ಕಲ್ಲರಳಿ ಹೂವಾಗಿ, ಹೈಕಮಾಂಡ್‍ಗೆ ಬೇಕಾಗಿ, ಕಾಂಗ್ರೆಸ್‍ಗೆ ಬೆಳಕಾಗಲಿರುವ ಮಲ್ಲಿಕಾರ್ಜುನ ಖರ್ಗೆ !

  ಕಲ್ಲರಳಿ ಹೂವಾಗಿ, ಹೈಕಮಾಂಡ್‍ಗೆ ಬೇಕಾಗಿ, ಕಾಂಗ್ರೆಸ್‍ಗೆ ಬೆಳಕಾಗಲಿರುವ ಮಲ್ಲಿಕಾರ್ಜುನ ಖರ್ಗೆ !

   ಕಲ್ಲರಳಿ ಹೂವಾಗಿ, ಹೈಕಮಾಂಡ್‍ಗೆ ಬೇಕಾಗಿ,  ಕಾಂಗ್ರೆಸ್‍ಗೆ ಬೆಳಕಾಗಲಿರುವ ಮಲ್ಲಿಕಾರ್ಜುನ ಖರ್ಗೆ !

ವರ್ತಮಾನ

ಆರ್.ಹೆಚ್.ನಟರಾಜ್

ಅಂದು ಖರ್ಗೆ ಕರ್ನಾಟಕದಲ್ಲಿದ್ದರೆ ತಮ್ಮ ಗುರಿ ಈಡೇರುವುದು ಕಷ್ಟ ಎಂದು ತಂತ್ರಗಾರಿಕೆ ಮಾಡಿ ಅವರನ್ನು ದೆಹಲಿ ಯಾತ್ರೆಗೆ ಕಳುಹಿಸಿದವರು, ಇಂದು ಅವರ ಮುಂದೆ ಕೈಕಟ್ಟಿ ನಿಲ್ಲುವ ಹಂತಕ್ಕೆ ಖರ್ಗೆ ಎಂಬ ಶಿಸ್ತಿನ ಸಿಪಾಯಿ, ಪಕ್ಷ ನಿಷ್ಠೆಯ ನಾಯಕ ತಲುಪಿದ್ದಾರೆ.

 

ಕಲ್ಲರಳಿ ಹೂವಾಗಿ, ಹೈಕಮಾಂಡ್‍ಗೆ ಬೇಕಾಗಿ,

ಕಾಂಗ್ರೆಸ್‍ಗೆ ಬೆಳಕಾಗಲಿರುವ ಮಲ್ಲಿಕಾರ್ಜುನ ಖರ್ಗೆ !

 

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ರಾಗಿ  ರಾಜ್ಯಸಭೆಯ ಪ್ರತಿಪಕ್ಷ ನಾಯಕ ಹಾಗೂ ಗಾಂಧಿ ಕುಟುಂಬದ ಪರಮಾಪ್ತ ಮಲ್ಲಿಕಾರ್ಜುನ ಖರ್ಗೆ  ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಚುನಾವಣೆಯಲ್ಲಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದು, ಗಾಂಧಿ ಕುಟುಂಬದ ಶ್ರೀ ರಕ್ಷೆ ಖರ್ಗೆ ಅವರ ಮೇಲಿದ್ದು ಅವರ ಆಯ್ಕೆ ಅತ್ಯಂತ ಸುಲಭ ಎನ್ನಲಾಗುತ್ತಿದೆ.

ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದರೆ ಈ ಅತ್ಯುನ್ನತ ಹುದ್ದೆಗೇರಿದ ಎರಡನೇ ಕನ್ನಡಿಗರಾಗಲಿದ್ದಾರೆ.ಈ ಮೊದಲು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಈ‌ ಹುದ್ದೆ ಅಲಂಕರಿಸಿದ್ದರು. ಹಾಗೆಯೇ ಈ ಹುದ್ದೆ ಅಲಂಕರಿಸಿದ ಎರಡನೇ ದಲಿತ ನಾಯಕ ಎಂಬ ಹೆಗ್ಗಳಿಕೆಯೂ ಇವರದ್ದಾಗಲಿದೆ ಈ ಮೊದಲು ದಿವಂಗತ ಬಾಬು ಜಗಜೀವನ್ ರಾಮ್ ಈ ಹುದ್ದೆ ಅಲಂಕರಿಸಿದ್ದರು.

