ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ ಇಲ್ಲಿದೆ ನೈಜ ‘ಕಾಶ್ಮೀರಿ ಫೈಲ್ಸ್’ !?

kuchangi-prasanna-kashmiri-files-bevarahani, ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ ಇಲ್ಲಿದೆ ನೈಜ ‘ಕಾಶ್ಮೀರಿ ಫೈಲ್ಸ್’ !?

ಒಂದು ಗಳಿಗೆ  ಕುಚ್ಚಂಗಿ ಪ್ರಸನ್ನ  ಇಲ್ಲಿದೆ ನೈಜ ‘ಕಾಶ್ಮೀರಿ ಫೈಲ್ಸ್’ !?
Ondu Galige- Kuchangi prasanna

ಈಗ ವಾರದಿಂದ ಸದ್ದು ಗದ್ದಲ ಮಾಡುತ್ತಿರುವ ಕಾಶ್ಮೀರಕ್ಕೂ ನನಗೂ 36 ವರ್ಷಗಳ ಖಾಸಾ ಸಂಬಂಧವಿದೆ. ನಾನು ಪತ್ರಿಕಾ ವೃತ್ತಿ ಆರಂಭಿಸುವ ಒಂದೂವರೆ ವರ್ಷ ಮೊದಲು, 1986ರ ಜೂನ್ -ಜುಲೈ ತಿಂಗಳಲ್ಲಿ ಒಂದು ತಿಂಗಳ ಕಾಲ ನಾನು ಕಾಶ್ಮೀರದಲ್ಲಿದ್ದೆ, ಮತ್ತೆ 30 ವರ್ಷಗಳ ನಂತರವೂ ಆ ರಾಜ್ಯದಲ್ಲಿ ಐದಾರು ದಿನಗಳಿದ್ದು ಬಂದವನು ನಾನು. 


ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

ಇಲ್ಲಿದೆ ನೈಜ ‘ಕಾಶ್ಮೀರಿ ಫೈಲ್ಸ್’ !?

      ದೇಶದ ಜನರಿಗೆ ಉಸಿರು ತಿರುಗಿಸಲೂ ಪುರಸೊತ್ತು ಕೊಡದಂತೆ ಒಂದಾದ ಮೇಲೊಂದು ವಿವಾದಗಳನ್ನು ಸೃಷ್ಟಿಸಿ ಮಾಧ್ಯಮಗಳಿಗೆ ಆಹಾರ ಒದಗಿಸುವುದು ಮತ್ತು ಆ ಮೂಲಕ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು ಕಳೆದ ಏಳು ವರ್ಷಗಳಿಂದ ಆಡಳಿತದಲ್ಲಿರುವ ಬಿಜೆಪಿ ಸರ‍್ಕಾರದ ಮುಖ್ಯವಾದ ಹಾಗೂ  ವಿಶಿಷ್ಟವಾದ ಕರ‍್ಯಶೈಲಿ. ಈ ಕಾರ‍್ಯಕ್ಕೆ ಪ್ರಧಾನಿ ಆದಿಯಾಗಿ ಗ್ರಾಮ ಮಟ್ಟದವರೆಗಿನ ಕಾರ್ಯಕರ‍್ತರನ್ನೂ ಬಳಸಿಕೊಳ್ಳಲಾಗುತ್ತದೆ. ಒಂಥರಾ ತೀವ್ರ ಪ್ರಚಾರಾಂದೋಲನ ಇವರದು.


ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳ ಚುನಾವಣೆ ಮುಗಿಯಿತು, ಫಲಿತಾಂಶ ಬಂತು ಎಂದು ನಿಟ್ಟುಸಿರು ಬಿಡುವ ಹೊತ್ತಿಗೆ ಇದೀಗ “ಕಾಶ್ಮೀರಿ ಫೈಲ್ಸ್” ಹೆಸರಿನ ಹಿಂದಿ ಸಿನಿಮಾ ಹೆಸರಲ್ಲಿ ಗದ್ದಲ ಎಬ್ಬಿಸಲಾಗಿದೆ. ಇದು ತೀರಾ ಸಣ್ಣ ಮಟ್ಟದ ಗದ್ದಲವೇನೂ ಅಲ್ಲ. ಈ ಸಿನಿಮಾ ನೋಡದೇ ಇದ್ದವರು ದೇಶ ದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟಿಬಿಟ್ಟಿದ್ದಾರೆ ನಮ್ಮ ‘ಮುತ್ತು-ರಾಜ’ ರೇಣುಕಾಚಾರ‍್ಯ!?

