ಅಕ್ಷರ ಮೋಹಿ ಜ್ಞಾನ ದಾಹಿ : ಕಾಮರೂಪಿ

ಎಂಎಸ್‌ಪಿಯವರು ಅಸ್ಸಾಂನಿಂದ ಕೋಲಾರಕ್ಕೆ ಮರಳಿದ್ದು ಒಂದು ದೊಡ್ಡ ಜ್ಞಾನ ಬುತ್ತಿ ಬಂದಂತಾಗಿತ್ತು.

ಅಕ್ಷರ ಮೋಹಿ ಜ್ಞಾನ ದಾಹಿ : ಕಾಮರೂಪಿ

ವ್ಯಕ್ತಿ-ವ್ಯಕ್ತಿತ್ವ

ವಿಶ್ವ ಕುಂದಾಪುರ


      2022ರ ಡಿಸೆಂಬರ್ 29ರ ಗುರುವಾರ ಹಿರಿಯ ಪತ್ರಕರ್ತ ಮತ್ತು ಸಾಹಿತಿ ಎಂ.ಎಸ್. ಪ್ರಭಾಕರ ಅವರು ನಿಧನರಾಗಿರುವುದು ನನಗೆ ಒಬ್ಬ ಆತ್ಮೀಯನ ಭೌತಿಕ ಅಗಲಿಕೆಯಾಗಿದೆ. 


    ವೃತ್ತಿ ನಿಮಿತ್ತ ನಾನು ಕೋಲಾರಕ್ಕೆ ಬಂದಿದ್ದು 2007ರಲ್ಲಿ. ಅದಾಗಿ ಸುಮಾರು ಎರಡು-ಮೂರು ವರ್ಷದ ನಂತರ, ಎಂಎಸ್‌ಪಿ ಎಂದೇ ಆತ್ಮೀಯ ಬಳಗಕ್ಕೆ ಪರಿಚಿತರಾದ ಪ್ರಭಾಕರ ಅವರು ನನಗೆ ಪರಿಚಯವಾದರು. ಉದ್ಯೋಗ ನಿಮಿತ್ತ ದೇಶದ ನಾನಾ ಭಾಗಗಳು ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಕಾರ್ಯ ನಿರ್ವಹಿಸಿ `ದಿ ಹಿಂದೂ' `ಫ್ರಂಟ್‌ಲೈನ್' ಪತ್ರಿಕೆಯಿಂದ ನಿವೃತ್ತರಾದ ನಂತರ, ಕೋಲಾರ ಹುಟ್ಟೂರಾದರೂ ಬಹುತೇಕವಾಗಿ ತಮ್ಮ ಎರಡನೇ ಸ್ವಂತ ಊರಾಗಿ ಅಪ್ಪಿಕೊಂಡಿದ್ದ ಅಸ್ಸಾಂನ ಗುವಾಹಟಿಯಲ್ಲಿ ಬಹಳ ವರ್ಷ ನೆಲೆಸಿದರು. ಅದಾದ ಮೇಲೆ, 2009-10ರ ವೇಳೆಗೆ ಕೋಲಾರಕ್ಕೆ ಮರಳಿ ಕಠಾರಿಪಾಳ್ಯದಲ್ಲಿರುವ ತಮ್ಮ ನಿವಾಸದಲ್ಲಿ ನೆಲೆಸಿದ್ದರು. `ದಿ ಹಿಂದೂ'ನಲ್ಲಿದ್ದ ನನಗೆ, ಆಗಲೂ ಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದ ಎಂಎಸ್‌ಪಿ ಹುಟ್ಟೂರಿಗೆ ಬಂದಿದ್ದಾರೆAಬ ವಿಚಾರ ತಿಳಿದು ಅವರನ್ನು ಭೇಟಿಯಾಗಲು ಉತ್ಸುಕನಾದೆ. ಒಂದು ದಿನ, ತೇರಹಳ್ಳಿ ಬೆಟ್ಟದಲ್ಲಿರುವ `ಆದಿಮ'ದ ಹುಣ್ಣಿಮೆ ಹಾಡು ಕಾರ್ಯಕ್ರಮಕ್ಕೆ ಪತ್ನಿ ಮಮತಾ ಜೊತೆ ಹೋಗಿದ್ದಾಗ ಎಂಎಸ್‌ಪಿಯವರ ಮೊದಲ ಭೇಟಿ ನಡೆಯಿತು. ಅದಾದ ಮೇಲೆ ನಮ್ಮ ನಂಟು ಆಗಾಗ ಅವರ ಮನೆಗೆ ಭೇಟಿ ನೀಡುವುದರೊಂದಿಗೆ ಮುಂದುವರಿಯಿತು. ಅವರೇ ತಯಾರಿಸಿದ ಅಥವಾ ನಾವೇ ಮಾಡಿಕೊಂಡ ಚಹಾ-ಕಾಫಿ ಆತಿಥ್ಯ ನಮಗೆ ಸಿಗುತ್ತಿತ್ತು ಮತ್ತು ನಾವು ಆಗಾಗ ತೆಗೆದುಕೊಂಡು ಹೋಗುತ್ತಿದ್ದ ಕರಾವಳಿ ಸೊಗಡಿನ ಫಿಶ್ ಫ್ರೆ ಅವರಿಗೆ ಅಚ್ಚುಮೆಚ್ಚಿನದ್ದಾಗಿರುತ್ತಿತ್ತು. ಬಹುವಾಗಿ ಅಸ್ಸಾಂನಲ್ಲಿ ಮೀನು ಸವಿಯುತ್ತಿದ್ದುದನ್ನು ನೆನೆದು ಮಮತಾ ಮಾಡಿದ ಮೀನನ್ನು ಚಪ್ಪರಿಸುತ್ತಿದ್ದರು.