ಇಲ್ಲಿ ಎಲ್ಲರೂ ಗಮನಿಸಬೇಕಾದ ಸಂಗತಿಯೆಂದರೆ ಖರ್ಗೆ,ಕನ್ನಡಿಗ,ದಲಿತ ಎಂಬ ಸೀಮಿತ ಚೌಕಟ್ಟನ್ನು ಮೀರಿದ ದೂರದೃಷ್ಟಿಯುಳ್ಳ ಪರಿಪಕ್ವ ನಾಯಕ. ಇವರಂತಹವರಿಗೆ ಜಾತಿ,ಧರ್ಮ,ಪ್ರದೇಶದ ಮಿತಿಯಿಲ್ಲ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಅನ್ನುವ ಕುಗ್ರಾಮದಲ್ಲಿ ಜುಲೈ 21, 1942ರಲ್ಲಿ ಜನಿಸಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೀಗ ಎಂಬತ್ತು ವರ್ಷ. ಚಿಕ್ಕ ವಯಸ್ಸಿನಲ್ಲಿಯೇ ವರವಟ್ಟಿಯಲ್ಲಿದ್ದ ಅವರ ಮನೆಗೆ ಬೆಂಕಿ ಬಿದ್ದಿದ್ದರಿಂದ ಕುಟುಂಬದ ಅನೇಕರನ್ನು ಕಳೆದುಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ತಂದೆಯ ಜೊತೆಗೆ ಕಲಬುರಗಿಗೆ ಬಂದು ಅಲ್ಲಿ ಬದುಕು ಕಟ್ಟಿಕೊಂಡರು.

ಎಲ್ಎಲ್ ಬಿ ಪದವಿ ಪಡೆದಿರುವ ಖರ್ಗೆ, ಕಲಬುರಗಿಯ ಎಂ ಎಸ್ ಕೆ ಮಿಲ್ ನೌಕರರ ಕಾನೂನು ಸಲಹೆಗಾರರಾಗಿ, ಕಾರ್ಮಿಕ ಹಕ್ಕಗಳಿಗಾಗಿ ಹೋರಾಟ ನಡೆಸಿದ್ದ ಇವರನ್ನು ಗುರುತಿಸಿದ್ದು ರಾಜ್ಯದ ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು.

1972 ರಲ್ಲಿ ಅನಿರೀಕ್ಷಿತವಾಗಿ ಅಂದಿನ ಕಲಬುರಗಿ ಜಿಲ್ಲೆಯ ಗುರಮಿಟ್ಕಲ್ ಎಸ್ಸಿ ಮೀಸಲು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಖರ್ಗೆ ಅವರು ಮೊದಲ ಪ್ರಯತ್ನದಲ್ಲಿಯೇ ಶಾಸಕರಾಗಿ ಆಯ್ಕೆಯಾದರು 1976 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗುವ ಮೂಲಕ ಆಡಳಿತದಲ್ಲಿ ತಮ್ಮದೆ ಛಾಪು ಮೂಡಿಸಿದ ಅವರು 2004 ರವರಗೆ ರಾಜ್ಯದಲ್ಲಿ ಅನೇಕ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಗುರಮಿಟ್ಕಲ್ ಕ್ಷೇತ್ರದಿಂದ ಎಂಟು ಬಾರಿ ಸ್ಪರ್ಧಿಸಿ, ಎಂಟು ಬಾರಿಯೂ ಗೆಲವು ಸಾಧಿಸಿದ್ದ ಅವರು 2008 ರಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಿ 9 ನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದ್ದರು. 