ಕಾಶ್ಮೀರದಲ್ಲಿದ್ದ ಪಂಡಿತರೆಂಬ ಮಾಂಸಾಹಾರಿ, ಅತ್ಯಂತ ಶ್ರೀಮಂತ ಜಮೀನ್ದಾರಿ ಅಲ್ಪಸಂಖ್ಯಾತ ಬ್ರಾಹ್ಮಣರನ್ನು 1990ರಲ್ಲಿ ಅಲ್ಲಿರುವ ಬಹುಸಂಖ್ಯಾತ ಕಾಶ್ಮೀರಿ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಕೊಂದದ್ದಲ್ಲದೇ, ಹಿಂಸಿಸಿ, ಅತ್ಯಾಚಾರವೆಸಗಿ ಆ ರಾಜ್ಯದಿಂದ ಗುಳೇ ಹೋಗುವಂತ ಭಯಾನಕ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದ್ದರ ಮರುಸೃಷ್ಟಿ ಈ ಕಾಶ್ಮೀರಿ ಫೈಲ್ಸ್ ಸಿನಿಮಾ ಎಂದು ಹೇಳಲಾಗುತ್ತಿದೆ. ಟ್ರೇಲರ್ ನೋಡಿದ ನನಗೆ ಗಡ್ಡ ಕೆರೆದುಕೊಳ್ಳಲೂ ಪುರುಸೊತ್ತು ಕೊಡದ ಪತ್ರಿಕಾ ವೃತ್ತಿಯಿಂದಾಗಿ ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲ. 


2017ರ ಆಗಸ್ಟ್ ತಿಂಗಳ ಕಡೇ ವಾರದಲ್ಲಿ ‘ ಬೆವರ ಹನಿ’ ದಿನಪತ್ರಿಕೆಯ ಕೋಲಾರ ಆವೃತ್ತಿಯನ್ನು ಪ್ರಾರಂಭಿಸಿದ ನಾನು 2018ರ ಅಕ್ಟೋಬರ್‌ನಲ್ಲಿ ತುಮಕೂರಿನಲ್ಲಿ ಪ್ರತ್ಯೇಕ ಆವೃತ್ತಿಯನ್ನು ಆರಂಭಿಸಿದೆ. ಪ್ರತಿ ಭಾನುವಾರ ಇದ್ದ ರಜೆಯನ್ನು ಕೊರೊನಾ ವೈರಸ್ ಸೋಂಕು ಕಿತ್ತುಕೊಂಡಿತು. 2020ರ ಏಪ್ರಿಲ್‌ನಿಂದ  ವಾರದ ಏಳೂ ದಿನ ಪತ್ರಿಕೆಯನ್ನು ಪ್ರಕಟಿಸಲು ಆರಂಭಿಸಿದ ಪರಿಣಾಮವಿದು. 


