ಗೌಪ್ಯವಾಗಿರಿಸಬೇಕಿದ್ದ ಮತದಾರರ ಮಾಹಿತಿ ಖಾಸಗಿ ಕಂಪನಿ ಕೈ ವಶವಾಗಿದ್ದು ಹೇಗೆ?!
ಗೌಪ್ಯವಾಗಿರಿಸಬೇಕಿದ್ದ ಮತದಾರರ ಮಾಹಿತಿ-ಖಾಸಗಿ ಕಂಪನಿ ಕೈ ವಶವಾಗಿದ್ದು ಹೇಗೆ?!
ಸರಕಾರದ ಕಣ್ಣಿಗೆ ಮಣ್ಣೆರಚಿ ಗೌಪ್ಯವಾಗಿ ಇರಿಸಬೇಕಿದ್ದ ಮತದಾರರ ಮಾಹಿತಿಯನ್ನು ಖಾಸಗಿ ಕಂಪನಿಯೊಂದು ದೋಚಿಕೊಂಡಿದೆ. ಪ್ರತಿಧ್ವನಿ ಹಾಗೂ ದಿ ನ್ಯೂಸ್ ಮಿನಿಟ್ ಎಂಬ ಸ್ವತಂತ್ರ ವೆಬ್ ಪೋರ್ಟಲ್ ಗಳು ಈ ಕುರಿತು ತನಿಖಾ ವರದಿಯನ್ನು ಪ್ರಕಟಿಸಿವೆ, ಅದಾದ ಬಳಿಕ ಸರ್ಕಾರ ಆ ಕಂಪನಿಗೆ ನೀಡಿದ್ದ ಆದೇಶ ವಾಪಸ್ ಪಡೆದಿದೆ. ಕಂಪನಿ ಮಾಲಿಕರು ಕಚೇರಿಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ಈ ಕುರಿತು ಪ್ರತಿಧ್ವನಿ ಪ್ರಕಟಿಸಿರುವ ಮಾಹಿತಿ ಇಲ್ಲಿದೆ, ಓದಿ, ಅರ್ಥ ಮಾಡಿಕೊಳ್ಳಿ. ನಿಮ್ಮ ಬಳಿಗೆ ಯಾರಾದರೂ ಮಾಹಿತಿ ಕೇಳಿ ಬಂದಾಗ ಬಾಯಿ ಬಿಡುವ ಮುನ್ನ ತುಸು ಎಚ್ಚರ ವಹಿಸಿ
ಗೌಪ್ಯವಾಗಿರಿಸಬೇಕಿದ್ದ ಮತದಾರರ ಮಾಹಿತಿ
ಖಾಸಗಿ ಕಂಪನಿ ಕೈ ವಶವಾಗಿದ್ದು ಹೇಗೆ?!
ಸರ್ಕಾರಿ ಅಧಿಕಾರಿಗಳು ನಡೆಸಬೇಕಿದ್ದ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಚುನಾವಣೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಸರ್ಕಾರೇತರ ಸಂಸ್ಥೆಗೆ ವಹಿಸಿದ್ದು, ಆ ಸಂಸ್ಥೆಯು ತನ್ನ ಏಜೆಂಟರನ್ನು ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ಬೆಂಗಳೂರಿನ ಸಾವಿರಾರು ಮತದಾರರ ವೈಯಕ್ತಿಕ ಮಾಹಿತಿಯನ್ನು ರಹಸ್ಯವಾಗಿ ಸಂಗ್ರಹಿಸಿದೆ. ಆ ಮೂಲಕ ಮತದಾರರ ಗೌಪ್ಯತೆ ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಸಿಲುಕಿದೆ ಎಂದು ಪ್ರತಿಧ್ವನಿ ಹಾಗೂ ದಿ ನ್ಯೂಸ್ ಮಿನಿಟ್ ಎಂಬ ಸ್ವತಂತ್ರ ವೆಬ್ ಪೋರ್ಟಲ್ ಗಳು ವರದಿ ಮಾಡಿವೆ.
ಈ ಎರಡೂ ಸಂಸ್ಥೆಗಳ ಆರು ಪತ್ರಕರ್ತರು ಸುಮಾರು ಮೂರು ತಿಂಗಳ ಕಾಲ ನಡೆಸಿದ ಜಂಟಿ ತನಿಖೆಯಿಂದ ಈ ಡೇಟಾ ಕಳ್ಳತನಕ್ಕೆ, ಬಿಬಿಎಂಪಿ ನೀಡಿದ ಆದೇಶ ಹೇಗೆ ಸಹಾಯ ಮಾಡಿದೆ ಎಂಬುದು ಬಯಲಾಗಿದೆ.
