ಬಟವಾಡಿ ಸರ್ವೆ ನಂ. 35/1ಬಿ ಪಾರ್ಕ್ 10 ಸೈಟ್‌ಗಳಾಗಿದ್ದು ಹೇಗೆ ಗೊತ್ತಾ ?!
ಆದರೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇಷ್ಟೆಲ್ಲ ಘಟನಾವಳಿಗಳು ನಡೆಯುತ್ತಿರುವ ಸಾಕಷ್ಟು ಮೊದಲೇ ಪಾರ್ಕ್ ಸೈಟ್ ಭೂ ಹಗರಣ ಮತ್ತೊಂದು ಕುತೂಹಲಕರ ಟ್ವಿಸ್ಟ್ ತೆಗೆದುಕೊಂಡು ಬಿಟ್ಟಿರುತ್ತದೆ.
99% ಲೋಕಲ್
ಕುಚ್ಚಂಗಿ ಪ್ರಸನ್ನ
ತುಮಕೂರು: ಪಾರ್ಕಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಲಾಗುತ್ತಿರುವ ಕುರಿತಂತೆ ಆ.23ರ ಬುಧವಾರದ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಪ್ರಧಾನ ತನಿಖಾ ವರದಿಯ ಪರಿಣಾಮವಾಗಿ ಮಹಾನಗರ ಪಾಲಿಕೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ, ನಗರ ಯೋಜನಾ ಪ್ರಾಧಿಕಾರ ಹಾಗೂ ಸರ್ವೆ ಇಲಾಖೆಯ ಕೆಲ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.
ಪಾಲಿಕೆಯ ಕಂದಾಯ ಅಧಿಕಾರಿ ಜಗದೀಶ್, ಕಿರಿಯ ಇಂಜಿನಿಯರ್ ಹರೀಶ್, ಅಭಿಷೇಕ್, ಕಂದಾಯ ನಿರೀಕ್ಷಕರಾದ ರಮೇಶ್ ಹಾಗೂ ಗೋಪಿನಾಥ್, ಟೂಡಾ ಅಧಿಕಾರಿ ಹನುಮಂತರಾಯ, ಎಸ್ಟೇಟ್ ಆಫೀಸರ್ ಮುರಳೀಧರ್, ಭೂಮಾಪನ ಇಲಾಖೆಯ ಸತ್ಯೇಶ್, ನಟರಾಜ್, ಆನಂದ್ ಇನ್ನಿತರರು ಅವರಲ್ಲಿ ಲಭ್ಯವಿದ್ದ ನಕ್ಷೆಗಳು ಹಾಗೂ ದಾಖಲೆಗಳ ಆಧಾರದ ಮೇಲೆ ಅಳತೆ ಮಾಡುವ ಪ್ರಯತ್ನ ಮಾಡಿದರಾದರೂ, ಅಂದಾಜು ಸಿಕ್ಕದೇ ಮತ್ತೆ ಸೋಮವಾರ ಪರಿವೀಕ್ಷಣೆ ಮುಂದುವರೆಸುವುದಾಗಿ ಹೇಳುತ್ತಾ ಹಿಂದಿರುಗಿದರು.
ಸರ್ವೆ ನಂಬರ್ 35/1ಬಿರಲ್ಲಿನ 0.20 ಗುಂಟೆ(ಅರ್ಧ ಎಕರೆ) ಪಾರ್ಕಿನಲ್ಲಿ ಕಾಲಿಡಲಾಗದಷ್ಟು ಪ್ರಮಾಣದಲ್ಲಿ ಬೆಳೆದಿರುವ ಪೊದೆಗಳು,ಮುಳ್ಳುಕಂಟಿಗಳನ್ನು ತೆಗೆದು ಸ್ವಚ್ಚಗೊಳಿಸುವ ಪ್ರಯತ್ನವನ್ನೂ ಪಾಲಿಕೆಯ ಜೆಸಿಬಿ ಕೆಲ ಸಮಯ ಮಾಡಿತು.