1988ರ ಜನವರಿ 27ರಿಂದ ತುಮಕೂರಿನ ದಿನಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಪತ್ರಿಕಾವೃತ್ತಿ ಆರಂಭಿಸಿದ ನಾನು, ಬೆಳಗಿನಿಂದ ಸಂಜೆವರೆಗೆ ಎಲ್ಲ ವರದಿಗಾರರಂತೆ ನಾಲ್ಕೆದು ವರದಿ ಬರೆದು ರಾತ್ರಿ ಊಟಕ್ಕೆ ಮನೆ ಸೇರಿಕೊಂಡಿದ್ದರೆ ಏನೂ ತೊಂದರೆಯಾಗುತ್ತಿರಲಿಲ್ಲ. ಅಲ್ಲಿ ಕೆಲಸಕ್ಕೆ ಸೇರಿದ ಆ ವರ್ಷ ಜೂನ್-ಜುಲೈ ತಿಂಗಳ ಒಂದು ಸಂಜೆ ಹಿಡಿದ ಮಳೆ ರಾತ್ರಿ ಹತ್ತಾದರೂ ಬಿಡಲಿಲ್ಲ, ಹಂಗೇ ಮಳೆಯಲ್ಲೇ ಸೈಕಲ್ ಹತ್ತಿ ಕುಚ್ಚಂಗಿಗೆ ಹೋಗಿಬಿಡೋಣ ಎಂದರೆ, ಇಕ್ಕಣ್ಣ ಕುಕ್ಕಣ್ಣ ಎಂಬಂತೆ ನನ್ನ ಬಳಿ ಇದ್ದದ್ದು ಒಂದೇ ಒಂದು ಜೀನ್ಸ್ ಪ್ಯಾಂಟು ಎರಡು ಅಂಗಿಗಳು, ದಪ್ಪನೆ ಜೀನ್ಸ್ ಪ್ಯಾಂಟು ನೆನೆದುಬಿಟ್ಟರೆ ಮರುದಿನ ಮಧ್ಯಾಹ್ನದ ತನಕ ಒಣಗುವುದಿಲ್ಲವಲ್ಲ ಎಂಬ ಆತಂಕದಿಂದ ಪ್ರೆಸ್‌ನಲ್ಲೇ ನಿಂತೆ. ಅಚ್ಚು ಮೊಳೆ ವಿಧಾನದಲ್ಲಿ ಮುದ್ರಣ ನಡೆಯುತ್ತಿದ್ದ ದಿನಗಳವು. ರಾತ್ರಿ ಹೊತ್ತು ಬಂದು ಪುಟ ಕಟ್ಟಿ ಕೊಡುತ್ತಿದ್ದ ಗಾಯಿತ್ರಿ ಪ್ರೆಸ್‌ನ ಪ್ರಸಾದಿ ಹಾಗೂ ಶೀಟ್ ಫೆಡ್ ಸಿಲಿಂಡರ್ ಮೆಶೀನ್‌ನ ಪ್ರಿಂಟರ್ ಮಹೇಶ್ ಪ್ರಿಂರ‍್ಸ್ನ ಕೃಷ್ಣಮೂರ್ತಿ ಇಬ್ಬರೂ ಕೆಲಸ ಮುಗಿಸಿ ಹೊರಡಲು ಬಾಗಿಲಿಗೆ ಬಂದರು. ಪ್ರಿಂಟರ್ ಮೂರ್ತಿ ಕೈಯಲ್ಲಿ ಆ ರಾತ್ರಿ ಮುದ್ರಿಸಿದ ಮಾರನೇ ದಿನದ ನಮ್ಮ ಪತ್ರಿಕೆಯ ಸುರುಳಿಗಳಿದ್ದವು. ಆಗ ಮುದ್ರಣವಾಗುತ್ತಿದ್ದುದು ಕೇವಲ 280 ಪ್ರತಿಗಳು. ಅದರಲ್ಲಿ ಒಂದಷ್ಟು ಅಂಚೆಯಲ್ಲಿ ಕಳಿಸಲು, ಉಳಿದ ಮರ‍್ನಾಲ್ಕು ಸುರಳಿಗಳು ನಗರದ ಪತ್ರಿಕಾ ವಿತರಿಕರಿಗೆ ಅಂದರು ಮೂರ್ತಿ. ಅಷ್ಟು ತಿಳಿದುಕೊಂಡು ಸುಮ್ಮನಿದ್ದರೂ ನನ್ನ ಜೀವನ ಸುಖಮಯವಾಗೇ ಇದ್ದುಬಿಡುತ್ತಿತ್ತು. ನಮಾಜು ಮಾಡಲು ಹೋಗಿ ಮಸೀದಿ ಕೆಡವಿಕೊಂಡವರಂತೆ ಮಾಡಿಕೊಂಡೆ.