ಮತದಾರರ ಡೇಟಾ ಖಾಸಗಿ ಕಂಪನಿ ವಶ-ಕಾಂಗ್ರೆಸ್ ತುರ್ತು ಪತ್ರಿಕಾಗೋಷ್ಠಿ ಮತ್ತು ಸಭೆ
ಮತದಾರರ ಪಟ್ಟಿ ನವೀಕರಣ ಕಾರ್ಯಾಚರಣೆಗೆ ಬಿಬಿಎಂಪಿ ನೀಡಿದ ಆದೇಶವನ್ನು ಈ ಎನ್‌ಜಿಒ ದುರುಪಯೋಗಪಡಿಸಿಕೊಂಡಿದ್ದು, ಮತದಾರರಿಗೆ ಅನುಮಾನ ಬರಬಾರದೆಂದು ತನ್ನ ಏಜೆಂಟರನ್ನು ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ಹಲವು ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿಕೊಂಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳ ಮೂಗಿನ ನೇರದಲ್ಲಿ ಹಲವು ತಿಂಗಳಿಂದ ಈ ಅಕ್ರಮ ಸರ್ವೆ ನಡೆದಿದೆಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಚುನಾವಣಾ ಆಯೋಗದ ವಿಶೇಷ ಮತದಾರರ ಜಾಗೃತಿ ಅಭಿಯಾನವಾದ ಅನ್ನು ನಡೆಸಲು, ʼಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆʼಗೆ ಬಿಬಿಎಂಪಿ ಅನುಮತಿ ನೀಡಿತ್ತು. ಆದರೆ ಚಿಲುಮೆ ಸಂಸ್ಥೆ ಆದೇಶವನ್ನು ದುರುಪಯೋಗಪಡಿಸಿಕೊಂಡಿದ್ದು, ತನ್ನ ನೂರಾರು ಏಜೆಂಟರಿಗೆ ನಕಲಿ ಐಡಿ-ಕಾರ್ಡ್‌ಗಳನ್ನು ನೀಡಿದೆ. ಆ ಐಡಿ ಕಾರ್ಡುಗಳಲ್ಲಿ ತಮ್ಮನ್ನು ಬಿಬಿಎಂಪಿಯ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಎಂದು ಗುರುತಿಸಲಾಗಿದೆ. ಬಿಎಲ್‌ಒ ಒಬ್ಬ ತಳಮಟ್ಟದ ಅಧಿಕಾರಿಯಾಗಿದ್ದು, ಅವರು ಸರ್ಕಾರಿ, ಅರೆ-ಸರ್ಕಾರಿ ಅಥವಾ ನಿವೃತ್ತ ಸರ್ಕಾರಿ ನೌಕರರಾಗಿರಬೇಕು. ಬಿಎಲ್‌ಒಗಳು ತಮ್ಮನ್ನು ನಿಯೋಜಿಸಲಾದ ಮತಗಟ್ಟೆಯ ನಿವಾಸಿಗಳಾಗಿರಬೇಕು. ಆದರೆ, ಚಿಲುಮೆ ತನ್ನ ಏಜೆಂಟರುಗಳಿಗೆ ಬಿಎಲ್‌ಒ ಎಂದು ನಕಲಿ ಗುರುತಿನ ಚೀಟಿ ನೀಡಿ ಫೀಲ್ಡಿಗೆ ಮಾಹಿತಿ ಸಂಗ್ರಹಿಸಲು ಬಿಟ್ಟಿದೆ.ಈ ಏಜೆಂಟ್ ಗಳು ಮತದಾರರಿಂದ ಅವರ ಜಾತಿ, ಮಾತೃಭಾಷೆ, ವೈವಾಹಿಕ ಸ್ಥಿತಿ, ವಯಸ್ಸು, ಲಿಂಗ, ಉದ್ಯೋಗ ಮತ್ತು ಶಿಕ್ಷಣದ ವಿವರಗಳಂತಹ ವೈಯಕ್ತಿಕ ಮಾಹಿತಿಯನ್ನು ಹಾಗೂ ಆಧಾರ್ ಸಂಖ್ಯೆ, ಫೋನ್ ಸಂಖ್ಯೆ, ವಿಳಾಸ, ಮತದಾರರ ID ಸಂಖ್ಯೆ ಮತ್ತು ಇಮೇಲ್ ವಿಳಾಸದೊಂದಿಗೆ ಸಂಗ್ರಹಿಸಿದ್ದಾರೆ. ಅಲ್ಲದೆ, ಮತದಾರರು ತಮ್ಮ ಚುನಾಯಿತ ಪ್ರತಿನಿಧಿಗಳ ಕಾರ್ಯಕ್ಷಮತೆಯ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರವನ್ನೂ ಪಡೆದುಕೊಂಡಿದ್ದಾರೆ.