ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕಾಲುವೆ ಯೋಜನೆಗೆ ತೀವ್ರ ವಿರೋಧ

ಜಿಲ್ಲೆಯ ಹೇಮಾವತಿ ಮುಖ್ಯ ಕಾಲುವೆಗೆ ರೂ.948 ಕೋಟಿ ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ ಲಿಂಕ್‌ ಕಾಲುವೆ ನಿಜಕ್ಕೂ ಅಗತ್ಯವಿತ್ತಾ?

ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕಾಲುವೆ ಯೋಜನೆಗೆ ತೀವ್ರ ವಿರೋಧ

ಕಾಮಗಾರಿ ತಡೆಯುವ ಎಚ್ಚರಿಕೆ ನೀಡಿದ

ಸೊಗಡು, ಎಂ.ಟಿ.ಕೃಷ್ಣಪ್ಪ, ಹೆಚ್.ನಿಂಗಪ್ಪ

    ತುಮಕೂರು: ಜಿಲ್ಲೆಯ ಜೀವದಾಯಿನಿ ಆಗಿರುವ ಹೇಮಾವತಿ ನದಿ ನೀರನ್ನು ಕುಣಿಗಲ್‌ ತಾಲೂಕಿಗೆ ನೇರವಾಗಿ ಹರಿಸುವ ಸಲುವಾಗಿ ನಿಟ್ಟೂರು ಸಮೀಪದ ಡಿ.ರಾಂಪುರದ ಬಳಿ ಆರಂಭವಾಗಿರುವ ಎಕ್ಸ್‌ಪ್ರೆಸ್‌ ಲಿಂಕ್‌ ಕಾಲುವೆ ಕಾಮಗಾರಿಗೆ ಮತ್ತೆ ವಿರೋಧ ವ್ಯಕ್ತವಾಗಿದೆ.

    ತುರುವೇಕೆರೆ ಶಾಸಕ ಎಂ.ಟಿ.,ಕೃಷ್ಣಪ್ಪ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ , ಮಾಜಿ ಶಾಸಕ ಹೆಚ್.ನಿಂಗಪ್ಪ, ಗುಬ್ಬಿ ವಿಧಾನ ಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ದಿಲೀಪ್‌, ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ ಮೊದಲಾದವರು ಸೋಮವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ  ಮಾತನಾಡಿ, ತುಮಕೂರು ಜಿಲ್ಲೆಯ ಹೇಮಾವತಿ ನಾಲೆಯ 70ನೇ ಕಿಮೀನಿಂದ 166ನೇ ಕಿಮೀವರೆಗೆ 34.5 ಕಿಮೀ ಉದ್ದದ ಪೈಪ್‌ ಲೈನ್‌ ಕಾಮಗಾರಿ ಆರಂಭಗೊಂಡಿದ್ದು, ಈ ಕಾಮಗಾರಿಯನ್ನು ತಡೆಯಲು ಸಾವಿರಾರು ಸಂಖ್ಯೆಯ ರೈತರೊಂದಿಗೆ ಭಾರೀ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದು ದಿನಾಂಕವನ್ನು ಪ್ರಕಟಿಸುವುದಾಗಿ ತಿಳಿಸಿದರು.

     ಉದ್ದೇಶಿತ ಕೊಳವೆ ಕಾಲುವೆಯಿಂದಾಗಿ ತುರುವೇಕೆರೆ, ಗುಬ್ಬಿ ಹಾಗೂ ತುಮಕೂರು ತಾಲೂಕಿನ ಜನ,ಜಾನುವಾರುಗಳು ನೀರಿನ ಕೊರತೆಯಿಂದ ನರಳಿ, ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆತಂಕ ವ್ಯಕ್ತಪಡಿಸಿದರು.

