“ ಇವತ್ತು ನಿಮ್ಮಪ್ಪ ಇದ್ದಿದ್ದರೆ ಎಷ್ಟು ಸಂತೋಷ ಪಡ್ತಾ ಇದ್ದರು” 

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರಾಲಿಗರ ವಕ್ರನೋಟ ಸ್ಪೀಕರ್ ಖಾದರ್ ಸಾಹೇಬರ ಕಡೆ ತಿರುಗಿ, ಮೂರೇ ದಿನದಲ್ಲಿ ಅವರು ಶಾಸಕರಿಗೆ ತರಬೇತಿ ಕೊಡಿಸಲೆಂದು ಆಹ್ವಾನಿಸಿದ್ದ ರವಿಶಂಕರ್ ಗುರು ಮತ್ತು ಕರ್ಜಗಿಯವರನ್ನ ಕೈ ಬಿಡುವ ತನಕ ಇವರು ಸುಮ್ಮನಿರಲಿಲ್ಲ.

“ ಇವತ್ತು ನಿಮ್ಮಪ್ಪ ಇದ್ದಿದ್ದರೆ ಎಷ್ಟು ಸಂತೋಷ ಪಡ್ತಾ ಇದ್ದರು” 

ಒಂದು ಗಳಿಗೆ 

ಕುಚ್ಚಂಗಿ ಪ್ರಸನ್ನ

ಇವತ್ತು ನಿಮ್ಮಪ್ಪ ಇದ್ದಿದ್ದರೆ ಎಷ್ಟು ಸಂತೋಷ ಪಡ್ತಾ ಇದ್ದರು, ಇಂಥಾ ಮಾತುಗಳನ್ನು ಕೇಳ್ತಾನೇ ಇರ‍್ತೀವಿ, ಮೊನ್ನೆ ಅಪ್ಪಂದಿರ ದಿನ, ಅಪ್ಪನ ಕುರಿತ ಪೋಸ್ಟ್ಗಳಂತೂ ಫೇಸ್ ಬುಕ್ಕಿನ ಹೊಟ್ಟೆ ಬಿರಿದು ಇಟ್ಟಾಡಿಬಿಟ್ಟವು. ಅಮ್ಮಂದಿರ ದಿನ, ಮಗಳ ದಿನ ಇಂಥಾ ದಿನಗಳ ಸಂಖ್ಯೆ ಈ ಸೋಶಿಯಲ್ ಮೀಡಿಯಾ ಬಂದ ಮೇಲಂತೂ ಜಾಸ್ತಿಯಾಗಿಬಿಟ್ಟಿವೆ. ಜೊತೆಗೆ ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವಗಳ ಸಂದರ್ಭಗಳಿಗಂತೂ ದ್ರೌಪದಿಗೆ ಕೃಷ್ಣ ಕೊಟ್ಟಿದ್ದ ಅಕ್ಷಯ ಪಾತ್ರೆಯಂತೆ ನಮ್ಮ ಜುಕರ್ ಬರ‍್ಗ್ ನಮಗೆ ಈ ಫೇಸ್ ಬುಕ್ಕನ್ನು ಕೊಟ್ಟು ಬಿಟ್ಟಿದ್ದಾನೆ. 