    ಅದಿರಲಿ. ತಾನೊಬ್ಬ ದೊಡ್ಡ ಪತ್ರಕರ್ತ, ಲೇಖಕ, ಸಾಹಿತಿಯೆಂಬ ಲವಲೇಶದ ಸುಳಿವೂ ಸಿಗದಂತೆ ಆತ್ಮೀಯವಾಗಿ ಮಾತನಾಡುತ್ತಿದ್ದರು ಎನ್ನುವುದು ಅವರೊಂದಿಗೆ ಒಡನಾಟದಲ್ಲಿದ್ದ ಯಾರಿಗಾದರೂ ಎದ್ದು ಕಾಣುವ ಅಂಶ. ಅದು ಹಾಗೂ ಅದುವೇ ಎಂಎಸ್‌ಪಿಯವರ ವ್ಯಕ್ತಿತ್ವದ ವಿಶೇಷತೆ ಎನ್ನುವುದು ನನ್ನ ಅನಿಸಿಕೆ. ಒಂದೆರಡು ವರ್ಷ ಮಾಧ್ಯಮ ವೃತ್ತಿಯಲ್ಲಿರುವವರು, ಇದ್ದೂ ಬರಹ ಮರೆತವರು, ಒಂದೆರಡು ಲೇಖನ ಬರೆದವರು ದೊಡ್ಡ ಪತ್ರಕರ್ತರಂತೆ, ಲೇಖಕರಂತೆ ಪೋಸು ನೀಡುವ ಈ ಕಾಲಘಟ್ಟದಲ್ಲಿ ಪ್ರಭಾಕರರ ನಡವಳಿಕೆ ನಿಜಕ್ಕೂ ಮಾದರಿಯಾದುದು. 

ಎಂಎಸ್‌ಪಿಯವರು ಅಸ್ಸಾಂನಿಂದ ಕೋಲಾರಕ್ಕೆ ಮರಳಿದ್ದು ಒಂದು ದೊಡ್ಡ ಜ್ಞಾನ ಬುತ್ತಿ ಬಂದಂತಾಗಿತ್ತು. ತಮ್ಮ ಪ್ರಬುದ್ಧ ಮಸ್ತಿಷ್ಕದೊಂದಿಗೆ ತಮ್ಮಲ್ಲಿದ್ದ ಅಪಾರ ಪುಸ್ತಕ ಭಂಡಾರವನ್ನೂ ಅವರು ಹೊತ್ತು ತಂದಿದ್ದರು. ಅವರ ಮನೆಗೆ ಭೇಟಿ ನೀಡಿದರೆ ಒಂದು ಗ್ರಂಥಾಲಯಕ್ಕೆ ಹೋದ ಅನುಭವವಾಗಿರದಿದ್ದರೆ ಅದಕ್ಕೆ ಏನೆನ್ನಬಹುದೋ ಗೊತ್ತಿಲ್ಲ. 