1994ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅತ್ಯಂತ ದಯನೀಯ ಸ್ಥಿತಿ ತಲುಪಿತ್ತು ಆ ಸಮಯದಲ್ಲಿ ಖರ್ಗೆ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿ ಪಕ್ಷಕ್ಕೆ ನವ ಚೈತನ್ಯ ನೀಡಿ ಅಧಿಕಾರದ ಹೆಬ್ಬಾಗಿಲಿಗೆ ತಂದು ನಿಲ್ಲಿಸಿದ್ದರು.ಇನ್ನೇನು ಖರ್ಗೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ.ದಲಿತ ಸಮುದಾಯದ ನಾಯಕನೊಬ್ಬ ಉನ್ನತ ಹುದ್ದೆ ಅಲಂಕರಿಸಲಿದ್ದಾರೆ ಎನ್ನುವಾಗ ದಿಡೀರ್ ಎಂದು ಪ್ರತ್ಯಕ್ಷರಾದ ಎಸ್ ಎಂ ಕೃಷ್ಣ ಹೈಕಮಾಂಡ್ ಆಶೀರ್ವಾದದೊಂದಿಗೆ ಮುಖ್ಯಮಂತ್ರಿಯಾದರೆ,ಪಕ್ಷದ ಶಿಸ್ತಿನ ಸಿಪಾಯಿಯಾದ ಖರ್ಗೆ ಮೌನವಾಗಿಯೇ ಎಲ್ಲವನ್ನೂ ನಿಭಾಯಿಸಿದರು.

ಇವರಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶವಿದ್ದರೂ, ತಮ್ಮ ಗೆಳೆಯ ಧರ್ಮಸಿಂಗ್ ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದದೊಂದಿಗೆ ಉನ್ನತ ಹುದ್ದೆಗೇರಿದರೆ ಖರ್ಗೆ ಪಕ್ಷದ ಅಧ್ಯಕ್ಷರಾಗಿ ಪಕ್ಷ ಕಟ್ಟುವ ಕಾಯಕದಲ್ಲಿ ನಿರತರಾದರು. ಆಗಲೂ ಅಧಿಕಾರದ ಸನಿಹಕ್ಕೆ ಬಂದ ಇವರಿಗೆ ಅದೃಷ್ಟ ಕೈಕೊಟ್ಟಿತ್ತು.

ಸರಿ ಪ್ರತಿಪಕ್ಷ ನಾಯಕರಾಗಿ ಮತ್ತೆ ಸಂಘಟನೆಯಲ್ಲಿ ತೊಡಗಿದ ಇವರು ಮತ್ತೊಮ್ಮೆ ಹೈಕಮಾಂಡ್ ನ ಅಣತಿಗೆ ತಲೆಬಾಗಬೇಕಾಯಿತು.ಅಂದು ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ ಅವರಿಗಾಗಿ ಶಾಸಕ ಸ್ಥಾನ ತೊರೆದು ಸಂಸದರಾಗಿ ಆಯ್ಕೆಯಾಗುವ ಮೂಲಕ ಮುಖ್ಯಮಂತ್ರಿಯಾಗುವ ಕನಸಿನ ಮೂಟೆಯನ್ನು ಕಟ್ಟಿಟ್ಟು ದೆಹಲಿಯ ರಾಜಕಾರಣ ಪ್ರವೇಶಿಸಿದರು.

ಇಲ್ಲಿ ಸಹಜವಾಗಿ ದೊರೆತ ಕೇಂದ್ರ ಮಂತ್ರಿ ಸ್ಥಾನದ ಲಾಭ ಪಡೆದ ಖರ್ಗೆ ತಾವೆಂತಹ ಆಡಳಿತಗಾರ, ದೂರದೃಷ್ಟಿಯುಳ್ಳ ನಾಯಕ ಎಂದು ನಂ. 10 ಜನಪಥ್ ಗೆ ಮನವರಿಕೆ ಮಾಡಿಕೊಟ್ಟರು.

