ಅಮಾನಿಕೆರೆಯ ರಾಜಕಾಲುವೆಗೆ ಕೀಟ,ಕಳೆನಾಶಕ ತಯಾರಿಕಾ ಕಾರ್ಖಾನೆಯ ವಿಷಕಾರಿ ನೀರು!?
ಕಾಲುವೆ ನೀರು ಕುಡಿದ ಕುರಿ ಸಾವು- ನೀರಿನಲ್ಲಿ ಸತ್ತು ತೇಲಿದ ಹಾವು- ಕಣ್ಣು,ಚರ್ಮ ಉರಿತ
ಪ್ರತ್ಯಕ್ಷದರ್ಶಿ ವರದಿ
ಕುಚ್ಚಂಗಿ ಪ್ರಸನ್ನ
ತುಮಕೂರು: ನಗರಕ್ಕೆ ಸಮೀಪದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಲ್ಟಿಪ್ಲೆಕ್ಸ್ ಎಂಬ ಕೀಟ,ಕಳೆ ನಾಶಕ ತಯಾರಿಸುವ ಕಾರ್ಖಾನೆಯಿಂದ ಹೊರ ಬರುವ ಕಲ್ಮಶ ನೀರು ಅಮಾನಿಕೆರೆ ತಲುಪುವ ರಾಜಕಾಲುವೆಗೆ ಸೇರುತ್ತಿದ್ದು ವಿಷಕಾರಿ ನೀರಿನಿಂದಾಗಿ ಜಲಚರಗಳು ಸಾಯುತ್ತಿರುವುದಲ್ಲದೇ ಕಾಲುವೆಯ ಅಕ್ಕಪಕ್ಕ ನಿಂತರೆ ಕೆಟ್ಟವಾಸನೆ ಹಾಗೂ ಕಣ್ಣು ಮತ್ತು ಚರ್ಮ ಉರಿಯುತ್ತಿರುವುದಾಗಿ ಸ್ಥಳೀಯ ರೈತರು ದೂರಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪತ್ರಕರ್ತರಿಗೂ ಇದೇ ಅನುಭವವಾಗಿದ್ದು, ಎರಡು ಹಾವುಗಳು ಸತ್ತು ನೇರಿನಲ್ಲಿ ತೇಲುತ್ತಿರುವುದೂ ಕಂಡು ಬಂದಿತು.
ತುಮಕೂರು ನಗರದಿಂದ ಯಲ್ಲಾಪುರಕ್ಕೆ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಅಂತರಸನಹಳ್ಳಿ ಬಳಿ ಬಲಭಾಗದಲ್ಲಿರುವ ಸಣ್ಣಕೈಗಾರಿಕಾ ಅಭಿವೃದ್ಧಿ ನಿಗಮದ ಕೈಗಾರಿಕಾ ಪ್ರದೇಶದಲ್ಲಿ ಮೂರು ಘಟಕಗಳನ್ನು ಹೊಂದಿರುವ ಮಲ್ಟಿಪ್ಲೆಕ್ಸ್ ಹೆಸರಿನ ಕೀಟನಾಶಕ, ಕಳೆನಾಶಕ ಹಾಗೂ ಜೈವಿಕ ಗೊಬ್ಬರಗಳನ್ನು ತಯಾರಿಸುವ ಕಾರ್ಖಾನೆಯಿಂದಲೇ ಈ ವಿಷಕಾರಿ ನೀರು ಹೊರಬರುತ್ತಿದೆ ಎಂದು ಸ್ಥಳದಲ್ಲಿ ಸೇರಿದ್ದ ಆಸುಪಾಸಿನ ರೈತರ ಪರವಾಗಿ ಆ ಪ್ರದೇಶವನ್ನು ಒಳಗೊಳ್ಳುವ 2ನೇ ವಾರ್ಡ್‌ನ ಮಹಾನಗರಪಾಲಿಕೆ ಮಾಜಿ ಸದಸ್ಯ ಎಸ್.