ಸದಾ ಒಂದಲ್ಲ ಒಂದು ಓದು ಅಥವಾ ಬರಹದಲ್ಲಿ ತನ್ಮಯರಾಗುತ್ತಿದ್ದುದು ಎಂಎಸ್‌ಪಿಯವರ ಅಕ್ಷರ ಮೋಹ ಮತ್ತು ಜ್ಞಾನ ದಾಹಕ್ಕೆ ಸಾಕ್ಷಿ. ವಯೋಸಹಜ ಸಮಸ್ಯೆ ಮತ್ತು ಅನಾರೋಗ್ಯವಿದ್ದರೂ ಈ ಎರಡು ಜೀವದಾಯಿ ಚಟುವಟಿಕೆಗಳನ್ನು ಕೊನೆತನಕ ಬಿಟ್ಟವರಲ್ಲ ಎಂಎಸ್‌ಪಿ. ತಮ್ಮ ಆಸಕ್ತಿಯ ವಿಚಾರಗಳನ್ನು; ಅದು ಈಶಾನ್ಯ ರಾಜ್ಯಗಳೇ ಇರಬಹುದು, ದಕ್ಷಿಣ ಆಫ್ರಿಕಾವೇ ಇರಬಹುದು, ಅಥವಾ ಬೇರಿನ್ನಾವುದೇ ಇರಬಹುದು; ಇಂಟರ್‌ನೆಟ್‌ನಲ್ಲಿ ಹುಡುಕಾಡಿ ಅವುಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಲ್ಯಾಪ್‌ಟಾಪ್ ಒಂದು ಚೂರು ಕೈಕೊಟ್ಟರೂ ಕೈಕೈ ಹಿಸುಕಿಕೊಂಡು ಪರಿತಪಿಸುತ್ತಿದ್ದರು. ದೀಪಕ್ ಇಲ್ಲೇ ಇದ್ದಿದ್ರೆ ಚೆನ್ನಾಗಿರ್ತಿತ್ತು ಎಂದು ಬೆಂಗಳೂರಿನಲ್ಲಿರುವ ನನ್ನ ಮಗನನ್ನು ಆ ಕ್ಷಣಕ್ಕೆ ನೆನೆಯುತ್ತಿದ್ದರು. ತೀರಾ ಇತ್ತೀಚೆಗೆ ತಾವು ಟೈಪಿಸಿದ್ದ ಫೈಲೊಂದು ಕಾಣೆಯಾಗಿದೆಯೆಂದು ಪರಿತಪಿಸಿ ನನಗೆ ಫೋನ್ ಮಾಡಿದ್ದರು. ನನಗೆ ಪರಿಣತಿ ಇಲ್ಲದಿದ್ದರೂ ಒಂದು ಕೈ ನೋಡೇ ಬಿಡುವ ಎಂದAದುಕೊAಡು ಹೋಗಿ ಅದನ್ನು ಹುಡುಕಿ ಕೊಟ್ಟ ತೃಪ್ತಿ ನನ್ನದು. ಚಿಕ್ಕವರು-ದೊಡ್ಡವರೆಂಬ ಭೇದವೆಣಿಸದೆ ಪ್ರೋತ್ಸಾಹಿಸುವ  ಅವರು, ನನ್ನ ಮಗಳು ದೀಪ್ತಿ ದ್ವಿತೀಯ ಪಿಯುಸಿ ಕನ್ನಡದಲ್ಲಿ ಅಧಿಕ ಅಂಕ ಗಳಿಸಿದಾಗ ಸಂಭ್ರಮಪಟ್ಟು ಬೇರೆಯವರಿಗೂ ಹೇಳಿದ್ದಲ್ಲದೆ ತಮ್ಮಲ್ಲಿದ್ದ ದೊಡ್ಡ ಹಳೆಯ ಕೊಡೆಯನ್ನು ಗಿಫ್ಟ್ ಆಗಿ ಕೊಟ್ಟಿದ್ದರು! ಅದೇನು ವಿಶೇಷವಿಲ್ಲ ಬಿಡಿ ಎಂದಾಗ, ವಿಜ್ಞಾನದ ವಿದ್ಯಾರ್ಥಿ ಕನ್ನಡದಲ್ಲಿ ಹೆಚ್ಚು ಮಾರ್ಕ್ಸ್ ಪಡೆಯುವುದು ವಿಶೇಷವೇ ಸರಿ ಎಂದು ಪ್ರತಿಪಾದಿಸಿದ್ದರು. 21.10.2012ರಂದು, ದೇಹಸ್ಥಿತಿ ಪರ್ಮಿಟ್ ಮಾಡದಿದ್ದರೂ ಆತ್ಮೀಯತೆಯಿಂದ `ಗೃಹ ಪ್ರವೇಶ'ಕ್ಕೆ ಬಂದಿದ್ದೇ ಅವರು ನಮ್ಮ ಮನೆಗೆ ನೀಡಿದ ಏಕೈಕ ಭೇಟಿ.


