ಕಂಬಾಲಪಲ್ಲಿ ದುರಂತ- ಒಂದು ಮರು ಭೇಟಿ ದಲಿತರ ಪಾಲಿಗೆ ನ್ಯಾಯವೆಂಬದು ಮರೀಚಿಕೆ ಎನಿಸಿದ ಪ್ರಕರಣ

kambalapalli

ಕಂಬಾಲಪಲ್ಲಿ ದುರಂತ- ಒಂದು ಮರು ಭೇಟಿ  ದಲಿತರ ಪಾಲಿಗೆ ನ್ಯಾಯವೆಂಬದು ಮರೀಚಿಕೆ ಎನಿಸಿದ ಪ್ರಕರಣ

 ವರ್ತಮಾನ

ಶಿವ ಪ್ರಸಾದ್ ಪಟ್ಟಣಗೆರೆ

 

      ಒಂದು ಸಣ್ಣ ಕೂದಲಿನ ಜಾಡು ಹಿಡಿದು ಅಪರಾಧಿಗಳನ್ನು ಪತ್ತೆ ಮಾಡಬಹುದಾದ ತಂತ್ರಜ್ಞಾನ ಹೊಂದಿರುವ ವ್ಯವಸ್ಥೆಯಲ್ಲಿ ಏಳು ಜನ ಸುಟ್ಟು ಬೂದಿಯಾಗಿ ಎರಡು ದಶಕ ಆದರೂ ದಲಿತರಿಗೆ ನ್ಯಾಯ ಸಿಗುತ್ತಿಲ್ಲ ಏಕೆ ?

     ದಿನಾಂಕ ಮಾರ್ಚ್ 11, 2000. ಭಾರತದ ಇತಿಹಾಸದಲ್ಲಿ ಎಂದೆಂದಿಗೂ ಮರೆಯಲಾಗದ ಮತ್ತೊಂದು ಕರಾಳ ದಿನವಾಗಿದೆ. ಆ ದಿನ ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಂಬಾಲಪಲ್ಲಿಯಲ್ಲಿ ಏಳು ದಲಿತರನ್ನು ರೆಡ್ಡಿ ಭೂಮಾಲೀಕರು ಸುಟ್ಟು ಕೊಂದಿದ್ದರು. ಇಂದಿಗೆ 23 ವರ್ಷ ಉರುಳಿ ಹೋದವು. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ದಲಿತರ ಜನಸಂಖ್ಯೆ ಹೆಚ್ಚಿದೆ. ಜೊತೆಗೆ ಅಲ್ಲಿನ ಮೇಲ್ಜಾತಿ ಭೂಮಾಲಕರ ಫ್ಯೂಡಲ್ ಮನಸ್ಥಿತಿ ಆಂಧ್ರದ ರಾಯಲಸೀಮೆಯ ಎಲ್ಲಾ ಲಕ್ಷಣಗಳನ್ನು ಒಳಗೊಂಡಿದೆ.

      1974ನೇ ಇಸವಿಯಲ್ಲಿ ಮುಳಬಾಗಿಲ ಬಳಿ ದಲಿತ ಮುನಿವೆಂಕಟಪ್ಪನನ್ನು ಮೇಲ್ಜಾತಿಯ ಕೆಲವು ರೆಡ್ಡಿ ಭೂಮಾಲಕರು ಕೊಲೆ ಮಾಡಿದ್ದರು. ಇದಕ್ಕೆ ಕಾರಣ ಆ ಯುವಕ ಪಿಯುಸಿಯಲ್ಲಿ ಉತ್ತೀರ್ಣನಾಗಿದ್ದು! 1975ರಲ್ಲಿ ನಲ್ಲಗುಟ್ಟಹಳ್ಳಿಯ ದಲಿತ ಹೆಂಗಸನ್ನು ಅವಳ ಗಂಡನೆದುರೇ ಒಬ್ಬ ಬ್ರಾಹ್ಮಣನೂ ಸೇರಿದಂತೆ ಐವರು ಒಕ್ಕಲಿಗರು ಅತ್ಯಾಚಾರ ಮಾಡಿದ್ದರು. ಈ ಎರಡೂ ಅಮಾನವೀಯ ಘಟನೆಗಳ ವಿರುದ್ಧ ದಲಿತ ಸಂಘರ್ಷ ಸಮಿತಿ ಸಿಡಿದೆದ್ದು ನಿಂತಿತು. ಅಲ್ಲಿಯವರೆಗೆ ಒಕ್ಕಲಿಗರಂತಹ ಮೇಲ್ಜಾತಿಗಳ ಹೊಲಗಳಲ್ಲಿ ಜೀತ ಮಾಡುತ್ತಿದ್ದ ದಲಿತರ ಮಕ್ಕಳೇ ಮೇಲ್ಜಾತಿ ಭೂಮಾಲೀಕರ ವಿರುದ್ಧ ಹೋರಾಟ ಕಟ್ಟಿದರು. ಮೊತ್ತ ಮೊದಲ ಬಾರಿಗೆ ಮೇಲ್ಜಾತಿಗಳ ವಿರುದ್ಧ ದಲಿತರು ಕೇಸು ದಾಖಲಿಸಿದರು.

    ನ್ಯಾಯಾಲಯದಲ್ಲಿ ದಲಿತರಿಗೆ ಸೋಲುಂಟಾಯಿತಾದರೂ ಫ್ಯೂಡಲ್ ಮನಸ್ಥಿತಿಗೆ ಒಂದು ರೀತಿಯ ಭಯ ಹುಟ್ಟಿಸುವಲ್ಲಿ ದಲಿತ ಚಳವಳಿ ಯಶಸ್ವಿಯಾಯಿತು. ದಲಿತ ಚಳವಳಿ ಆರಂಭಿಸಿದ ಭೂ ಹೋರಾಟಗಳು ಸಹ ಭೂಮಾಲಕರ ಕಣ್ಣು ಕುಕ್ಕಿದವು. ಶೇಷಗಿರಿಯಪ್ಪನ ಕೊಲೆ-ಅನುಸೂಯಮ್ಮನ ಅತ್ಯಾಚಾರ ವಿರುದ್ಧದ ಹೋರಾಟ, ನಾಗಸಂದ್ರ ಭೂಹೋರಾಟ ದಲಿತ ಸಂಘರ್ಷ ಸಮಿತಿಯ ಪ್ರಾಬಲ್ಯವನ್ನು ಇಡೀ ನಾಡಿಗೆ ಸಾರಿದವು.