ಫೇಸ್ ಬುಕ್‌ನಲ್ಲಿ ಏನೆಲ್ಲ ಎಷ್ಟೆಲ್ಲ ಬರೆದರೂ, ಎಷ್ಟು ಫೋಟೋಗಳನ್ನು ವಿಡಿಯೋಗಳನ್ನು ಅಪ್‌ಲೋಡ್ ಮಾಡಿದರೂ, ಲೈಕುಗಳ ಜೊತೆಗೆ ಲೆಕ್ಕವಿಲ್ಲದಷ್ಟು ಎಮೋಜಿ, ಜಿಫ್, ಗ್ಲಿಫ್‌ಗಳನ್ನು ಟಿಕ್ ಮಾಡಿದರೂ, ಯಾರನ್ನು ಯಾರು ಟ್ಯಾಗ್ ಮಾಡಿದರೂ, ಆಡ್ ಫ್ರೆಂಡ್, ಅನ್ ಫ್ರೆಂಡ್ ಮಾಡಿದರೂ, ಸ್ನೂಝ್ , ಬ್ಲಾಕ್ ಮಾಡಿದರೂ, ಕಾಮೆಂಟ್, ರಿಪ್ಲೈಗಳನ್ನು ಬರೆದರೂ ಒಂದು ನಾವು ಒಂದು ರೂಪಾಯಿಯನ್ನೂ ಕೊಡಬೇಕಾಗಿಲ್ಲ ಎನ್ನುವುದೇ ನಮ್ಮ ಖುಷಿಗೆ ಮತ್ತು ನಾವು ದಿನವಿಡೀ ಎನ್ನುವುದಿರಲಿ, ನಟ್ಟಿರುಳು ನಿದ್ದೆಗಣ್ಣಿನಲ್ಲಿ ಯಾತಕ್ಕಾದರೂ ಎಚ್ಚರವಾದರೂ ನಮ್ಮ ಕೈ ಬೆರಳುಗಳು ಪುಳಕ್ ಅಂತ ಮೊಬೈಲ್‌ನಲ್ಲಿ ಫೇಸ್ ಬುಕ್‌ಗೆ ಇಣುಕಿ ನೋಡುವಷ್ಟು ಅಡಿಕ್ಟ್ ಮಾಡಿಸಿಬಿಟ್ಟಿದೆ. ಇಲ್ಲ ಎನ್ನುವವವರ ಸಂಖ್ಯೆ ತೀರಾ ಕಮ್ಮಿ ಅಥವಾ ಅವರು ನಿಜ ಹೇಳದ ಆತ್ಮ ಘಾತುಕರಾಗಿರುತ್ತಾರೆ. 


ಇವೆಲ್ಲದರ ಜತೆಗೆ ಟ್ರಾಲಿಂಗ್ ಅಂತೀವಲ್ಲ, ಈಗ ಅದೆಷ್ಟು ಸ್ಪೀಡ್ ತಗಂಡು ಬಿಟ್ಟಿದೆ ಅಂದರೆ ಯಾರು ಏನು ಸ್ಟೇಟ್‌ಮೆಂಟ್ ಕೊಟ್ಟವ್ರೆ ಅಂತ ಗೊತ್ತಾಗೋಕೆ ಮೊದಲೇ ವಿವರಗಳನ್ನೇ ಕೊಡದೇ ಆ ಹೇಳಿಕೆ ಕೊಟ್ಟವರನ್ನ ಗೇಲಿ ಮಾಡೋಕೆ ಶುರು ಮಾಡಿಬಿಡ್ತಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಟೀಕಿಸುವ ಭರದಲ್ಲಿ ಪಕ್ಕದಲ್ಲಿ ಕೂತ ಮಹಿಳೆಯ ಬೆವರು ವಾಸನೆ, ಮೈ ಕೆರೆತವನ್ನು ಕಾಮೆಂಟ್ ಮಾಡಿದ ಕತೆಗಾತಿಯೊಬ್ಬಳನ್ನು ಟ್ರಾಲಿಗರು ಹಿಗ್ಗಾ ಮುಗ್ಗಾ ಜಾಡಿಸಿ ಕಡೆಗೆ ಆಕೆ ತನ್ನ ಪೋಸ್ಟ್ ಡಿಲಿಟ್ ಮಾಡಿದ್ದೂ ಅಲ್ಲದೇ ಕ್ಲಾರಿಫಿಕೇಶನ್ ಕೊಟ್ಟರೂ ತಗ್ಗಲಿಲ್ಲ ಜನ. ಇದೀಗ ಟ್ರಾಲಿಗರ ವಕ್ರನೋಟ ಸ್ಪೀಕರ್ ಖಾದರ್ ಸಾಹೇಬರ ಕಡೆ ತಿರುಗಿ, ಮೂರೇ ದಿನದಲ್ಲಿ ಅವರು ಶಾಸಕರಿಗೆ ತರಬೇತಿ ಕೊಡಿಸಲೆಂದು ಆಹ್ವಾನಿಸಿದ್ದ ರವಿಶಂಕರ್ ಗುರು ಮತ್ತು ಕರ್ಜಗಿಯವರನ್ನ ಕೈ ಬಿಡುವ ತನಕ ಇವರು ಸುಮ್ಮನಿರಲಿಲ್ಲ. ಮಳವಳ್ಳಿ ಮಹದೇವಸ್ವಾಮಿ ಎಂದೋ ಹಾಡಿದ್ದ “ ಅನ್ಯಾಯಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಾಡಬಹುದೇ” ಎಂಬ ಹಾಡು ಸಾವಿರಗಟ್ಟಲೆ ಶೇರು,ಲಕ್ಷಗಟ್ಟಲೆ ವ್ಯೂಗಳಾಗಿದ್ದೇ ಅಲ್ಲದೇ ಆ ಹಾಡಿಗೆ ಡ್ಯಾನ್ಸ್ ಮಾಡುವ ತಂಡಗಳು, ಆ ಹಾಡನ್ನು ಮೋದಿ ಮತ್ತು ರಾಹುಲ್‌ಗೆ ಹೋಲಿಸುತ್ತ ಸದ್ಯದ ಟ್ರೆಂಡಿಂಗ್ ಆಗಿದೆ.