ಅವಿವಾಹಿತರಾದ್ದರಿಂದ ಮಡದಿ-ಮಕ್ಕಳು-ಕುಟುಂಬದ ಜಂಜಾಟವಿಲ್ಲ ಎಂದುಕೊAಡು ಇದ್ದ ಉಳಿತಾಯದಲ್ಲಿ ಹಾಯಾಗಿ ಕಾಲಕಳೆಯುವ ಜಾಯಮಾನ ಅವರದ್ದಾಗಿರಲಿಲ್ಲ. ವಯಸ್ಸಾಗಿದೆ, ಅನಾರೋಗ್ಯ ಕಾಡುತ್ತಿದೆ ಎಂಬ ಸಬೂಬು ಹೇಳಿದವರಲ್ಲ. ಮಾರಕ ಕ್ಯಾನ್ಸರ್ ಜಯಿಸಿ ಕೊನೆವರೆಗೂ ಅಕ್ಷರಮೋಹಿಯಾಗಿ-ಜ್ಞಾನದಾಹಿಯಾಗಿಯೇ ಮುಂದುವರಿದ ಅದಮ್ಯ ಚೇತನ ಅವರದು.

ಅಧ್ಯಾಪನ


ಎಂಎಸ್‌ಪಿ ಒಬ್ಬ ಖ್ಯಾತ ಪತ್ರಕರ್ತ ಮತ್ತು ಸಾಹಿತಿ ಎಂದು ಮಾತ್ರ ಬಹುತೇಕರಿಗೆ ಗೊತ್ತು. ಅವರೊಬ್ಬ ಶಿಕ್ಷಕರೂ ಆಗಿದ್ದರು. ಮುಂಬಯಿಯಿಂದ ಪ್ರಕಟವಾಗುವ ಭಾರತದ ಪ್ರಖ್ಯಾತ `ಇಕನಾಮಿಕ್ ಅಂಡ್ ಪಾಲಿಟಿಕಲ್ ವೀಕ್ಲಿ' (ಇಪಿಡಬ್ಲ್ಯು) ಮೂಲಕ ಪತ್ರಿಕಾ ರಂಗಕ್ಕೆ ಬರುವುದಕ್ಕೂ ಮುನ್ನ ಸುಮಾರು ಎರಡು ದಶಕ ಕಾಲ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮತ್ತು ಧಾರವಾಡದ ಕರ್ನಾಟಕ ಕಾಲೇಜ್‌ನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಅಸ್ಸಾಂನ ಗುವಾಹಟಿ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ರೀಡರ್ ಆಗಿ ಕಾರ್ಯ ನಿರ್ವಹಿಸಿದ್ದರು. 