ಸ್ಥಳದಲ್ಲಿ ಸೇರಿದ್ದ ಸ್ಥಳೀಯರ ಪ್ರಕಾರ ಸರ್ವೆ ನಂಬರ್ 35/1ಬಿ ಅರ್ಧ ಎಕರೆ ಪೂರ್ತಾ ಪಾರ್ಕು, ಅಲ್ಲಿ ಪಾರ್ಕನ್ನು ಅಭಿವೃದ್ಧಿಪಡಿಸಲೆಂದೇ ಗಿಡಗಳನ್ನು ನೆಡಲಾಗಿದೆ. ಆದರೆ ಮಹಾನಗರಪಾಲಿಕೆ ಪಾರ್ಕನ್ನು ಅಭಿವೃದ್ಧಿ ಪಡಿಸಿಲ್ಲ. ಮತ್ತು ಆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಮನೆ ಆ ಪಾರ್ಕಿನ ವ್ಯಾಪ್ತಿಯೊಳಗೇ ಇದೆ. ಸ್ಥಳದಲ್ಲಿದ್ದ ಇಡೀ ಪ್ರಕರಣದ ಮಾಹಿತಿ ಬಲ್ಲವರು ಅವರು ಹೊಂದಿರುವ ದಾಖಲೆಗಳ ಆಧಾರದ ನೀಡಿದ ಮಾಹಿತಿಯ ಸಾರಾಂಶ ಹೀಗಿದೆ: ( ವಿವರವಾಗಿ ಹೇಳದೇ ಹೋದರೆ ಓದುಗರಿಗೆ ಗೊಂದಲವಾಗುವ ಸಾಧ್ಯತೆ ಇರುವುದರಿಂದ ವರದಿ ತುಸು ಉದ್ದವಾಗಿದೆ ಕ್ಷಮೆ ಇರಲಿ)
1) ಬಟವಾಡಿಯ ರೈಲ್ವೆ ಪಟ್ಟಿ ದಕ್ಷಿಣಕ್ಕಿರುವ ಸರ್ವೆ ನಂಬರ್ 35ರಲ್ಲಿ ಒಟ್ಟು 9 ಎಕರೆ 18 ಗುಂಟೆ ಸ್ವತ್ತಿದೆ. ಈ ಸ್ವತ್ತಿನ ಪೈಕಿ 3 ಎಕರೆ 06 ಗುಂಟೆ ತಾಯಿ ಮತ್ತು ಮಗಳು ಈ ಇಬ್ಬರಿಗೆ ದಿನಾಂಕ 21.12.1981ರಂದು ತುಮಕೂರು ಸಬ್ ರಿಜಿಸ್ಟಾçರ್ ಕಚೇರಿಯಲ್ಲಿ ನೊಂದಣಿ ವಿಭಾಗ ಪತ್ರದ ಮುಖಾಂತರ ಬಂದಿರುತ್ತದೆ.
2) ಈ ಅಮ್ಮ ಮತ್ತು ಮಗಳು ತಮ್ಮ ಪಾಲಿಗೆ ಬಂದ ಸರ್ವೆ ನಂಬರ್ 35(ಭಾಗ)ರ 3 ಎಕರೆ 06 ಗುಂಟೆಯ ಪೈಕಿ ಎರಡು ಎಕರೆಯನ್ನು ವಾಸದ ನಿವೇಶನಗಳನ್ನು ವಿಂಗಡಿಸಿ ಅಭಿವೃದ್ಧಿ ಪಡಿಸುವ ಸಲುವಾಗಿ ಜಿಲ್ಲಾಧಿಕಾರಿಗಳವರ ಕಚೇರಿಯಲ್ಲಿ ಭೂಪರಿವರ್ತನೆಗೆ ಅರ್ಜಿ ಸಲ್ಲಿಸುತ್ತಾರೆ ಮತ್ತು ಈ ಎರಡು ಎಕರೆ ಸ್ವತ್ತನ್ನು ಜಿಲ್ಲಾಧಿಕಾರಿಗಳವರ ಕಚೇರಿಯಲ್ಲಿ ದಿನಾಂಕ 26.06.1982ರಂದು ಆದೇಶ ಸಂಖ್ಯೆ ಎ.ಎಲ್.ಎನ್.ಎಸ್.ಆರ್ 44/82/83ರಲ್ಲಿ ಭೂಪರಿವರ್ತನೆ ಮಾಡಿಕೊಡಲಾಗಿದೆ.
3) ತದನಂತರ ಈ ಭೂಪರಿವರ್ತನೆ (ಎಲಿನೇಶನ್) ಆದ ಎರಡು ಎಕರೆಗೆ ಅಂದಿನ ನಗರ ಯೋಜನಾ ಪ್ರಾಧಿಕಾರವು ತನ್ನ ದಿನಾಂಕ 20.08.1982ರ ಆದೇಶ ಸಂಖ್ಯೆ ಟಿಟಿಪಿ/ಟಿಪಿ/ಎಸ್-2/ಎಫ್-366/743-45/82-83ರಲ್ಲಿ ವಸತಿ ವಿನ್ಯಾಸಕ್ಕೆ ಅನುಮೋದನೆ ನೀಡಿದೆ, ಅದರಂತೆ ಈ ಎರಡು ಎಕರೆಯಲ್ಲಿ ಸದರಿ ಆದೇಶದಲ್ಲಿ ಅನುಮೋದಿಸಿರುವಂತೆ ರಸ್ತೆ, ಚರಂಡಿ ಹಾಗೂ ಸಾರ್ವಜನಿಕ ಉಪಯೋಗಕ್ಕೆ ಮೀಸಲಿರಿಸಿದ ಪಾರ್ಕು ಮತ್ತಿತರ ಜಾಗವನ್ನು ಸಂಬAಧಿಸಿದ ಸ್ಥಳೀಯ ಸಂಸ್ಥೆಗೆ ಅಥವಾ ಯೋಜನಾ ಪ್ರಾಧಿಕಾರಕ್ಕೆ ಪುಕ್ಕಟೆಯಾಗಿ ನೊಂದಾಯಿತ ದಾನಪತ್ರದ ಮುಖಾಂತರ ಹಸ್ತಾಂತರಿಸಬೇಕೆAಬ ಷರತ್ತನ್ನು ಯೋಜನಾ ಪ್ರಾಧಿಕಾರ ತನ್ನ ಈ ಆದೇಶದಲ್ಲಿ ವಿಧಿಸಿರುತ್ತದೆ.
