ಮಿಲ್ ರಂಗೇಗೌಡ್ರ ನಂಬರ್ ಹೋರಿ

ಅನುಭವ-ಅನುಭಾವ   ಡಾ.ಮಿರ್ಜಾ ಬಷೀರ್

ಮಿಲ್ ರಂಗೇಗೌಡ್ರ ನಂಬರ್ ಹೋರಿ


ಅನುಭವ-ಅನುಭಾವ  

ಡಾ.ಮಿರ್ಜಾ ಬಷೀರ್

ಗಂಗೆ ಬಾರೆ- ಗೌರಿ ಬಾರೆ’ ಹೆಸರಿನಲ್ಲಿ ಕಳೆದ ವಾರ ಪುಸ್ತಕ ರೂಪದಲ್ಲಿ ಬಿಡುಗಡೆಯಾದ ಪಶುವೈದ್ಯ ಡಾ.ಮಿರ್ಜಾ ಬಷೀರ್ ಅವರ ಆತ್ಮ ಕಥಾನಕದಿಂದ ಆಯ್ದ ಒಂದು ಅಧ್ಯಾಯ ಇಲ್ಲಿದೆ. ತುಮಕೂರು ಜಿಲ್ಲೆಯ ನೊಣವಿನಕೆರೆ ಆಸುಪಾಸಿನಲ್ಲೇ ಸುಮಾರು ವರ್ಷ ಸೇವೆ ಸಲ್ಲಿಸಿದ ಇವರ ಒರಿಜಿನಲ್ ಬರಹ ನಿಮ್ಮ ಮನ ಸೆಳೆಯುವುದರಲ್ಲಿ ಅನುಮಾನವೇ ಇಲ್ಲ, ಓದಿ -ಸಂಪಾದಕ 

ಮಿಲ್ ರಂಗೇಗೌಡ್ರ ನಂಬರ್ ಹೋರಿ

ಮಾರ್ಗೊಂಡನಹಳ್ಳಿಯ ಹೆಸರು ಜನರ ಬಾಯಲ್ಲಿ ಮಾರ್ಗನಳ್ಳಿಯಾಗಿತ್ತು. ನೊಣವಿನಕೆರೆಗೆ ಐದು ಕಿ.ಮೀ. ದೂರದಲ್ಲಿತ್ತು ಆ ಹಳ್ಳಿ, ನಾನು ನೊಣವಿನಕೆರೆಗೆ ಹೋದ ಸ್ವಲ್ಪ ದಿನಗಳಲ್ಲಿ ಪರಿಚಯವಾಗಿದ್ದ ಮಿಲ್ ರಂಗೇಗೌಡ್ರು ಆ ಹಳ್ಳಿಯವರು. ಸದಾ ಬಿಳಿ ಪರ್ಟು, ಬಿಳಿ ಪಂಚೆ ಉಟ್ಟು ಸ್ಕೂಟರಲ್ಲಿ ಸಂಚರಿಸುತ್ತಿದ್ದ ಅಜಾನುಬಾಹು. ಸಿಟ್ಟಿಲ್ಲ, ಸೆಡವಿಲ್ಲ, ಮಾತು ಹೆಚ್ಚಿಲ್ಲ, ಕಡಿಮೆಯಿಲ್ಲ. ಸಂಕೋಚ ಜಾಸ್ತಿ. ಅದನ್ನೂ ತೋರಿಸಿಕೊಳ್ಳುತ್ತಿರಲಿಲ್ಲ. ಕೆಲಸವಾದ ಕೂಡಲೆ ನುಣುಚಿಕೊಂಡು ಹೋಗಿಬಿಡುತ್ತಿದ್ದರು.


ತೆಂಗಿನ ತೋಟ, ಮನೆ, ಹೊಲ ಹೊಂದಿದ್ದು, ಮನೆ ಮುಂದೇನೇ ಒಂದು ರೂಮಲ್ಲಿ ಹಿಟ್ಟಿನ ಮಿಲ್ಲು ಸಹ ನಡೆಸ್ತಾ ಇದ್ರು ಗೌಡು, ಅದಕ್ಕೇ ಮಿಲ್ಲು ರಂಗೇಗೌಡ್ರು, ಅಂತ ಹೆಸರು. ಸ್ವಲ್ಪ ದಿನ ಒಂದು ಕೋಳಿ ಫಾರಂ ಸಹ ನಡೆಸ್ತಿದ್ರು, ಅವರದ್ದು ಇನ್ನೊಂದು ಸ್ಪೆಷಾಲಿಟಿ ಅಂದ್ರೆ ಯಾವಾಗೂ ಒಂದು ಜೊತೆ 'ನಂಬರ್ ಹೋರಿ ಸಾಕಿರ್ತಿದ್ರು, ನಂಬರ್ ಹೋರಿಗಳು ಅಂದ್ರೆ ಸಖತ್ತಾದ ಅಮೃತ್ ಮಹಲ್ ತಳಿಯ ಎತ್ತುಗಳು. ಒಂದೇ ಅಳತೆಯ, ಬಿಳಿ ಬಣ್ಣದ, ಒಂದೇ ರೀತಿಯ ಕೊಂಬಿನ, ಹೆಚ್ಚು ಕಡಿಮೆ ಒಂದೇ ವಯಸ್ಸಿನ ಜೋಡಿ ಎತ್ತುಗಳು.
ಅವುಗಳನ್ನೇ ಬೇರೆ ಕಡೆ ಕಟ್ಟಿಹಾಕುತ್ತಿದ್ದರು. ಬೇರೆ ಮೇವು, ಹತ್ತಿ ಕಾಳು, ಮುಸುಕಿನ ಜೋಳ, ಹಿಂಡಿ, ನೀರು ಹೀಗೆ ಅವುಗಳಿಗೆ ರಾಜಾತಿಥ್ಯ. ಬೇರೆ ದನಗಳಂತೆ ಯಾವಾಗಲೂ ಬ್ಯಾಸಾಯಕ್ಕೆ ಅವುಗಳನ್ನು ಕಟ್ಟುತ್ತಿರಲಿಲ್ಲ. ಯಾವಾಗಾದರೊಮ್ಮೆ ಕೆಲಸಕ್ಕೆ ಕಟ್ಟುತ್ತಿದ್ದರು. ಬೇರೆ ದನಗಳನ್ನು ಮನೆಯ ಹೊರಗೆ ಕಟ್ಟಿಹಾಕಿದರೆ ನಂಬರ್ ಹೋರಿಗಳು ಮಾತ್ರ ಕೊಟ್ಟಿಗೆಯಲ್ಲಿಯೇ ಇರುತ್ತಿದ್ದವು. ರಂಗೇಗೌಡ್ರ ಮನೆಯ ಒಳಗಿದ್ದ ಕೊಟ್ಟಿಗೆಯಲ್ಲಿ ನಂಬರ್ ಹೋರಿಗಳು ಯಾವಾಗಲೂ ಸುಖವಾಗಿ ಮೇಯುತ್ತಾ, ಮೆಲುಕು ಹಾಕುತ್ತಾ, ಮುಸುಗರೆಯುತ್ತಾ ವಿಶ್ರಾಂತಿ ಪಡೆಯುತ್ತಿದ್ದವು.


ಗೌಡ್ರು ಗಂಟೆ ಎರಡು ಗಂಟೆಗೊಮ್ಮೆಯಾದರೂ ಹೋರಿಗಳ 3 ಹೋಗಿ ಮಾತಾಡಿಸಿ ಮೈ ತೂಬರಿಸಿ ಬರುತ್ತಿದ್ದರು. ಹೋರಿಗಳೋ ಆ ಮನೆಯ ಒಬ್ಬರಿಗೋ ಇಬ್ಬರಿಗೋ ಮಾತ್ರ ಅಭ್ಯಾಸವಾಗಿರುತ್ತಿದ್ದು ಮಿಕ್ಕಂತೆ ಯಾರೇ ಹೋದರೂ 'ಸಿ'' ಎಂದು ಹಾಯಲು ಕೊಂಬು ಮುಂದೆ ಮಾಡಿಕೊಂಡು ನುಗ್ಗಿ ಬರುತ್ತಿದ್ದವು. ದುಡ್ಡಿನಲ್ಲಿ ನಾಲ್ಕು ಜತೆ ಸಾಧಾರಣ ಎತ್ತುಗಳಿಗೆ ಸಮ ಈ ನಂಬರ್ ಹೋರಿಗಳು,


ಆಗೆಲ್ಲಾ ನಾನು ಪ್ರತಿ ವರ್ಷ (ಚಪ್ಪೆ ರೋಗ, ಮೆಟ್ರೆ ರೋಗ, ಗೆರಸಲು ರೋಗಗಳಿಗೆ ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಎಲ್ಲ ದನ ಎಮ್ಮೆಗಳಿಗೆ ಚುಚ್ಚು ಮದ್ದು ಲಸಿಕೆ ಹಾಕುತ್ತಿದ್ದೆ. ರಂಗೇಗೌಡ್ರು ಕುಲವಾಡಿಗೆ ಹೇಳಿ, ಊರಲ್ಲೆಲ್ಲ ಟಾಂ ಟಾಂ ಹಾಕಿಸಿ, ಮನೆ ಮುಂದೆ ಜಾಗವನ್ನು ಸ್ವಚ್ಛಗೊಳಿಸಿ ಎರಡು ದಡಿಗಳನ್ನು (ಕಂಬ) ನೆಲದಲ್ಲಿ ಹೂಳಿಸಿ, ಮತ್ತೊಂದು ದಡಿಯನ್ನು ಅಡ್ಡ ಕಟ್ಟಿಸಿ, ಊರಿನ ಎಲ್ಲ ದನಗಳ ಇಂಜೆಕ್ಷನ್ ಮಾಡಲು ಜಾಗ ಸಿದ್ಧಗೊಳಿಸಿಡುತ್ತಿದ್ದರು. ದನಗಳು ಬಂದು ನಿಲ್ಲುವ ಜಾಗದಲ್ಲಿ ಧೂಳಾಗದಂತೆ ನೀರು ಚಿಮುಕಿಸುತ್ತಿದ್ದರು. ಸಿರಿಂಜ್ ಮತ್ತು ಸೂಜಿಗಳನ್ನು ಸ್ಟೆರಿಲೈಸ್ ಮಾಡಲು ಮೂರು ಕಲ್ಲುಗಳನ್ನು ಹೂಡಿ ತಾತ್ಕಾಲಿಕ ಒಲೆಯೂ ಸಿದ್ಧಗೊಳ್ಳುತ್ತಿತ್ತು.


