ಈ ಸೋಲಾರ್ ಕಂಪನಿಗಳೆಂಬ ತೋಳಗಳಿಂದ  ಪಾವಗಡ ತಾಲೂಕಿನ ರೈತರನ್ನು ಬಚಾವ್ ಮಾಡಿ !?

ಈ ಸೋಲಾರ್ ಕಂಪನಿಗಳೆಂಬ ತೋಳಗಳಿಂದ ಪಾವಗಡ ತಾಲೂಕಿನ ರೈತರನ್ನು ಬಚಾವ್ ಮಾಡಿ !?

ಈ ಸೋಲಾರ್ ಕಂಪನಿಗಳೆಂಬ ತೋಳಗಳಿಂದ  ಪಾವಗಡ ತಾಲೂಕಿನ ರೈತರನ್ನು ಬಚಾವ್ ಮಾಡಿ !?

ಪಾವಗಡ ತಾಲೂಕಿನಲ್ಲಿ ಸೌರ ವಿದ್ಯುತ್ ಉತ್ಪಾದಿಸುವ ಸಲುವಾಗಿ ಕೆಎಸ್‌ಪಿಡಿಸಿಎಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಮೆ. ಆದ್ಯ ಸೋಲಾರ್ ಎನರ್ಜಿ ಪ್ರೆöÊವೇಟ್ ಲಿಮಿಟೆಡ್ ಎಂಬ ದಕ್ಷಿಣ ದಿಲ್ಲಿಯಲ್ಲಿ ಕಚೇರಿ ಹೊಂದಿರುವ ಕಂಪನಿಯೊAದು ಪಾವಗಡ ತಾಲೂಕಿನ ಕ್ಯಾತಗಾನಚೆರ್ಲು ಮತ್ತು ವಲ್ಲೂರು ಗ್ರಾಮಗಳಿಗೆ ಸೇರಿದ ರೈತರ 1500 ಎಕರೆ ಜಮೀನನ್ನು ಪಾವಗಡದ ಎಸ್‌ಬಿಐನಲ್ಲಿ ಅಡಮಾನ ಮಾಡಿ 1045 ಕೋಟಿ ರೂ. ಅವಧಿ ಸಾಲ ಮತ್ತು 50 ಕೋಟಿ ರೂ. ದುಡಿಮೆ ಬಂಡವಾಳವನ್ನು ಸಾಲವಾಗಿ ಪಡೆದುಕೊಂಡಿದೆ. ಈ ನೂರಾರು ಅಮಾಯಕ ರೈತರ ಸಾವಿರಾರು ಎಕರೆ ಜಮೀನುಗಳನ್ನು  ಅಕ್ರಮವಾಗಿ ಅಡಮಾನ ಮಾಡಿದ ಮತ್ತು ಹೀಗೆ ಕಾನೂನು ಬಾಹಿರವಾಗಿ ಅಡಮಾನ ಮಾಡಿಸಿಕೊಂಡು ರೂ.1095 ಕೋಟಿ ಸಾಲ ಬಿಡುಗಡೆ ಮಾಡಿದ ಮತ್ತು ಇಂಥ ವಹಿವಾಟು ಅಕ್ರಮ ಅಂತ ಗೊತ್ತಿದ್ದರೂ ನೊಂದಣಿ ಮಾಡಿಕೊಟ್ಟವರೆಲ್ಲರ ಮೇಲೆ ಮತ್ತು ರೈತರಿಂದ ಜಮೀನುಗಳನ್ನು ತನ್ನ ಹೆಸರಿಗೆ ಗುತ್ತಿಗೆ ಹಾಕಿಸಿಕೊಂಡಿರುವ ಕೆಎಸ್‌ಪಿಡಿಸಿಎಲ್ ವಿರುದ್ಧವೂ ಈ ನೆಲದ ಅಪರಾಧ ಕಾನೂನುಗಳಡಿ ಕ್ರಮ ಜರುಗಿಸಬೇಕು

ಈ ಸೋಲಾರ್ ಕಂಪನಿಗಳೆಂಬ ತೋಳಗಳಿಂದ 
ಪಾವಗಡ ತಾಲೂಕಿನ ರೈತರನ್ನು ಬಚಾವ್ ಮಾಡಿ !?


ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ

ಆಗ ತುಮಕೂರಿನಿಂದ ಪಾವಗಡಕ್ಕೆ ಮೊದಲ ಬಸ್ಸು ಬೆಳಗಿನ ಜಾವ ಐದು ಗಂಟೆಗೆ ಹೊರಡುತ್ತಿತ್ತು. ಆಗ ಆ ರೂಟಿಗೆ ಇದ್ದದ್ದೇ ಪ್ರೈವೇಟ್ ಬಸ್ಸುಗಳು, ಒಂದು ಎಂಎಜಿ ಮತ್ತೊಂದು ಅನಿತಲಕ್ಷ್ಮಿ, ಖಾಸಗಿ ಬಸ್ಸು, ಪ್ರೈವೇಟ್ ಬಸ್ಸು, ಸಾವ್ಕಾರಿ ಬಸ್ಸು, ಸಿವಿಲ್ ಬಸ್ಸು ಅಂತೆಲ್ಲ ಕರೆಯಲಾಗುತ್ತಿದ್ದ ಆ ಬಸ್ಸುಗಳಿಗೆ ಪ್ರಯಾಣಿಕರನ್ನು ಜೋರು ದನಿಯಲ್ಲಿ ಕರೆದು ಪೈಪೋಟಿಯ ಮೇಲೆ ತಂತಮ್ಮ ಬಸ್ಸುಗಳಿಗೆ ಹತ್ತಿಸುವ ಹತ್ತಿಸುವುದೇನೂ ಹೆಚ್ಚೂ ಕಮ್ಮಿ ಒಳಕ್ಕೆ ದಬ್ಬುವ ಕೆಲಸವನ್ನು ಕೆಲವರು ಮಾಡುತ್ತಿದ್ದರು, ಅವರನ್ನು ಏನಂತ ಕರೆಯಬೇಕೋ ಗೊತ್ತಿಲ್ಲ, ಅವರು ಬಸ್ಸಿನ ಕಂಡಕ್ಟರೂ ಅಲ್ಲ, ಏಜೆಂಟರೂ ಅಲ್ಲ, ಕ್ಲೀನರ್‌ಗಳು ಮೊದಲೇ ಅಲ್ಲ, ಅವರು ಒಂದು ರೂಟಿನ ಬಸ್ ತಲುಪುವ ಊರುಗಳ ಹೆಸರುಗಳನ್ನು ಆಕರ್ಷಕವಾಗಿ ಕರೆಯುತ್ತಿದ್ದರು. ಅಂಥವರಲ್ಲಿ ಒಬ್ಬ ನನ್ನ ಗಮನ ಸೆಳೆದಿದ್ದ.


ಆಗ ಎಂದೆನೆಲ್ಲ, ಅದು 1988-89ರ ಅವಧಿ, ನಾನಾಗ ತುಮಕೂರಿನ ಒಂದು ದಿನಪತ್ರಿಕೆಯಲ್ಲಿ ವರದಿಗಾರನಾಗಿದ್ದೆ. ವರದಿಗಾರ ಅಂತ ಕೆಲಸಕ್ಕೆ ಸೇರಿದರೂ, ನಮಾಜು ಮಾಡಲು ಹೋಗಿ ಮಸೀದಿ ಮೈಮೇಲೆ ಕೆಡವಿ ಕೊಂಡವನಂತೆ ನಾನೇ ಎಲ್ಲವನ್ನೂ ಮೇಲೆಳೆದುಕೊಂಡು ಸ್ವಘೋಷಿತ ಮ್ಯಾನೇಜರ್ ಆಗಿಬಿಟ್ಟಿದ್ದೆ. ಪತ್ರಿಕೆಯ ಪ್ರಸಾರ ಹೆಚ್ಚಿಸುವುದು ಮತ್ತು ಅದಕ್ಕಿಂತ ಮುಖ್ಯವಾಗಿ ಪತ್ರಿಕೆಯನ್ನು ತುಮಕೂರು ನಗರದ ಕೇಂದ್ರ ಭಾಗದಿಂದ ಎಲ್ಲ ಹೊರವಲಯಗಳಲ್ಲಿ ಹಂಚುವ ವ್ಯವಸ್ಥೆ ಮಾಡುವುದು ಮತ್ತು ಎರಡನೇ ಹಂತದಲ್ಲಿ ಜಿಲ್ಲೆಯ ತಾಲೂಕುಗಳಲ್ಲಿಯೂ ಪತ್ರಿಕೆಯ ಪ್ರಸಾರವನ್ನು ಆರಂಭಿಸುವುದು ನನ್ನ ಹಂಬಲವಾಗಿತ್ತು. ಆ ನಿಟ್ಟಿನಲ್ಲಿ ಪಾವಗಡದಲ್ಲೂ ಪತ್ರಿಕೆ ವಿತರಿಸುವ ಹಾಗೂ ವರದಿ ಕಳಿಸುವವರನ್ನು ತಲಾಶ್ ಮಾಡಿ ನೇಮಿಸುವ ಸಲುವಾಗಿ ಹಲವಾರು ದಿನ ನಿರಂತರ ಒಂದೈವತ್ತು ಪ್ರತಿಯ ಬಂಡಲು ಹಿಡಿದುಕೊಂಡು ಪಾವಗಡಕ್ಕೆ ಹೋಗುತ್ತಿದ್ದೆ. ಅಲ್ಲಿ ಬಾಡಿಗೆ  ಬೈಸಿಕಲ್ ಒಂದನ್ನು ಮಾಡಿಕೊಂಡು ನಾನೇ ಪತ್ರಿಕೆ ವಿತರಿಸಿ, ಒಂದಷ್ಟು ಸುದ್ದಿಗಳನ್ನು ಸಂಗ್ರಹಿಸಿಕೊಂಡು ಹಿಂದಿರುಗಿ, ಅವುಗಳನ್ನು ಮರುದಿನದ ಸಂಚಿಕೆಯಲ್ಲಿ ಪ್ರಕಟಿಸುತ್ತಿದ್ದೆ. ಪತ್ರಿಕೆ ಜನರ ಗಮನ ಸೆಳೆಯುತ್ತಿದ್ದಂತೆ ಕೆಲವು ದಿನಗಳ ನಂತರ ಅಲ್ಲೊಬ್ಬರು ವರದಿಗಾರರು ಮತ್ತು ಏಜೆಂಟರು ಸಿಕ್ಕಿದರು.


