ಒಂದು ಗಳಿಗೆ -ಕುಚ್ಚಂಗಿ ಪ್ರಸನ್ನ ಅಲೆಲೆ ಕುಚ್ಚಂಗಿಯ ಒನ್ ಬೈ ಟೂ ಕೆರೆಯೂ ಕೋಡಿ ಬಿತ್ತು !!
ಒಂದು ಗಳಿಗೆ -ಕುಚ್ಚಂಗಿ ಪ್ರಸನ್ನ ಅಲೆಲೆ ಕುಚ್ಚಂಗಿಯ ಒನ್ ಬೈ ಟೂ ಕೆರೆಯೂ ಕೋಡಿ ಬಿತ್ತು !!
ಒಂದು ಗಳಿಗೆ
-ಕುಚ್ಚಂಗಿ ಪ್ರಸನ್ನ
ಅಲೆಲೆ ಕುಚ್ಚಂಗಿಯ ಒನ್ ಬೈ ಟೂ ಕೆರೆಯೂ ಕೋಡಿ ಬಿತ್ತು !!
ಕುಚ್ಚಂಗಿ ಕೆರೆ ಕೋಡಿ ಬಿದ್ದಿದೆ. ಅದೇನ್ ಮಹಾ ಇಡೀ ತುಮಕೂರು ಜಿಲ್ಲೆಯ ಎಲ್ಲ ಊರುಗಳ ಕೆರೆಗಳು ಕೋಡಿ ಬಿದ್ದಿದೆ ಅಂತೀರೇನೋ, ಆದರೆ ಹೆತ್ತೋರಿಗೆ ಹೆಗ್ಗಣ, ಕಟ್ಟಿಕೊಂಡೋರಿಗೆ ಕೋಡಂಗಿ ಮುದ್ದು ಎನ್ನುವಂತೆಯೇ ಹುಟ್ಟೂರು ಎಂಬ ಪಟ್ಟ ಪಡೆದ ಊರುಗಳು, ಅದರಲ್ಲೂ ಅವರ ಬಾಲ್ಯವನ್ನು ಹೆಚ್ಚಿನ ಅವಧಿಗೆ ಕಳೆದ ಊರುಗಳು ಅವರವರಿಗೆ ಸ್ವರ್ಗಕ್ಕೆ ಸರಿ ಸಮಾನವೇ ಅಂದರೆ ನೀವ್ಯಾರೂ ಇಲ್ಲ ಅನ್ನಲ್ಲ ಅಂತ ನಂಗೊತ್ತು. ಹಂಗೇ ಕುಚ್ಚಂಗಿ ನನ್ನ ಪಾಲಿಗೆ. ಜೊತೆಗೆ ಕಳೆದ 35 ವರ್ಷಗಳಿಂದ ನಮ್ಮೂರ ಹೆಸರನ್ನು ನನ್ನ ಹೆಸರಿನೊಂದಿಗೆ ಲಗತ್ತು ಮಾಡಿಕೊಂಡಿರುವುದು ಅದೇ ಕೋಡಂಗಿಗೆ ಹೆಂಡ ಕುಡಿಸಿದಂತೆಯೇ ಸರಿ.
ನಮ್ಮೂರಿನಂತೆಯೇ ನಮ್ಮೂರ ಹೆಸರೂ ಕೂಡಾ ತುಸು ವಿಲಕ್ಷಣವಾಗಿದೆ. ಇವತ್ತಿಗೂ ನನ್ನನ್ನು ಕಂಡರಾಗದ ಕೆಲವರು ಅದರಲ್ಲೂ ನನ್ನ ಬರವಣಿಗೆಗೆ ಓದುಗರಿಂದ ಆಗಾಗ ದೊರಕುವ ಮೆಚ್ಚುಗೆ ಕಂಡು ಕರುಬುವ ಕೆಲವು ಸೀನಿಯರ್ ಪತ್ರಕರ್ತರು “ ಏನ್ರೀ ಹುಚ್ಚಂಗಿ” ಅಂತ ಗಂಭೀರ ಕೀಟಲೆ ಮಾಡುತ್ತಾರೆ, ನಾನು ಅವರ ಕಿರಿಕ್ ಅರ್ಥವಾಗದವನಂತೆ “ಅದು ಹು ಅಲ್ಲ ಸಾರ್ ಕು, ಕ ಕೊಂಬು ಕು, ಕೆಯು ಕು” ಅಂತ ಪ್ರತಿ ಸಲವೂ ತಿದ್ದುವ ಪ್ರಯತ್ನ ಮಾಡುತ್ತೇನೆ. ಇನ್ನೂ ಕೆಲವರು ನಿಮ್ಮೂರು ದುರ್ಗ ದಾವಣಗೆರೆ ಹತ್ರ ಬರುತ್ತೆ ಅಲ್ವೇನ್ರೀ ಅಂತಾರೆ, ಆಗಲೂ ಅಷ್ಟೇ ವಿಧೇಯನಾಗಿ, “ ಇಲ್ಲಾ ಸಾ ನಮ್ಮೂರು ತುಮಕೂರು ತಾಲೂಕಿಗೆ , ಕಸಬಾ ಹೋಬಳಿಗೆ ಸೇರಿದೆ, ತುಮಕೂರು ಜಿಲ್ಲಾ ಕೇಂದ್ರಕ್ಕೆ ಕೇವಲ ಐದೇ ಮೈಲಿ ಅಂದರೆ ಒಂಬತ್ತು ಕಿಲೋಮೀಟರ್ ಎನ್ನುತ್ತೇನೆ. ಜೊತೆಗೆ ನಮ್ಮೂರು ಕುಚ್ಚಂಗಿಯನ್ನು ತಲುಪುವುದು ಹೇಗೆ ಅಂತಲೂ ಗೂಗಲ್ ಮ್ಯಾಪಿನ ಲೈವ್ ಲೊಕೇಶನ್ ಥರಾ ರೂಟನ್ನೂ ಹೇಳುತ್ತೇನೆ.