ಇವತ್ತಿಗೆ ನಮ್ಮಪ್ಪ ತೀರಿಕೊಂಡು ಹದಿನಾಲ್ಕು ವರ್ಷಗಳಾದವು, ಆಗ ನಾನು ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ನೌಕರನಾಗಿದ್ದೆ. ನಮ್ಮಪ್ಪನೂ ವಿಧಾನ ಸೌಧದಲ್ಲೇ 26-27 ವರ್ಷ ಇದ್ದು ನಿವೃತ್ತಿಹೊಂದಿದವರು. ನಾವು ಚಿಕ್ಕಂದಿನಿಂದಲೂ ಅಣ್ಣ ಅಂತಲೇ ಕರೆಯುತ್ತಿದ್ದು, ಅಪ್ಪ ಅಂದರೆ ಅದೇನೋ ಬೇರೆ ಪದ ಎನಿಸಿಬಿಡುತ್ತದೆ.


“ನಮ್ಮ ಪುಟ್ಟಂಗೆ ಕೋಪವೆಂಬುದು ಸದಾ ಮೂಗಿನ ತುದಿಯಲ್ಲೇ” ಎಂದು ನಮ್ಮಪ್ಪನ ಅಕ್ಕ ಗಂಗಮ್ಮತ್ತೆ ಹೇಳುತ್ತಿತ್ತು. ಅಕ್ಕ ತಮ್ಮನೂ ಮುನಿಸಿಕೊಂಡು ಸುಮಾರು 25 ವರ್ಷ ಮುಖ ಕೊಟ್ಟು ಮಾತಾಡಿರಲಿಲ್ಲ, ಎದುರು ಬದುರಾದರೂ ನೋಡದಂತೆ ಹೋಗಿಬಿಡುತ್ತಿತ್ತು. ಮುನಿಸಿಗೆ ಕಾರಣವಾದ ಪ್ರಸಂಗವನ್ನು ಹೇಳ ಹೋದರೆ ಅದೇ ಬೇರೆ ಕತೆ ಆಗಿಬಿಡುತ್ತದೆ. ಹುಡುಗರಾಗಿದ್ದ ನಮ್ಮ ಮೇಲೂ ಅಷ್ಟೇ ಮಾತಿನಲ್ಲಿ ಹೇಳುವ ಮೊದಲು ನಮ್ಮಣ್ಣನ ಕೈ ಮಾತಾಡಿಬಿಡುತ್ತಿತ್ತು. ಹಂಗಂದ್ರೆ ಏನಿಲ್ಲಾ ಪಟ್ ಪಟ್ ಅಂತ ಎದುರು ನಿಂತ ನಮ್ಮ ಕೆನ್ನೆ. ಬೆನ್ನು ಎನ್ನದೇ ಹೊಡೆತ ಬಿದ್ದು ಬಿಡುತ್ತಿದ್ದವು. ಬಿದ್ದ ಏಟುಗಳನ್ನು ತಡಕಿನೋಡಿಕೊಳ್ಳಲೂ ಕಾಲಾವಕಾಶ ಕೊಡುತ್ತಿರಲಿಲ್ಲ. ಪಟ ಪಟ ಅಂತ ನಿರಂತರ ಲಾತಾಗಳನ್ನು ತಿನ್ನಬೇಕಾಗುತ್ತಿತ್ತು. 


ದೇಹ, ಮನಸ್ಸುಗಳೆರಡನ್ನೂ ಸದಾ ಸ್ವಚ್ಚ ಮತ್ತು ಶುಭ್ರವಾಗಿ ಇಟ್ಟುಕೊಂಡಿದ್ದ ನಮ್ಮ ಅಪ್ಪ ವಿಧಾನ ಸೌಧದಲ್ಲಿ ಎಂದೂ ಕಾಸಿಗ ಕೈ ಚಾಚಲಿಲ್ಲ. ಪುಟ್ಟಣ್ಣನೋರು ಅಂದರೆ ಶಿಸ್ತು , ಶಿಸ್ತು ಎಂದರೆ ಪುಟ್ಟಣ್ಣನೋರು ಎಂದು ಕಚೇರಿಯ ಮತ್ತು ದೈನಂದಿನ ರೈಲು ಪ್ರಯಾಣದ ಜೊತೆಗಾರರು ಹೇಳುತ್ತಿದ್ದರು. 1997ರಲ್ಲಿ ವಯೋನಿವೃತ್ತಿ ಆಗುವವರೆಗೂ ಒಂದೇ ನುಡಿ ಮತ್ತು ನಡೆ, ಅವರಲ್ಲಿ ಯಾವ ವ್ಯತ್ಯಾಸವನ್ನೂ ಕಂಡವರಿಲ್ಲ.


ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ ಒಂದೆರಡು ವರ್ಷ ಬೆಂಗಳೂರಿನಲ್ಲಿ ವಾಸ, ಊರಲ್ಲಿದ್ದ ಜಮೀನಿನ ಗೀಳು ಹತ್ತಿಸಿಕೊಂಡು 1973ರಲ್ಲಿ ತುಮಕೂರಿಗೆ ವಾಸ ಬದಲಿಸಿದರು. ಅಲ್ಲಿಂದ ನಿವೃತ್ತರಾಗುವ ತನಕ ದಿನವೂ ಬೆಳಗಿನ ರೈಲಿಗೆ ತಿಂಡಿ, ಊಟ, ಹಾಲು, ಕುಡಿಯುವ ನೀರಿನ ಸಮೇತ ಬ್ಯಾಗಿಗೆ ಜೋಡಿಸಿಕೊಂಡು ಹೊರಡುತ್ತಿದ್ದರು. ರೈಲು ಮಿಸ್ ಆದರೆ, ಎರಡನೇ ರೈಲಿಗೆ ಹೋಗುತ್ತಿದ್ದರೇ ಹೊರತು ಬಸ್ ಹತ್ತುತ್ತಿರಲಿಲ್ಲ, ಮೆಜೆಸ್ಟಿಕ್‌ನಲ್ಲಿ ರೈಲಿಳಿದು ವಿಧಾನ ಸೌಧದವರೆಗೆ ದಿನಾ ಬೆಳಿಗ್ಗೆ ಮತ್ತು ಸಂಜೆ ರೈಲ್ವೆ ನಿಲ್ದಾಣಕ್ಕೆ ಸೇವಾವಧಿ ಪೂರ್ತಿ ನಡೆದೇ ಹೋಗಿ ಬರುತ್ತಿದ್ದರು ಎಂದರೆ ಅರ್ಥ ಮಾಡಿಕೊಳ್ಳಿ. ಅದು ಅವರ ಆರ್ಥಿಕ ಮಿತವ್ಯಯದ ಶಿಸ್ತು ಅಂತ ಭಾವಿಸುತ್ತೇನೆ.


