ಬಾಪೂ,  ನಿಮ್ಮೊಡನೆ ಮಾತನಾಡುವುದಿದೆ ...,  ನಾ ದಿವಾಕರ

ಬಾಪೂ, ನಿಮ್ಮೊಡನೆ ಮಾತನಾಡುವುದಿದೆ ..., ನಾ ದಿವಾಕರ

ಬಾಪೂ,  ನಿಮ್ಮೊಡನೆ ಮಾತನಾಡುವುದಿದೆ ...,    ನಾ ದಿವಾಕರ
ಬಾಪೂ,  ನಿಮ್ಮೊಡನೆ ಮಾತನಾಡುವುದಿದೆ ...,    ನಾ ದಿವಾಕರ

ಬಾಪೂ, 
ನಿಮ್ಮೊಡನೆ ಮಾತನಾಡುವುದಿದೆ ..., 

ಬಾಪೂ, 
ನಿಮ್ಮ ಕನಸಿನ ಭಾರತ ೭೪ ತುಂಬಿ ೭೫ನೆಯ ವರ್ಷಕ್ಕೆ ಕಾಲಿಟ್ಟಿದೆ. ಈ ವರ್ಷದ ಸ್ವಾತಂತ್ರ‍್ಯೋತ್ಸವ ಅಮೃತ ಮಹೋತ್ಸವವನ್ನಾಗಿ ಆಚರಿಸಲಾಗುತ್ತಿದೆ. ನಿಮ್ಮ ಭಾರತ ಸ್ವಾತಂತ್ರ‍್ಯದ ತೊಟ್ಟಿಲಲ್ಲಿರುವಾಗಲೇ ನಿಮ್ಮನ್ನೂ ಕಳೆದುಕೊಂಡ ನತದೃಷ್ಟ ದೇಶ ಇದು. ನೀವು ನಿರ್ಗಮಿಸಿಯೂ ೭೫ ವರ್ಷಗಳಾಗುತ್ತಿವೆ. ನಿಮಗೆ ನಿರ್ಗಮನದ ಹಾದಿ ತೋರಿ ಇಂದಿಗೆ ೭೪ ತುಂಬುತ್ತದೆ. ರಾಜಘಾಟ್‌ನಲ್ಲಿರುವ ನಿಮ್ಮ ಸಮಾಧಿಯತ್ತ ಸಾಧ್ಯವಾದರೆ ಒಮ್ಮೆ ನೋಡಿ. ಎಷ್ಟು ಭಕ್ತಿಯಿಂದ ನಿಮಗೆ ಕೈ ಮುಗಿಯಲಾಗುತ್ತದೆ. ನಿಮ್ಮ ನೆಚ್ಚಿನ “ ವೈಷ್ಣವ ಜನತೋ,,,, ” ಹಾಡಲಾಗುತ್ತದೆ. “ರಘುಪತಿ ರಾಘವ,,,,,,” ಭಜಿಸಲಾಗುತ್ತದೆ. ಸಾಲುಗಟ್ಟಿ ನಿಂತ ವರ್ತಮಾನದ ನೇತಾರರು ನಿಮಗೆ ಗೌರವಪೂರ್ವಕವಾಗಿ ನಮನಗಳನ್ನು ಸಲ್ಲಿಸುತ್ತಾರೆ. 

