕ ಮುಟ್ಟುತ್ತಿದ್ದುದು ಅಷ್ಟಕ್ಕಷ್ಟೇ!  ಅದಲ್ಲದೆ ನಾವೂ ಕೂಡ ಕ್ರಿಕೆಟ್‌ ಬ್ಯಾಟು ಬಾಲುಗಳನ್ನು ಎಲ್ಲಿಂದಲೋ ಹೊಂಚಿಕೊಂಡು, ಮೂರು ಕಡ್ಡಿ ನೆಟ್ಟೋ, ಕಲ್ಲು ನಿಲ್ಲಿಸಿಯೋ ವಿಕೆಟ್‌ ಮಾಡಿಕೊಂಡು ಆಟ ಶುರು ಮಾಡುತ್ತಿದ್ದೆವು.  ಆಗೆಲ್ಲಾ ಟೆಸ್ಟ್‌ ಗಳಲ್ಲಿ ಸಾಮಾನ್ಯವಾಗಿ ಅಂಕಗಳು ಕಡಿಮೆಯಾಗುತ್ತಿದ್ದವು.  ಇದು ನಮ್ಮ ಮುಖ್ಯೋಪಾಧ್ಯಾರಾದ ಮುಂಡಪ್ಪ ಬೋಳೂರರ ಗಮನಕ್ಕೆ ಬಂದು ಮಾಸ್ತರಾದ ತಿಲಕಚಂದ್ರ ಮತ್ತು ಶಣೈರವರಿಗೆ ನಮ್ಮಗಳ ಮೇಲೆ ಒಂದು ಕಣ್ಣು ಇಡಲು ತಿಳಿಸಿದ್ದರಂತೆ.

       ಇದು ಗೊತ್ತಾದ ಮೇಲೆ ನಾವು ಹೊರಗೆ ಆಡುವುದನ್ನು ನಿಲ್ಲಿಸಿ, ಓದಿನ ಮಧ್ಯೆ-ಮಧ್ಯೆ ನಮಗೆ ಉಳಿಯಲು ಅವಕಾಶ ಮಾಡಿಕೊಟ್ಟಿದ್ದ ಮನೆಯ ರೂಮೊಂದರಲ್ಲಿಯೇ ಬ್ಯಾಟು ಮತ್ತು ಬಾಲುಗಳನ್ನು ಹಿಡಿದು ಚುಟುಕು ವಿಧಾನದಲ್ಲಿ ಆಡತೊಡಗಿದೆವು.  ಅಷ್ಟು ಕಡಿಮೆ ಜಾಗದಲ್ಲಿ ಕಾರ್ಕ್‌ ಬಾಲನ್ನು ಉಪಯೋಗಿಸಿ ಆಟವಾಡುವುದು, ರನ್‌ ಗಳನ್ನು ನಮ್ಮದೇ ರೀತಿಯಲ್ಲಿ ಪೇರಿಸುವುದು ಮತ್ತು ಕ್ಯಾಚ್‌ ಹಿಡಿಯುವುದನ್ನೂ ಮಾಡುತ್ತಿದ್ದೆವು.  