ಭಾರತೀಯರು ಸೊರಗಲು ಕಾರಣವೇನು ?

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಅಭಿಜಿತ್ ಬ್ಯಾರ‍್ಜಿ ಒಂದು ಅಂಕಣ ಬರೆಯುತ್ತಾರೆ. ಸಾಕಷ್ಟು ಭಿನ್ನವಾಗಿದೆ. ಅದರಲ್ಲಿ ಅರ್ಥಶಾಸ್ತ್ರ, ಚರಿತ್ರೆ, ಅಡುಗೆ ಹೀಗೆ ಏನೇನೊ ಬರುತ್ತದೆ. ಈ ಬಾರಿ ಅಡುಗೆ ರೆಸಿಪಿ ಇಲ್ಲ. ನಾನೇ ಅವರು ಉಲ್ಲೇಖಿಸಿರುವ ಗುರುದ್ವಾರದಲ್ಲಿ ಕೊಡುವ ದಾಲ್‌ನ ಒಂದು ರೆಸಿಪಿಯನ್ನು ಸೇರಿಸಿದ್ದೇನೆ. ಒಮ್ಮೆ ಓದಿ ನೋಡಿ ಎನ್ನುತ್ತಾರೆ ಲೇಖಕ.

ಭಾರತೀಯರು ಸೊರಗಲು ಕಾರಣವೇನು ?

 

ಜನ-ಮನ-ಗಣ

ಟಿ.ಎಸ್.ವೇಣುಗೋಪಾಲ್


ನನ್ನ ಅಜ್ಜ ವಿಚಿತ್ರ. ಸ್ಥಿತವಂತನಲ್ಲದಿದ್ದರೂ ತುಂಬಾ ಹಣ ಖರ್ಚು ಮಾಡುತ್ತಿದ್ದ. ಸಾಮಾಜಿಕವಾಗಿ ವಿಶಾಲವಾದ ಮನಸ್ಸು. ಅವನಿಗೆ ತೀರಾ ಅತ್ಮೀಯನಾಗಿದ್ದವನು ಒಬ್ಬ ಮುಸ್ಲಿಂ ಗೆಳೆಯ. ಅವರಿಬ್ಬರೂ ಓದೋದಕ್ಕೆ ಎಡಿನ್‌ಬರ್ಗ್ಗೆ ಒಟ್ಟಿಗೆ ಹೋಗಿದ್ದರು. ಅವನ ಬಗ್ಗೆ ತಾತ ಎಂದೂ ಕೆಟ್ಟದಾಗಿ ಮಾತನಾಡಿದ್ದು ನಾನು ಕೇಳಿಲ್ಲ. ಆದರೆ ಕ್ರಿಕೆಟ್ ವಿಷಯಕ್ಕೆ ಬಂದಾಗ ನಮ್ಮಲ್ಲಿ ಏಕೆ ವೇಗದ ಬೌಲರ್ ಇಲ್ಲ ಅಂದರೆ, ಅದಕ್ಕೆ ಅವನದೇ ಆದ ಸಿದ್ಧಾಂತವಿತ್ತು. ಪಾಕಿಸ್ತಾನದ ಮುಸ್ಲಿಮರು ದನ ತಿನ್ನುತ್ತಾರೆ. ನಾವು ತಿನ್ನೊದಿಲ್ಲ ಅನ್ನೋದು ಅವನ ಸಮರ್ಥನೆಯಾಗಿತ್ತು.