ಭೂತವನ್ನು ಸ್ಮರಿಸುತ್ತಲೇ ಭವಿಷ್ಯದತ್ತ ಯೋಚಿಸದೆ ನಿಮ್ಮ ಹೆಜ್ಜೆ ಗುರುತುಗಳನ್ನು ವರ್ತಮಾನದಲ್ಲಿಟ್ಟು ನೋಡುವ ನಾಯಕರ ಅಲಂಕಾರಿಕ ಮಾತುಗಳು ಈ ಭಜನೆಗಳಿಗಿಂತಲೂ ಹೆಚ್ಚು ಆಕರ್ಷಣೀಯವಾಗಿ ಕಾಣುತ್ತವೆ. ಏಕೆಂದರೆ ನೀವು ಇನ್ನೂ ಚುನಾವಣೆಯ ಮತಪೆಟ್ಟಿಗೆಗಳಲ್ಲಿ ಜೀವಂತವಾಗಿದ್ದೀರಿ. ನಿಮ್ಮ ಹೆಸರು ಕೊಂಚಮಟ್ಟಿಗಾದರೂ ಮತಗಳಿಸಲು ನೆರವಾಗುತ್ತದೆ. ಏಕೆ ಗೊತ್ತೇ, ಈ ದೇಶದ ಜನರು ನಿಮ್ಮನ್ನು ಮರೆತಿಲ್ಲ. ಪ್ರೀತಿಯಿಂದ ನೆನೆಯುವವರಿಗಿಂತಲೂ ನಿಮ್ಮ ಮೇಲಿನ ದ್ವೇಷದಿಂದ ಸದಾ ನಿಮ್ಮನ್ನೇ ಭಜಿಸುವ ಕೋಟ್ಯಂತರ ಜ್ಞಾನಾರ್ಥಿಗಳನ್ನು(?) ಸ್ವತಂತ್ರ ಭಾರತ ಸೃಷ್ಟಿ ಮಾಡಿದೆ. ರಾಜಕಾರಣಿಗಳಿಗೆ ನೀವು ಅಪ್ಯಾಯಮಾನವೇ ಆದರೆ ಅವರೊಳಗಿನ ಖಳನಾಯಕರಿಗೆ ನೀವು ಬಳಕೆಯ ವಸ್ತುವಾಗಿಬಿಟ್ಟಿದ್ದೀರಿ ಕಾಲಚಕ್ರದ ಮಹಿಮೆಯೇ ?
ಇರಲಿ, ನಿಮ್ಮ ಕನ್ನಡಕದ ಮಸೂರಗಳು ಎಂದೋ ಮಬ್ಬಾಗಿ ಹೋಗಿವೆಯಲ್ಲವೇ ? ಅಥವಾ ಒಡೆದ ಕನ್ನಡಿಯಂತೆ ಛಿದ್ರವಾಗಿದೆಯೇ ? ಒಮ್ಮೆ ನೋಡಿ ಬಾಪೂ, ಸಿರಿವಂತರ ಆಸ್ತಿ, ನವ ಭೂಮಾಲೀಕರ ದಬ್ಬಾಳಿಕೆ, ನಿಮ್ಮ ಆತ್ಮೀಯರಾಗಿದ್ದ ಕಾರ್ಪೊರೇಟ್ ಉದ್ಯಮಿಗಳ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ಅಸ್ಪೃಶ್ಯತೆ ಮತ್ತು ಅಸ್ಪೃಶ್ಯರ ಮೇಲಿನ ದೌರ್ಜನ್ಯಗಳು, ಬಡಜನತೆಯನ್ನು ಕಾಡುವ ಹಸಿವೆ, ಬಡವ-ಶ್ರೀಮಂತರ ನಡುವಿನ ಕಂದರ, ಸಮಾಜದಲ್ಲಿನ ಮೌಢ್ಯ, ಜನರ ಮೂಡನಂಬಿಕೆಗಳು ಎಲ್ಲವೂ ದುಪ್ಪಟ್ಟಾದಂತೆ ಕಾಣುತ್ತಿದೆಯೇ ? ಅದು ನಿಮ್ಮ ಮಸೂರದ ದೋಷ ಎಂದು ಭಾವಿಸಬೇಡಿ, ವರ್ತಮಾನದ ವಾಸ್ತವ. 
