ಪೋಲೇನಹಳ್ಳಿಯಲ್ಲಿ ವಾಹನ ಗುದ್ದಿಸಿ ದಲಿತನನ್ನು ಕೊಂದ  ಗ್ರಾಪಂ ಸದಸ್ಯ

ಜೆಜೆಎಂ: ಬಾರದ ನೀರಿಗೆ ಬಿಲ್‌ ವಸೂಲಿ ವಿವಾದ

ಪೋಲೇನಹಳ್ಳಿಯಲ್ಲಿ ವಾಹನ ಗುದ್ದಿಸಿ ದಲಿತನನ್ನು ಕೊಂದ  ಗ್ರಾಪಂ ಸದಸ್ಯ

   

ತುಮಕೂರು: ಮನೆ ಮನೆಗೆ ನೀರು ಜೆಜೆಎಂ ಯೋಜನೆಯಡಿ ಹಾಕಿದ ನಲ್ಲಿಯ ನೀರಿನ ಬಿಲ್‌ ವಸೂಲಿ ಮಾಡುವ ವಿಚಾರವಾಗಿ ಆರಂಭವಾದ ವಾಗ್ವಾದವು  ಯುವಕನ ಮೇಲೆ ವಾಹನ ಹತ್ತಿಸಿ ಕೊಲೆ ಮಾಡುವ ಹಂತ ತಲುಪಿದ ದುರ್ಘಟನೆ ಮಧುಗಿರಿ ತಾಲೂಕಿನ ಪೋಲೇನಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ ಬಿಲ್‌ ಕಲೆಕ್ಟರ್‌ ರಾಮಕೃಷ್ಣನವರ ಮಗ ನಾಗೇಶ ತನ್ನ ಬೊಲೆರೊ ಸರಕು ಸಾಗಣೆ ವಾಹನದಿಂದ ಗುದ್ದಿಸಿದ ಪರಿಣಾಮ ಅದೇ ಊರಿನ ರಾಮಾಂಜನಪ್ಪನವರ ಮಗ ಆನಂದ್‌ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.  

ಮೃತ ಆನಂದ ಮಗಳೊಂದಿಗೆ

      ಗ್ರಾಮ ಪಂಚಾಯಿತಿ ಸದಸ್ಯನೂ ಆಗಿರುವ ಕೊಲೆ ಆಪಾದಿತ ನಾಗೇಶ ಪೊಲೀಸರಿಗೆ ಶರಣಾಗಿದ್ದು ಕೊಡಿಗೇನಹಳ್ಳಿ ಹಾಲಿ ಪೊಲೀಸ್‌ ವಶದಲ್ಲಿದ್ದಾನೆ. ನಾಗೇಶನ ಅಪ್ಪ ಅಮ್ಮ ಇಬ್ಬರೂ ಕೊಲೆಗೆ ಕಾರಣ ಹಾಗೂ ಪ್ರಚೋದನೆ ನೀಡಿದ್ದು, ಅವರನ್ನೂ ಬಂಧಿಸಬೇಕೆಂದೂ ಅಲ್ಲಿವರೆಗೂ ಆಸ್ಪತ್ರೆಯಿಂದ ಮಗನ ಶವವನ್ನು ಪಡೆದುಕೊಳ್ಳುವುದಿಲ್ಲ ಹಾಗೂ ಅಂತ್ಯ ಸಂಸ್ಕಾರ ಮಾಡುವುದಿಲ್ಲವೆಂದು ಮೃತನ ಪೋಷಕರು ಪಟ್ಟು ಹಿಡಿದಿದ್ದಾರೆ. ಮೃತನ ಪರವಾಗಿ ಸ್ಥಳೀಯ ಮುಖಂಡರು ಹಾಗೂ ಬಿಎಸ್‌ಪಿ ಪದಾಧಿಕಾರಿಗಳು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಕೊಲೆ ಆಪಾದಿತ ಗ್ರಾಪಂ ಸದಸ್ಯ ನಾಗೇಶ

    ಪೋಲೇನಹಳ್ಳಿ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದ್ದು, ಈ ಊರಿನಲ್ಲಿ ಜಲ ಜೀವನ ಮಿಶನ್‌ ಅಡಿ ಮನೆ ಮನೆಗಳ ಮುಂದೆ ನಲ್ಲಿ ಸಂಪರ್ಕ ನೀಡಲಾಗಿದೆ.  ಅದೇ ಊರಿನ ರಾಮಕೃಷ್ಣ ಎಂಬಾತ ಬಿಲ್‌ ಕಲೆಕ್ಟರ್‌ ಅಗಿದ್ದು, ಆತ ಬುಧವಾರ ಬೆಳಿಗ್ಗೆ  ರಾಮಾಂಜಿನಪ್ಪ ಎಂಬುವವರ ಮನೆಗೆ ಹೋಗಿ ಮನೆಯಲ್ಲಿದ್ದ ಅವರ ಪತ್ನಿ ನಾಗಮಣಿ ಅವರನ್ನು ನೀರಿನ ಬಿಲ್‌ ಪಾವತಿ ಮಾಡುವಂತೆ ಕೇಳಿದ್ದು , ಪ್ರತಿಯಾಗಿ ಆಕೆ “ ನೀರೇ ಬರುತ್ತಿಲ್ಲ, ಬಿಲ್‌ ಯಾಕೆ ಕೊಡಬೇಕೆಂದು  ಪ್ರಶ್ನಿಸಿದರೆಂದೂ ಆಗ ಆಕೆಯನ್ನು ರಾಮಕೃಷ್ಣ ಏಕವಚನದಲ್ಲಿ ನಿಂದಿಸಿದರೆಂದೂ ತಿಳಿದು ಬಂದಿದೆ. ನಾಗಮಣಿ ಈ  ಸಂಗತಿಯನ್ನು ಆಕೆಯ ಮಗ ಲಾರಿ ಚಾಲಕ ವೃತ್ತಿಯ ಆನಂದ್‌ಗೆ ತಿಳಿಸಿದ್ದಾರೆ. ಆನಂದ್‌ ಕೋಪದಿಂದ ಈ ಕುರಿತು ಬಿಲ್‌ ಕಲೆಕ್ಟರ್‌ ಮನೆಗೆ ಕೇಳಲು ಬಂದಾಗ ರಾಮಕೃಷ್ಣ ಅವರ ಪತ್ನಿ ಮನೆಯಲ್ಲಿದ್ದು ಆಕೆಯೊಂದಿಗೆ ಮಾತಿಗೆ ಮಾತು ಬೆಳೆದು ಆಕೆ ಆನಂದ್‌ಗೆ ಚಪ್ಪಲಿಯಿಂದ ಹೊಡೆದರೆಂದು ತಿಳಿದು ಬಂದಿದೆ.

