ಪೊಲೀಸ್ ಸ್ಟೇಶನ್ ಮೆಟ್ಟಿಲು  ಹತ್ತಿಸಿದ ಹಾಸ್ಟಲ್‌ನ ತಿಳಿಸಾರು!?

60 ರ ಹಿನ್ನೋಟ (7) -ಡಾ.ಎಚ್.ವಿ.ರಂಗಸ್ವಾಮಿ

ಪೊಲೀಸ್ ಸ್ಟೇಶನ್ ಮೆಟ್ಟಿಲು  ಹತ್ತಿಸಿದ ಹಾಸ್ಟಲ್‌ನ ತಿಳಿಸಾರು!?

 


60 ರ ಹಿನ್ನೋಟ (7) -ಡಾ.ಎಚ್.ವಿ.ರಂಗಸ್ವಾಮಿ


 ಬೆಲ್ಲದ ಮೂಟೆ ಕದ್ದ ಮಾರನೆ ದಿನ ಇವರಿಬ್ಬರಿಗೆ ಹೊಟ್ಟೆ ಕೆಡುವುದಕ್ಕೂ, ಅವತ್ತೆ ನಮ್ಮ ಹಾಸ್ಟಲ್ ಸಾರು ನೀರು ನೀರಾಗಿ ರುಚಿಯೂ ಇರಲಿಲ್ಲವಾಗಿ ನಮ್ಮೂರಿನ ಗುಡೇಗೌಡರ ಮೊಮ್ಮಗ ಶ್ರೀನಿವಾಸ್ ತಾನು ನಾಯಕತ್ವ ವಹಿಸಿಕೊಂಡು ಟಿಫಿನ್ ಕ್ಯಾರಿಯರ್‌ನಲ್ಲಿ ಸಾರು ತುಂಬಿಕೊAಡು ಬಂದು ನಮ್ಮನ್ನೆಲ್ಲ ಸ್ಟ್ರೈಕಿಗೆ ಹುರಿದುಂಬಿಸಿಬಿಟ್ಟ. ಈ ಶ್ರೀನಿವಾಸ್ ಅಪ್ಪ ಆರೋಗ್ಯ ಇಲಾಖೆಯಲ್ಲಿ ಟೆಕ್ನಿಷಿಯನ್ ಆಗಿದ್ದರಾಗಿ, ಆಸ್ಪತ್ರೆಗೆ ಎಲ್ಲರೂ ಒಟ್ಟಾಗಿ ಹೋಗಿ ಈ ಸಾರನ್ನ ಕ್ವಾಲಿಟಿ ಟೆಸ್ಟ್ ಮಾಡಿಸುವ ಉಪಾಯ ಈತನಿಗೆ ಹೊಳೆದಿತ್ತು. ನಮ್ಮನ್ನ ಮೂರು ಸಾಲಿನಲ್ಲಿ ನಿಲ್ಲಿಸಿ, ನಾವು ಸಾಲಿನಲ್ಲಿ ಹೇಗೆ ಮುಂದುವರೆಯಬೇಕು ಮತ್ತು ಏನೇನು ಘೋಷಣೆಗಳನ್ನು ಕೂಗಬೇಕು ಅಂತ ಹೇಳಿಕೊಟ್ಟು ಒಂದೆರಡು ಬಾರಿ ಟ್ರಯಲ್ ಮಾಡಿಸಿದ. ನಾವು ಯುದ್ಧಕ್ಕೆ ಸಿದ್ಧರಾದ ಸೈನಿಕರ ಹುರುಪನ್ನ ತಂದುಕೊAಡು ಏನೋ ಮಹತ್ತಾದ್ದನ್ನ ಸಾಧಿಸುತ್ತಿರುವಂತೆ ಸಿದ್ಧರಾಗಿ ನಿಂತುಕೊAಡೆವು. ಟಿಫಿನ್ ಕ್ಯಾರಿಯರ್ ತಾನು ಹಿಡಿದುಕೊಂಡು ಮುಂದೆ ನಿಂತುಕೊAಡು “ಹಾಸ್ಟಲ್ ಮ್ಯಾನೇಜರ್‌ಗೆ?” ಅಂತ ಅವನು ಹೇಳುವುದಕ್ಕೂ, ನಾವು ಒಕ್ಕೊರಲಿನಿಂದ “ಧಿಕ್ಕಾರ!” ಅಂತ ಕೂಗಿದ ಕೂಡಲೆ ಸುತ್ತಮುತ್ತಲಿನ ವಾತಾವರಣ ಜೀವ ಕಳೆ ಪಡೆಯಿತು. 
ಈತ ಟಿಫಿನ್ ಕ್ಯಾರಿಯರ್‌ನಲ್ಲಿ ಸಾರು ತುಂಬಿಕೊAಡದ್ದಕ್ಕೇ ಗಾಬರಿಯಾಗಿದ್ದ ಅಡಿಗೆಯವರು, ಈ ಘೋಷಣೆ ಮೊಳೆಯುತ್ತಿದ್ದಂತೆ ಮತ್ತಷ್ಟು ದುಗುಡಗೊಂಡು ಹೊರ ಬಂದು ನೋಡತೊಡಗಿದರು. ಮೊದ ಮೊದಲು ಇದರ ತೀವ್ರತೆ ಅವರಿಗೆ ಅರ್ಥವಾಗಿರಲಿಲ್ಲ. ಈ ಚೋಟುದ್ದದವು ಅದೇನು ಮಾಡ್ಕತ್ತವೆ ನೋಡಾನ ಬಿಡು ಅಂದುಕೊAಡಿದ್ದವರು, ಈಗ ಗಂಭೀರವಾಗಿ ನಮಗೇನು ಕಾದಿದೆಯೋ ಅನ್ನುವಂತೆ ನೋಡತೊಡಗಿದರು. ಸಗುಣಪ್ಪ ಸ್ವಲ್ಪ ಸಮಾಧಾನಪಡಿಸಲು ಪ್ರಯತ್ನಿಸಿದನಾದರೂ, ಹುಮ್ಮಸ್ಸಿನಲ್ಲಿದ್ದ ನಮಗೆ ಸಗುಣಪ್ಪನ ಸಲಹೆ ಜುಜುಬಿ ಅನ್ನಿಸಿಬಿಟ್ಟಿತು. ನಾವು ಹೇಗಾದರೂ ಮಾಡಿ ಆ ಮ್ಯಾನೇಜರ್ ಮೇಲಿನ ಸೇಡನ್ನ ತೀರಿಸಿಕೊಳ್ಳಬೇಕಿತ್ತು.