    ಸಂಪರ್ಕ ನಾಲಾ ಕಾಮಗಾರಿಯನ್ನು ಸ್ಥಗಿತಗೊಳಿಸುವ ಕುರಿತಾಗಿ ಇಡೀ ಜಿಲ್ಲೆಯ 40ಕ್ಕೂ ಹೆಚ್ಚು ಮಠಾಧೀಶರನ್ನು ಖುದ್ದಾಗಿ ಸಂಪರ್ಕಿಸಿದ್ದು ಅವರೆಲ್ಲರೂ ಬೆಂಬಲ ನೀಡಿದ್ದಾರೆ ಎಂದು ಸೊಗಡು ಶಿವಣ್ಣ ತಿಳಿಸಿದರು.

     ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಎಂ.ಟಿ.ಕೃಷ್ಣಪ್ಪನವರು ಮಾತನಾಡಿ, ಸಂಪರ್ಕ ಕಾಲುವೆ ಕಾಮಗಾರಿ ಸ್ಥಗಿತಗೊಳಿಸಲು ಪ್ರತಿಭಟನೆ ಹಮ್ಮಿಕೊಂಡಾಗ ಎದುರಾಗುವ ಅರೆಸ್ಟ್‌, ಜೈಲು ಏನಾದರೂ ಬಗ್ಗುವುದಿಲ್ಲ, ನಾವು ಐದಾರು ಮಂದಿ ಪ್ರತಿಭಟನೆಗೆ ಮುಂದಾಗುವುದಿಲ್ಲ, ಹೇಮಾವತಿ ವ್ಯಾಪ್ತಿಯ ಸಾವಿರಾರು ರೈತರನ್ನು ಸಂಘಟಿಸಿ ಪ್ರತಿಭಟನೆ ದಿನಾಂಕ ತಿಳಿಸುವುದಾಗಿ ಸ್ಪಷ್ಟಪಡಿಸಿದರು. ಅದಕ್ಕೂ ಮುನ್ನ ಸೊಗಡು ಶಿವಣ್ಣನವರು ಮಾತನಾಡುವಾಗ ಮೇ.10ರ ಶುಕ್ರವಾರ ಪ್ರತಿಭಟಿಸುವುದಾಗಿ ಹೇಳಿದ್ದರು.

     ಹೇಮಾವತಿ ನೀರನ್ನು ತುರುವೇಕೆರೆ, ಗುಬ್ಬಿ ಹಾಗೂ ತುಮಕೂರು ತಾಲೂಕುಗಳನ್ನು ಬೈಪಾಸ್‌ ಮಾಡಿ ನೇರ ಕುಣಿಗಲ್‌ ತಾಲೂಕಿಗೆ ಸಂಪರ್ಕ ಕಲ್ಪಿಸುವುದರಿಂದ ಹೇಮಾವತಿ ನದಿ ನೀರನ್ನು ತುಮಕೂರು ಜಿಲ್ಲೆಗೆ ಹರಿಸಿದ ಹಿರಿಯ ಉದ್ದೇಶವೇ ವ್ಯರ್ಥವಾಗಿಬಿಡುತ್ತದೆ ಎಂಬುದು ಈ ಯೋಜನೆಯ ವಿರೋಧಕ್ಕೆ ಮೂಲ ಕಾರಣವಾಗಿದೆ. ಜಿಲ್ಲೆಯ ಹೇಮಾವತಿ ನಾಲೆಯನ್ನು 740 ಕೋಟಿ ರೂ ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುತ್ತಿದ್ದು, ಈ ಮುಖ್ಯ ನಾಲೆಯ ಮುಖಾಂತರವೇ ಕುಣಿಗಲ್‌ ತಾಲೂಕಿಗೆ ಹಾಗೂ ಮಾಗಡಿ ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಶ್ರೀರಂಗ ಏತ ನೀರಾವರಿಗೂ ನೀರನ್ನು ಹರಿಸಿಕೊಳ್ಳಲು ಯಾರದೇನು ಅಡ್ಡಿ ಎಂದು ಆ ಭಾಗದ ಮಾಜಿ ಶಾಸಕ ಹೆಚ್.ನಿಂಗಪ್ಪ ಪ್ರಶ್ನಿಸಿದರು.

