ಬೇಲಿಕೇರಿ ಎಂಬ ಒಂದೂವರೆ ದಶಕದ ದುರಂತ

ಸಿಬಿಐ ಏನಾದರೂ ಪ್ರಾಮಾಣಿಕವಾಗಿ ಈ ಕೇಸು ನಡೆಸಿದ್ದರೆ ಈ ಏಳು ಅಪರಾಧಿಗಳ ಜೊತೆ ಜೊತೆಗೇ ನಮ್ಮ ಪ್ರೈಮ್ ಮಿನಿಸ್ಟರ್ ಅವರಿಗೆ ಚುನಾವಣಾ ಪ್ರಚಾರಕ್ಕೆ ವಿಮಾನಗಳನ್ನು ಒದಗಿಸುವ, ಅವರೊಂದಿಗೇ ಬಹುಪಾಲು ವಿದೇಶ ಪ್ರವಾಸಗಳಲ್ಲಿ ಭಾಗಿಯಾಗುವ ಮಿಸ್ಟರ್ ಗೌತಮ್ ಅದಾನಿಯೂ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನ ದೊಡ್ಡ ದ್ವಾರದ ಪುಟ್ಟ ಗೇಟಿನ ಮೂಲಕ ತುಸು ತಲೆ ಬಾಗಿಸಿ ಬಲಗಾಲಿಟ್ಟು ಒಳ ನಡೆಯಬೇಕಿತ್ತು. ಯಾಕೆ ಹೀಗಾಗಲಿಲ್ಲ, ಅದಾನಿ ಈ ಕೇಸಿನಿಂದ ತಪ್ಪಿಸಿಕೊಂಡಿದ್ದು ಹೇಗೆ?!

ಬೇಲಿಕೇರಿ ಎಂಬ ಒಂದೂವರೆ ದಶಕದ ದುರಂತ

ʼಬೆವರ ಹನಿʼ ವಿಶೇಷ

ಕುಚ್ಚಂಗಿ ಪ್ರಸನ್ನ

 

     ಬೇಲಿಕೇರಿ ಬಂದರಿನಿಂದ ಕಬ್ಬಿಣದ ಅದಿರು ಅಕ್ರಮ ರಫ್ತು ಸಾಗಣೆ ಸಾಬೀತಾದ ಕಾರಣ, ಕಾರವಾರದ ಶಾಸಕ ಹಾಗೂ ಮೆ. ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಯ ಎಂಡಿ ಸತೀಶ್ ಕೃಷ್ಣ ಸೈಲ್ ಅವರಿಗೆ ಶನಿವಾರ (ಅ.26) ಏಳು ವರ್ಷ ಕಠಿಣ ಶಿಕ್ಷೆ ಜೊತೆಗೆ ರೂ.9 ಕೋಟಿ ದಂಡ ವಿಧಿಸಲಾಗಿದೆ. ಅವರು ಗುರುವಾರ ಸಂಜೆಯೇ ಪರಪ್ಪನ ಅಗ್ರಹಾರ ತಲುಪಿದರು. ಇವರ ಜೊತೆಗೆ ಬಂದರು ಇಲಾಖೆಯ ಮಹೇಶ್ ಜೆ.ಬಿಲಿಯೇ, ಆಶಾಪುರ ಮೆನೆಕೆಮ್ ನ ಎಂಡಿ ಚೇತನ್ ಶಾ, ಹೊಸಪೇಟೆಯ ಸ್ವಸ್ತಿಕ್ ಸ್ಟೀಲ್ಸ್ ನಿರ್ದೇಶಕ ಕೆ.ವಿ.ನಾಗರಾಜ್, ಆ ಕಂಪನಿಯ ಮಾಜಿ ನಿರ್ದೇಶಕ ಕೆ.ವಿ.ಗೋವಿಂದ ರಾಜ್, ಶ್ರೀ ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್ ಪಾಲುದಾರ ಮಹೇಶ್ ಕುಮಾರ್ ಅಲಿಯಾಸ್ ಖಾರದಪುಡಿ ಮಹೇಶ್ ಮತ್ತು ಶ್ರೀ ಲಾಲ್ ಮಹಲ್ ಲಿಮಿಟೆಡ್ ನ ಎಂಡಿ ಪ್ರೇಮ್ ಚಂದ್ ಗರ್ಗ್ ಜೈಲು ತಲುಪಿದ್ದಾರೆ.

    ಸಿಬಿಐ ಏನಾದರೂ ಪ್ರಾಮಾಣಿಕವಾಗಿ ಈ ಕೇಸು ನಡೆಸಿದ್ದರೆ ಈ ಏಳು ಅಪರಾಧಿಗಳ ಜೊತೆ ಜೊತೆಗೇ ನಮ್ಮ ಪ್ರೈಮ್ ಮಿನಿಸ್ಟರ್ ಅವರಿಗೆ ಚುನಾವಣಾ ಪ್ರಚಾರಕ್ಕೆ ವಿಮಾನಗಳನ್ನು ಒದಗಿಸುವ, ಅವರೊಂದಿಗೇ ಬಹುಪಾಲು ವಿದೇಶ ಪ್ರವಾಸಗಳಲ್ಲಿ ಭಾಗಿಯಾಗುವ ಮಿಸ್ಟರ್ ಗೌತಮ್ ಅದಾನಿಯೂ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನ ದೊಡ್ಡ ದ್ವಾರದ ಪುಟ್ಟ ಗೇಟಿನ ಮೂಲಕ ತುಸು ತಲೆ ಬಾಗಿಸಿ ಬಲಗಾಲಿಟ್ಟು ಒಳ ನಡೆಯಬೇಕಿತ್ತು. ಯಾಕೆ ಹೀಗಾಗಲಿಲ್ಲ, ಅದಾನಿ ಈ ಕೇಸಿನಿಂದ ತಪ್ಪಿಸಿಕೊಂಡಿದ್ದು ಹೇಗೆ ಎಂದು ತಿಳಿದು ಕೊಳ್ಳಲು ನೀವು 17 ವರ್ಷ ಹಿಂದಕ್ಕೆ ಹೋಗಬೇಕಿದೆ.( 2 ವರದಿಗಳನ್ನೂ ಓದಬೇಕು)