    ಹೀಗಿರುವಾಗ 1997ರಲ್ಲಿ ಬಿಲ್ಲಾಂಡ್ಲಹಳ್ಳಿಯಲ್ಲಿ ದಲಿತ ಸಂಘರ್ಷ ಸಮಿತಿಯ ಘಟಕ ಸ್ಥಾಪನೆ ಹಾಗೂ ಅಂಬೇಡ್ಕರ್ ಜಯಂತಿ ಹಮ್ಮಿಕೊಳ್ಳಲು ಮುಂದಾದಾಗ ಅಲ್ಲಿಯ ಒಕ್ಕಲಿಗ ಯುವ ವೇದಿಕೆ ವಿರೋಧಿಸಿತು. ಪೊಲೀಸರು ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂದು ಕಾರ್ಯಕ್ರಮ ರದ್ದಾಗಿಸಿದರು. ಆದರೆ ಅಂದು ಅಲ್ಲಿ ರಕ್ಷಣೆ ಕೊಡಲು ಬಂದಿದ್ದ ನಾಲ್ವರು ಪೊಲೀಸರನ್ನೇ ಮೇಲ್ಜಾತಿ ಯುವಕರು ಕೊಂದು ಹಾಕಿದರು. ಈ ಭೀಕರ ಕೊಲೆಗೆ ಯಾರಿಗೂ ಶಿಕ್ಷೆಯಾಗಲಿಲ್ಲ. ಪೊಲೀಸರನ್ನೇ ಕೊಂದು ಜಯಿಸಿಕೊಂಡವರೆಂದು ಬೀಗಿದ ಮೇಲ್ಜಾತಿ ಜನರಲ್ಲಿ ಅಹಂ ಮೂಡಿತು. ಕಾನೂನು ಸಹ ತಮ್ಮನ್ನೇನು ಮಾಡದು ಎಂದರಿತರು. ನಂತರ ಜಾತಿಕಟ್ಟಳೆಗಳನ್ನು ಮೀರಿ ನಿಲ್ಲಲು ಪ್ರಯತ್ನಿಸುತ್ತಿದ್ದ ದಲಿತ ಯುವಕರ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರು. ಈ ಸೇಡಿಗೆ ಬಲಿಯಾದದ್ದೇ ಕಂಬಾಲಪಲ್ಲಿಯ ದಲಿತ ಕುಟುಂಬ.

      ಕಂಬಾಲಪಲ್ಲಿಯಲ್ಲಿ ನೆಲೆಸಿದ್ದ ವೆಂಕಟರಾಯಪ್ಪನ ಕುಟುಂಬದ ಮೇಲೆ ಮೇಲ್ಜಾತಿಗಳ ಕಣ್ಣು ಬಿದ್ದಿತ್ತು. ವೆಂಕಟರಾಯಪ್ಪನ ಇಬ್ಬರು ಗಂಡು ಮಕ್ಕಳಾದ ವೆಂಕಟರಮಣಪ್ಪ, ಅಂಜಿನಪ್ಪಮತ್ತು ಶ್ರೀರಾಮಪ್ಪಮೂವರೂ ವಿದ್ಯಾವಂತರು. ಅಂಜಿನಪ್ಪಶಿಕ್ಷಕರು. ಶ್ರೀರಾಮಪ್ಪಪದವಿ ಓದುತ್ತಿದ್ದನು. 1997ರಲ್ಲಿ ಒಕ್ಕಲಿಗ ಹಾಗೂ ದಲಿತರ ಕುರಿಗಳು ಕಳ್ಳತನವಾಗಿದ್ದವು. ಈ ಕಳ್ಳತನವನ್ನು ವೆಂಕಟರಮಣಪ್ಪಸೇರಿದಂತೆ ಮೂವರು ದಲಿತರ ಮೇಲೆ ಆರೋಪಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯ ನೆರವಿನಿಂದ ಕುರಿಗಳನ್ನು ಪತ್ತೆ ಹಚ್ಚುವಲ್ಲಿ ವೆಂಕಟರಮಣಪ್ಪ ಯಶಸ್ವಿಯಾದ. ನಿಜವಾಗಿ ಆ ಕುರಿಗಳನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದವರು ಮದ್ದಿರೆಡ್ಡಿ ಮತ್ತು ಇತರ ಒಕ್ಕಲಿಗರೇ ಆಗಿದ್ದರು. ಈ ಘಟನೆಯಿಂದ ಕಂಬಾಲಪಲ್ಲಿಯ ಒಕ್ಕಲಿಗರಿಗೆ ಅವಮಾನವುಂಟಾಗಿ ದಲಿತರ ಮೇಲೆ ಸೇಡು ಬೆಳೆಯಿತು. ಈ ಮಧ್ಯೆ ಒಂದು ದಿನ ವೆಂಕಟರಮಣಪ್ಪ ಕೊಲೆಯಾಗಿ ಹೋದರು. ಈ ಕೊಲೆ ಯಾರು ಮಾಡಿದ್ದರೆಂಬುದು ಎಲ್ಲರಿಗೂ ತಿಳಿದಿತ್ತಾದರೂ ನ್ಯಾಯ ಸಿಗಲಿಲ್ಲ. ಎಲ್ಲಾ ಆರೋಪಿಗಳೂ ಸಾಕ್ಷಿ ಇಲ್ಲದೆ ಖುಲಾಸೆಯಾಗಿ ಹೋದರು.