ಅಚ್ಚರಿಯಾಗುತ್ತಿದೆಯೇ ಬಾಪೂ, ಈ ದಿನ ನಿಮ್ಮ ಸಮಾಧಿಯ ಮೇಲೆ ಹೂಗುಚ್ಚಗಳನ್ನಿರಿಸಿ ಪ್ರಪಂಚವನ್ನೇ ನಿಮ್ಮ ದೃಷ್ಟಿಯಿಂದ ಮರೆಮಾಡಿಬಿಡುತ್ತಾರೆ. ಆದರೂ ನಿಮಗೆ ಅಂತರ್ ದೃಷ್ಟಿ ಇದೆಯಲ್ಲವೇ ಒಮ್ಮೆ ನೋಡಿ. ದುಪ್ಪಟ್ಟಾಗಿರುವುದು ಭೌತಿಕ ವಸ್ತುಗಳಷ್ಟೇ ಅಲ್ಲ, ವಿಕೃತ ಬೌದ್ಧಿಕ ಸರಕುಗಳೂ ಸಹ. ಮತಾಂಧತೆ, ಕೋಮುವಾದ, ಮತದ್ವೇಷ, ಜಾತಿ ದ್ವೇಷ, ಸ್ತ್ರೀ ದ್ವೇಷ, ಭ್ರಷ್ಟಾಚಾರ, ಪುತ್ರ ವ್ಯಾಮೋಹ, ಅಧಿಕಾರ ದಾಹ ಎಲ್ಲವೂ ೭೫ ವರ್ಷಗಳಲ್ಲಿ ಏರುಗತಿಯಲ್ಲೇ ನಡೆದಿವೆ. ನೀವು ನೌಖಾಲಿಯಲ್ಲಿ ನೋಡಿದ ಹೃದಯ ವಿದ್ರಾವಕ ದೃಶ್ಯಗಳು ಇತಿಹಾಸದ ಗರ್ಭದಲ್ಲಿ ಭೂಗತವಾಗಿಬಿಡುತ್ತದೆ ಎಂದು ನೀವು ನಂಬಿದ್ದೆ ಅಲ್ಲವೆ ? ಹಾಗೇನಿಲ್ಲ ಬಾಪೂ, ೨೦ ವರ್ಷಗಳ ಹಿಂದೆ ಗುಜರಾತ್‌ನಲ್ಲಿ ಮರುಕಳಿಸಿದ್ದನ್ನು ಕಾಣಲಿಲ್ಲವೇ ? ಅದೂ ನಿಮ್ಮ ತವರಿನಲ್ಲೇ!

ನೀವು ಅಂದು ಬಲವಾಗಿ ಸಮರ್ಥಿಸಿದ ಚಾತುರ್ವರ್ಣ ವ್ಯವಸ್ಥೆಯ ಹೊಸ ಆಯಾಮಗಳು ಇಂದು ನಿಮ್ಮನ್ನೇ ಬೆರಗುಗೊಳಿಸುವಷ್ಟು ಮಟ್ಟಿಗೆ ತೆರೆದುಕೊಂಡಿವೆ. “ ನೀವು ನಮ್ಮೊಡನೆಯೇ ಇರಿ, ನಿಮ್ಮ ಸೌಖ್ಯ ನಮ್ಮ ಹೊಣೆ ,,,” ಎಂದು ನೀವು ಅಸ್ಪೃಶ್ಯರಿಗೆ ನೀಡಿದ ಆಶ್ವಾಸನೆಗಳು ಏನಾಯಿತು ಬಾಪೂ ? ಮೂರು ವರ್ಷದ ಹಸುಳೆ ದೇವಸ್ಥಾನದೊಳಗೆ ಹೋದರೆ ಸಹಿಸಲಾರದಷ್ಟು ಮಟ್ಟಿಗೆ “ನಿಮ್ಮ ಜನ ” ಅಸಹಿಷ್ಣುಗಳಾಗಿದ್ದಾರೆ. ಅಂದು ಉಪವಾಸ ಮಾಡಿ ನೀವು ಹಿಡಿದಿಟ್ಟುಕೊಂಡಿರಿ ಆದರೆ ಆ ಶೋಷಿತ ಜನರ ಉಪವಾಸಕ್ಕೆ ಬೆಲೆಯೇ ಇಲ್ಲದಂತಹ ವ್ಯವಸ್ಥೆಯಲ್ಲಿ ನಾವಿದ್ದೇವೆ. ಕೋವಿದ್ ಲಾಕ್ ಡೌನ್ ಸಂದರ್ಭದತ್ತ ಒಮ್ಮೆ ತಿರುಗಿನೋಡಿ ಬಾಪೂ. ರಸ್ತೆಯಲ್ಲೇ ಹಸಿವಿನಿಂದ ಸತ್ತ ನೂರಾರು ವಲಸೆ ಕಾರ್ಮಿಕರತ್ತ ಕಣ್ಣೆತ್ತಿಯೂ ನೋಡದಂತಹ “ ದೇಶಭಕ್ತ ” ಗಣ ಈ ಗಣತಂತ್ರವನ್ನು ಆಳುತ್ತಿದೆ. ನೀವು ಪೂಜಿಸುವ ಪವಿತ್ರ ಗಂಗೆಯಲ್ಲಿ ತೇಲಿಬಂದ ನೂರಾರು ಅನಾಥ ಶವಗಳಿಗೆ, ಆಮ್ಲಜನಕದ ಕೊರತೆಯಿಂದ ಸತ್ತ ದೇಹಗಳಿಗೆ ಅಸ್ಮಿತೆಗಳಿರಲಿಲ್ಲ ಹಾಗಾಗಿ ಎಲ್ಲವೂ ನಿಗೂಢ ಜಗತ್ತಿನಲ್ಲಿ ಮರೆಯಾಗಿಬಿಟ್ಟವು. ರಣಹದ್ದುಗಳನ್ನು ಹೊರತುಪಡಿಸಿ, ಯಾರೂ ಗಮನಿಸಿದಂತೆ ಕಾಣಲಿಲ್ಲ. 

ಅವಾಸ್ತವಿಕವಾದರೂ ನೀವು ಶೋಷಿತರಲ್ಲಿ ದೇವರನ್ನೇ ಕಂಡಿರಿ. ಶೋಷಿತ ಜನರು ಇಂದು ಮತ್ತೊಮ್ಮೆ ಜಾತಿ ದ್ವೇಷಕ್ಕೆ ಬಲಿಯಾಗುತ್ತಿದ್ದಾರೆ. ಅವರ ಪಾಲಿಗೆ ಸಂವಿಧಾನವೇ ದೇವರು. ಕ್ಷಣಕ್ಕೊಬ್ಬ ದಲಿತ ಮಹಿಳೆ ಅತ್ಯಾಚಾರಕ್ಕೊಳಗಾಗುತ್ತಿದ್ದಾಳೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಸಮಾಜವೇ ಸುಟ್ಟುಹಾಕುತ್ತಿದೆ. ನೀವು ಹಾಕಿಕೊಟ್ಟ ಮಾರ್ಗದಲ್ಲೇ ಇಂದಿನವರೂ ಅವರ ಕೇರಿಗಳಿಗೆ ಹೋಗುತ್ತಾರೆ, ಅವರೊಡನೆ ಊಟ ಮಾಡುತ್ತಾರೆ ಆದರೆ ಕೇರಿಗಳ ಹೆಣ್ಣುಮಕ್ಕಳನ್ನು ಕಾಪಾಡುವತ್ತ ಯೋಚಿಸುವುದೂ ಇಲ್ಲ. ಅತ್ಯಾಚಾರಿಗಳಿಗೆ ಶಿಕ್ಷೆಯೂ ಆಗುವುದಿಲ್ಲ. ಅವರ ಚರ್ಮ ಸುಲಿದವರು, ಮನೆಗಳನ್ನು ಸುಟ್ಟವರು, ಕೊಂದವರು, ಜೀವಂತ ದಹನ ಮಾಡಿದವರು ಎಲ್ಲರೂ ಅಧಿಕಾರ ಕೇಂದ್ರಗಳಲ್ಲಿದ್ದಾರೆ, ಬಹುಶಃ ಇಂದು ಅವರೂ ನಿಮಗೆ ವಂದಿಸುತ್ತಿರಬಹುದು. ಮತ್ತೊಂದು ಸುಡು ವಾಸ್ತವ ಗೊತ್ತೇ ಬಾಪೂ, ನಿಮ್ಮ ಕನಸಿನ ಭಾರತದಲ್ಲಿ ಅತ್ಯಾಚಾರ-ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯೇ ಅಪರಾಧಿ !!! ನೀವೂ ಕರಿ ಕೋಟು ಧರಿಸಿದ್ದಿರಿ ಅಲ್ಲವೇ ? ಯೋಚಿಸಿ ನೋಡಿ.