ಕಾರ್ಯಾಚರಣೆಯ ಭಾಗವಾಗಿ ನಾಗರಿಕರಿಂದ ಕದ್ದಿರುವ ಈ ಡೇಟಾ ಅಗಾಧವಾದ ವಾಣಿಜ್ಯ ಮೌಲ್ಯವನ್ನು ಹೊಂದಿದ್ದು, ಇದನ್ನು ಖರೀದಿಸಲು ಖಾಸಗಿ ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆ. ಯಾವುದೇ ವಿಧಾನದಿಂದ ಚುನಾವಣೆಯಲ್ಲಿ ಗೆಲ್ಲಲು ಹವಣಿಸುತ್ತಿರುವ ರಾಜಕಾರಣಿಗಳಿಗೆ ಈ ಡೇಟಾ ಅಮೂಲ್ಯವಾಗಿದೆ. ಈ ಕಾರಣಕ್ಕಾಗಿಯೇ ಈ ಮಾಹಿತಿಯನ್ನು ಸಂಗ್ರಹಿಸಲು ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಅನುಮತಿಸಲಾಗಿದೆ.ಆದರೆ ಈ ಅಕ್ರಮ ಅಲ್ಲಿಗೆ ಮುಗಿಯುವುದಿಲ್ಲ.ಪ್ರಕರಣದ ಕುರಿತು ಪ್ರತಿಧ್ವನಿ ಹಾಗೂ ದಿ ನ್ಯೂಸ್ ಮಿನಿಟ್ ವರದಿಗಾರರು ಬೆನ್ನತ್ತುತ್ತಿದ್ದಂತೆ ಬಿಬಿಎಂಪಿ ತರಾತುರಿಯಲ್ಲಿ ಎನ್‌ಜಿಒಗೆ ಅನುಮತಿಯನ್ನು ರದ್ದುಗೊಳಿಸಿದೆ. ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿರುವ ಕಾರಣಗಳನ್ನು ವಿವರಿಸಲು ಅಧಿಕಾರಿಗಳು ತಮ್ಮ ರದ್ದತಿ ಆದೇಶದಲ್ಲಿ ಯಾವುದೇ ಪ್ರಯತ್ನ ಮಾಡದಿರುವುದು ಕುತೂಹಲ ಮೂಡಿಸಿದೆ. ರದ್ದತಿ ಆದೇಶದ ಹೊರತಾಗಿಯೂ, ಚಿಲುಮೆ ಮತ್ತು ಅದರ ಉಪಗುತ್ತಿಗೆದಾರರಿಂದ ಡೇಟಾವನ್ನು ಹಿಂಪಡೆಯಲಾಗಿಲ್ಲ ಎಂದು ಬಿಬಿಎಂಪಿ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳು ದಿ ನ್ಯೂಸ್ ಮಿನಿಟ್ ಗೆ ಖಚಿತಪಡಿಸಿದ್ದಾರೆ.ಚಿಲುಮೆ ನೇಮಿಸಿದ ಕ್ಷೇತ್ರ ಏಜೆಂಟರುಗಳು ತಮಗೆ ನೀಡಲಾದ ನಕಲಿ ಗುರುತಿನ ಚೀಟಿಗಳನ್ನು ನಮಗೆ ತೋರಿಸಿದ್ದು ಮಾತ್ರವಲ್ಲದೆ, ತಮ್ಮನ್ನು ಕಾನೂನುಬದ್ಧ ಸರ್ಕಾರದ ಕಾರ್ಯಕ್ರಮದ ಭಾಗವೆಂದು ನಂಬಿಸಿ ತಪ್ಪುದಾರಿಗೆಳೆಯಲಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಂದ ಬಂದಿರುವ ಅವರು ಎಷ್ಟು ಡೇಟಾ ಸಂಗ್ರಹಿಸಿದ್ದಾರೆ ಎಂಬುದರ ಆಧಾರದ ಮೇಲೆ 15,000 ರಿಂದ 25,000 ರೂಪಾಯಿಗಳವರೆಗೆ ಸಂಬಳದ ಭರವಸೆ ನೀಡಿದ್ದರು ಎಂದು ನಮಗೆ ತಿಳಿಸಿದ್ದಾರೆ. ಅದಾಗ್ಯೂ, ಅವರಲ್ಲಿ ಹಲವರು ವೇತನ ಪಾವತಿಸದ ಕಾರಣ ಕೆಲಸ ತೊರೆದಿದ್ದಾರೆ. ಮಾತ್ರವಲ್ಲ ತಮ್ಮ ಭಯಾನಕ ಕೆಲಸದ ಪರಿಸ್ಥಿತಿಗಳ ಬಗ್ಗೆ ದೂರಿದ್ದಾರೆ. ಮೂಲಗಳ ಪ್ರಕಾರ, ಚಿಲುಮೆ ಸಂಸ್ಥೆಯು SVEEP ಗಾಗಿ ಉಚಿತ ಸ್ವಯಂಪ್ರೇರಿತ ಸೇವೆಯನ್ನು ನೀಡುತ್ತದೆ ಎಂದು ಚುನಾವಣಾ ಆಯೋಗ ಮತ್ತು BBMP ಯನ್ನು ಸಂಪರ್ಕಿಸಿದ್ದಾರೆ. ಚಿಲುಮೆ ಅವರ ಆಫರ್ ಆಧರಿಸಿ, ಈ ವರ್ಷದ ಜನವರಿ 29 ರಂದು, ಮಹದೇವಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ (ERO) ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ಬಿಬಿಎಂಪಿಗೆ ಸಹಾಯ ಮಾಡಲು ಮತ್ತು ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚಿಲುಮೆಗೆ ಅನುಮತಿ ನೀಡಿದ್ದಾರೆ. ಚುನಾವಣಾ ನೋಂದಣಿ ಅಧಿಕಾರಿ ಆದೇಶದಲ್ಲಿ ಚಿಲುಮೆ ಯಾವುದೇ ರಾಜಕೀಯ ಸಂಘಟನೆಯೊಂದಿಗೆ ಸಂಬಂಧ ಹೊಂದಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ, ಎನ್‌ಜಿಒ ಹಿಂದೆ ಇರುವ ಜನರ ಹಿನ್ನೆಲೆಯನ್ನು ಹುಡುಕಿದಾಗ, ಅವರು ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಚಾರಗಳನ್ನು ನಿರ್ವಹಿಸುವ ಕಂಪನಿಗಳನ್ನು ಸಹ ನಡೆಸುತ್ತಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಚಿಲುಮೆ ಎಂಬ ಎನ್‌ಜಿಒ ಅನ್ನು ನೆಲಮಂಗಲ ಮೂಲದ ಕೃಷ್ಣಪ್ಪ ರವಿಕುಮಾರ್ ಸೇರಿದಂತೆ ಐವರು ಜುಲೈ 2013 ರಲ್ಲಿ ನೋಂದಾಯಿಸಿದ್ದಾರೆ. ರವಿಕುಮಾರ್ ಮತ್ತು ಇತರ ಇಬ್ಬರು ಸೇರಿ ಡಿಸೆಂಬರ್ 2017 ರಲ್ಲಿ DAP ಹೊಂಬಾಳೆ ಎಂಬ ಖಾಸಗಿ ಕಂಪನಿಯನ್ನು ಸಹ ಪ್ರಾರಂಭಿಸಿದರು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಡಿಎಪಿ ಹೊಂಬಾಳೆಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಕಂಡುಬರದಿದ್ದರೂ, ಜನವರಿ 2018 ರಲ್ಲಿ, ಈ ಮೂವರು ನಿರ್ದೇಶಕರು ಚಿಲುಮೆ ಎಂಟರ್‌ಪ್ರೈಸಸ್ ಪ್ರೈ. ಲಿಮಿಟೆಡ್ ಎಂಬ ಹೊಸ ಸಂಸ್ಥೆಯನ್ನು ಆರಂಭಿಸಿದ್ದಾರೆ ಎಂಬುದು ಕಂಡುಬಂದಿದೆ. ಈ ಖಾಸಗಿ ಕಂಪನಿಯು ಈವೆಂಟ್ ಮ್ಯಾನೇಜ್‌ಮೆಂಟ್ ಮತ್ತು ಚುನಾವಣಾ ನಿರ್ವಹಣೆಯಲ್ಲಿ ಪರಿಣತಿಯನ್ನು ಹೊಂದಿದೆ ಹಾಗೂ ರಾಜಕೀಯ ಪಕ್ಷಗಳಿಗಾಗಿ ವಿದ್ಯುನ್ಮಾನ ಮತಯಂತ್ರ ಮತ್ತು ಎಣಿಕೆ ಹಾಲ್ ತಯಾರಿ, CCTV ಅಳವಡಿಕೆ, ವೆಬ್‌ಕಾಸ್ಟಿಂಗ್ ಮತ್ತು ಚೆಕ್-ಪೋಸ್ಟ್ ತಯಾರಿಯಲ್ಲಿ ಪರಿಣತಿ ಹೊಂದಿದೆ ಎಂದು ಅದರ ಅಧಿಕೃತ ವೆಬ್‌ಸೈಟ್ ಹೇಳುತ್ತದೆ. ಅಲ್ಲದೆ, ಕಂಪನಿಯು ಸರ್ಕಾರದ ಶಾಖೆಗಳಿಂದ ತಾತ್ಕಾಲಿಕ ಮತದಾನ ಸಿಬ್ಬಂದಿಯನ್ನು ಒದಗಿಸುತ್ತದೆ” ಎಂದೂ ಹೇಳಿಕೊಂಡಿದೆ. ನೀವು ಈ ಜನರನ್ನು ವಿವಿಧ ಸ್ಥಳಗಳಲ್ಲಿ ಹುಡುಕಬೇಕಾಗಿಲ್ಲ, ಎಲ್ಲಾ ಸಿಬ್ಬಂದಿಯನ್ನು ಆಯ್ಕೆ ಮಾಡಲು ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ಅದರ ವೆಬ್‌ಸೈಟ್ ಹೇಳುತ್ತದೆ.ಅಚ್ಚರಿ ಎಂದರೆ, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಟ್ಟಡವೊಂದರಲ್ಲಿರುವ ಅದೇ ಕೊಠಡಿಯಿಂದ ಈ ಗುಂಪು ‘ಡಿಜಿಟಲ್ ಸಮೀಕ್ಷಾ’ ಎಂಬ ಮತದಾರರ ಸಮೀಕ್ಷೆ ಆ್ಯಪ್ ಅನ್ನು ಸಹ ನಿರ್ವಹಿಸುತ್ತಿದೆ. ಚುನಾವಣಾ ಆಯೋಗದ ಮತದಾರರ ನೋಂದಣಿ ಅರ್ಜಿಗಳಾದ ಗರುಡ ಮತ್ತು ಮತದಾರರ ಸಹಾಯವಾಣಿಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಬದಲು, ಚಿಲುಮೆಯ ಸಿಬ್ಬಂದಿ ಧರ್ಮ, ಜಾತಿ, ಮಾತೃಭಾಷೆ, ಶಿಕ್ಷಣ, ವೈವಾಹಿಕ ಸ್ಥಿತಿ ಮತ್ತು ರಾಜಕೀಯ ಕುಂದುಕೊರತೆಗಳು ಸೇರಿದಂತೆ ʼಡಿಜಿಟಲ್ ಸಮೀಕ್ಷಾʼದಲ್ಲಿ ಮತದಾರರ ವೈಯಕ್ತಿಕ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಾರೆ.ಡಿಜಿಟಲ್ ಸಮೀಕ್ಷಾ ಅಪ್ಲಿಕೇಶನ್ ಆಂಡ್ರಾಯ್ಡ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ. ಆದರೆ ಲಾಗಿನ್ ಇಲ್ಲದೆ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ಆಪ್‌ನ ಸ್ಕ್ರೀನ್‌ಶಾಟ್‌ಗಳು ಇದು ಮತದಾರರ ಮನೆ ಮಟ್ಟದ ಸಮೀಕ್ಷೆ ಎಂದು ತೋರಿಸುತ್ತದೆ. ಚಿಲುಮೆ ಟ್ರಸ್ಟ್ ಅನ್ನು ಹೊಂದಿರುವ ಮಲ್ಲೇಶ್ವರಂನಲ್ಲಿರುವ ಅದೇ ವಿಳಾಸದಲ್ಲಿ ಈ ಅಪ್ಲಿಕೇಶನ್ ಅನ್ನು ನೋಂದಾಯಿಸಲಾಗಿದೆ. ಚಿಲುಮೆ ಖಾಸಗಿ ಕಂಪನಿ (ಚುನಾವಣಾ ನಿರ್ವಹಣಾ ಕಂಪನಿ)ಯು ಅದರ ಎದುರಿನ ಬೀದಿಯಲ್ಲಿದೆ.ಡಿಜಿಟಲ್ ಸಮೀಕ್ಷಾ ಅಪ್ಲಿಕೇಶನ್‌ನ ಪ್ರಮೋಟರ್‌ಗಳು “ನಾವು ರಾಜಕೀಯ ಪಕ್ಷಗಳನ್ನು ಒಳಗೊಂಡಿರುವ ವಿವಿಧ ಗ್ರಾಹಕರ ನೆಲೆಯನ್ನು ಹೊಂದಿದ್ದೇವೆ, ಜೊತೆಗೆ ಸಂಸದರು, ಶಾಸಕರು, ಕಾರ್ಪೊರೇಟರ್‌ಗಳು, ಸ್ಥಳೀಯ ಸಂಸ್ಥೆಗಳು ಮತ್ತು ಟಿಕೆಟ್ ಆಕಾಂಕ್ಷಿಗಳನ್ನು ಗ್ರಾಹಕರನ್ನಾಗಿ ಹೊಂದಿದ್ದೇವೆ. ಕಾಲ್ಪನಿಕ ಗೆಲುವಿನ ಸೂತ್ರವನ್ನು ಭರವಸೆ ನೀಡುವ ಬದಲು ನಾವು ನಮ್ಮ ಗ್ರಾಹಕರಿಗೆ ಅವರ ದಿನನಿತ್ಯದ ಚಟುವಟಿಕೆಗಳನ್ನು ನಿರ್ವಹಿಸಲು ಪರಿಕರಗಳು ಮತ್ತು ಸೇವೆಗಳೊಂದಿಗೆ ಸಜ್ಜುಗೊಳಿಸುತ್ತೇವೆ ಮತ್ತು ಚುನಾವಣೆಗಳಿಗೆ ನಿಖರವಾದ ತಯಾರಿಯಲ್ಲಿ ಅವರಿಗೆ ಸಹಾಯ ಮಾಡುತ್ತೇವೆ” ಎಂದು ತಮ್ಮ ಬಗ್ಗೆ ಹೇಳಿಕೊಂಡಿವೆ.ಚಿಲುಮೆ ನಿಯೋಜಿತ ಏಜೆಂಟರುಗಳಲ್ಲಿ ಒಬ್ಬರಾದ ನಂದನ್ ಹಲವಾಗಲಿ ಅವರು ತಮ್ಮ ಕೆಲಸವನ್ನು ವಿವರಿಸುತ್ತಾ, “ನಾವು ಬಿಬಿಎಂಪಿ ಗುರುತಿನ ಚೀಟಿಗಳನ್ನು ಧರಿಸಿ, ಮನೆಮನೆಗಳಿಗೆ ಭೇಟಿ ನೀಡಿ (ಮತದಾರರ) ಹೆಸರು, ಫೋನ್ ಸಂಖ್ಯೆ, ಮತದಾರರ ಗುರುತಿನ ಚೀಟಿ, ಆಧಾರ್ ಸಂಖ್ಯೆ, ಜಾತಿ, ಧರ್ಮ, ವೈವಾಹಿಕ ಸ್ಥಿತಿ, ಉದ್ಯೋಗ ಮತ್ತು ವಿಳಾಸಗಳಂತಹ ವಿವರಗಳನ್ನು ಸಂಗ್ರಹಿಸಿದ್ದೇವೆ. ನಾವು ಅವುಗಳನ್ನು ಡಿಜಿಟಲ್ ಸಮೀಕ್ಷಾ ಎಂಬ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿದ್ದೇವೆ.” ಎಂದು ತಿಳಿಸಿದ್ದಾರೆ.