       ಮಾರ್ಚ್ 10, 2000ದಂದು ವೆಂಕಟರೆಡ್ಡಿ ಮತ್ತು ದಲಿತ ಶಂಕರಪ್ಪನ ನಡುವೆ ಟಿವಿಎಸ್ ಮೋಟಾರು ಸೈಕಲ್‌ಗೆ ದಾರಿ ಬಿಡುವ ವಿಚಾರದಲ್ಲಿ ಜಗಳವಾಯಿತು. ಶಂಕರಪ್ಪನಿಗೆ ಒಕ್ಕಲಿಗರ ಗುಂಪೊಂದು ಥಳಿಸಿತು. ಪೊಲೀಸರಿಗೆ ಫೋನ್ ಮಾಡಲಾಗಿ ಮೀಸಲು ಪಡೆ ಕಂಬಾಲಪಲ್ಲಿಗೆ ಬಂದಿತ್ತು. ಮಾರ್ಚ್ 11, 2000ದಂದು ಇದರ ವಿರುದ್ಧ ದೂರು ಸಲ್ಲಿಸಲು ಚಿಂತಾಮಣಿಗೆ ಶ್ರೀರಾಮಪ್ಪನ ಸಮೇತ ಕೆಲವು ದಲಿತರು ತೆರಳಿದ್ದರು. ಹಾಗೆಯೇ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದು ಅಂದು ಸಂಜೆ ಕಂಬಾಲಪಲ್ಲಿಗೆ ಹಿಂದಿರುಗಿದಾಗ ದಲಿತರ ಬರುವಿಗಾಗಿಯೇ ಕಾಯುತ್ತಿದ್ದ ಒಕ್ಕಲಿಗರ ತಂಡವೊಂದು ಅವರ ಮೇಲೆ ಮುಗಿಬಿದ್ದಿದೆ. ಈ ಜಗಳದಲ್ಲಿ ಕೃಷ್ಣಾರೆಡ್ಡಿ ಎಂಬ ನೀರುಗಂಟಿ ನಿಧನರಾಗುತ್ತಾರೆ. ಈ ಕೊಲೆಯನ್ನು ದಲಿತರ ತಲೆಗೆ ಕಟ್ಟಲಾಯಿತು. ನಂತರ ಗುಂಪು ಕಟ್ಟಿಕೊಂಡು ದಲಿತರ ಕೇರಿಗೆ ಹೋದ ಒಕ್ಕಲಿಗರು ವೆಂಕಟರಾಯಪ್ಪನ ಮನೆಗೆ ಹೊರಗಡೆಯಿಂದ ಬೀಗ ಹಾಕಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮವಾಗಿ ಮನೆಯೊಳಗಿದ್ದ ಶ್ರೀರಾಮಪ್ಪ, ಅಂಜಿನಪ್ಪ, ರಾಮಕ್ಕ, ಸುಬ್ಬಕ್ಕ, ಪಾಪಮ್ಮ, ನರಸಿಂಹಯ್ಯ, ಚಿಕ್ಕಪಾಪಣ್ಣ ಎಂಬ ಏಳು ಜೀವಗಳು ಸುಟ್ಟು ಕರಕಲಾಗಿ ಹೋದವು. ರಾತ್ರೋ ರಾತ್ರಿ ಅಲ್ಲಿನ ದಲಿತರು ಜೀವ ಉಳಿಸಿಕೊಳ್ಳಲು ಚಲ್ಲಾಪಿಲ್ಲಿಯಾಗಿ ಎತ್ತೆತ್ತಲೋ ಓಡಿ ಹೋಗಿದ್ದರು. ಇವರ ಪೈಕಿ ತನ್ನ ಕುಟುಂಬದ ಐವರನ್ನು ಕಳೆದುಕೊಂಡ ವೆಂಕಟರಾಯಪ್ಪನೂ ಇದ್ದನು. ಆಶ್ಚರ್ಯಪಡುವ ವಿಚಾರವೆಂದರೆ ಅಲ್ಲಿರಬೇಕಿದ್ದ ಪೊಲೀಸ್ ಮೀಸಲು ಪಡೆಯನ್ನು ಆ ಸಂಜೆಯೇ ಪೊಲೀಸ್ ಅಧಿಕಾರಿಗಳು ವಾಪಸ್ ಕರೆಸಿಕೊಂಡಿದ್ದು. ಅಂದು ಪೊಲೀಸ್ ಮೀಸಲು ಪಡೆ ಅಲ್ಲಿದ್ದಿದ್ದರೆ ಯಾವುದೇ ಕಾರಣಕ್ಕೂ ಕಂಬಾಲಪಲ್ಲಿಯಲ್ಲಿ ದಲಿತರ ಮಾರಣಹೋಮ ನಡೆಯುತ್ತಿರಲಿಲ್ಲ.