ಚಿಕ್ಕಂದಿನಲ್ಲಿ ಮನೆ ಕಳೆದುಕೊಂಡು ಬೀದರ್ ನಿಂದ ಕಲಬುರಗಿಗೆ ಬಂದು ಬದುಕು ಕಟ್ಟಿಕೊಂಡರೋ ಹಾಗೆ ಕರ್ನಾಟಕದಿಂದ ದೆಹಲಿಗೆ ಬಂದು ಮಾಗಿದ ನಾಯಕನಾಗಿ ಹೈಕಮಾಂಡ್ ಆಪ್ತನಾದರು.ಅಂದು ಖರ್ಗೆ ಕರ್ನಾಟಕದಲ್ಲಿದ್ದರೆ ತಮ್ಮ ಗುರಿ ಈಡೇರುವುದು ಕಷ್ಟ ಎಂದು ತಂತ್ರಗಾರಿಕೆ ಮಾಡಿ ಅವರನ್ನು ದೆಹಲಿ ಯಾತ್ರೆಗೆ ಕಳುಹಿಸಿದವರು ಇಂದು ಅವರ ಮುಂದೆ ಕೈಕಟ್ಟಿ ನಿಲ್ಲುವ ಹಂತಕ್ಕೆ ಖರ್ಗೆ ಎಂಬ ಶಿಸ್ತಿನ ಸಿಪಾಯಿ, ಪಕ್ಷ ನಿಷ್ಠೆಯ ನಾಯಕ ತಲುಪಿದ್ದಾರೆ.

ನಿರಂತರ ಹತ್ತು ಚುನಾವಣೆಗಳನ್ನು ಗೆಲ್ಲುವ ಮೂಲಕ ಅಜಾತಶತ್ರು ಎಂದು ಗುರುತಿಸಿಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆಯವರು 2019ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಪರಾಭವಗೊಂಡರು.ಇದೂ ಕೂಡಾ ವ್ಯವಸ್ಥಿತವಾಗಿ ರೂಪಿಸಿದ ಷಡ್ಯಂತ್ರ. ಲೋಕಸಭೆಯಲ್ಲಿ ಕಾಂಗ್ರೆಸ್ ಗುಂಪಿನ ನಾಯಕರಾಗಿ ಖರ್ಗೆ ಬಿಡುತ್ತಿದ್ದ ವಾಗ್ಬಾಣಗಳಿಗೆ ಪ್ರತ್ಯುತ್ತರ ನೀಡಲಾಗದೆ ತತ್ತರಿಸುತ್ತಿದ್ದ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮಾಡಿದ ತಂತ್ರದಿಂದಾಗಿ ಖರ್ಗೆ ಚುನಾವಣಾ ರಾಜಕೀಯದಲ್ಲಿ ಮೊದಲ ಸೋಲು ಅನುಭವಿಸಿದರು.

ಆದರೆ, ಹಾಗೆ ಪರಾಭವಗೊಂಡ ಬೆನ್ನಲ್ಲೇ ಅವರ ಸೇವೆಯನ್ನು ಬಳಸಿಕೊಳ್ಳಲು ಹೈಕಮಾಂಡ್ ನಿರ್ಧರಿಸಿತು ಸೋನಿಯಾಗಾಂಧಿಯವರ ನಿರ್ದೇಶನದ ಮೇರೆಗೆ ಅವರನ್ನು ರಾಜ್ಯಸಭೆಗೆ ಆಯ್ಕೆಮಾಡಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಲಾಯಿತು.