ಇಡೀ ದಿನ ಸುದ್ದಿ ಸಂಗ್ರಹಿಸಿ, ತಿದ್ದಿ ತೀಡಿ ಬರೆಯುವ ನಮ್ಮ ವರದಿಗಳು ಹೆಚ್ಚು ಓದುಗರನ್ನು ತಲುಪದೇ ಇದ್ದರೆ ಹೆಂಗೆ ಅಂತನ್ನಿಸಿ, ಒಂದೆರಡು ದಿನದ ಬಳಿಕ ಸಂಪಾದಕರು ಬಿಡುವಾಗಿದ್ದಾಗ ಅವರನ್ನು ಈ ಬಗ್ಗೆ ಮಾತಿಗೆಳೆದು, ಪತ್ರಿಕೆಯ ಪ್ರಸಾರ ಹೆಚ್ಚಿಸಬೇಕಲ್ಲ ಅಂದೆ, ಪತ್ರಿಕೆಯ ಜೊತೆಗೆ ಮದ್ಯದ ಚಿಲ್ಲರೆ ಹಾಗೂ ಸಗಟು ವರ್ತಕರೂ ಆಗಿದ್ದ ಅವರು, “ ಅಯ್ಯೋ ಲೋಕಲ್ ಪೇಪರ್‌ಗಳನ್ನು ಯಾರು ಕೊಂಡು ಓದುತ್ತಾರೆ, ಹೆಂಗೋ ನಡೆದುಕೊಂಡು ಹೋಗುತ್ತಾ ಇದೆ, ನಿಮಗೆ ಮತ್ತು ಮೂವರು ಕಂಪೋಸಿಟರ್‌ಗಳಿಗೆ ಸಂಬಳ ಕೊಡ್ತಾ ಇದ್ದೀನಲ್ಲ, ನಿಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಹೋಗಿ” ಎಂದು ನಿರುತ್ಸಾಹಗೊಳಿಸಿದರು. ಆದರೆ ನಾನು ಸುಮ್ಮನಾಗಲಿಲ್ಲ, ವಾಸವನ್ನು ಊರಿನಿಂದ ತುಮಕೂರಿನ ಶಿರಾಗೇಟಿಗೆ ಶಿಫ್ಟ್ ಮಾಡಿದೆ. ಪತ್ರಿಕೆಯ ಪ್ರಸಾರ ಹೆಚ್ಚಿಸಲು ಬೆಳಗಿನ ಜಾವ ರೂಟ್‌ಗಳಿಗೆ ಹೋಗಲು ಆರಂಭಿಸಿದೆ. ಹೊಸ ಹೊಸ ರೂಟ್‌ಗಳನ್ನು ಮಾಡಿದೆ. ಕ್ರಮೇಣ ಸಂಪಾದಕರೂ ಪ್ರಸಾರ ಹೆಚ್ಚಿಸಲು ಕೈ ಜೋಡಿಸಿದರು. ಅಲ್ಲಿವರೆಗೂ ನಾಮಕಾವಸ್ತೆ ಇದ್ದ ತುಮಕೂರಿನ ಎಲ್ಲ ದಿನಪತ್ರಿಕೆಗಳನ್ನೂ ಮೀರಿದ ಪ್ರಸಾರ ಸಂಖ್ಯೆಯನ್ನು ಸಾಧಿಸಿ ನಮ್ಮ ಪತ್ರಿಕೆ ನಂಬರ್ ಒನ್ ಆಯಿತು, ಎರಡೇ ವರ್ಷಗಳಲ್ಲಿ ಮೊಳೆ ಜೋಡಣೆ ಹೋಗಿ ಕಂಪ್ಯೂಟರ್ ಆಧಾರಿತ ಡಿಟಿಪಿ ಬಂತು, ಆಫ್‌ಸೆಟ್ ಯಂತ್ರ ಬಂದು ಕುಳಿತಿತು, ಹಾಗೇ ಎಂಟು ವರ್ಷ ಕಳೆದು ಹೋಯಿತು, ದೊಡ್ಡದೊಂದು ತಂಡ ಕಟ್ಟಿಕೊಂಡು, ಕೊಟ್ಟಷ್ಟು ಸಂಬಳ ಪಡೆದುಕೊಳ್ಳುತ್ತ,ಹಣಕ್ಕೆ ಮಹತ್ವ ಕೊಡದೇ, ಹಗಲು ಇರುಳು ಎನ್ನದೇ ಸದಾ ಪತ್ರಿಕೆಯಲ್ಲೇ ಮುಳುಗಿದ ಪರಿಣಾಮ ನನ್ನ ವೈಯಕ್ತಿಕ ಜೀವನ ಬೀದಿ ಪಾಲಾಗಿ ಹೋಯಿತು. ಆದರೆ ನಾವು ಕಟ್ಟಿ ಬೆಳೆಸಿದ ಆ ಪತ್ರಿಕೆ ಇವತ್ತಿಗೂ ಮುನ್ನಡೆಯುತ್ತಲೇ ಇದೆ. 