ಸುಮಾರು 25 ವರ್ಷ ಕೆಲಸದ ದಿನಗಳಲ್ಲಿ ರೈಲು,ವಿಧಾನಸೌಧ, ರೈಲು, ಮನೆ ಹಾಗೂ ವಾರದ ರಜೆ ಮತ್ತು ಇತರ ರಜಾ ದಿನಗಳಲ್ಲಿ ಬೈಸಿಕಲ್ ಪ್ರಯಾಣ- ಊರು- ಹೊಲ ಗದ್ದೆ ಎಂಬುದನ್ನು ನಿರಂತರವಾಗಿ ನಡೆಸಿಕೊಂಡ ಬಂದ ನಮ್ಮಣ್ಣ ನಿವೃತ್ತಿ ಹೊಂದುತ್ತಿದ್ದಂತೆ ವಿಧಾನ ಸೌಧದ ಉದ್ಯೋಗಿ ಪುಟ್ಟಣ್ಣ ಇವರೇನಾ ಎನ್ನುವಷ್ಟು ಬದಲಾಗಿಬಿಟ್ಟರು. ಹೊಲ ಗದ್ದೆಗಳ ಬೇಸಾಯವೂ ಸೇರಿದಂತೆ ಬಿಡುವಿಲ್ಲದೆ ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿರುತ್ತಿದ್ದ ನಮ್ಮಣ್ಣ ನಿವೃತ್ತಿಯ ಬಳಿಕ ಬೆಳಗಿನ ಒಂದೆರಡು ಗಂಟೆ ಧ್ಯಾನ, ಪೂಜೆಯ ನೆಪದಲ್ಲಿ ದೇವರ ಕೋಣೆ ಸೇರಿಬಿಡುತ್ತಿದ್ದರು. 


ಕರಾವಳಿಯಲ್ಲಿ ಸಾಲಿಗ್ರಾಮ ಎಂಬ ಊರಿನಲ್ಲಿ ಅದ್ಯಾರೋ ಡಾಕ್ಟರ್ ಗುರೂಜಿ ಎಂಬಾತ ತಾನೇ ಸ್ವಾಮಿ ವಿವೇಕಾನಂದರ ಪುನರ್ಜನ್ಮ ಎಂದು ಹೇಳಿಕೊಂಡು ಪ್ರಕಟಿಸುತ್ತಿದ್ದ ಮ್ಯಾಗಜೀನ್ ಒಂದನ್ನು ಹಿಡಿದು ಗುರುತು ಪರಿಚಯದವರು ಹಾಗೂ ನೆಂಟರಿಷ್ಟರಿಗೆ ಚಂದಾ ಮಾಡಿಸಿಕೊಟ್ಟು ತರಿಸಿಕೊಟ್ಟು ಓದಿ ಎನ್ನತೊಡಗಿದರು.ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಶಾರದಾದೇವಿಯ ವಿಚಾರಗಳನ್ನು ಪ್ರಚಾರ ಮಾಡುತ್ತ, ಗೆಳೆಯರ ತಂಡವೊಂದನ್ನು ಕೂಡಿಸಿಕೊಂಡು ಆಸಕ್ತರ ಮನೆಗಳಲ್ಲಿ ಸತ್ಸಂಗಗಳೆಂಬ ಭಜನೆಗಳನ್ನು ಏರ್ಪಡಿಸತೊಡಗಿದರು. ಬರುತ್ತಿದ್ದ ನಿವೃತ್ತಿ ವೇತನದ ಅರ್ಧದಷ್ಟು ಮೊತ್ತವನ್ನು ಆಧ್ಯಾತ್ಮಕ್ಕೆ ವಿನಿಯೋಗಿಸತೊಡಗಿದರು.