ಬೆಳಗ್ಗೆ 7 ಗಂಟೆಗೆ ನಾನು ಸೇವಕನ ಜೊತೆ ಮಾರ್ಗನಳ್ಳಿಗೋದರೆ ಇಷ್ಟೆಲ್ಲ ರೆಡಿಯಿರುತ್ತಿತ್ತು, ಆ ಸಣ್ಣ ಹಳ್ಳಿಯಲ್ಲಿ ಹತ್ತಿರತ್ತಿರ ಮುನ್ನೂರಕ್ಕೂ ಮಿಕ್ಕು ಜಾನುವಾರುಗಳಿರುತ್ತಿದ್ದವು. ಕೆಲಸ ಮುಗಿಯುವ ಹೊತ್ತಿಗೆ ಸುಸ್ತಾಗಿರುತ್ತಿತ್ತು. ಅಷ್ಟರಲ್ಲಿ ಒಂದೆರಡು ಸಲ ಗೌಡರ ಮನೆಯಿಂದ ಟೀ ಸರಬರಾಜಾಗುತ್ತಿತ್ತು.


ಊರ ದನಗಳೆಲ್ಲ ಮುಗಿದ ಮೇಲೆ ಏಳೆಂಟು ಜನ ಸೇರಿ ಗೌಡರ ನಂಬರ್, ಹೋರಿಗಳನ್ನು ಇಂಜೆಕ್ಷನ್‌ಗೆ ಹಿಡಿಯುತ್ತಿದ್ದರು. ಅವೆರಡಕ್ಕೆ ಇಂಜೆಕ್ಷನ್ ಮಾಡುವಷ್ಟರಲ್ಲಿ ನಮ್ಮ ಪ್ರಾಣವೇ ತೂಗುಯ್ಯಾಲೆ ಯಾಡುತ್ತಿತ್ತು, ಅಷ್ಟು ಅಪಾಯಕಾರಿ, ಇಡೀ ನೊಣವಿನಕೆರೆ ಹೋಬಳಿಯಲ್ಲಿ ಎಂಟತ್ತು ಜೊತೆ ನಂಬರ್ ಹೋರಿಗಳಿದ್ದಿರಬಹುದು.


ಒಮ್ಮೆ ಗೌಡರ, ನಂಬರ್ ಹೋರಿಗೆ ಹುಷಾರು ತಪ್ಪಿತು. ಗೌಡ್ರೆ ಆಸ್ಪತ್ರೆಗೆ ಬಂದರು. ಆಗಾಗ ಹೊಟ್ಟೆ ಉಬ್ಬರ ಬರುತ್ತದೆ ಮತ್ತು ನೆಲ ಹಿಡಿದು ಮೇಯಲ್ಲ ಎಂಬುದು ಅವರ ಅಹವಾಲಾಗಿತ್ತು. ಆಗ ಯಾವುದೇ ತರಹದ ಫೋನುಗಳಿರಲಿಲ್ಲ. ನಾನು ನನ್ನ ಬ್ಯಾಗನ್ನು ತೆಗೆದುಕೊಂಡು ಬೈಕಲ್ಲಿ ಹೊರಟೆ. ಆಗ ಬೆಳಗ್ಗೆ 9 ಗಂಟೆ. ಮನೆ ತಲುಪಿದ ಮೇಲೆ ಗೌಡರೊಬ್ಬರೇ ಜೋರಾಗಿ ಮಾತಾಡುತ್ತ ಕೊಟ್ಟಿಗೆ ಪ್ರವೇಶಿಸಿದರು.