“ ತುಮಕೂರಿನಿಂದ ಕೊರಟಗೆರೆ-ಮಧುಗಿರಿಗೆ ಹೋಗುವ ಹೆದ್ದಾರಿಯಲ್ಲಿ ಈವಾಗ ತರಕಾರಿ ಮಾರ್ಕೆಟ್ ಮಾಡವ್ರಲ್ಲ, ಏಗೇನಹಳ್ಳಿ ಕಟ್ಟೆ ಅದನ್ನು ದಾಟಿ, ಎನ್‌ಹೆಚ್ ಬೈಪಾಸ್ ಸೇತುವೆ ಕೆಳಗೆ ಸೀದಾ ಅಂತರಸನಹಳ್ಳಿ , ಯಲ್ಲಾಪುರ ಆದ ಮೇಲೆ ಟಕ್ಕಂತ ಎಡಕ್ಕೆ ತಗಂಬೇಕು, ಅಲ್ಲೊಂದು ಪೆಟ್ರೋಲ್ ಬಂಕೂ ಐತೆ, ಅಲ್ಲಿಂದ ಅರಕೆರೆ, ಅರಕೆರೆ ಆದ ಮೇಲೆ ತಿಪ್ಪನಹಳ್ಳಿ, ಆಮೇಲೆ ಅರಸಪ್ಪನ ಗುಡ್ಲು (ಗುಡ್ಲು ಅನ್ನಂಗಿಲ್ಲ ಛತ್ರ ಅನ್ನಬೇಕು) ಅದನ್ನು ದಾಟಿದ ತಕ್ಷಣ ಎಡಕ್ಕೆ ಸಿಗೋದೇ ಕುಚ್ಚಂಗಿ ಬೋರ್ಡ್ ಗಲ್ಲು , ಆ ಬೋರ್ಡ್ ಗಲ್ಲಿನ ಎದುರು ನಿಂತು ನೋಡಿದರೆ ದೊಡ್ಡದೊಂದು ಬಸವನೋ, ಸಿಂಹವೋ ಮಲಗಿದಂತೆ ಬೆಟ್ಟ ಕಾಣುತ್ತೆ. ಅದೇ ನಮ್ಮೂರ ಸ್ಟಾಪು, ಈಗಂತೂ ಸಿವಿಲ್ ಬಸ್ ಜೊತೆಗೆ ಸಿಟಿ ಬಸ್ಸೂ ಓಡಾಡ್ತವೆ, ನಮ್ಮೂರ ಜನ ಅಂತೂ ಮೊದಲಿಂದಲೂ ಬಸ್ಸುಗಳನ್ನು ಹೆಚ್ಚು ಕಾದವರಲ್ಲ. ಯಾಕಂದ್ರೆ ಅವು ನಮ್ಮೂರ ಬೋರ್ಡ್ ಗಲ್ಲಿನ ಹತ್ರ ನಿಲ್ಲಿಸ್ತಾನೇ ಇರಲಿಲ್ಲ. ಹಂಗಾಗಿ ಬಹುಪಾಲು ಜನ ಸೈಕಲ್ ಹತ್ತೋರು, ಈಗಂತೂ ಎಲ್ಲ ಬೈಕು, ಸ್ಕೂಟರ್ , ತೀರಾ ಕಡೇ ಪಕ್ಷ ಅಂದರೆ ಟಿವಿಎಸ್ ಆದರೂ ಇಟ್ಕಂಡವರೆ, ಕಾರುಗಳೂ ಸಾಕಷ್ಟು ಸಂಖ್ಯೆಯಲ್ಲಿ ನಮ್ಮೂರಲ್ಲಿ ಧೂಳೆಬ್ಬಿಸಿಕೊಂಡು ಓಡಾಡ್ತವೆ. ನಾನು ಪ್ರೈಮರಿ, ಮಿಡ್ಲ್ ಸ್ಕೂಲ್ ಹಾಗೂ ಹೈಸ್ಕೂಲ್ ಹುಡುಗನಾಗಿದ್ದಾಗ ಹುಟ್ಟಿದ ಹುಡುಗರು ಈಗ ಊರಿನ ಯಜಮಾನಿಕೆ ಮಾಡೋವಷ್ಟು ದೊಡ್ಡವರಾಗಿ ಅಪ್ಪ ಅಮ್ಮನ ಹಂಗನ್ನು ದಾಟಿ ಸ್ವಂತ ದುಡಿಮೆ ಮಾಡುತ್ತ ಬೆಳೆದಿದ್ದಾರೆ.
ಇಂಥಾ ಕುಚ್ಚಂಗಿ ಎಂಬ ಊರಲ್ಲಿ ನನ್ನ ಬಾಲ್ಯ ಕಳೆಯಿತು. ಕುಚ್ಚಂಗಿ ನನ್ನ ಹುಟ್ಟೂರಲ್ಲ, ನಾನು ಹುಟ್ಟಿದ್ದು ಗುಬ್ಬಿ ತಾಲೂಕಿನ ಕೊನೇ ಅಂಚಿನಲ್ಲಿರುವ ಹನ್ನೆರಡನೇ ಶತಮಾನದ ಶರಣರ ಹಿರಿಯ ಸಿದ್ಧರಾಮರ ತಪೋವನ ಇರುವ ಕಾರೇಖುರ್ಚಿ ಎಂಬ ಕಗ್ಗಾಡಿನಲ್ಲಿ. ಮ್ಯಾಂಗನೀಸ್ ಮತ್ತು ಕಬ್ಬಿಣದ ಅದಿರಿನ ಸಂಪತ್ಭರಿತ ಗುಡ್ಡಗಳ ಸಾಲಿನಲ್ಲಿ.ಈಗ ಅಲ್ಲೂ ಈ ಗಣಿ ಧಣಿಗಳು ಇಡೀ ಗುಡ್ಡ ಸಾಲನ್ನು ಹೆಗ್ಗಣಗಳಂತೆ ಅಗೆದು ಅಂಗಳ ಮಾಡಿಬಿಟ್ಟಿದ್ದಾರೆ.