ಹೀಗೆ ಹೋಗುತ್ತಿದ್ದ ಆ ದಿನಗಳು ಚಳಿಗಾಲದ ದಿನಗಳಾಗಿದ್ದು, ಬೆಳಗಿನ ಜಾವ ನಾಲ್ಕೂವರೆಗೇ ತುಮಕೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಆ ರೂಟ್ ಕೂಗುವ ಆತ, “ ಯರ‍್ರೀ ಗಡ ಗಡ ಪಾವಗಡ” ಅಂತ ಗಟ್ಟಿಯಾಗಿ ಕೂಗುತ್ತಿದ್ದ. ಜಿಲ್ಲಾ ಕೇಂದ್ರ ತುಮಕೂರಿನಲ್ಲಿ ಚಳಿ ಗಡ ಗಡ ಎನ್ನುವಂತಿದ್ದರೂ 105 ಕಿಮೀ ದೂರದ ಸುತ್ತ ದೊಡ್ಡದೊಂದು ಕೋಟೆ ಮತ್ತು ಬೃಹತ್ ಬಂಡೆಗಳಿಂದ ಆವೃತವಾಗಿದ್ದ ಪಾವಗಡ ತಲುಪುವ ಹೊತ್ತಿಗೆ ಸರ‍್ಯನ ಬಿಸಿಲಿಗೆ ಕಣ್ಣು ಬಿಡಲಾಗುತ್ತಿರಲಿಲ್ಲ. ಜಿಲ್ಲಾ ಕೇಂದ್ರಕ್ಕೆ 105 ಕಿಮೀ ದೂರದಲ್ಲಿ ತಾಲೂಕು ಕೇಂದ್ರವಿರುವುದು ತುಮಕೂರು ಜಿಲ್ಲೆಯಲ್ಲಿ ಮಾತ್ರವೇ ಅಂತ ಕಾಣುತ್ತದೆ.


ಇಂಥಾ ಪಾವಗಡದಲ್ಲಿ ಮಾರ್ಚಿ ಏಪ್ರಿಲ್ ತಿಂಗಳ ಬಿರುಬಿಸಿಲಲ್ಲಿ ಆಗ ಭಂಭಂ ಬಾಬಾ ಕ್ಯಾಂಪ್ ಏರ್ಪಡಿಸಲಾಗಿತ್ತು. ಭಂ ಭಂ ಬಾಬಾ ಮೊದಲಿಗೆ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿದ್ದು, ನಂತರ ಸನ್ಯಾಸಿಯಾಗಿದ್ದರೆಂದೂ, ಸಾವಿರಾರು ಸಂಖ್ಯೆಯಲ್ಲಿ ಧಾವಿಸಿ ಬರುತ್ತಿದ್ದ ಭಕ್ತಾದಿಗಳಿಗಾಗಿಯೇ ತೀರಾ ಅಗ್ಗದ ದರದಲ್ಲಿ ಚಿತ್ರಾನ್ನ, ಮೆಣಸಿನಕಾಯಿ ಬಜ್ಜಿ, ಉಪ್ಪಿಟ್ಟು ಕೊಡುವ ಕ್ಯಾಂಟೀನ್ ಕೌಂಟರ್‌ಗಳನ್ನು ಮಠದ ವತಿಯಿಂದಲೇ ಏರ್ಪಡಿಸಲಾಗಿತ್ತು. ತಿಂಡಿಯ ರೇಟು ಎಷ್ಟು ಅಂತೀರಾ, ನಮ್ಮ ಸಿದ್ದರಾಮಯ್ಯನವರ ಇಂದಿರಾ ಕ್ಯಾಂಟೀನಿಗಿಂತ ಚೀಪ್ ಕಣ್ರೀ, ಚಿತ್ರಾನ್ನಕ್ಕೆ ನಾಲ್ಕಾಣೆ, ಖಾರದ ಮಿರ್ಚಿಗೆ ಐದೇ ಪೈಸೆ. ಆ ಉರಿಯುತ್ತಿದ್ದ ಬಿರು ಬಿಸಿಲು ಮತ್ತು ಜನರ ನಡೆದಾಟದಿಂದ ಮೈದಾನದಲ್ಲಿ ಏಳುತ್ತಿದ್ದ ಧೂಳಿನ ಮೋಡಗಳ ನಡುವೆ ನಾಲಿಗೆ ಚುರುಗುಟ್ಟುವ ಚಿತ್ರಾನ್ನ ಮತ್ತು ಮಿರ್ಚಿಯ ನೆನಪು ಈಗ ತಿಂದಂತೆಯೇ ಇದೆ.


