ತುಮಕೂರಿಗೆ ಬಂದರೂ ಗುಬ್ಬಿಗೆ ತೆರಳದ ದೊಡ್ಡಗೌಡರು!
ತುಮಕೂರಿಗೆ ಬಂದರೂ ಗುಬ್ಬಿಗೆ ತೆರಳದ ದೊಡ್ಡಗೌಡರು!
ಗುಬ್ಬಿಯಲ್ಲಿ ಸೋಮವಾರ ನಡೆದ ಯುವ ಮುಖಂಡ ನಾಗರಾಜು ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಆಗಮಿಸಿ ಭಾಷಣ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಕಾರ್ಯಕ್ರಮದಲ್ಲಿ ಭಾಗವಹಿಸದೆ ಸಾವಿರಾರು ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದರು.
ಸಿಂದಗಿ ಉಪಚುನಾವಣೆಯಲ್ಲಿ ಅವರು ಬ್ಯುಸಿಯಾಗಿದ್ದಾರೆಂದು ಭಾವಿಸುವ ಹಾಗಿರಲಿಲ್ಲ. ಹಾಸನದಿಂದ ಸಿಂದಗಿಗೆ ಹೆಲಿಕಾಪ್ಟರ್‌ನಲ್ಲಿ ತೆರಳುವ ಮಾರ್ಗ ಮಧ್ಯೆ ತುಮಕೂರಿನ ವಿಶ್ವವಿದ್ಯಾಲಯದ ಮೈದಾನದಲ್ಲಿರುವ ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್ ಆಗಿದ್ದರು. ಆದರೂ ಗುಬ್ಬಿ ಸಮಾವೇಶದಲ್ಲಿ ಅವರು ಭಾಗವಹಿಸದೇ ದೂರವೇ ಉಳಿದು ಆಶ್ಚರ್ಯ ಮೂಡಿಸಿದರು.
ಗುಬ್ಬಿ ಸಮಾವೇಶ ಮುಗಿಸಿಕೊಂಡು ತುಮಕೂರಿಗೆ ಬಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೆಚ್ಡಿಡಿಯವರನ್ನು ಸೇರಿಕೊಂಡು ಒಟ್ಟಿಗೇ ಹೆಲಿಕಾಪ್ಟರ್‌ನಲ್ಲಿ ಸಿಂದಗಿಗೆ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಪಕ್ಷಕ್ಕೆ ನೂತನವಾಗಿ ಸೇರ್ಪಡೆಯಾಗಿರುವ ಯುವ ಮುಖಂಡ ನಾಗರಾಜು, ಶಾಸಕ ಗೌರಿಶಂಕರ್ ಸೇರಿದಂತೆ ಪಕ್ಷದ ಜಿಲ್ಲಾ ಮುಖಂಡರು ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದಪಡೆದರು.
ಅಷ್ಟು ದೊಡ್ಡ ಸಮಾವೇಶ ನಡೆಸಿದರೂ, ಕೇವಲ 20 ಕಿಲೋಮೀಟರ್ ದೂರದಲ್ಲಿರುವ ಗುಬ್ಬಿಗೆ ದೊಡ್ಡಗೌಡರು ಯಾಕೆ ತೆರಳಲಿಲ್ಲ ಎಂಬ ಪ್ರಶ್ನೆ ಹಲವರಲ್ಲಿ ಸಹಜವಾಗಿಯೇ ಉಳಿದುಕೊಂಡಿತು.
ಉಳಿಸಿಕೊಳ್ಳಲು ಹರಸಾಹಸ ಮಾಡಿದೆವು:
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದೊಡ್ಡಗೌಡರು, ಶ್ರೀನಿವಾಸ್ ಅವರನ್ನು ನಮ್ಮ ಪಕ್ಷದಲ್ಲಿಯೇ ಉಳಿಸಿಕೊಳ್ಳಲು ನಾವು ಸಾಕಷ್ಟು ಪ್ರಯತ್ನಿಸಿದೆವು. ಮಾತನಾಡಲು ಬನ್ನಿ ಅಂತ ಕರೆದೆವು. ಅವರು ಬಾರದಿದ್ದಾಗ ನಾವೇ ನಿಮ್ಮ ಮನೆಗೆ ಬರ್ತೇವೆ ಅಂತಾನೂ ಹೇಳಿದೆವು. ಆದರೆ ಅವರು ವಿಮುಖರಾದರು. ಹೀಗಿದ್ದಾಗ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.