ಹಳ್ಳಿ ಹೈದನ ನೂರೆಂಟು ನೆನಪುಗಳು
ರಾಜ್ ರವರ ಗಟ್ಟಿ ಧ್ವನಿಯ ಗುಟ್ಟು
ಹಳ್ಳಿ ಹೈದನ ನೂರೆಂಟು ನೆನಪುಗಳು
ಚಿಕ್ಕಣ್ಣ ಐಎಎಸ್(ನಿ)
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹಳ್ಳಿಯೊಂದರಲ್ಲಿ ಜನಿಸಿದ ಸಿ.ಚಿಕ್ಕಣ್ಣನವರು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ತಮ್ಮ ಜೀವನ ಚರಿತ್ರೆಯನ್ನು’ ಅಗ್ನಿ ಹಂಸ- ಹಳ್ಳಿ ಹೈದನ ನೂರೆಂಟು ನೆನಪುಗಳು’ ಎಂಬ ಬೃಹತ್ ಕೃತಿಯಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಶ್ರೀಯುತರು ಒಮ್ಮೆ ಕನ್ನಡದ ಮೇರು ನಟ ರಾಜ್ ಅವರನ್ನು ಭೇಟಿ ಮಾಡುತ್ತಾರೆ. ಈ ಸ್ವಾರಸ್ಯಕರ ಪ್ರಸಂಗ ಇಲ್ಲಿದೆ ಓದಿ..,
ರಾಜಕುಮಾರ್ ಗಟ್ಟಿ ಧ್ವನಿಯ ಗುಟ್ಟು…,!?
ಚಿತ್ರದುರ್ಗಕ್ಕೆ ವರ್ಗವಾಗಿ ಹೋದ ಮೇಲೆ, ಬೆಂಗಳೂರಿಗೆ ಕಛೇರಿ ಕೆಲಸಕ್ಕಾಗಲಿ ಸ್ವಂತ ಕೆಲಸಕ್ಕಾಗಲಿ ಬಂದರೆ, ಹಳೆಯ ಗಣೇಶ ಲಾಡ್ಜ್ ಬದಲು ಹೈಗೌಂಡ್ಸ್‌ನಲ್ಲಿರುವ ಹೈಲ್ಯಾಂಡ್ಸ್ ಹೋಟೆಲಿನಲ್ಲಿ ಇರಲಾರಂಭಿಸಿದೆ, ಈ ಹೋಟೆಲ್ ನಮ್ಮ ಮಧುಗಿರಿ ಪಕ್ಕದ ಮಡಕಶಿರಾದವರಾದ ಶ್ರೀರಾಮರೆಡ್ಡಿಯವರಿಗೆ ಸೇರಿತ್ತು. ಅದರ ಮ್ಯಾನೇಜರ್ ರಾಮಕೃಷ್ಣ, ಮಧುಗಿರಿಯವರು, ಒಂದು ಸಲ ಪರಿಚಯವಾದ ಮೇಲೆ ನಾನು ಯಾವಾಗ ಹೋದರೂ ಹೇಗೋ ಅಡ್ಡಸ್ ಮಾಡಿ ನನಗೆ ರೂಂ ಕೊಡುತ್ತಿದ್ದರು. ಹೀಗಾಗಿ ಒಮ್ಮೆ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದಾಗ ನನ್ನ ಶ್ರೀಮತಿಯವರೊಂದಿಗೆ ಹೈಲ್ಯಾಂಡ್ಸ್‌ನಲ್ಲಿ ಇಳಿದುಕೊಂಡ. ಸಂಜೆ ಅದರ ಡೈನಿಂಗ್ ಹಾಲ್‌ನಲ್ಲಿ ಇಬ್ಬರೂ ತಿಂಡಿ ತಿಂದು ರೂಮಿಗೆ ಬಂದೆವು. ನಮ್ಮ ರೂಮ್ ಕಾರಿಡಾರಿನ ಕೊನೆಯಲ್ಲಿತ್ತು. ರೂಂನತ್ತ ಹೋಗುತ್ತಿರುವಾಗ ಇಬ್ಬರು ಹುಡುಗರು ರೂಮಲ್ಲಿ ಕಿತ್ತಾಡಿಕೊಂಡು ಗಲಾಟೆ ಮಾಡುತ್ತಿರುವುದು ಕಿವಿಗೆ ಬಿತ್ತು.