ಮಂಜುನಾಥ್ ದೂರಿದರು. ಈ ಕುರಿತು ಪರಿಸರ ಇಲಾಖೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಅಮಾನಿಕೆರೆಯ ಮುಖ್ಯ ಜಲಮೂಲವಾಗಿರುವ ರಾಜಕಾಲುವೆಯನ್ನು ಕಲುಷಿತಗೊಳಿಸುತ್ತಿರುವ ಈ ಕಾರ್ಖಾನೆಯ ಬಾಗಿಲು ಮುಚ್ಚಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಅಂತರಸನಹಳ್ಳಿಯ ಸತೀಶ್ ಮಾತನಾಡಿ, ಮಲ್ಟಿಪ್ಲೆಕ್ಸ್ ಇಲ್ಲಿ ಸುಮಾರು ವರ್ಷದಿಂದ ನಡೀತಾ ಇದೆ, ಇವರೇನು ಮಾಡ್ತಾರೆ ಮಳೆ ಬಂದಾಗ ಮಳೆ ಜೊತೆ ಕೆಮಿಕಲ್ ನೀರನ್ನು ರಾಜಕಾಲುವೆಗೆ ಬಿಡೋದನ್ನ ರೂಡಿ ಮಾಡಿಕೊಂಡಿದ್ದಾರೆ. ಮೊನ್ನೆ ಏನಾಗಿದೆ, ಇಲ್ಲಿ ನೀರು ಕುಡಿದು ರೈತರೊಬ್ಬರ ಒಂದು ಕುರಿ ಸತ್ತು ಹೋಗಿದೆ, ಇದಾದ ಮೇಲೆ ಅನುಮಾನ ಬಂದು ನಾವೆಲ್ಲರೂ ಇಡೀ ರಾಜಕಾಲುವೆ ಉದ್ದಕ್ಕೂ ಅಡ್ಡಾಡಿ ಗಮನಿಸಿದಾಗ ಈ ಕಾರ್ಖಾನೆಯನ್ನು ದಾಟಿದ ನಂತರವಷ್ಟೇ ನೀರು ಕಲುಷಿತಗೊಳ್ಳುತ್ತಿರುವುದು ಕಂಡು ಬಂದು, ಅವರನ್ನು ಕೇಳಿದಾಗ ಬರೀ ಮಳೆ ನೀರು ಅಂತ ಹೇಳುತ್ತಾರೆ, ಆದರೆ ಈ ಕಾರ್ಖಾನೆ ಹಿಂಭಾಗದಲ್ಲಿ ಅವಧಿ ಮೀರಿರುವ ಕೀಟ ನಾಶಕಗಳ ಎಷ್ಟೊಂದು ಬಾಟಲಿಗಳು, ಪ್ಯಾಕೆಟ್‌ಗಳು ಬಿದ್ದಿವೆ ನೋಡಿ, ಹೀಗೆ ಇಡೀ ರಾಜಕಾಲುವೆ ಕಲುಷಿತಗೊಂಡರೆ ಸುತ್ತಮುತ್ತ ತೋಟಗಳನ್ನು ಮಾಡಿರುವ ತರಕಾರಿ ಬೆಳೆಯುತ್ತಿರುವ ರೈತರ ಆರೋಗ್ಯದ ಮೇಲೆ ಹಾಗೂ ಈ ಬೆಳೆಗಳ ಮೇಲೂ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಂಬಂಧಿಸಿದವರು ಕೂಡಲೇ ಈ ಕಾರ್ಖಾನೆಯನ್ನು ತಡೆಯಬೇಕು ಎಂದು ಆಗ್ರಹಪಡಿಸಿದರು.
ಈ ಕೈಗಾರಿಕಾ ಪ್ರದೇಶದ ಒಳಗೇ ನೂರಡಿ ವಿಸ್ತಾರದ ರಾಜಕಾಲುವೆಯೊಂದು ಹರಿಯತ್ತಿದ್ದು ಅಂತಿಮವಾಗಿ ಪುಟ್ಟಸ್ವಾಮಯ್ಯನ ಪಾಳ್ಯದ ಕಡೆ ಅಮಾನಿಕೆರೆಯನ್ನು ಸೇರುತ್ತದೆ. ಮತ್ತು ಈ ರಾಜಕಾಲುವೆಗೆ ನಾಲ್ಕೈದು ಚೆಕ್ ಡ್ಯಾಮ್‌ಗಳೂ ಇವೆ. ಕೈಗಾರಿಕಾ ಪ್ರದೇಶ ಅಂತ್ಯಗೊಳ್ಳುವ ಭಾಗದಲ್ಲಿ ಈ ರಾಜಕಾಲುವೆಗೆ ಇರುವ ಚೆಕ್ ಡ್ಯಾಂ ಪಕ್ಕದಲ್ಲಿ ಹತ್ತು ನಿಮಿಷ ನಿಂತರೆ ನಿಮ್ಮ ಕಣ್ಣು, ಮುಖ ಉರಿಯತೊಡಗುತ್ತವೆ, ದುರ್ವಾಸನೆಯ ಘಾಟಿಗೆ ಕೆಲ ಕ್ಷಣ ನಿಲ್ಲಲೂ ಆಗುವುದಿಲ್ಲ ಎನ್ನುವುದು ಸ್ಥಳಕ್ಕೆ ಭೇಟಿ ನೀಡಿದ ಪತ್ರಕರ್ತರಿಗೂ ಅರಿವಾಯಿತು.