ನನ್ನ ಬಾಲ್ಯ ಎಂದರೆ ನನಗೆ ಚೆನ್ನಾಗಿ ನೆನಪಿರುವ 1973ರ ನಂತರದ ವರ್ಷಗಳು. ಆಗ ನಾನು ಮೂರನೇ ಕ್ಲಾಸಿನಲ್ಲಿದ್ದೆ. ನಮ್ಮಪ್ಪ ವಿಧಾನ ಸೌಧದ ಸಿಬ್ಬಂದಿಯಾಗಿ ಮೊದಲ ಒಂದೆರಡು ವರ್ಷ ಬೆಂಗಳೂರಿನಲ್ಲೇ ವಾಸವಿದ್ದು, ಬೆಂಗಳೂರಿನ ನೀರು, ಗಾಳಿ ಒಗ್ಗಲಿಲ್ಲ ಎನ್ನುವುದಕ್ಕಿಂತ ಊರಿನ ಜಮೀನಿನ ಕಡೆಯ ಗೀಳು ಜಾಸ್ತಿಯಾಗಿ, ತುಮಕೂರಿನಲ್ಲಾದರೂ ವಾಸವಿದ್ದರೆ ವಾರಕ್ಕೊಂದು ಸಲವಾದರೂ ಅವರ ಅಪ್ಪನ ಅಮ್ಮ ರುದ್ರಮ್ಮಜ್ಜಿ ಮಾಡಿದ್ದ ಜಮೀನನ್ನು ನೋಡಿಕೊಳ್ಳಬಹುದು ಎಂಬ ಕಕ್ಕುಲಾತಿಯಿಂದ ನಮ್ಮಪ್ಪ ಕುಟುಂಬವನ್ನು ತುಮಕೂರಿನ ಸೋಮೇಶ್ವರಕ್ಕೆ ತಂದು ಬಿಟ್ಟು, ಅವರು ದಿನವೂ ರೈಲತ್ತಿ ವಿಧಾನಸೌಧಕ್ಕೆ ಹೋಗಿ ಬರತೊಡಗಿದರು.
ಇನ್ನು ಮುಂದೆ ಊರು ಅಂದರೆ ಕುಚ್ಚಂಗಿ, ಹೂಂ ಅನ್ನಿ, ಊರಿನಲ್ಲಿ ನಮ್ಮ ಅಪ್ಪನ ಅಕ್ಕ ಅಂದರೆ ನಮ್ಮ ಸೋದರತ್ತೆ ಗಂಗಮ್ಮ ಇತ್ತು, ಗಂಗಮ್ಮನ ಪತಿದೇವರು ದೊಡ್ಡಯ್ಯ ಎಂದೇ ಫೇಮಸ್ ಆಗಿದ್ದ ಹೊಟ್ಟೆ ನಂಜುಂಡಪ್ಪ, ಅವರ ಮಗ ನಮ್ಮ ಮಾಮ ತಿಮ್ಮೇಗೌಡ, ಇವರ ದಾಯಾದಿಗಳ ಮೂರು ಮನೆಗಳು ನಮಗೆ ಹತ್ತಿರದ ಸಂಬಂಧವಾಗಿ ಅಲ್ಲಿದ್ದವು. ಉಳಿದಂತೆ ನಮ್ಮವರೇ ಆದ ಹತ್ತು ಹನ್ನೆರಡು ಮನೆಗಳು, ಅದೇ ಸಮಕ್ಕೆ ಕುರುಬರ 20 ಮನೆಗಳು, ಆಂಜನೇಯನ ಪೂಜೆ ಮಾಡುತ್ತಿದ್ದ ಒಂದು ವೈಷ್ಣವರ ಮನೆ, ಜಾತಕ ಬರೆದುಕೊಡುತ್ತಿದ್ದ ಒಂದು ಆಚಾರರ ಮನೆ, ಎರಡೇ ಎರಡು ಜೈನರ ಮನೆ, ಒಂದು ಮಡಿವಾಳರ ಮನೆ, ಜೊತೆಗೆ ಊರ ದಕ್ಷಿಣಕ್ಕೆ ತಲಾ ಹತ್ತತ್ತು ಮನೆಗಳಿದ್ದ ಮಾದಿಗರ ಹಾಗೂ ಹೊಲೇರ ಹಟ್ಟಿ, ಅವತ್ತಿಗೆ ಇಷ್ಟೇ ನಮ್ಮೂರು. ಇವತ್ತಿಗೂ ಅಷ್ಟೇ ಅವೇ ಮನೆಗಳಲ್ಲಿ ಮಕ್ಕಳು ಎದ್ದುಕೊಂಡು ಒಂದೆರಡು ಮನೆಗಳು ಹೆಚ್ಚಿಗೆ ಆಗಿವೆ ಅಷ್ಟೇ. ಆಶ್ರಯ ಸ್ಕೀಮಿನಲ್ಲಿ ಒಂದಷ್ಟು ಸೈಟುಗಳನ್ನು ವಿಂಗಡಿಸಿ ಹಂಚಿದ್ದರಿಂದ ಊರ ಉತ್ತರಕ್ಕೆ ಮೆಳೆಹಳ್ಳಿ-ರಾಮಗೊಂಡನಹಳ್ಳಿಗೆ ಹೋಗುವ ದಿಕ್ಕಿನಲ್ಲಿ ಒಂದಷ್ಟು ಮನೆಗಳು ಎದ್ದು ನಿಂತಿವೆ.