ಸಂಸ್ಥೆಯ ಹಿನ್ನೆಲೆಯನ್ನು ಹೆಚ್ಚಿನ ಪರಿಶೀಲನೆ ನಡೆಸದೆ, ಆಗಸ್ಟ್ 20 ರಂದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಲು ಚಿಲುಮೆಗೆ ಅನುಮತಿಯನ್ನು ವಿಸ್ತರಿಸಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತರು ಸಹಿ ಮಾಡಿರುವ ಆದೇಶದಲ್ಲಿ, “ಮತದಾರರ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ, ಮತದಾರರ ನೋಂದಣಿ, ಮತದಾರರನ್ನು ಪಟ್ಟಿಗೆ ಜೋಡಿಸುವ ಕೆಲಸಗಳಿಗೆ ಹಾಗೂ ಮತದಾರರ ಸಹಾಯವಾಣಿ ಆ್ಯಪ್ ಮತ್ತು ಗರುಡ ಆಪ್ ಮೂಲಕ ಆಧಾರ್ ಕಾರ್ಡ್‌ಗೆ ಗುರುತಿನ ಚೀಟಿಗೆ ಲಿಂಕ್ ಮಾಡಲು” ಚಿಲುಮೆಗೆ ಅನುಮತಿ ನೀಡಲಾಗಿದೆ.ಜನವರಿಯಲ್ಲಿ ಮಹದೇವಪುರ ಇಆರ್‌ಒ ಅವರು ನೀಡಿದ ಅನುಮತಿ ಮಾದರಿಯಲ್ಲೇ ಈ ಆದೇಶದಲ್ಲೂ ಸಂಸ್ಥೆಯು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರಬಾರದು ಅಥವಾ ಅವರಿಂದ ಹಣ ಪಡೆಯಬಾರದು ಎಂದು ತಾಕೀತು ಮಾಡಲಾಗಿದೆ. ಅದಾಗ್ಯೂ, ಷರತ್ತುಗಳನ್ನು ಪಾಲಿಸದೆ, ಎನ್‌ಜಿಒ ಇಡೀ ನಗರದಲ್ಲಿ ಅಕ್ರಮವಾಗಿ ಮಾಹಿತಿ ಸಂಗ್ರಹವನ್ನು ವಿಸ್ತರಿಸಿದೆ. ಮತ್ತು ಇತರ ಏಜೆನ್ಸಿಗಳಿಗೆ ಉಪ-ಗುತ್ತಿಗೆ ನೀಡುವ ಮೂಲಕ ಇನ್ನೂ ಹೆಚ್ಚಿನ ಜನರನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿದೆ.12ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕೋಲಾರದ ಮುಳಬಾಗಲಿನ 19 ವರ್ಷದ ನಿರುದ್ಯೋಗಿ ರಂಜಿತ್ ಕುಮಾರ್ ಅವರು ಉಪ ಗುತ್ತಿಗೆದಾರರ ಮೂಲಕ ನೇಮಕಗೊಂಡ ಏಜೆಂಟ್‌ಗಳಲ್ಲಿ ಒಬ್ಬರು.ನಾವು ಕೈಯಿಂದ ನಕ್ಷೆಗಳನ್ನು ಚಿತ್ರಿಸುವ ಮೂಲಕ ಬೂತ್ ಮಟ್ಟದ ಮ್ಯಾಪಿಂಗ್ ಸಮೀಕ್ಷೆಗಳನ್ನು ನಡೆಸಿದ್ದೇವೆ. ಪ್ರತಿಯೊಂದು ಘಟಕವು ವಾಣಿಜ್ಯ ಅಥವಾ ವಸತಿ ಆಸ್ತಿಯೇ ಅಥವಾ ಅದು ಖಾಲಿಯಾಗಿದೆಯೇ ಅಥವಾ ಅಲ್ಲಿ ಯಾರಾದರೂ ಇದ್ದಾರೆಯೇ ಎಂಬುದನ್ನು ಆಧರಿಸಿ ಗುರುತಿಸುತ್ತೇವೆ. ಎಂದು ರಂಜಿತ್ TNM ಗೆ ತಿಳಿಸಿದ್ದಾರೆ. ಕರ್ನಾಟಕದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಆಗಮಿಸಿದ ನೂರಾರು ಏಜೆಂಟರುಗಳಂತೆಯೇ ಅವರೂ ಸಮೀಕ್ಷಾ ಕಾರ್ಯ ಕೈಗೊಳ್ಳಲು ಚಿಲುಮೆಗೆ ಸೇರಿದವರು.ಬಿಬಿಎಂಪಿಯಿಂದ ಚಿಲುಮೆಗೆ ನೀಡಿರುವ ಅನುಮತಿ ಪತ್ರದಲ್ಲಿ, ಎನ್‌ಜಿಒ ಸ್ವಯಂಸೇವಕರು ಬಿಎಲ್‌ಒಗಳು ಮತ್ತು ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಚಟುವಟಿಕೆ ನಡೆಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಅದಾಗ್ಯೂ, ಚಿಲುಮೆಯಿಂದ ನಿಯೋಜಿಸಲಾದ ಏಜೆಂಟ್‌ಗಳು ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವಾಗ ಯಾವುದೇ ಸರ್ಕಾರಿ ಅಧಿಕಾರಿಗಳು ಜೊತೆಗಿರಲಿಲ್ಲ ಎಂಬುದನ್ನು ತನಿಖೆ ವೇಳೆ ನಾವು ಕಂಡುಕೊಂಡಿದ್ದೇವೆ.