ವಿನಾಯಕ ಅನ್ನುವ ನನ್ನ ಕ್ಲಾಸ್‌ ಮೇಟ್‌ ಬಗ್ಗೆ ಈಗಾಗಲೇ ಪರಿಚಯಿಸಿದ್ದೇನೆ.  ಈತ ಬ್ಯಾಟ್‌ ಕುಕ್ಕಲು ಶುರುಮಾಡಿದವನು ಎಷ್ಟು ಹೊತ್ತಾದರೂ ಔಟಾಗಲಿಲ್ಲವಾಗಿ ಬ್ಯಾಟ್‌ ಮಾಡಲು ತವಕದಲ್ಲಿದ್ದ ನಮಗೆಲ್ಲಾ ಸ್ವಲ್ಪ ಬೇಸರವಾಗಿತ್ತು.  ಗೋಡೆಯ ಒಂದು ಭಾಗದವರೆಗೆ ಹೊಡೆದರೆ ಸಿಕ್ಸರ್‌ ಅಂತ ಲೆಕ್ಕ ಮಾಡಲು ತೀರ್ಮಾನಿಸಿದ್ದೆವಾಗಿ, ಆತ ಅಲ್ಲಿಗೇ ಗುರಿಯಿಟ್ಟು ರನ್‌ ಗಳನ್ನು ಪೇರಿಸುತ್ತಿದ್ದ.  ಈತನನ್ನು ಔಟ್‌ ಮಾಡಬೇಕಾದರೆ ಅದಷ್ಟು ಹತ್ತಿರ ಸರಿದು ಕ್ಯಾಚ್‌ ಹಿಡಿದರೆ ಮಾತ್ರ ಸಾದ್ಯವೆಂದು ತೀರ್ಮಾನಿಸಿ ನಾನು ಆತ ಬ್ಯಾಟ್‌ ನಿಂದ ಬಾಲ್‌ ಬಡಿದಾಕ್ಷಣ ಅದು ಮೇಲೆ ಏಳುತ್ತಿದ್ದಂತೆಯೇ  ಹಿಡಿಯಲು ಹತ್ತಿರವಾದೆ.  ಆತ ನನ್ನ ತಲೆಯ ಮೇಲಿಂದ ಸಿಕ್ಸರ್‌ ಬಾರಿಸಲು ಬೀಸಿದ ಬ್ಯಾಟ್‌ ಬಾಲಿಗೆ ಬಡಿಯದೆ ನನ್ನ ಮುಸುಡಿಗೆ ಬಡಿಯಿತು.  ನನ್ನ ಬಾಯಿಂದ, ಹಲ್ಲುಗಳ ಸಂದಿನಿಂದ ಮತ್ತು ತುಟಿಗಳಿಂದ ರಕ್ತ ಚಿಮ್ಮತೊಡಗಿತು.

      ವಿನಾಯಕ ಗಾಬರಿಯಿಂದ ಪರಾರಿಯಾದರೆ.  ನಾನು ರಕ್ತ ಉಗುಳುತ್ತಾ ನೋವು ತಡೆಯಲು ಹರಸಾಹಸ ಮಾಡುತ್ತಿದ್ದೆ.  ಸ್ವಲ್ಪ ಹೊತ್ತಿಗೆ ರಕ್ತ ಒಸರುವುದು ನಿಂತಿತಾದರೂ, ಮುಖದಲ್ಲಿ ಮೂಗು, ಮುಸುಡಿ, ಕಣ್ಣುಗಳೆಲ್ಲ ಬಾತುಕೊಂಡು ನಾನು ಕನ್ನಡಿಯಲ್ಲಿ ನೋಡಿದರೆ ಯಾವುದು ಎಲ್ಲಿದೆ ಅಂತ ಗೊತ್ತಾಗದಂತೆ ಮುಖ ಬಾತುಕೊಂಡು ಎಲ್ಲವೂ ಏಕತ್ರವಾಗಿರಲಾಗಿ ಗಾಬರಿಯಾಯ್ತು.  ಚಿದಾನಂದ ಅನ್ನುವ ನನ್ನ ತರಗತಿಯ ಮತ್ತೊಬ್ಬ ಗೆಳೆಯ ಅದೆಲ್ಲಿಂದಲೋ ಒಂದಷ್ಟು ಮುಲಾಮನ್ನು ತಂದು ಹಚ್ಚಿದ್ದು ನೆನಪು.  ಅದಾಗಲೇ ಸಂಜೆಯಾಗಿತ್ತಾಗಿ ಆಸ್ಪತ್ರೆಗೆ ಹೋಗುವ ಪ್ರಯತ್ನ ಮಾಡಲಿಲ್ಲ.  ಆದರೆ ಬೆಳಿಗ್ಗೆ ಕ್ಲಾಸಿಗೆ ಹೋಗುವ ಮೊದಲು ಆಸ್ಪತ್ರೆಗೆ ಹೋಗಿ ವೈದ್ಯರಲ್ಲಿ ಚಿಕಿತ್ಸೆ ಪಡೆದು ತರಗತಿಗೆ ಹೋದರೆ ಎಲ್ಲರೂ ನನ್ನ ಅವತಾರ ನೋಡಿ ಗಾಬರಿಯಾದರೆ, ಮತ್ತೆ ಕೆಲವರು ಆಂಜನೇಯ ಬಂದ ಅಂತ ತಮಾಸೆ ಮಾಡತೊಡಗಿದರು.  ಅದು ಹೇಗೋ ಗೊತ್ತಾಗಿ ಮುಂಡಪ್ಪ ಬೋಳೂರರು ನನ್ನನ್ನು ಅವರ ಛೇಂಬರ್‌ ಗೆ ಕರೆಸಿ ವಿಚಾರಿಸಿದರು.  ನಾವೆಲ್ಲಾ ಸಾಯಂಕಾಲ ಮುಟ್ಟಾಟವಾಡುತ್ತಾ ನಾನು ಮಕಾಡೆ ಬಿದ್ದು ಗಾಯವಾಯ್ತೆಂದು ಸುಳ್ಳು ಹೇಳಿ ಬಚಾವಾದದ್ದಾಯ್ತು.  ಮಧ್ಯಾಹ್ನ ಊಟಕ್ಕೆ ಬಂದಾಗ ಕನ್ನಡಿಯಲ್ಲಿ ನೋಡಿದರೆ, ಥೇಟ್‌ ಹನುಮಂತನ ಮುಸುಡಿಯಂತೆಯೇ ಆಗಿತ್ತು ನನ್ನ ಮೂತಿ!

