ಸಾಮರಸ್ಯದ ಶಕ್ತಿ - ಡಾ.ಮಿರ್ಜಾ ಬಷೀರ್ ಕತಾ ಸಂಕಲನದ ಮುನ್ನುಡಿ
ಹುಟ್ಟಿನಿಂದೊಂದು ಮುಂಜಿ ಬಿಟ್ಟರೆ ಮತ್ತೆಲ್ಲಾ ರೀತಿಯಲ್ಲೂ ಹಿಂದೂಗಳಿಗೆ ತಮಗೂ ವ್ಯತ್ಯಾಸವಿಲ್ಲದಂತೆ ಬದುಕುವ ಪಿಂಜಾರ ಮುಸ್ಲಿಮರು, ಇಂದಿನ ಸಾಮಾಜಿಕ ಸಂದರ್ಭದಲ್ಲಿ ಯಾಕೆ ಇತರ ಉರ್ದು ಮಾತನಾಡುವ ಮುಸ್ಲಿಮರನ್ನು ಅನುಕರಿಸುವುದು ಅನಿವಾರ್ಯ ಎಂದು ತಿಳಿಯುತ್ತಾರೆ ಎಂಬುದು ಕೂಡಾ ಡಾ. ಮಿರ್ಜಾ ಅವರ ಆತಂಕಕ್ಕೆ ಕಾರಣವಾಗಿದೆ. ಮೋಸ ಹೊಂದುವ ಚಿಕ್ಕಮ್ಮ ('ಕೊಶ್ಚನ್ ಆಫ್ ಟೈಮ್' ಕಥೆ), ತನ್ನ ಬಡತನ ಅಸಹಾಯಕತೆಗಳಿಂದ ಶೋಷಣೆಗೆ ಒಳಗಾಗುವ ಮೂಕಿ ('ಲಾಕ್‌ಡೌನ್' ಕಥೆ) ಹೀಗೆ ಎಲ್ಲಾ ಕಡೆ ಹಿಂಸೆ, ಕ್ರೌರ್ಯಗಳು ಯಾಕೆ ಹೆಚ್ಚಾಗುತ್ತಿವೆ ಎಂಬುದು ಡಾ. ಮಿರ್ಜಾರನ್ನು ನಿರಂತರವಾಗಿ ಕಾಡಿದೆ.
ಎಸ್.ಆರ್.ವಿಜಯಶಂಕರ್
ಡಾ. ಮಿರ್ಜಾ ಬಷೀರ್ ಅವರ ನಾಲ್ಕನೆಯ ಕಥಾಸಂಕಲನ 'ಅಬ್ರಕಡಬ್ರ'ದ ಒಂಬತ್ತು ಕತೆಗಳಲ್ಲೂ ಸ್ಥಾಯಿಗುಣ, ಜೀವನಪ್ರೀತಿಯುಳ್ಳ ಮಾನವೀಯತೆ ಮತ್ತು ಜೀವನಮೌಲ್ಯವಾಗಿ ಸಮಾನತೆ ಢಾಳಾಗಿ ಕಾಣುತ್ತವೆ. ಸ್ವಾತಂತ್ರೋತ್ತರ ಭಾರತವು ಜಾತಿ, ಮತ, ಧರ್ಮ, ಭಾಷೆ, ಪ್ರಾಂತಗಳ ಭೇದವಿಲ್ಲದೆ ಎಲ್ಲಾ ಪ್ರಜೆಗಳಿಗೂ ಸಮಾನತೆಯ ಹಕ್ಕನ್ನು ನೀಡಿದೆ. ನಮ್ಮ ಸಮಾಜ ಧರ್ಮನಿರಪೇಕ್ಷವಾಗಿ ಸಮಾನತೆಯನ್ನು ಒಂದು ಮೌಲ್ಯವಾಗಿ ಸ್ವೀಕರಿಸಿದೆ. ಆತನಕ ಆಚಾರ, ವಿಚಾರ, ಸಂಸ್ಕೃತಿ, ನಡಾವಳಿ, ಆಚರಣೆಗಳಲ್ಲಿ ನಮ್ಮ ಸಮಾಜದಲ್ಲಿದ್ದ ಸಾಮರಸ್ಯವು ಸಂವಿಧಾನ ನೀಡಿದ ಸಮಾನತೆಯ ಮೌಲ್ಯದಿಂದ ಹೊಸ ಹೊಳಪು ಪಡೆಯಿತು. ಅಂತಹ ಅನ್ನೋನ್ಯ ಸಾಮರಸ್ಯ ಅನ್ಯಾಯವಾಗಿ, ವಿನಾಕಾರಣ, ಸ್ವಾರ್ಥಪ್ರೇರಿತ, ಅಧಿಕಾರ ಮೋಹದ ದ್ವೇಷದಿಂದ ಹಾಳಾಗುವುದು ಕಥೆಗಾರ ಮಿರ್ಜಾರನ್ನು ಅತೀವ ಆತಂಕಕ್ಕೆ ಒಳಪಡಿಸಿದೆ.
ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ; ಅದು ಉಳಿದು ಬೆಳೆಯಬಲ್ಲದು ಎಂಬ ಆಶಾವಾದಿ ಡಾ. ಮಿರ್ಜಾ ಬಷೀರ್. ಹಾಗಾಗಿ ಅವರ, 'ಇರುವನೊಬ್ಬನು ಚಂದಿರ' ಕಥೆಯಲ್ಲಿ ಮಸ್ತಾನ್ ಸಾಹೇಬರು ಬಸ್ಸಿನಲ್ಲಿ ದಾವಣಗೆರೆಗೆ ಹೋಗುವಾಗ ಪಕ್ಕದಲ್ಲಿ ಕುಳಿತ ಗ್ರಾಮ ಪಂಚಾಯ್ತಿ ಚಂದ್ರಣ್ಣನ ಬಳಿ, ಹೊಸದಾಗಿ ಕಟ್ಟಿಸುತ್ತಿದ್ದ ಊರ ಹನುಮಂತನ ಗುಡಿಗೆ ಹತ್ತು ಸಾವಿರ ಕೊಡುವುದಾಗಿ ಅಲ್ಲೇ ಮಾತು ಕೊಟ್ಟು ಬಸ್ಸಿನಿಂದಿಳಿದು ಹೋಟೆಲ್‌ನಲ್ಲಿ ಜೊತೆಯಾಗಿ ಚಹಾ ಕುಡಿದು ತಂತಮ್ಮ ಕೆಲಸಗಳಿಗೆ ಹೋಗುತ್ತಾರೆ. ಅದರ ಹಿಂದಿನ ದಿನ ನಡೆದ ಒಂದು ಕೊಲೆಯ ಕಾರಣದಿಂದ ಊರಿನ ತುಂಬಾ ಹಿಂಸಾಚಾರ ಪ್ರಾರಂಭವಾದಾಗ ಮಸ್ತಾನ್ ಸಾಹೇಬರು ಭುಗಿಲೆದ್ದ ಕೋಮು ಹಿಂಸಾಚಾರದ ದಳ್ಳುರಿಯಲ್ಲಿ ಸಿಕ್ಕಿ ಹಲ್ಲೆಗೆ ಒಳಗಾಗುತ್ತಾರೆ. ತಾನು ಸತ್ತೆ ಎಂದು ತಿಳಿದ ಮಸ್ತಾನ್ ಸಾಹೇಬರು ಆಸ್ಪತ್ರೆಯಲ್ಲಿ ಎಷ್ಟೋ ಗಂಟೆಗಳ ಬಳಿಕ ನೋವಿನಿಂದಲೇ ಕಣ್ಣು ತೆರೆದಾಗ ಮೊದಲಿಗೆ ಅವರು ನೋಡುವುದು ಪಂಚಾಯ್ತಿ ಅಧ್ಯಕ್ಷ ಚಂದ್ರಣ್ಣನ ಮುಖ. “ಆ ಮುಖ ಉಗಾದಿ ಚಂದ್ರನಂತೆ, ರಂಜಾನ್ ಚಂದ್ರನಂತೆ ಕಂಡು ಇಬ್ಬರಲ್ಲಿಯೂ ಸಮಾಧಾನ ತಂದಿತು" ಎಂಬುದು ಕಥೆಗಾರ ನಿರೂಪಕನ ಮಾತು.
ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ಒಳ್ಳೆಯತನ ಚಿಗುರಿಯೇ ಚಿಗುರುತ್ತದೆ ಎಂಬ ನಂಬಿಕೆಯನ್ನು, ಆದರ್ಶದ ಹಂಬಲವನ್ನು ಅದರ ನಿರೂಪಕರು ಬಡಮಗುವಿಗಾಗಿ: ಬೆನ್ನುಕೂಡುವವರಲ್ಲ. ಮುದುಕ ಮತ್ತು ಮಗು ಕಥೆಯಲ್ಲಿ ಚಪ್ಪಲಿಗಳ ಕಳ್ಳತನ ಮಾಡಿ ಬಿಡುಕುವ ಮುದುಕ, ಬಡಮಗುವಿನ ಕಿತ್ತು ಒಂದು ಚಪ್ಪಲಿಗೆ ಬದಲಾಗಿ, ಅಲ್ಲಿ ತಾನು ನೋಡದೇ ಇದ್ರೂ ಕೂಡ, ಯಾವುದೋ ಒಂದು ಆಟಕ್ಕಾಗಿ ಜೋಪಾನ ಮಾಡಿದ ದುಡ್ಡಿನಲ್ಲಿ ತನ್ನ ಮೊಮ್ಮಗುವಿನ ನೆನಪಿನಲ್ಲಿ ಒಂದು ಹೊಸ ಚಪ್ಪಲಿ ಕೊಂಡುಕೊಳ್ಳುತ್ತಾನೆ. ಮಾನವಪ್ರೀತಿಯಲ್ಲಿ ಹಸಿವಿನ ಭಯ, ಸಂಕಟಗಳೆರಡನ್ನೂ ಮೀರುತ್ತಾನೆ. ಕಲ್ಪಿತ ವಾಸ್ತವ ತಂತ್ರದಲ್ಲಿ ಹೆಣೆದ ಅಪ್ತಶೈಲಿಯ ಕಥೆ ಸರಳರೇಖೆಯಲ್ಲಿ ಚಲಿಸಿ ಭಾವನಾತ್ಮಕವಾಗಿ ಕೊನೆಗೊಳ್ಳುತ್ತದೆ. ಆದರೆ ಅದು ಹಸಿವನ್ನೂ ಮೀರಿದ, ಬಡತನಕ್ಕೂ ಬಾಗದ, ಅಂತರಂಗದ ಮಾನವಪ್ರೀತಿಗಾಗಿ ಬಹಿರಂಗದ ಲಾಭಗಳನ್ನು ತಿರಸ್ಕರಿಸಬಲ್ಲ ಮನುಷ್ಯ ಸ್ಪಂದನವನ್ನು ಎತ್ತಿ ಹಿಡಿಯುತ್ತದೆ.
'ಚಂದನ ಗಾಂಧಿ' ಕಥೆಯಲ್ಲೂ, ಬಹುಮಾನವಾಗಿ ಗಾಂಧೀಜಿ ಬರೆದ ಪುಸ್ತಕಗಳನ್ನು ಶಾಲೆಯಲ್ಲಿ ಪಡೆದ ಪುಟ್ಟ ಹುಡುಗ ಚಾಂದ್‌ಪೀರ್, ಗಾಂಧಿ ಪ್ರಭಾವದಿಂದ ತಾನು ಬದಲಾಗುವುದು ಮಾತ್ರವಲ್ಲದೆ ತನ್ನ ತಾಯಿ ತಂದೆಯರ ಮೇಲೂ ಪ್ರಭಾವ ಬೀರುತ್ತಾನೆ. ಇನ್ನೊಬ್ಬರಿಗೆ ಸೇರಿದ ಮಾವಿನಹಣ್ಣು ತಿನ್ನದಿರುವ ಸಣ್ಣ ಕೆಲಸದ ಮೂಲಕ ಗಾಂಧಿ ತತ್ವವನ್ನು ಅನ್ವಯಿಸಿ ತೋರಿಸುತ್ತಾನೆ. ಪ್ರಲೋಭನೆ ಆಮಿಷಗಳನ್ನು ಮೀರುವುದರ ಮೂಲಕ ಚಾಂದ್ ಋಜುಮಾರ್ಗದ ಶಕ್ತಿಯನ್ನು ಅನ್ವಯಿಸಿ ತೋರಿಸಿ, ಇಂದೂ ನಮ್ಮ ಬದುಕಿನಲ್ಲಿ ಗಾಂಧಿ ಸಾಧ್ಯ ಎಂಬುದನ್ನು ಸಾಬೀತುಪಡಿಸುತ್ತಾನೆ.