'ಏಯ್, ಭಡವರಾ ಬಿಡ್ತೀನಿ ನೋಡು ಸುಮ್ಮನೆ ಇರೋಕಾಗಲ್ವಾ' ಅಂದು ಅವರನ್ನು ಬೈಯ್ದು ಗದರಿ ಕೊಂಡರು. 16ನೇ ವಯಸ್ಸಿನಿಂದ ಅವರ ಸಿನಿಮಾ ನೋಡಿದ್ದ ನನಗೆ ಇದು ರಾಜಕುಮಾರರ ಧ್ವನಿ ಎಂದು ಅನಿಸಿತು. ಥಟ್ಟನೆ ಇಬ್ಬರೂ ನಿಂತೆವು. ಶಬ್ದ ಬಂದ ರೂಮು ಅರೆಬಾಗಿಲು ತೆರೆದಿತ್ತು. ಒಳಗೆ ಇಣುಕಿ ನೋಡಿದೆ. ಹೌದು ವಿಶಾಲ ಬೆಳ್ಳಿ ತೆರೆಯ ನಟ ಸಾರ್ವಭೌಮ ರಾಜ್ ಅವರು, ಅವರ ಪಕ್ಕದಲ್ಲಿ ಕುಳಿತಿದ್ದ ರಾಜಾಶಂಕರ್ ಕಾಣಿಸಿಕೊಂಡರು. ರಾಜಾಶಂಕರ್ ನಮ್ಮ ಮಧುಗಿರಿಯವರು. ಅವರ ಶ್ರೀಮತಿ ಶಾಂತಮ್ಮನವರು, ನಮ್ಮ ಮೇಷ್ಟ್ರು ಬಡಕನಹಳ್ಳಿಯ ರಂಗಶಾಮಯ್ಯನವರ ಮಗಳು, ಜೊತೆಗೆ ಅವರು ನನ್ನ ಶ್ರೀಮತಿಯ Class Mate, 'ಮಿ, ರಾಜಾಶಂಕರ್' ಎಂದೆ. ಅವರು ನನ್ನ ಕಡೆ ತಿರುಗಿ ಹೋ ಏನಾಶ್ಚರ್ಯ, ಏನು ಸಾರ್ ಇಲ್ಲಿ?' ಅಂತ ರೂಂ ನಿಂದ ಹೊರಬಂದು ಕೈಕುಲುಕಿದರು. ಪಕ್ಕದಲ್ಲಿಯೇ ನಿಂತಿದ್ದ ನನ್ನ ಶ್ರೀಮತಿಯನ್ನು ನೋಡಿ 'ಚೆನ್ನಾಗಿದ್ದೀಯಮ್ಮಾ' ಅಂದರು. 'ಇರಿ, ಅಣ್ಣಾವ್ರನ್ನ ಪರಿಚಯ ಮಾಡಿಸ್ತೀನಿ' ಎಂದು ರೂಂ ಒಳಗೆ ಹೋದರು. ರಾಜಕುಮಾರ್ ಮತ್ತು ಅವರ ಇಬ್ಬರು ಮಕ್ಕಳು (ಬಹುಶಃ ಶಿವರಾಜ್, ರಾಘವೇಂದ್ರ ರಾಜಕುಮಾರ್ ಇರಬಹುದು) ಹೊರಗೆ ಬಂದರು. 'ಅಣ್ಣ, ಇವರು ಚಿಕ್ಕಣ್ಣ ಅಂತ, ನಮೂರಿನವರೇ, ಇವರು ಅವರ ಹೆಂಡತಿ, ನಮ್ಮ ಶಾಂತನ Class Mate' ಎಂದು ಹೇಳಿ ನನ್ನ ಮಾವನವರ ಬಗ್ಗೆ ಹೇಳಿದರು. 'ಬಹಳ ಸಂತೋಷ, ನಿಮ್ಮ ಮಾವನವರನ್ನು ಒಂದು ಬಾರಿ ನೋಡಿದ್ದೇನೆ. ಚೆನ್ನಾಗಿದ್ದೀರಾ' ಅಂದರು ರಾಜ್‌ಕುಮಾರ್.
'ತಮ್ಮನ್ನು ಭೇಟಿ ಮಾಡಿದ್ದು ನಮ್ಮ ಪುಣ್ಯ’ ಅಂದೆ.
“ ನಾನೂ ನಿಮ್ಮಂತೇನೇ ಒಬ್ಬ ಸಾಮಾನ್ಯ ಮನುಷ್ಯ” ಎಂದರು ರಾಜ್.
ರಾಜಾಶಂಕರ್ ನನ್ನ ಕಡೆ ತಿರುಗಿ , “ ಇದೇ ಹೋಟೆಲ್‍ನಲ್ಲಿದ್ದೀರಾ?” ಅಂದರು. “ ಹೌದು ಅಂತ ಹೇಳಿ ರೂಂ ತೋರಿಸಿದೆ. 'ಸರಿ, ಅಣ್ಣ, ಅವ್ರ ಜತೆ ಯಾವುದೋ ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮಾಡ್ತೀದ್ದೀನಿ. ಆಮೇಲೆ ರೂಂಗೆ ಬರೀನಿ' ಎಂದರು.