ವಾಸ್ತವವೆಂದರೆ ನಮ್ಮಲ್ಲಿ ಹಾಗೂ ಬಾಂಗ್ಲಾದೇಶದಲ್ಲಿ ನಾವು ಸುಮಾರಾಗಿ ಒಂದೇ ಪ್ರಮಾಣದ ಮಾಂಸ ತಿನ್ನುತ್ತೇವೆ. ಎರಡೂ ದೇಶದಲ್ಲಿ ವರ್ಷಕ್ಕೆ ತಲಾ ಸುಮಾರು ನಾಲ್ಕು ಕೆಜಿ ಮಾಂಸ ಬಳಸುತ್ತೇವೆ. ಪಾಕಿಸ್ತಾನದಲ್ಲಿ ಇದರ ನಾಲ್ಕು ಪಟ್ಟು ತಿನ್ನುತ್ತಾರೆ. ಚೀನಾದ ಜನ ಇನ್ನೂ ಹೆಚ್ಚು ತಿನ್ನುತ್ತಾರೆ. ಅಮೇರಿಕೆಯಲ್ಲಿ ಇದರ ಎಂಟು ಪಟ್ಟು ತಿನ್ನುತ್ತಾರೆ. ದಕ್ಷಿಣ ಏಷ್ಯಾದಲ್ಲಿ ನಾವು ಪೌಷ್ಟಿಕಾಂಶಕ್ಕೆ ಮಾಂಸವನ್ನು ಅಷ್ಟಾಗಿ ನೆಚ್ಚಿಕೊಂಡಿಲ್ಲ. ಆದರೆ ಅದಕ್ಕೆ ಒಂದು ಸಾಮಾಜಿಕ ಮೌಲ್ಯವಿದೆ. ಹಲವು ಹಬ್ಬ ಹರಿದಿನಗಳಲ್ಲಿ ಕ್ರೈಸ್ತರು, ಮುಸಲ್ಮಾನರು, ಹಾಗೂ ಹಲವು ಹಿಂದುಗಳು ವಿಶೇಷವಾಗಿ ಮಾಂಸದ ಅಡುಗೆ ಮಾಡುತ್ತಾರೆ. ಬಂಗಾಲದಲ್ಲಿ ಕಾಳಿ ಪೂಜೆಯ ಸಂದರ್ಭದಲ್ಲಿ ತಮ್ಮ ಶಾಕ್ಯ ಸಂಪ್ರದಾಯಕ್ಕೆ ಅನುಗುಣವಾಗಿ ನೀರೆಮ್ಮೆಯನ್ನು ಬಲಿಕೊಡುತ್ತಿದ್ದರು. ಆ ಯೋಚನೆಯೇ ನನಗೆ ಮೈಜುಂ ಅನ್ನಿಸುತ್ತಿತ್ತು.


ಆಗಿನ್ನು ನಮ್ಮ ಸಸ್ಯಹಾರಿ ಫಾಸ್ಟ್ ಬೌಲರ್ ಜಾವಗಲ್ ಶ್ರೀನಾಥ್ ಬಂದಿರಲಿಲ್ಲ. ಹಾರ್ದಿಕ್ ಪಾಂಡ್ಯ, ರವಿ ಅಶ್ವಿನ್, ಜಸ್ಪ್ರೀತ್ ಬುಮ್ರ ಕೂಡ ನಂತರದವರು. ಸಸ್ಯಹಾರಿಯಾಗಿರುವುದು ಗಟ್ಟಿಯಾಗಿರುವುದಕ್ಕೆ, ಎತ್ತರಕ್ಕೆ ಬೆಳೆಯುವುದಕ್ಕೆ ಅಡ್ಡಿಯೇನಲ್ಲ. ಹಾಗಾದರೆ ಭಾರತದಲ್ಲಿ ತುಂಬಾ ಜನ ಪೀಚಾಗಿರುವುದಕ್ಕೆ ಹಾಗೂ ತೀವ್ರ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವುದಕ್ಕೆ ಕಾರಣವೇನು? ಡಬ್ಲ್ಯುಎಚ್‌ಓ ಪ್ರಕಾರ ಜಗತ್ತಿನಲ್ಲಿ ಅತಿ ಹೆಚ್ಚು ಸೊರಗಿದ ಮಕ್ಕಳಿರುವ ದೇಶಗಳಲ್ಲಿ ಭಾರತ ಎರಡನೆಯದು. ಇದಕ್ಕೆ ಬಡತನ ಕಾರಣ ಅನ್ನೋದು ಬೇಡ. ನಮಗಿಂತ ಬಡರಾಷ್ಟ್ರಗಳಾದ ಯಮನ್, ಎರಿಟ್ರಿಯ, ಸೊಮಾಲಿಯಾ ಹಾಗೂ ಸೂಡಾನ್ ಮೊದಲಾದ 50 ದೇಶಗಳಿಗಿಂತ ಈ ವಿಷಯದಲ್ಲಿ ಉತ್ತಮ ಸ್ಥಿತಿಯಲ್ಲಿವೆ. ಅವುಗಳೆಲ್ಲಾ ನಮಗಿಂತ ಬಡರಾಷ್ಟ್ರಗಳು. ಉದಾಹರಣೆಗೆ ಕಾಂಗೋ ಜಿಡಿಪಿ ನಮಗಿಂತ 8 ಪಟ್ಟು ಕಮ್ಮಿ ಇದೆ.