4) ಆದರೆ ಈ ಸ್ವತ್ತಿನ ಮಾಲೀಕರಾದ ತಾಯಿ ಮತ್ತು ಮಗಳು ಯೋಜನಾ ಪ್ರಾಧಿಕಾರ ಲೇಔಟ್ ವಿನ್ಯಾಸಕ್ಕೆ ಅನುಮೋದನೆ ನೀಡುವ 18 ದಿನ ಮೊದಲೇ ದಿನಾಂಕ 02.08.1982ರಂದು ಈ ಲೇಔಟ್‌ನಲ್ಲಿ ಪಾರ್ಕ್ಗೆಂದು ವಿಂಗಡಿಸಿದ್ದ ಅರ್ಧ ಎಕರೆ (0.20 ಗುಂಟೆ) ಸ್ವತ್ತನ್ನು ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿಬಿಡುತ್ತಾರೆ. ಮತ್ತು ಈ ಸ್ವತ್ತು ರಿಪೋಡ್ ಆಗಿ ಸರ್ವೆ ನಂಬರ್ 35/1ಬಿ ಎಂದಾಗುತ್ತದೆ.
5) ಆದರೆ ಸ್ವಾರಸ್ಯಕರ ಸಂಗತಿ ಎಂದರೆ, ಈ ತಾಯಿ ಮತ್ತು ಮಗಳು ಇಡೀ ಎರಡು ಎಕರೆಯಲ್ಲಿ ನಿವೇಶನ ವಿಂಗಡಿಸಲು ಅನುಮೋದನೆ ಕೋರಿ ಸಲ್ಲಿಸಿದ್ದ ವಿನ್ಯಾಸದಲ್ಲಿ ಸಾರ್ವಜನಿಕ ಪಾರ್ಕ್ಗೆ ಮೀಸಲಿರಿಸಿದ್ದ ಅರ್ಧ ಎಕರೆಯನ್ನು ಇವರು ಬೆಂಗಳೂರಿನ ವ್ಯಕ್ತಿಗೆ 18 ದಿನ ಮೊದಲೇ ಮಾರಾಟ ಮಾಡಿದ್ದ ವಿಷಯ ಅರಿಯದ ಯೋಜನಾ ಪ್ರಾಧಿಕಾರ ನಿಗದಿತ ಲೇಔಟ್ ವಿನ್ಯಾಸವನ್ನು ಅನುಮೋದಿಸಿ ದಿನಾಂಕ 20.08.1982ರಂದು ಆದೇಶ ಹೊರಡಿಸುತ್ತದೆ. ಹೀಗೆ ಈ ಲೇಔಟ್‌ನ ರೈಲು ಎರಡು ಮಾರ್ಗಗಳಲ್ಲಿ ಸಂಚಾರ ಆರಂಭಿಸಿಬಿಡುತ್ತದೆ.
6) ಇದಾದ 18 ವರ್ಷಗಳ ನಂತರ ದಿನಾಂಕ 27.06.2000ದಂದು ನಗರದ ಕೆಲವು ನಾಗರಿಕರು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ದೂರರ್ಜಿ ಸಲ್ಲಿಸಿ, ಈ ಲೇಔಟ್‌ನ ಮಾಲೀಕರಾದ ತಾಯಿ ಮತ್ತು ಮಗಳು ಭೂಪರಿವರ್ತಿತ 2.00 ಎಕರೆಯಲ್ಲಿ ನಗರ ಯೋಜನಾ ಪ್ರಾಧಿಕಾರ ಪಾರ್ಕ್ಗೆಂದು ವಿಂಗಡಿಸಿದ್ದ ಅರ್ಧ ಎಕರೆಯನ್ನು ಲೇಔಟ್ ವಿನ್ಯಾಸ ಅನುಮೋದನೆಯಾಗುವ 18 ದಿನ ಮೊದಲೇ ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿಸಿ, ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವಂತೆ ಕೋರುತ್ತಾರೆ.
7) ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೋಜಣಿ ಮಾಡಿಸಲಾಗಿ, ಸದರಿ 0.20 ಗುಂಟೆ (ಅರ್ಧ ಎಕರೆ) ಪ್ರದೇಶವು ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದಿತ 2.00 ಎಕರೆ ವಿಸ್ತೀರ್ಣದ ವಿನ್ಯಾಸದ (ಲೇಔಟ್) ಭಾಗವಾಗಿದೆ ಎಂದು ಸರ್ವೆ ಸ್ಕೆಚ್ ನೀಡುತ್ತಾರೆ. ಮತ್ತು ಈ ಅನುಮೋದಿತ ಪಾರ್ಕ್ ಅನ್ನು ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿರುವ ಕುರಿತು ಈ ತಾಯಿ ಮತ್ತು ಮಗಳಿಗೆ ಟೂಡಾ ನೋಟೀಸ್ ಜಾರಿ ಮಾಡುತ್ತದೆ. ನೋಟೀಸು ಅವರಿಗೆ ತಲುಪದೆ ಟೂಡಾಕ್ಕೇ ವಾಪಸಾಗುತ್ತದೆ.
8) ಇದಾದ ನಾಲ್ಕು ವರ್ಷಗಳ ಬಳಿಕ ಸದರಿ ಬೆಂಗಳೂರಿನ ವ್ಯಕ್ತಿ ಈ ಅರ್ಧ ಎಕರೆಯನ್ನು (0.20 ಗುಂಟೆ) ದಿನಾಂಕ 13.06.2005ರಂದು ತುಮಕೂರು ನಗರದ ಹನುಮಂತರಪುರದ ನಿವಾಸಿಗಳಾಗಿರುವ ತಾಯಿ ಮತ್ತು ಮಗಳಿಗೆ ಮಾರಾಟ ಮಾಡುತ್ತಾನೆ.