ಅದಾದ ಮೇಲೂ ಹೊಸ ಬದುಕನ್ನು ಕಟ್ಟಿಕೊಂಡು ಪತ್ರಿಕಾವೃತ್ತಿಗೆ ಮರಳಿದ್ದೇನೆ, ಈಗ ಇದೇ ತುಮಕೂರು ಜಿಲ್ಲೆಯ ಸ್ಥಳೀಯ ಪತ್ರಿಕೆಗಳ ಸಾಲಿನಲ್ಲಿ ನಿಮ್ಮ ಅಚ್ಚುಮೆಚ್ಚಿನ  ‘ಬೆವರ ಹನಿ’ ದಿನಪತ್ರಿಕೆ ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. 


2018ರಲ್ಲಿ ನಾಲ್ಕು ಪುಟಗಳ ಬ್ಲಾಕ್ ಅಂಡ್ ವೈಟ್ ವೆಬ್ ಪ್ರೆಸ್ ಹಾಕಿದ್ದೆ, ಅದರ ಸ್ಥಾನದಲ್ಲಿ ವರ್ಷದ ಹಿಂದೆ ಎಂಟು ಪುಟಗಳ ಮಲ್ಟಿಕಲರ್ ವೆಬ್ ಆಫ್ ಸೆಟ್ ಪ್ರೆಸ್ ಬಂದು ನಿಂತಿದೆ. ಪತ್ರಿಕೆಯ ಪ್ರಸಾರ ಉತ್ತಮವಾಗಿದೆ. ಸಾಲ ಸೋಲ ಇದೆ, ತೀರಿಸುವ ನಂಬಿಕೆಯಿದೆ. ಅಡ್ಡಗಾಲು ಹಾಕುವವರಿಗೇನೂ ಕಡಿಮೆ ಇಲ್ಲ. ಆದರೆ ಬೆಂಬಲಿಸುತ್ತಿರುವ ಹಿತೈಷಿಗಳು ಅದಕ್ಕಿಂತ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸಾರಿ, ಎಲ್ಲಿಂದ ಎಲ್ಲಿಗೋ ಹೋಗಿಬಿಟ್ಟೆ.


ಈಗ ವಾರದಿಂದ ಸದ್ದು ಗದ್ದಲ ಮಾಡುತ್ತಿರುವ ಕಾಶ್ಮೀರಕ್ಕೂ ನನಗೂ ಮೂರೂವರೆ ದಶಕದ ಖಾಸಾ ಸಂಬಂಧವಿದೆ ಎಂದು ತಿಳಿಸಲು ಇಷ್ಟೆಲ್ಲ ಹೇಳಬೇಕಾಯಿತು. ನಾನು ಪತ್ರಿಕಾವೃತ್ತಿ ಆರಂಭಿಸುವ ಒಂದೂವರೆ ವರ್ಷ ಮೊದಲು, 1986ರ ಜೂನ್ -ಜುಲೈ ತಿಂಗಳಲ್ಲಿ ಒಂದು ತಿಂಗಳ ಕಾಲ ನಾನು ಕಾಶ್ಮೀರದಲ್ಲಿದ್ದೆ, ಮತ್ತೆ 30 ವರ್ಷಗಳ ನಂತರವೂ ಆ ರಾಜ್ಯದಲ್ಲಿ ಐದಾರು ದಿನಗಳಿದ್ದವನು ನಾನು.