 ಸರಿ, ನಮ್ಮ ಹಾಸ್ಟಲ್‌ನಿಂದ ಆಸ್ಪತ್ರೆ ಕಡೆಗೆ ನಮ್ಮ ಜಾಥಾ ಘೋಷಣೆಗಳೊಂದಿಗೆ ಮುಂದುವರೆಯಲು ಶುರುವಾಗುತ್ತಿದ್ದಂತೆ ದಾರಿಯಲ್ಲಿ ಹೋಗುವವರು ನಮ್ಮ ಕಡೆ ನಿಂತು ನೋಡತೊಡಗಿದರು. ನಾವು ಆಸ್ಪತ್ರೆ ತಲುಪಬೇಕಿದ್ದರೆ ನಮ್ಮ ಎಡಕ್ಕೆ ಜೂನಿಯರ್ ಕಾಲೇಜು ದಾಟಿ, ಪಂಚನಹಳ್ಳಿ ಸರ್ಕಲ್ ಹಾದು ಮತ್ತೆ ಎಡಕ್ಕೆ ಪೋಲೀಸ್ ಸ್ಟೇಶನ್ ದಾಟಿ ಆಸ್ಪತ್ರೆ ತಲುಪಬೇಕಿತ್ತು. ನಾವು ಈ ದಿನ ಇದೇ ಕಾರಣಕ್ಕಾಗಿ ಸ್ವಘೋಷಿತ ರಜೆಯ ಮೇಲಿದ್ದು, ಶಾಲಾ ಕಾಲೇಜುಗಳು ಕಚೇರಿಗಳು ತೆರೆದಿದ್ದವಾಗಿ, ಅವರೆಲ್ಲಾ ಕುತೂಹಲದಿಂದ ಜಮಾಯಿಸುತ್ತಿರಲು ನಮ್ಮ ಈ ದಿಡೀರ್ ಜಾಥಾ ಯಶಸ್ವಿಯಾಯಿತೆಂದೇ ಹೇಳಬೇಕು.
 ನಾವು ಆಸ್ಪತ್ರೆಗೆ ಹೋಗುತ್ತಿದ್ದಂತೆ ಬೇರೆಲ್ಲಾ ರೋಗಿಗಳನ್ನ ಕೂರಿಸಿ, ವೈದ್ಯರು ಕೂಡ ನಮ್ಮ ಕಡೆ ಗಮನ ಹರಿಸಿದರು. ನಮ್ಮ ಲೀಡರ್ ಈ ಸುಸಮಯವನ್ನ ಬಳಸಿಕೊಂಡು ಟಿಫಿನ್ ಕ್ಯಾರಿಯರ್ ನೊಂದಿಗೆ ಕುರ್ಚಿಯಲ್ಲಿ ಕೂತೇ ನಮ್ಮ ಅಹವಾಲು ಕೇಳುತ್ತಿದ್ದ ಡಾಕ್ಟರ್ ಬದಿಗೆ ಸರಿದು ಟಿಫಿನ್ ಕ್ಯಾರಿಯರ್ ಮುಚ್ಚಳ ತೆರೆದು, ತಿಳಿ ಕೆಂಪು ಬಣ್ಣದ ಸಾರನ್ನು ಮುಖಕ್ಕೆ ಹಿಡಿದು, “ಸ್ವಲ್ಪ ಕುಡಿದು ನೋಡಿ ಸರ್” ಅಂದುಬಿಟ್ಟ. “ಇಲ್ಲಾ ಬಿಡಪ್ಪ ನೋಡಿದ್ರೇನೆ ಗೊತ್ತಾಗುತ್ತೆ.” ಅಂತ ಡಾಕ್ಟರ್ ಮುಂದೆ ಒದಗಬಹುದಾದ ಅಪಾಯದಿಂದ ತಪ್ಪಿಸಿಕೊಳ್ಳತೊಡಗಿದರು. ನಾವು ಹಾಸ್ಟಲ್‌ನಲ್ಲಿ ಊಟ ಮಾಡಿದ ಸಾರು ಟಿಫಿನ್ ಕ್ಯಾರಿಯರ್‌ನಲ್ಲಿದ್ದ ಸಾರಿನಷ್ಟು ತೆಳ್ಳಗೆ ಇರಲಿಲ್ಲವೆಂಬ ಅನುಮಾನ ನಮ್ಮನ್ನ ಕಾಡತೊಡಗಿತು. ಸಾರಿನಲ್ಲಿ ಮೆಣಸಿನ ಕಾಯಿ ಕೂಡ ಸ್ವಲ್ಪ ಜಾಸ್ತೀನೆ ಕಂಡುಬAದವು. ತನ್ನ ಯೋಜನೆಯನ್ನ ಪರಿಣಾಮಕಾರಿಯಾಗಿಸಲು ಸೀನಪ್ಪ ಏನಾದರೂ ಸ್ವಲ್ಪ ನೀರು ಸೇರಿಸಿ ಮೆಣಸಿನಕಾಯಿ ಕಿವುಚಿರಬಹುದೆ ಅಂತ ಅನುಮಾನ ಬರತೊಡಗಿತು. ಈ ರೀತಿ ಛೋಟಾ ಮೋಟಾ ಹುಡುಗರು ಸಾಮೂಹಿಕವಾಗಿ ಆಸ್ಪತ್ರೆಗೆ ನುಗ್ಗಿದ್ದರಿಂದ ಸ್ವಲ್ಪ ಅಪ್ರತಿಭರಾದ ವೈದ್ಯರು “ನೀವೆಲ್ಲಾ ಈಗ ಸ್ಕೂಲಿಗೆ ಹೋಗ್ರಿ. ನಿಮ್ಮ ಹಾಸ್ಟಲ್ ಅಭಿವೃದ್ಧಿ ಸಮಿತಿ ಅಧ್ಯಕ್ಷರನ್ನು ಕರೆದು ಎಲ್ಲಾ ಸರಿಪಡುಸ್ತೀನಿ.” ಅಂದು ನಮ್ಮನ್ನ ಸಾಗು ಹಾಕಿದರು. ಯಥೇಚ್ಛವಾಗಿ ಬೆಲ್ಲ ತಿಂದು ಬೇದಿ ಮಾಡಿಕೊಂಡವರಿಗೂ ಈ ಸಾರಿಗೂ ಯಾವ ಸಂಬAಧವಿಲ್ಲದಿದ್ದಾಗ್ಯೂ, ಮ್ಯಾನೇಜರ್ ಮೇಲಿನ ಸಿಟ್ಟಿಗೆ ಈ ಪ್ರಕರಣ ಈ ರೀತಿ ತಿರುವು ಪಡೆದುಕೊಂಡಿತ್ತು. 
 ಈ ಪ್ರಕರಣದ ನಂತರ ಇದ್ದಕ್ಕಿದ್ದಂತೆ ಒಂದು ದಿನ ನಮ್ಮ ರಾತ್ರಿ ಊಟದ ಟೇಮಿಗೆ ಸರಿಯಾಗಿ ಜೂನಿಯರ್ ಕಾಲೇಜು ಪ್ರಾಂಶುಪಾಲರಾದ ಮಹಾಬಲೇಶ್ವರರವರು ಮಾನೇಜರ್ ಕೂಡ ಹಾಜರಾದರು. ನಾವೆಲ್ಲಾ ಊಟ ಮಾಡುತ್ತಿರುವುದನ್ನ ಗಮನಿಸುತ್ತಾ, ಅಡಿಗೆ ಮನೆ ಇತ್ಯಾದಿ ಪರಿಶೀಲಿಸುತ್ತಾ, ಅಡಿಗೆಯವರನ್ನ ಅದೂ ಇದೂ ಕೇಳುತ್ತಾ ತಿರುಗಾಡತೊಡಗಿದರು. ಇದರಿಂದ ಯಾಕೋ ಮುಜುಗುರವಾದಂತೆ ಅನ್ನಿಸಿ ಮಾನೇಜರ್ “ಆಫೀಸ್‌ಗೆ ಹೋಗಿ ಮಾತಾಡೋಣ ನಡೀರಿ” ಅಂದು ಅಡಿಗೆ ಮನೆ ಬಾಗಿಲಿಂದ ಹೊರ ಕರೆದುಕೊಂಡು ಹೊರಟರು. ಬಾಗಿಲಿನಿಂದ ಪ್ರಾಂಶುಪಾಲರು ಮೊದಲು ಹೋಗಿದ್ದು, ಅವರ ಹಿಂದೆ ಮ್ಯಾನೇಜರ್ ಹೋಗಿದ್ದನ್ನ ನಾವೆಲ್ಲ ಸರಿಯಾಗಿಯೆ ನೋಡಿದ್ದೆವು. ಈ ಇಬ್ಬರೂ ಹೊರ ಹೊಕ್ಕ ಕೆಲವೇ ಸೆಕೆಂಡುಗಳಲ್ಲಿ “ಸ್ಕೌಂಡ್ರಲ್! ಚಪ್ಪಲಿ ಕಾಲಲ್ಲಿ ಒದಿತೀಯೇನೊ? ಸ್ಟುಪಿಡ್, ನೀನೇನು ಮನುಷ್ಯನೊ? ಮೃಗಾನೊ? ಬಾ ಸ್ಟೇಷನ್ನಿಗೆ ನಿನ್ನ ಗತಿ ಕಾಣುಸ್ತೀನಿ” ಅಂತ ಕೂಗಾಡತೊಡಗಿದ್ದನ್ನ ಕೇಳಿಸಿಕೊಂಡ ನಾವು, ಅರ್ಧಕ್ಕೆ ಊಟ ಬಿಟ್ಟು ಹೊರ ಓಡಿ ಬಂದೆವು. ನಮ್ಮ ಹಾಸ್ಟಲ್‌ನಲ್ಲಿ ಊಟದ ಮೆಸ್ ಪ್ರತ್ಯೇಕವಾಗಿ ವಸತಿ ಭಾಗದ ಹಿಂಭಾಗದಲ್ಲಿತ್ತು. ವಸತಿ ಭಾಗದ ಕಟ್ಟಡದಕ್ಕೂ ಮೆಸ್‌ಗೂ ಮಧ್ಯೆ ಸುಮಾರು ಅಂತರವಿದ್ದು, ವಸತಿ ಭಾಗದ ಹಿಂಭಾಗದ ಗೋಡೆಗೆ ಹೊಂದಿಕೊAಡAತೆ ಒಂದು ಬಾಗಿಲು ಇದ್ದು ಸಾಮಾನ್ಯವಾಗಿ ಅದು ಮುಚ್ಚೇ ಇರುತ್ತಿತ್ತು. ಮೂರು ಮೆಟ್ಟಿಲು ಹತ್ತಿ ಬಾಗಿಲಿನಿಂದ ಒಳ ಪ್ರವೇಶಿಸಬೇಕಿತ್ತು. ಈ ಪ್ರಕರಣ ಸಂಭವಿಸಿದ ಈ ದಿನ ಅದು ತೆರೆದಿತ್ತು. ಮೆಸ್‌ನಿಂದ ಈ ಮೆಟ್ಟಿಲ ಕಡೆ ಹೋಗುವಾಗ ಮಾನೇಜರ್ ಮುಂದೆ ಹೋಗುತ್ತಿದ್ದ ಪ್ರಾಂಶುಪಾಲರನ್ನ ಮಾನೇಜರ್ ಬಲಗೈಯಿಂದ ಮುಂದಕ್ಕೆ ತಳ್ಳಿ, ಚಪ್ಪಲಿ ಕಾಲಲ್ಲಿ ಒದ್ದದ್ದನ್ನ ತಾನು ನೋಡಿದ್ದಾಗಿ ಅದೇ ನೇರದಲ್ಲಿ ಊಟಕ್ಕೆ ಕೂತಿದ್ದವನೊಬ್ಬ ಹೇಳಿದ್ದರಿಂದ ಅದು ಏನು ಎಂತು ಅಂತ ನಮಗೆ ಅರ್ಥವಾಯ್ತು. ಹಾಸ್ಟಲ್ ಹುಡುಗರಲ್ಲಿ ಈ ಪ್ರಕರಣದ ಪ್ರತ್ಯಕ್ಷದರ್ಶಿ ಈತನೊಬ್ಬನೆ. ಈ ಮಾನೇಜರ್ ಸಾಮಾನ್ಯವಾಗಿ ನಮಗೆಲ್ಲಾ ಹೊಡೆಯಬೇಕೆಂದರೆ ಕೈಗಿಂತ ಕಾಲನ್ನೇ ಬಳಸುತ್ತಿದ್ದುದು ನಮ್ಮೆಲ್ಲರ ಅನುಭವಕ್ಕೆ ಬಂದಿತ್ತು. ಯಾವಾಗಲಾದರೂ ನಾವು ಓದಿಕೊಳ್ಳುವಾಗ ಹಾಸ್ಟಲ್ ಒಳಗೆ ಪ್ರವೇಶಿಸಿದರೆ ನೆಲದ ಮೇಲೆ ಕೂತಿರುತ್ತಿದ್ದ ನಮಗೆ ಕಾಲಿನಿಂದಲೆ ನೆಲಕ್ಕೆ ಗುದ್ದಿ ಹೊಡೆಯುವವನಂತೆ ಪಾದ ಎತ್ತುತ್ತಿದ್ದ. ಇದು ಎಲ್ಲರಿಗೂ ಗೊತ್ತಿತ್ತು. ಆದರೆ ಈ ಪ್ರಾಂಶುಪಾಲರಿಗೂ ಮೊದಲು ಈತನಿಂದ ಕಾಲಲ್ಲಿ ಒದೆಸಿಕೊಂಡವರಲ್ಲಿ ನಾನೂ ಒಬ್ಬ. ಅದನ್ನ ಇಲ್ಲಿ ಹೇಳಲೇಬೇಕಿದೆ. 
 ಈ ಘಟನೆಗೂ ಸ್ವಲ್ಪ ದಿನದ ಹಿಂದೆ ನಮ್ಮ ಮೆಸ್‌ನ ಗೋಡೆಯ ಪಕ್ಕ ನಾಯಿಯೊಂದು ಮರಿ ಹಾಕಿತ್ತು. ನನಗೆ ಚಿಕ್ಕಂದಿನಿAದ ಈ ನಾಯಿಮರಿಗಳೆಂದರೆ ತುಂಬಾ ಇಷ್ಟ. ನಾನು ಆ ನಾಯಿ ಇಲ್ಲದ ಸಮಯ ನೋಡಿ ಸ್ವಲ್ಪ ದೂರದಲ್ಲಿ ನಿಂತು ಅವುಗಳನ್ನು ಗಮನಿಸುವುದು, ಅವುಗಳು ʼ ಕುಯ್ ಕುಯ್ ʼ ಅಂತ ಶಬ್ದ ಮಾಡುವುದನ್ನ ಅದರಂತೆಯೇ ಅನುಕರಿಸುವುದನ್ನು ಮಾಡುತ್ತಿದ್ದೆ. ಈ ರೀತಿ ನಾಯಿ ಮರಿಗಳ ಕುಯ್ ಕುಯ್ ಶಬ್ದವನ್ನ ಪ್ರಾಕ್ಟೀಸು ಮಾಡಿದ್ದ ನಾನು ನನ್ನ ಈ ಕಲೆಯನ್ನು ಪ್ರದರ್ಶಿಸಲು ಒಂದು ದಿನ ಹಾಸ್ಟಲ್‌ನ ಹಿಂಭಾಗದ ಬಾಗಿಲಿನ ಮೆಟ್ಟಿಲ ಮೇಲೆ ಮಂಡಿಯಿAದ ನೆಲದ ಮೇಲೆ ಕುಳಿತು ಬಾಗಿಲ ಕಡೆ ಮುಖ ಮಾಡಿ ಬಗ್ಗಿಕೊಂಡು ಕುಯ್ ಕುಯ್ ಅಂತ ಶಬ್ದ ಮಾಡಲು ತಯಾರಾದೆ. ನನ್ನ ಉದ್ದೇಶವಿದ್ದದ್ದು ನಾಯಿಮರಿ ಗೋಳಾಡುವುದನ್ನು ಕೇಳಿಸಿಕೊಂಡು ಹಾಸ್ಟಲ್ ಹುಡುಗರು ಬಂದರೆ ನನ್ನ ಮಿಮಿಕ್ರಿಯಿಂದ ಅಚ್ಚರಿ ಪಡಿಸುವುದು. 