       ಈ ಭೀಕರ ನರಮೇಧದ ವಿರುದ್ಧ ಇಡೀ ದೇಶವೇ ಮರುಗಿತು. ಪ್ರಜ್ಞಾವಂತ ಒಕ್ಕಲಿಗರೂ ಸೇರಿದಂತೆ ಮನುಷ್ಯತ್ವವುಳ್ಳವರೆಲ್ಲ ಸ್ಪಂದಿಸಿದರು. ಆದರೆ ಸರಕಾರ, ಪೊಲೀಸ್ ವ್ಯವಸ್ಥೆ ಹಾಗೂ ನ್ಯಾಯಾಂಗ ತನ್ನ ಎಂದಿನ ಮೇಲ್ಜಾತಿ ಒಲವನ್ನು ಬಹಿರಂಗವಾಗಿಯೇ ತೋರ್ಪಡಿಸಿತು. ವಿಪರ್ಯಾಸವೆಂದರೆ ಈ ಘಟನೆ ನಡೆದಾಗ ಗೃಹಮಂತ್ರಿಯಾಗಿದ್ದವರು ಮಲ್ಲಿಕಾರ್ಜುನ ಖರ್ಗೆಯವರು. ಡಿವೈಎಸ್‌ಪಿ, ಸರ್ಕಲ್ ಇನ್‌ಸ್ಪೆಕ್ಟರ್ ಹಾಗೂ ಸಬ್‌ಇನ್‌ಸ್ಪೆಕ್ಟರ್‌ಗಳೂ ದಲಿತರೇ! ಆದರೆ ಇವರ ಮೇಲೆ ಆದೇಶ ನೀಡುವವರು ಬಹುತೇಕ ಒಕ್ಕಲಿಗ ರಾಜಕಾರಣಿಗಳಾಗಿದ್ದರು. ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಚಿಂತಾಮಣಿ ಶಾಸಕ, ಜಿಲ್ಲೆಯಲ್ಲಿನ ಏಳು ಶಾಸಕರೂ ಒಕ್ಕಲಿಗರೇ ಆಗಿದ್ದರು. ಕಂಬಾಲಪಲ್ಲಿ ನರಮೇಧದ ನಂತರ ಒಂದೇ ವಾರದಲ್ಲಿ ಒಕ್ಕಲಿಗ ನಾಯಕರೆಲ್ಲ ಚಿಂತಾಮಣಿಯನ್ನು ಬಂದ್ ಮಾಡಿದರು. ಅದಕ್ಕವರು ನೀಡಿದ ಕಾರಣ ದಲಿತರು ನೀರಗಂಟಿ ಕೃಷ್ಣಾರೆಡ್ಡಿಯನ್ನು ಕೊಲೆ ಮಾಡಿದ್ದರೆಂಬುದಾಗಿತ್ತು. ಏಳು ಜನ ದಲಿತರನ್ನು ಕೊಂದದ್ದಕ್ಕೆ ಅವರಲ್ಲಿ ಕಿಂಚಿತ್ತು ಪಶ್ಚಾತ್ತಾಪವೂ ಇರಲಿಲ್ಲ. ಕೇವಲ ಜಾತಿಗೋಸ್ಕರ ಅನ್ಯಾಯದ ಪರ ನಿಂತಿದ್ದರು.

       ಪೊಲೀಸ್ ಕೇಸ್ ದಾಖಲಾಯಿತು. ಸೋನಿಯಾಗಾಂಧಿ, ರಾಮ್ ವಿಲಾಸ್ ಪಾಸ್ವಾನ್, ಶರದ್ ಯಾದವ್ ಮುಂತಾದ ರಾಷ್ಟ್ರೀಯ ನಾಯಕರೆಲ್ಲರೂ ಬಂದು ಹೋದರು. ಆದರೆ ಅವರೆಲ್ಲರೂ ದಲಿತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾದರು. ಜೊತೆಗೆ ಅಂದು ವಿರೋಧ ಪಕ್ಷದಲ್ಲಿದ್ದ ಜೆಡಿಎಸ್, ಬಿಜೆಪಿ ಸಹ ಗಟ್ಟಿಯಾಗಿ ವಿರೋಧಿಸಲಿಲ್ಲ. ದಲಿತರ ಪರವಾಗಿ ನಿಲ್ಲಲಿಲ್ಲ. ಹೈಕೋರ್ಟ್ ವಕೀಲರಾದ ಬಿ.ಟಿ. ವೆಂಕಟೇಶ್‌ರವರು ಹೇಳುವುದನ್ನು ಕೇಳಿದರೆ ಎಂತಹವರಿಗೂ ಎದೆ ಝಲ್ಲೆನ್ನುತ್ತದೆ. ಈ ವ್ಯವಸ್ಥೆಯ ಮೇಲೆ ಅಸಹ್ಯ ಉಂಟಾಗುತ್ತದೆ. ಅವರು ಗುರುತಿಸುವಂತೆ ಕಂಬಾಲಪಲ್ಲಿಯ ಕೇಸಿನ ತನಿಖೆಯಾಗಲೀ, ವಿಚಾರಣೆಯಾಗಲೀ ಆ ಕೇಸನ್ನು ನ್ಯಾಯಾಂಗ ವ್ಯವಸ್ಥೆ ನಡೆಸಿಕೊಂಡಿರುವುದಾಗಲೀ ತೀರ ಬೇಜವಾಬ್ದಾರಿತನದ್ದು. ಒಂದಷ್ಟು ಉದಾಹರಣೆ ಹೇಳುವುದಾದರೆ, ಕಂಬಾಲಪಲ್ಲಿ ಪ್ರಕರಣದ ವಿಚಾರಣೆಯಲ್ಲಿ ಘಟನೆ ನಡೆದ ದಿನ ಹಾಜರಿದ್ದ ಪೊಲೀಸ್ ಪೇದೆಗಳನ್ನು ವಿಚಾರಣೆ ಮಾಡಿಲ್ಲ. ಆ ಕೇಸಿನ ತನಿಖಾಧಿಕಾರಿಯ ವಿಚಾರಣೆ ಮಾಡಿಲ್ಲ. ವೈದ್ಯಾಧಿಕಾರಿಗಳನ್ನು ವಿಚಾರಿಸಲಾಗಿಲ್ಲ. ಸಾಕ್ಷಿಗಳು ಪೊಲೀಸರ ಸಮಕ್ಷಮದಲ್ಲಿ ನೀಡಿರುವ ಹೇಳಿಕೆಗೆ ತದ್ವಿರುದ್ಧವಾಗಿ ಕೋರ್ಟಿನಲ್ಲಿ ಹೇಳಿಕೆ ನೀಡಿದ್ದರ ಕಾರಣವನ್ನು ಕೇಳಿಲ್ಲ. ಅದಲ್ಲದೆ ಕೋರ್ಟ್ ದಾಖಲೆಗಳಲ್ಲಿ ಎಲ್ಲಾ ಸಾಕ್ಷಿಗಳ ಹೇಳಿಕೆಯೂ ಒಂದೇ ಆಗಿದೆ. ಅದೆಷ್ಟರ ಮಟ್ಟಿಗೆಂದರೆ ಒಂದು ಅಕ್ಷರವೂ ವ್ಯತ್ಯಾಸವಾಗದಂತೆ ಹೇಳಿಕೆ ನೀಡಿದ್ದಾರೆ. ಅಂದರೆ ಟೈಪ್ ಮಾಡುವವರು ಕಟ್ ಅಂಡ್ ಪೇಸ್ಟ್ ಮಾಡಿದ್ದಾರೆ.