ಹೀಗೆ ಪೌಷ್ಠಿಕಾಂಶದ ಕೊರತೆಯಿಂದ ಬಳಲುವುದಕ್ಕೆ ಅಸಮಾನತೆ ಕೂಡ ಕಾರಣವಾಗುತ್ತೆ ಅನ್ನೋದು ನಿಜ. ಆದರೆ ದಾರಿದ್ರ‍್ಯದ ದರವನ್ನು ಹೋಲಿಸಿ ನೋಡಿದರೆ ನಮಗಿಂತ ಹೆಚ್ಚು ಬಡವರು ಆ ದೇಶಗಳಲ್ಲಿದ್ದಾರೆ. ಭಾರತದಲ್ಲಿ ಹೆಚ್ಚು ಶ್ರೀಮಂತ ರಾಜ್ಯಗಳಾದ ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ದಾರಿದ್ರ‍್ಯದ ದರ ಕಡಿಮೆ ಇದೆ. ಆದರೆ ಅಲ್ಲಿ ಪೌಷ್ಟಿಕಾಂಶದ ಕೊರತೆ ಅತಿ ಹೆಚ್ಚು ಕಾಣುತ್ತದೆ. ಹಾಗೆಯೇ ಜೆನಿಟಿಕ್ಸ್ ಇದಕ್ಕೆ ಕಾರಣ ಅಂತಲೂ ಹೇಳುವುದಕ್ಕೆ ಆಗುವುದಿಲ್ಲ.


ಹಾಗೆಯೇ ನೈರ್ಮಲ್ಯ ಹಾಗೂ ಆಶುದ್ಧ ನೀರಿನಿಂದ ಉಂಟಾಗುವ ಭೇದಿಯಿಂದ ಪೌಷ್ಟಿಕಾಂಶದ ಕೊರತೆ ಆಗಿರಬಹುದು. ಆದರೆ ಅದೇ ಸಂಪೂರ್ಣ ಕಾರಣ ಅಂತ ಹೇಳುವುದಕ್ಕೆ ಆಗುವುದಿಲ್ಲ. ಯಾಕೆಂದರೆ ಬಯಲು ಕಕ್ಕಸ್ಸು ಆಫ್ರಿಕಾದ ದೇಶಗಳಲ್ಲಿ ನಮಗಿಂತಲೂ ದೊಡ್ಡ ಸಮಸ್ಯೆ. 


ಜಯಚಂದ್ರನ್ ಮತ್ತು ಪಾಂಡೆ ಅವರು ಹೇಳುವ ಪ್ರಕಾರ ಈ ಸಮಸ್ಯೆಯ ಮೂಲವನ್ನು ಹಿಂದು ಕುಟುಂಬಗಳಲ್ಲಿ ಮೊದಲನೆಯ ಮಗನ ಬಗ್ಗೆ ಇರುವ ಪಕ್ಷಪಾತದ ಮನಃಸ್ಥಿತಿಯಲ್ಲಿ ಗುರುತಿಸಬೇಕು. (ಮುಸಲ್ಮಾನರಲ್ಲಿ ಔರಸಪುತ್ರನಿಗೂ ಮತ್ತು ಅವರಿಗಿಂತ ಕಿರಿಯರಾದ ಇತರ ಮಕ್ಕಳಿಗೂ ಇರುವ ಅಂತರ ತುಂಬಾ ಕಡಿಮೆ). ನಮ್ಮ ಎಲ್ಲಾ ಗಮನ ಮತ್ತು ಸಂಪನ್ಮೂಲಗಳನ್ನು ಆ ಅದೃಷ್ಟಶಾಲಿ ಹುಡುಗನಿಗೆ ನೀಡುತ್ತಾ, ಉಳಿದವರು ತಮ್ಮ ಪಾಡನ್ನು ತಾವೇ ನೋಡಿಕೊಳ್ಳಲು ಬಿಟ್ಟುಬಿಡುತ್ತೇವೆ. ಔರಸಪುತ್ರನಿಗೆ ಇದರಿಂದ ಖಂಡಿತಾ ಲಾಭವಾಗುತ್ತದೆ, ಆದರೆ ಉಳಿದವರು ವಂಚಿತರಾಗಿರುತ್ತಾರೆ. (ನನ್ನ ಕುಟುಂಬದಲ್ಲಿ ನಾನೇ ಔರಸಪುತ್ರ ಹಾಗೂ ಅತ್ಯಂತ ಎತ್ತರವಿರುವವನು. ಇದು ನನ್ನಲ್ಲಿ ಒಂದಿಷ್ಟು ಕಸಿವಿಸಿಯನ್ನು ಹುಟ್ಟಿಸುತ್ತದೆ.)