    

ಬೇಲಿಕೇರಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಮೀಪ ಹಟ್ಟಿಕೇರಿ ನದಿ ದಡದಲ್ಲಿರುವ ಒಂದು ಪುಟ್ಟ ಪ್ರಾಕೃತಿಕ ಬಂದರು. ಮತ್ತೊಂದು ದೊಡ್ಡ ಬಂದರನ್ನು ಹೊಂದಿರುವ ಕಾರವಾರ ಇಲ್ಲಿಗೆ ಕೇವಲ 26 ಕಿಮೀ ದೂರದಲ್ಲಿದೆ . ರಸ್ತೆ ಸಂಪರ್ಕ ಚೆನ್ನಾಗಿದೆ ಹಾಗೂ ಅದಿರನ್ನು ಸ್ಟಾಕ್ ಮಾಡಿಕೊಳ್ಳಲು ಸಾಕಷ್ಟು ಸ್ಥಳಾವಕಾಶವಿದೆ ಎಂಬ ಕಾರಣಕ್ಕೆ ಬೇಲಿಕೇರಿ ಬಂದರಿನಿಂದಲೂ ಅದಿರು ಸಾಗಾಟ ನಡೆಯುತ್ತ ಬಂದಿದೆ. ಈ ಬಂದರನ್ನು ತಮ್ಮ ಸ್ವಂತ ಬಂಡವಾಳದಿಂದ ಅಭಿವೃದ್ಧಿ ಪಡಿಸಿಕೊಳ್ಳಲು ಗುಜರಾತಿನ ಮೆ.ಅದಾನಿ ಎಂಟರ್‌ಪ್ರೈಸಸ್ ಅಹಮದಾಬಾದ್ ಹಾಗೂ ಗೋವಾದ ಮೆ.ಸಲಗಾಂಕರ್ ಮೈನಿಂಗ್ ಇಂಡಸ್ಟ್ರೀಸ್ ಮತ್ತು ತುಂಗಭದ್ರಾ ಮಿನರಲ್ಸ್ ಲಿಮಿಟೆಡ್ ಇವರಿಗೆ ಬಂದರು ಇಲಾಖೆ ಲೀಸಿಗೆ ಈ ಮೊದಲೇ ಕೊಟ್ಟಿತ್ತು.

     ಈ ಕಂಪನಿಗಳು 2006-07ರಿಂದ 2010-11ರ ಅವಧಿಯಲ್ಲಿ , ಬೇಲಿಕೇರಿ ಬಂದರಿನಲ್ಲಿ ಬಳ್ಳಾರಿ,ತುಮಕೂರು , ಚಿತ್ರದುರ್ಗ ಜಿಲ್ಲೆಗಳಿಂದ ಇಲ್ಲಿಗೆ ಸಾಗಿಸಿ ತಂದು ಸಂಗ್ರಹಿಸಿಟ್ಟಿದ್ದ 7.74 ಮಿಲಿಯನ್ (ದಶಲಕ್ಷ ) ಮೆಟ್ರಿಕ್ ಟನ್‌ಗಳಷ್ಟು ಮ್ಯಾಂಗನೀಸ್ ಅದಿರನ್ನು ಸರಕಾರದ ಅನುಮತಿ ಪಡೆಯದೇ ಚೀನಾ ಮತ್ತಿತರ ದೇಶಗಳಿಗೆ ಈ ಕಂಪನಿಗಳು ರಫ್ತು ಮಾಡಿವೆ, ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ನಷ್ಟವಾಗಿದೆ ಎಂದು ಸರಕಾರದ ಕೋರಿಕೆ ಮೇರೆಗೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಪತ್ತೆ ಹಚ್ಚಿ ವರದಿ ನೀಡಿದ್ದರು. ಇವರ ವರದಿ ಅಧರಿಸಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಪರಿಶೀಲಿಸಲು ಸಿಇಸಿ ( ಸೆಂಟ್ರಲ್ ಎಂಪವರ್ಡ್ ಕಮಿಟಿ) ರಚಿಸಿತು, ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ವಹಿಸಿತು.

     ಬೇಲಿಕೇರಿ ಬಂದರಿನಿಂದ ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಸಿಬಿಐ 2013ರ ಡಿಸೆಂಬರ್ 17ರ ಮಂಗಳವಾರ ಇದೇ ಸತೀಶ್ ಸೈಲ್ ಹಾಗೂ ಇತರ 17 ಮಂದಿ ವಿರುದ್ಧ ನ್ಯಾಯಾಲಯಕ್ಕೆ ಅಪರಾಧ ಸಂಚು, ವಂಚನೆ, ಫೋರ್ಜರಿ, ಅಕ್ರಮ ಪ್ರವೇಶ ಆಪಾದನೆ ಖಚಿತಪಡಿಸಿ, ಚಾರ್ಜ್ ಶೀಟ್ ಸಲ್ಲಿಸಿತು. 11 ವರ್ಷ ಪ್ರಕರಣದ ವಿಚಾರಣೆ ನಡೆದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅ.24ರಂದು, ಸೈಲ್ ಸೇರಿ ಮೇಲೆ ಹೇಳಿದ ಏಳು ಮಂದಿ ಅಪರಾಧಿಗಳು ಅಂತ ತೀರ್ಮಾನ ಮಾಡಿದರು.