9) ಈ ಅರ್ಧ ಎಕರೆಯನ್ನು ಬೆಂಗಳೂರಿನ ವ್ಯಕ್ತಿಯಿಂದ ಕ್ರಯಕ್ಕೆ ಪಡೆದ ತುಮಕೂರಿನ ತಾಯಿ ಮತ್ತು ಮಗಳು ಸದರಿ ಸ್ವತ್ತನ್ನು ಖರೀದಿಸಿದ ದಿನದಂದೇ (13.06.2005) (ಅಚ್ಚರಿ ಪಡಬೇಡಿ) ಇದೇ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕ್ರಯಪತ್ರ, ಇಸಿ, ಖಾತಾ ಪತ್ರ ಮೊದಲಾದ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ತಾವು ಖರೀದಿಸಿರುವ ಅರ್ಧ ಎಕರೆಯನ್ನು ವಾಸದ ಉದ್ದೇಶಕ್ಕಾಗಿ ಬಿಡಿ ನಿವೇಶನ ಎಂಬುದಾಗಿ ಮಂಜೂರಾತಿ ಆದೇಶ ಮಾಡಿಕೊಡಬೇಕೆಂದು ಕೋರುತ್ತಾರೆ.
10) ವಿಚಿತ್ರವೆಂದರೆ, ಈ ಅರ್ಧ ಎಕರೆ ಪಾರ್ಕ್ ಎಂಬುದಾಗಿ ಮೀಸಲಾಗಿದೆ ಎಂಬ ಸಂಗತಿ ಇದೇ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಾರ್ವಜನಿಕರ ದೂರಿನ ಮೂಲಕ ದಿನಾಂಕ 27.06.2000ದಂದೇ ತಿಳಿದು ಬಂದಿರುತ್ತದೆ, ಮತ್ತು ಈ ಪ್ರಕರಣದಲ್ಲಿ ಮೂಲ ಮಾಲೀಕರಿಗೆ ಟೂಡಾ ನೋಟೀಸ್ ಕೂಡಾ ಕೊಟ್ಟಿರುತ್ತದೆ ಹಾಗೂ ಸ್ಥಳದ ಸರ್ವೆಯನ್ನೂ ಮಾಡಿಸಿ, ಸರ್ವೆ ಇಲಾಖೆಯ ಪ್ರಕಾರ ಈ ಅರ್ಧ ಎಕರೆ ಪಾರ್ಕ್ ಎಂಬ ಅಧಿಕೃತ ದಾಖಲೆಯನ್ನೂ ಪಡೆದುಕೊಂಡಿರುತ್ತದೆ. ಆದರೂ ಇದೇ ತುಮಕೂರು ನಗರಾಭಿವೃದ್ದಿ ಪ್ರಾಧಿಕಾರ ವಾಸ್ತವಾಂಶವನ್ನು ತಾನೇ ಮುಚ್ಚಿಟ್ಟು ಬೆಂಗಳೂರಿನ ವ್ಯಕ್ತಿಯೊಬ್ಬರಿಂದ ಈ ಸ್ವತ್ತನ್ನು ಖರೀದಿಸಿದ ತುಮಕೂರಿನ ತಾಯಿ ಮತ್ತು ಮಗಳಿಗೆ ಬಿಡಿ ನಿವೇಶನ ಮಂಜೂರಾತಿ ಆದೇಶವನ್ನು ದಿನಾಂಕ 12.08.2005ರಂದು ಆದೇಶ ಸಂಖ್ಯೆ ಕ್ರಮಾಂಕ/ ನಅಪ್ರಾತು/ಬಿಡಿ ನಿವೇಶನ/155/2005-06ರಲ್ಲಿ ನೀಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಬಿಡುತ್ತದೆ.
11) ಈ ಬಿಡಿ ನಿವೇಶನ ಮಂಜೂರಾತಿ ಆದೇಶದಲ್ಲಿ ವಿಧಿಸಿರುವ ಐದು ನಿಬಂಧನೆಗಳ ಪೈಕಿ (4)ನೇ ನಿಬಂಧನೆ ಹೀಗಿದೆ: ಈ ಬಿಡಿ ನಿವೇಶನಕ್ಕೆ ಮಂಜೂರಾತಿ ಪಡೆಯಲು ನೀವು ತಪ್ಪು ಮಾಹಿತಿ / ದಾಖಲೆಗಳನ್ನು ನೀಡಿರುವುದು ಕಂಡು ಬಂದರೆ ಈ ಮಂಜೂರಾತಿ ಆದೇಶವು ಸ್ವಯಂ ರದ್ದಾಗುತ್ತದೆಂದು ತಿಳಿಯುವುದು. ಸ್ವಯಂ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರವೇ ಈ ಸ್ವತ್ತು ಪಾರ್ಕು ಎಂದು ಗೊತ್ತಿದ್ದರೂ, ತುಮಕೂರಿನ ತಾಯಿ ಮತ್ತು ಮಗಳಿಗೆ ಈ ಸ್ವತ್ತನ್ನು ಬಿಡಿ ನಿವೇಶನ ಎಂದು ಮಂಜೂರಾತಿ ಆದೇಶ ನೀಡಿದ ಸಂಗತಿ ಈ ವರದಿಯನ್ನು ಓದುತ್ತಿರುವ ಯಾರಿಗೇ ಆದರೂ ಗಾಬರಿ ಹುಟ್ಟಿಸುವುದರಲ್ಲಿ ಅನುಮಾನವೇ ಇಲ್ಲ.
12) ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಮುಂದಿನ ಏಳು ವರ್ಷ ಯಾವ ಬೆಳವಣಿಗೆಯೂ ಕಾಣುವುದಿಲ್ಲ, ತುಮಕೂರು ನಗರದ ಜಯನಗರದ ವ್ಯಕ್ತಿಯೊಬ್ಬರು ದಿನಾಂಕ 15.02.2012ರಂದು ಇದೇ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ, ಈ ಸರ್ವೆ ನಂಬರ್ 35(ಭಾಗ)ದ 2.00 ಎಕರೆ ಸ್ವತ್ತಿನ ಲೇಔಟ್ (ವಿನ್ಯಾಸ)ಗೆ ಸಂಬAಧಿಸಿದAತೆ 1982ರಿಂದಲೂ ನ್ಯಾಯಾಲಯದಲ್ಲಿ ಪ್ರಕರಣವೊಂದು ಬಾಕಿ ಇದ್ದು, ಈ ಪ್ರಕರಣ ದಿನಾಂಕ 31.01.2007ರಂದು ಭೂಮಾಲೀಕರ ಪರವಾಗಿ ಇತ್ಯರ್ಥವಾಗಿರುವುದಾಗಿ ತಿಳಿಸಿ, ಘನ ನ್ಯಾಯಾಲಯ ಆದೇಶದ ಪ್ರತಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಿ, ಲೇಔಟ್‌ನಲ್ಲಿ ರಸ್ತೆ ಹಾಗೂ ಪಾರ್ಕ್ಗೆ ಮೀಸಲಿರಿಸಿದ ಜಾಗಗಳು ಒತ್ತುವರಿಯಾಗಿದ್ದು ಸೂಕ್ತ ಕ್ರಮ ಜರುಗಿಸುವಂತೆ ಕೋರಿರುತ್ತಾರೆ.
13) ಹೀಗೆ ಸಾರ್ವಜನಿಕರೊಬ್ಬರು ನ್ಯಾಯಾಲಯದ ತೀರ್ಪು ಹೊರಬಂದ ಏಳು ವರ್ಷಗಳ ನಂತರ ಸಲ್ಲಿಸಿದ ಮನವಿಯ ಮೇರೆಗೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಈ ಅರ್ಧ ಎಕರೆ ಪಾರ್ಕನ್ನು ತುಮಕೂರಿನ ತಾಯಿ ಮತ್ತು ಮಗಳಿಗೆ ಬಿಡಿ ನಿವೇಶನ ಎಂಬುದಾಗಿ ತಾನೇ ಮಂಜೂರು ಮಾಡಿರುವುದು ತಪ್ಪೆಂದು ಅರಿವಾಗುತ್ತದೆ. ಈ ವಿಚಾರ ಇದೇ ಪ್ರಾಧಿಕಾರಕ್ಕೆ ಸಾರ್ವಜನಿಕರ ದೂರಿನ ಮೂಲಕ ದಿನಾಂಕ 27.06.2000ದಂದೇ ತಿಳಿದು ಬಂದಿರುತ್ತದೆ ಎಂಬುದನ್ನೂ ಓದುಗರಾದ ನೀವು ಮತ್ತೆ ನೆನಪಿಸಿಕೊಳ್ಳಿ ಪ್ಲೀಸ್.
14) ಮನವಿದಾರರಿಗೆ ಬೇಸರವಾಗಬಾರದೆಂದೋ ಏನೋ ಪಾಪ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಅಲಿಯಾಸ್ ಟೂಡಾ ತಾನೇ ಬಿಡಿ ನಿವೇಶನ ಮಂಜೂರು ಮಾಡಿಕೊಟ್ಟ ತಾಯಿ ಮಗಳಿಗೆ , “ ನೀವು ಪ್ರಾಧಿಕಾರಕ್ಕೆ ತಪ್ಪು ಮಾಹಿತಿ ನೀಡಿ ಬಿಡಿ ನಿವೇಶನ ಮಂಜೂರಾತಿ ಪಡೆದುಕೊಂಡಿದ್ದೀರಿ” ಎಂದು ದಿನಾಂಕ 13.03.2012ರಂದು ನೋಟೀಸ್ ರವಾನಿಸುತ್ತದೆ. ಇದೇ ಪ್ರಾಧಿಕಾರದ ಕಚೇರಿಗೆ ಕಾಲ್ನಡಿಗೆ ದೂರದ ಹನುಮಂತಪುರದಲ್ಲಿ ವಾಸವಿದ್ದ ಈ ತಾಯಿ ಮತ್ತು ಮಗಳು ಪ್ರಾಧಿಕಾರದ ನೋಟೀಸಿಗೆ ಉತ್ತರ ಕೊಡುವ ಗೋಜಿಗೇ ಹೋಗುವುದಿಲ್ಲ. ಹಾಗಾಗಿ ಪ್ರಾಧಿಕಾರದ ದಿನಾಂಕ 26.06.2012ರ ಸಭೆಯಲ್ಲಿ ಸದರಿ ತಾಯಿ ಮತ್ತು ಮಗಳಿಗೆ ಸದರಿ ಬಿಡಿ ನಿವೇಶನಕ್ಕೆ ನೀಡಲಾಗಿದ್ದ ಮಂಜೂರಾತಿಯನ್ನು ರದ್ದುಪಡಿಸಲು ನಿರ್ಣಯಿಸಲಾಗುತ್ತದೆ. ಪ್ರಾಧಿಕಾರವು ಹೀಗೆ ಬಿಡಿ ನಿವೇಶನ ಮಂಜೂರಾತಿಯನ್ನು ರದ್ದುಪಡಿಸಿತೋ ಇಲ್ಲವೋ, ಒಂದು ರದ್ದು ಪಡಿಸಿದರೂ ಸಾರ್ವಜನಿಕರಿಗೆ ಈ ಸಂಗತಿಯನ್ನು ತುಮಕೂರಿನ ಹೆಸರಾಂತ ಅತ್ಯಂತ ಹೆಚ್ಚು ಪ್ರಸಾರ ಹೊಂದಿರುವ ಸ್ಥಳೀಯ ದಿನಪತ್ರಿಕೆಯಲ್ಲಿ ಸುದ್ದಿ ಅಥವಾ ಜಾಹಿರಾತಿನ ರೂಪದಲ್ಲಿ ಪ್ರಕಟಿಸಿತೋ ಇಲ್ಲವೋ ಎಂಬುದು ಇನ್ನೂ ನಿಗೂಢವಾಗೇ ಉಳಿದುಕೊಂಡಿದೆ.
15) ಆದರೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇಷ್ಟೆಲ್ಲ ಘಟನಾವಳಿಗಳು ನಡೆಯುತ್ತಿರುವ ಸಾಕಷ್ಟು ಮೊದಲೇ ಪಾರ್ಕ್ ಸೈಟ್ ಭೂ ಹಗರಣ ಮತ್ತೊಂದು ಕುತೂಹಲಕರ ಟ್ವಿಸ್ಟ್ ತೆಗೆದುಕೊಂಡು ಬಿಟ್ಟಿರುತ್ತದೆ.
16) ಸರ್ವೆ ನಂಬರ್ 35(ಭಾಗ)ದ 2.00 ಎಕರೆ ಲೇಔಟ್‌ನಲ್ಲಿ ಸಾರ್ವಜನಿಕ ಉದ್ಯಾನವನ (ಪಾರ್ಕ್)ಕ್ಕೆಂದು ಮೀಸಲಾಗಿರಿಸಿದ್ದ ಅರ್ಧ ಎಕರೆ ಸ್ವತ್ತನ್ನು ಬೆಂಗಳೂರಿನ ಎರಡನೇ ಕೈಯಿಂದ ಖರೀದಿಸಿ ಮೂರನೇ ಕೈ ಎನಿಸಿಕೊಂಡ ಹನುಮಂತಪುರದ ನಿವಾಸಿಗಳಾದ ತಾಯಿ ಮತ್ತು ಮಗಳು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಅಲಿಯಸ್ ಟೂಡಾದಿಂದ ದಿನಾಂಕ 12.08.2005ರಂದು ಬಿಡಿ ನಿವೇಶನ ಮಂಜೂರಾತಿ ಮಾಡಿಸಿಕೊಂಡು, ತುಮಕೂರು ನಗರಸಭೆಯಲ್ಲಿ ಖಾತಾ ವಗೈರೆ ಮಾಡಿಸಿಕೊಂಡು ನಂತರ, ಸದರಿ ಬಿಡಿ ನಿವೇಶನವನ್ನು ಎಸ್-1ರಿಂದ ಎಸ್-19 ಎಂಬ ಹತ್ತು ಬಹು ನಿವೇಶನಗಳನ್ನಾಗಿ “ ಅಲಾಯಿದ ಕಚ್ಚಾ ಪ್ಲಾನ್” ಮಾಡಿಕೊಂಡು ವಿಂಗಡಿಸಿರುತ್ತಾರೆ ಹಾಗೂ ಈ ಹತ್ತು ನಿವೇಶನಗಳನ್ನು “ ತಮ್ಮಗಳ ದರದು ನಿಮಿತ್ತ” ಅನ್ಯ ವ್ಯಕ್ತಿಗಳಿಗೆ 2008ರ ಜನವರಿ 9ರಿಂದಲೇ ಮಾರಾಟ ಮಾಡಲು ಶುರುಮಾಡಿ ಬಿಟ್ಟಿರುತ್ತಾರೆ.
17) ಈಗ ಇಡೀ ಪ್ರಕರಣದಲ್ಲಿ ತಪ್ಪಿತಸ್ಥರು ಯಾರು ಅಂತ ಹೇಳಿ ನೋಡೋಣ!?