`ಸಿಟ್ಟಿನ' ಸಿಪಾಯಿ


ಶಿಸ್ತು ಇಲ್ಲದಿದ್ದರೆ ಸಿಟ್ಟಿಗೇಳುವ ಪ್ರವೃತ್ತಿ ಅವರಲ್ಲಿತ್ತು. ವಿಶೇಷವಾಗಿ ತಮ್ಮ ಪುಸ್ತಕಗಳು ಮತ್ತು ಪತ್ರಿಕೆಗಳನ್ನು ಹೇಗೆಂದರೆ ಹಾಗೆ ಬಳಸಿದರೆ, ಕದಲಿಸಿದರೆ ಎಂಎಸ್‌ಪಿ ಸಿಟ್ಟಾಗುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಹೆಸರಿನ ಬಗ್ಗೆಯೂ ಅವರದು ಕಟ್ಟು ನಿಟ್ಟಿನ ನಿಲುವು. ತಮ್ಮ ಹೆಸರನ್ನು `ಪ್ರಭಾಕರ್' ಎಂದು ಬರೆದರೆ ಅವರು ಸಹಿಸಿಕೊಳ್ಳುತ್ತಿರಲಿಲ್ಲ. ನನ್ನ ಹೆಸರು `ಪ್ರಭಾಕರ' ಎಂದು ಒತ್ತಿ ಹೇಳುತ್ತಿದ್ದರು. ಇಂಗ್ಲಿಷ್‌ನಲ್ಲಿ ಕೂಡ ಸ್ಪೆಲ್ಲಿಂಗ್ ಸರಿಯಾಗಿರಬೇಕೆಂಬ ಅವರ ನಿಲುವು ಸರಿಯಾದುದೇ ಆಗಿದೆ. ಕೋಲಾರಕ್ಕೆ ಬಂದ ಕೆಲವು ವರ್ಷಗಳ ನಂತರ ಅವರು `ಆನಂದ ಭವನ'ಕ್ಕೆ ಗ್ರಾನೈಟ್ ಫಲಕ ಮಾಡಿಸಿದ್ದರು. ಅದನ್ನು ಮಾಡಿದವರು ಇವರ ಹೆಸರನ್ನು `ಪ್ರಭಾಕರ್' ಎಂದು ಕೆತ್ತಿದ್ದರು. ಇದು ಇವರ ಕೋಪಕ್ಕೆ ಕಾರಣವಾಗಿತ್ತು. ಆ ಫಲಕವನ್ನು ಬಳಸದೇ ನಂತರ ಹೆಸರು ಸರಿಯಾಗಿರುವಂತೆ ಖಾತರಿಪಡಿಸಿಕೊಂಡು ಬೇರೊಂದು ಫಲಕ ಮಾಡಿಸಿ ಹಾಕಿಸಿದ್ದಾರೆ.

... ಹೀಗೆ ಪ್ರಭಾಕರ ಅವರ ವ್ಯಕ್ತಿ-ವ್ಯಕ್ತಿತ್ವದ ಬಗ್ಗೆ ಬರೆಯುತ್ತಲೇ ಹೋಗಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಅವರು ಸರಳತೆ ಹಾಗೂ ವಿನೀತ ಭಾವ ಮೂರ್ತಿವೆತ್ತ ಮನುಷ್ಯ. ತಮ್ಮ ಮನೆಯನ್ನು ನೋಡಿಕೊಳ್ಳಲು ಎಂಎಸ್‌ಪಿ ಮಾಡಿಕೊಂಡಿದ್ದ ವ್ಯವಸ್ಥೆ ಅವರ ವಿಶ್ವ ಬಂಧುತ್ವಕ್ಕೆ ಜೀವಂತ ಸಂದೇಶದಂತಿತ್ತು. ವಿಶ್ವ ಮಾನವ ಸಂದೇಶ ಸಾರಿದ ಮಹಾ ಕವಿಯ ಜನ್ಮ ದಿನದಂದೇ ಈ ಚೇತನ ಅಗಲಿದ್ದು ಒಂದು ಕಾಕತಾಳೀಯ ನೋವಿನ ಸಂಗತಿ. ಸಾರ್ಥಕ ಜೀವನ ನಡೆಸಿ `ಜೀವಾನಂತರವೂ' ತಮ್ಮ ದೇಹ ಮುಡುಪಿಟ್ಟು ಸಾರ್ಥಕತೆ ಮೆರೆದಿರುವ ಅದಮ್ಯ ಚೇತನಕ್ಕೆ; `ಹೋ... ವಿಶ್ವ ... ನಮಸ್ಕಾರ... ಬನ್ನಿ ಬನ್ನಿ' ಎನ್ನುತ್ತಿದ್ದ ಹಿರಿಯ ಆತ್ಮೀಯರಿಗೆ `ಹೋಗಿ ಬನ್ನಿ, ನಮಸ್ಕಾರ' ಎನ್ನುವುದು ಕಷ್ಟವಾದರೂ ಅನಿವಾರ್ಯ.

ಚಿತ್ರ ಶೀರ್ಷಿಕೆ: ಲೇಖಕರ ಗೃಹ ಪ್ರವೇಶದಲ್ಲಿ ಭಾಗವಹಿಸಿದ್ದ ಎಂಎಸ್‌ಪಿ.


ವಿಶ್ವ ಕುಂದಾಪುರ 9480106014