ನಮ್ಮ ದೇಶದ ಇಂದಿನ ಪ್ರಧಾನಿ ಹೇಳುತ್ತಾರೆ “ ನೀವು ೭೫ ವರ್ಷ ಹಕ್ಕುಗಳಿಗೆ ಹೋರಾಡಿದ್ದು ಸಾಕು ಇನ್ನು ಕರ್ತವ್ಯ ಮಾಡಿ ” ಎಂದು. ಇದು ನ್ಯಾಯವೇ ಬಾಪೂ ? ಬಿಳಿಯರು ಸಾಧಾರಣ ಉಪ್ಪಿನ ಮೇಲೆ ತೆರಿಗೆ ವಿಧಿಸಿದ್ದನ್ನು ವಿರೋಧಿಸಿ “ ಉಪ್ಪು ನಮ್ಮ ಹಕ್ಕು” ಎಂದವರು ನೀವು. ಇಂದು ನಿಮ್ಮ ಕನಸಿನ ಭಾರತದ ಪ್ರಜೆಗಳು ಬಳಸುವ ಪದಾರ್ಥಗಳಿಗೆ, ಪಡೆಯುವ ಸೇವೆಗಳಿಗೆ, ಆಡುವ ಮಾತುಗಳಿಗೂ ತೆರಿಗೆ ಕಟ್ಟಬೇಕಿದೆ. ಅಚ್ಚರಿಯಾಯಿತೇ ? ಆಳುವವರಿಗೆ ಅಪ್ಯಾಯಮಾನವಲ್ಲದ ಮಾತಿನ ಮೇಲೆ ದಂಡನೆಯ ತೆರಿಗೆ, ಶಿಕ್ಷೆಯ ತೆರಿಗೆ ವಿಧಿಸಲಾಗುತ್ತಿದೆ. ಈ ಮಾತು ದುಬಾರಿಯಾಗಿದೆ ಬಾಪೂ. ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಇವು ಮನುಷ್ಯನ ಮೂಲಭೂತ ಅವಶ್ಯಕತೆಗಳು ಎಂದು ನಂಬಿ ಹೋರಾಡಿದ್ದವರು ನೀವು. ೭೫ ವರ್ಷಗಳಾದರೂ ಇದಾವುದೂ ನಮ್ಮ ಮೂಲಭೂತ ಹಕ್ಕು ಎನಿಸಿಕೊಂಡಿಲ್ಲ ಬಾಪೂ. ಈ ಹಕ್ಕುಗಳನ್ನು ಕೇಳುವುದೇ “ದೇಶದ್ರೋಹ” ಎನ್ನುತ್ತಾರೆ ನಿಮ್ಮ ಸಮಾಧಿಯ ಮುಂದೆ ಮಂಡಿಯೂರುವ ನಾಯಕರು.