ಒಮ್ಮೆ ವಿಧಾನ ಸೌಧಕ್ಕೆ ಬಂದಿದ್ದ ನಮ್ಮಣ್ಣನನ್ನು ನ್ಯಾಯವಾದಿ ಗೆಳೆಯ ಅದೇ ತಾನೆ ಖರೀದಿಸಿದ್ದ ಕಾರಿನಲ್ಲಿ ಕೂರಿಸಿದಾಗ, ಆತನ ಬೆನ್ನುದಡವಿ “ ಮಂಜು, ಕಾರು ತಗೊಂಡೇನಪ್ಪಾ” ಎಂದು ಕೇಳಿ ಖುಷಿಪಟ್ಟಿದ್ದರು. ಅವರ ಮುಗ್ದ ಮಗುವಿನ ಖುಷಿ ಕಂಡು ನನಗೆ ಅಚ್ಚರಿಯಾಗಿತ್ತು. ಆಗಿನ್ನೂ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ನಾನು ನಮ್ಮಣ್ಣ ತೀರಿಹೋದ ನಂತರ ಕಾರು ಖರೀದಿಸಿದೆ, ಅಲ್ಲಿಂದ ಇಲ್ಲಿವರೆಗೆ ಮೂರು ಕಾರುಗಳನ್ನು ಖರೀದಿಸಿ, ತಲಾ ಲಕ್ಷ ಕಿಮೀ ಓಡಿಸಿ ಅವನ್ನೆಲ್ಲ ಮಾರಿ, ನಾಲ್ಕನೇ ಕಾರನ್ನು ಖರೀದಿಸಿದ್ದೇನೆ, ಮಹಾತ್ಮ ಗಾಂಧಿ ಜಯಂತಿಯಂದೇ ಹುಟ್ಟಿದ್ದ ಅವರ ಜನ್ಮ ದಿನದಂದೇ ಬೆಂಗಳೂರಿನ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದೆವು, ಆದರೆ ಅದನ್ನೆಲ್ಲ ನೋಡಿ ಖುಷಿ ಪಡಲು ಈಗ ಅವರಿರಲಿಲ್ಲ.


ಬೆಂಗಳೂರಿನಲ್ಲಿ ವರದಿಗಾರನಾಗಿದ್ದಾಗಲೇ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ ಸರಕಾರಿ ನೌಕರಿಗೆ ಆಯ್ಕೆಯಾಗಿದ್ದೆ, ಯಾವ ಇಲಾಖೆ ಬೇಕು, ಆದ್ಯತೆ ಮೇಲೆ ಟಿಕ್ ಮಾಡಿಕೊಡಿ ಎಂದು ಕೆಪಿಎಸ್‌ಸಿ 30 ಇಲಾಖೆಗಳ ಒಂದು ಪಟ್ಟಿಯನ್ನು ಕೊಟ್ಟಿತ್ತು. ಕಳೆದ ತಿಂಗಳಷ್ಟೇ ನಿವೃತ್ತಿ ಹೊಂದಿದ ಹಿರಿಯ ಗೆಳೆಯ ನವೀದ್ ಅಹ್ಮದ್ ಖಾನ್ ನನ್ನ ಆ ಪಟ್ಟಿಯಲ್ಲಿ ಮೊದಲನೇ ಆದ್ಯತೆಯಾಗಿ ತಾನು ಕೆಲಸ ಮಾಡುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆಯನ್ನು ಟಿಕ್ ಮಾಡಿಕೊಟ್ಟಿದ್ದರು. ಮನೆಗೆ ಏತಕ್ಕೋ ಬಂದ ನಮ್ಮಣ್ಣ ಅದನ್ನು ನೋಡಿ, ಛೇ ಛೇ, ಅಲ್ಲೆಲ್ಲ ಅಯ್ಕೊಂಡು ತಿನ್ನೋಕೆ ಹೋಗಬಾರದು, ಗಂಭೀರವಾಗಿ ಸಚಿವಾಲಯದಲ್ಲಿ ಇರು ಅಂತ ವಾಣಿಜ್ಯ ತೆರಿಗೆ ಆದ್ಯತೆಯನ್ನು ಅಳಿಸಿ, ಸಚಿವಾಲಯಕ್ಕೆ ಟಿಕ್ ಮಾಡಿದ್ದರು. ಅತಿ ಹೆಚ್ಚಿನ ಅಂಕ ಗಳಿಸಿದ್ದರಿಂದ ಸಚಿವಾಲಯಕ್ಕೇ ಆದೇ ಬಂತೆನ್ನಿ. ಆದರೆ ಅಂತಾ ಗಂಭೀರವಾದ ವಿಧಾನ ಸೌಧದಲ್ಲೂ ಪೂರ್ತಿ ಕೆಲಸ ಮಾಡದೇ ಹದಿನೇಳು ವರ್ಷ ಸೇವೆಗೇ ಸ್ವಯಂ ನಿವೃತ್ತಿ ಪಡೆದು ಐದು ವರ್ಷದ ಹಿಂದೆ ಅಲ್ಲಿಂದ ಹೊರಬಂದೆ. 


