ಹಳ್ಳಿ ಹೈದನ ನೊರೆಂಟು ನೆನಪು - ಚಿಕ್ಕಣ್ಣ ಐಎಎಸ್ (ಕಳೆದ ಕಿನ್ನರಿಯಿಂದ) ಕಪಿಲೆ ಬಾರಿಯಿಂದ ವಿದ್ಯುತ್ ಪಂಪ್ ಸೆಟ್‍ಗೆ ಪಲ್ಲಟ !?

 ಹಳ್ಳಿ ಹೈದನ  ನೊರೆಂಟು ನೆನಪು - ಚಿಕ್ಕಣ್ಣ ಐಎಎಸ್  (ಕಳೆದ ಕಿನ್ನರಿಯಿಂದ)  ಕಪಿಲೆ ಬಾರಿಯಿಂದ ವಿದ್ಯುತ್ ಪಂಪ್ ಸೆಟ್‍ಗೆ ಪಲ್ಲಟ !?

 ಹಳ್ಳಿ ಹೈದನ ನೆನಪು - ಚಿಕ್ಕಣ್ಣ ಐಎಎಸ್

(ಕಳೆದ ಕಿನ್ನರಿಯಿಂದ)

ಕಪಿಲೆ ಬಾರಿಯಿಂದ ವಿದ್ಯುತ್ ಪಂಪ್ ಸೆಟ್‍ಗೆ ಪಲ್ಲಟ !?

 

ಮರುದಿನ ರೆಡ್ಡಿ, ನಾನೂ ಹಾಸ್ಟೆಲಿನಿಂದ ನಡೆದುಕೊಂಡೇ ಕಾಲೇಜಿಗೆ ಹೋದೆವು. ಅಂದಾಜು 2 ಕಿಮೀ ದೂರ. ನೆಹರು ಸರ್ಕಲ್, ಶಿವಾನಂದ ಸರ್ಕಲ್, ಬಿಟಿಸಿ ರೇಸ್ ಕ್ಲಬ್, ವೆಸ್ಟ್ ಎಂಡ್ ಹೋಟೆಲ್ ಹಾದು ಮುಂದೆ ಹೋದರೆ ಬಲಗಡೆಯೇ ಇರುವ ಕಲ್ಲು ಕಟ್ಟಡ, ರಾಂನಾರಾಯಣ ಚಲ್ಲಾರಾಂ ಎಂಬುವರು ಸಿಂಧಿಗಳು, ಪಾಕಿಸ್ತಾನ ತೊರೆದು ದೇಶ ವಿಭಜನೆಯಾದ ಮೇಲೆ ಅವರು ಬೆಂಗಳೂರಿಗೆ ಬಂದು ನೆಲೆಸಿ, ಅನೇಕ ಕೈಗಾರಿಕೆ ಮತ್ತು ವಾಣಿಜ್ಯ ಉದ್ಯಮಗಳಲ್ಲಿ ತೊಡಗಿಸಿಕೊಂಡು ಸಿರಿವಂತರಾದರೆಂದೂ, ಅನಂತರ ಕಾಲೇಜಿನ ಈ ಜಾಗವನ್ನು ಸರ್ಕಾರದಿಂದ, ಮಂಜೂರು ಮಾಡಿಸಿಕೊಂಡು ಅಲ್ಲಿ ಬೃಹತ್‌ ಕಟ್ಟಡವನ್ನು ನಿರ್ಮಿಸಿ, ನಂತರ ಅದನ್ನು ಸರ್ಕಾರಕ್ಕೆ ದಾನ ಮಾಡಿದರೆಂದೂ ತಿಳಿದುಕೊಂಡೆ. ಹಾಗಾಗಿ ಅದು ಸರ್ಕಾರಿ ವಾಣಿಜ್ಯ ಕಾಲೇಜಾಗಿ ಕಾರ್ಯನಿರ್ವಹಿಸುತ್ತಿತ್ತು.