ನಾನು ಮತ್ತು ಹೋರಿಯನ್ನು ಹಿಡಿಯಲು ಬಂದಿದ್ದ ನಾಲೈದು ಜನ ಮೌನವಾಗಿದ್ದೆವು. ಅಪರಿಚಿತರ ಧ್ವನಿ ಕೇಳಿದ ಕೂಡಲೆ ಹೋರಿಗಳು ಕುಣಿದಾಡಲು ಶುರುವಿಟ್ಟುಕೊಳ್ಳುತ್ತಿದ್ದವು. ಹೊಸತಾಗಿ ಲಾಳ ಕಟ್ಟಿಸಿದ್ದರು. ಕೊಟ್ಟಿಗೆಯ ನೆಲಕ್ಕೆ ಹಾಸಿದ್ದ ಕಲ್ಲು ಚಪ್ಪಡಿಗಳಿಗೆ ಲಾಳಗಳು ತಾಕಿ ಜೋರಾಗಿ ಶಬ್ದ ಬರುತ್ತಿತ್ತು. ಕನಿಷ್ಠ 300 ಕೆಜಿ ತೂಗುವ ತೋರಿ, ಅದು ಕೊಟ್ಟಿಗೆ ತುಂಬಾ ಗಾಬರಿ ಬಿದ್ದು ಎಷ್ಟು ಜನ ಹಿಡಿದರೂ ತಹಬಂದಿಗೆ ಬರದೆ ಕುಣಿಯುತ್ತಿದ್ದುದ ನೋಡಿದ ಪುಕ್ಕುಲ ಹೃದಯಿಗಳು ಉಚ್ಚೆ ಹುಯ್ದುಕೊಳ್ಳುವುದು ಗ್ಯಾರಂಟಿಯತ್ತು.


ಗುದದ್ವಾರದಲ್ಲಿ ಥರ್ಮೋಮೀಟರ್ ಮೈತಾಪ ತೆಗೆದುಕೊಳ್ಳುವಷ್ಟರಲ್ಲಿ ಸಾಕಾಗಿ ಹೋಯ್ತು, ಮೈತಾಪದಲ್ಲಿ ಏರುಪೇರಿರಲಿಲ್ಲ, ಮೂಗು ಹಸಿಯಿತ್ತು. ತಾನೊಂದೆ ಇದ್ದಾಗ ಹೋರಿ ಮೆಲುಕು ಸಹ ಹಾಕುತ್ತದೆ ' ಎಂದು ಗೌಡರು ಹೇಳಿದರು. ಇಷ್ಟೇ ಹೋರಿ  ಪರೀಕ್ಷೆ ಸಾಧ್ಯವಾದದ್ದು. 'ಗೌಡೇ ಯಾವ ಪರೀಕ್ಷೆ ಮಾಡಲೂ ಹೋರಿ ಬಿಡುತ್ತಿಲ್ಲ. ಆದಕ್ಕೆ ಜ್ವರವೇನೂ ಇಲ್ಲ. ಹಸಿವು ಹೆಚ್ಚಾಗಲು ಒಂದು ಇಂಜೆಕ್ಷನ್ ಮಾಡುತ್ತೇನೆ. ಸಾಕು' ಎಂದು ವಿಟಮಿನ್ 'ಬಿ' ಕಾಂಪ್ಲೆಕ್ಸ್ ಇಂಜೆಕ್ಷನ್ ಸಿರಿಂಜ್‌ನಲ್ಲಿ ಭರ್ತಿ ಮಾಡಿ ಹೋರಿಯ ಬಳಿ ಹೋದೆ.


ಕೊಟ್ಟಿಗೆ ವಿಶಾಲವಾಗೇನೂ ಇರಲಿಲ್ಲ. ಇಕ್ಕಟ್ಟು. ಜೊತೆ ಹೋರಿಯ ಪಕ್ಕದಲ್ಲಿ ಸ್ವಲ್ಪ ಜಾಗವಿತ್ತು. ಗೌಡ್ರು ಮಾತಾಡಿಸುತ್ತ, ಮೈ ಸವರುತ್ತ ಹೋರಿಯ ಬಳಿ ಸಾರಿದರು. ಇನ್ನೊಂದಿಬ್ಬರು ತಲೆ ಮತ್ತು ಕೊಂಬುಗಳನ್ನು ಒಂದು ಕಡೆ ವಾರೆ ಮಾಡಿ ಹಿಡಿದುಕೊಂಡಿದ್ದರು. ಹೋರಿ ಊರಿಗೇ ಕೇಳಿಸುವಂತೆ ಮುಸುಗರೆಯುತ್ತಿತ್ತು. ಕಣ್ಣು ಮೆಡ್ಡರಿಸಿ ನಮ್ಮನ್ನೆಲ್ಲ ಗಮನಿಸುತ್ತಿತ್ತು. ಕಾಲು ಝಾಡಿಸುತ್ತಿತ್ತು. ನಾನು ಚಲಿಸುತ್ತಿದ್ದ ದಿಕ್ಕಿನಲ್ಲಿ ಅದರ ಕಣ್ಣುಗಳು ತಿರುಗುತ್ತಿದ್ದವು. ಇನ್ನೂ ಜೋರಾಗಿ ಉಸಿರೆಳೆದು ಬಿಡುತ್ತಿತ್ತು.