18) ಹೀಗೆ ಈ ತಾಯಿ ಮತ್ತು ಮಗಳಿಂದ ಹತ್ತು ಸೈಟುಗಳನ್ನು ಖರೀದಿಸಿದ ಕೆಲವರು ಮರು ಮಾರಾಟವನ್ನೂ ಮಾಡಿದ್ದಾರೆ, ಹೀಗೆ ಖರೀದಿಸಿದ ನಾಲ್ವರು ತಮ್ಮ ನಿವೇಶನಗಳಲ್ಲಿ ಮನೆ ನಿರ್ಮಿಸಲೆಂದು ಮಹಾನಗರಪಾಲಿಕೆಗೆ ದಿನಾಂಕ 13.01.2014ರಂದು ಅರ್ಜಿ ಸಲ್ಲಿಸಿದಾಗ, ಪಾಲಿಕೆ ಲೈಸೆನ್ಸ್ ಕೊಡಲು ಒಪ್ಪದೇ ದಿನಾಂಕ 13.01.2014ರಂದು ನಗರಾಭಿವೃದ್ಧಿ ಪ್ರಾಧಿಕಾರದ ಟಿಯುಡಿಎ/ ಸಿಸಿ/1876/2013-14ರ ಟಿಪ್ಪಣಿಯನ್ನು ಉಲ್ಲೇಖಿಸಿ ಹಿಂಬರಹ ನೀಡುತ್ತದೆ. ಆಗ ಅಳಿಯನ ಕುರುಡು ಬೆಳಗಾದಾಗ ಗೊತ್ತಾಯಿತು ಎಂಬಂತೆ ಅವರು ಖರೀದಿ ಮಾಡಿರುವುದು ಸಾರ್ವಜನಿಕ ಪಾರ್ಕ್ನ ಹತ್ತನೇ ಒಂದು ಭಾಗ ಎಂಬುದು ಅರಿವಾಗುತ್ತದೆ.
19) ಮಿಂಚಿ ಹೋದ ಕರ‍್ಯಕ್ಕೆ ಚಿಂತಿಸಿ ಫಲವಿಲ್ಲ ಎಂಬುದು ಹಳೇ ಗಾದೆ, ಯಾವುದೇ ಸ್ವತ್ತಿನ ಕ್ರಯ ಪತ್ರದಲ್ಲಿ ಆ ಸ್ವತ್ತನ್ನು ಮಾರಾಟ ಮಾಡುವವರು ಕ್ರಯಕ್ಕೆ ಪಡೆಯುವವರಿಗೆ ಹೀಗೊಂದು ಮುಚ್ಚಳಿಕೆ ಬರೆದುಕೊಟ್ಟಿರುತ್ತಾರೆ, ಈ ಕ್ರಯ ಪತ್ರದ 4ನೇ ಪುಟದ ಎರಡನೇ ಕಂಡಿಕೆಯಲ್ಲೂ ಈ ತಾಯಿ ಮತ್ತು ಮಗಳು “ ಕ್ರಯದ ಷೆಡ್ಯೂಲ್ ಸ್ವತ್ತು ಯಾವ ತಂಟೆ ತಕರಾರು, ಪರಬಾರೆಗಳು, ವತ್ತುವರಿಗಳಿಗೆ, ಆಧಾರ , ಭೋಗ್ಯ ವಗೈರೆಗಳಿಗೆ ಒಳಪಟ್ಟಿರುವುದಿಲ್ಲ. ಒಂದು ವೇಳೆ ಕ್ರಯದ ಷೆಡ್ಯೂಲ್ ಸ್ವತ್ತಿನ ವಿಚಾರದಲ್ಲಿ ಅಂತಹ ತಂಟೆ ತಕರಾರು ಪರಬಾರೆಗಳು, ವತ್ತುವರಿಗಳು, ಆಧಾರ, ಭೋಗ್ಯ ವಗೈರೆಗಳು ಏನೇ ಕಂಡು ಬಂದಲ್ಲಿ ನಾವು ನಮ್ಮ ಸ್ವಂತ ಜವಾಬ್ದಾರಿಯಿಂದ ಪರಿಹರಿಸಿಕೊಡುತ್ತೇವೆ” ಎಂಬ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.
ಆದರೆ ಕ್ರಯದಾರರಿಗೆ ಮಹಾನಗರಪಾಲಿಕೆ ಮನೆ ನಿರ್ಮಿಸಲು ಲೈಸೆನ್ಸ್ ಕೊಡಲು ಒಪ್ಪುವುದಿಲ್ಲ ಮತ್ತು ಈ ಅಮಾಯಕ ಕ್ರಯದಾರರು ತಮ್ಮ ನಿವೇಶನಗಳನ್ನು ಸಕ್ರಮಗೊಳಿಸಿಕೊಡುವಂತೆ ಸರಕಾರದ ಮೊರೆ ಹೋಗುತ್ತಾರೆ. ಇವರ ಮನವಿಯನ್ನು ಪರಿಶೀಲಿಸುವ ಬೆಂಗಳೂರು ವಿಕಾಸ ಸೌಧದಲ್ಲಿರುವ ಕರ್ನಾಟಕ ಸರ್ಕಾರ ಸಚಿವಾಲಯದ ನಗರಾಭಿವೃದ್ಧಿ ಇಲಾಖೆಯ ಕರ‍್ಯದರ್ಶಿಯವರು ತಮ್ಮ ದಿನಾಂಕ 20.01.2017ರ ಪತ್ರ ಸಂಖ್ಯೆ ನಇ/06/ಬೆಂರೂಪ್ರಾ/2015ರಲ್ಲಿ ನೀವೇ ಹಿಂಬರಹ ಕೊಡಿ ಎಂದು ಟೂಡಾಕ್ಕೆ ಹಿಂದಿರುಗಿಸುತ್ತಾರೆ. ಟೂಡಾ ಅಮಾಯಕ ಕ್ರಯದಾರರಿಗೆ ದಿನಾಂಕ 27.04.2017ರ ಸಂಖ್ಯೆ ನಂ. ತುನಪ್ರಾ/ಯೋಶಾ/ಬಟವಾಡಿ ಸ.ನಂ 35/257/2017-18ರಲ್ಲಿ ನೋಟೀಸ್ ನೀಡಿ “ ನೀವು ಈ ನಿವೇಶನಗಳನ್ನು ಖರೀದಿಸಿರುವುದು ನಿಯಮಬಾಹಿರವಾದ ಮತ್ತು ಸ್ಪಷ್ಟವಾದ ಕಾನೂನು ಉಲ್ಲಂಘನೆಯ ಕ್ರಮವಾಗಿರುವುದು ಕಂಡು ಬಂದಿರುತ್ತದೆ” ಎಂದು ಹೆದರಿಸಿಬಿಡುತ್ತದೆ.