'ಅದಲು-ಬದಲು' ಕಥೆ, ಸುಲ್ತಾನ್ ಸಾಹೇಬ್ ಮತ್ತು ಗವಿರಂಗಪ್ಪನ ಮನೆಗಳ ನಡುವಿನ ಸಾಮರಸ್ಯದ ವಿವರಗಳಲ್ಲಿ ಪ್ರಾರಂಭವಾಗುತ್ತದೆ. ಆದರೆ ಕಾರಣ ತಿಳಿಯದೆ ಕೆಲವು ದಿನ ಪರಸ್ಪರ ಸಂಬಂಧ ಕಡಿದು ಬದುಕು ಅಯೋಮಯವಾಗುತ್ತದೆ. ಸಾಮರಸ್ಯ ಕಡಿದಂತಾಗಿ ಮಾನಸಿಕವಾಗಿ ನರಳುತ್ತಾರೆ. ಕೊನೆಗೆ ಅದು ಕೊರೋನಾದಿಂದ ಹಾಗಾಯಿತು ಎಂಬುದು ತಿಳಿಯುತ್ತದೆ. ಕಥೆ ತನ್ನ ಸಾಂಕೇತಿಕತೆಯಿಂದ ದೇಶದಲ್ಲಿ ಇಂದು ದೊಡ್ಡದಾಗುತ್ತಿರುವ ಧರ್ಮ ಸಂಬಂಧಿತ ಬಿರುಕುಗಳು ಕೊರೋನಾದಂತೆ ತಾತ್ಕಾಲಿಕ. ಕೆಲವು ಸಮಯ ಇದ್ದು ಹೊರಟು ಹೋಗಬಹುದೆಂಬ ಆಶಾವಾದವನ್ನು ಸೂಚಿಸುತ್ತದೆ. ಕರೀಮಜ್ಜನಂತೂ ಪರಸ್ಪರ ಸಂಪರ್ಕವಿಲ್ಲದೆ ಎರಡು ಧರ್ಮಗಳ ನಡುವೆ ನಡೆಯುತ್ತಿರುವ ಬಿಕ್ಕಟ್ಟಿನ ಪರಿಣಾಮವೋ ಎಂಬ ಯೋಚನೆ ಬಂದು ತನ್ನಷ್ಟಕ್ಕೆ ತಾನೆ ಸಹಜವಾಗಿ, "ಪ್ರಾರ್ಥನಾ ಸ್ಥಳಗಳನ್ನು ವಿಶ್ವದ ಎಲ್ಲ ಪ್ರಜೆಗಳ ಧ್ಯಾನಮಂದಿರಗಳನ್ನಾಗಿ ಮಾಡಬೇಕು" ಎನ್ನುತ್ತಾನೆ.
ಶ್ರೀಮಂತಿಕೆ, ಅಲ್ಲಿ ಹುಟ್ಟುವ ಅಮಾನವೀಯತೆ, ಶೋಷಣೆಗಳು ಇದ್ದರೂ ತಬ್ಬಲಿ ಶಂಷಾದ್, ಒಂದು ಪ್ರೀತಿಯ ಮಾತಿನಿಂದ ಎಲ್ಲವನ್ನೂ ಮರೆತುಬಿಡುತ್ತಾಳೆ. ಅವಳು ಲೈಂಗಿಕವಾಗಿಯೂ ಶೋಷಣೆಗೆ ಒಳಗಾಗಬಹುದು. ಆದರೆ ಕಥಾ ಸಂದರ್ಭ ಮಾನವನಿಗೆ ಪ್ರೀತಿಯ ಮಹತ್ವ ಎಷ್ಟಿದೆ ಎಂಬುದನ್ನು ಕಾಣಿಸುತ್ತದೆ. ಮೋಸವಾಗುತ್ತಿದ್ದರೂ ಪ್ರೀತಿಗೆ ತಹತಹಿಸುವ ಜೀವದ ಮಿಡುಕನ್ನು ಜಾತಿ, ಧರ್ಮ, ಬಡವ, ಬಲ್ಲಿದರ ಹೊರತಾಗಿಯೂ ಕಾಣಬೇಕೆಂದು ಕಥೆ ಒತ್ತಾಯಿಸುತ್ತದೆ.