ಬೇಸಿಗೆ ರಜೆಯಲ್ಲಿ ಬೆಂಗಳೂರಿನಲ್ಲಿದ್ದ ನಮ್ಮ ತಾತ, ಅಜ್ಜಿ ಮತ್ತು ಸೋದರ ಮಾವಂದಿರ ಮನೆಗಳಲ್ಲಿ ಉಳಿದುಕೊಂಡು, ಬೆಳಗಿನಿಂದ ಊಟದ ಹೊತ್ತಿನವರೆಗೆ ಕಬ್ಬನ್ ಪಾರ್ಕಿನಲ್ಲಿರುವ ಶೇಷಾದ್ರಿ ಸೆಂಟ್ರಲ್ ಲೈಬ್ರರಿಯಲ್ಲಿ ಓದಿ, ನಂತರ ಊಟದ ನೆಪದಲ್ಲಿ ವಿಧಾನಸೌಧಕ್ಕೆ ನುಗ್ಗುತ್ತಿದ್ದ ನನ್ನನ್ನು ಕೂರಿಸಿಕೊಂಡು ಡಿಕ್ಟೇಶನ್ ಕೊಟ್ಟು ಕಡತಗಳಲ್ಲಿ ಬರೆಸುವ ಮೂಲಕ ಹೈಸ್ಕೂಲಿನಲ್ಲಿರುವಾಗಲೇ ಸಚಿವಾಲಯದ ಕೆಲಸ ಕಲಿಸಿದ್ದ ನಮ್ಮಣ್ಣ ಇದ್ದಿದ್ದರೆ ಅಷ್ಟು ಸುಲಭವಾಗಿ ನನ್ನನ್ನು ಸರ‍್ಕಾರಿ ನೌಕರಿ ತೊರೆದು ಬರಲು ಬಿಡುತ್ತಿರಲಿಲ್ಲ ಅಂತ ಈಗ ಅನಿಸುತ್ತಿದೆ. 


ನಿವೃತ್ತಿ ಹೊಂದಿದ ಹತ್ತು ಹನ್ನೊಂದು ವರ್ಷ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ನಮ್ಮಣ್ಣ 2009ರ ಮೇ ಎರಡನೇ ವಾರದಲ್ಲಿ ನಮ್ಮಮ್ಮ ಹಾಗೂ ಗೆಳೆಯರೊಂದಿಗೆ ಉತ್ತರ ಭಾರತದ ಕಡೆ ಪ್ರವಾಸ ಹೊರಟರು. ಯಶವಂತಪುರದಲ್ಲಿ ರೈಲು ಹತ್ತಿಸಿದ್ದೇ ನನ್ನ ಅವರ ಕೊನೇ ಭೇಟಿ. ಮತ್ತೆ ಜೀವದೊಂದಿಗೆ ಅವರನ್ನು ನೋಡಲಾಗಲೇ ಇಲ್ಲ.


ವಾರಣಾಸಿ, ದಿಲ್ಲಿ, ಜೈಪುರ ಇತ್ಯಾದಿ ನೋಡಿಕೊಂಡು ಹರದ್ವಾರ, ಹೃಷಿಕೇಶ ದಾಟುವ ಹೊತ್ತಿಗೆ ಅಸ್ವಸ್ಥಗೊಂಡಿದ್ದಾರೆ. ಅಲ್ಲಿಂದ ಕೇದಾರನಾಥಕ್ಕೆ ಹೋಗುವ ಹಾದಿಯಲ್ಲಿ ಇಳಿ ರಕ್ತದೊತ್ತಡದ ಕಾರಣದಿಂದಾಗಿ ಪೌರಿ ಗಡ್ವಾಲ್ ಜಿಲ್ಲೆಯ ಶ್ರೀನಗರ ನಗರದ ದೊಡ್ಡ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಅಲ್ಲಿ ಅವರಿಗೆ ಮೈಯಲ್ಲಿ ಚೆನ್ನಾಗಿಲ್ಲ ಎಂಬ ಸುದ್ದಿ ನಮಗೆ ತಲುಪಿ, ನಾನು ಬೆಂಗಳೂರಿನಿಂದ ಹೋಗುವ ಹೊತ್ತಿಗೆ ಅವರು ಇದೇ ಜೂನ್ 24ರಂದು ತಮ್ಮ ಕಾಯವನ್ನು ತೊರೆದು ಬಿಟ್ಟಿದ್ದರು. ಅಲ್ಲೇ ಹರದ್ವಾರದಲ್ಲಿ ಗಂಗೆಯ ದಡದಲ್ಲಿ ಅಂತ್ಯ ಸಂಸ್ಕಾರ ಮುಗಿಸಿ ಬರಿಗೈಯಲ್ಲಿ ಹಿಂದಿರುಗಿ ಬಂದೆವು.