ಈ ಕುರಿತು ಪ್ರತಿಕ್ರಿಯೆ ನೀಡಲು ಭಾನುವಾರವಾಗಿದ್ದರಿಂದ ಕಾರ್ಖಾನೆಯ ಯಾವ ಸಿಬ್ಬಂದಿಯೂ ದೊರಕಲಿಲ್ಲ, ಸೋಮವಾರ ಮಲ್ಟಿಪ್ಲೆಕ್ಸ್ʼ ಕಾರ್ಖಾನೆಯ ಮ್ಯಾನೇಜರ್ ಡಾ.ಶಂಕರ್ (ಮೊಬೈಲ್ ಸಂಖ್ಯೆ 9894487438) ʼ ಬೆವರ ಹನಿʼ ಪ್ರಾದೇಶಿಕ ದಿನಪತ್ರಿಕೆಯೊಂದಿಗೆ ಮಾತನಾಡಿ, “ನಮ್ಮ ಕಾರ್ಖಾನೆಯಲ್ಲಿ 50 ಬಗೆಯ ಉತ್ಪನ್ನಗಳನ್ನು ತಯಾರಿಸುತ್ತೇವೆ, ಆದರೆ ಒಂದು ಹನಿ ನೀರನ್ನೂ ಬಳಸುವುದಿಲ್ಲ, ನಮ್ಮ ಆವರಣದಿಂದ ಹೊರ ಹರಿದದ್ದು ಮಳೆ ನೀರು ಮಾತ್ರ” ಎಂದು ಹೇಳಿದರು.
ಈ ಕೈಗಾರಿಕಾ ಪ್ರದೇಶದಲ್ಲಿ ಮಲ್ಟಿಪೆಕ್ಸ್‌ನ ನಾಲ್ಕಕ್ಕೂ ಹೆಚ್ಚು ಘಟಕಗಳಿವೆ, ಈಗ ವಿಷಕಾರಿ ನೀರು ಹರಿದಿರುವುದು ಹಳೆಯ ಷೆಡ್‌ನಿಂದ, ಈ ಷೆಡ್‌ನ ಆವರಣದಲ್ಲೇ ನೀರು ಸಂಗ್ರಹಿಸುವ ಒಂದು ದೊಡ್ಡ ಕೃಷಿ ಹೊಂಡದಂತ ಚೌಕಟ್ಟಾದ ಕಟ್ಟೆ ಇರುವುದು ಮ್ಯಾಪ್‌ನಿಂದ ಕಂಡು ಬರುತ್ತದೆ. ಈ ಕಾರ್ಖಾನೆಯ ಮ್ಯಾನೇಜರ್ ಹೇಳುವಂತೆ ಮಳೆ ಬಂದಾಗ ಘಟಕದ ಆವರಣದಲ್ಲಿ ಬಿದ್ದ ಮಳೆ ನೀರನ್ನು ಮಾತ್ರವೇ ರಾಜಕಾಲುವೆಗೆ ಬಿಡಲಾಗುತ್ತಿದೆ ಎನ್ನುವುದೇ ಆದಲ್ಲಿ ಅವರ ಕಾರ್ಖಾನೆಯ ಆವರಣದಲ್ಲಿರುವ ದೊಡ್ಡ ಹೊಂಡಕ್ಕೇ ಹರಿಸಿ ತುಂಬಿಸಿಕೊಳ್ಳಬಹುದಲ್ಲವೇ ( ಮ್ಯಾಪ್ ನೋಡಿ).