ಹುಟ್ಟಿನಿಂದೊಂದು ಮುಂಜಿ ಬಿಟ್ಟರೆ ಮತ್ತೆಲ್ಲಾ ರೀತಿಯಲ್ಲೂ ಹಿಂದೂಗಳಿಗೆ ತಮಗೂ ವ್ಯತ್ಯಾಸವಿಲ್ಲದಂತೆ ಬದುಕುವ ಪಿಂಜಾರ ಮುಸ್ಲಿಮರು, ಇಂದಿನ ಸಾಮಾಜಿಕ ಸಂದರ್ಭದಲ್ಲಿ ಯಾಕೆ ಇತರ ಉರ್ದು ಮಾತನಾಡುವ ಮುಸ್ಲಿಮರನ್ನು ಅನುಕರಿಸುವುದು ಅನಿವಾರ್ಯ ಎಂದು ತಿಳಿಯುತ್ತಾರೆ ಎಂಬುದು ಕೂಡಾ ಡಾ. ಮಿರ್ಜಾ ಅವರ ಆತಂಕಕ್ಕೆ ಕಾರಣವಾಗಿದೆ. ಮೋಸ ಹೊಂದುವ ಚಿಕ್ಕಮ್ಮ ('ಕೊಶ್ಚನ್ ಆಫ್ ಟೈಮ್' ಕಥೆ), ತನ್ನ ಬಡತನ ಅಸಹಾಯಕತೆಗಳಿಂದ ಶೋಷಣೆಗೆ ಒಳಗಾಗುವ ಮೂಕಿ ('ಲಾಕ್‌ಡೌನ್' ಕಥೆ) ಹೀಗೆ ಎಲ್ಲಾ ಕಡೆ ಹಿಂಸೆ, ಕ್ರೌರ್ಯಗಳು ಯಾಕೆ ಹೆಚ್ಚಾಗುತ್ತಿವೆ ಎಂಬುದು ಡಾ. ಮಿರ್ಜಾರನ್ನು ನಿರಂತರವಾಗಿ ಕಾಡಿದೆ.
'ಹೋಟೆಲ್ ಗಜಾನನ' ಕಥೆ ಸಂಜೀವಪ್ಪನಿಗೂ, ಅನಾಥನಾಗಿ ಊರಿಗೆ ಬಂದ ಜಬ್ಬಾರ್‌ಗೂ ಪರಸ್ಪರ ಬೆಳೆಯುವ ಕೌಟುಂಬಿಕ ರೀತಿಯ ಪ್ರೀತಿಯ ಬಂಧನವನ್ನು ಸೂಚಿಸುತ್ತದೆ. ಸಂಜೀವಪ್ಪ ಊರಿಗೆ ಹೋಗುವಾಗ ಹೋಟೆಲನ್ನು ಲಾಭಕ್ಕೆ ಮಾರದೆ ಜಬ್ಬಾರನಿಗೆ ಕೊಡುತ್ತಾನೆ. ಜಬ್ಬಾರ, ಅಡುಗೆಯ ಸೀತಾರಾಮು, ಹೊಸದಾಗಿ ಕೆಲಸಕ್ಕೆ ಸೇರಿದ ಕಾಶಿ ಯಶಸ್ವಿಯಾಗಿ ಹೋಟೆಲ್ ನಡೆಸುತ್ತಾರೆ. ಜಾತಿ, ಮತ, ಧರ್ಮಗಳನ್ನು ಮೀರಿದ ಪರಸ್ಪರ ಸಾಮರಸ್ಯದ ಸಂಬAಧವಿದ್ದ ಊರಲ್ಲಿ ಕೋಮು ದ್ವೇಷ ಹಬ್ಬುವುದನ್ನು ಕಥೆ ಕಾಣಿಸುತ್ತಾ ಹೋಗುತ್ತದೆ. ಜಬ್ಬಾರ್, ಶಾಂತ ಮೇಡಂ ಮಗಳು