    ಈ ಪ್ರಕರಣದಲ್ಲಿ ಸಿಲುಕಿದ್ದ ಗುಜರಾತಿನ ಉದ್ಯಮಿ ಗೌತಮ್ ಅದಾನಿ ಅವರ ಮೆ.ಅದಾನಿ ಎಂಟರ್‌ಪ್ರೈಸಸ್ ಅನ್ನು ಸಿಬಿಐ ಸಿಬಿಐ ಚಾರ್ಜ್ ಶೀಟ್ ಹಾಕುವ ಸಮಯದಲ್ಲಿ ಕೈ ಬಿಟ್ಟಿತು. ಗುಜರಾತ್ ಮುಖ್ಯಮಂತ್ರಿ ಯಾಗಿದ್ದ ಹಾಗೂ 2014ರಲ್ಲಿ ಪ್ರಧಾನ ಮಂತ್ರಿಯೂ ಆದ ನರೇಂದ್ರ ಮೋದಿ ಅವರ ಆಪ್ತ ಆದಾನಿಯ ಕಂಪನಿಯನ್ನೂ ಸಿಬಿಐ ಶಿಕ್ಷೆಗೊಳಪಡಿಸುತ್ತದೆಯೇ ಎಂದು ಸಣ್ಣ ಪುಟ್ಟ ಗಣಿ ಗುತ್ತಿಗೆ ಹಾಗೂ ಸಾಗಾಣಿಕೆ ಮಾಡುವ ಕಂಪನಿಗಳವರು ಕಾಯುತ್ತಲೇ ಇದ್ದರು. ಅದಾನಿ ಕಂಪನಿ ಹೇಗೆ ತಪ್ಪಿಸಿಕೊಳ್ಳಲಿದೆ ನೋಡಿ ಎಂದು ಪತ್ರಿಕೆಗಳು ಹಾಗೂ ಸ್ವತಂತ್ರ ಪತ್ರಕರ್ತರು ತಮ್ಮ ವೆಬ್ ಮಾಧ್ಯಮಗಳಲ್ಲಿ ಭವಿಷ್ಯ ನುಡಿಯುತ್ತಲೇ ಬಂದರು, ಗಣಿ ಗುತ್ತಿಗೆ ಹಾಗೂ ಸಾಗಾಣಿಕೆದಾರರ ನಿರೀಕ್ಷೆ ಸುಳ್ಳಾಯಿತು, ಪತ್ರಕರ್ತರ ಭವಿಷ್ಯ ನಿಜವಾಯಿತು.

    ಸಿಬಿಐನ ಚೆನೈ ವಿಭಾಗ ಅಕ್ಟೋಬರ್ 2013ರ ಕಡೇ ವಾರದಲ್ಲಿ ಬಂದರಿನಲ್ಲಿ ವಹಿವಾಟು ನಡೆಸುತ್ತಿದ್ದ 50ಕ್ಕೂ ಹೆಚ್ಚು ಪ್ರಮುಖ ಶಿಪ್ಪಿಂಗ್ ಕಂಪನಿಗಳ ಮೇಲೆ 22 ಎಫ್ಐಆರ್ ದಾಖಲಿಸಿತ್ತು. ಸಿಬಿಐ ಆರ್ಥಿಕ ಅಪರಾಧಗಳ ವಿಭಾಗದ ಮುಂಬೈ ಮತ್ತು ದಿಲ್ಲಿ ಘಟಕಗಳೂ ಬೇಲಿಕೇರಿ ಬಂದರು ಅಕ್ರಮ ಅದಿರು ರಫ್ತು ಪ್ರಕರಣದ ತನಿಖೆಗಿಳಿದವು.

     ಸಿಇಸಿ 5.9.2012ರಂದು ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಿ ಈ ಕೇಸಿನಲ್ಲಿ ಭಾಗಿಯಾಗಿರುವ ಗಣಿ ಕಂಪನಿಗಳು, ಗಣಿ ಕಂಪನಿಗಳ ಮಾಲೀಕರು ಮತ್ತು ಸರಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿತು. ಆ ಪ್ರಕಾರವೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಫ್ತಾಬ್ ಆಲಂ ನೇತೃತ್ವದ ಅರಣ್ಯ ಪೀಠವು, 8.9.2012ರಂದು ಮೆ.ಅದಾನಿ ಎಂಟರ್ ಪ್ರೈಸಸ್ ಹಾಗೂ ಜೆ.ಎಸ್.ಡಬ್ಲ್ಯೂ ಸ್ಟೀಲ್ಸ್ ವಿರುದ್ದ ಕೇಸು ದಾಖಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿತು, ಅಲ್ಲದೇ ಈ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸುವ ಮೊದಲು ಕರ್ನಾಟಕ ಸರಕಾರದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಸಿಬಿಐಗೆ ಮುಕ್ತ ಸ್ವಾತಂತ್ರ್ಯವನ್ನೂ ನೀಡಿತು.

    ಸಿಇಸಿ ಪ್ರಕಾರ ಗೌತಮ್ ಅದಾನಿ ಮಾಲಿಕತ್ವದ ಮೆ.ಅದಾನಿ ಎಂಟರ್ ಪ್ರೈಸಸ್ ಬೇಲಿಕೇರಿ ಬಂದರಿನಿಂದ ಅಕ್ರಮವಾಗಿ ಐವತ್ತು ಸಾವಿರದ ಏಳುನೂರು ಮೆಟ್ರಿಕ್ ಟನ್ ( 50,704.200 ಮೆ.ಟನ್) ಗಳಷ್ಟು ಅದಿರನ್ನು ಅಕ್ರಮವಾಗಿ ರಫ್ತು ಮಾಡಿತ್ತು.

    22 ಎಫ್ಐಆರ್ ದಾಖಲಿಸುವ ಮುನ್ನ ಸಿಬಿಐ ಸೆಪ್ಟೆಂಬರ್ 2012ರಲ್ಲಿ ಐದು ಎಫ್ಐಆರ್ ಗಳನ್ನು ದಾಖಲಿಸಿ, ಈ ನಾಲ್ಕು ಕಂಪನಿಗಳು 1.1.2009ರಿಂದ 31.05.2010ರ ಅವಧಿಯಲ್ಲಿ ಅನುಮತಿ ಪಡೆದ 21 ಲಕ್ಷ ಮೆಟ್ರಿಕ್ ಟನ್ ಅದಿರು ರಫ್ತು ಮಾಡುವ ಬದಲಿಗೆ , 50 ಸಾವಿರ ಮೆಟ್ರಿಕ್ ಟನ್ ಅದಿರನ್ನು ಕದ್ದು, ಫೋರ್ಜರಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ರಫ್ತು ಮಾಡಿ ಆ ಸಾಗಾಣಿಕೆಯಿಂದ ದೇಶದ ಒಳಗೆ ಹಾಗೂ ಹೊರ ದೇಶಗಳಿಂದ ಹಣ ಸ್ವೀಕರಿಸಿವೆ ಎಂದು ಆಪಾದಿಸಿತ್ತು. 1) ಲಾಲ್ ಸಿಲ್ಕ್ ಇಂಡಸ್ಟ್ರೀಸ್ (9.68 ಲಕ್ಷ ಟನ್) 2) ಡ್ರೀಮ್ ಲಾಜಿಸ್ಟಿಕ್ಸ್ ಕಂಪನಿ ಇಂಡಿಯಾ( 9.16 ಲಕ್ಷ ಟನ್), 3) ಎಸ್.ಬಿ ಲಾಜಿಸ್ಟಿಕ್ಸ್ (7.74 ಲಕ್ಷ ಟನ್) ಹಾಗೂ 4) ಶ್ರೀ ಮಲ್ಲಿಕಾರ್ಜುನ್ ಶಿಪ್ಪಿಂಗ್ (7.23 ಲಕ್ಷ ಟನ್).