ಕೊಡಿಗೇಹಳ್ಳಿ ಮತ್ತು ಗರುಡಾಚಾರ್ ಪಾಳ್ಯದಂತಹ ಪ್ರದೇಶಗಳಲ್ಲಿ ಏಜೆಂಟ್ ಗಳ ಬಗ್ಗೆ ಅನುಮಾನಗೊಂಡ ನಿವಾಸಿಗಳು ಅವರನ್ನು ಓಡಿಸಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಸರ್ಕಾರದಿಂದ ನೇಮಕಗೊಂಡ ನಿಜವಾದ BLO ಗಳಿಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇಂತಹ ಚಟುವಟಿಕೆಯನ್ನು ನಡೆಸುತ್ತಿದ್ದಾರೆ ಎಂಬ ಸಣ್ಣ ಸುಳಿವು ಕೂಡಾ ಇರಲಿಲ್ಲ.“ನಮಗೆ ವೈಯಕ್ತಿಕ ಮಾಹಿತಿಯನ್ನು ನೀಡಲು ಜನರು ನಿರಾಕರಿಸಿದ ಸಂದರ್ಭಗಳಿವೆ. ಆದರೆ ನಮ್ಮ ವೈಯಕ್ತಿಕ ಕೌಶಲ್ಯದ ಮೂಲಕ ಜನರಿಗೆ ಮನವರಿಕೆ ಮಾಡಿಕೊಡಬೇಕು ಮತ್ತು ನಮ್ಮ ಮೇಲಿನ ಅಧಿಕಾರಿಗಳು ಇಡೀ ಬೂತ್‌ಗೆ ಈ ಪ್ರಕ್ರಿಯೆಯನ್ನು ಮಾಡುವಂತೆ ಕೇಳಿದ್ದಾರೆ ಎಂದು ಅವರನ್ನು ಒಪ್ಪಿಸಬೇಕು ಎಂದು ನಮಗೆ ತಿಳಿಸಲಾಯಿತು” ಎಂದು ನಿಯೋಜಿತ ಏಜೆಂಟುಗಳಲ್ಲಿ ಒಬ್ಬರಾದ ನಂದನ್ ಹಲವಾಗಲಿ ಹೇಳಿದ್ದಾರೆ.ಇದೇ ವೇಳೆ, ಬೆಂಗಳೂರಿನ ಶಿವಾಜಿನಗರ ಪ್ರದೇಶದ ಮತದಾರರಲ್ಲಿ ಕೆಲವರು, ಮತದಾರರ ಪಟ್ಟಿಯನ್ನು ನವೀಕರಿಸುವ ಮತ್ತು ಮತದಾರರನ್ನು ಅಳಿಸುವ ನೆಪದಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಎಂದು ಹೇಳಿಕೊಳ್ಳುವ ಜನರು ತಮ್ಮ ಮನೆಗಳಿಗೆ ಬಂದಿದ್ದಾರೆ ಎಂದು TNM ಗೆ ತಿಳಿಸಿದ್ದಾರೆ. ಆಶಾ ಕಾರ್ಯಕರ್ತೆ ಗೀತಾ ವಿ ಇದನ್ನು ಬೆಳಕಿಗೆ ತಂದಿದ್ದಾರೆ. ಅಪರಿಚಿತ ವ್ಯಕ್ತಿಗಳು ಮತದಾರರನ್ನು ಪರಿಶೀಲಿಸಿರುವ ಬಗ್ಗೆ ಇಲ್ಲಿನ ಬಿಎಲ್‌ಒ ಗೀತಾ ಅವರಿಗೆ ನಿವಾಸಿಗಳು ಮಾಹಿತಿ ನೀಡಿದ್ದಾರೆ.ನಾವು ನಗರದ ಇತರ ಭಾಗಗಳಿಂದ ಬಂದ ಇದೇ ರೀತಿಯ ದೂರುಗಳನ್ನು ತನಿಖೆ ಮಾಡಿದಾಗ, ಸಮೀಕ್ಷೆಗೆ ಮಾನವಶಕ್ತಿಯನ್ನು ಪೂರೈಸಿದ ಸಮನ್ವಯ ಟ್ರಸ್ಟ್ ಎಂಬ ಮತ್ತೊಂದು ಗ್ರಾಮೀಣ ಅಭಿವೃದ್ಧಿಯಿಂದ ಚಿಲುಮೆ ವಿರುದ್ಧ ಸಲ್ಲಿಸಿದ ದೂರು ಗಮನಕ್ಕೆ ಬಂದಿದೆ. ಸೆ.20ರಂದು ಬಿಬಿಎಂಪಿ ಹಾಗೂ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಸಮನ್ವಯ ಟ್ರಸ್ಟ್ ಅಧ್ಯಕ್ಷೆ ಸುಮಂಗಲಾ ಅವರು ತಮ್ಮ ಕಾರ್ಯಕರ್ತರಿಗೆ ಚಿಲುಮೆಯಿಂದ ವೇತನ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಅವರು ಕಾರ್ಯಾಚರಣೆಯ ಕಾನೂನುಬದ್ಧತೆಯ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ್ದು, ಖಾಸಗಿ ಏಜೆನ್ಸಿಯು ಮತದಾರರಿಂದ ವೈಯಕ್ತಿಕ ಡೇಟಾವನ್ನು ಹೇಗೆ ಸಂಗ್ರಹಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಬಿಬಿಎಂಪಿ ಚಿಲುಮೆಗೆ ಅವರ ಅನುಮತಿಯನ್ನು ರದ್ದುಗೊಳಿಸಿದೆ.