ವಿಸ್ಮಯಳ ಪ್ರೇಮಪಾಶದಲ್ಲಿ ಬಿದ್ದರೆ - ಹಿಂದೂಗಳಿಗೆ ಅದು ಲವ್ ಜಿಹಾದ್‌ನಂತೆ ಕಂಡರೆ, ಮುಸ್ಲಿಮರಿಗೆ ಧರ್ಮಬಾಹಿರ ಪಾಪದ ಕೆಲಸವಾಗಿ ಕಾಣುತ್ತದೆ. ಗಣೇಶನ ಹಬ್ಬಕ್ಕೆ ಸ್ವಯಂಸೇವಕನಾಗಿ ಪೆಂಡಾಲ್ ಕೆಲಸ ಮಾಡುವ ಜಬ್ಬಾರ್, ಒಂದು ಧರ್ಮಕ್ಕೆ ದ್ರೋಹಿಯಾಗಿಯೂ, ಇನ್ನೊಂದು ಧರ್ಮದವರಿಗೆ ಕುಟಿಲನಾಗಿಯೂ ಕಾಣುತ್ತಾನೆ. ಸಂಜೀವಪ್ಪ ಎಂದೋ ಮಾಡಿಸಿ ಇಟ್ಟಿದ್ದ ಹೋಟೆಲ್ ಬೋರ್ಡನ್ನು ಹಾಕಿದ್ದೇ, ಎರಡೂ ಧರ್ಮದವರಿಗೆ ತಪ್ಪಾಗಿ ಕಾಣುತ್ತದೆ. ಕೋಮು ದ್ವೇಷ ಹೆಚ್ಚಾದಾಗ 'ಕಾಶಿ' ಬದಲು ಆತ 'ಕಾಶಿಂ' ಅಥವಾ 'ಕಾಸಿಂ' ಎಂಬ ವದಂತಿ ಹರಡಿ ಹಿಂಸೆಯಾಗುತ್ತದೆ. ಕೋಮುದಳ್ಳುರಿಯಲ್ಲಿ ಹೋಟೆಲ್ ನಾಶವಾಗಿ, ಎಲ್ಲವೂ ಹಾಳಾಗಿ ಹೋಟೆಲ್ ಮುಚ್ಚಿ ಹೋದರೂ 'ವಿಸ್ಮಯ' ಮಾತ್ರ ತನ್ನ ಪ್ರೀತಿಗಾಗಿ ಕಾಯುತ್ತಾಳೆ. ಜಬ್ಬಾರ ಬದುಕಿರುವನೋ, ಇಲ್ಲವೋ ಎಂಬ ಆತಂಕದಲ್ಲೇ ಅವಳು ಕಾಯುತ್ತಿರುತ್ತಾಳೆ.
ಅನಗತ್ಯ ದ್ವೇಷನ ಆಚೆ ನಿಜವಾದ ಮಾನವಪ್ರೇಮದ ಹಂಬಲ ಡಾ. ಮಿರ್ಜಾ ಬಷೀರ್ ಅವರಲ್ಲಿ ಸತತವಾಗಿ ಬೆಳೆದು ಬಂದ ಚಿಂತನೆ. ದಯೆ, ಕರುಣೆ, ಕ್ಷಮಾಗುಣಗಳು ಮನುಷ್ಯನನ್ನು ಪಾಣಿ ಪವೃತ್ತಿಯಿಂದ ಮನುಷ್ಯ ಪ್ರೀತಿಗೆ ಎತ್ತುವ ಅದು ವ್ಯಕ್ತಿಯಲ್ಲಿ ಸಮುದಾಯದಲ್ಲಿ ಮೈಗೂಡಬೇಕಾದ ಸಾಧ್ಯತೆಗಳ ಶಕ್ತಿಗಳು, ಅದು ಬಗೆಗಿನ ಸೃಜನಾತ್ಮಕ ಅರಿವು ಅವರ ನಿರಂತರ ಕಾಳಜಿ.