 ಆದರೆ ಆದದ್ದೆ ಬೇರೆ. ಇದ್ದಕ್ಕಿದ್ದಂತೆ ನನ್ನ ಬೆನ್ನ ಮೇಲೆ ದೊಪ್ ಅಂತ ಭಾರವಾದದ್ದೇನೋ ಬಿದ್ದಂತಹ ಗುದ್ದಿನೊಂದಿಗೆ ನನ್ನ ತಲೆ ಕೂದಲು ಹಿಡಿದು ಯಾರೋ ಎತ್ತಿಬಿಟ್ಟರು. ನಾನು ಸಾವರಿಸಿಕೊಂಡು ಹಿಂತಿರುಗಿ ನೋಡಿದರೆ ಈ ಮ್ಯಾನೇಜರ್ ಮಹಾತ್ಮ! ನಾನು ಎದ್ದು ಬಿದ್ದು ಓಟ ಕಿತ್ತಿದ್ದೆ. ಆಮೇಲೆ ನನಗೆ ತಿಳಿದದ್ದೆಂದರೆ, ಆತ ಕಾಲಿನಿಂದ ನನ್ನ ಬೆನ್ನಿಗೆ ಒದ್ದು, ಆಮೇಲೆ ಜುಟ್ಟು ಹಿಡಿದು ಮೇಲಿತ್ತಿದ್ದಾಗಿ ಈ ದೃಶ್ಯವನ್ನು ಮೆಸ್‌ನ ಕಿಟಿಕಿಯಿಂದ ನೋಡಿದ್ದ ಅಡಿಗೆಯವರು ನನಗೆ ಹೇಳಿದಾಗ. ಹಾಗಾಗಿ ಮಹಾಬಲೇಶ್ವರ ಪ್ರಾಂಶುಪಾಲರಿಗೆ ಈತ ಚಪ್ಪಲಿ ಕಾಲಲ್ಲಿ ಒದ್ದದ್ದರ ಬಗ್ಗೆ ನನಗೇನೂ ಆಶ್ಚರ್ಯವಾಗಲಿಲ್ಲ.
 ಈ ಪ್ರಕರಣದ ನಂತರ ನಮ್ಮ ಹಾಸ್ಟಲ್ ವಾತಾವರಣ ಕ್ಷಣ ಕ್ಷಣಕ್ಕೂ ಬಿಸಿಯೇರತೊಡಗಿತು. ಹೈಸ್ಕೂಲ್‌ನ ನಮ್ಮ ಟೀಚರ್‌ಗಳು ಮತ್ತು ಮಾಧ್ಯಮಿಕ ಶಾಲೆಯ ಒಬ್ಬಿಬ್ಬರು ಟೀಚರ್‌ಗಳು ನಮ್ಮ ಹಾಸ್ಟಲ್‌ಗೆ ಬಂದು ನಡೆದ ಘಟನೆಯ ಬಗ್ಗೆ ವಿವರಗಳನ್ನು ಪಡೆಯತೊಡಗಿದರು. ಹೀಗೆ ಬಂದವರಲ್ಲಿ ವಿ.ಜಿ.ಜಿ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದವರಲ್ಲಿ ಒಬ್ಬರು. ಮಹಬಲೇಶ್ವರರವರಿಗೆ ಚಪ್ಪಲಿ ಕಾಲಲ್ಲಿ ಒದ್ದದ್ದನ್ನು ನೋಡಿದ್ದವನು ಒಬ್ಬಾತನೆ. ಆತನಿಗೆ ಈ ವಿ.ಜಿ.ಜಿ.ಯವರು “ಅದು ಏನು ನಡೆಯಿತೋ, ಹಂಗೇ ಹೇಳಬೇಕು ಸೇಶನ್ನಲ್ಲಿ. ಎಲ್ಲಿ ನನ್ನ ಮುಂದೆ ಹೇಳು ನೋಡೋಣ” ಅಂದರು. ಆಗಲೇ ನಮಗೆ ಅರ್ಥವಾಗಿದ್ದು ಈ ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲೇರಿದೆಯೆಂದು. ಸ್ಟೇಶನ್ನು ಅನ್ನುತ್ತಿದ್ದ ಹಾಗೆ ಅಲ್ಲಿಯರೆಗೂ ಎಲ್ಲಾ ವಿವರಗಳನ್ನ ಸರಿಯಾಗಿಯೇ ಹೇಳುತ್ತಿದ್ದ ಈ ಭೂಪತಿ ಆಮೇಲೆ ತಡವರಿಸಲು ಶುರು ಮಾಡಿದ. ಆಗ ಉಳಿದ ಹುಡುಗರೂ ಮ್ಯಾನೇಜರ್ ಹಾಸ್ಟಲ್ ಒಳಗೆ ಬಂದಾಗ ಕಾಲು ಎತ್ತುತ್ತಿದ್ದುದು, ಕಾಲಲ್ಲೆ ನೆಲಕ್ಕೆ ಪಾದದಿಂದ ಅಪ್ಪಳಿಸಿ “ಒದಿತೀನ್ ನೋಡು” ಅನ್ನುತ್ತಿದ್ದದ್ದನ್ನೆಲ್ಲಾ ಇದೇ ಚಾನ್ಸು ಮ್ಯಾನೇಜರ್ ಮೇಲೆ ಸೇಡು ತೀರಿಸಿಕೊಳ್ಳಾಕೆ ಅನ್ನುವಂತೆ ಹೇಳತೊಡಗಿದರು. ಬೇರೆ ಹುಡುಗರು ಹೇಳುತ್ತಿದ್ದ ಆ ಚೋಟಾ ಮೋಟಾ ಪ್ರಕರಣಗಳೆಲ್ಲಾ ನನ್ನ ನಾಯಿಮರಿ ಮಿಮಿಕ್ರಿ ಮಾಡುವಾಗಿನ ಪ್ರಕರಣಕ್ಕೆ ಹೋಲಿಸಿದಾಗ ಬಹಳ ಜುಜುಬಿ ಅನ್ನಿಸಿಬಿಟ್ಟವು. ಅಲ್ಲದೆ ಈ ಪ್ರಕರಣದ ನಂತರ ನನಗೂ ಈ ಮ್ಯಾನೇಜರ್ ಮೇಲೆ ಸಿಟ್ಟಿತ್ತಾಗಿ ನಾನು ಎಳೆ ಎಳೆಯಾಗಿ ಎಲ್ಲವನ್ನೂ ಅವರ ಮುಂದೆ ಬಿಚ್ಚಿಟ್ಟೆ. ಅಷ್ಟೇ ಸಾಕಿತ್ತು ವಿ.ಜಿ.ಜಿಯವರಿಗೆ. ನನ್ನ ವಾಗ್ಝರಿಯಿಂದ ಪುಳಕಿತರಾದ ಇವರು ಆ ಪ್ರತ್ಯಕ್ಷದರ್ಶಿ ಹುಡುಗನ್ನ ಬಿಟ್ಟು ಬಿಟ್ಟರು. ನಾನೇ ಸರಿಯಾದ ಸಾಕ್ಷಿ ಅಂತ ತೀರ್ಮಾನಿಸಿ ಆ ಪ್ರತ್ಯಕ್ಷದರ್ಶಿಯ ಪಾತ್ರವನ್ನು ನನಗೆ ವಹಿಸಿ ಪ್ರಾಕ್ಟೀಸು ಮಾಡಿಸಿದರು. ನಾವು ಮೂರ್ನಾಲ್ಕು ಹುಡುಗರನ್ನ ಸೇಶನ್ನಿಗೆ ಕರೆದುಕೊಂಡು ಹೋಗಿ ಸಬ್ ಇನ್ಸ್ಪೆಕ್ಟರ್ ಮುಂದೆ ಹಾಜರುಪಡಿಸಿದರು. ನಾನು ಅದರಲ್ಲಿ ಮಹಬಲೇಶ್ವರರವರಿಗೆ ಮ್ಯಾನೇಜರ್ ಚಪ್ಪಲಿ ಕಾಲಲ್ಲಿ ಒದ್ದರೆಂಬ ಬಗ್ಗೆ ಹೇಳಿಕೆ ನೀಡಲು ಪ್ರತ್ಯಕ್ಷ ಸಾಕ್ಷಿ! ನಮ್ಮಿಂದ ವಿವರಗಳನ್ನ ಪಡೆದÀ ಇನ್ಸ್ ಪೆಕ್ಟರ್ ಮತ್ತೆ ಅಗತ್ಯ ಬಿದ್ದಾಗ ಕರೆಸುವುದಾಗಿ ಹೇಳಿ ಕಳಿಸಿಕೊಟ್ಟರು.
 ನಾವೆಲ್ಲಾ ಈ ರೀತಿ ಪೋಲೀಸ್ ಸ್ಟೇಶನ್ ಕಡೆ ಇರುವಾಗ ಹಾಸ್ಟಲ್‌ನಲ್ಲಿ ಲಂಕಾ ದಹನದ ಪ್ರಸಂಗದ ರೀತಿ ಹಾಸ್ಟಲ್ ದಹನದ ಪ್ರಸಂಗ ಏರ್ಪಾಡಾಗಿತ್ತು. ಪಂಚನಹಳ್ಳಿಯ ಕುಖ್ಯಾತಿಯೊಬ್ಬ ಹಾಸ್ಟಲ್ ವಾರ್ಡನ್‌ನ ಈ ವರ್ತನೆಯಿಂದ ಪ್ರೇರೇಪಿತನಾಗಿ ಸಂಜೆಯಾಗುತ್ತಿದ್ದAತೆ ಹುಡುಗರನ್ನೆಲ್ಲಾ ಹುರಿದುಂಬಿಸಿ ಪಕ್ಕದ ತೆಂಗಿನ ತೋಟದಲ್ಲಿ ಗುಡ್ಡೆ ಹಾಕಿದ್ದ ತೆಂಗಿನ ಗರಿಗಳನ್ನೆಲ್ಲಾ ಎಳೆಸಿ ತಂದು ಹಾಸ್ಟಲ್ ಗೋಡೆಗೆ ಆನಿಸುತ್ತಿದ್ದ. ನಾವೆಲ್ಲಾ ಸ್ಠೇಶನ್ನಿನಲ್ಲಿ ಹೇಳಿಕೆ ಕೊಟ್ಟು ಹಾಸ್ಟಲ್ ಕಡೆ ಬಂದು ನೋಡಿದರೆ ಈತನ ನೇತೃತ್ವದಲ್ಲಿ ಎಲ್ಲಾ ಹುಡುಗÀರು ತೆಂಗಿನ ಗರಿಗಳನ್ನ ಎಳತಂದು ಹಾಸ್ಟಲ್ ಗೋಡೆಗೆ ಒಟ್ಟುತ್ತಿದ್ದರು. ಅಡಿಗೆಯವರು ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದುದನ್ನು ಕಂಡು ಮೂಕ ಪ್ರೇಕ್ಷಕರಾಗಿದ್ದರು. 