         ಈ ಎರಡು ಪ್ರಕರಣಗಳ ನಂತರ ನಾನು ಅಷ್ಟಾಗಿ ಮತ್ತೆ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಯತ್ನವನ್ನು ಕೈ ಬಿಟ್ಟೆ.  ಆದರೆ ಇತರ ಪಠ್ಯೇತರ ಚಟುವಟಿಕೆಗಳಾದ ಚರ್ಚಾಸ್ಪರ್ಧೆ, ಪ್ರಬಂಧಸ್ಪರ್ಧೆ, ಆಶುಭಾಷಣ, ಲೇಖನ ಮತ್ತು ಕವನಗಳನ್ನು ಬರೆಯುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಿದೆ

        ಎಂಟನೇ ತರಗತಿಯಲ್ಲಿದ್ದಾಗ ಜಾವಳಿ ಶಾಲೆಯ ಸೌಂದರ್ಯವನ್ನು ಇಂದ್ರನ ರಾಜಧಾನಿ ಇಂದ್ರಪ್ರಸ್ಥಕ್ಕೆ ಹೋಲಿಸಿ ಕಲ್ಪನಾಲಹರಿಯೊಂದನ್ನು ಬರೆದಿದ್ದು ನೆನಪು. ಒಂದು ದೇಶಪ್ರೇಮ ಕುರಿತಾದ ಭಾವಗೀತೆಯನ್ನೂ ಬರೆದ ನೆನಪಿದೆಯಾದರೂ ಅವು ಯಾವೂ ಕೂಡ ಸದ್ಯಕ್ಕೆ ಲಭ್ಯವಾಗುತ್ತಿಲ್ಲ.  ಈ ನನ್ನ ಪ್ರಯತ್ನಗಳನ್ನು ಗಮನಿಸಿದ ಡಾ. ಶಿವಕುಮಾರ್‌ ರವರು ವಿಮರ್ಶಾತ್ಮಕವಾಗಿ ವಿಶ್ಲೇಶಿಸಿ ನನಗೆ ವಾಸ್ತವಕ್ಕೆ ಹತ್ತಿರವಿರುವಂತೆ ಬರೆಯಬೇಕೆಂದು ಮನವರಿಕೆ ಮಾಡಿಕೊಟ್ಟರು.  ಆಗ ನಾನು ಅನುಕರಣಾ ವಿಧಾನದಿಂದ ವಿಮುಖನಾಗಿ ಸ್ವಂತ ಅನುಭವಗಳನ್ನು ನನ್ನ ಬರವಣಿಗೆಯಲ್ಲಿ ಅಳವಡಿಸಿಕೊಳ್ಳಲಾಗಿ ಅವು ಹೆಚ್ಚಿನ ಮೆಚ್ಚುಗೆಗೆ ಪಾತ್ರವಾದವು.  ಒಂಭತ್ತನೆ ಮತ್ತು ಹತ್ತನೆ ತರಗತಿಗಳ ನನ್ನ ಕವನಗಳು ಪ್ರಬುದ್ಧವಾಗಿದ್ದವೆಂಬ ಕಾರಣಕ್ಕೆ ರವೀಂದ್ರ ಮತ್ತು ಶಿವಕುಮಾರ್‌ ರವರ ಮಧ್ಯೆ ಅದು ಹೆಚ್ಚಿನ ಚರ್ಚೆಗೆ ಕಾರಣವಾಗಿತ್ತು.   

                                                                                                               

    