ಅದಾದ ಬಳಿಕ ಈ ನಾಲ್ವರು ಸಮಾಜದಲ್ಲಿ ವೈದ್ಯ ವೃತ್ತಿಯಂಥ ಮರ್ಯಾದಸ್ಥ ವೃತ್ತಿಗಳಲ್ಲಿರುವ ಕ್ರಯದಾರರು ನ್ಯಾಯಾಲಯದ ಮೊರೆಯನ್ನೂ ಹೋಗುತ್ತಾರೆ, ಅಲ್ಲೂ ಅವರ ಮನವಿಗೆ ಪುರಸ್ಕಾರ ದೊರಕುವುದಿಲ್ಲ. ಕಡೆಗೆ ಕಳೆದ ವರ್ಷ ನಗರದ ಸಂಬAಧಪಟ್ಟ ಪೊಲೀಸ್ ಠಾಣೆಗೂ ದೂರು ನೀಡುತ್ತಾರೆ, ಅಲ್ಲೂ ಅವರಿಗೆ ಪೊಲೀಸರು ದಿನಾಂಕ 13.09.2022ರಂದು ಜಿಎಸ್‌ಸಿ ನಂಬರ್ ಪಿಓ2119220600303ರಲ್ಲಿ ಹಿಂಬರಹ ನೀಡುತ್ತಾರೆ. ಕಡೆಗೆ ಈ ನಾಲ್ವರು ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ( ವಿವರ ಆ.24ರ ‘ ಬೆವರ ಹನಿ’ ದಿನಪತ್ರಿಕೆಯ ವರದಿಯಲ್ಲಿದೆ)
ತುಮಕೂರು 4ನೇ ಜೆಎಂಎಫ್‌ಸಿ ಹೆಚ್ಚುವರಿ ಸಿವಿಲ್ ಮತ್ತು 5ನೇ ಜೆಎಂಎಫ್‌ಸಿ ಘನ ನ್ಯಾಯಾಲಯವು ಪ್ರಕರಣ ಸಂಖ್ಯೆಗಳು ಪಿಸಿಆರ್ 739, 740, 741/2022ರಲ್ಲಿ ಕೆಳಕಂಡAತೆ ಆದೇಶ ಹೊರಡಿಸಿದೆ.
As per Court order dated 30-11-2022, the Complainant filed Private Complaint U/Sec. 200
of Cr.P.C against the accused for the offence punishable U/Sec. 120(B), 415, 417, 418, 420, 423, 426, 465, 468, 470, 471, 474 R/w 34 of IPC and prays to refer and investigate the matter.
Hence, you are hereby directed to investigate U/s. 156(3) of Cr.P.C and submitted the Report on or before 19.01.2022
ಘನ ನ್ಯಾಯಾಲಯದ ಆದೇಶವನ್ನು ತುಮಕೂರಿನ ಜಯನಗರ ಪೊಲೀಸ್ ಠಾಣೆಯು ದಿನಾಂಕ 5.7.2023ರಂದು ಸ್ವೀಕರಿಸಿದ್ದು ತನಿಖೆ ನಡೆಸುತ್ತಿದೆ. ಈ ನಡುವೆ ಇದೇ ಪಾರ್ಕ್ನಲ್ಲಿ ಅಕ್ರಮವಾಗಿ ಮತ್ತೊಬ್ಬರು ಮನೆಯನ್ನೂ ನಿರ್ಮಿಸುತ್ತಿದ್ದಾರೆ ಎಂದು ತಿಳಿದು ಬಂದಿದ್ದು ಈ ಸಂಗತಿಯನ್ನು ಪತ್ರಿಕೆ ಬುಧವಾರ ವರದಿ ಮಾಡಿದೆ.
ತುಮಕೂರು ಜಿಲ್ಲೆಗೆ ಅತ್ಯಂತ ಚುರುಕಾಗಿ ಗ್ರಹಿಸುವ ಮತ್ತು ಕಾರ‍್ಯಾಚರಣೆಗಿಳಿಯುವ ದಕ್ಷ ಮತ್ತು ಸಮರ್ಥ ಜಿಲ್ಲಾಧಿಕಾರಿ ಬಂದಿದ್ದಾರೆ, ಅತ್ಯಂತ ಚಾಣಾಕ್ಷ ಪೊಲೀಸ್ ಉನ್ನತ ಅಧಿಕಾರಿಗಳಿದ್ದಾರೆ. ಇವರಿಂದ ನಮಗೆ ನ್ಯಾಯ ದೊರಕುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಅಕ್ರಮ ನಿವೇಶನಗಳನ್ನು ಖರೀದಿ ಮಾಡಿ ತಬರನ ಪಾಡು ಪಡುತ್ತಿರುವ ಅಮಾಯಕ ವೈದ್ಯರು.