ರಾತ್ರಿ 8-30ಕ್ಕೆ ನಾವಿಬ್ಬರೂ ಡೈನಿಂಗ್ ಹಾಲ್‌ಗೆ ಹೋಗಿ ಊಟ ಮಾಡಿಕೊಂಡು ಹಿಂದಿರುಗುತ್ತಿದ್ದೆವು. ಲಾಡ್ಜ್‌ನ ಮೆಟ್ಟಿಲ ಮೇಲೆ ರಾಜಕುಮಾರ್, ಪಾರ್ವತಮ್ಮ, ರಾಜಾಶಂಕರ್, ಮೂವರೂ ಕುಳಿತು ಎಲೆ ಅಡಿಕೆ ತಟ್ಟೆ ಇಟ್ಟುಕೊಂಡು ಜಗಿಯುತ್ತಾ ಚರ್ಚಿಸುತ್ತಿದ್ದರು. 'ಅಣ್ಣ ಊಟ ಆಯ್ತ' ಅಂದರು ರಾಜಾಶಂಕರ್, 'ಆಯ್ತು' ಎಂದು ಹೇಳಿ ರಾಜ್ ಮತ್ತು ಪಾರ್ವತಮ್ಮ ಅವರಿಗೆ ನಮಸ್ಕರಿಸಿದೆ. ರಾಜಾಶಂಕರ್ ಪಾರ್ವತಮ್ಮ ಅವರಿಗೆ ನಮ್ಮ ಪರಿಚಯ ಹೇಳಿದರು. 'ಬರ್ರೀ, ಅಡಿಕೆ ಎಲೆ ಹಾಕ್ಕೊಳ್ಳಿ' ಅಂದರು ಪಾರ್ವತಮ್ಮನವರು. 'ಅಭ್ಯಾಸ ಇದೆಯೋ ಅಂದರು ರಾಜ್. 'ಸರ್, ನಮ್ಮದು ಅಡಿಕೆ ತೋಟ, ಅದರಲ್ಲಿ ವೀಳೆದೆಲೆ ಬಳ್ಳಿ ಎಲ್ಲಾ ಇದೆ. ದಿನ ತಿನ್ನುತ್ತೀವಿ' ಎಂದೆ. 'ಹಂಗಾದ್ರೆ ಬನ್ನಿ' ಎಂದು ಅಡಿಕೆ ಎಲೆ ತಟ್ಟೆ ಮುಂದಿಟ್ಟರು. ಅದೂ ಇದೂ ಮಾತಾಡ್ತಾ, ಒಂದು ಡಜ್ಹನ್ ಎಲೆಗಳನ್ನು ರಾಜ್ ಅವರು ತಿಂದದ್ದನ್ನು ನೋಡಿ 'ಏನ್ ಸರ್ ಇಷ್ಟೊಂದು ಎಲೆ ತಿಂತೀರಿ” ಅಂದೆ. “ಅದೇ ಸಾರ್, ನನ್ನ ಧ್ವನಿಯನ್ನು ಗಟ್ಟಿಯಾಗಿಟ್ಟಿರೋದು' ಎಂದು ಹೇಳಿ, 'ಬೆಳಗ್ಗೆ 5 ಗಂಟೆಗೆ ಏಳೇಕು, ಶೂಟಿಂಗ್ ಇದೆ' ಎಂದು ಎದ್ದರು.
ಪಾರ್ವತಿ, ಇವರನ್ನು ನಾಳೆ ಕಂಠೀರವಕ್ಕೆ ಕರೆದುಕೊಂಡು ಬಾ, ಶೂಟಿಂಗ್ ನೋಡಲಿ' ಎಂದು ಹೇಳಿ Good Night ಎಂದರು, ರಾಜಾಶಂಕರ್, 'ನಾನೂ ಬರ್ತೇನೆ' ಎಂದು ಕಾರು ಹತ್ತಿ ಹೊರಟರು, ಪಾರ್ವತಮ್ಮ ಅವರು 'ನೀವು 8-30 ರಷ್ಟೊತ್ತಿಗೆ ರೆಡಿಯಾಗಿ, ಕಾರ್ ಬಂದಿರುತ್ತೆ “ ಎಂದು ಹೇಳಿ ರೂಮಿಗೆ ಹೋದರು.