ನಮ್ಮ ಹಾಸ್ಟಲ್‌ ವಾರ್ಡನ್‌ ನಮ್ಮ ಹಿಂದಿ ಟೀಚರ್‌ ಗೌರಿಯವರು.  ಇವರು ನಮ್ಮನ್ನು ಬೆಳಿಗ್ಗೆ ನಾಲ್ಕೂವರೆಯಿಂದ ಐದು ಗಂಟೆಯೊಳಗೆ ನಮ್ಮನ್ನು ಎಬ್ಬಿಸಿ ಬಿಡುತ್ತಿದ್ದರು.  ಇದು ನಮಗೆ ರೂಢಿಯಾಗಿತ್ತಾಗಿ ನಾವೆಲ್ಲಾ ಎದ್ದು ಪುಸ್ತಕವನ್ನು ಹಿಡಿದು ಓದುವುದೋ, ತೂಕಡಿಸುವುದೋ ಯಾವುದಾದರೊಂದನ್ನು ಮಾಡಲೇಬೇಕಿತ್ತು.  ಇಲ್ಲವಾದರೆ ಗೌರಿಯವರು ಸಣ್ಣ ಬೆತ್ತವೊಂದರಿಂದ ಹೊದಿಕೆ ಮೇಲಿಂದ ಚುರುಕು ಮುಟ್ಟಿಸುತ್ತಿದ್ದರು.  ಹೀಗೆ ಒಂದು ಗಂಟೆ ಓದಿಕೊಂಡಾದ ಮೇಲೆ ನಾನು ಸ್ವಲ್ಪ ಯೋಗಾಸನಗಳನ್ನು ಮಾಡಿ ಸ್ನಾನ ಮಾಡುವುದನ್ನ ಅಭ್ಯಾಸ ಮಾಡಿಕೊಂಡಿದ್ದೆ.  ಯೋಗಾಸನಗಳನ್ನು ಮಾಡಲು ಪ್ರಾರಂಭಿಸಿದ ಮೇಲೆ ತಣ್ಣೀರಿನಲ್ಲಿ ಸ್ನಾನ ಮಾಡುವುದನ್ನು ಮುಂದುವರೆಸಿದೆ.  ಬಿಸಿನೀರಿಗೆ ಸರತಿಯಲ್ಲಿ ಕಾಯ ಬೇಕಾಗಿತ್ತು.  ಅಲ್ಲದೆ ದಿನವೂ ಮಾಡಲು ಸಾಧ್ಯವಾಗುತ್ತಿರಲಿಲ್ಲ.  ನಮ್ಮ ಹಾಸ್ಟಲ್‌ ನಿಂದ ರಸ್ತೆಯ ಆ ಭಾಗದಲ್ಲಿ ಗುಡ್ಡದ ಮೇಲಿದ್ದ ನಮ್ಮ ಮೆಸ ಗೆ ಹೋಗುವ ದಾರಿ ಪಕ್ಕದ ನಲ್ಲಿಯೊಂದರಲ್ಲಿ ಯಾವಾಗಲೂ ನೀರು ಬರುತ್ತಿತ್ತು.  ನಾನಿನ್ನೂ ಕತ್ತಲಿರುವಾಗಲೆ ಒಂದು ಜಗ್ಗು, ಬಕೆಟ್‌ ಹಿಡಿದುಕೊಂಡು ಹೋಗಿ ಅಲ್ಲಿ ಮೈಮೇಲೆ ತಣ್ಣೀರು ಸುರಿದುಕೊಂಡು ಸ್ನಾನ ಮಾಡಿಬಿಡುತ್ತಿದ್ದೆ.  ಒಂದೆರಡು ಚೆಂಬು ನೀರು ಹಾಕಿಕೊಳ್ಳುವವರೆಗೂ ತಣ್ಣಿರಿನ ಕೊರೆತದಿಂದ ಮೈಚಳಿ ತೀಕ್ಷ್ಣವಾಗಿ ಮುದುಡಿಕೊಳ್ಳುವಂತಾಗುತ್ತಿತ್ತು.  ಆಮೇಲಾಮೇಲೆ ನೀರು ಹಾಕಿಕೊಂಡಂತೆಲ್ಲಾ ಆ ಕೊರತವೇ ಆಹ್ಲಾದರವಾಗುತ್ತಿತ್ತು.  ಸ್ನಾನವಾದ ನಂತವರವಂತೂ ಎರಡು ಮೂರು ಗಂಟೆವರೆಗೆ ಮನಸ್ಸು ಪ್ರಶಾಂತವಾಗಿರುತ್ತಿತ್ತಾಗಿ ಏಕಾಗ್ರತೆಯಿಂದ ಓದಲು ಸಾಧ್ಯವಾಗುತ್ತಿತ್ತು.  ಕಂಠಪಾಠ ಮಾಡುವಂತದ್ದು, ನೆನಪು ಇಟ್ಟುಕೊಳ್ಳಬೇಕಾದ್ದನ್ನು ಈ ಸಮಯದಲ್ಲಿ ಓದಿದರೆ ಅದು ಮನಸ್ಸಿಗೆ ಸಲೀಸಾಗಿ ನಾಟುತ್ತಿತ್ತು. 