ಹಾಗೆಂದ ಮಾತ್ರಕ್ಕೆ ಇಲ್ಲಿ ಎಲ್ಲ ಮಾತುಗಳೂ ಶಿಕ್ಷಾರ್ಹವಲ್ಲ ಬಾಪೂ. ನಿಮಗೆ ನೌಖಾಲಿ ನೆನಪಾಗಬಹುದು. ವಿಭಜನೆಯ ಅಸಂಖ್ಯಾತ ಸಾವು ನೋವುಗಳನ್ನು ಸಂತ್ರಸ್ತರ ನಡುವೆ ನಿಂತೇ ನೋಡಿದ್ದೀರಿ. ರಕ್ತಪಿಪಾಸುಗಳ ನೆತ್ತರದ ದಾಹ ಮತ್ತು ರಕ್ತದೋಕುಳಿಯ ನಡುವೆಯೇ “ ಶಾಂತಿ, ಸಹನೆ, ಅಹಿಂಸೆ” ಇವುಗಳನ್ನು ಶೋಧಿಸುತ್ತಲೇ ನೀವು ಹಿಂಸೆಗೆ ಬಲಿಯಾಗಿಬಿಟ್ಟಿರಿ. ಮತಾಂಧನೊಬ್ಬನ ಗುಂಡೇಟಿಗೆ ಶರಣಾಗಿಬಿಟ್ಟಿರಿ. ನೌಖಾಲಿಯಲ್ಲಿ ನಿಮಗೆ ಕಂಡುಬAದ ಮತದ್ವೇಷದ ಕಿಡಿಗಳು ತಣ್ಣಗಾಗಿವೆ ಎಂದುಕೊAಡಿರಾ ? ಇಲ್ಲ ಬಾಪು. ಇತ್ತೀಚೆಗಷ್ಟೇ ಧರ್ಮಸಂಸತ್ತಿನಲ್ಲಿ ಹಿಂದೂ ಮತಾಂಧರು ಈ ದುಷ್ಟ ಕಿಡಿಗಳ ಜೀವಂತಿಕೆಗೆ ಸಾಕ್ಷಿ ಒದಗಿಸಿದ್ದಾರೆ. ಮತ್ತೊಂದು ಸಾಮೂಹಿಕ ಹತ್ಯಾಕಾಂಡಕ್ಕೆ ಕರೆ ನೀಡಿದ್ದಾರೆ. ಇದು ದೊರೆಗಿವಿಗೆ ಬಿದ್ದಿದೆ ಆದರೆ ಮೌನವೇ ಉತ್ತರ!! ಏನ್ಮಾಡೋದು ಬಾಪೂ. 
ಈ ಕೊಲೆಪಾತಕರ, ಹಂತಕರ ಮಾತುಗಳು ಶಿಕ್ಷಾರ್ಹವಾಗುತ್ತಿಲ್ಲ. ಕೃತಿಯೂ ಶಿಕ್ಷೆಗೊಳಗಾಗುತ್ತಿಲ್ಲ. ದಂಡನೆಗೂ ಗುರಿಯಾಗುತ್ತಿಲ್ಲ. ಬಡವರ, ಶೋಷಿತರ ಹಕ್ಕೊತ್ತಾಯದ ಮಾತುಗಳು ಶಿಕ್ಷೆಗೊಳಗಾಗುತ್ತಿವೆ. ಅದೂ ದೇಶದ್ರೋಹದ ಶಿಕ್ಷೆ, ಭಯೋತ್ಪಾದಕತೆಯ ಶಿಕ್ಷೆ. ಏಕೆ ಗೊತ್ತೇ ಬಾಪೂ, ನಿಮ್ಮನ್ನು ಕೊಂದ ಗೋಡ್ಸೆ ಇಂದು ಮಹಾತ್ಮ ಎನಿಸಿಕೊಳ್ಳುತ್ತಿದ್ದಾನೆ. ಇಂದು ನಿಮಗೆ ವಂದಿಸುವವರೇ ನಾಳೆ ಅವನಿಗೂ ಅಷ್ಟೇ ಗೌರವಪೂರ್ವಕವಾಗಿ ವಂದಿಸುತ್ತಾರೆ. ಅವನಿಗೂ ಪುಷ್ಪಮಾಲೆ ಅರ್ಪಿಸುತ್ತಾರೆ. ಆರಾಧಿಸುತ್ತಾರೆ. ಗೋಡ್ಸೆಯನ್ನೇ ಮಹಾತ್ಮ ಎನ್ನುತ್ತಿದ್ದಾರೆ ಬಾಪೂ. ಅವನನ್ನೇ ಪೂಜಿಸುತ್ತಿದ್ದಾರೆ. ಅದೇ ಕೈಗಳೇ ನಿನಗೂ ವಂದಿಸುತ್ತವೆ. ಅವನ ಪ್ರತಿಮೆಗಳು ಎಲ್ಲೆಡೆ ತಲೆಎತ್ತುತ್ತಿವೆ. ಬಹುಶಃ ಶತಮಾನದ ವೇಳೆಗೆ ನಿಮ್ಮ ಕೋಟ್ಯಂತರ ಪ್ರತಿಮೆಗಳು ಬೊಂಬೆಗಳಾಗಿಬಿಡುತ್ತವೆ. ಗೋಡ್ಸೆಯ ಪ್ರತಿಮೆಗಳನ್ನು ಪೂಜಿಸಲಾಗುತ್ತದೆ. ಗೋಡ್ಸೆ ನಿಮ್ಮನ್ನು ಕೊಂದ ಮಹಾತ್ಮ ಆಗಿಬಿಡಬಹುದು. ಇದು ವರ್ತಮಾನದ ದುರಂತ ವಾಸ್ತವ ಬಾಪೂ, ನಿಮಗೆ ಕಾಣುತ್ತಿಲ್ಲವೇ ?