ಸಮಯ ನೋಡಿಕೊಂಡು ಕ್ಷಣಾರ್ಧದಲ್ಲಿ ಕತ್ತಿನ ಭಾಗಕ್ಕೆ ಸೂಜಿ ಹೊಡೆದೆ. ಹದಿನಾರು ಸೈಜಿನ ಹೊಸ ಸೂಜಿ, ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಹತ್ತು ಮಿಲಿ ಔಷಧ ಹೋರಿಯ ಮೈ ಸೇರಿತು. ಆದು ಬಿ ಕಾಂಪ್ಲೆಕ್ಸ್ ಮತ್ತು ಲಿವರ್ ಎಕ್ಸ್ಟ್ರಾಕ್ಟ್ ಔಷಧವಷ್ಟೇ ಆಗಿತ್ತು. ಸೂಜಿ ವಾಪಸ್ ತೆಗೆದು ಹಿಂದಕ್ಕೆ ಒಂದು ಹೆಜ್ಜೆ ಸರಿದಿರಲಿಲ್ಲ, ಹೋರಿ ಇದ್ದಕ್ಕಿದ್ದಂತೆ ಎಗರಿ ಗ್ವಾದಲಿಯಲ್ಲಿ ದಬ್ಬೆಂದು ಬಿದ್ದುಬಿಟ್ಟಿತು. ಹೋರಿ ಹಿಡಿದುಕೊಂಡವರೆಲ್ಲ ದಿಕ್ಕಿಗೊಬ್ಬರು ಬಿದ್ದಿದ್ದರು. ಗೌಡರು ಮೂಗುದಾರ ಬಿಸಾಕಿ ನನ್ನ ಮೇಲೆ ಬಂದು ಬಿದ್ದರು.


ಅಷ್ಟು ಅರ್ಭಟ ಮಾಡುತ್ತಿದ್ದ ಹೋರಿ ಬಿದ್ದ ಕ್ಷಣವೇ ಸ್ತಬ್ಧವಾಯಿತು. ಲಾಳದ ಶಬ್ದ ಬಂದ್,ಕಣ್ಚಲನೆ ಬಂದ್, ಉಸಿರಾಟ ಬಂದ್, ಬಿದ್ದವರೆಲ್ಲಾ ಮೇಲಕ್ಕೇಳುತ್ತ ಒಂದೊಂದು ನಮೂನಿಯ ಉದ್ಧಾರ ಮಾಡತೊಡಗಿದರು. "ಏನಾಯ್ತು ನೋಡಿ ಸಾ' 'ಆರರೆ' 'ಮೇಲಕ್ಕೆತ್ಲ ಹೋರಿಯ' ಇತ್ಯಾದಿ, ಇಕ್ಕಟ್ಟಾದ ಗ್ವಾದ್ಲಿಯಲ್ಲಿ ಹೋರಿ ಮುದುರಿ ಬಿದ್ದಿತ್ತು. ಗೌಡರು ಮೂಗುದಾರ ಹಿಡಿದು ಎಳೆದರು, ಅವಸರಿಸಿ ಹೋಗಿ ನಾನು ಹೋರಿಯ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದೆ. ಹೋರಿ ಸತ್ತು ಹೋಗಿತ್ತು.


ಮಾತಾಡುವವರು ಮಾತಾಡುತ್ತಿದ್ದರು, ಕೂಗುವವರು ಕೂಗುತ್ತಿದ್ದರು. ಯಾರೋ ತಣ್ಣೀರು ತಂದು ಹೋರಿಯ ತಲೆಯ ಮೇಲೆ ಸುರಿದರು. ಗೌಡರ ಮನೆಯವರೆಲ್ಲ ಬಂದು ಹೋರಿಯ ಸುತ್ತ ನಿಂತುಕೊಂಡು ಜೋರಾಗಿ ಅಳತೊಡಗಿದರು. ಒಂದೆರಡು ಕ್ಷಣಗಳಲ್ಲಿ ಊರಿಗೆ ಊರೇ ಮನೆ ಸುತ್ತ ನೆರೆಯಿತು. ಕೆಲವರು ನನ್ನನ್ನು ಕೊಲೆಗಡುಕನಂತೆ ನೋಡತೊಡಗಿದರು.


ಆಗ ನಾನೇ ಬಾಯ್ದಿಟ್ಟೆ. 'ಗೌಡ್ರೆ ಈ ಸಾವಿಗೆ ಕಾರಣ ಕಂಡು ಹಿಡಿಯಲೇಬೇಕು. ನಾನು ಮಾಡಿದ ಇಂಜೆಕ್ಷನ್‌ಗೂ ಸಾವಿಗೂ ಬಹುಶಃ ಸಂಬಂಧ ಇಲ್ಲ. ಈಗಲೇ ಹೋರಿಯನ್ನು ಹತ್ತಿರದ ತೋಟಕ್ಕೊಯ್ದು ಶವ ಪರೀಕ್ಷೆ ಮಾಡೋಣ' ಎಂದೆ. ರಂಗೇಗೌಡ್ರು ಕೂಡಲೇ ಒಪ್ಪಿದರು.