       ಈ ರೀತಿ ಒಂಭತ್ತನೆ ತರಗತಿಯಲ್ಲಿರುವಾಗ ಒಂದು ಬಾರಿ ಈ ನಲ್ಲಿಯ ಹತ್ತಿರ ಸ್ನಾನ ಮಾಡಿ ಮೈ ಒರೆಸಿಕೊಳ್ಳುತ್ತಿದ್ದೆ.  ಅಷ್ಟೊತ್ತಿಗಾಗಲೆ ಚುಮು ಚುಮು ಸೂರ್ಯನ ಕಿರಣಗಳು ಸುತ್ತಲಿದ್ದ ಮರಗಿಡ, ಬಳ್ಳಿ, ಹೂಗಳ ಮೇಲೆ ಎರಚಿದಂತೆ ಆವರಿಸುತ್ತಿದ್ದವು.  ಆ ನಲ್ಲಿಯ ಪಕ್ಕದಲ್ಲಿಯೇ ಇದ್ದ ಗರಿಕೆ ಮತ್ತು ನೆಲದಿಂದ ಒಂದಿಂಚು ಮೇಲಕ್ಕೆ ಹಬ್ಬಿದ್ದ ಹೂಬಳ್ಳಿಯೊಂದರ ಮೇಲೆ ಮುತ್ತುಗಳನ್ನು ಪೋಣಿಸಿದಂತೆ ಇಬ್ಬನಿ ಹನಿಗಳು ಮೂಡಿದ್ದವು.  ಆ ಹೂಗಳ ಮೇಲೆ ಹಂಚಿಗೆ ಆತುಕೊಂಡಿದ್ದ ಒಂದಾದ ಮೇಲೆ ಒಂದು ಪೋಣಿಸಿದಂತಿದ್ದ ಇಬ್ಬನಿ ಹನಿಗಳಿಂದ ಆ ಹೂವು ಮತ್ತು ಗಿಡ ಶೃಂಗರಿಸಿಕೊಂಡ ಮದುಮಗಳು ಹಾಕಿಕೊಂಡ ಮುತ್ತಿನ ಸರದಂತೆ ಕಾಣುತ್ತಿತ್ತು.  ಆಗ ನನ್ನ ಮನಸ್ಸಿನಲ್ಲಿ ಮೂಡಿದ ಭಾವವು ʼಮುಂಜಾವು ಕುಸುಮದ ಸವಿನೋಟʼ ಅನ್ನುವ ಕವನ ಹೊಮ್ಮಲು ಕಾರಣವಾಯ್ತ:  ಆ ಕವನದ ಸಾಲುಗಳು ಈ ಕೆಳಗಿನಂತೆ ಮೂಡಿಬಂದದ್ದು ಹೀಗೆ.

                                   ಬೆಳಗಾಗಿ ಎದ್ದು ಮುಖತೊಳೆಯಲೆಂದು ಬಂದೆ

                                    ನಗುಮೊಗವ ಕಂಡು ಬೆರಗಾಗಿ

                                                  ಬೆಚ್ಚಿ ನಾ ಮುಂದೆ ನಿಂದೆ!

                                   ಸವಿನೋಟದಿಂದ ಸೊಗಹಿಸಿ ಅಂದು ತೋರಿದೆ ನಿನ್ನ ಮೊಗವ

                                    ರೂಪವ ಕಂಡು ರೂಪಸಿ ಎಂದು ತಿಳಿದಿದ್ದೆ ಅಂದು ನಿಜವ!

………………………………………………………

ಈ ರೀತಿಯಲ್ಲಿ ಆ ಕವನದ ಸಾಲುಗಳು ಮುಂದುವರೆಯುತ್ತವೆ.