ಆದರೆ ವಾಸ್ತವಾಂಶ ಹಾಗಿಲ್ಲ, ಭಾನುವಾರ ಬೆಳಿಗ್ಗೆ ಸ್ಥಳೀಯ ರೈತರು ಕಾರ್ಖಾನೆಯ ಬಳಿ ಹೋಗಿ ರಾಜಕಾಲುವೆಗೆ ವಿಷಕಾರಿ ನೀರನ್ನು ಹರಿಸುತ್ತಿರುವ ಕುರಿತು ಪ್ರಶ್ನಿಸಿದ ಕೆಲ ಹೊತ್ತಿಗೇ ಕಾರ್ಖಾನೆಯಿಂದ ರಾಜಕಾಲುವೆಗೆ ಮಾಡಲಾಗಿದ್ದ ಕಾಲುವೆಯನ್ನು ಜೆಸಿಬಿ ಕಳಿಸಿ ಮಣ್ಣು ಎಳೆದು ಮುಚ್ಚಿಸಲಾಗಿದೆ. ಅಲ್ಲದೇ, ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಮತ್ತೊಂದು ಜೆಸಿಬಿ ತರಿಸಿ ಕಾರ್ಖಾನೆಯವರು ನೆಲದ ಆಳದಲ್ಲಿ ಕೊಳವೆ ಮೂಲಕ ರಾಜಕಾಲುವೆಗೆ ಕಲುಷಿತ ನೀರನ್ನು ಹರಿಸಲು ಮಾಡಿದ್ದ ಕಾಲುವೆಯನ್ನು ಅಗೆದು ತೆಗೆಸಿದ್ದು, ಕಲುಷಿತ ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಿಕೊಂಡಿದ್ದಾರೆ. ಭಾರೀ ನೊರೆಯಿಂದ ತುಂಬಿ ದುರ್ವಾಸನೆ ಹೊಡೆಯುತ್ತಿದ್ದ ಆ ನೀರನ್ನು “ಮಳೆ ನೀರು” ಅಂತಲೇ ವಾದಿಸಿದ ಮಲ್ಟಿಪ್ಲೆಕ್ಸ್ ಸಿಬ್ಬಂದಿ , ಸ್ಥಳದಲ್ಲಿದ್ದ ಸ್ಥಳೀಯ ರೈತ ಅನಿಲ್ ಕುಮಾರ್ , “ ಮಳೆ ನೀರಲ್ವಾ ಹಾಗಿದ್ದರೆ ನೀವು ಕುಡಿಯಬಹುದಲ್ವ” ಎಂದು ಪ್ರಶ್ನಿಸಿದಾಗಲೇ ಮಾತು ನಿಲ್ಲಿಸಿ ಗೊಂಬೆಗಳಂತೆ ನಿಂತದ್ದು.
ಸ್ಥಳಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಭೇಟಿ ನೀಡಿದ್ದರೆಂದು ತಿಳಿದು ಬಂದಿದೆ, ಆವರ ಪ್ರತಿಕ್ರಿಯೆ ಪತ್ರಿಕೆಗೆ ಲಭ್ಯವಾಗಿಲ್ಲ. ಉಪ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಪಲ್ಲವಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು ಸ್ಥಳೀಯರೊಂದಿಗೆ ಹಾಗೂ ಕಾರ್ಖಾನೆ ಸಿಬ್ಬಂದಿಯೊಂದಿಗೆ ಮಾತನಾಡಿದ್ದಲ್ಲದೇ ನೀರಿನ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದಾರೆ.