ಅವರ ಈ ಮೊದಲಿನ 'ಹಾರುವ ಹಕ್ಕಿ ಮತ್ತು ಇರುವೆ' ಸಂಕಲನದಲ್ಲೂ ಈ ಚಿಂತನೆ ಇತ್ತು. ಆ ಕಥೆಯಲ್ಲಿ ದನೀನ ಆಸ್ಪತ್ರೆಯ ಸುಭಾನ್ ಡಾಕ್ಕು, ಗಬ್ಬದ ಹಸು ಹಾಗೂ ಹುಟ್ಟುವ ಕರುಗಳ ಜೀವ ಉಳಿಸಲು ಹೋರಾಡುತ್ತಿರುವಾಗ ಡಾಕ್ಟರು ಹುಟ್ಟಿನಿಂದ ಮುಸ್ಲಿಮರಾದ ಕಾರಣ ಧರ್ಮದ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಕುಟಲ ಪ್ರಚಾರ ನಡೆಸಿ, ಕೋಮು ಆತಂಕ ಸೃಷ್ಟಿಸುತ್ತಾರೆ. ಆದರೆ ದನವನ್ನು ಕರು ಹಾಕಿಸಿ, ವೈದ್ಯರಾಗಿ ಗಂಟೆಗಟ್ಟಲೆ ಹೋರಾಡಿ, ದನ ಕರುಗಳೆರಡರ ಜೀವಗಳನ್ನು ಉಳಿಸಿದ ಡಾಕ್ಟರಿಗೆ, ದನದ ಒಡತಿಗೆ ಸಹಕರಿಸಿದ ಎಲ್ಲಾ ಸುಜ್ಞಾನಿಗಳಿಗೆ ಸಂತೋಷ, ದನ, ಕರು ಹಾಕಿ ಸುಸೂತ್ರ ಆದ ಕೂಡಲೆ ಮರದ ಮೇಲಿದ್ದ ಹಕ್ಕಿ, ನೆಲದಲ್ಲಿ ಹರಿಯುವ ಇರುವೆ ಕಳಕಳಿಯಿಂದ, ಪ್ರೀತಿಯಿಂದ, 'ಕರು ಹಾಕಿ ಆಯಿತೆ' ತಾಯಿ ಮಗು ಆರೋಗ್ಯವೆ? ಎಂದು ಕೇಳುತ್ತವೆ. ಹಕ್ಕಿ ಇರುವೆಗಳಲ್ಲಿರುವ ಈ ಕಳಕಳಿ ಪ್ರೀತಿ, ಮುಗ್ಧ ಪ್ರಾಮಾಣಿಕ ಮನಸ್ಸು ಮನುಷ್ಯರಲ್ಲಿ ಯಾಕೆ ಇಲ್ಲ ಎಂದು ಕಥೆ ಕೇಳುತ್ತದೆ.
ಡಾ. ಮಿರ್ಜಾ ಬಷೀರ್ ಅವರ ಕತೆಗಳಲ್ಲಿ ಉದಾರವಾದಿ ನಿಲುವು, ಸಹಬಾಳ್ವೆ, ಜೀವನಪ್ರೀತಿಯೇ ಮಾನವಧರ್ಮವನ್ನು ಇಂದಿನ ದ್ವೇಷದ ವಾತಾವರಣದಲ್ಲಿ ಎತ್ತಿ ಹಿಡಿದು ಅದರ ಪ್ರಾಮುಖ್ಯತೆಯನ್ನು ಕಾಣಿಸುವ ಆಶಯ ಸ್ಪಷ್ಟವಾಗಿ ಗೋಚರಿಸುತ್ತದೆ. ಇಂದಿನ ಲೋಕದ ವಾಸ್ತವವನ್ನು ವಿವರಿಸುತ್ತಾ, ಸಹಬಾಳ್ವೆಯ ಸಹನಶೀಲ ಮನಸ್ಸಿನ ಜೀವನಪ್ರೀತಿಯನ್ನು ತೋರಿಸುವುದು ವರ್ತಮಾನ ಕಾಲದಲ್ಲಿ ಸಾಮಾಜಿಕ ಅವಶ್ಯಕತೆಯಾಗಿದೆ. ಅಂತಹ ಸೃಜನಶೀಲ ಕೆಲಸವನ್ನು ಪ್ರಜ್ಞಾವಂತರು ಸ್ವಾಗತಿಸುತ್ತಾರೆ ಎಂಬ ನಂಬಿಕೆ ನನ್ನದು.
ಡಾ. ಮಿರ್ಜಾ ಬಷೀರ್ ಅವರು ಈಚೆಗೆ ನನಗೆ ಪರಿಚಯವಾದವರು. ಆ ಬಳಿಕ ಸಾಹಿತ್ಯಾಸಕ್ತಿಯಿಂದ ನಮ್ಮ ಪರಿಚಯ ಬೆಳೆಯಿತು. ಅವರು ವಿಶ್ವಾಸದಿಂದ ಈ ಸಂಕಲನಕ್ಕೆ ಮುನ್ನುಡಿ ಬರೆಯಬೇಕೆಂದು ಕೇಳಿದಾಗ ಸಂತೋಷದಿAದ ಒಪ್ಪಿಕೊಂಡೆ. ಅವರ ಹಿಂದಿನ ಕೃತಿಗಳಂತೆ ಈ ಕೃತಿಯನ್ನು ಕೂಡಾ ಕನ್ನಡ ಓದುಗರು ಸ್ವಾಗತಿಸುತ್ತಾರೆಂಬ ನಂಬಿಕೆ ನನ್ನದು.