ಊರ ಪಕ್ಕದಲ್ಲಿದ್ದ ಅವರದೇ ತೋಟದಲ್ಲಿ ಹೋರಿಯನ್ನು ಹೂತು ಸಮಾಧಿ ಮಾಡಲು ಮನೆಯವರೊಂದಿಗೆ ಚರ್ಚಿಸಿ 'ಆಯ್ತು ಸಾರ್, ಅಲ್ಲಿಯೇ ನೀವು ಶವ ಪರೀಕ್ಷೆ ಮಾಡಿ. ನನಗೂ ಕಾರಣ ಗೊತ್ತಾಗಬೇಕಾಗಿದೆ' ಎಂದು ಶಾಂತವಾಗಿಯೇ ನುಡಿದರು. ಬೇರೆಯವರಾರಾದರೂ ಆಗಿದ್ದರೆ ಹೋರಿ ಸಾವಿಗೆ ನಾನೇ ಕಾರಣವೆಂದು ಕೂಗಾಡಿ ಹುಚ್ಚು ಬಿಡಿಸುತ್ತಿದ್ದರು. ಆದರೆ ರಂಗೇಗೌಡರ ಶಾಂತ ಸ್ವಭಾವ ನನಗೆ ನಿಜಕ್ಕೂ ಆಶ್ಚರ್ಯಕರವಾಗಿತ್ತು ಮತ್ತು ಶ್ರೀರಕ್ಷೆಯಾಗಿತ್ತು.


ತೆಂಗಿನ ತೋಟದಲ್ಲಿ ಒಂದು ಕಡೆ ಹೋರಿಗೆ ಗುಂಡಿ ತೋಡುತ್ತಿದ್ದರು. ಅದರ ಪಕ್ಕದಲ್ಲಿ ಹೋರಿಯ ಶವ ಪರೀಕ್ಷೆ ಶುರುವಾಯಿತು. ಊರಿನ ದಲಿತರೆ ತಮ್ಮ ಹತಾರಗಳಿಂದ ಶವವನ್ನು ಅಂಗಾತ ಮಲಗಿಸಿ, ಎದೆಯಿಂದ ಪ್ರಾರಂಭಿಸಿ ಚರ್ಮ ಕೊಯ್ಯತೊಡಗಿದರು. 'ರಂಗಣ್ಣ ಸುಮ್ಮ ಯಾಕೆ ಕೊಯ್ಸತಿದೀಯೋ, ಬ್ಯಾರೆ ಕ್ಯಾಮಿಲ್ಲ ನಿನಗೆ' ಎನ್ನುವವರೇ ಜಾಸ್ತಿ ಜನ. ಆದರೆ ಗೌಡರು ನಿರ್ಧರಿಸಿಯಾಗಿತ್ತು.


ನನ್ನೊಳಗೆ ಯುದ್ಧ ನಡೆದಿತ್ತು. ಸಾವಿಗೆ ಕಾರಣವೇನಿರಬಹುದು? ಯಾವುದೇ ಔಷಧಕ್ಕೂ ಪ್ರಾಣಿಗಳು ಅಡ್ಡ ಪರಿಣಾಮ ತೋರಿಸಬಹುದು. (Idiosyncrasy) ಹಾಗೇನಾದರೂ ಆಗಿದ್ದರೆ? ನನ್ನಿಂದ ಸಾವಾಗಿಲ್ಲ ಎಂಬ ಧೈರ್ಯ ಬಾರದೆ ಹೋಯಿತು. ಪಾಪ ಪ್ರಜ್ಞೆಯಿಂದ ನರಳತೊಡಗಿದ್ದೆ. ಜೀವನವೆಂಬುದು ಅರ್ಥವಾಗದ ಕಗ್ಗಟ್ಟೆಂದೂ, ಬಿಡಿಸಲಾಗದ ಒಗಟೆಂದೂ, ಮನುಷ್ಯನ ಎಲ್ಲ ಸಾಧ್ಯತೆಗಳ ಮೀರಿದ್ದೆನಿಸತೊಡಗಿತು. ಬದುಕು ಯಾವ ಕ್ಷಣದಲ್ಲಿ ಯಾವ ಸವಾಲೆಸೆದು ಅಟ್ಟಹಾಸಗೈಯ್ಯುತ್ತದೆಯೋ?


ಸಾಮಾನ್ಯವಾಗಿ ದನಗಳ ಶವ ಕೊಯ್ಯುವವರು ಅದರ ಚರ್ಮವನ್ನು ಬೇರ್ಪಡಿಸಿ ಮಾರಿಕೊಳ್ಳುತ್ತಾರೆ. ಅದು ಅವರಿಗೆ ಆ ದಿನದ ದುಡಿಮೆಯಂತೆ ಮತ್ತು ದನದ ಕೆಲವು ಭಾಗಗಳನ್ನು ಮನೆಗೊಯ್ದು ಅಡಿಗೆಗೆ ಸಹ ಉಪಯೋಗಿಸುವುದುಂಟು. ಆದರೆ ಗೌಡರು ಹೋರಿ ಕೊಯ್ಯುತ್ತಿದ್ದವರಿಗೆ ಚರ್ಮವನ್ನು ಬೇರ್ಪಡಿಸಬಾರದೆಂದೂ, ಶವ ಪರೀಕ್ಷೆಯ ನಂತರ ಚರ್ಮ ಬೆರೆಸಿಯೇ ಹೂತು ಹಾಕಬೇಕೆಂದು ಹೇಳಿದರು.