    ಈ ಐದು ಎಫ್ಐಆರ್ ಸಂಬಂಧ ಬಿಜೆಪಿಯ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ಶಾಸಕರಾದ ಆನಂದ ಸಿಂಗ್, ಬಿ.ನಾಗೇಂದ್ರ ಹಾಗೂ ಟಿ.ಹೆಚ್. ಸುರೇಶಬಾಬು ಅವರನ್ನು ಬಂಧಿಸಿತ್ತು. ಇವರೆಲ್ಲರೂ ಆಗ ಬಿಜೆಪಿಯ ಕಮಲದ ಗುರುತಿನಿಂದ ಶಾಸಕರಾಗಿ ಚುನಾಯಿತರಾಗಿದ್ದವರು ನೆನಪಿರಲಿ.

    ಗಣಿಗಾರಿಕೆಯಲ್ಲಿ ತೊಡಗಿದ್ದ ಲಾಡ್ ಸೋದರರು ಕಾಂಗ್ರೆಸ್ ಜೊತೆಯಲ್ಲಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಬಿಜೆಪಿ ಅವಧಿಯ ಅಕ್ರಮಗಣಿಗಾರಿಕೆ ಖಂಡಿಸಿ ಬಳ್ಳಾಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದಾಗ ಬಳ್ಳಾರಿ ನಗರ ಶಾಸಕ ಕಾಂಗ್ರೆಸ್ ನ ಅನಿಲ್ ಲಾಡ್ ಅವರೂ ಜೊತೆಯಲ್ಲಿದ್ದರು. ಮುಂದೆ ಸಿಬಿಐ ಈ ಅನಿಲ್ ಲಾಡರನ್ನೂ ಈ ಕೇಸಿನಲ್ಲಿ ಬಂಧಿಸಿತು.

     ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಿಂದ ಬೇಲಿಕೇರಿಗೆ 400 ಕಿಲೋಮೀಟರ್ ದೂರವಿದೆ. 50 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಸಾಗಿಸುವುದು ಎಂದರೆ ಕನಿಷ್ಟ 5 ಲಕ್ಷ ಟ್ರಕ್ ಗಳು ತಲಾ 10 ಟನ್ ನಂತೆ 5 ಲಕ್ಷ ಸಿಂಗಲ್ ಟ್ರಿಪ್ ಮಾಡಬೇಕು, ( ಏಳು ಜಿಲ್ಲೆಗಳನ್ನು ಆ ಜಿಲ್ಲೆಗಳಲ್ಲಿರುವ ಆರ್ ಟಿ ಓ , ಪೊಲೀಸ್, ವಾಣಿಜ್ಯ ತೆರಿಗೆ ಹಾಗೂ ಅರಣ್ಯ ಚೆಕ್ ಪೋಸ್ಟ್ ಗಳನ್ನು ದಾಟಿ ಬೇಲಿಕೇರಿ ತಲುಪಬೇಕು) ಸರಕಾರದ ಗಮನಕ್ಕೆ ಬರದೇ ಈ ಬೃಹತ್ ಮೊತ್ತದ ಅದಿರು ಸಾಗಾಣಿಕೆ ಸಾಧ್ಯವೇ, ಬೇಲಿಯೇ ಹೊಲ ಮೇಯ್ದಂತೆ ಎಂದು ನ್ಯಾಯಮೂರ್ತಿ ಅಫ್ತಾಬ್ ಆಲಂ ಪ್ರಶ್ನಿಸಿದ್ದರು. ವಾಸ್ತವದಲ್ಲಿ ಒಂದು ಟ್ರಕ್ಕಿಗೆ 16 ಟನ್ ತುಂಬಲು ಅವಕಾಶವಿತ್ತು, ಆದರೆ ಸರಾಸರಿ 20 -22 ಟನ್ ತುಂಬಿ ಸಾಗಿಸಲಾಗಿದೆ. ಈ ಭಾರದ ಟ್ರಕ್ ಗಳಿಂದಾಗಿಯೇ ರಸ್ತೆಗಳೆಲ್ಲ ಹಾಳಾಗಿ, ಅಪಘಾತಗಳಲ್ಲಿ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡರು.

    10.03.2010ರಂದು ಅರಣ್ಯ ಇಲಾಖೆ ಈ ಬಹುಪಾಲು ಎಲ್ಲ ಅದಿರನ್ನು ಬೇಲಿಕೇರಿ ಬಂದರಿನಲ್ಲಿ ತಡೆಹಿಡಿದಿತ್ತು. ಆದರೆ ಈ ಅದಿರನ್ನು ಅಕ್ರಮವಾಗಿ ಸಾಗಿಸಿಬಿಡಲಾಗಿದೆ ಎಂದು ಸಿಇಸಿ ಹೇಳಿತು.