ಪೆಟ್ಟಿಗೆ ಅಂಗಡಿಯ ಮುಂದೆ ಕುಕ್ಕುರುಗಾಲಲ್ಲಿ ಕೂತು, ಯಾವುದೋ ಪತ್ರಿಕೆಯೊಂದರಲ್ಲಿ ಕಣ್ಣು ಕೀಲಿಸಿದ್ದ ಸುಮಾರು ಅರವತ್ತು ವರ್ಷ ದಾಟಿದ್ದ ಆಸಾಮಿಯ ಮುಖದ ಮುಂದಕ್ಕೆ ನನ್ನ ಕೈಯಲ್ಲಿದ್ದ ಕೇವಲ ಎರಡು ಪುಟಗಳ ಬ್ಲಾಕ್ ಅಂಡ್ ವೈಟ್ ಲೋಕಲ್ ದಿನಪತ್ರಿಕೆಯನ್ನು ಹಿಡಿದೆ. “ಏಮಿ” ಅಂದ, ಇದು ಇಂಥದು, ಈ ತರಕ್ಕೀತರಾ, ಅಂತ ವಿವರಿಸಿದೆ. “ ಓ ಅನ್ನುತ್ತ ಕೈಯಲ್ಲಿದ್ದ ಪತ್ರಿಕೆಯನ್ನು ಮುದುರಿ ನಾನು ಕೊಟ್ಟ ಪತ್ರಿಕೆಯನ್ನು ಹಿಡಿದು ನೋಡಿದ. ಪತ್ರಿಕೆಯ ಲೀಡ್ ಸುದ್ದಿಯನ್ನೂ ನನ್ನನ್ನೂ ಒಂದು ಸಲ ನೋಡಿ, ಹತ್ತಿರ ಕರೆದು, “ ನಿಂಗೆ ಕಿಡಿ ಶೇಷಣ್ಣ ಗೊತ್ತಾ” ಅಂದ, “ ಇಲ್ಲ” ಎಂದೆ ತಲೆಕೆರೆಯುತ್ತ. “ಬರೆದರೆ ಹಂಗೆ ಬರೀಬೇಕು, ಓದ್ತಾ ಇದ್ರೆ ಕೂದಲು ಕಡ್ಡಿ ಹಂಗೆ ನಿಂತ್ಕಂಬೇಕು” ಅಂತಂದ. ಇವನೇ ನಿಜವಾದ ಓದುಗ ಅಂತನ್ನಿಸಿ, “ ಇವತ್ತು ಅಡ್ಜಸ್ಟ್ ಮಾಡಿಕೊಳ್ಳಿ,ನಾಳೆಯಿಂದ ನೀವು ಹೇಳಿದಂತೇ ಸುದ್ದಿ ಬರೆದು ಹಾಕ್ತೀವಿ” ಅಂತ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದೆ.


ಪಾವಗಡದ ಬಿರುಬಿಸಿಲನ್ನೇ ಬಂಡವಾಳ ಮಾಡಿಕೊಂಡು ಸೋಲಾರ್ ಪ್ಯಾನೆಲ್‌ಗಳನ್ನು ಜೋಡಿಸಿ, ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಸೌರಶಕ್ತಿ ವಿದ್ಯುತ್ ಅಭಿವೃದ್ದಿ ನಿಗಮದ ಉಸ್ತುವಾರಿಯಲ್ಲಿ ಹತ್ತಾರು ಖಾಸಗಿ ಕಂಪನಿಗಳು ಅವರ ಶಕ್ತಾನುಸಾರ ರೈತರÀ ಜಮೀನುಗಳನ್ನು ಎಕರೆ ಲೆಕ್ಕದಲ್ಲಿ ದೀರ್ಘಾವಧಿಗೆ ಗುತ್ತಿಗೆ ಹಾಕಿಸಿಕೊಂಡು ಸೋಲಾರ್ ಪ್ಯಾನೆಲ್‌ಗಳನ್ನು ಜೋಡಿಸಿಕೊಂಡಿವೆ. ಹೀಗೆ ಸಾವಿರಾರು ಎಕರೆ ಒಂದು ಸಣ್ಣ ಹುಲ್ಲು ಗರಿಕೆಯೂ ಕಣ್ಣಿಗೆ ಕಾಣದಂತೆ , ಒಂದಿAಚೂ ನೆರಳೂ ಇಲ್ಲದಂತೆ ಎಲ್ಲ ಸಸ್ಯ ಸಂಕುಲಗಳನ್ನು ನಿರ್ನಾಮ ಮಾಡಿರುವುದರಿಂದ ಸೂಕ್ಷö್ಮ ಪರಿಸರವೆಲ್ಲ ನಾಶವಾಗಿ ಬಹಳ ದೊಡ್ಡ ಬೆಲೆಯನ್ನು ತೆರಬೇಕಾಗಿ ಬರುತ್ತದೆ ಎಂದು ಪರಿಸರವಾದಿಗಳು ಎಚ್ಚರಿಸುತ್ತಲೇ ಇದ್ದಾರೆ.


ತಿರುಮಣಿಯ ದಿಕ್ಕಿನಲ್ಲಿ 53 ಚದರ ಕಿಲೋ ಮೀಟರ್ ವಿಸ್ತೀರ್ಣದಲ್ಲಿ , ಸುಮಾರು 15,000 ಕೋಟಿ ವೆಚ್ಚದಲ್ಲಿ, 2016-19ರ ಅವಧಿಯಲ್ಲಿ ನಿರ್ಮಿಸಿರುವ ಸೋಲಾರ್ ಪಾರ್ಕ್ ಏಶ್ಯಾದಲ್ಲೇ ಅತ್ಯಂತ ದೊಡ್ಡದಂತೆ. ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ನಡೆದ ಯೋಜನೆ ಇದು. ಕ್ರೆಡೆಲ್ ಎಂಬ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವನ್ನು ಅನುಸರಿಸಿ ರಚಿಸಲಾಗಿರುವ ಕರ್ನಾಟಕ ಸೋಲಾರ್ ವಿದ್ಯುತ್ ಅಭಿವೃದ್ಧಿ ನಿಗಮ ನಿಯಮಿತ(ಕೆಎಸ್‌ಪಿಡಿಸಿಎಲ್) ರೈತರ ಜಮೀನುಗಳನ್ನು ತನ್ನ ಹೆಸರಿಗೆ ಗುತ್ತಿಗೆ ಹಾಕಿಕೊಂಡು, ಎಕರೆಗೆ ವರ್ಷಕ್ಕೆ ರೂ.23,000ದಂತೆ ಗುತ್ತಿಗೆ ಮೊತ್ತ ಪಾವತಿಸುವ ಕರಾರು ಮಾಡಿಕೊಂಡಿದೆ. ಎರಡು ವರ್ಷಕ್ಕೊಮ್ಮೆ 5% ಗುತ್ತಿಗೆ ಮೊತ್ತ ಹೆಚ್ಚುತ್ತ ಬಂದು ಇದೀಗ ರೂ.26,000 ದೊರಕುತ್ತಿದೆ. ಈ ನಿಗಮವು ಹೀಗೆ ಗುತ್ತಿಗೆ ಹಾಕಿಸಿಕೊಂಡಿರುವ ರೈತರ ಜಮೀನುಗಳಲ್ಲಿ ಸೋಲಾರ ಪ್ಯಾನೆಲ್‌ಗಳನ್ನು ಅಳವಡಿಸಿ ಒಟ್ಟು 2050 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಖಾಸಗಿ ಕಂಪನಿಗಳಿಗೆ ಮಂಜೂರಾತಿ ನೀಡಿದೆ.