ಭಾರತ ಮತ್ತು ಆಫ್ರಿಕಾದ ನಡುವೇ ಕಾಣುವ ಅಂತರಕ್ಕೆ ಕುಟುಂಬದೊಳಗಿನ ಈ ಅಸಮ ವಿತರಣೆ ಬಹುಮಟ್ಟಿಗೆ ಕಾರಣ ಎನ್ನುತ್ತಾರೆ ಜಯಚಂದ್ರನ್ ಮತ್ತು ಪಾಂಡೆ. ಇನ್ನು ಉಳಿದಂತೆ ಭಾರತಕ್ಕೆ ಹೋಲಿಸಿದರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಜನ ತಮ್ಮ ಒಟ್ಟು ವೆಚ್ಚದಲ್ಲಿ ಆಹಾರಕ್ಕೆ ಹೆಚ್ಚು ಹಣ ಖರ್ಚು ಮಾಡುತ್ತಾರೆ. (ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಭಾರತಕ್ಕಿಂತ ಬಡದೇಶಗಳು. ಆದರೆ ಅಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ಭಾರತಕ್ಕಿಂತ ಕಡಿಮೆ.) ಆದರೆ ಅಲ್ಲಿ ಆಹಾರ ಸುರಕ್ಷತಾ ಕಾನೂನಿನಡಿ ಆಹಾರಧಾನ್ಯಗಳಿಗೆ ದೊಡ್ಡ ಮೊತ್ತದ ಸಬ್ಸಿಡಿ ದೊರಕುತ್ತಿದೆ. ಅದು ಇದಕ್ಕೆ ಎಷ್ಟರ ಮಟ್ಟಿಗೆ ಕಾರಣ ಅನ್ನುವುದು ತಿಳಿಯದು. 


ಭಾರತದಲ್ಲಿ ನಮ್ಮ ಹೆಚ್ಚಿನ ಕ್ಯಾಲೊರಿಗಳನ್ನು ನಾವು ಧಾನ್ಯಗಳಿಂದ ಪಡೆಯುತ್ತೇವೆ. ಪ್ರೋಟಿನ್ ಮೂಲದಿಂದ ನಾವು ಪಡೆಯುವುದು ಕಡಿಮೆ. ಇದು ಒಂದು ಸಮಸ್ಯೆ. ಇತ್ತೀಚಿನ ಈಟ್-ಲ್ಯಾನ್ಸೆಟ್ ಆಹಾರದ ಉಲ್ಲೇಖ ಸೂಚಿಸುವಂತೆ ನಾವು 29% ಕ್ಯಾಲೊರಿಯನ್ನು ಪ್ರೋಟಿನಿನಿಂದ ಪಡೆಯಬೇಕು. ಆದರೆ ಒಂದು ಅಧ್ಯಯನದ ಪ್ರಕಾರ ಭಾರತೀಯರು ಪ್ರೋಟಿನಿನಿಂದ ಪಡೆಯುವ ಕ್ಯಾಲೊರಿ ಕೇವಲ 6%. ಈ ಲೆಕ್ಕಾಚಾರದಲ್ಲಿ ಸ್ವಲ್ಪಮಟ್ಟಿನ ತಪ್ಪಿರುವುದಕ್ಕೆ ಸಾಧ್ಯ ಎಂದು ಒಪ್ಪಿಕೊಂಡರೂ ಇದು ತುಂಬಾ ಕಡಿಮೆ ಮತ್ತು ಆತಂಕದ ವಿಷಯ. ಎನ್‌ಎಸ್‌ಎಸ್ ಅಂಕಿಅಂಶದ ಪ್ರಕಾರ ತುಂಬಾ ಶ್ರೀಮಂತರು ಕೂಡ ಪ್ರೋಟಿನ್ ಮೂಲದಿಂದ ಪಡೆಯುವ ಕ್ಯಾಲೊರಿಗಳು 15% ಮೀರುವುದಿಲ್ಲ. ಅಂದರೆ ಸಮಸ್ಯೆ ಇರುವುದು ಮಾಂಸದ ಸೇವನೆಯ ಕೊರತೆಯಲ್ಲಲ್ಲ. ಲ್ಯಾನ್ಸೆಟ್ ಬಹುತೇಕ ಸಸ್ಯಹಾರಿ ಆಹಾರವನ್ನೇ ಪರಿಹಾರವಾಗಿ ಸೂಚಿಸುತ್ತದೆ. ಹೆಚ್ಚು ತಾಳಿಕೆಯ ಪ್ರೋಟಿನ್ ಬಳಸಬೇಕು ಅನ್ನುವುದು ಉದ್ದೇಶ. ಪಶ್ಚಿಮ ಆಫ್ರಿಕಾದಲ್ಲಿ ಕಡಲೆಕಾಯಿಯನ್ನು ಪ್ರೋಟಿನ್ ಮೂಲವಾಗಿ ಬಳಸುತ್ತಾರೆ. ನಾವು ಭಾರತದಲ್ಲಿ ಕಡಲೆಕಾಯಿಯನ್ನು ತಿನ್ನುತ್ತೇವೆ. ಬೇಳೆ ಒಳ್ಳೆಯ ಪ್ರೋಟೀನ್ ಮೂಲ. ಬಹುಶಃ ಆಹಾರಕ್ಕೆ ಸಂಬಂಧಿಸಿದಂತೆ ಮನೋಭಾವ ಬದಲಿಸುವುದು ಸುಲಭವಲ್ಲ. ಪ್ರಾಯಶಃ ಸಾರ್ವಜನಿಕ ಭೋಜನ ಕಾರ್ಯಕ್ರಮ ನಮ್ಮ ಆಹಾರವನ್ನು ಕುರಿತ ಮನೋಭಾವವನ್ನು ಬದಲಿಸುವುದಕ್ಕೆ ಒಂದು ಅವಕಾಶವನ್ನು ಕಲ್ಪಿಸಬಹುದು. ಸಾಮಾಜಿಕ ಅಥವಾ ಧಾರ್ಮಿಕ ಸಮಾರಂಭಗಳೂ ಈ ನಿಟ್ಟಿನಲ್ಲಿ ನೆರವಾಗಬಹುದು. ನನಗೆ ಪಂಜಾಬಿ ಲಂಗರ್ ದಾಲ್ ರುಚಿ ಹತ್ತಿದ್ದು ಸಮೀಪದಲ್ಲಿದ್ದ ಗುರುದ್ವಾರದಿಂದ. ನನಗೆ ಚೆನ್ನಾಗಿ ನೆನಪಿದೆ. ನನಗಾಗ 17 ವರ್ಷ. ಬಾಗಿಲಲ್ಲಿ ನಿಂತು, ಕೊಳ್ಳುವ ಶಕ್ತಿಯಿದ್ದರೂ ಪುಕ್ಕಟೆ ತಿನ್ನುತ್ತಿದ್ದ ನಾನು, ಪಾಪಪ್ರಜ್ಞೆಯಿಂದ ಒದ್ದಾಡುತ್ತಿದ್ದದು ಚೆನ್ನಾಗಿ ನೆನಪಿದೆ. ಆದರೆ ಸೊಗಸಾದ ವಾಸನೆಯಿಂದ, ಹೆಚ್ಚುತ್ತಿದ್ದ ಆಸೆಯಿಂದ ತಡೆಯಲಾಗದೆ ಹೋಗಿ ತಿಂದು ಬರುತ್ತಿದ್ದೆ.


ಅಭಿಜಿತ್ ಬ್ಯಾನರ‍್ಜಿ ಯಾರು?


ಜಗತ್ತಿನ ದಾರಿದ್ರ್ಯವನ್ನು ನೀಗಲು ಪ್ರಯೋಗಾತ್ಮಕ ಕ್ರಮಗಳನ್ನು ಕೈಗೊಂಡಿರುವ ಕಾರಣಕ್ಕಾಗಿ 2019ರ ನೊಬೆಲ್ ಪ್ರಶಸ್ತಿಯನ್ನು ಸಂಶೋಧಕಿ ಹಾಗೂ ಅವರ ಪತ್ನಿಯೂ ಆಗಿರುವ ಎಸ್ತರ್ ಡುಫ್ಲೊ ಮತ್ತು ಮೈಖೆಲ್ ಕ್ರೆಮರ್ ಅವರೊಂದಿಗೆ ಹಂಚಿಕೊಂಡಿರುವ ಭಾರತೀಯ ಅಮೆರಿಕನ್ ಅಭಿಜಿತ್ ಬ್ಯಾನರ‍್ಜಿ ಸದ್ಯ ಮೆಸಾಚುಸೆಟ್ಸ್ ತಾಂತ್ರಿಕ ಸಂಸ್ಥೆಯಲ್ಲಿ ಫರ‍್ಡ್ ಫೌಂಡೇಶನ್‌ನ ಅಂತಾರಾಷ್ಟ್ರೀಯ ಪ್ರೊಫೆಸರ್ ಆಗಿದ್ದಾರೆ. ಇವರು ಟೈಮ್ಸ್ ಆಫ್ ಇಂಡಿಯಾದಲ್ಲಿ ಅಂಕಣಕಾರರೂ ಆಗಿದ್ದಾರೆ.