“ತನುವಿನೊಳ್ ಅನುದಿನವಿದ್ದೂ ಎನ್ನ ಮನಕೊಂದ ಮಾತ ಹೇಳದೆ ಹೋದೆಯಾ ಹಂಸೇ” ಎನ್ನುವ ತತ್ವ ಪದದ ನುಡಿಯಂತೆ ನಮ್ಮ ದೇಹದೊಂದಿಗೇ ಹುಟ್ಟಿನಿಂದಲೂ ಇರುವ ಪ್ರಾಣ ಪಕ್ಷಿಯ ಕುರಿತ ಮಾತುಗಳಿವು.


ಅಪ್ಪನೊಂದಿಗೆ ಬೆಳೆದ ಎಲ್ಲ ಮಕ್ಕಳಿಗೂ ಮಧ್ಯಮ ವಯಸ್ಕರಾಗುವ ಹೊತ್ತಿಗೆ ಇಂಥದ್ದೊಂದು ಅನುಭವ ಆಗಿರಲೇಬೇಕು ಅಂತಿಲ್ಲ, ಮಕ್ಕಳನ್ನು ಸಾಕಿ ಬೆಳೆಸಿ, ಮೊಮ್ಮಕ್ಕಳನ್ನು ಸಲಹುವ ದೀರ್ಘಾಯುಷಿ ಅಪ್ಪಂದಿರೂ ಇದ್ದಾರೆ. ನಾನು ನಾಲ್ಕನೇ ಕ್ಲಾಸಿನಲ್ಲಿದ್ದಾಗ ತೀವ್ರ ಜ್ವರದಲ್ಲಿ ನರಳುವಾಗ ಸೀದಾ ಎತ್ತಿ ಹೆಗಲಿಗೆ ಹಾಕಿಕೊಂಡು ಸೋಮೇಶ್ವರ ಪುರದ ಪ್ರಭಾಕರ ಕ್ಲಿನಿಕ್‌ಗೆ ನಡೆದು ಹೋಗುತ್ತಿದ್ದ ನಮ್ಮಣ್ಣ, ನಾನು ಪಿಯು ತರಗತಿಯಲ್ಲಿ ಎನ್‌ಸಿಸಿ ಸಾರ್ಜೆಂಟ್ ಆಗಿ ಬೆಳಗಾವಿಯ ಮಿಲಿಟರಿ ರೆಜಿಮೆಂಟಿನಲ್ಲಿ ಒಂದು ತಿಂಗಳ ಆರ್ಮಿ ಅಟ್ಯಾಚ್‌ಮೆಂಟ್ ಕ್ಯಾಂಪ್ ಮುಗಿಸಿ ಹಿಂದಿರುಗಿದಾಗ ಬೆಳಗಿನ ಜಾವ ರೈಲು ನಿಲ್ದಾಣದಲ್ಲಿ ಬೈಸಿಕಲ್ ತಂದು ಕಾದು ನಿಂತು, ರೈಲಿಳಿದ ನನ್ನನ್ನು ಎದೆಗವಚಿಕೊಂಡು ಬಿಕ್ಕಿದ್ದ ಅಣ್ಣ ಎಲ್ಲೂ ಕಣ್ಮರೆಯಾಗಿಲ್ಲ, ನನ್ನೊಳಗೆ ಉಳಿದು ಬೆಳೆಯುತ್ತಿದ್ದಾರೆ ಅಂತ ಅನ್ನಿಸುತ್ತದೆ.