    ತಿಪಟೂರು ನಗರಸಭೆಯ ಮಾಜಿ ಸದಸ್ಯ ಪ್ರಸನ್ನಕುಮಾರ್‌ , ರೈತ ಸಂಘದ ರಾಜ್ಯ ಅಧ್ಯಕ್ಷ ರಾಮನಗರದ ಲಕ್ಷ್ಮೀನಾರಾಯಣಗೌಡ ಮೊದಲಾದವರಿದ್ದರು.

 

ಜಿಲ್ಲೆಯ ಹೇಮಾವತಿ ಮುಖ್ಯ ಕಾಲುವೆಗೆ ರೂ.948 ಕೋಟಿ ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ ಲಿಂಕ್‌ ಕಾಲುವೆ ನಿಜಕ್ಕೂ ಅಗತ್ಯವಿತ್ತಾ?

      ಹೇಮಾವತಿ ಜಲಾಶಯ ಯೋಜನೆಯಡಿ ಬರುವ ತುಮಕೂರು ಜಿಲ್ಲೆಯ ಶಾಖಾ ನಾಲೆಯು ಒಟ್ಟು ಸುಮಾರು 240 ಕಿಮೀ ಉದ್ದವಿದೆ.  ಈ ನಾಲೆಯಲ್ಲಿ 70ನೇ ಕಿಮೀ ಸುಮಾರಿನಲ್ಲಿ (ಅಂದರೆ ನಿಟ್ಟೂರು ಹಿಂಭಾಗದ ಡಿ.ರಾಂಪುರದಿಂದ) ಕುಣಿಗಲ್‌ ಕಡೆಗೆ ನೇರವಾಗಿ 34.5 ಕಿಮೀ ಉದ್ದದ ಕಾಲುವೆಯನ್ನು ನಿರ್ಮಿಸಲಾಗುತ್ತಿದ್ದು ಈ ಕಾಲುವೆ 191ನೇ ಕಿಮೀ (ಅಂದರೆ ಸಿಎಸ್‌ಪುರ ಮುಗಿದ ಮೇಲೆ ನಾರನಹಳ್ಳಿ ಬಳಿ ) ಬಳಿ ಮತ್ತೆ ಅದೇ ತುಮಕೂರು ಜಿಲ್ಲೆಯ ಹೇಮಾವತಿ ನಾಲೆಯನ್ನು ಸೇರಿಕೊಳ್ಳುತ್ತದೆ. ಈ ಎಕ್ಸ್‌ಪ್ರೆಸ್‌ ಲಿಂಕ್‌ ಕಾಲುವೆ  ಹಾಲಿ ಇರುವ ಹೇಮಾವತಿ ನಾಲೆಯಂತೆ ತೆರೆದ ನಾಲೆಯಾಗಿರುವುದಿಲ್ಲ, ಬದಲಿಗೆ 2.8 ಮೀಟರ್‌  ಅಂದರೆ 9.43 ಮೀಟರ್‌ ವ್ಯಾಸದ ಕಬ್ಬಿಣದ ಕೊಳವೆಗಳನ್ನು ನೆಲದ ಆಳದಲ್ಲಿ ಹೂಳಲಾಗುತ್ತಿದ್ದು, ನೀರು ಸುರಂಗ ಮಾರ್ಗವಾಗಿ ಕುಣಿಗಲ್‌ ತಲುಪಲಿದೆ.