      ಹತ್ತನೆ ತರಗತಿಯಲ್ಲಿ ನನ್ನ ಬರವಣಿಗೆಯಲ್ಲಿ ಮತ್ತಷ್ಟು ಪ್ರೌಢಿಮೆ ಕಂಡು ಬಂತು.  ಉತ್ತಮ ಅಂಕಗಳನ್ನು ಪಡೆದರೆ ಏನೆಲ್ಲಾ ಅವಕಾಶಗಳು ತೆರೆದುಕೊಳ್ಳುವ ಬಗ್ಗೆ ಕನಸುಗಳು ಗರಿಗೆದರತೊಡಗಿದವು.  ವೀರಪ್ಪಯ್ಯ ಮತ್ತು ಬಾಲಕೃಷ್ಣರವರು ಐಎಎಸ್‌ ಮಾಡಿ ಉತ್ತಮ ಹುದ್ಧೆ ಅಲಂಕರಿಸಿದರೆ ಜನಸೇವೆ ಮಾಡಬಹುದೆಂತಲೂ, ಶಿವಕುಮಾರ್‌ ರವರು ಕನ್ನಡ ಎಂಎ ಮಾಡಿದರೆ ಒಳ್ಳೆಯ ಬೋಧಕ ಮತ್ತು ಬರಹಗಾರನಾಗಬಹುದೆಂತಲೂ ಮತ್ತು ರವೀಂದ್ರರವರು ಭೌತಶಾಸ್ತ್ರದಲ್ಲಿ ಉತ್ತಮ ಭವಿಷ್ಯವಿದೆಯೆಂದು ಮುಂದಿನ ಗುರಿಗಳ ಬಗ್ಗೆ ಕನಸುಗಲನ್ನು ಕಟ್ಟಿಕೊಡುತ್ತಿದ್ದರು.  ಆಯಾ ವಿದ್ಯಾರ್ಥಿಯ ಆಸಕ್ತಿ ಮತ್ತು ಸಾಮರ್ಥ್ಯವನ್ನು ಅಂದಾಜಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಅಣಿಮಾಡುವುದನ್ನು ಸಾಮಾನ್ಯವಾಗಿ ಎಲ್ಲರಿಗೂ ಮಾಡುತ್ತಿದ್ದ ರೀತಿಯಿದು.  ಆದರೆ ಅದು ನಮಗೆ ಅಸಾಧ್ಯವಾದ ಹಿಮಾಲಯದ ಶಿಖರೋಪಾದಿಯಲ್ಲಿ ಭಾಸವಾಗುತ್ತಿತ್ತು.  ಆ ದೂರದ ಗುರಿ ಹಗಲು ಕನಸೇನೋ ಅನ್ನಿಸುತ್ತಿತ್ತಾಗಿ, ಅಂತಹ ಒಂದು ಸಂದರ್ಭದಲ್ಲಿ ಮೂಡಿ ಬಂದ ಕವನ ʼಅತಿಯಾಸೆಗೆ ಬಹಿಸ್ಕಾರʼ.  ಈ ಕವನ ಆ ವರ್ಷದ ಕವಿಗೋ಼ಷ್ಠಿಯಲ್ಲಿ ಪ್ರಥಮ ಬಹುಮಾನ ಪಡೆದ ಕವನವೂ ಆಗಿ ಹೇಮಜ್ಯೋತಿಯಲ್ಲಿ ಪ್ರಕಟವಾಯ್ತು.  ಅದನ್ನೇ ಇಲ್ಲಿ ಪರಿಯಿಸುತ್ತಿದ್ದೇನೆ.

ನೀರಿನಲ್ಲಿ ಮರೆಯಾದ ಜಲಬಿಂದು

ದೊರೆಯದ ಹಾಗೆ, ಎಲ! ಆಸೆಯೇ

ನಿನ್ನ ಮರ್ಮಕೆ,ನಾ ಬೆಲ್ಲದ ಸಿಹಿಗೆ

ಜೊಲ್ಲು ಸುರಿಸುವ ನಾಯಿಯಾಗಲಾರೆ

ಪುಡಿ ಕಾಳಿಗೆ ಬಂದು ಕತ್ತರಿಗೆ ಕಾಲು

ಕೊಟ್ಟ ಇಲಿಯೂ ಆಗಲಾರೆ.

ನನ್ನ ಮಾತ್ರಕೆ ನೀನು ಮರಳುಗಾಡ

ಪ್ರಯಾಣಿಕನಾದರೆ, ನೀ ಮೆಟ್ಟುವ

ಹಿಡಿಭಾಗದಲ್ಲೊಂದು ಕಣವಾಗಿರಬಹುದು;