ವಂದನೆಗಳು.
---------------------------------------------------------------------------------------------------------
ಡಾ. ಮಿರ್ಜಾ ಬಷೀರ್ ಪರಿಚಯ
ಡಾ. ಮಿರ್ಜಾ ಬಷೀರ್ ಅವರ ಹೊಸ ಕತಾ ಸಂಕಲನ “ ಅಬ್ರಕಡಬ್ರ” ಶುಕ್ರವಾರ ತುಮಕೂರಿನ ಕನ್ನಡ ಭವನದಲ್ಲಿ ಬಿಡುಗಡೆಯಾಯಿತು.
ಡಾ|| ಮಿರ್ಜಾ ಬಷೀರ್ ಇವರು ತುಮಕೂರು ವಾಸಿಯಾಗಿದ್ದು, ಮೂರು ಕಥಾಸಂಕಲನಗಳನ್ನು (1) ಬಟ್ಟೆಯಿಲ್ಲದ ಊರಿನಲ್ಲಿ (2013) (2) ಜಿನ್ನಿ (2016) (3) ಹಾರುವ ಹಕ್ಕಿ ಮತ್ತು ಇರುವೆ (2020) ಮತ್ತು ಗಂಗೆ ಬಾರೆ ಗೌರಿ ಬಾರೆ (2022) ಎಂಬ ಪಶುವೈದ್ಯ ವೃತ್ತಿಯ ಅನುಭವ ಕಥನವನ್ನು ಬರೆದು ಪ್ರಕಟಿಸಿದ್ದಾರೆ.
ಬಷೀರ್ ಅವರ ಅನೇಕ ಕಥೆಗಳು ಪ್ರಜಾವಾಣಿ, ಮಯೂರ, ಸುಧಾ, ಹೊಸತು, ಸಂಕಲನ ಮತ್ತು ನಾಡಿನ ಇತರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮೂರು ಬಾರಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ, ಒಂದು ಬಾರಿ ಕನ್ನಡಪ್ರಭ ಸಂಕ್ರಾಂತಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಇವರ ಅನೇಕ ಕಥೆಗಳು ಹಲವು ವಿಶ್ವವಿದ್ಯಾಲಯಗಳ ಪದವಿ ತರಗತಿಗಳ ಪಠ್ಯಗಳಲ್ಲಿ ಸೇರ್ಪಡೆಯಾಗಿವೆ. ಇವರ ನಾಟಕ ‘ತಬ್ಬಲಿಗಳು’ ಕೃಷಿ ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿ ತರಗತಿಗೆ ಪಠ್ಯವಾಗಿದೆ.
ಪಡೆದಿರುವ ಪ್ರಶಸ್ತಿಗಳು :
1) ‘ಜಿನ್ನಿ’ ಕಥಾಸಂಕಲನಕ್ಕೆ ಕರ್ನಾಟಕ ಸಂಘ, ಶಿವಮೊಗ್ಗ ಇವರಿಂದ ‘ಲಂಕೇಶ್ ಪ್ರಶಸ್ತಿ’ (2017).
2) ‘ಜಿನ್ನಿ’ ಕಥಾಸಂಕಲನಕ್ಕೆ ಅನನ್ಯ ಪ್ರಕಾಶನ, ತುಮಕೂರು ಇವರಿಂದ ‘ಕೆ. ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ’ (2017).
3) ‘ಹಾರುವ ಹಕ್ಕಿ ಮತ್ತು ಇರುವೆ’ ಕಥಾಸಂಕಲನಕ್ಕೆ ‘ಸ್ವಾಭಿಮಾನಿ ಕರ್ನಾಟಕ, ಬೆಂಗಳೂರು’ ಇವರ ವಾರ್ಷಿಕ ಕಥಾಸಂಕಲನ ಪ್ರಶಸ್ತಿ (2020).
4) ‘ಹಾರುವ ಹಕ್ಕಿ ಮತ್ತು ಇರುವೆ’ ಕಥಾಸಂಕಲನಕ್ಕೆ ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ (2020).