ಇಷ್ಟು ಪುಟ್ಟದಾದ ನಮ್ಮೂರಿನಲ್ಲಿ ನನ್ನ ಬಾಲ್ಯದಲ್ಲಿ ನಾನು ನಮ್ಮತ್ತೆಯ ಅತಿ ಮುದ್ದಿನ ಕಣ್ಮಣಿಯಾಗಿದ್ದೆ, ಶಿಸ್ತಿನ ಸಿಪಾಯಿ ನಮ್ಮಪ್ಪನ ಖಡ್ಗದಂತ ಕೈ ಏಟುಗಳಿಂದ ಬಚಾವಾಗಲು ನಮ್ಮತ್ತೆಯ ಸೀರೆಯ ಮರೆ ಬಿಟ್ಟರೆ ಬೇರೆ ಯಾವ ಆಸರೆಯೂ ಗ್ಯಾರಂಟಿ ಇರಲಿಲ್ಲ. ನಾನು ಶನಿವಾರ ಮಧ್ಯಾಹ್ನವೇ ತುಮಕೂರಿಗೆ ಸೈಕಲ್ಲಿನಲ್ಲಿ ಬರುತ್ತಿದ್ದ ಯಾರ ಜೊತೆಯಲ್ಲೋ, ಕೆಲವೊಮ್ಮೆ ಬಸ್ಸಿನಲ್ಲೋ, ದೊಡ್ಡವನಾದಂತೆ ನಾನೇ ಹೊರಪೆಟ್ಲು ತುಳಿದುಕೊಂಡು ನಮ್ಮ ಸೈಕಲ್ಲಿನಲ್ಲೋ ಊರಿಗೆ ಬಂದು ಬಿಟ್ಟಿರುತ್ತಿದ್ದೆ. ಶನಿವಾರ ಅರ್ಧ ದಿನ, ಭಾನುವಾರ ಇಡೀ ದಿನ, ಕೆಲವೊಮ್ಮೆ ಶ್ರಾವಣದಲ್ಲಿ ಶ್ರಾವಣ ಸೋಮವಾರ, ಕಡೇ ಕಾರ್ತೀಕ, ಇವತ್ತು ಅವರ್ಯಾರೋ ಆಂಜನೇಯಂಗೆ ಎಲೆ ಪೂಜೆ ಕಟ್ಟಿಸ್ತಾರಂತೆ, ಇನ್ಯಾರದೋ ಮನೇಲಿ ಒಸಗೇ ಹಿಂಗೆ ಹೊಸ ಹೊಸ ನೆವಗಳನ್ನು ಹುಡುಕಿಕೊಂಡು ಸೋಮವಾರ ಸಂಜೆಗೇ ತುಮಕೂರಿಗೆ ವಾಪಸ್ ಬರುತ್ತಿದ್ದುದು. ರಾತ್ರಿ ನಮ್ಮಪ್ಪ ರೈಲಿಳಿದು ಮನೆ ತಲುಪುವ ಮುನ್ನ ನಾನು ಹಳಬನಾಗಿಬಿಟ್ಟಿರುತ್ತಿದ್ದೆ. “ ಯಾವಾಗ ಬಂದೋ” ಅಂತ ನಮ್ಮಪ್ಪ ಕೇಳಿದ ತಕ್ಷಣ ನಮ್ಮಮ್ಮ ‘ ಬೆಳಿಗ್ಗೇನೇ ಬಂದಾ ಕಣ್ರೀ’ ಸ್ಕೂಲ್‌ಗೂ ಹೋಗಿ ಬಂದ’ ಅಂತ ಮೈ ಹಾಕಿಕೊಂಡು ಬಿಡುತ್ತಿತ್ತು.
ನಮ್ಮೂರಿನ ನಮ್ಮ ಊರ ಹಿಂದಲ ಜಮೀನಿನಲ್ಲಿ ಒಂದು ದೊಡ್ಡ ಮತ್ತು ಇನ್ನೆರಡು ಸುಮಾರಾದ ಹಲಸಿನ ಮರಗಳಿದ್ದವು. ದೊಡ್ಡದು ಎಂದರೆ ಎಷ್ಟು ದೊಡ್ಡದೆಂದರೆ ನೆಲದಲ್ಲಿ ಹರಡಿಕೊಳ್ಳುವ ಕಾಯಿಗಳೂ ಸೇರಿ ಒಂದು ಸಾವಿರ ಹಲಸಿನ ಹಣ್ಣುಗಳನ್ನು ಆ ಮರ ಪ್ರತಿ ವರ್ಷ ಬಿಡುತ್ತಿತ್ತು. ಅಲ್ಲದೇ ನಮ್ಮೂರಲ್ಲಿ ತಿನ್ನುವ ಪದಾರ್ಥಕ್ಕೆ ಅಷ್ಟೋಂದು ಕಟ್ಟುನಿಟ್ಟು ಇರಲಿಲ್ಲ. ಹಣ್ಣು