ಶವಚ್ಚೇದ ಮಾಡಿದವರು ಎದೆಗೂಡು, ಹೊಟ್ಟೆ ಗಳನ್ನು ತೆರೆದ ನಂತರ ಬಳಿ ಸಾರಿದೆ.  ಸತ್ತು ಬಹಳ ಹೊತ್ತಾಗಿದ್ದರೆ ಅಲ್ಲೆಲ್ಲೂ ನಿಲ್ಲದಂತೆ ಗಬ್ಬು ವಾಸನೆ ತುಂಬಿರುತ್ತಿತ್ತು. ಆಗ ತಾನೇ ಸತ್ತದ್ದರಿಂದ ಕಡಿಮೆ ವಾಸನೆಯಿತ್ತಾದರೂ ಹೊಟ್ಟೆಯ ಮೊದಲ ಕೋಣೆಯಾದ ರೂಮೆನ್‌ಗೆ ಚೂರಿ ಹಾಕಿ ಗಾಳಿ ತೆಗೆದಿದ್ದರಿಂದ ವಾಸನೆಯಿತ್ತು. ತೋಟದ ಮಧ್ಯೆ ಬಯಲಿನಲ್ಲಿ ತಾಜಾ ಗಾಳಿ, ಆಡುತ್ತಿದ್ದುದರಿಂದ ವಾಸನೆಯಿಂದ ಬಚಾವಾಗಿದ್ದೆವು.


ಬಿಸಿಲು ಸುರಿಯುತ್ತಿತ್ತು, ಬೆವರು ಹರಿಯುತ್ತಿತ್ತು, ನೂರಾರು ಜನ ಟವಲ್ಲು, ಪಂಚೆ, ಸೆರಗುಗಳಲ್ಲಿ ಗಾಳಿ ಹಾಕಿಕೊಳ್ಳುತ್ತ ಬಿಸಿಲಲ್ಲಿ, ಮರದ ನೆರಳಲ್ಲಿ ನಿಂತಿದ್ದರು. ಪರೀಕ್ಷೆ ಮಾಡುತ್ತ ಹೊಟ್ಟೆಯ ಎರಡನೇ ಕೋಣೆ 2 (ರೆಟಿಕ್ಯುಲಮ್ ) ಇಣುಕಿದೆ. ಇದರ ಒಳಭಾಗ ಜೇನುಗೂಡಿನಂಥ ರಚನೆಗಳಿಂದ ಕೂಡಿದ್ದು ಗುಂಡಿಗೆಗೆ ಬಹಳ ಹತ್ತಿರವಿರುತ್ತದೆ.


ಇಲ್ಲಿ ನನಗೆ ಆಶ್ಚರ್ಯವೂ, ಹೋರಿಯ ಸಾವಿಗೆ ಕಾರಣವೂ ನಮ್ಮೆಲ್ಲರ ಪಶ್ನೆಗೆ ಉತ್ತರವೂ ಕಾದು ಕೂತಿತ್ತು. ಅಲ್ಲೊಂದು ಸುಮಾರು ಐದು ಇಂಚು ಉದ್ದನೆಯ ಗಟ್ಟಿ ಮತ್ತು ಚೂಪನೆಯ ಸೂಜಿಯೊಂದು ಹತ್ತಿರದಲ್ಲಿ ಎದೆಗೂಡಿನಲ್ಲಿರುವ ಗುಂಡಿಗೆಗೆ ಚುಚ್ಚಿಕೊಂಡ ಸ್ಥಿತಿಯಲ್ಲಿತ್ತು, ಎದೆಗೂಡಿನ ತುಂಬ ಗುಂಡಿಗೆಯ ಪಂಚರ್‌ನಿಂದಾಗಿ ಸುರಿದ ರಕ್ತ ಹೆಪ್ಪುಗಟ್ಟಿ ತುಂಬಿತ್ತು.