 

ನಾನು Insurance Optional ತೆಗೆದುಕೊಂಡಿದ್ದರಿಂದ ನಾನು I B.Com, 'B' ಸೆಕ್ಷನ್‌ನಲ್ಲಿದ್ದರೆ, Business Administration ತೆಗೆದುಕೊಂಡಿದ್ದ ರೆಡ್ಡಿ 'A' ಸೆಕ್ಷನ್‌ನಲ್ಲಿದ್ದರು. ಭವ್ಯವಾದ ಕಾಲೇಜಿಗೆ ಅಷ್ಟೇ ಖಡಕ್ ಆಗಿದ್ದ ಜಿ.ಆರ್. ರಾಮಕೃಷ್ಣರೆಡ್ಡಿ ಪ್ರಿನ್ಸಿಪಾಲರು, -ಶಿಸ್ತಿನ ಸಿಪಾಯಿ ಎಂದು ಹೆಸರು ಮಾಡಿದ್ದರು. ಕನ್ನಡಕ್ಕೆ ಹೆಸರಾಂತ ಸಾಹಿತಿಗಳಾದ ಕೆ.ಎಂ. ಕೃಷ್ಣರಾವ್, Accountsಗೆ ಮಾಜಿ ಸೈನಿಕರಾಗಿದ್ದ ಶ್ರೀನಿವಾಸನ್, Business - Administration B.T.ನಾಗರಾಜ, Tax Matterಗೆ ಜಿ.ಹಾಲಪ್ಪ,  Insuranceಗೆ ಗೋಪಾಲ್ ಇದ್ದರು.

 

ನನ್ನ Class Matesಗಳಲ್ಲಿ ಪ್ರಮುಖರೆಂದರೆ ಜಿ. ವಿಶ್ವನಾಥ್, ಜಿ.ಎಂ. ಪರಮಶಿವನ್, ಟಿ.ಸಿ. ಜಯಣ್ಣ, ಮಲ್ಲಿಕಾರ್ಜುನಯ್ಯ, ಲಕ್ಷ್ಮಣರಾವ್‌ ಮೋಹಿತೆ, ನಾವೆಲ್ಲಾ ಒಂದು ಗುಂಪು ಮಾಡಿಕೊಂಡಿದ್ದೆವು. ಸದಾ ಕ್ರಿಯಾಶೀಲರಾಗಿ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ನಿರತರಾಗಿರುತ್ತಿದ್ದೆವು. ನಾನು ಕರ್ನಾಟಕ ಸಂಘದ ಸಹ ಕಾರ್ಯದರ್ಶಿಯಾಗಿ ಚುನಾಯಿತನಾದರೆ, ವಿಶ್ವನಾಥ Sportsನಲ್ಲಿ ಹೆಸರು ಮಾಡಿದ್ದರು. ಮಧ್ಯಾಹ್ನ ಎಲ್ಲರೂ ಸೇರಿ ಎಜಿ ಆಫೀಸು ಕ್ಯಾಂಟೀನಿಗೆ ಹೋಗಿ ತಿಂಡಿ ತಿಂದು ಬರುವುದನ್ನು ಅಭ್ಯಾಸ ಮಾಡಿಕೊಂಡಿದ್ದೆವು.

 

ಹಾಸ್ಟೆಲ್ ಆರಂಭವಾಗಿ ಒಂದು ತಿಂಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 20 ಮುಟ್ಟಿತ್ತು. ಸರಿ, ಊಟ-ತಿಂಡಿ ಹಾಸ್ಟೆಲ್‌ನಲ್ಲೇ ತಯಾರಿಸಲು ಆರಂಭಿಸಿದರು. ಬೆಳಿಗ್ಗೆ 8 ಗಂಟೆಗೆ ತಿಂಡಿ, ರಾತ್ರಿ 7-30ಕ್ಕೆ ಊಟ. ಮಧ್ಯಾಹ್ನದ ಊಟ ಭಾನುವಾರ ಮಾತ್ರ. ಬೇರೆ ದಿನ ಕಾಲೇಜು ಕ್ಯಾಂಟೀನಿನಲ್ಲಿ ತಿಂದುಕೊಳ್ಳಬೇಕು.

 