    ಈ ಕೇಸಿನಲ್ಲಿ ಅದಾನಿ ತಪ್ಪಿಸಿಕೊಂಡ ಬಗೆ ಹೇಗೆ ಗೊತ್ತಾ, ಆ ಕಂಪನಿ ಹೇಳಿಕೆ ನೀಡಿ, “ ನೋಡಿ ನಾನು ನಾನು ಹೇಳಿ ಕೇಳಿ ಬಂದರನ್ನು ನಿರ್ವಹಿಸುವ ಏಜೆನ್ಸಿ. ಬಂದರು ಅಂಗಳಕ್ಕೆ ಬಂದು ಬೀಳುವ ಅದಿರನ್ನು ಹಡಗಿಗೆ ಲೋಡು ಮಾಡಿಸುವ ಕೆಲಸವಷ್ಟೇ ನನ್ನದು, ಎಫ್ಐಆರ್ ನಲ್ಲಿ ನಮೂದಾಗಿರುವ ನಾಲ್ಕೂ ಕಂಪನಿಗಳು ಹೇಳಿದಂತೆ ಹಾಗೂ ಕೇಂದ್ರ ಸರ್ಕಾರದ ಕಸ್ಟಂಸ್ ಪ್ರಾಧಿಕಾರದ ಆದೇಶಗಳನ್ನು ಆಧರಿಸಿಯೇ ನಾನು ಅದಿರನ್ನು ಹಡಗಿಗೆ ತುಂಬಿ ಕಳಿಸಿದೆ, ಅಷ್ಟೇ !?” ಅಂತ ಹೇಳಿ ಕೈತೊಳೆದುಕೊಂಡು ಬಿಟ್ಟಿತು.

    “ ಅಷ್ಟೇ ಅಲ್ಲ ನಾನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಬ್ಬಿಣದ ಅದಿರು ಗಣಿಗಾರಿಕೆ ಮಾಡುತ್ತಿಲ್ಲ, ಅದಿರು ಸಾಗಾಣಿಕೆಯನ್ನೂ ಮಾಡುತ್ತಿಲ್ಲ, ಮತ್ತಿನ್ನೇನು, ತನ್ನೆಲ್ಲ ಚಟುವಟಿಕೆಗಳೂ ರಫ್ತುದಾರರು, ಕಸ್ಟಂಸ್ ಪ್ರಾಧಿಕಾರ ಹಾಗೂ ಬಂದರು ಪ್ರಾಧಿಕಾರಗಳ ಮೇಲುಸ್ತುವಾರಿಯಲ್ಲಿ ಮಾತ್ರವೇ ನಡೆಯುತ್ತಿವೆ. ನಾನು ಕೇವಲ ಸೇವೆ ಒದಗಿಸುವವನು ,ಅದಿರು ಅಕ್ರಮವೇ ಅಲ್ಲವೇ ಎಂಬುದನ್ನೆಲ್ಲ ನಾನ್ಯಾಕೆ ಪರಿಶೀಲಿಸಲಿ ಹಾಗೆ ಪರಿಶೀಲಿಸಲೂ ನನಗೆ ಅಧಿಕಾರವಿಲ್ಲ” ಅಂತಲೂ ಹೇಳುತ್ತಿದ್ದಂತೆ ಸಿಬಿಐ ಆಗಲೀ ಸುಪ್ರೀಂ ಕೋರ್ಟ್ ಆಗಲೀ ಏನು ಮಾಡಲಾದೀತು ಅಂತೀರಾ.

 

ಅದಾನಿ ಬಚಾವ್ ಆದದ್ದು ಹೇಗೆ?

    ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ರಾಜ್ಯದ ಲೋಕಾಯುಕ್ತರಾಗಿದ್ದಾಗ, ಸರಕಾರದ ಪರವಾನಗಿ ಇಲ್ಲದೇ ಅಕ್ರಮ ಮ್ಯಾಂಗನೀಸ್ ಅದಿರು ರಫ್ತು ಮಾಡಿರುವ ಕುರಿತಂತೆ ತನಿಖೆ ಮಾಡುವಂತೆ ರಾಜ್ಯ ಸರ್ಕಾರ ( ಆದೇಶ ಸಂ. ಸಿಐ 164 ಎಂ ಎಂ ಎಂ 2006 ದಿನಾಂಕ 12.03.2007) ಕೋರುತ್ತದೆ. ಆಗ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಇತ್ತು , ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು.

    ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಐಎಫ್ಎಸ್ ಅಧಿಕಾರಿ ಯು.ವಿ.ಸಿಂಗ್ ನೇತೃತ್ವದ ಸಮಿತಿ ಮಾಡಿ ತನಿಖೆ ಮಾಡಿಸಿ, ದಿನಾಂಕ 27.07.2011ರಂದು ವರದಿ ಸಲ್ಲಿಸುತ್ತಾರೆ. ಹೆಗ್ಡೆ ವರದಿ ಸಲ್ಲಿಸಿದಾಗ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ, ಈ ವರದಿ ಕಾರಣವಾಗಿಯೇ ಅವರು 31.07.2011ರಂದು ಸಿಎಂ ಹುದ್ದೆಗೆ ರಾಜಿನಾಮೆ ಕೊಡುತ್ತಾರೆ.

     ಆಗ ಈ ಬೇಲಿಕೇರಿ ಬಂದರಿನಲ್ಲಿ ಹಡಗಿಗೆ ಭರ್ತಿ ಮಾಡುವ ಹಾಗೂ ಇಳಿಸುವ ಕೆಲಸವನ್ನು ಮಾಡುತ್ತಾ ಇದ್ದದ್ದು ಇದೇ ಅದಾನಿ ಕಂಪನಿ. ಈ ಕಂಪನಿ ಬಂದರು ಹಾಗೂ ಇನ್ನಿತರ ಇಲಾಖೆಗಳಿಗೆ ಲಂಚ ಕೊಟ್ಟಿದೆ ಅಂತ ನ್ಯಾ.ಸಂತೋಷ್ ಹೆಗ್ಡೆ ಅವರು ತಮ್ಮ ವರದಿಯಲ್ಲಿ ದಾಖಲಿಸಿದ್ದರು. ಆದಾಗ್ಯೂ ಈ ಕೇಸಿನಲ್ಲಿ  ಅದಾನಿ ಕಂಪನಿ ಹಾಗೆ ತಪ್ಪಿಸಿಕೊಳ್ಳಲು ಯಾರು ಯಾರು, ಹೇಗೆ ನೆರವಾದರು, ಬೇಲಿಕೇರಿ ಕೇಸ್ ಫ್ಲಾಪ್ ಆಗಿದ್ದು ಹೇಗೆ, ಆದಾನಿ ಬಚಾವ್ ಆದದ್ದು ಹೇಗೆ ಎಂಬುದು ,ಇಲ್ಲಿದೆ ಓದಿ.