ಇಂತಹ ಖರ್ಗೆ ದೆಹಲಿ ಮಟ್ಟದಲ್ಲಿ ಯಾವ ಪ್ರಮಾಣದಲ್ಲಿ ಬೆಳೆದರೆಂದರೆ ದೇಶದ ಯಾವುದೇ ಮೂಲೆಯಲ್ಲಿ ಪಕ್ಷಕ್ಕೆ ಸಂಬಂಧಿಸಿದ ಸಂಕಟ ಎದುರಾದರೂ ಗಾಂಧಿ ಕುಟುಂಬ ಖರ್ಗೆಯವರಿಗೆ ಸಮಸ್ಯೆ ನಿವಾರಣೆಯ ಹೊಣೆ ವಹಿಸುತ್ತಾ ಬಂದಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಖರ್ಗೆ, ಇತ್ತೀಚೆಗೆ ರಾಜಸ್ತಾನದಲ್ಲಿ ನಡೆದ ಕಾಂಗ್ರೆಸ್ ಘಟನಾವಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಕ್ಷದ ವೀಕ್ಷಕರಾಗಿಯೂ ನೇಮಕಗೊಂಡಿದ್ದರು.

ಶಿಸ್ತು ಪಾಲನೆಗೆ ಕಾಂಗ್ರೆಸ್ ಮಾತ್ರವಲ್ಲ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಅವರನ್ನು ಗೌರವದಿಂದ ಕಾಣುವ ಪರಂಪರೆ ದೇಶಾದ್ಯಂತ ಕಾಣಬಹುದಾಗಿದೆ. ಈ ಎಲ್ಲ ಲೆಕ್ಕಾಚಾರದೊಂದಿಗೆ ಸ್ವತಃ ಸೋನಿಯಾಗಾಂಧಿಯವರೇ ಖರ್ಗೆಯವರೇ ಆಸಕ್ತಿವಹಿಸಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಅವರನ್ನು ಪರಿಗಣಿಸಿದ್ದರು.ಆದರೆ ಖರ್ಗೆ ವಯಸ್ಸು ಮತ್ತು ಕಾಲು ನೋವಿನ ಕಾರಣಕ್ಕೆ ಈ ಹುದ್ದೆಯನ್ನು ಬೇರೆಯವರಿಗೆ ನೀಡಿ ಎಂದು ಮನವಿ ಮಾಡಿದ್ದರು. ಇದರ ಪರಿಣಾಮವಾಗಿ ರಾಜಾಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೆಸರು ಪರಿಗಣಿಸಲ್ಪಟ್ಟಿತ್ತು. ಆದರೆ ಆ ರಾಜ್ಯದಲ್ಲಿ ನಡೆದ ಬೆಳವಣಿಗೆ ಖರ್ಗೆ ಅವರನ್ನು ಅನಿವಾರ್ಯವಾಗಿ ಈ ಹುದ್ದೆ ಅಲಂಕರಿಸುವಂತೆ ಮಾಡಿದೆ.

ಖರ್ಗೆಯವರು ಕಾಂಗ್ರೆಸ್ ಅಧ್ಯಕ್ಷ ಪದವಿಗೆ ದಿಡೀರನೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಕಾಂಗ್ರೆಸ್ ನ ಟೀಕಾಕಾರರು, ಪ್ರತಿಪಕ್ಷ ನಾಯಕರು ಗಂಭೀರವಾಗಿ ಆಲೋಚಿಸುವಂತಾಗಿದೆ. ಇನ್ನು ಮುಂದೆ ಕಾಂಗ್ರೆಸ್ ಬಗ್ಗೆ ಇವರು ಟೀಕೆ ಮಾಡುವ ಮುನ್ನ ಒಮ್ಮೆ ಯೋಚಿಸುವಂತಾಗಿದೆ.ಈ ಆಯ್ಕೆಯಿಂದ ಸೋತು ಸುಣ್ಣವಾಗಿರುವ ಪಕ್ಷಕ್ಕೆ ಹೊಸತನ ಬರುವುದಂತೂ ನಿಸ್ಸಂದೇಹ ಅಂದಹಾಗೆ ಖರ್ಗೆ ಕೇವಲ ಒಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಷ್ಟೇ ಅಲ್ಲ ಅದಕ್ಕಿಂತಲೂ ಉನ್ನತ ಹುದ್ದೆ ಅಲಂಕರಿಸುವ ಅರ್ಹತೆಯಿರುವ ದೊಡ್ಡ ನಾಯಕ.