ಯೋಜನೆಯನ್ನು ಅನುಷ್ಟಾನಗೊಳಿಸುತ್ತಿರುವ ಸಂದರ್ಭದಲ್ಲಿ ಈ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಬ್ಬರು  ಇಲ್ಲೇ ಈ ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದರೆ ಈ ಯೋಜನೆಯ ಮಹತ್ವ ಮತ್ತು ಗಾತ್ರ ಅರ್ಥ ಮಾಡಿಕೊಳ್ಳಿ. ಅವರು ಗೆಲ್ಲಲಿಲ್ಲ ಬಿಡಿ.


ಟಾಟಾ, ಆದಾನಿಯಂಥ ಬೃಹತ್ ಉದ್ಯಮ ಸಂಸ್ಥೆಗಳ ಜೊತೆಗೆ ಹೆಸರೇ ಕೇಳಿರದ, ಇಲ್ಲಿ ಯೋಜನೆ ಶುರುವಾದ ಮೇಲಷ್ಟೇ ಹುಟ್ಟಿಕೊಂಡಿರುವ ಹಲವಾರು ಬೇನಾಮಿ ಷೆಲ್ ಕಂಪನಿಗಳೂ ಇಲ್ಲಿ ವಿದ್ಯುತ್ ಉತ್ಪಾದಿಸತೊಡಗಿವೆ. ಅಂಥ ಕಂಪನಿಗಳಲ್ಲಿ ಒಂದು ತಾನು ಗುತ್ತಿಗೆಗೆ ಹಾಕಿಸಿಕೊಂಡ ರೈತರ ಜಮೀನುಗಳನ್ನೇ ಅಡಮಾನ ಮಾಡಿ ಒಂದಲ್ಲ ಎರಡಲ್ಲ ಒಂದುಸಾವಿರದ ತೊಂಬತ್ತೆöÊದು ಕೋಟಿ ಮೊತ್ತದ ಸಾಲ ಪಡೆದಿತ್ತು ಎಂಬ ಷಾಕಿಂಗ್ ಸುದ್ದಿ ಹೊರಬಿದ್ದಿದೆ. ಪಾವಗಡವನ್ನು ಒಂದು ಕಾಲಕ್ಕೆ ಕಾಡುತ್ತಿದ್ದ ತೋಳಗಳು ಈಗಿಲ್ಲ, ಈ ತೋಳಗಳ ಬದಲಿಗೆ ಸೋಲಾರ್ ಎನರ್ಜಿ ಕಂಪನಿಗಳೇ ನೈಜ ತೋಳಗಳಾಗುವ ಎಲ್ಲ ಸೂಚನೆಗಳನ್ನು ಈ ಹಗರಣ ನೀಡಿದೆ.


ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘವು ಶನಿವಾರ ತುಮಕೂರಿನಲ್ಲಿ ಈ ಆಘಾತಕಾರಿ ಸಂಗತಿಯನ್ನು ಮಾಧ್ಯಮದ ಮುಂದಿರಿಸಿದೆ. ದೊಡ್ಡ ಹಗರಣವೊಂದರ ಸ್ವರೂಪ ಪಡೆಯಬಹುದಾದ ಈ ಪ್ರಕರಣದ ವಿವರ ಹೀಗಿದೆ.