ಅಂದ ಮೇಲೆ ಯಾರು ತಿಂದರೆ ಏನು ಎನ್ನುವ ಔದಾರ್ಯ. ಈಗ ಹೆಂಗಿದೆಯೋ ಗೊತ್ತಿಲ್ಲ. ಹಂಗಾಗಿ ಕಣಗಾಲ ಮುಗಿದ ಮೇಲೆ ನಮ್ಮ ಹಲಸಿನ ಮರದ ನೆರಳಲ್ಲಿ ಯಾರಾದರೂ ಇದ್ದೇ ಇರುತ್ತಿದ್ದರು. ಇಡೀ ಮರವನ್ನು ಬಳಸುವ ಹೊತ್ತಿಗೆ ಎಲ್ಲೋ ಹಣ್ಣಿನ ಘಮ್ಮಲ ಮೂಗಿಗೆ ತಲುಪಿ,ಮರ ಹತ್ತುವವರನ್ನು ಕಾಡಿ ಬೇಡಿ, ನೋಡು ಅಲ್ಲಿರಬೇಕು, ನೋಡು ಇದಿರಬೇಕು ಅಂತ ಇಡೀ ಮರವನ್ನು ಜಾಲಾಡಿಸಿ, ಹಣ್ಣು ಕೆಡವಿಸಿಕೊಂಡು, ಅಲ್ಲೇ ಬಿಡಿಸಿ ತಿನ್ನುತ್ತ ಕೂತುಬಿಡುತ್ತಿದ್ದೆ. ಜೊತೆಗೆ ಅದೇ ಮಾವಿನ ಹಣ್ಣಿನ ಕಾಲವೂ ಆಗಿದ್ದು, ಊರವರ ಯಾರದೇ ಮಾವಿನ ಮರದಲ್ಲಿ ಹಣ್ಣು ಗಿಣಿ ಕೊರೆದು ಕೆಳಗೆ ಬಿದ್ದಿದ್ದರೆ, ಜೋರಾಗಿ ಗಾಳಿ ಬೀಸಿ ಕೆಳಗೆ ಉದುರಿದ್ದರೆ ಅಂಥ ಹಣ್ಣುಗಳ ಮೇಲಿನ ಆಜನ್ಮ ಸಿದ್ಧ ಹಕ್ಕು ನನ್ನಂಥ ಹುಡುಗರದೇ ಹೊರತು ಮರಗಳ ಮಾಲೀಕರದಾಗಿರುತ್ತಿರಲಿಲ್ಲ.
ಬೇಸಿಗೆ ಆಖೈರಿಗೆ ಒಂದೆರಡು ಮಳೆ ಬಿದ್ದ ನಂತರ ಜಮ್ಮುನೇರಳೆ ಹಣ್ಣು ಗುತಿ ಗುತಿ ಸಿಗುತ್ತಿದ್ದವು. ದಪ್ಪಕ್ಕೆ ಉದ್ದಕ್ಕೆ ಇರುವ ನೇರಳೆ ಜಮ್ಮು ನೇರಳೆ ಅಂದರೆ ಜಂಬು ನೇರಳೆ, ಜಂಬೂ ಫಲ, ಅದೇ ಜಾತಿಗೆ ಸೇರಿದ ಗುಂಡನೆ ಗೋಲಿಯಂತ ನೇರಳೆ ಹಣ್ಣನ್ನು ನಾಯಿ ನೇರಳೆ ಅನ್ನುತ್ತಿದ್ದೆವು. ಎರಡರಲ್ಲಿ ಯಾವ ನೇರಳೆಯಾದರೂ ಸರಿ ನೆಲಕ್ಕೆ ಬಿದ್ದ ನೇರಳೆ ಹಣ್ಣುಗಳನ್ನೆಲ್ಲ ಆಯ್ದು ತಂದು ಒಂದು ಗಂಗಳಕ್ಕೆ ಹಾಕಿ ತೊಳೆದು ಉಪ್ಪು ಬೆರೆಸಿ ಒಂದಷ್ಟು ಹೊತ್ತು ಇಕ್ಕಿ,ನಂತರ ಬಾಯಿಗೆ ತುರುಕಿಕೊಳ್ಳುತ್ತಿದ್ದುದೇ ಕೆಲಸ. ನಾಲಿಗೆಯಲ್ಲ ನೀಲಿಯಾಗಿ, ಕೈಗಳಿಗೆ ಹತ್ತಿದ ನೇರಳೆಯ ಬಣ್ಣ ಬನೀನುಗಳಿಗೂ ಹರಡಿ ನಮ್ಮಪ್ಪನ ಹತ್ತರ ಒಂದೆರಡು ಒದೆ ಹೆಚ್ಚೇ ತಿನ್ನಲು ತಯಾರಾಗಬೇಕಿತ್ತು.