ಆದರೂ ರಾಜಘಾಟ್‌ನÀಲ್ಲಿ ನಿಮ್ಮ ಸಮಾಧಿಯ ಮುಂದೆ ಭಕ್ತಿರಸ ಹರಿಯುತ್ತದೆ. “ ಈಶ್ವರ ಅಲ್ಲಾಹ್ ತೇರೋ ನಾಮ್,,,,,” ಭಜಿಸುತ್ತದೆ. “ ವೈಷ್ಣವ ಜನತೋ,,,,,” ಗುನುಗುನಿಸುತ್ತದೆ. ನೀವು ಎದ್ದು ಬಂದರೂ ಏನಾದೀತು ಬಾಪೂ ? ಕನ್ನಡಕದ ಮಸೂರವನ್ನು ಒರೆಸಿಕೊಂಡು ಮತ್ತೊಮ್ಮೆ ಧರಿಸಿ ನೋಡಿದರೂ ಏನಾದೀತು ಬಾಪೂ? ವರ್ತಮಾನದಲ್ಲಿ ಭೂತಕಾಲದ ಭೂತಚೇಷ್ಟೆಗಳೆಲ್ಲವೂ ಮತ್ತೊಮ್ಮೆ ಮರುಕಳಿಸಿದೆ. ನಿಮ್ಮ ತಪ್ಪುಗಳೇನೇ ಇರಲಿ, ಆಳುವವರ ವಿರುದ್ಧ ಪ್ರತಿರೋಧದ ಧ್ವನಿಗೆ ನೀವು ದನಿಯಾಗಿದ್ದಿರಿ. ಇಂದು ಪ್ರತಿರೋಧದ ಧ್ವನಿಯನ್ನೇ ಶಾಶ್ವತವಾಗಿ ಅಡಗಿಸಲು ದೇಶ ಸಜ್ಜಾಗುತ್ತಿದೆ. ನಿಮಗೆ ವರ್ತಮಾನದ ಭಾರತವೇ ಕಾಣದ ಹಾಗೆ ಗೋಡೆಗಳನ್ನು ನಿರ್ಮಿಸಿಬಿಟ್ಟಿದ್ದಾರೆ. ಆ ಬದಿಯಲ್ಲಿ ನೆಹರೂ ಆದಿಯಾಗಿ, ಅಂಬೇಡ್ಕರಾದಿಯಾಗಿ ನಿಮ್ಮ ಎಲ್ಲ ಸಹಚರರೂ ಇದ್ದಾರೆ. ನೀವು ವಸ್ತುಶಃ ಅನಾಥನಾಗಿಬಿಟ್ಟಿದ್ದೀರಿ ಬಾಪೂ. ಎಲ್ಲರಿಗೂ ಬೇಕಾದವರಾಗಿ ಕಂಡರೂ ಯಾರಿಗೂ ಬೇಡದವರಾಗಿಬಿಟ್ಟಿದ್ದೀರಿ. ನಿಮಗೆ ವಂದಿಸುವ ಎಲ್ಲ ಕೈಗಳನ್ನೊಮ್ಮೆ ನೋಡಿ. ಹನಿಯುವುದೇನಾದರೂ ಕಂಡರೆ ಅದು ಕಂಬನಿ ಎಂದೆಣೆಸಬೇಡಿ. ಅದು ನಿಮ್ಮ ಕನಸಿನ ಭಾರತದ ನೆತ್ತರ ಬಿಂದುಗಳು. 
ನಮಸ್ತೆ ಬಾಪೂ !!


ನಾ ದಿವಾಕರ