ಪಾವಗಡ ತಾಲೂಕಿನಲ್ಲಿ ಸೌರ ವಿದ್ಯುತ್ ಉತ್ಪಾದಿಸುವ ಸಲುವಾಗಿ ಕೆಎಸ್‌ಪಿಡಿಸಿಎಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಮೆ. ಆದ್ಯ ಸೋಲಾರ್ ಎನರ್ಜಿ ಪ್ರೆöÊವೇಟ್ ಲಿಮಿಟೆಡ್ ಎಂಬ ದಕ್ಷಿಣ ದಿಲ್ಲಿಯಲ್ಲಿ ಕಚೇರಿ ಹೊಂದಿರುವ ಕಂಪನಿಯೊAದು ಪಾವಗಡ ತಾಲೂಕಿನ ಕ್ಯಾತಗಾನಚೆರ್ಲು ಮತ್ತು ವಲ್ಲೂರು ಗ್ರಾಮಗಳಿಗೆ ಸೇರಿದ ರೈತರ 1500 ಎಕರೆ ಜಮೀನನ್ನು ಪಾವಗಡದ ಎಸ್‌ಬಿಐನಲ್ಲಿ ಅಡಮಾನ ಮಾಡಿ 1045 ಕೋಟಿ ರೂ. ಅವಧಿ ಸಾಲ ಮತ್ತು 50 ಕೋಟಿ ರೂ. ದುಡಿಮೆ ಬಂಡವಾಳವನ್ನು ಸಾಲವಾಗಿ ಪಡೆದುಕೊಂಡಿದೆ. ಈ ಕುರಿತಂತೆ 2.12.2021ರಂದು ಪಾವಗಡದ ನೊಂದಣಾಧಿಕಾರಿ ಕಚೇರಿಯಲ್ಲಿ ನೊಂದಣಿ ಮಾಡಲಾಗಿದೆ.(ದಾಖಲೆ ಗಮನಿಸಿ) ಕೇವಲ ಪ್ಯಾನೆಲ್‌ಗಳನ್ನು ಸ್ಥಾಪಿಸಿ ಸೌರ ವಿದ್ಯುತ್ ಉತ್ಪಾದನೆ ಮಾಡಲು ಗುತ್ತಿಗೆ ಪಡೆದಿರುವ ನೂರಾರು ರೈತರ ಜಮೀನುಗಳನ್ನು ಅವರ ಗಮನಕ್ಕೆ ತಾರದೇ ಹೀಗೆ ಅಡಮಾನ ಮಾಡಿ ಸಾವಿರಾರು ಕೋಟಿ ರೂ ಸಾಲ ಪಡೆಯಲು ಈ ಕಂಪನಿಗೆ ಯಾವುದೇ ಕಾನೂನು ಬದ್ಧ ಹಕ್ಕು ಇರುವುದಿಲ್ಲ ಮತ್ತು ಇಡೀ ಸಾಲ ಪಡೆದ ಮತ್ತು ಸಾಲ ನೀಡಿದ ಪ್ರಕ್ರಿಯೆಯೇ ಅಕ್ರಮವಾದ್ದರಿಂದ ಇದು ನಿಜಕ್ಕೂ ದೊಡ್ಡದೊಂದು ಹಗರಣವೇ ಸರಿ. 


ಹೀಗೆ ಸದರಿ ಕಂಪನಿ ಮತ್ತು ಎಸ್‌ಬಿಐ ಇಂಥದ್ದೊAದು ವಹಿವಾಟು ಮಾಡಿಕೊಂಡ ಸಂಗತಿ ಜಮೀನು ಮಾಲಿಕರ ಗಮನಕ್ಕೆ ಬಂದು ಅವರು ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಆರ್.ಪಿ. ಸಾಂಬಸದಾಶಿವರೆಡ್ಡಿ ಹಾಗೂ ಡಾ.ಡಿ.ಪರಮೇಶ್ ನಾಯ್ಕ್ ಗಮನಕ್ಕೆ ತಂದರು.ಇವರು ಈ ಸಂಗತಿಯನ್ನು ಕೆಎಸ್‌ಪಿಡಿಸಿಎಲ್ ಗಮನಕ್ಕೆ ತಂದು, ತುರ್ತು ಸಭೆಗಳನ್ನು ನಡೆಸಿ, ಸದರಿ ವಂಚಕ ಕಂಪನಿ ಹಾಗೂ ಕಾನೂನು ಬಾಹಿರವಾಗಿ ಸಾಲ ನೀಡಿದ ಎಸ್‌ಬಿಐ ಅಧಿಕಾರಿಗಳ ಸಭೆ ನಡೆಸಿ, ಸಾಲಕ್ಕೆ ಈಡು ಮಾಡಲಾಗಿದ್ದ ಜಮೀನುಗಳನ್ನು ಋಣಮುಕ್ತಗೊಳಿಸುವಂತೆ ಒತ್ತಾಯಿಸಿದರು.ಸದರಿ ಕಂಪನಿಯವರು ಅವತ್ತು ಇವತ್ತು ಅಂಥ ಸತಾಯಿಸಿ ಕಡೆಗೆ ಇದೇ ಜನವರಿ ಆರರಂದು ನೊಂದಣಿ ಸಂ. 4737ರ ಅಡಿಯಲ್ಲಿ ಖುಲಾಸೆ ಮಾಡಿಕೊಟ್ಟಿದ್ದಾರೆ. 