        ಈ ಪ್ರಕರಣದ ಮುಖ್ಯ ಸಾಕ್ಷಿ ವೆಂಕಟರಾಯಪ್ಪನ ಭಾಷೆ ತೆಲುಗು ಆಗಿದ್ದು ಆತನ ಸಹಾಯಕ್ಕೆ ನೇಮಿಸಲಾಗಿದ್ದ ಭಾಷಾಂತರಕಾರನ ನೇಮಕ ನಿಯಮಗಳ ಪ್ರಕಾರ ಆಗಿಲ್ಲ. ತಿಂಗಳ ನಂತರ ನಡೆದ ವಿಚಾರಣೆಯಲ್ಲಿ ವೆಂಕಟರಾಯಪ್ಪನಿಗೆ ಭಾಷಾಂತರಕಾರನನ್ನೇ ನೇಮಿಸಿಲ್ಲ. ಅಂದರೆ ತಿಂಗಳಲ್ಲಿ ಕನ್ನಡ ಕಲಿತು ಬಿಟ್ಟಿದ್ದಾನೆ! ತನಿಖೆ ಮಾಡುವಾಗ ಯಾವುದೇ ಮಾರಕಾಸ್ತ್ರ, ವಸ್ತುಗಳ ಮಹಜರು ಮಾಡಿಲ್ಲ! ಆದರೆ ಕಂಬಾಲಪಲ್ಲಿಯ ದಲಿತರ ಮೇಲೆ ಆರೋಪಿಸಿ ಹೂಡಿರುವ ಕೃಷ್ಣಾರೆಡ್ಡಿಯ ಕೇಸಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಯನ್ನು ವಿಚಾರಿಸಲಾಗಿದೆ. ಹೀಗೆ ತನಿಖೆಯಲ್ಲಿ ಮತ್ತು ವಿಚಾರಣೆಯಲ್ಲಿ ಹಲವಾರು ಲೋಪದೋಷಗಳನ್ನು ಈ ಕೇಸ್ ಹೊಂದಿತ್ತು. ಮೇಲ್ನೋಟಕ್ಕೆ ಇವೆಲ್ಲವೂ ಬೇಕಂತಲೇ ಮಾಡಿದ್ದವಾಗಿದ್ದವು.

      2006ರವರೆಗೆ ವಿಚಾರಣೆ ನಡೆಸಿದ ಕೋಲಾರ ಸೆಷನ್ ಕೋರ್ಟ್ ಸಾಕ್ಷಿಗಳ ಕೊರತೆಯಿಂದಾಗಿ ಎಲ್ಲಾ 46 ಆರೋಪಿಗಳನ್ನೂ ಖುಲಾಸೆಗೊಳಿಸಿತು. ವಿಚಾರಣೆಯ ವೇಳೆ ತಮ್ಮ ಸ್ವಂತ ಕುಟುಂಬದ ವ್ಯಕ್ತಿಗಳನ್ನು ಕಳೆದುಕೊಂಡಿದ್ದವರೇ ತದ್ವಿರುದ್ಧ ಹೇಳಿಕೆಯನ್ನು ನೀಡಿದರು. ಸಾಕ್ಷಿಗಳನ್ನು ಬೆದರಿಸಿ, ಅವರಿಗೆ ಹಣ ನೀಡಿ ಸುಳ್ಳು ಸಾಕ್ಷಿ ಹೇಳಿಸುವಲ್ಲಿ ಮೇಲ್ಜಾತಿ ಫ್ಯೂಡಲ್ ಮನಸ್ಸುಗಳು ಯಶಸ್ವಿಯಾದವು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೂ ಇದೇ ಬೇಕಿತ್ತು. 2012ರಲ್ಲಿ ಹೈಕೋರ್ಟ್‌ನಲ್ಲಿಯೂ ಆರೋಪಿಗಳೆಲ್ಲ ಸಾಕ್ಷಿಗಳ ಕೊರತೆಯಿಂದ ಖುಲಾಸೆಗೊಂಡರು. 2013ರಲ್ಲಿ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಕೆಲವೇ ದಿನಗಳಲ್ಲಿ ತೆಲಂಗಾಣದ ಸಮರ್ಥ ವಕೀಲರಾದ ಎಂ.ಎನ್.ರಾವ್ ಅವರನ್ನು ದಲಿತರ ಪರವಾಗಿ ವಾದಿಸಲು ನೇಮಿಸಿರುವುದಾಗಿ ಸುದ್ದಿಗಳು ಬಂದವು. ಇಲ್ಲಿಗೆ 9 ವರ್ಷಗಳಾಯಿತು. ಆದರೂ ಸುಪ್ರೀಂ ಕೋರ್ಟ್ ಕಂಬಾಲಪಲ್ಲಿಯ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿಲ್ಲ. ಜಸ್ಸಿಕಾ ಲಾಲ್ ಹಾಗೂ ಬೆಸ್ಟ್ ಬೇಕರಿ ಪ್ರಕರಣಗಳಂತೆ ಮರು ವಿಚಾರಣೆ ಮಾಡಬಾಹುದಾ? ಗೊತ್ತಿಲ್ಲ. 2019ರಲ್ಲಿ ವೆಂಕಟರಾಯಪ್ಪಸಹ ತೀರಿಕೊಂಡರು. ಬದುಕಿದ್ದಷ್ಟು ದಿನ ನ್ಯಾಯಕ್ಕಾಗಿ ಹಪಹಪಿಸುತ್ತಿದ್ದ ಜೀವ ಅದೊಂದೇ ಎನಿಸುತ್ತದೆ. ದುರಂತವೆಂದರೆ ಬದನವಾಳು ಘಟನೆ ಬಿಟ್ಟರೆ ಕರ್ನಾಟಕದ ಇನ್ಯಾವ ದಲಿತರ ಮಾರಣಹೋಮಕ್ಕೂ ನ್ಯಾಯ ದೊರಕಿಲ್ಲ. ಇದು ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಕುವೆಂಪು ನಾಡಿನ ಸ್ಥಿತಿ. ಅಂದು ಕಂಬಾಲಪಲ್ಲಿಯ ಹಿಂಸಾಕಾಂಡಕ್ಕೆ ನ್ಯಾಯ ದೊರಕಿದ್ದರೆ ನಂತರ ನಾಗಲಾಪಲ್ಲಿ, ಖೈರ್ಲಾಂಜಿಯಂತಹ ಭೀಕರ ಘಟನೆಗಳು ನಡೆಯುತ್ತಿರಲಿಲ್ಲ.