    ಲೋಕಾಯುಕ್ತ ಪೊಲೀಸರ ತಂಡ 20 ಫೆಬ್ರವರಿ 2010ರಂದು ಬೇಲಿಕೇರಿ ಬಂದರಿನಲ್ಲಿದ್ದ ಗೌತಮ್ ಆದಾನಿ ಮಾಲಿಕತ್ವದ ಮೆ.ಅದಾನಿ ಎಂಟರ್‌ಪ್ರೈಸಸ್ ಹಾಗು ಕಾರವಾರ ಶಾಸಕ ಸತೀಶ್ ಕೃಷ್ಣ ಸೈಲ್ ಮಾಲಿಕತ್ವದ ಮೆ. ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಕಚೇರಿ ಮೇಲೆ ದಾಳಿ ಮಾಡುತ್ತದೆ. ದಾಳಿಯಲ್ಲಿ ಅದಾನಿ ಕಂಪನಿ ಕಚೇರಿಯಲ್ಲಿದ್ದ ಕಂಪ್ಯೂಟರ್, ಫ್ಲಾಪಿ ಡಿಸ್ಕ್ , ಪೋರ್ಜರಿ ಮಾಡಿದ ಅದಿರು ಸಾಗಣೆ ಪರವಾನಗಿಗಳು, ಮೊದಲಾದ ತಾಂತ್ರಿಕ ದಾಖಲೆಗಳನ್ನು ಸಾಕ್ಷಿಯಾಗಿ ವಶಪಡಿಸಿಕೊಳ್ಳುತ್ತದೆ. ಅವುಗಳಲ್ಲಿ ಅದಾನಿ ಕಂಪನಿ ಲಂಚ ಕೊಟ್ಟಿದ್ದ ಲೆಕ್ಕ ಸಿಕ್ಕಿರುತ್ತದೆ. ಆ ಪ್ರಕಾರ , ಬೇಲಿಕೇರಿ ಬಂದರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅದಾನಿ ಕಂಪನಿಯ ಕಂಪ್ಯೂಟರ್ ಕಡತದಲ್ಲಿ, ಆ ಕಂಪನಿಯ ನೌಕರ ಪ್ರವೀಣ ಬಾಜಪೈ ಎಂಬಾತ 28 ಮಾರ್ಚಿ 2008ರಂದು ಅದೇ ಕಂಪನಿಯ ಮೇಲಧಿಕಾರಿಗಳಾದ ಸ್ಯಾಮುಯೆಲ್ ಡೇವಿಡ್, ಮಿತ್ತಲ್ ಹಾಗೂ ಮನೋಜ್ ಎಂಬುವವರಿಗೆ ಕ್ಯಾಶ್ ಅಕೌಂಟ್ಸ್ ಶಾಖೆಯಿಂದ ಇಮೇಲ್ ಮಾಡಿ ಅನ್ಅಕೌಂಟೆಡ್ ಲೆಕ್ಕದಲ್ಲಿ ಕೇಂದ್ರದ ಕಸ್ಟಂಸ್, ರಾಜ್ಯದ ಬಂದರು ಮತ್ತು ಒಳನಾಡು ಜಲಸಾರಿಗೆ , ಗಣಿ ಮತ್ತು ಭೂ ವಿಜ್ಞಾನ , ಅರಣ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಶಾಸಕರು ಮತ್ತು ಸಂಸದರಿಗೆ ಹಣ ಪಾವತಿ ಮಾಡುವ ಕುರಿತು ಅನುಮೋದನೆ ಕೋರಿದ್ದಾಗಿ ಕಂಡು ಬಂದಿದೆ ಎಂದು ಲೋಕಾಯುಕ್ತರು ಡಿಜಿಟಲ್ ಸಾಕ್ಷ್ಯವನ್ನು ಒದಗಿಸುತ್ತಾರೆ. ಈ ಪಟ್ಟಿಯಲ್ಲಿ 2004-05. 2005-06 ಹಾಗೂ 2007-08ರ ಅವಧಿಯಲ್ಲಿ ಬಂದರು ನಿರ್ದೇಶಕರಾಗಿ ಕಾರ್ಯನಿರ್ವಹಿಸಿ, ನಂತರ ಸಚಿವಾಲಯದ ಲೋಕೋಪಯೋಗಿ ಇಲಾಖೆಗೆ ನಿಯೋಜನೆ ಮೇಲೆ ತೆರಳಿದ ಕ್ಯಾಪ್ಟನ್ ಆರ್. ಮೋಹನ್ ಹಾಗೂ ಹೆಚ್ಚುವರಿ ಪ್ರಬಾರದಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಬೇಲಿಕೇರಿ ಬಂದರು ಪೋರ್ಟ್ ಆಫೀಸರ್ ಕ್ಯಾಪ್ಟನ್ ಸಿ.ಸ್ವಾಮಿ ಸೇರಿ ಎಲ್ಲ ಇಲಾಖೆಗಳ ಒಟ್ಟು 24 ಅಧಿಕಾರಿ , ನೌಕರರ ಹೆಸರುಗಳಿವೆ. ಇವರಿಗೆಲ್ಲ ರೂ.63,50,000 ದಿಂದ ಹಿಡಿದು ರೂ. 7000 ದವರೆಗೆ ಹುದ್ದೆವಾರು ಲಂಚ ಪಾವತಿ ಮಾಡಲಾಗಿದೆ ಎಂದು ತಿಳಿಸಲಾಗಿರುತ್ತದೆ.