ಮರೀಚಿಕೆಯ ಕಂಡು ಮೋಸಹೋಗಬೇಡ

ಕಸುವಿದ್ದ ಕೈ ಇದು, ನಾನು ನಾನಾಗಿ ನಡೆವ

ಮನಸಿದು, ನಿನ್ನ ಮರ್ಮವ

ಮೂಸಿ ನೆಕ್ಕಿ ಹೊಲಸಾಗಲಾರೆ

ನನ್ನಬಯಲಿಗೆಳೆಯಲು ಮೋಹಿನಿಯೇ

ಆಗಿ ಬಾ; ಗಾಳಿಯೊಡನೆ ಗುದ್ದಾಟ

ವಾಡಿಸುವೆನೇ ವಿನ: ನಿನ್ನಸ್ಥಿತಿಯ ಕಂಡು

ನಾ ನಗದೆ, ಬದಲಾಗಿ ಮರುಗಿ ನಾ

ಬೀಳ್ಕೊಡುವೆ ಇಲ್ಲವೆ ಛಿ! ತುಂಟಿ ಎಂದು

ತಮಾಸೆಗೆ ಹೇಳಿಕಳಿಸುವೆ

ಧನಕನಕರಾಶಿಯಾಗಿ ನನ್ನೆತ್ತರಕ್ಕಲ್ಲದಿದ್ದರೇನು

ನಭದೆತ್ತರಕೆ ನಿಲ್ಲು, ನನ್ನೊಡಲು ಹಿಡಿಯಲಾರದು

ಎನುವೆನೆ ಹೊರತು, ʼನಾನುʼ ಎಂಬುದನು ಮಾತ್ರ

ನಿನಗೆ ಮಾರಲಾರೆ

ಇದಕ್ಕಿಂತಲೂ ಇನ್ನೇನು ಆಗಿ ಬರುವೆ?

ನಾ ಕುಬೇರನೂ ಆಗಬಯಸಿಲ್ಲ.  ದರಿದ್ರನೂ

ಆಗುವ ಇಚ್ಛೆಯಿಲ್ಲ.  ನನ್ನ ಮನಸಿದು ಕಸದಲ್ಲಿದ್ದರೂ

ರಸವಾಗಿರುವುದು; ರಸದಲ್ಲಿದ್ದರೂ ಹಾಗೇ

ಇರುವುದು. ಹೋಗಿ ಬಾ ಪಾಪ!

ನಿನಗೆ ಸ್ವಾಗತವಿಲ್ಲ.

 

     ರವೀಂದ್ರರವರಿಗೆ ಹೈಸ್ಕೂಲ್‌ ವಿದ್ಯಾರ್ಥಿಯೊಬ್ಬ ಈ ಮಟ್ಟದ ಕವನಗಳನ್ನು ಬರೆಯಲು ಸಾಧ್ಯವೆ ಅನ್ನುವ ಅನುಮಾನ ಅವರದು.  ಆದರೆ ಶಿವಕುಮಾರ್‌ ರವರಿಗೆ ಕಿಂಚಿತ್ತೂ ಅನುಮಾನ ಕಾಡಿರಲಿಲ್ಲ.  ನನಗೇನೂ ಅವು ಅಂತಹ ಉತ್ತಮ ಕವನಗಳು ಅನ್ನಿಸಿರಲಿಲ್ಲ.  ಆದರೆ ಆ ಕವನಗಳನ್ನು ಓದಿದವರು ಆ ರೀತಿ ಭಾವಿಸುತ್ತಿದ್ದರಾಗಿ, ಅವರ ಅಭಿಪ್ರಾಯದ ನಂತರ ಮತ್ತೆ ಅದೇ ಕವನಗಳನ್ನು ಓದಿದಾಗ ಏನನ್ನೋ ಧ್ವನಿಸಿದಂತೆ ಭಾಸವಾಗುತ್ತಿದ್ದುದು ನಿಜ.  ಆಮೇಲೆ ನನಗೆ ಅರ್ಥವಾದ್ದು ಹದಿ ವಯಸ್ಸು ಮತ್ತು ಇಪ್ಪತ್ತರಿಂದ ಮೂವತ್ತನೆ ವರ್ಷದ ಆಜು ಬಾಜಿನಲ್ಲಿಯೇ ಹಲವರು ಉತ್ತಮ ಕೃತಿಗಳನ್ನು ರಚಿಸಿರುವ ಬಗ್ಗೆ ತಿಳಿಯಿತು.