ಹಾಸ್ಟೆಲ್‌ ಮ್ಯಾನೇಜ್‌ಮೆಂಟ್‌ಗೆ ಡಿ.ಆರ್. ಪುಟ್ಟಣ್ಣ ಎಂಬ ಸಿಮೆಂಟ್ ಡೀಲರ್ ಕಾರ್ಯದರ್ಶಿ, ಗುಂಡುರಾವ್ ಮ್ಯಾನೇಜರ್, ದಿ|| ಮಳವಳ್ಳಿ ಕಾಮಯ್ಯ ಅವರ ಧರ್ಮಪತ್ನಿ ಮಲ್ಲಮ್ಮನವರು ಅಧ್ಯಕ್ಷಿಣಿ, ಟಿ.ವಿ. ಮಾರುತಿಯವರ ತಂದೆ ತಿಮ್ಮಯ್ಯನವರು ಉಪಾಧ್ಯಕ್ಷರು, ಪ್ರೊ|| ಬಿ.ಟಿ ನಾಗರಾಜ ವಾರ್ಡನ್, ಅದು ಸಾರ್ವಜನಿಕ ಹಾಸ್ಟೆಲ್ ಆದ್ದರಿಂದ ಕುಂಚಿಟಿಗರ ಜತೆಗೆ ಬೇರೆ ಜಾತಿಯವರಿಗೂ ಅವಕಾಶ ನೀಡುತ್ತಿದ್ದರು. ತುಮಕೂರು, ಚಿತ್ರದುರ್ಗ, ಮಡಕಸಿರಾ ತಾಲ್ಲೂಕಿನಿಂದ ಬಂದ ಕುಂಚಿಟಿಗ ಜನಾಂಗದವರು ಹೆಚ್ಚಾಗಿದ್ದು, ಅವರೆಲ್ಲ ಆಚಾರ್ಯ ಪಾಠಶಾಲೆಗೇ ಹೆಚ್ಚಾಗಿ ಸೇರುತ್ತಿದ್ದರು. ಕಾರಣ ಆ ಕಾಲೇಜಿನಲ್ಲಿ ಮಡಕಶಿರಾ ತಾಲ್ಲೂಕಿನ ಹಿರೇತುರುಪಿ ಗಾಮದ ಶಿಕ್ಷಕರಾಗಿ ಒಳ್ಳೆಯ ಹೆಸರು ಮಾಡಿದ್ದ ಪ್ರೊ| ಹೆಚ್.ಆರ್. ದಾಸೇಗೌಡರ ಪ್ರೇರಣೆ.

 

ಕಾಲೇಜು ಪ್ರಾರಂಭವಾಗಿ 3 ತಿಂಗಳಾಗಿದ್ದವು. ಕಾಲೇಜಿನ ಕರ್ನಾಟಕ ಸಂಘದ ಚುನಾವಣೆಯಲ್ಲಿ ಗೆದ್ದು ಅದರ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದೆ. ಹಾಸ್ಟೆಲ್‌ನಲ್ಲಿ ಪ್ರಿಫೆಕ್ಟ್

ಅಂತ 3 ಜನರ ಸಮಿತಿ ಮಾಡಿ ನನ್ನನ್ನು ಅದರ ಸದಸ್ಯನನ್ನಾಗಿ ಮಾಡಿದರು. ಇದರಿಂದ ಕುಪಿತರಾದ ಸಹ ವಿದ್ಯಾರ್ಥಿ ಬಿ.ಎಂ. ಮಾರಪ್ಪ ಎಂಬುವರು ನನ್ನ ಮೇಲೆ ದ್ವೇಷ ಸಾಧಿಸಲು ಆರಂಭಿಸಿದರು. ಹಾಸ್ಟೆಲ್‌ಗೆ ದಿನನಿತ್ಯದ ದಿನಸಿ, ತರಕಾರಿ ತರುವ 'ಜವಾಬ್ದಾರಿ ನಮ್ಮ ಮೂರು ಜನರ ಮೇಲೆ ಬಿದ್ದಿತ್ತು. ನಾನು ವಾರಕ್ಕೆ ಎರಡು ದಿನ, ಬೆಳಿಗ್ಗೆ 7 ಗಂಟೆಗೆ ಮಲ್ಲೇಶ್ವರದ ತರಕಾರಿ ಮಾರುಕಟ್ಟೆಗೆ ಹೋಗಿ ತರಕಾರಿ ತಗೊಂಡು ಜಟಕಾ ಗಾಡಿಯಲ್ಲಿ ತಂದು ಹಾಕಿ ಸಂಜೆ ಕಾರ್ಯದರ್ಶಿಯವರಿಗೋ, ಮ್ಯಾನೇಜರ್ ಗುಂಡುರಾವ್‌ ಅವರಿಗೋ ಪೈಸೆ ಪೈಸೆ ಲೆಕ್ಕಾ ಬರೆದು, ಬಾಕಿ ಹಣ ವಾಪಸ್ಸು ಮಾಡುತ್ತಿದ್ದೆ. ತರಕಾರಿ ಅಂಗಡಿಯವರಿಂದ' ಕಮೀಷನ್‌ ಪಡೆಯುತ್ತಾನೆ ಎಂದು ಮಾರಪ್ಪ ನನ್ನ ಮೇಲೆ ನಿರಾಧಾರ ಆರೋಪಗಳನ್ನು ಮಾಡಲು ಆರಂಭಿಸಿದ.