ಮಾವು, ಹಲಸು ಸಾಕು ಅಂತ ಅನ್ನಿಸಿದರೆ ಚಿಕ್ಕಮ್ಮನ ಗುಡಿ ಹಿಂದೆ ತಿಪ್ಪೆ ಮಡಿಲಲ್ಲಿದ್ದ ಬೇಲದ ಮರದ ಕೆಳಗೆ ಹಣ್ಣಾಗಿ ತಾವೇ ಬಿದ್ದಿರುತ್ತಿದ್ದ ಬೇಲದ ಹಣ್ಣಿನತ್ತ ನನ್ನ ಚಿತ್ತ ಹರಿಯುತ್ತಿತ್ತು. ತಿಪ್ಪೆ ಗುಂಡಿಯಲ್ಲಿ ವರ್ಷದಿಂದ ದಿನವೂ ಕಸ ಬಳಿದು ಹಾಕಿರುತ್ತಿದ್ದ ಕುರಿ ಪಿಚ್ಚಿಕೆ ಹಾಗು ದನಗಳ ಸಗಣಿಯ ಮಾಗಿದ ವಿಶಿಷ್ಟ ಮಿಶ್ರಣದ ವಾಸನೆಯೊಳಗೆ ಬೇಲದ ಹಣ್ಣಿನ ಘಮ್ಮಲವನ್ನು ಪತ್ತೆ ಹಚ್ಚುವಷ್ಟು ನನ್ನ ಮೂಗು ಚುರುಕಾಗಿರುತ್ತಿತ್ತು. ತೀರಾ ಹಣ್ಣು ಸಿಕ್ಕದೇ ಹೋದರೆ ಅವರಿವರ ಜೊತೆ ಸೇರಿ ಕಲ್ಲೋ ಕಡ್ಡಿಯನ್ನೋ ಹೊಡೆದು ಬೇಲದ ಕಾಯಿಗಳನ್ನೇ ಕೆಡವಿಕೊಂಡು, ಸೀತನ ಬಳಿಯೋ ಕೌಸಲ್ಯೆಯ ಬಳಿಯೋ ಹೋಗಿ ತುರಿಸಿ, ಹಸಿ ಮೆಣಸಿನಕಾಯಿ ಉಪ್ಪು ಹಾಕಿ ನುರಿಸಿಕೊಂಡು ತಿಂದರೇ ನಾಲಿಗೆಗೆ ಸಮಾಧಾನವಾಗುತ್ತಿದ್ದುದು. ಇವೆಲ್ಲ ಇನ್ನೂ ಬೇಜಾರಾಗಿಹೋದಾಗ ತೋಟದ ಸಾಲಿನ ಬಿಕ್ಕೆ ಕಾಯಿ ( ಅವು ಹಣ್ಣಾಗುವತನಕ ನಮ್ಮಂತ ಕೋತಿಗಳು ಬಿಟ್ಟಿರುತ್ತಿರಲಿಲ್ಲವಲ್ಲ), ಗಾಣಿಕ ಹಣ್ಣುಗಳು ಬೇರೆ ಇರುತ್ತಿದ್ದವಲ್ಲ. ಜೊತೆಗೆ ‘ಗಿಡ’ದಲ್ಲಿ ಸಿಗುತ್ತಿದ್ದ ಕಾರೆಕಾಯಿಗಳನ್ನು ತಂದು ಜರಡಿಯಲ್ಲಿ ಕಲ್ಲರಳು, ಕುರಿ ಪಿಚ್ಚಿಕೆ ಹಾಕಿ ಕೆಲ ದಿನ ಬಿಟ್ಟರೆ ಒಂದೊಂದೇ ಹಳದಿ ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗಿ ನಾಲಿಗೆಗೆ ತಿಕ್ಕಿಕೊಳ್ಳಲು ಲಾಯಕ್ಕಾಗಿರುತ್ತಿದ್ದವು. ‘ಗಿಡ’ ಅಂದರೆ ನಮ್ಮೂರ ಎದುರು ಗುಂಡಗಲ್ ಬೆಟ್ಟವನ್ನು ಆವರಿಸಿಕೊಂಡಿದ್ದ ಪ್ಲಾಂಟೇಶನ್ ಕಾಡು, ಆ ಕಾಡಿನಲ್ಲಿದ್ದ ಕೆಲವು ಗೋಡಂಬಿ ಮರದ ಹಣ್ಣುಗಳು ಮತ್ತು ಅವುಗಳ ಬೀಜವನ್ನು ಆಯ್ದು ತಂದು ಹಂಡೆ ಒಲೆಗೆ ಹಾಕಿ ಸುಟ್ಟು ಚಚ್ಚಿ ತಿನ್ನುತ್ತಿದ್ದೆವು. ಗೋಡಂಬಿ ಬೀಜವನ್ನು ಚೆನ್ನಾಗಿ ಸುಡದೇ ಹೋದರೆ ಅದರಲ್ಲಿನ ಎಣ್ಣೆಯಂಶ ತುಟಿಗೆ ಸೋಕಿ ಹುಣ್ಣಾಗುತ್ತಿದ್ದುದೂ ಉಂಟು. ನನ್ನ ಈ ಎಲ್ಲ ಸಮಾರಾಧನೆಗೆ ನಮ್ಮ ಅತ್ತೆ ಮನೆಯಲ್ಲಿದ್ದ ಆಳು ಕರೀಮ ಹಾಗು ನಮ್ಮ ಜಮೀನನ್ನು ವಾರಕ್ಕೆ ಮಾಡುತ್ತಿದ್ದ ಗುಟ್ಟೆ ಲಕ್ಕವ್ವನ ಮಗ ಚಿಕ್ಕನರಸ ಸಾಥಿಯಾಗಿರುತ್ತಿದ್ದರು.
ಅವರಿವರ ಹಿತ್ತಲಲ್ಲಿರುತ್ತಿದ್ದ ಪಪ್ಪಾಯ ಅಷ್ಟೇನೂ ನಮಗೆ ಹಿತ ಎನಿಸುತ್ತಿರಲಿಲ್ಲವಾಗಿ, ದ್ವಾರ ಹುಣಿಸೆ ಹಣ್ಣು ಒಳ್ಳೇ ಐಸ್ ಕ್ರೀಮ್ ತರ ಅನ್ನಿಸಿ ಚೀಪೀ ಚೀಪೀ ನಾಲಗೆಯೆಲ್ಲ ಹುಣ್ಣೆದ್ದು ಹೋಗಿ ಊಟ ಮಾಡುವಾಗ ಸಾರನ್ನು ನಾಲಿಗೆಗೆ ಸೋಕಿಸಿದರೆ ಸುರ್ ಎಂದು ಬಿಡುತ್ತಿತ್ತು. ಹುಣಿಸೆ ಹಣ್ಣಿನ ಕಾಲಕ್ಕೆ ಬೆಲ್ಲ, ಜೀರಿಗೆ ಸೇರಿಸಿ ಕುಟ್ಟಿ ಮಾಡುವ ಕುಟ್ಟು ಹುಣಿಸೆಹಣ್ಣನ್ನು ಹಂಚಿ ಕಡ್ಡಿಗೆ ಚುಚ್ಚಿ ಲಾಲಿ ಪಾಪಿನಂತೆ ಚೀಪುತ್ತ ಅಡ್ಡಾಡುತ್ತಿದ್ದೆವು. ದೊಡ್ಡವರಿಗೆ ಕುಟ್ಟು ಹುಣಿಸೆಹಣ್ಣು ಲಾಲಿಪಾಪ್ ಆದರೆ ಎರಡು ವರ್ಷ ತುಂಬಿದ ಕೇವಲ ಬನೀನೋ ಅಂಗಿಯನ್ನೋ ತೊಟ್ಟು ಕೆಳಗೆ ಸಂಪೂರ್ಣ ನಗ್ನರಾಗಿ ಅಡ್ಡಾಡುವ ಮಕ್ಕಳ ಕೈಯಲ್ಲಿ ಆಗ ತಾನೇ ತೊಳೆಸಿದ ಘಮ್ಮನ್ನುವ ಮುದ್ದೆಗೆ ತುಪ್ಪ ಉಪ್ಪು ಮಿದ್ದು ಸಿಕ್ಕಿಸಿ ಕೊಟ್ಟ ಹಂಚಿಕಡ್ಡಿಗಳಿರುತ್ತಿದ್ದವು.