ʼ ಬೆವರ ಹನಿʼ ಪ್ರಾದೇಶಿಕ ದಿನಪತ್ರಿಕೆಯೊಂದಿಗೆ ಮಾತನಾಡಿದ ಪಲ್ಲವಿ ಅವರು, ಈ ಮಲ್ಟಿಪ್ಲೆಕ್ಸ್ ಕಾರ್ಖಾನೆಗೆ ಎರಡು ಮಾದರಿಯ ಕೀಟನಾಶಕ ಉತ್ಪನ್ನಗಳನ್ನು ತಯಾರಿಸಲು ಅನುಮತಿ ನೀಡಲಾಗಿದೆ ಹಾಗೂ ಕಾರ್ಖಾನೆಯಿಂದ ಯಾವುದೇ ಕಲುಷಿತ ನೀರನ್ನು ಹೊರಬಿಡಲು ಮಂಡಳಿ ಅನುಮತಿ ನೀಡಿರುವುದಿಲ್ಲ. ಆದಾಗ್ಯೂ ಸ್ಥಳೀಯರ ದೂರಿನ ಆಧಾರದ ಮೇಲೆ ದುರ್ವಾಸನೆಯುಕ್ತ ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳಿಸಲು ತೆಗೆದುಕೊಳ್ಳಲಾಗಿದೆ. ವರದಿ ಬಂದ ನಂತರ ಕಲುಷಿತ ಪದಾರ್ಥಗಳ ಮಾಹಿತಿ ಲಭ್ಯವಾಗಲಿದೆ” ಎಂದು ಸ್ಪಷ್ಟಪಡಿಸಿದರು.
ಮಲ್ಟಿಪ್ಲೆಕ್ಸ್ ಮ್ಯಾನೇಜರ್ ಪತ್ರಿಕೆಯೊಂದಿಗೆ ಒಟ್ಟು ಮೂರು ಭಾರಿ ಮಾತನಾಡಿದ್ದು, ಪ್ರತಿ ಸಲವೂ ಅವರು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದು, ಇನ್ನು ಮುಂದೆ ಮಳೆ ನೀರನ್ನು ಕಾರ್ಖಾನೆಯ ಆವರಣದಲ್ಲೇ ಇರುವ ಹೊಂಡಕ್ಕೆ ಹರಿಸಿ ಸಂಗ್ರಹಿಸುವುದಾಗಿ ಹೇಳಿದರು. ಜೊತೆಗೆ ಇವರು ಪ್ರತಿ ದಿನವೂ ಹತ್ತಾರು ಟ್ಯಾಂಕರ್ ಗಳಿಂದ ಸುಮಾರು 30 ಸಾವಿರ ಲೀಟರ್ ನೀರನ್ನು ಹೊರಗಿನಿಂದ ಖಾಸಗಿ ಟ್ಯಾಂಕರ್‌ನವರಿಂದ ತರಿಸಿ ಕೊಳ್ಳುತ್ತಿರುವುದನ್ನು ಖಚಿತಪಡಿಸಿದರಾದರೂ, ಆ ನೀರು ಕ್ಯಾಂಟೀನ್ ಹಾಗೂ ಸಿಬ್ಬಂದಿ ಬಳಕೆಗೆ ಎಂದು ಹಾರಿಕೆಯ ಉತ್ತರ ನೀಡಿದರು.
ಒಟ್ಟಾರೆ, ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ರಾಜಕಾಲುವೆ ವಿಷಕಾರಿ ನೀರಿನಿಂದ ಕಲುಷಿತಗೊಂಡಿರುವುದಂತೂ ನಿಜ ಮತ್ತು ಈ ಕಲುಷಿತ ನೀರಿನಿಂದ ಜಲಚರಗಳು ಸಾವಿಗೀಡಾಗಿರುವುದು ಮತ್ತು ಈ ನೀರು ಕುಡಿದು ರೈತರ ಒಂದು ಕುರಿ ಸತ್ತಿರುವುದೂ ನಿಜ. ಪರಿಸ್ಥಿತಿ ಹೀಗಿರುವಾಗ ನಿಜಕ್ಕೂ ನಡೆಯುತ್ತಿರುವುದೇನು ಹಾಗೂ ರಾಜಕಾಲುವೆ ಮಲಿನಗೊಳ್ಳಲು ಮಲ್ಟಿಪೆಕ್ಸ್ ಅಲ್ಲವಾದೃೆ ಮತ್ಯಾವ ಕಾರ್ಖಾನೆ ಕಾರಣ ಎಂಬುದನ್ನು ಪತ್ತೆ ಮಾಡಿ ಘೋಷಿಸಿ, ಸೂಕ್ತ ಕ್ರಮ ಜರುಗಿಸಿವುದು ಮಹಾನಗರಪಾಲಿಕೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಂಪೂರ್ಣ ಜವಾಬ್ದಾರಿಯಾಗಿದೆ.