     ಪ್ರಸ್ತುತ 948 ಕೋಟಿ ರೂ. ಅಂದಾಜು ವೆಚ್ಚದ ಈ ಕಾಮಗಾರಿಗೆ ಈಗಾಗಲೇ ಚಾಲನೆ ದೊರಕಿದ್ದು, ಕಾಲುವೆ ಅಗೆತ ಸಾಗಿದೆ. ಉಪ್ಪಾರ್‌ ಅಂಡ್‌ ಸನ್ಸ್‌ ನಿರ್ಮಾಣ ಕಂಪನಿಯ ವಿಜಯ್‌ ಉಪ್ಪಾರ್‌ ಎಂಬುವವರು ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದಾರೆ.  ಹೇಮಾವತಿ ಜಲಾಶಯವಿರುವ ಗೊರೂರು ಜಲಾನಯನ ಪ್ರದೇಶದಲ್ಲಿ ಹಾಗೂ ತುಮಕೂರು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿ ಪ್ರವಾಹ ಉಕ್ಕಿ ಹರಿದಾಗ ಈ ಕೊಳವೆ ಕಾಲುವೆ ಮೂಲಕ ನೀರನ್ನು ಹೆಚ್ಚುವರಿಯಾಗಿ ಹರಿಸುವುದು ಈ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ನಿರ್ಮಾಣದ ಉದ್ದೇಶ ಎಂದು ಈ ಯೋಜನೆಯನ್ನು 2013-18ರ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರೂಪಿಸಿದಾಗ ಹೇಳಲಾಗಿತ್ತು. ಸರ್ಕಾರದ ಆದೇಶ ಸಂಖ್ಯೆ ಜಸಂಇ 45 ಎನ್‌ ಹೆಚ್‌ಪಿ 2013 ದಿನಾಂಕ 28.12.20214ರ ಆದೇಶದಲ್ಲಿ ಅವತ್ತಿನ ಅಂದಾಜು ವೆಚ್ಚ ರೂ.277.50 ಕೋಟಿ ಮೊತ್ತದಲ್ಲಿ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ತುಮಕೂರು ಜಿಲ್ಲೆಯ ಹೇಮಾವತಿ ಮುಖ್ಯ ನಾಲೆಯ 192.30ನೇ ಕಿಮೀ ಬಳಿ ವಾರ್ಷಿಕ 0.84 ಟಿಎಂಸಿ ( 843.71 ಎಂಸಿಎಫ್‌ಟಿ) ನೀರನ್ನು ವಿದ್ಯುತ್‌ ಪಂಪ್‌ಗಳ ಮೂಲಕ ಎತ್ತಿ ಕುಣಿಗಲ್‌ ತಾಲೂಕಿನ ಹುತ್ರಿದುರ್ಗ ಹೋಬಳಿ ಹಾಗೂ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ 289 ಹಳ್ಳಿಗಳಿಗೆ ಕುಡಿಯವ ನೀರನ್ನು ಒದಗಿಸುವ ಸಲುವಾಗಿ 83 ಕೆರೆಗಳನ್ನು ಭರ್ತಿ ಮಾಡುವುದು ಈ ಯೋಜನೆಯಲ್ಲಿದೆ.  ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ ದಿನದಿಂದ ಕಾಂಗ್ರೆಸ್‌ ಆಡಳಿತಾವಧಿ ಅಂತ್ಯದವರೆಗೆ ಹಾಗೂ ಆನಂತರದ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರ ಅಂತ್ಯಗೊಳ್ಳುವವರೆಗೆ ಅಂದರೆ 2014ರಿಂದ 2019ರ ಮಾರ್ಚಿವರೆಗೆ ಈ ಯೋಜನೆಗೆ ರೂ.163.55 ಕೋಟಿ ಮೊತ್ತ ಬಿಡುಗಡೆ ಮಾಡಲಾಗಿದೆ ಎನ್ನುವುದು ನೆನಪಿರಲಿ.

       ಆಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿತ್ತು, ಕುಣಿಗಲ್‌ನಲ್ಲಿ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಂಬಂಧಿ ಡಾ.ಹೆಚ್.ಡಿ.ರಂಗನಾಥ್‌ ಶಾಸಕರಾಗಿದ್ದರು ಮತ್ತು 2023ರ ವಿಧಾನ ಸಭಾ ಚುನಾವಣೆಯಲ್ಲೂ ರಂಗನಾಥ್‌ ಮರು ಚುನಾಯಿತರಾಗಿದ್ದಾರೆ. ಕುಣಿಗಲ್‌ ಹಾಗೂ ಮಾಗಡಿ ತಾಲೂಕುಗಳು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು ಈ ಕ್ಷೇತ್ರದ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್‌ ಇದೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸೋದರರೂ ಆಗಿದ್ದಾರೆ ಎನ್ನುವುದು ಗಮನಾರ್ಹ.

     2019-2023ರವರೆಗೆ ಬಿಜೆಪಿ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರೂ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಮಾಧುಸ್ವಾಮಿ ಅವರು ಕಳೆದ ಮಾರ್ಚಿ ತಿಂಗಳಲ್ಲಿ ಸುದ್ದಿಗೋಷ್ಟಿ ಕರೆದು ಈ ಎಕ್ಸ್‌ಪ್ರೆಸ್‌ ಲಿಂಕ್‌ ಕಾಲುವೆ ನಿರ್ಮಾಣವನ್ನು ವಿರೋಧಿಸಿದ್ದರು, ಒಂದು ವೇಳೆ ಈ ಯೋಜನೆ ಕಾಮಗಾರಿಗೆ ಚಾಲನೆ ನೀಡಿದಲ್ಲಿ, ಕಾಮಗಾರಿ ಕಾರ್ಯಗತವಾಗುವುದನ್ನು ತಡೆಯಲು ನ್ಯಾಯಾಲಯದಲ್ಲಿ ಖಟ್ಲೆ ಹೂಡಲೂ ಸಿದ್ದ ಎಂದಿದ್ದರು.

      ಬೆಂಗಳೂರು ಗ್ರಾಮಾಂತರದಲ್ಲಿ ಮತ್ತೊಮ್ಮೆ ಅವರ ಸೋದರ ಡಿ.ಕೆ.ಸುರೇಶ್‌ ಅವರನ್ನು ಗೆಲ್ಲಿಸಿಕೊಳ್ಳುವುದಕ್ಕೆಂದೇ ಈ ಯೋಜನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಒತ್ತು ನೀಡುತ್ತಿದ್ದಾರೆ ಎಂದು ಮಾಧುಸ್ವಾಮಿಯವರು ಆಪಾದಿಸಿದ್ದರು, ಇವರ ಈ ಆರೋಪವನ್ನು ನಿಜ ಮಾಡುವ ರೀತಿಯಲ್ಲೇ ಕಳೆದ ತಿಂಗಳ ಚುನಾವಣಾ ಪ್ರಚಾರದಲ್ಲಿ ಕುಣಿಗಲ್‌ನಲ್ಲಿ ಡಿ.ಕೆ.ಶಿವಕುಮಾರ್‌ ಈ ಲಿಂಕ್‌ ಕಾಲುವೆ ಮಾಡೇ ತೀರುವುದಾಗಿ ಪ್ರತಿಪಾದಿಸಿದರು.