        ಕಂಬಾಲಪಲ್ಲಿಯ ಕತೆ ಇಲ್ಲಿಗೆ ಬಂದು ನಿಂತಿದೆ. ಹೆಚ್ಚೂ ಕಡಿಮೆ ದಲಿತರ ಕಗ್ಗೊಲೆಗಳು ರಸ್ತೆ ಅಪಘಾತದಷ್ಟೂ ನೋವುಂಟು ಮಾಡದಂತಹ ಸಮಾಜದಲ್ಲಿ ಕಂಬಾಲಪಲ್ಲಿಯ ನೆನಪು ಬಹುಶಃ ಯಾರಿಗೂ ಇಲ್ಲವೆನಿಸುತ್ತದೆ. ಮಹಾಮರೆವಿನ ಮಹಾನಾಟಕದಲ್ಲಿ ದಲಿತರೂ ''ಹಿಂದೂ ನಾವೆಲ್ಲ ಒಂದು'' ಎಂದು ಬೀಗುತ್ತಿದ್ದಾರೆ. ಅವರ ಆತ್ಮಗಳಿಗೆ ಶಾಂತಿ ಸಿಗಲಿ.

 

 “ವಕೀಲ ನಿನಗೆ ಕಣ್ಣು ಸ್ವಲ್ಪ ಮಂಜಲ್ಲವಾ ಅಂತಂದ, ಅದಕ್ಕೆ ಹೌದು ಸ್ವಲ್ಪ ಅಂದೆ ಅಷ್ಟೆ. ಇದನ್ನೇ ಮುಂದು ಮಾಡಿ ನಾನು ಹೇಳಿದ್ದನ್ನೆಲ್ಲ ಬಿಟ್ಟುಬಿಟ್ಟವರೆ.”

ಅಂದಿನ ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ಎಂಬ ಗ್ರಾಮದಲ್ಲಿ 23 ವರ್ಷಗಳ ಹಿಂದೆ ಯಾವುದೇ ತಪ್ಪು ಮಾಡದ, ಆದರೆ ಸ್ವಾಭಿಮಾನದಿಂದ ತಲೆ ಎತ್ತಿ ಬದುಕಲು ಯತ್ನಿಸಿದ 7 ಜನ ದಲಿತರನ್ನು [ಶ್ರೀರಾಮಪ್ಪ(25), ಅಂಜನಪ್ಪ(27), ರಾಮಕ್ಕ(70), ಸುಬ್ಬಕ್ಕ(45) ಪಾಪಮ್ಮ(46), ನರಸಿಂಹಯ್ಯ(25), ಚಿಕ್ಕಪಾಪಣ್ಣ(40)] ಜೀವಂತವಾಗಿ ಸುಟ್ಟುಹಾಕಿದರು.

ದಲಿತರ ನರಮೇಧ ನಡೆಸಿ ಜಾತಿ ಕ್ರೌರ್ಯ ಮೆರೆದ ರೆಡ್ಡಿ ಒಕ್ಕಲಿಗ ಜಾತಿಯ 32 ಹಂತಕ ಆರೋಪಿಗಳನ್ನು ಡಿಸೆಂಬರ್ 4, 2006ರಂದು ವಿಚಾರಣಾ ನ್ಯಾಯಾಲಯ ದೋಷಮುಕ್ತಗೊಳಿಸಿತು.ತದನಂತರ 2014ರ ಆಗಸ್ಟ್ 20 ರಂದು ಹೈಕೋರ್ಟ್ ಸಹ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ಕಂಬಾಲಪಲ್ಲಿಯ ಹತ್ಯಾಕಾಂಡದ ಆರೋಪಿಗಳನ್ನು ದೋಷಮುಕ್ತಗೊಳಿಸಿತು!

ಹತ್ಯಾಕಾಂಡದಲ್ಲಿ ತನ್ನ ಮಕ್ಕಳನ್ನು ಕಳೆದುಕೊಂಡ ಸಂತ್ರಸ್ತ ವೆಂಕಟರಾಯಪ್ಪರವರೊಂದಿಗೆ , ಕಂಬಾಲಪಲ್ಲಿ ಹತ್ಯಾಕಾಂಡದ ಆರೋಪಿಗಳೆಲ್ಲ ಖುಲಾಸೆಯಾದ ಸಂದರ್ಭದಲ್ಲಿ ಅಧ್ಯಾಪಕ ವಿಕಾಸ್ ಆರ್ ಮೌರ್ಯ ಮತ್ತು ದಸಂಸ ಹಿರಿಯ ಮುಖಂಡರಾದ ಎನ್. ವೆಂಕಟೇಶ್‌  ನಡೆಸಿದ ಮಾತುಕತೆ  ‘ಗೌರಿ ಲಂಕೇಶ್’ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. 2019ರಲ್ಲಿ ವೆಂಕಟರಾಯಪ್ಪನವರು ನಿಧನರಾಗಿದ್ದಾರೆ. ವೆಂಕಟರಾಯಪ್ಪನವರ ಮಾತುಗಳು ಇಲ್ಲಿವೆ.