 

ಡಿಸೆಂಬರ್ 1961, ಕಾಲೇಜಿನಲ್ಲಿ ಕರ್ನಾಟಕ ಸಂಘದ ವತಿಯಿಂದ ರಾಷ್ಟ್ರಕವಿ ಕುವೆಂಪುರ ವಿರಚಿತ 'ರಕ್ಷಾಕ್ಷಿ' (Hamletl by Shakspere) ನಾಟಕ ಆಡಿದೆವು. ಅದಕ್ಕಾಗಿ 4 ತಿಂಗಳು ಪ್ರಾಕ್ಟೀಸು, ನಾಟಕದಲ್ಲಿ ನನ್ನ ಪಾತ್ರ ತುಂಬಾ ಕಳೆಗಟ್ಟುವಂತೆ ನಿರ್ವಹಿಸಿದ್ದೆ. ಅತ್ಯುತ್ತಮ ಅಭಿನಯಕ್ಕೆ 2ನೇ ಬಹುಮಾನ ಹಾಗೂ ಪ್ರಿನ್ಸಿಪಾಲ್ ಶ್ರೀ ರೆಡ್ಡಿಯವರಿಂದ Special Prize ಪಡೆದಿದ್ದೆ,

 

ಹೀಗಾಗಿ ನಾನು ಕಾಲೇಜಿನಲ್ಲಿ ಶಿಕ್ಷಣಕ್ಕಿಂತಲೂ ಹೆಚ್ಚಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ತೋರಿಸುತ್ತಿದ್ದೆ,

ಅದರ ಜತೆಗೆ ಕವನ ರಚನೆ, ಸಣ್ಣ ಕತೆಗಳನ್ನು ಬರೆಯೋದನ್ನು ರೂಢಿ ಮಾಡಿಕೊಂಡೆ, ಅವುಗಳನ್ನು ಕಾಲೇಜಿನ ಕನ್ನಡ ಪಂಡಿತರಾದ ಕೆ.ಎಂ. ಕೃಷ್ಣರಾವ್‌ ಅವರಿಗೆ ತೋರಿಸುತ್ತಿದ್ದೆ. 'ನಿನಗೆ ಸಾಹಿತ್ಯಾಭಿರುಚಿ ಇದೆ. ಕನ್ನಡ ಭಾಷೆಯ ಮೇಲೆ ಒಲವಿದೆ. ಸಾಹಿತ್ಯ ಕೃಷಿ ಮುಂದುವರಿಸು' ಎಂದು ಬೆನ್ನು ಸವರಿದರು. ಅದೇ ವರ್ಷ ಕಾಲೇಜಿನ ಮ್ಯಾಗಜ್ಹೀನಲ್ಲಿ ನನ್ನ ಕವಿತೆ 'ಪ್ರೇಮಾಂಕುರ' ಪ್ರಕಟವಾಯಿತು. ಇದರಿಂದ ನಾನು ವಿದ್ಯಾರ್ಥಿ ಕವಿಯಾದೆ,

 

ನಮ್ಮ ಹಾಸ್ಟೆಲ್‌ನ ಕೆಳಗಿದ್ದ LRMA ಸ್ಟುಡಿಯೋದ ರಾಣೋಜಿರಾವ್‌ ಅವರು ನನ್ನ ಸ್ನೇಹಿತರಂತಿದ್ದರು. ಬಿಡುವಾದಾಗಲೆಲ್ಲಾ ಅವರ ಸ್ಟುಡಿಯೋಗೆ ಹೋಗುತ್ತಿದ್ದೆ. "ನಿನ್ನ Face ತುಂಬಾ Photogenic ಆಗಿದೆ. ಥೇಟ್ ದೇವಾನಂದ ಥರಾ ಇದ್ದೀಯಾ' ಎಂದು ನನ್ನನ್ನು ಹೊಗಳುತ್ತಿದ್ದರು. ನನ್ನ ಮುಖದ ವಿವಿಧ ಭಂಗಿಯ ಫೋಟೋಗಳ (B &W) ನ್ನು ತೆಗೆದು, ಅದರಲ್ಲಿ ಒಂದನ್ನು ದೊಡ್ಡದು ಮಾಡಿ ಫೋಟೋ ಶೋಕೇಸಿನಲ್ಲಿ ಅಂಟಿಸಿದ್ದರು. ಫೋಟೋ ತೆಗೆಸಿಕೊಳ್ಳಲು ಬರುತ್ತಿದ್ದ ನಮ್ಮ ಹಾಸ್ಟೆಲ್ ಹುಡುಗರು ನನ್ನನ್ನು ಹೊಗಳುತ್ತಿದ್ದರು. ಅಂದಿನಿಂದ ಹೆಚ್ಚುಹೆಚ್ಚಾಗಿ ದೇವಾನಂದ್‌ ನಟಿಸಿದ ಚಿತ್ರಗಳನ್ನು ತಪ್ಪದೇ ನೋಡಲಾರಂಭಿಸಿದೆ, ಕೆಲವು ಸಾರಿ First Day, First Show, ಕನ್ನಡದ ರಾಜಕುಮಾರ್, ಹಿಂದಿಯ ರಾಜಕಪೂರ್, ರಾಜೇಂದ್ರಕುಮಾರ್ ನನ್ನ ಮೆಚ್ಚಿನ ಹೀರೋಗಳಾದರು. ಅವರ ಯಾವ ಸಿನಿಮಾಗಳನ್ನು ನೋಡದೆ ಬಿಡುತ್ತಿರಲಿಲ್ಲ.