 ಈ ಕುಖ್ಯಾತಿ ಒಬ್ಬ ಪುಡಿರೌಡಿ. ಈತನ ಬಗ್ಗೆ ಅನೇಕ ಕತೆಗಳನ್ನ ಹೇಳುತ್ತಿದ್ದರು. ಇವನ ಮಾಮೂಲಿ ಕೃತ್ಯಗಳಲ್ಲಿ ಹೆಸರುವಾಸಿಯಾದದ್ದೆಂದರೆ, ರಾತ್ರಿ ಹೊತ್ತು ಪೋಲೀಸ್ ವೇಷದಲ್ಲಿ ನಿಂತುಕೊAಡು ನಿರ್ಜನ ಪ್ರದೇಶದಲ್ಲಿ ಬಸ್‌ಗಳನ್ನ ಅಡ್ಡ ಹಾಕುವುದು. ಕಂಡಕ್ಟರ್ ಎಲ್ಲರಿಗೂ ಟಿಕೆಟ್ ಕೊಟ್ಟಿದ್ದಾನೋ ಇಲ್ವೊ ಅಂತ ಚೆಕ್ ಮಾಡಿ ಬೆದರಿಸಿ ಒಂದಷ್ಟು ಮಾಮೂಲಿ ವಸೂಲಿ ಮಾಡಿಕೊಳ್ಳುವುದು.
 ಇನ್ನೇನು ಹಾಸ್ಟಲ್ ಗೋಡೆಗೆ ಒಟ್ಟಿದ್ದ ಗರಿಗಳಿಗೆ ಬೆಂಕಿ ಹಚ್ಚಲು ಎಲ್ಲರೂ ತಯಾರಾಗಿ ಹುರುಪಿನಿಂದ ಹುಡುಗರು ಯುದ್ದೋನ್ಮಾದದಲ್ಲಿರುವಂತೆ ತರಾತುರಿಯಲ್ಲಿರುವಾಗಲೇ, ಅತ್ತ ಸಿಂಗಟಿಗೆರೆ ಮಾರ್ಗದಲ್ಲಿ ಸರತಿಯ ಮೇಲೆ ಬೆಳಕು ಹರಿದಂತೆ ಪಂಚನಹಳ್ಳಿ ಕಡೆಗೆ ಹತ್ತಿರವಾಗತೊಡಗಿತು. ಸ್ವಲ್ಪದರಲ್ಲೇ ಅದು ಪೋಲೀಸ್ ಜೀಪ್‌ಗಳ ಸದ್ದು ಅನ್ನುವುದು ನಮ್ಮೆಲ್ಲರ ಅರಿವಿಗೆ ಬಂತು. ನಮ್ಮೆಲ್ಲರ ನೇತೃತ್ವ ವಹಿಸಿದ್ದ ಆ ಕುಖ್ಯಾತಿ ಕ್ಷಣಾರ್ಧದಲ್ಲಿ ಮಾಯವಾಗಿದ್ದ. ಅಷ್ಟರಲ್ಲಿ ನಮ್ಮ ಹಾಸ್ಟಲ್‌ನ ಒಬ್ಬಿಬ್ಬರು ಹುಡುಗರು ಈ ಎಲ್ಲಾ ವಿದ್ಯಮಾನಗಳನ್ನು ಕೂಲಂಕುಶವಾಗಿ ಗಮನಿಸಲು ಪೋಲೀಸ್ ಠಾಣೆಯ ಸುತ್ತಲೇ ಗಿರಿಕಿ ಹೊಡೆಯುತ್ತಿದ್ದವರು “ಕಡೂರಿಂದ ಪೋಲೀಸ್ ಜೀಪು ಬಂದ್ವು. ಹುಡುಗರೆಲ್ಲಾ ಸ್ಟೇಶನ್ನಿಗೆ ಬರಬೇಕಂತೆ.” ಅಂತ ಏದುಸುರು ಬಿಡುತ್ತಾ ಓಡಿಬಂದರು. ಪಾಪ! ಹಾಸ್ಟಲ್ ಗೆ ಬೆಂಕಿ ಇಡಲು ಕಾತುರದಲ್ಲಿದ್ದವರಿಗೆ ಉತ್ಸಾಹ ಭಂಗವಾಗಲಾಗಿ, “ಥೂ! ಇವನೌನ. ಈ ಪೋಲಿಸನೋರೇನು ಕಡದು ದಬ್ಬಾಕಿಬಿಡ್ತಾರೆ ನೋಡು.” ಅಂತ ಎಲ್ಲರೂ ಪೋಲೀಸ್ ಸ್ಟೇಶÀನ್ ಕಡೆಗೆ ಕಾಲಾಕತೊಡಗಿದರು. 