ಈ ಸ್ಫೋಟಕ ಸಂಗತಿಯನ್ನು ಸಂಘದ ಪದಾಧಿಕಾರಿಗಳು ಬೆಳಕಿಗೆ ತಂದರೇನೋ ಸರಿ, ಅಮಾಯಕ ರೈತರ ಸಾವಿರಾರು ಎಕರೆ ಜಮೀನುಗಳನ್ನು  ಅಕ್ರಮವಾಗಿ ಅಡಮಾನ ಮಾಡಿದ ಮತ್ತು ಹೀಗೆ ಕಾನೂನು ಬಾಹಿರವಾಗಿ ಅಡಮಾನ ಮಾಡಿಸಿಕೊಂಡು ರೂ.1095 ಕೋಟಿ ಸಾಲ ಬಿಡುಗಡೆ ಮಾಡಿದ ಮತ್ತು ಇಂಥ ವಹಿವಾಟು ಅಕ್ರಮ ಅಂತ ಗೊತ್ತಿದ್ದರೂ ನೊಂದಣಿ ಮಾಡಿಕೊಟ್ಟವರೆಲ್ಲರ ಮೇಲೆ ಮತ್ತು ರೈತರಿಂದ ಜಮೀನುಗಳನ್ನು ತನ್ನ ಹೆಸರಿಗೆ ಗುತ್ತಿಗೆ ಹಾಕಿಸಿಕೊಂಡಿರುವ ಕೆಎಸ್‌ಪಿಡಿಸಿಎಲ್ ವಿರುದ್ಧವೂ ಈ ನೆಲದ ಅಪರಾಧ ಕಾನೂನುಗಳಡಿ ಕ್ರಮ ಜರುಗಿಸಬೇಕು ಎಂದು ಸಂಘದ ಸಂಚಾಲಕ ಹಾಗೂ ಪರಿಸರ ಕಾನೂನು ಸಲಹೆಗಾರ ಡಾ.ಡಿ.ಪರಮೇಶ್ ನಾಯ್ಕ್ ಒತ್ತಾಯಿಸಿದ್ದಾರೆ.


ರೈತರು ಪುಟ್ಟದೊಂದು ಸಾಲ ಕೇಳಲು ಹೋದರೆ, ಅವರ ಹೆಸರಿನಲ್ಲಿ ಜಮೀನುಗಳ ಎಲ್ಲ ಹಕ್ಕು ಮತ್ತು ಮೂಲದಾಖಲೆಗಳಿದ್ದರೂ ಕೃಷಿ ಜಮೀನಿನ ಮೇಲೆ ಕೃಷಿ ಮತ್ತು ಸಂಬಂಧಿತ ಸಾಲ ನೀಡಲಾಗುವುದಿಲ್ಲ ಎಂದು ನಿರಾಕರಿಸಿ ಹೊರಗಟ್ಟುವ ರಾಷ್ಟಿçÃಕೃತ ಬ್ಯಾಂಕುಗಳು ಅದು ಹೇಗೆ ಯರ‍್ಯಾರೋ ನೂರಾರು ಮಂದಿ ಹೆಸರಿನಲ್ಲಿರುವ ಸಾವಿರಾರು ಎಕರೆ ಜಮೀನುಗಳನ್ನು ಅಡಮಾನ ಮಾಡಿಕೊಂಡು ಮೂಲ ಮಾಲೀಕರ ಸಮ್ಮತಿ ಮತ್ತು ಸಹಿ ಇಲ್ಲದೇ ಸಾವಿರಾರು ಕೋಟಿ ರೂಗಳ ಸಾಲವನ್ನು ಹೇಗೆ ಮಂಜೂರು ಮಾಡುತ್ತಾರೆ ಎಂಬುದೇ ವಿಸ್ಮಯದ ಸಂಗತಿ ಅಲ್ಲವೇ?


ಇಂಥದ್ದೊಂದು ಅಕ್ರಮ ನಿಗಮದ ಗಮನಕ್ಕೆ ಬಾರದೇ ನಡೆಯುವುದು ಸಹಾ ಅಸಾಧ್ಯ ಎನ್ನುವ ಪರಮೇಶ್ ನಾಯ್ಕ್, ಇಂಥಾ ಕಂಪನಿಗಳು ಹೀಗೆ ಸಾವಿರಾರು ಕೋಟಿ ರೂ ಸಾಲ ಎತ್ತಿ, ಗಂಟು ಸಮೇತ ದೇಶ ಬಿಟ್ಟು ಪರಾರಿಯಾದರೆ , ಈ ಪಾಪದ ರೈತರು ಜೀವನ ಪರ್ಯಂತ ಹಗಲಿರುಳು ಜೀತ ಮಾಡಿ ಈ ಸಾಲ ತೀರಿಸಬೇಕಾ ಅಥವಾ ಇಡೀ ಜಮೀನುಗಳನ್ನು ಕಳೆದುಕೊಳ್ಳಬೇಕಾ ಎಂಬ ಪ್ರಶ್ನೆಗೆ ಉತ್ತರ ನೀಡುವವರು ಯಾರು? 


ಈ ಬೃಹತ್ ಮೊತ್ತದ ಸಾಲಕ್ಕೆ ಅಕ್ರಮವಾಗಿ ಅಡಮಾನ ಮಾಡಿದ್ದ ರೈತರ ಜಮೀನುಗಳನ್ನು ಖುಲಾಸೆ ಮಾಡಿದ ಮಾತ್ರಕ್ಕೇ ಹಗರಣ ಅಂತ್ಯಗೊಂಡಂತಾಗುವುದಿಲ್ಲ. ಇಷ್ಟು ದೊಡ್ಡ ಮೊತ್ತದ ಸಾಲವನ್ನು ಸದರಿ ಕಂಪನಿ ಮರುಪಾವತಿ ಮಾಡಿ ಸಾಲದ ಖಾತೆಯನ್ನು ಮುಕ್ತಾಯ ಮಾಡಿದೆಯೇ, ಅಥವಾ ಈ ಸಾಲಕ್ಕೆ ಮತ್ಯಾವ ಸ್ಥಿರಾಸ್ತಿಯನ್ನು ಈ ವಂಚಕ ಕಂಪನಿ ಅಡಮಾನ ಮಾಡಿದೆ ಎಂಬ ಸಂಗತಿಯೂ ಬೆಳಕಿಗೆ ಬರಬೇಕಿದೆ. ಸರ್ಕಾರ ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಿ, ಉನ್ನತ ಹಂತದ ತನಿಖೆಗೆ ಆದೇಶ ನೀಡಬೇಕೆಂದು ಸಂಘ ಆಗ್ರಹಿಸಿದೆ.

