ತುಮಕೂರು ಬಂದ್ ಯಶಸ್ವಿ ಮುಚ್ಚಿದ ಅಂಗಡಿಗಳು - ವ್ಯತ್ಯಯವಾಗದ ಸಂಚಾರ ವ್ಯವಸ್ಥೆ
ತುಮಕೂರು ಬಂದ್ ಯಶಸ್ವಿ
ಮುಚ್ಚಿದ ಅಂಗಡಿಗಳು - ವ್ಯತ್ಯಯವಾಗದ ಸಂಚಾರ ವ್ಯವಸ್ಥೆ
ತುಮಕೂರು: ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಕರೆ ನೀಡಿದ್ದ ತುಮಕೂರು ಬಂದ್ ಭಾಗಶಃ ಯಶಸ್ವಿಯಾಗಿದೆ.
ಶುಕ್ರವಾರ ಬೆಳಗ್ಗೆ ೬ ರಿಂದ ಸಂಜೆ ೬ರವರೆಗೆ ತುಮಕೂರು ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಹಾಲಿನ ಅಂಗಡಿಗಳು, ಮೆಡಿಕಲ್ ಸ್ಟೋರ್‌ಗಳು, ತರಕಾರಿ ಅಂಗಡಿಗಳು, ಆಸ್ಪತ್ರೆಗಳು, ಖಾಸಗಿ ಕ್ಲಿನಿಕ್‌ಗಳನ್ನು ಬಾಗಿಲು ತೆರೆದಿರುವುದನ್ನು ಹೊರತುಪಡಿಸಿ ಉಳಿದಂತೆ ಎಲ್ಲ ರೀತಿಯ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಖಾಸಗಿ ಕಚೇರಿಗಳು ಬಾಗಿಲು ಬಂದ್ ಮಾಡುವ ಮೂಲಕ ತುಮಕೂರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವುದು ನಗರದಾದ್ಯಂತ ಕಂಡು ಬಂತು.
ನಗರದ ಎಂ.ಜಿ. ರಸ್ತೆ, ಬಿ.ಹೆಚ್. ರಸ್ತೆ, ಅಶೋಕ ರಸ್ತೆ, ಬಿ.ಜಿ. ಪಾಳ್ಯ ಸರ್ಕಲ್, ಮಂಡಿಪೇಟೆ ರಸ್ತೆ, ಗುಬ್ಬಿ ಗೇಟ್ ಸರ್ಕಲ್, ಎಸ್.ಎಸ್. ಪುರಂ. ಎಸ್‌ಐಟಿ ಮುಖ್ಯ ರಸ್ತೆ ಸೇರಿದಂತೆ ನಗರದ ಎಲ್ಲ ರಸ್ತೆಗಳಲ್ಲಿನ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು.
ಆದರೆ ಕೆಎಸ್ಸಾರ್ಟಿಸಿ ಬಸ್‌ಗಳು, ಖಾಸಗಿ ಬಸ್‌ಗಳು, ಕಾರುಗಳ, ಸರಕು ಸಾಗಣೆ ವಾಹನಗಳು ಹಾಗೂ ಆಟೋ ರಿಕ್ಷಾಗಳ ಸಂಚಾರ ಎಂದಿನಂತಿತ್ತು. ವಾಹನಗಳ ಸಂಚಾರದಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಿರಲಿಲ್ಲ. ಹೀಗಾಗಿ ನಗರಕ್ಕೆ ಬರುವ, ನಗರದಿಂದ ಹೊರ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗಲಿಲ್ಲ.
ಬAದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಎಂದಿನAತೆ ಕಾರ್ಯನಿರ್ವಹಿಸಿದವು.
ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಬೆಳಗ್ಗೆಯಿಂದಲೇ ನಗರದ ವಿವಿಧ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ನಡೆಸುವ ಮುಖೇನ ತೆರೆದಿದ್ದ ಕೆಲವು ಅಂಗಡಿಗಳ ಬಾಗಿಲು ಹಾಕಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ಈ ಬೈಕ್ ರ‍್ಯಾಲಿ ಎಂ.ಜಿ. ರಸ್ತೆಗೆ ಬರುವಷ್ಟರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರ್‌ವಾಡ್ ಅವರು ಅಡ್ಡಲಾಗಿ ಬಂದು ಯಾವುದೇ ಕಾರಣಕ್ಕೂ ನಗರದಲ್ಲಿ ಬೈಕ್ ರ‍್ಯಾಲಿ ನಡೆಸುವಂತಿಲ್ಲ, ಬಲವಂತವಾಗಿ ಯಾವ ಅಂಗಡಿಯನ್ನೂ ಮುಚ್ಚಿಸುವಂತಿಲ್ಲ. ನೀವೇನಿದ್ದರೂ ಒಂದೆಡೆ ಸೇರಿ ಪ್ರತಿಭಟನೆ ನಡೆಸಬಹುದು. ವಿನಾಕಾರಣ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಕಾನೂನು ಕ್ರಮ ಖಚಿತ ಎಂಬ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಬೈಕ್ ರ‍್ಯಾಲಿ ನಡೆಸುತ್ತಿದ್ದವರು ಟೌನ್‌ಹಾಲ್ ವೃತ್ತಕ್ಕೆ ತೆರಳಿದರು.
ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದವರ ಗುರುತಿನ ಚೀಟಿಯನ್ನು ಪಡೆದ ಎಸ್ಪಿ ರಾಹುಲ್‌ಕುಮಾರ್, ನಾಳೆ ಕಚೇರಿಗೆ ಬಂದು ಗುರುತಿನ ಚೀಟಿಗಳನ್ನು ಪಡೆಯುವಂತೆ ತಿಳಿಸಿದರು.
ಯಾವ ಅಂಗಡಿಯನ್ನು ಸಹ ಬಲವಂತವಾಗಿ ಮುಚ್ಚಿಸುವಂತಿಲ್ಲ. ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದರೆ ಅಡ್ಡಿಯಿಲ್ಲ. ಇದು ಬಂದ್ ಅಲ್ಲ, ಪ್ರತಿಭಟನೆ ಮಾತ್ರ ಎಂದು ಅವರು ಸ್ಪಷ್ಟಪಡಿಸಿದರು.