ಬೆಳಗ್ಗೆ 8-30ಕ್ಕೆ ತಿಂಡಿ ಮಾಡಿ ರೆಡಿಯಾದವು, ಸುಮಾರು 9-00 ಗಂಟೆಗೆ ಹಿರಿಯ ಕಲಾವಿದರಾದ ರಾಜಾನಂದ್ ಅವರು ನಮ್ಮ ರೂಂಗೆ ಬಂದು ಪರಿಚಯ ಮಾಡಿಕೊಂಡು, 'ಬನ್ನಿ ಹೋಗೋಣ' ಎಂದರು. ಅವರ ಜತೆ ಕಾರಲ್ಲಿ ಕಂಠೀರವ ಸ್ಟುಡಿಯೋಗೆ ಹೋದೆವು, ನಮ್ಮವರೇ ಆದ ಕೆ.ಸಿ.ಎನ್, ಗೌಡರು ತಯಾರಿಸುತ್ತಿದ್ದ ಬಬ್ರುವಾಹನ ' ಚಿತ್ರದ ಒಂದು ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ರಾಜ್‌ಕುಮಾರ್ ಅರ್ಜುನನಾಗಿ ಬಿ. ಸರೋಜಾದೇವಿ ಜೊತೆ ಅಭಿನಯಿಸುತ್ತಿದ್ದರು. ನಾವು ಸದ್ದಿಲ್ಲದೆ ಹೋಗಿ ದೂರದಲ್ಲಿ ಕುಳಿತೆವು, ಷಾಟ್ ಮುಗಿದ ನಂತರ ರಾಜ್ ನಮ್ಮ ಹತ್ತಿರ ಬಂದು ಕುಳಿತು, ಕಾಫಿ ತರಿಸಿಕೊಟ್ಟರು. ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಯವರು ಷಾಟ್‌ಗಳ ಮಧ್ಯೆ ಸಿಗರೇಟ್ ಎಳೆಯುತ್ತಿದ್ದರು. ಅವರೊಬ್ಬ ಚೈನ್ ಸ್ಮೋಕರ್' ಎಂದರು ರಾಜ್. ನಮ್ಮ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರು ಎಂದು ಹೇಳಿ ನಮ್ಮನ್ನು ಅವರಿಗೆ ಪರಿಚಯ ಮಾಡಿಕೊಟ್ಟರು. 'ಷಾಟ್ ರೆಡಿ' ಎಂದರು. ಮತ್ತೆ ರಾಜ್ ಅವರು ಸೆಟ್ಟಿಗೆ ಹೋದರು. ಒಂದು ಎತ್ತರದ ಜಾಗದಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಅದಕ್ಕೆ ರಾಜ್-ಸರೋಜಾದೇವಿ ಇಬ್ಬರೂ ಪೂಜೆ ಮಾಡುತ್ತಾ ಹಾಡುವ ದೃಶ್ಯ. ಪಾಟ್ ಮುಗಿದ ಮೇಲೆ ಸರೋಜಾದೇವಿಯವರನ್ನು ಪರಿಚಯ ಮಾಡಿಕೊಟ್ಟರು ರಾಜ್. ಹೀಗೆ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಹಾಡಿನ ಚಿತ್ರೀಕರಣ ಮುಗಿಯಿತು. ಪಾರ್ವತಮ್ಮನವರು 'ರಾಜ್ ಅವರಿಗೆ ಊಟ ತಂದರು. Lunch Break ನಲ್ಲಿ ನಾವು ಹೊರಡಲು ಅಣಿಯಾಗಿ 'ನಮಗೆ ಅಪ್ಪಣೆ ಕೊಡಿ' ಎಂದೆ. 'ಎಲ್ಲಾದ್ರು ಉಂಟೆ, ಊಟ ಮಾಡ್ಕೊಂಡೇ ಇಲ್ಲಿಂದ ಹೋಗೋದು' ಎಂದು ರಾಜ್ ಅವರು ನಮ್ಮನ್ನು ತಡೆದರು. ಪಾರ್ವತಮ್ಮನವರು ತಂದಿದ್ದ ಊಟದಲ್ಲಿ ನಮಗೂ ಪಾಲಿತ್ತು. ನಮ್ಮನ್ನು, ನಮ್ಮ ಹೊಟ್ಟೆಯನ್ನು ನೋಡಿಕೊಂಡು ಬೀಳ್ಕೊಟ್ಟರು. ಆ ದಂಪತಿಗಳ ಸರಳತೆ, ಸಹೃದಯತೆ, ಮುಗ್ಧತೆಗೆ ನಾವು ಮನಸೋತು ಹೋದೆವು. ಬಂದ ಕಾರಲ್ಲೆ ನಮಗೆ ಹೈಲ್ಯಾಂಡ್ಸ್‌ಗೆ Drop ಕೊಡಿಸಿದರು.