ಷರತ್ತುಗಳ ಉಲ್ಲಂಘನೆಗಳ ಹೊರತಾಗಿಯೂ, ಚಿಲುಮೆ ಮತ್ತು ಚುನಾವಣಾ ನಿರ್ವಹಣಾ ಕಂಪನಿಯ ಹಿಂದಿನ ಪ್ರಮುಖ ವ್ಯಕ್ತಿ ರವಿಕುಮಾರ್ ಕೃಷ್ಣಪ್ಪ, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮೂನೆ 6 ಮತ್ತು 7 ಸೇರಿದಂತೆ ಮತದಾರರ ಡೇಟಾವನ್ನು ಸಂಗ್ರಹಿಸಲು ಖಾಸಗಿ ಏಜೆನ್ಸಿಗಳಿಗೆ ಅನುಮತಿ ನೀಡುವ ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. 2014 ರಿಂದ ಇದೇ ಮಾಹಿತಿ ಸಂಗ್ರಹ ಕಾರ್ಯವನ್ನು ಮಾಡುತ್ತಿದ್ದೆ ಎಂದು ರವಿಕುಮಾರ್ ವಿವರಿಸಿದ್ದಾರೆ. ಈ ಕಾರಣಕ್ಕಾಗಿ ತನ್ನನ್ನು ಒಮ್ಮೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ ಅದು ಕಾನೂನುಬದ್ಧವಾಗಿ ಸಾಬೀತಾದಾಗ ಬಿಡುಗಡೆಗೊಂಡು ಖುಲಾಸೆಗೊಳಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ತಾವು ಯಾವುದೇ ಅಪರಾಧ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.ಅಧಿಕಾರಿಗಳಿಂದ ವಿವರಣೆಯನ್ನು ಪಡೆಯಲು ನಾವು ಹೆಣಗಾಡುತ್ತಿರುವಾಗ, ರವಿಕುಮಾರ್ ಅವರು ನಿರ್ದಿಷ್ಟ ರಾಜಕೀಯ ಪಕ್ಷದ ರಾಜಕಾರಣಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಹಲವು ಮೂಲಗಳನ್ನು ನಾವು ನೋಡಿದ್ದೇವೆ. ಈ ಮೂಲಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ನಮಗೆ ಸಾಧ್ಯವಾಗದಿದ್ದರೂ, ಪ್ರಬಲ ರಾಜಕೀಯ ಸಂಪರ್ಕಗಳನ್ನು ಹೊಂದಿದ್ದೇನೆ ಎಂದು ಹೇಳಿಕೊಂಡ ವ್ಯಕ್ತಿಯಿಂದ ಚಿಲುಮೆಯ ಪ್ರಮೋಟರ್‌ಗಳೊಂದಿಗೆ ಮಾತುಕತೆ ನಡೆಸಲು ನಾವು ಆಹ್ವಾನವನ್ನು ಸ್ವೀಕರಿಸಿದ್ದೇವೆ.ಚಿಲುಮೆ ಈ ಒಟ್ಟಾರೆ ಕಾರ್ಯಾಚರಣೆಗೆ ಸರಕಾರದಿಂದ ಹಣ ಪಡೆದುಕೊಳ್ಳದಿದ್ದರೆ ಈ ಬೃಹತ್ ಚಟುವಟಿಕೆಗೆ ಹಣ ಎಲ್ಲಿಂದ ಸಿಕ್ಕಿತು? ಎಂಬ ಪ್ರಶ್ನೆ ಎದುರಾಗಿದೆ. ರಾಜಕಾರಣಿಗಳಿಗೆ ಸೇವೆ ಸಲ್ಲಿಸುವ ವ್ಯಕ್ತಿಗಳು ಮತದಾರರ ದತ್ತಾಂಶವನ್ನು ಅಕ್ರಮವಾಗಿ ಸಂಗ್ರಹಿಸುವ ಎನ್‌ಜಿಒ ಅನ್ನು ಸಹ ನಡೆಸುತ್ತಿರುವುದು ಇಡೀ ಚುನಾವಣಾ ಯಂತ್ರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಲ್ಲದೆ, ಚಿಲುಮೆ ಸಂಗ್ರಹಿಸಿದ ದತ್ತಾಂಶವನ್ನು ಬಿಬಿಎಂಪಿಗೆ ಸಲ್ಲಿಸಿಲ್ಲ ಎಂದಾದರೆ, ಆ ಮಾಹಿತಿ ಎಲ್ಲಿದೆ? ಹಾಗೂ ಯಾರ ಇಚ್ಛೆಯಂತೆ ಸಂಗ್ರಹಿಸಲಾಗಿದೆ? ಎಂಬ ಪ್ರಶ್ನೆಯೂ ಹುಟ್ಟುತ್ತದೆ.
ಬೆಂಗಳೂರಿನ ಮಲ್ಲೇಶ್ವರಂ 16 ಹಾಗೂ 17ನೇ ಕ್ರಾಸ್ ಗಳಲ್ಲಿರುವ ವಿವಾದಿತ ಚಿಲುಮೆ ಕಂಪನಿಯ, ಸದ್ಯ ಬೀಗ ಹಾಕಿರುವ ಕಚೇರಿಗಳು