ಈಗ ಕುಚ್ಚಂಗಿ ಕೆರೆ ಕೋಡಿ ಬಿದ್ದಲ್ಲಿಗೆ ವಾಪಸ್ ಬರೋಣ, ನಮ್ಮೂರ ಕೆರೆ ಈಗ ಮೊದಲಿನಂತಿಲ್ಲ, ತುಮಕೂರಿನಿಂದ ರಾಯದುರ್ಗಕ್ಕೆ ಹೋಗುವ ರೈಲ್ವೆ ಮಾರ್ಗವನ್ನು ಅಣ್ಣೇನಹಳ್ಳಿ ಹಾಗೂ ನಮ್ಮೂರ ಗದ್ದೆ ಬಯಲಿನ ಮೂಲಕ ತಂದು ಗುಂಡಗಲ್ಲಿನ ಕಡೆ ತಿರುಗಿಸಿ ಬಿಟ್ಟ ಪರಿಣಾಮ ಈ ರೈಲುಮಾರ್ಗವು ನಮ್ಮೂರ ಕೆರೆಯನ್ನು ಅರ್ಧಕ್ಕೆ ಡಿವೈಡ್ ಮಾಡಿ ಬೈಟೂ ಕೆರೆಗಳನ್ನಾಗಿ ಮಾಡಿಬಿಟ್ಟಿದೆ.
ನನ್ನ ಬಾಲ್ಯದಲ್ಲಿ ನಮ್ಮೂರ ಕೆರೆ ಪ್ರತಿ ಮಳೆಗಾಲಕ್ಕೂ ತುಂಬಿ ಕೋಡಿ ಬೀಳುತ್ತಿತ್ತು, ಪ್ರತಿ ವರ್ಷ ಮಾಡುತ್ತಿದ್ದ ತೆಪ್ಪೋತ್ಸವ ಹಾಗೂ ಗದ್ದೆ ಬಯಲಲ್ಲಿ ಬೆಳೆಯುತ್ತಿದ್ದ ಕಬ್ಬು ಹಾಗೂ ಗಾಣ ಆಡುತ್ತಿದ್ದ ಆಲೆಮನೆಗಳೇ ನನ್ನ ಈ ಮಾತಿಗೆ ಸಾಕ್ಷಿ.
ಮಳೆಗಾಲಕ್ಕೆ ಮುನ್ನ ಯಾರದೋ ಹಿತ್ತಲಿನಲ್ಲಿ ಅದ್ಯಾರೋ ಒಂದು ಹಲಗೆಯ ಮೇಲೆ ಮಾಡಿ ಇರಿಸಿರುತ್ತಿದ್ದ ಮಣ್ಣಿನ ಮೂರ್ತಿಯನ್ನು ಮುಸ್ಸಂಜೆಯಾಗುತ್ತಿದ್ದಂತೆ ನನಗಿಂತ ನೆಗವಾಗಿದ್ದ ಹುಡುಗರು ಹೊತ್ತು ಮನೆ ಮನೆ ಮುಂದೆ ಮೆರವಣಿಗೆ ಮಾಡುತ್ತ, ‘ ಹುಯ್ಯೋ ಹುಯ್ಯೋ ಮಳೆರಾಯನ ಹಾಡು ಹಾಡುತ್ತ ನಿಲ್ಲುತ್ತಿದ್ದರು. ಮನೆಯೊಳಗಿಂದ ಬಂದವರು ಒಂದರ್ಧ ಬಿಂದಿಗೆ ನೀರನ್ನು ಮಳೆರಾಯನನ್ನು ಹೊತ್ತವನ ತಲೆ ಮೇಲೆ ಮಳೆರಾಯನೂ ನೆನೆಯುವಂತೆ ಹುಯ್ಯುತ್ತಿದ್ದರು. ಮಳೆರಾಯನ ಗುಂಪಲ್ಲಿದ್ದವರು ಹಿಡಿದು ತಂದಿರುತ್ತಿದ್ದ ಸೂಪರ್ ಚೀಲಗಳಿಗೆ ಹಸಿಟ್ಟು (ರಾಗಿ ಮುದ್ದೆ ಅಲ್ಲ, ಮುದ್ದೆ ಅಂದರೆ ಪಾತ್ರೆಯಲ್ಲಿ ಊಟಕ್ಕೆಂದು ಬೇಯಿಸಿದ್ದು, ಹಸಿಟ್ಟು ಅಂದರೆ ರಾಗಿ ಫ್ಲೋರ್), ಒಣವರೆ ಕಾಳು, ಕರಿಮಣಿ ಕಾಳು, ಉಳ್ಳಿಕಾಳು (ತೊಗರಿ ಬೇಳೆ ಅಪರೂಪ)ಗಳನ್ನು ಮೊರದಲ್ಲಿ ತಂದು ಸುರಿಯುತ್ತಿದ್ದರು. ಈ ಸಾಮಗ್ರಿಗಳನ್ನೆಲ್ಲ ಕೂಡಿಟ್ಟುಕೊಂಡು ನಮ್ಮೂರ ಕೆರೆಯ ಕೋಡಿಯ ಬುಡದಲ್ಲಿದ್ದ ಕಲ್ಲೇಶನ ಗುಡಿ ಹತ್ರ ಒಂದು ದಿನ ಊರವರೆಲ್ಲರೂ ಸೇರಿ ಮುದ್ದೆ, ಕಾಳು ಸಾರು, ಅನ್ನ ಮಾಡಿ ಸಾಲಾಗಿ ಕೂರಿಸಿ ಬಡಿಸುತ್ತಿದ್ದರು. ಏರಿ ಮ್ಯಾಲೆ ಮಣ್ಣು ಇರುತಿತ್ತಲ್ಲ, ಕುಂಡಿ ಅಡೀಕೆ ಒಂದು ಅಡಿಕೆ ಪಟ್ಟೆ , ಹಗಲಿಗೆ ಅಂದರೆ ಊಟ ಹಾಕಿಸಿಕೊಳ್ಳಲು ಒಂದು ಅಡಿಕೆ ಪಟ್ಟೆ ಕೊಡಬೇಕಿತ್ತು.