ಸಂದರ್ಶಕ : ಹೈ ಕೋರ್ಟ್ ಸಹ ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಿದೆ. ಈ ತೀರ್ಪಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?

ವೆಂಕಟರಾಯಪ್ಪ: ನನಗೇನು ತಿಳಿಯತ್ತೆ? ನಿಮ್ಮಂತೋರು ಯಾರಾದ್ರು ಬಂದು ಹೇಳಬೇಕು ಅಷ್ಟೆ. ನಾನು ಸಾಯೋದೊಳಗೆ ನ್ಯಾಯ ಸಿಕ್ಕರೆ ಸಾಕು.

ಸಂ: ಕಂಬಾಲಪಲ್ಲಿಯ ಪ್ರಕರಣ ಸುಪ್ರೀಂ ಕೋರ್ಟಿಗೆ ಹೋಗಿದೆ. ಅಲ್ಲಿ ಗೆಲ್ಲಬಹುದಾ?

ವೆಂ: ವಯಸ್ಸಾಯ್ತು, ನ್ಯಾಯ ನಮ್ಮಂತೋರಿಗೆ ಸಿಗತ್ತಾ? ನಿಮ್ಮಂತ ಹೋರಾಟಗಾರರು ನನಗೆ ನ್ಯಾಯ ಸಿಗೋ ತರ ಮಾಡಬೇಕು. ನೀವು ಹೇಳಿದ ಕಡೆ ಹೆಬ್ಬೆಟ್ಟು ಒತ್ತುತ್ತೀನಿ. ಅವರ ಶಿಕ್ಷೆ ಆಗಿರೋದು ನನ್ನ ಕಿವಿಗೆ ಬಿದ್ರೆ ಸಾಕು.

ಸಂ: ಸರ್ಕಾರ ನಿಮ್ಮ ಪರವಾಗಿ ಸುಪ್ರೀಂ ಕೋರ್ಟಿಗೆ ಹೋಗಿದೆ. ಇಲ್ಲಿವರೆಗೆ ನಿಮಗೆ ಏನೇನು ಸೌಕರ್ಯ ಮಾಡಿಕೊಟ್ಟಿದೆ?

ವೆಂ: ಸರ್ಕಾರದವರು ಹಣ ಕೊಟ್ಟು ಎಲ್ಲರಿಗೂ ಮನೆ ಕಟ್ಟಿಸಿಕೊಟ್ಟು, ಸೊಸೆಗೆ ಕೆಲಸ ಕೊಟ್ರು. ಆದ್ರೆ ಅವಳು ಕೊರಗಿ ಸೀಮೆ ಎಣ್ಣೆ ಸುರುವಿಕೊಂಡು ಸತ್ತಳು. ಸೌಕರ್ಯ ಬಂತು ಆದ್ರೆ ಮಕ್ಕಳು ಬರ್ತಾರೇನಪ್ಪಾ? ನ್ಯಾಯ ಸಿಗ್ತಾದೇನಪ್ಪಾ? ಇಲ್ಲಿ ಇರೋ ಜನರೆಲ್ಲ ನನ್ನ ಮಕ್ಕಳನ್ನ ನೆನೆಸ್ಟೇಕು. ಅವರು ಪ್ರಾಣ ಕೊಟ್ಟು ಇಲ್ಲಿನ ಜನರಿಗೆ ಜೀವನ ಕೊಟ್ರು. ಆದ್ರೆ ನಮ್ಮಂತೋರ್ಗೆ ಸೌಕರ್ಯ ಸಿಗಬೇಕಂದ್ರೆ ಯಾರಾದ್ರು ಸಾಯಲೇಬೇಕಾ?

ಸಂ: ಈ ಹದಿನೈದು ವರ್ಷ ಹೇಗೆ ಜೀವನ ಮಾಡಿದಿರಿ? ಆ ಘಟನೆ ಇನ್ನೂ ನೆನಪಿದೆಯಾ?

ವೆಂ: ಹೀಗೆ ಮಾಡ್ತಾ ಇದಿವಿ. ಎಲ್ಲಾ ನೆನಪಿದೆ, ಕಂಬಾಲಪಲ್ಲಿಗೆ ಮೊದಲ ಮೂರು ವರ್ಷ ಸಮಾಧಿಗೆ ಪೂಜೆ ಮಾಡೋಕೆ ಹೋದೆ. ಆಮೇಲೆ ಮನಸ್ಸಾಗಲಿಲ್ಲ. ನನ್ನ ಮಕ್ಕಳ ಕೊಂದವರ ಮುಖ ನೋಡಿದರೆ ಕಣ್ಣು ಚುಚ್ಚತ್ತೆ, ನೋವಾಗತ್ತೆ, ಶಿಕ್ಷೆ ಕೊಡ್ಸೋಕೆ ಆಗ್ಲಿಲ್ವಲ್ಲ ಅಂತ ನಾಚಿಕೆ ಆಗತ್ತೆ.

ಸಂ: ಹಾಗಾದ್ರೆ ಕಂಬಾಲಪಲ್ಲಿಯ ಜೊತೆ ಸಂಬಂಧವೇ ಇಲ್ಲವೆ?

ವೆಂ: ನಾನು ಹೋಗಲ್ಲ. ನನ್ನ ಸಂಬಂಧಿಕರು ಪ್ರತಿ ವರ್ಷ ಹೋಗಿ ಸಮಾಧಿಗೆ ಪೂಜೆ ಮಾಡಿಕೊಂಡು ಬರುತ್ತಾರೆ ಅಷ್ಟೆ, ಜಮೀನು ಪಾಳು ಬಿದ್ದಿದೆ.