***

ಆದ್ಯ ಸೋಲಾರ್ ಎನರ್ಜಿ ಪ್ರೈವೇಟ್ ಲಿ.
ಇದ್ಯಾವ ಕಂಪನಿ- ಹುಟ್ಟಿದ್ದೆಲ್ಲಿ- ಯಾವಾಗ


ದಿ.2.12.2021ರಂದು ಪಾವಗಡ ತಾಲೂಕಿನ ಕ್ಯಾತಗಾನಚೆರ್ಲು ಮತ್ತು ವಲ್ಲೂರು ಗ್ರಾಮಗಳಿಗೆ ಸೇರಿದ ರೈತರ 1500 ಎಕರೆ ಜಮೀನನ್ನು ಪಾವಗಡದ ಎಸ್‌ಬಿಐನಲ್ಲಿ ಅಡಮಾನ ಮಾಡಿ 1045 ಕೋಟಿ ರೂ. ಅವಧಿ ಸಾಲ ಮತ್ತು 50 ಕೋಟಿ ರೂ. ದುಡಿಮೆ ಬಂಡವಾಳವನ್ನು ಸಾಲವಾಗಿ ಪಡೆದುಕೊಂಡ ಈ ಕಂಪನಿಯ ಸರಳ ಜಾತಕ ಹೀಗಿದೆ.


ದಿಲ್ಲಿಯ ನೊಂದಣಾಧಿಕಾರಿ ಕಚೇರಿಯಲ್ಲಿ ದಿನಾಂಕ 9.03.2018ರಂದು ಕೇವಲ ಒಂದು ಲಕ್ಷ ರೂಪಾಯಿ ಬಂಡವಾಳದಲ್ಲಿ ನೊಂದಣಿಯಾಗಿರುವ ಖಾಸಗಿ ಕಂಪನಿ ಇದು. ವಿದ್ಯುತ್, ಅನಿಲ ಮತ್ತು ನೀರು ಕುರಿತು ಕಂಪನಿಯ ವ್ಯವಹಾರ ಮಾಡುವುದಾಗಿ ನೊಂದಣಿ ಮಾಹಿತಿಯಲ್ಲಿ ಹೇಳಿಕೊಂಡಿದೆ. ದಿಲ್ಲಿಯ ವಿಳಾಸ ಹೀಗಿದೆ ನಂ. 138, ಅನ್ಸಲ್ ಚೇಂಬರ‍್ಸ್-2, ಭಿಕಾಜಿ ಕಾಮಾ ಪ್ಲೇಸ್, ಹೊಸ ದಿಲ್ಲಿ, ದಕ್ಷಿಣ ದಿಲ್ಲಿ, 110066. 


ಬೆಂಗಳೂರಿನಲ್ಲಿ ಈ ಕಂಪನಿಯ ರಿಜಿಸರ್ಡ್ ಕಚೇರಿ ವಿಳಾಸ ಹೀಗಿದೆ: ನಂ.2904, 29ನೇ ಮಹಡಿ, ವರ್ಲ್ಡ್ ಟ್ರೇಡ್ ಸೆಂಟರ್, ಬ್ರಿಗೇಡ್ ಗೇಟ್ ವೇ ಕ್ಯಾಂಪಸ್, ನಂ.26/1, ಡಾ.ರಾಜಕುಮಾರ್ ರಸ್ತೆ,ಮಲ್ಲೇಶ್ವರಂ ,ಬೆಂಗಳೂರು(ಒರಾಯನ್ ಮಾಲ್‌ಗೆ ಲಗತ್ತಾಗಿರುವ ಕಟ್ಟಡ).


ಸೋನಮ್ ಸರೀನ್ ಮತ್ತು ಸೈದಾ ದಿಲಾವರ್ ಮುಲಾನಿ ಎಂಬ ನಿರ್ದೇಶಕರು ದಿನಾಂಕ 23.11.2021ರಂದು ಕಂಪನಿಯ ಬೋರ್ಡ್ ಸಭೆ ನಡೆಸಿ ನೀಡಿದ ಹಕ್ಕಿನನ್ವಯ ಕರಣಂ ರಘುನಾಥ್ ಎಂಬಾತ ಈ ಕಂಪನಿಯ ಅಧಿಕೃತ ಸಹಿದಾರನಾಗಿ ಭೂ ಅಡಮಾನಕ್ಕೆ ಸಹಿ ಮಾಡಿದ್ದು, ಖುಲಾಸೆ ಪತ್ರಕ್ಕೆ ಸಹಿ ಮಾಡಿರುವ ಆಸಾಮಿಯೇ ಬೇರೆ.


ನಮ್ಮ ಜಮೀನುಗಳನ್ನೇ ಅಡಮಾನ ಮಾಡಿ ಸಾಲ ಪಡೆದು ವಂಚಿಸುವ ಇಂಥ ಕಂಪನಿಗಳನ್ನೇ ಬೃಹತ್ ಹೂಡಿಕೆದಾರರು ಅಂಥ ನಮ್ಮ ಸರ್ಕಾರಗಳು ರೆಡ್ ಕಾರ್ಪೆಟ್ ಹಾಸಿ ಬರಮಾಡಿಕೊಳ್ಳುತ್ತವೆ.