     ಅದಾನಿ ಕಂಪನಿ ಈ ನಾಲ್ಕೈದು ಇಲಾಖೆಗಳ ಅಧಿಕಾರಿ ನೌಕರರಿಗೆಲ್ಲ ಲಂಚ ಏಕೆ ಕೊಟ್ಟಿತು ಅಂತ ಕೇಳಿ, ಬಂದರಿನಿಂದ ರಫ್ತು ಚಟುವಟಿಕೆಗಳ ಮುಖ್ಯ ನಿರ್ವಹಣೆ ಕಸ್ಟಂಸ್ ಹಾಗೂ ಬಂದರು ಇಲಾಖೆಗೆ ಸೇರಿದ್ದು. ಕೇಂದ್ರ ಸರಕಾರದ ಕಸ್ಟಂಸ್ ಇಲಾಖೆ ಹೊರದೇಶಗಳಿಂದ ಬರುವ ಹಡಗುಗಳಿಗೆ “ ಆಗಲಿ ರಫ್ತು ಮಾಡಿ” ಎಂಬ ಅನುಮತಿ ನೀಡಬೇಕು.

     ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದ ರಾಜ್ಯ ಸರಕಾರ, ಲೋಕಾಯುಕ್ತ ಅವರ ವರದಿಯಲ್ಲಿ ಉಲ್ಲೇಖಿಸಿರುವ 24 ಅಧಿಕಾರಿ, ನೌಕರರು ಲಂಚ ಪಡೆದಿರುವ ಕುರಿತ ತನಿಖೆ ಮಾಡಲು ಡಿಸೆಂಬರ್ 2013ರಲ್ಲಿ ಎಂ.ಎನ್.ಗದಗ್ ಎಂಬ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಏಕ ವ್ಯಕ್ತಿ ಸಮಿತಿಯನ್ನು ನೇಮಿಸುತ್ತದೆ. ಆ ಸಮಿತಿ ಎರಡು ವರ್ಷ ಕಾಲ ವಿಚಾರಣೆ ನಡೆಸುತ್ತದೆ. ನಿವೃತ್ತ ಅಧಿಕಾರಿಗಳಾದ ಬಸವರಾಜ ಮುನೋಳಿ ಹಾಗೂ ಎಸ್.ಐ. ಪಚ್ಚಾಪುರೆ ಆಪಾದಿತ ಸರಕಾರಿ ಅಧಿಕಾರಿ, ನೌಕರರ ಪರ ನೆರವಾಗಲು ಅವಕಾಶ ನೀಡಲಾಗುತ್ತದೆ. ಅದಾನಿ ಎಂಟರ್‌ಪ್ರೈಸಸ್ ನ ಚಾರ್ಟರ್ಡ್ ಅಕೌಂಟೆಂಟ್ ಎಂದು ದಾಖಲಿಸಲಾದ ಮನೋಜ್ ಜಾ, ಹಾಗು ಲೋಕಾಯುಕ್ತದ ಭಾಗವಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳಾದ ಯು.ವಿ.ಸಿಂಗ್ ಹಾಗೂ ಬಿಸ್ವಜೀತ್ ಮಿಶ್ರಾ ಅವರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತದೆ. ಅದಾನಿ ಕಂಪನಿ ಅಧಿಕಾರಿಗಳು ನಾವು ಲಂಚ ಕೊಟ್ಟಿಲ್ಲ ಎಂದು ಹೇಳುತ್ತಾರೆ. ನಾವು ಲಂಚ ಸ್ವೀಕರಿಸಿಲ್ಲ ಅಂತ ಸರಕಾರಿ ಅಧಿಕಾರಿಗಳು ಹೇಳುತ್ತಾರೆ, ಅಂತಿಮವಾಗಿ 24 ಅಧಿಕಾರಿ ನೌಕರರು ಲಂಚ ಪಡೆದುಕೊಂಡದ್ದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಂಗ ಸಮಿತಿ ಡಿಸೆಂಬರ್ 2015ರಲ್ಲಿ ವರದಿ ಕೊಡುತ್ತದೆ, ಸರಕಾರ ಜೂನ್ 2016ರಲ್ಲಿ ಗದಗ್ ಅವರ ವರದಿಯನ್ನು ಅಂಗೀಕರಿಸುತ್ತದೆ. 8 ಜುಲೈ 2021ರಂದು ಅಧಿಸೂಚನೆ ಹೊರಬೀಳುತ್ತದೆ. 24 ಆಪಾದಿತ ಅಧಿಕಾರಿ, ನೌಕರರು ದೋಷಮುಕ್ತಗೊಂಡು ಅವರಿಗೆಲ್ಲ ಕ್ಲೀನ್ ಚಿಟ್ ದೊರಕಿಬಿಡುತ್ತದೆ. ಇಲ್ಲಿ ಲಂಚ ಕೇಳಿದ್ದಕ್ಕೆ, ಲಂಚದ ಹಣದ ವಹಿವಾಟನ್ನು ದೃಢೀಕರಿಸುವ ದಾಖಲೆ ಅಥವಾ ಸಾಕ್ಷಿಗಳನ್ನು ಇವತ್ತು ಕೇಜ್ರಿವಾಲ್ ಮತ್ತು ಇನ್ನಿತರ ಕೇಸುಗಳಲ್ಲಿ ಇಡಿ ಒದಗಿಸುವಂತೆ ನಮ್ಮ ಲೋಕಾಯುಕ್ತ ಒದಗಿಸದೇ ಇದ್ದುದರಿಂದ. ಹೀಗೆ ಅದಾನಿ ಕಂಪನಿಯನ್ನು ಸುರಕ್ಷಿತವಾಗಿ ದಡ ಮುಟ್ಟಿಸುವ ಕೆಲಸ ಸಿದ್ಧರಾಮಯ್ಯ ಸರಕಾರದಿಂದ ಆಗುತ್ತದೆ. ಎಂ.ಎನ್.ಗದಗ್‌ ಅವರ ವಿಚಾರಣಾ ವರದಿಯನ್ನೂ ಒಪ್ಪದೇ ಅದಾನಿ ಕಂಪನಿಯನ್ನು ನ್ಯಾಯಾಲಯದಲ್ಲಿ ತಗುಲಿ ಹಾಕಲೂ ಆ ಸರಕಾರಕ್ಕೆ ಅವಕಾಶವಿತ್ತು, ಆದರೆ ಆಗಿನ ಕಾಂಗ್ರೆಸ್‌ ಸರಕಾರ ಆ ನಿಟ್ಟಿನಲ್ಲಿ ಆಲೋಚಿಸುವುದೇ ಇಲ್ಲ. ಬದಲಿಗೆ ಇಡೀ ಪ್ರಕರಣವನ್ನು ಕೇವಲ ಲಂಚದ ಲೆಕ್ಕದಲ್ಲಿ ನೋಡಿ ಕೈತೊಳೆದುಕೊಳ್ಳುತ್ತದೆ. ಬಂದರು ಇಲಾಖೆಯ ಆ 24 ನೌಕರರನ್ನು ದೋಷ ಮುಕ್ತ ಗೊಳಿಸಿದ ಆದೇಶ ಹೊರಬಿದ್ದಾಗ ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ವಿಶೇಷವೆಂದರೆ ಬಿಎಸ್‌ವೈ ಅದೇ ತಿಂಗಳು 26ರಂದು ಸಿಎಂ ಪದವಿಗೆ ರಾಜಿನಾಮೆ ಕೊಡುತ್ತಾರೆ.