      ಇನ್ನು ತುಸು ಹಿಂದಕ್ಕೆ ಹೋದರೆ, 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಸಂಸದ ಜಿ.ಎಸ್.ಬಸವರಾಜು ಕೂಡಾ ಈ ಎಕ್ಸ್‌ಪ್ರೆಸ್‌ ಲಿಂಕ್‌ ಕಾಲುವೆ ಯೋಜನೆಯನ್ನು ವಿರೋಧಿಸಿದ್ದರು. 2019ರಲ್ಲಿ ಹಾಸನದವರ ಹೇಮಾವತಿ ನೀರು ಬಿಡದೇ ಇರುವ ರಾಜಕೀಯವನ್ನೇ ಬಂಡವಾಳ ಮಾಡಿಕೊಂಡು ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿದ ಬಸವರಾಜು ಈ ಸಲದ 2024ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗಲಿಲ್ಲ, ಬಿಜೆಪಿ ಅಭ್ಯರ್ಥಿ ಸೋಮಣ್ಣನವರಿಗೆ ಇದೆಲ್ಲ ಗೊತ್ತಿಲ್ಲ ಮತ್ತು ತಿಳಿದುಕೊಳ್ಳುವಷ್ಟು ಕಾಲಾವಕಾಶವೂ ಇರಲಿಲ್ಲವಾಗಿ ಹೇಮಾವತಿಯಾಗಲೀ , ಎಕ್ಸ್‌ಪ್ರೆಸ್‌ ಲಿಂಕ್‌ ಕಾಲುವೆಯಾಗಲೀ ಚುನಾವಣೆಯ ವಿಷಯವೇ ಆಗಲಿಲ್ಲ.

      ಹೇಮಾವತಿ ನಾಲೆಯನ್ನು ಆರಂಭದಲ್ಲಿ ತುಮಕೂರು ಜಿಲ್ಲೆಯಲ್ಲಿ ಅರೆನೀರಾವರಿ ಬೆಳೆಗೆ ಅಂತ ಯೋಜಿಸಲಾಗಿತ್ತಾದರೂ ಇವತ್ತಿನ ಲೆಕ್ಕದಲ್ಲಿ ಕೇವಲ ಕುಡಿಯುವ ನೀರಿಗಾಗಿ ಬಳಕೆಯಾಗುತ್ತಿರುವುದೇ ಹೆಚ್ಚು. ಜಿಲ್ಲೆಯ ಪಾಲಿನ 24.5 ಟಿಎಂಸಿ  ನೀರು ಪೂರ್ಣ ಪ್ರಮಾಣದಲ್ಲಿ ತುಮಕೂರು ಜಿಲ್ಲೆಯ ಕಾಲುವೆಯಲ್ಲಿ ಯಾವ ವರ್ಷವೂ ಹರಿದಿಲ್ಲ, ಎರಡು ವರ್ಷಗಳ ಹಿಂದೆ ಹೆಚ್ಚಿನ ಮಳೆಯಾಗಿದ್ದಾಗ ಹಾಗೂ ಮಂತ್ರಿಯಾಗಿದ್ದ ಮಾಧುಸ್ವಾಮಿಯವರ ಬಿಗಿ ಹಿಡಿತದಿಂದಾಗಿ ಸುಮಾರು 18-19 ಟಿಎಂಸಿ ನೀರು ಹರಿದಿತ್ತು.

     ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಅಧ್ಯಕ್ಷತೆ ವಹಿಸಿದ್ದ ಕಳೆದ ಕೆಡಿಪಿ ಸಭೆಯಲ್ಲಿ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪನವರೇ ಈ ಎಕ್ಸ್‌ಪ್ರೆಸ್‌ ಕಾಲುವೆ ಕುರಿತು ವಿಷಯ ಎತ್ತಿದ್ದು ಪಕ್ಷಾತೀತವಾಗಿ ಚರ್ಚೆ ನಡೆದು, ಅಂತಿಮವಾಗಿ ಈ ಯೋಜನೆ ವಿರೋಧಿಸಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳಿಸುವ ಮಾತು ನಡೆದಿತ್ತು. ಆದರೂ ಕಾಲುವೆ ಕಾಮಗಾರಿ ಆರಂಭವಾಗಿದೆ ಎಂದರೆ ಕೆಡಿಪಿ ಸಭೆಯ ನಿರ್ಣಯವನ್ನು ಸರ್ಕಾರ ಪರಿಗಣಿಸಿಲ್ಲ ಅಂತ ಅರ್ಥ ಮಾಡಿಕೊಳ್ಳಬಹುದು.