    ಪರಿಶಿಷ್ಟ ಜಾತಿಯಲ್ಲಿ ಅಸ್ಫೃಶ್ಯರೆಂದು ಈ ಸಾಮಾಜಿಕ ವ್ಯವಸ್ಥೆಯಲ್ಲಿ ಪರಿಗಣಿತವಾದ ಮಾದಿಗ ಜಾತಿಗೆ ಸೇರಿದ ಆನಂದ್‌ ಅಪಮಾನದಿಂದ ಆಕ್ರೋಶಗೊಂಡು ಕೈಯಲ್ಲಿ ಮಚ್ಚನ್ನುಹಿಡಿದು ಪೋಲೇನಹಳ್ಳಿಯ ಪೇಟೆ ಬೀದಿಯಲ್ಲಿ ಅಡ್ಡಾಡುತ್ತಿರುವಾಗ, ತಾಯಿಯಿಂದ ವಿಷಯ ತಿಳಿದ ಬಿಲ್‌ ಕಲೆಕ್ಟರ್‌ ರಾಮಕೃಷ್ಣ ಅವರ ಮಗ ಗ್ರಾಮ ಪಂಚಾಯಿತಿ ಸದಸ್ಯನೂ ಆಗಿರುವ ನಾಗೇಶ್‌ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ತನ್ನ ಸರಕು ಸಾಗಣೆ ವಾಹನ ಬೊಲೆರೋ ಅನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು   ವೆಂಕಟೇಶಪ್ಪನವರ ಟೀ ಅಂಗಡಿ ಎದುರಿಗೆ ಆನಂದನ ಮೇಲೆ ಹರಿಸಿದ್ದಾನೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದ ಆನಂದ್‌ ತಲೆ ಕಾಲು ದೇಹಕ್ಕೆ ಗಂಭೀರ ಪೆಟ್ಟಾಗಿ ವಿಪರೀತ ರಕ್ತ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿದ್ದ ಆನಂದ್‌ ಸಂಬಂಧಿ ಮಲ್ಲೇಶಪ್ಪ ಎಂಬುವವರು ಕೊಡಿಗೇನಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಎಫ್‌ಐಆರ್‌ ( ಸಂ.0114/2025)  ದಾಖಲಾಗಿದೆ . ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರ್‌ ಮಾಡಿ ಮೃತನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಧುಗಿರಿ ಆಸ್ಪತ್ರೆಗೆ ರವಾನಿಸಿದ್ದಾರೆ. . ಡಿವೈಎಸ್‌ಪಿ ಮಂಜುನಾಥ್‌ ಹಾಗೂ ಐಓ ಹನುಮಂತರಾಯಪ್ಪ ಸ್ಥಳಕ್ಕೆ ಭೇಟಿ ನೀಡಿದ್ದರು.

 

ಪ್ರತಿಭಟನೆ

   ವಾಹನ ಹತ್ತಿಸಿ ಆನಂದ್‌ ಕೊಲೆಗೆ ಗ್ರಾಪಂ ಸದಸ್ಯ ನಾಗೇಶ್‌ ಹಾಗೂ ಆತನ ತಂದೆ ಮತ್ತು ತಾಯಿ ಇಬ್ಬರೂ ಕಾರಣವಾಗಿದ್ದು, ಅವರನ್ನೂ ಕೂಡಲೇ ಬಂಧಿಸಬೇಕೆಂದೂ ಅಲ್ಲಿವರೆಗೂ ಮಧುಗಿರಿ ಶವಾಗಾರದಲ್ಲಿರುವ ಆನಂದ್‌ ಶವವನ್ನು ಪಡೆದುಕೊಳ್ಳುವುದಿಲ್ಲವೆಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಅಂಜನಮೂರ್ತಿ ಹಾಗೂ ಪ್ರಧಾನ ಕಾರ್ಯದರ್ಶಿ ಸುಧಾಕರ್‌ ಮತ್ತು ಸ್ಥಳೀಯ ಮುಖಂಡರು ಕೊಡಿಗೇನಹಳ್ಳಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಪೊಲೀಸ್‌ ಅಧಿಕಾರಿಗಳನ್ನುಒತ್ತಾಯಿಸಿದ್ದಾರೆ