 

ಹಾಸ್ಟೆಲ್ ಪ್ರಿಫೆಕ್ಟ್ ಕೆಲಸ, ಕಾಲೇಜಿನ ಕರ್ನಾಟಕ ಸಂಘದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತ್ಯ ರಚನೆ ಮುಂತಾದ Extra Curricular Activities ನಲ್ಲೇ ಹೆಚ್ಚು ಸಮಯ ಹೋಗುತ್ತಿತ್ತು. ಓದಿಗೆ ಎರಡನೇ ಸ್ಥಾನ, Class Room ಪರೀಕ್ಷೆಯಾದ್ದರಿಂದ ತೋಚಿದ್ದನ್ನು ಬರೆದು 1ನೇ ಬಿಕಾಂ ಮುಗಿಸಿದೆ. ಎರಡನೇ ವರ್ಷದ ತರಗತಿಗೆ ನನ್ನ ಹೆಸರು ಸೇರಿತು. ರಜೆಯಲ್ಲಿ ಊರಿಗೆ ಮರಳಿದೆ.

 

2ನೇ ವರ್ಷದ ಬಿಕಾಂ

 

1960ರಲ್ಲಿ ನಮ್ಮ ಹಳ್ಳಿ ಕಡೆ ವಿದ್ಯುತ್ ಕಂಬಗಳನ್ನು ನೆಟ್ಟು, ಬಡವನಹಳ್ಳಿ ವಿದ್ಯುಚ್ಛಕ್ತಿ ಕಛೇರಿಯವರು, ರೈತರಿಗೆ ವಿದ್ಯುತ್‌ ಪಂಪು ಜೋಡಿಸಿ ನೀರೆತ್ತುವ ಯೋಜನೆಯನ್ನು ಜಾರಿಗೊಳಿಸಿದ್ದರು. ಇದರ ಪ್ರಯೋಜನವನ್ನು ಪಡೆಯಲು ನಮ್ಮ ತಂದೆಯವರು ಬಳೆಹಳ್ಳಿಯ ಹತ್ತಿರದ ಜಮೀನಿನಲ್ಲಿ ಒಂದು ಹೊಸ ವೃತ್ತಾಕಾರದ 30 ಆಡಿ ಆಳದ ಬಾವಿಯನ್ನು ತೆಗೆಸುತ್ತಿದ್ದರು. ರಜೆಯಲ್ಲಿ ನಾನು ಊರಿಗೆ ಹೋದಾಗ ಅದರ ಇಟ್ಟಿಗೆ ಕಟ್ಟಡ ಕಾರ್ಯ ನಡೆಯುತ್ತಿತ್ತು. ಬಾವಿಗೆ 'ಕಪಿಲೆ ಹೊಡೆಯಲು ಬಾರಿ ಇಲ್ಲವಲ್ಲಾ, ನೀರು ಹೇಗೆ ಮೇಲಕ್ಕೆತ್ತುತ್ತೀರಾ' ಎಂದು ಕೇಳಿದೆ, 'ಎಲೆಕ್ಟಿಕ್ ಪಂಪನ್ನು ಕೊಡ್ತಾವರೆ, ನಾವೂ ಒಂದು ಹಾಕೋಣ, ಬಾರಿ ಯಾಕೆ?' ಅಂದರು ಅಪ್ಪ. ಒಳ್ಳೆ ಉಪಾಯ. ಕಪಿಲೆ ಹೊಡೆಯುವ ಉಸಾಬರಿಯೇ ಬೇಡ ಎಂದರು ಸಂತೋಷಪಟ್ಟು. ಮರುದಿನ ನಾನು ಅಪ್ಪ ಬಡವನಹಳ್ಳಿ MSEB ಕಛೇರಿಗೆ ಹೋದೆವು. ಯೋಜನೆ ಹೊಸದಾದ್ದರಿಂದ ರೈತರಿಂದ ಅಷ್ಟಾಗಿ ಬೇಡಿಕೆಯಿರಲಿಲ್ಲ. ಅಲ್ಲಿದ್ದ ಸೂಪರ್‌ವೈಸರ್ ನನಗೆ ಅರ್ಜಿ ನಮೂನೆ ನೀಡಿ MSEB ಕಡೆಯಿಂದ ನೀರೆತ್ತುವ ಪಂಪು, ಮೋಟಾರು ಸ್ಟಾರ್ಟರ್ ಮುಂತಾದವುಗಳನ್ನು Hire Purchase ಮೂಲಕ ನೀಡುವುದಾಗಿ ಹೇಳಿ ಈಗ ಸದ್ಯಕ್ಕೆ 500 ರೂಪಾಯಿಗಳನ್ನು ನೀವು ಕಟ್ಟಿ, ಉಳಿದ 1000 ರೂಪಾಯಿಗಳನ್ನು 5 ವರ್ಷದ ಕಂತುಗಳಲ್ಲಿ ತೀರಿಸಿ ಎಂದರು. ಅರ್ಜಿಯನ್ನು ತುಂಬಿ, ದಾಖಲೆಗಳಾದ ಪಹಣಿ ಮುಂತಾದವುಗಳನ್ನು ನೀಡಿದೆವು. 500 ರೂಗಳ ಮುಂಗಡ ಹಣ ಭರ್ತಿ ಮಾಡಿದೆವು. ಬೆಂಗಳೂರಿನ ಕೇಂದ್ರ ಕಛೇರಿಗೆ, ನಮ್ಮ ಅರ್ಜಿಯನ್ನು ತುಮಕೂರು ಇಇ ಮೂಲಕ ಶಿಪಾರಸ್ಸು ಮಾಡಿದರು.

ನಮ್ಮ ಮಾವನವರಾದ ದೊಡ್ಡಕರಿಯಪ್ಪನವರ ತಮ್ಮ ಜಿ. ಬಾಣಯ್ಯನವರು ಬಿ.ಇ (ಎಲೆಕ್ಟಿಕಲ್) ಓದಿ, MSEBಯಲ್ಲಿ AE ಆಗಿ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಶಿಫಾರಸು ಪತ್ರ ಹಿಡಿದು ಅವರಲ್ಲಿ ಹೋದೆ. ಅವರು ಸಂಬಂಧಪಟ್ಟವರ ಹತ್ತಿರ ನನ್ನನ್ನು ಕರೆದುಕೊಂಡು ಹೋಗಿ ಮಾತುಕತೆ ಆದ ಮೇಲೆ ನಮ್ಮ ಅರ್ಜಿ ಅನುಮೋದನೆಯಾಗಿ ನಮಗೆ 5 HPಯ ಒಂದು ವಿದ್ಯುತ್ ಪಂಪ್ ಸೆಟ್ HP ಆಧಾರದ ಮೇಲೆ ಮಂಜೂರಾಯಿತು.

ನನ್ನ ಬೇಸಿಗೆ ರಜೆ ಕಳೆಯುವುದರಲ್ಲಿ ಬಾವಿಯ ಕಟ್ಟಡ ಪೂರೈಸಿ, ಪಂಪ್ ರೂಂ ಕಟ್ಟಲಾಗಿತ್ತು. ಅದರಲ್ಲಿ ವಿದ್ಯುತ್‌ ಪಂಪು, ಲೈಟು

 

ಮುಂತಾದವುಗಳನ್ನು ಅಳವಡಿಸಿ ಜೂನ್ 1962ರಲ್ಲಿ ಸರ್ವೀಸು ನೀಡಲಾಯಿತು. ಭಾಗ್ಯದ ಬಾಗಿಲೇ ತೆರೆದಂತಾಗಿ ಮನೆಯಲ್ಲೆಲ್ಲಾ ಸಂತೋಷ ಹೊಮ್ಮಿತು.

(ಮುಂದಿನ ‘ಕಿನ್ನರಿ’ಗೆ)