ತೆಪ್ಪೋತ್ಸವ ಮಾಡುವ ದಿನ ಆಂಜನೇಯನ ಗುಡಿಯೊಳಗಿದ್ದ ಗಂಗಾಧರೇಶ್ವರ ಹಿತ್ತಾಳೆ ಮುಖವಾಡವನ್ನು ನಮ್ಮ ತಲೆಗಳಿಗೇ ಹಾಕಿಕೊಂಡು ಸೀನೀರಿನ ಬಾವಿ ಬಳಿ ಕೆರೆ ಭಾಗಕ್ಕೆ ಒಯ್ದು ಉಪ್ಪು ಹುಣಿಸೆ ಹಣ್ಣು ಹಾಕಿ ತಿಕ್ಕಿ ತಿಕ್ಕಿ ಚಿನ್ನದಂತೆ ಹೊಳೆಯುವಂತೆ ಮಾಡುತ್ತಿದ್ದೆವು. ಹದಿನಾರು ದೊಡ್ಡ ದೊಡ್ಡ ಆಯಿಲ್ ಡ್ರಮ್‌ಗಳನ್ನು ಕಟ್ಟಿ ಅದರ ಮೇಲೆ ಹಲಗೆ ಹಾಗೂ ಅಡಿಕೆ ದಬ್ಬೆಗಳನ್ನು ಹೆಣೆದು ತೆಪ್ಪ ತಯಾರು ಮಾಡುತ್ತಿದ್ದರು. ತುಂಬಿದ ಕೆರೆಯೊಳಗೆ ಪೆಟ್ರೋಮ್ಯಾಕ್ಸ್ ಬೆಳಕಿನಲ್ಲಿ ಚಲಿಸುತ್ತಿದ್ದ ತೆಪ್ಪವು ಈಗಲೂ ನನ್ನ ಕಣ್ಣ ಮುಂದೆಯೇ ಚಲಿಸುತ್ತಿರುವಂತೆ ಕಾಣುತ್ತದೆ. ಚಿಕ್ಕವರಾದ ನಮ್ಮನ್ನು ತೆಪ್ಪದಲ್ಲಿ ಅದೂ ಇರುಳಲ್ಲಿ ಹತ್ತಲು ಬಿಡುತ್ತಿರಲಿಲ್ಲವಾಗಿ, ಮಾರನೇ ಬೆಳಿಗ್ಗೆ ದಡಕ್ಕೆ ತಂದು ಆ ತೆಪ್ಪವನ್ನು ಬಿಚ್ಚುವಾಗ ತೇಲುತ್ತಿದ್ದ ಬಿಡಿ ಬಿಡಿ ಡ್ರಮ್‌ಗಳ ಮೇಲೆ ಹತ್ತಿ ಕುಳಿತು ತೇಲಿದ್ದೇ ತೇಲಿದ್ದು.
ಮೊನ್ನೆ ಹೋದವಾರ ನಮ್ಮೂರ ಕೆರೆ ಅಂದರೆ ಕುಚ್ಚಂಗಿ ಕೆರೆ ಕೋಡಿ ಬಿದ್ದಿದೆ. ಈ ಸಲವಾದರೂ ತೆಪ್ಪೋತ್ಸವ ಮಾಡುತ್ತೀರ ಅಂತ ನಮ್ಮ ತಿಮ್ಮೇಗೌಡ ಮಾಮನನ್ನು ಕೇಳಿದೆ, ಮಾಮ ತನ್ನ ಎಂದಿನ ಸ್ಟೈಲಿನಲ್ಲಿ ಕೈಗಳನ್ನು ತಿರುವುತ್ತ ‘ ಹೆಂಗೋ , ನೋಡಬೇಕಪ್ಪ, ಅದ್ಯಾರೋ ಎಂಎಲ್‌ಎ ಕಡೆಯವರು ಆಗಲೇ ಬಂದು ದೊಡ್ಡೇಗೌಡರ ಮನೆ ಹತ್ರ ಮೀಟಿಂಗ್ ಮಾಡಿ ಹೋಗವರಂತೆ, ಅದೆಂತದೋ ಬಾಗಿನ ಬಿಡ್ತಾರಂತಪ್ಪ” ಅಂತು.