ಸಂ: ನೀವು ಕೋರ್ಟಿನಲ್ಲಿ ಸಾಕ್ಷಿ ಸರಿಯಾಗಿ ಹೇಳಲಿಲ್ಲವಂತಲ್ಲ. ಯಾಕೆ?

ವೆಂ: ನಾನು ಎಲ್ಲಾ ಹೇಳಿದ್ನಪ್ಪ, ಜಡ್ಜ್ ಮುಂದೆ ನಡೆದಿದ್ದೆಲ್ಲಾ ಹೇಳಿದೆ. ಇಂತಿಂತವ್ರೆ ಮಾಡಿದ್ದು ಅಂತ ಹೇಳಿದೆ. ಕೊನೇಲಿ ವಕೀಲ ನಿನಗೆ ಕಣ್ಣು ಸ್ವಲ್ಪ ಮಂಜಲ್ಲವಾ ಅಂತಂದ. ಅದಕ್ಕೆ ಹೌದು ಸ್ವಲ್ಪ ಅಂದೆ ಅಷ್ಟೆ. ಇದನ್ನೇ ಮುಂದು ಮಾಡಿ ನಾನು ಹೇಳಿದ್ದನ್ನೆಲ್ಲ ಬಿಟ್ಟುಬಿಟ್ಟವರೆ.

ಸಂ: ಕೊಂದವರು ಯಾರು ಅಂತ ನೆನಪಿದೆಯಾ? ಮರುವಿಚಾರಣೆ ಬಂದ್ರೆ ಸತ್ಯ ಹೇಳ್ತಿರಾ?

ವೆಂ: ಹೇಳ್ತಿನಿ. ಪ್ರತಿಯೊಬ್ಬ ಕೊಲೆಗಾರರ ಹೆಸರನ್ನೂ ಹೇಳ್ತಿನಿ. ಪತ್ತೆ ಹಚ್ಚುತ್ತೀನಿ. ಯಾರೇ ಆಗ್ಲಿ ಕೊಲೆಗಾರರಿಗೆ ಶಿಕ್ಷೆ ಆಗಬೇಕಲ್ವಾ? ಆವತ್ತು ಸಾಪುಲು ನರಸಪ್ಪ ನನ್ನ ಕಾಪಾಡದೇ ಇದ್ದಿದ್ದರೆ ನಾನು ಇವತ್ತು ಬದುಕ್ತಾ ಇರಲಿಲ್ಲ.

ಸಂ: ನ್ಯಾಯ ಸಿಗದೇ ಇದ್ದದ್ದಕ್ಕೆ ನಿಮಗೆ ಯಾರ ಮೇಲೆ ಬೇಸರವಿದೆ? ಪೊಲೀಸ್, ಸಂಘಟನೆ, ನ್ಯಾಯಾಲಯ, ಸರ್ಕಾರ?

ವೆಂ: ಅವರನ್ನ ಯಾರು ಪೊಲೀಸ್ ಅಂದಿದ್ದು? ಅವರು ಮಾಡಿದ ಅನ್ಯಾಯ ಅವರೇ ಅನುಭವಿಸುತ್ತಾರೆ. ಸಂಘದವರು ಆರಂಭದಲ್ಲಿ ಜೊತೇಲಿ ಇದ್ರು. ಆಮೇಲೆ ಅವರೂ ಕೈ ಬಿಟ್ಟು, ಈಗ ವೆಂಕಟೇಶಪ್ಪ ಬಂದು ಹೋಗ್ತಾ ಕ್ಷೇಮ ವಿಚಾರಿಸಿಕೊಳ್ತಾರೆ. ಎಲ್ಲ ವಿಚಾರ ಅವರೇ ಹೇಳ್ತಾರೆ. ಇನ್ಯಾರು ಬರೋದಿಲ್ಲ. ನಮ್ಮನ್ನ ಮಾತಾಡ್ಸೋರೆ ಇಲ್ಲ.

ಸಂ: ಕೊನೆಯದಾಗಿ ಏನು ಹೇಳೋಕೆ ಇಷ್ಟ ಪಡ್ತೀರಾ?

ವೆಂ: ಏನು ಹೇಳಲಿ? ಮಿನಿಸ್ಟರ್, ಪೊಲೀಸ್, ತಹಶಿಲ್ದಾರ್, ಡಿ.ಸಿ ಎಲ್ಲಾ ಬಂದ್ರು. ಏನು ಮಾಡಿದ್ರು? ಏನು ಮಾಡ್ಲಿಲ್ಲ. ನನ್ನ ಕಣ್ಣ ಮುಂದೆ ಬಾಗಿಲು ಹಾಕಿ ಬೆಂಕಿ ಇಟ್ರಪ್ಪ ಪೋಲಿಸು ಅಲ್ಲೆ ಇದ್ರು. ಅವರಿಗೆ ಎಲ್ಲಾ ಗೊತ್ತು. ಹಿಂದೆ ನನ್ನ ದೊಡ್ಡ ಮಗ ಸತ್ತಾಗ್ಲು ನ್ಯಾಯ ಸಿಗಲಿಲ್ಲ. ನನ್ನ ಮಗ ಶ್ರೀರಾಮ ಹುಲಿಯಂಗಿದ್ದವನ್ನ ಸಾಯಿಸಿಬಿಟ್ರು. ರಾಜ ಮಹಾರಾಜರೇ ಹೋದ್ರು. ನನ್ನ ಪ್ರಾಣ ಹೋದ್ರು ಸರಿ ಕೋರ್ಟಲ್ಲಿ ಸತ್ಯ ಹೇಳ್ತಿನಿ. ಆದ್ರೆ ನಂಗೆ ಸಪೋರ್ಟ್ ಮಾಡೋರು ಯಾರು? ನಿಮ್ಮಂತೋರು ಆಗಾಗ ಬಂದು ಸಾಯೋ ಮುದುಕನಿಗೆ ಶಕ್ತಿ ಕೊಡ್ಬೇಕು.