    ಇನ್ನೊಂದೆಡೆ 3-4 ಲಕ್ಷ ಟ್ರಕ್ ಲೋಡ್ ಅಕ್ರಮ ಅದಿರನ್ನು ರಫ್ತು ಮಾಡಲು ಕೇಂದ್ರ ಸರಕಾರದ ಕಸ್ಟಂಸ್ ಇಲಾಖೆಯೇ ಅನುಮತಿ ಕೊಟ್ಟಿದ್ದರೂ, ರಾಜ್ಯದ ಬಂದರು ಇಲಾಖೆಯ ಹಂಗಾಮಿ ನಿರ್ದೇಶಕರನ್ನು ವರ್ಷಗಟ್ಟಲೆ ಜಾಮೀನೂ ಕೊಡದೆ ಜೈಲಿನಲ್ಲಿ ಕೊಳೆಸುವ ನ್ಯಾಯ ವ್ಯವಸ್ಥೆಯಾಗಲೀ, ಅದೇ ಕೇಂದ್ರದ ನಿಯಂತ್ರಣದಲ್ಲಿರುವ ತನಿಖಾ ಸಂಸ್ಥೆ ಸಿಬಿಐ ಆಗಲೀ ಇದುವರೆಗೂ ಕಸ್ಟಂಸ್ ಇಲಾಖೆಯ ಪಾತ್ರದ ಕುರಿತು ಎಲ್ಲೂ ಚಕಾರ ಎತ್ತಿದ್ದಕ್ಕೆ ದಾಖಲೆಗಳೇ ಇಲ್ಲ.

    ಇಡೀ ಪ್ರಕರಣದ ಅವಧಿಯಲ್ಲಿ 2004ರಿಂದ 2014ರವರೆಗೆ ದಿಲ್ಲಿಯಲ್ಲಿ ಕಾಂಗ್ರೆಸ್ ಸರಕಾರ ಹಾಗೂ 2013-2018ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರಗಳು ಇದ್ದವು ಎಂಬುದನ್ನೂ ಗಮನಿಸಿ. ಟಾಟಾ ಆಗಲೀ ಬಿರ್ಲಾ ಆಗಲಿ, ಅಂಬಾನಿಯೇ ಆಗಲಿ , ಅದಾನಿಯೇ ಆಗಲಿ ಎಲ್ಲ ಉದ್ಯಮಿಗಳ ಕೂದಲು ಕೊಂಕದಂತೆ ಆಯಾ ಕಾಲದಲ್ಲಿ ಇರುವ ಮತ್ತು ಬರುವ ಸರಕಾರಗಳು ಕಾಯುತ್ತವೆ ಎಂಬುದಕ್ಕೆ ಗಣಿ ಹಗರಣ ಒಂದು ತಾಜಾ ನಿದರ್ಶನ. ಈಗಾಗಲೇ ಒಂದು ವರ್ಷ ಜೈಲಿನಲ್ಲಿದ್ದು ಬಂದಿರುವ ಕಾರವಾರ ಶಾಸಕ ಸತೀಶ ಸೈಲ್ ಅವರಿಗೆ ಏಳು ವರ್ಷಗಳ ಕಠಿಣ ಶಿಕ್ಷೆಯನ್ನು, ರೂ.9 ಕೋಟಿ ದಂಡವನ್ನು ನ್ಯಾಯಾಲಯ ಶನಿವಾರ ವಿಧಿಸಿದೆ. ಶುಕ್ರವಾರ ಆತ ಶಿಕ್ಷೆ ಕಮ್ಮಿ ಮಾಡಿ ಅಂತ ನ್ಯಾಯಾಲಯದಲ್ಲಿ ಕಣ್ಣೀರು ಹಾಕಿದರಂತೆ. ಬೇಲಿಕೇರಿ ಬಂದರಿನ ಬಂದರು ಉಪ ಸಂರಕ್ಷಕ ಎಂಬ ಸಿ ವೃಂದದ ಹುದ್ದೆಯಲ್ಲಿದ್ದು ನಿವೃತ್ತನಾಗಿ ಐದೂವರೆ ವರ್ಷ ಆಗಿರುವ ಮಹೇಶ ಜೆ.ಬಿಲಿಯೇ ಎಂಬಾತನಿಗೆ ಯಾವ ಭದ್ರತಾ ಸಿಬ್ಬಂದಿಯನ್ನೂ ಕೊಟ್ಟಿರಲಿಲ್ಲ , ಆತ 50 ಸಾವಿರ ಟನ್ ಅದಿರನ್ನು ಹಡಗುಗಳಿಗೆ ಕದು ಲೋಡ್ ಮಾಡಿ ಸಾಗಿಸುವುದನ್ನು ತಡೆಯಲಿಲ್ಲ ಎಂಬ ಕಾರಣಕ್ಕೆ ಜೈಲು ಪಾಲಾಗಿದ್ದಾನೆ. ಇಂತದ್ದನ್ನೇ ಐತಿಹಾಸಿಕ ವ್ಯಂಗ್ಯ ಅಂತ ಕರೆಯುವುದು.