 

ಲಂಗರ್ ದಾಲ್ ಮಾಡುವ ಕ್ರಮ

   ನೆನಸಿದ ಉದ್ದಿನ ಕಾಳು, ಕಡಲೆಬೇಳೆ, ಉಪ್ಪು, ಅರಿಷಿನ, ಅಚ್ಚಕಾರದ ಪುಡಿ, ಚೆನ್ನಾಗಿ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ ಹಾಕಿ. ಕುಕ್ಕರಿನಲ್ಲಿ 4 ವಿಷಲ್ ಕೂಗಿಸಬೇಕು. ನಂತರ ಮಸಿದು ಇಟ್ಟುಕೊಳ್ಳಿ.


    ಒಗ್ಗರಣೆಗೆ ಬಾಣಳೆಗೆ ಎರಡು ಸ್ಪೂನ್ ತುಪ್ಪ, ಸ್ವಲ್ಪ ಎಣ್ಣೆ ಹಾಗಿ, ಅದು ಕಾದ ಮೇಲೆ ಅದಕ್ಕೆ ಜೀರಿಗೆ, ನಂತರ ಶುಂಠಿ ಬೆಳ್ಳುಳ್ಳಿ ಹಾಗೂ ಒಂದೆರಡು ಹಸಿಮೆಣಸಿನಕಾಯಿ ಜಜ್ಜಿ ಹಾಕಿ. ನಂತರ ಮೂರು ಕತ್ತರಿಸಿದ ಈರುಳ್ಳಿ ಮತ್ತು ಅರಿಷಿಣ ಹಾಕಬೇಕು. ನಂತರ ಧನಿಯಾ, ಕೆಂಪು ಮೆಣಸಿನಕಾಯಿ ಪುಡಿ ಹಾಕಿ, ಅದು ಚೆನ್ನಾಗಿ ಬಾಡಿದ ಮೇಲೆ ಒಂದು ಕತ್ತರಿಸಿದ ಟೊಮ್ಯಾಟೋ ಸೇರಿಸಬೇಕು. ಅದು ಕುದಿಯಲು ಪ್ರಾರಂಭವಾದ ಕೂಡಲೆ ಮಸಿದು ಇಟ್ಟುಕೊಂಡಿದ್ದ ಬೇಳೆಯನ್ನು ಸೇರಿಸಿ. ಹತ್ತು ನಿಮಿಷ ಚೆನ್ನಾಗಿ ಕುದಿಸಿ, ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಹಾಕಿ. ಲಂಗರ್ ದಾಲ್ ರೆಡಿ. ಸ್ವಲ್ಪ ಹೊತ್ತಿನ ನಂತರ ಚಪಾತಿ, ರೊಟ್ಟಿ ಅಥವಾ ಅನ್ನದ ಜೊತೆ ತಿನ್ನಲು ಅದು ತಯಾರು. 


   ಇದು ಸಾಮುದಾಯಿಕವಾಗಿ ತಯಾರಾಗುತ್ತಿದ್ದ ಅಡಿಗೆಯಾದ್ದರಿಂದ, ಕ್ರಮದಲ್ಲಿ ಒಂದಿಷ್ಟು ವ್ಯತ್ಯಾಸವಿರುತ್ತಿತ್ತು. ಕೆಲವೊಮ್ಮೆ ಬೇಳೆಯೂ ಬದಲಾಗುತ್ತಿತ್ತು. ಒಟ್ಟಿನಲ್ಲಿ ಪ್ರೀತಿಯಿಂದ ತಯಾರಿಸುತ್ತಿದ್ದರಿಂದ ರುಚಿ ತನ್ನಷ್ಟಕ್ಕೆ ತಾನೇ ಬರುತ್ತಿತ್ತು. ಅದು ನಿಜವಾಗಿ ಪ್ರೋಟಿನಿನ ಒಳ್ಳೆಯ ಮೂಲ.