 ನಮಗೆ ಈ ಪ್ರಕರಣ ಈ ಪಾಟಿ ಬೃಹದಾಕಾರವಾಗಿ ಬೆಳೆಯುವ ಅರಿವಿರಲಿಲ್ಲ. ಅಬ್ಬಬ್ಬಾ ಅಂದ್ರೆ ನಮ್ಮ ಉದ್ದೇಶವಿದ್ದದ್ದು ಒಂದು ಅರ್ಧ ಮುದ್ದೆ ದಿನಾ ಜಾಸ್ತಿ ಸಿಗಲಿ, ಸಾರಿನಲ್ಲಿ ಸ್ವಲ್ಪ ಕಾಳು-ತರಕಾರಿ ಜಾಸ್ತಿ ಇರಲಿ ಅಂತ. ಹಾಸ್ಟಲ್ ನ ಸೀನಿಯರ್ ಗಳಲ್ಲಿ ಕೆಲವರು ಉಡಾಳರಿದ್ದರು. ಇವರನ್ನ ಸರಿಯಾಗಿ ಇಟ್ಟುಕೊಂಡರೆ ಸಾಕಿತ್ತು. ಈ ಉಡಾಳರಿಗೆ ಅಡಿಗೆಯವರಿಂದ ಸ್ವಲ್ಪ ಅದೂ ಇದೂ ಗಿಟ್ಟುತ್ತಿತು. ಇವರು ಅಡಿಗೆಯವರ ಪರ ವಹಿಸಿ ನಮಗೆ ಗುರಾಯಿಸುತಿದ್ದರಿಂದ ನಾವೆಲ್ಲಾ ಅಸಹಾಯಕರಾಗಿದ್ದೆವು. ಆದರೆ ಈ ಸಾರಿ ಮಾತ್ರ ಇವರ ಬೇಳೆಯನ್ನೂ ಬೇಯಿಸಿಕೊಳ್ಳಲಾಗಲಿಲ್ಲ. ನಮಗೆ ಅಡಿಗೆಯವರ ಮೇಲಿದ್ದ ಸಿಟ್ಟು ಅಲ್ಲಿಯೇ ಸಣ್ಣ ಪಟ್ಟ ಪ್ರತಿಕ್ರಿಯೆಯಲ್ಲಿ ಮುಗಿದು ಹೋಗುತ್ತಿತ್ತು. ಒಂದು ವೇಳೆ ಮ್ಯಾನೇಜರ್ ವರೆಗೂ ಮಾತ್ರವೆ ಅದು ನಮ್ಮಿಂದ ವರ್ಗಾವಣೆ ಆಗುವುದಿತ್ತು. ಆದರೆ ಈ ಐಲು ಪೈಲು ಮ್ಯಾನೇಜರ್ ಹತ್ತಿರ ನಾವು ನಮ್ಮ ಅಹವಾಲುಗಳನ್ನು ಹೇಳಿಕೊಳ್ಳಲೇ ಆಗುತ್ತಿರಲಿಲ್ಲ. ಸುಬ್ಬೇಗೌಡ ಅನ್ನುವ ಈ ಹಿಂದಿನ ಮ್ಯಾನೇಜರ್ ಇದ್ದಾಗ ನಾವು ಈ ರೀತಿ ನಮ್ಮ ಕಷ್ಟ ಸುಖಗಳನ್ನ ಹೇಳಿಕೊಂಡರೆ ತಕ್ಷಣವೇ ಪರಿಹಾರ ಸಿಕ್ಕಿಬಿಡುತ್ತಿತ್ತು. ನಮ್ಮ ಸಿಟ್ಟು ಸೆಡವುಗಳೆಲ್ಲಾ ಅಲ್ಲೇ ಶಮನವಾಗಿಬಿಡುತ್ತಿದ್ದವು. ಸಾರು ತಿಳಿಯಾಗಿದ್ದದ್ದಾಗಲಿ, ಅಷ್ಟು ರುಚಿಯಿಲ್ಲದ್ದಾಗಲಿ ಇಲ್ಲಿ ಪ್ರಧಾನವಾದ್ದಲ್ಲ. ಮ್ಯಾನೇಜರ್ ಮೇಲಿನ ಸಿಟ್ಟು ಮಡುಗಟ್ಟಿ ಈ ಪ್ರಕರಣವನ್ನು ಇಲ್ಲಿಯರಿಗೆ ಬೆಳೆಸಿತ್ತು. ನಮ್ಮ ಪರಿಸ್ಥಿತಿಯನ್ನು ಸರಿಪಡಿಸಲು ಬಂದ ಪ್ರಾಂಶುಪಾಲರನ್ನ ಈ ಮನುಷ್ಯ ನಡೆಸಿಕೊಂಡ ರೀತಿಯಿಂದ ನಾವಷ್ಟೆ ಅಲ್ಲ, ಶಿಕ್ಷಕರು ಮತ್ತು ಸಾರ್ವಕನಿಕರೆಲ್ಲಾ ತಿರುಗುಬಿದ್ದು ವಿಷಮ ಪರಿಸ್ಥಿತಿ ಉಂಟಾಗಿತ್ತು.
 ಪೋಲಿಸ್ ಠಾಣೆಯಲ್ಲಿ ಡಿವೈಎಸ್‌ಪಿ ಸಮ್ಮುಖದಲ್ಲಿ ಮ್ಯಾನೇಜರ್ ವಿಚಾರಣೆ ನಂತರ ನಮ್ಮಿಂದ ಹೇಳಿಕೆ ಪಡೆಯಲಾಯ್ತು. ನಾನು ಪ್ರತ್ಯಕ್ಷದರ್ಶಿಯಲ್ಲವಾದರೂ ವಿ.ಜಿ.ಜಿ.ಹೇಳಿಕೊಟ್ಟಂತೆ ಎಲ್ಲವನ್ನೂ ಹೇಳಿ ಬಿಟ್ಟೆ. ನಮ್ಮಿಂದ ಸಹಿ ಪಡೆದು ಮೇಲ್ಮಟ್ಟಕ್ಕೆ ವಿಚಾರಣೆಗೆ ಕರೆಯುವುದಾಗಿ ಎಲ್ಲರೂ ಹೆದರಿಸಿದ್ದರು. ಆದರೆ ನಮ್ಮಿಂದ ಸಹಿಯನ್ನೇನು ಪಡೆಯಲಿಲ್ಲ. ಬದಲಾಗಿ ಇಡೀ ಪ್ರಕರಣ ರಾಜಿಯಲ್ಲಿ ಪರ್ಯವಸಾನವಾಯ್ತು ಅಂತ ನಮಗೆ ತಿಳಿಯಿತು. ಅಲ್ಲಿಗೆ ಸ್ವಲ್ಪ ದಿನಗಳ ನಂತರ ಮ್ಯಾನೇಜರ್ ವರ್ಗಾವಣೆಯಾದರು.