ಮೆಲುಕು ಹಾಕುವ ಪ್ರಾಣಿಗಳಲ್ಲಿ ಹೊಟ್ಟೆಗೆ ನಾಲ್ಕು ಕೋಣೆಗಳಿರುತ್ತವೆ. ಅವು ರೂಮನ್, ರೆಟಿಕ್ಯುಲಮ್, ಓಮೇಜಮ್  ಮತ್ತು ಅಬೋಮೇಜಮ್. ದನಗಳು ಮೇವು ತಿನ್ನುವಾಗ ಅವಸರದಲ್ಲೋ, ಗೊತ್ತಿಲ್ಲದೆಯೋ ಮೇವಿನ ಜೊತೆ ಕೆಲವೊಮ್ಮೆ ದಬ್ಬಳ, ಮೊಳೆ, ಸೂಜಿ, ಕಬ್ಬಿಣದ ತುಂಡು, ಪ್ಲಾಸ್ಟಿಕ್‌ಗಳನ್ನೆಲ್ಲ ತಿಂದುಬಿಡುತ್ತವೆ. ಈ ತರಹ' ತಿಂದ 'ಚೂಪನೆಯ ವಸ್ತುಗಳು ಎರಡನೇ ಕೋಣೆ ಸೇರಿಕೊಳ್ಳುತ್ತವೆ. ಜೀರ್ಣಕ್ರಿಯೆಯಲ್ಲಿ ಹೊಟ್ಟೆ ಚಲಿಸಿದಂತೆಲ್ಲ ಚೂಪಾದ ವಸ್ತುಗಳಲ್ಲಿ ಕೆಲವು ರೆಟಿಕ್ಯುಲಮ್ ಅನ್ನು ಚುಚ್ಚಿ ಮುಂದುವರಿದು ಹತ್ತಿರದಲ್ಲಿರುವ ಗುಂಡಿಗೆಗೆ ಚುಚ್ಚುವ ಸಂಭವವಿರುತ್ತದೆ. ಇಷ್ಟು ಹಾನಿಯಾಗಲು ಕೆಲವು ಸಲ ವರ್ಷಾರು ತಿಂಗಳು ಸಮಯ ಬೇಕಾಗಬಹುದು. ಆದರೆ ರಂಗೇಗೌಡರ ಹೋರಿ ಗಲಾಟೆ ಮಾಡುತ್ತ ಒದ್ದಾಡುವಾಗ ದೇಹದ ಎಲ್ಲ ಭಾಗಗಳೂ, ಮಾಂಸಖಂಡಗಳೂ ಸಂಕುಚನಕ್ಕೆ ಒಳಗಾಗಿ, ಒಳ ಅಂಗಗಳೂ ಹಿಚುಕಿದಂತಾಗಿ ಸೂಜಿಯನ್ನು ಮುಂದಕ್ಕೆ ತಳ್ಳಿ, ಗುಂಡಿಗೆಗೆ ಚುಚ್ಚಿರಬೇಕು. ತನ್ನ ಒದ್ದಾಟವೇ ಕಾರಣವಾಗಿ ಹೋರಿ ತನ್ನ ಸಾವನ್ನು ಬೇಗನೆ ತಂದುಕೊಂಡಿತ್ತು.

ಇದನ್ನು ಅಲ್ಲಿದ್ದವರಿಗೆಲ್ಲ ವಿವರಿಸಿದೆ. ಸೂಜಿಯನ್ನು ಹೊರತೆಗೆದು ರಂಗೇಗೌಡರ ಕೈಗೆ ಕೊಟ್ಟೆ.ಗೌಡರು ಮತ್ತು ಕುಟುಂಬದವರೆಲ್ಲ ನೋಡಿದ ಮೇಲೆ ಗ್ರಾಮದ ಎಲ್ಲರೂ ನೋಡುವುದು, ಲೊಚಗುಟ್ಟುವುದೂ ಮಾಡಿದರು.
'ನಾವೇನೇನೋ ತಿಳ್ಕೊಂಡು ಬಿಟ್ಟಿದ್ದಿ ಸಾ. ನಿಮ್ಮ ಇಂಜೆಕ್ಷನ್ನಿಗೆ ಹೋರಿ ಸತ್ತೋಯ್ತು ಅಂದ್ಕಂಡೇ ಇದ್ವಿ, ಈಗ ಎಲ್ಲಾ ಕ್ಲಿಯರಾತು.'


'ಲೇ ಮಗ ಇನ್ನೇಲೆ ದನಗಳಿಗೆ ಹುಲ್ಲಾಕ್ಬೇಕಾದ್ರೆ ಹುಷಾರು, ಚೆನ್ನಾಗಿ ಕೊಡವಿ ಹಾಕಲೇ' ಎಂದು ಹಲವರು ತಮ್ಮ ತಮ್ಮ ಮನೆ ಮಕ್ಕಳಿಗೆ, ಆಳುಕಾಳುಗಳಿಗೆ ಅಲ್ಲೇ ಎಚ್ಚರಿಕೆ ನೀಡಿದರು. ಗೌಡ್ರ ಮನೆಯಲ್ಲಿ ರಾಗಿ ಮುದ್ದೆ, ಸೊಪ್ಪಿನ ಸಾರು ಉಂಡು ಆಸ್ಪತ್ರೆ ತಲುಪಿದಾಗ ಮಧ್ಯಾಹ್ನ ಎರಡು ಗಂಟೆ ದಾಟಿತ್ತು. ಚಿಕಿತ್ಸೆಗೆ ಬಂದಿದ್ದ ದನಗಳ ಜಾತ್ರೆ ನೆರೆದಿತ್ತು.