1986ರಲ್ಲಿ ನನ್ನ ಬಿಎಸ್ಸಿ ಪದವಿಯ ಅಂತಿಮ ವರ್ಷ, ಎನ್‌ಸಿಸಿಯಲ್ಲಿ ಅಂಡರ್ ಆಫೀಸರ್ ಆಗಿದ್ದ ನನ್ನನ್ನು ಮೇಜರ್ ರೆಡ್ಡಿಯವರು ಕಾಶ್ಮೀರದ ನ್ಯಾಶನಲ್ ಟ್ರೆಕ್ಕಿಂಗ್ ಕ್ಯಾಂಪ್‌ಗೆ ಆಯ್ಕೆ ಮಾಡಿ ಕಳಿಸಿಕೊಟ್ಟಿದ್ದರು. ಬೆಂಗಳೂರಿನಿAದ ರೈಲಿನಲ್ಲಿ ಜಮ್ಮುವರೆಗೆ ಪಯಣ, ಅಲ್ಲಿಂದ ಬಸ್‌ನಲ್ಲಿ ಶ್ರೀನಗರ. ಅಲ್ಲಿ ಬಡ್‌ಗಾವ್‌ನ ಬೇಸ್ ಕ್ಯಾಂಪ್‌ನಲ್ಲಿ ನಮ್ಮ ದೊಡ್ಡ ದೊಡ್ಡ ಲಗೇಜುಗಳನ್ನು ಇರಿಸಿ, ಬ್ಯಾಕ್‌ಪ್ಯಾಕ್‌ನಲ್ಲಿ ಒಬ್ಬರು ಸಲೀಸಾಗಿ ಹೊರಲಾಗುವಷ್ಟು ಅವಶ್ಯಕ ಪದಾರ್ಥಗಳನ್ನು ಮಾತ್ರವೇ ತೆಗೆದುಕೊಂಡು ಟ್ರೆಕ್ಕಿಂಗ್ ಆರಂಭಿಸಿದೆವು. ನಾಲ್ಕೆದು ರಾಜ್ಯಗಳಿಂದ ಬಂದಿದ್ದ ಒಟ್ಟು ನಲ್ವತ್ತು ಜನರ ತಂಡವದು. ಮಿಲಿಟರಿ ಸಿಬ್ಬಂದಿಯ ಉಸ್ತುವಾರಿ.


ಆಗ ತಾನೇ ಭಯೋತ್ಪಾದನೆ ಕಾಶ್ಮೀರಕ್ಕೆ ಅಧಿಕೃತವಾಗಿ ಕಾಲಿಟ್ಟಿತ್ತು, ರಾಜಧಾನಿ ಶ್ರೀನಗರಕ್ಕೆ ತುಸು ದೂರದ ಅನಂತ್‌ನಾಗ್‌ನಲ್ಲಿ ಗುಂಡುಗಳು ಹಾರುತ್ತಿದ್ದವು, ಅಮಾಯಕ ಕಾಶ್ಮೀರಿಗಳು ಹಾಗೂ ಭದ್ರತಾಪಡೆಗಳ ಸಿಬ್ಬಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. 


ನಾವು ಪ್ರತಿ ದಿನವೂ ಒಂದಷ್ಟು ಗುಡ್ಡ, ಕಾಡುಗಳ ಕಾಲುದಾರಿ ಹಿಡಿದು ನಡೆಯುತ್ತ ಸಾಗಿ, ಸಂಜೆಯಾಗುವ ಮೊದಲೇ ನಿಗದಿತ ಸ್ಥಳದಲ್ಲಿ ಏರ್ಪಡಿಸಿರುತ್ತಿದ್ದ  ಶಿಬಿರಗಳಲ್ಲಿ ಉಳಿದುಕೊಳ್ಳುತ್ತಿದ್ದೆವು.ಮತ್ತೆ ಮಾರನೇ ಬೆಳಿಗ್ಗೆ ಅಲ್ಲಿ ತಿಂಡಿ ತಿಂದು, ಮಧ್ಯಾಹ್ನದ ಊಟದ ಬುತ್ತಿ ಹೊತ್ತು ನಡೆಯುತ್ತಿದ್ದೆವು. ಒಟ್ಟು 20 ದಿನಗಳ ಟ್ರೆಕ್ಕಿಂಗ್ ಸುಮಾರು ಐವತ್ತಕ್ಕೂ ಹೆಚ್ಚು ಹಳ್ಳಿಗಳನ್ನು ಕಂಡೆ. ಜೊತೆಗೆ ಮೂರು ಭಾನುವಾರಗಳಂದು ಶ್ರೀನಗರ ಸಿಟಿ, ಗುಲ್‌ಮಾರ್ಗ್ ಹಾಗು ಪೆಹಲ್‌ಗಾಮ್‌ಗಳೆಂಬ ಪ್ರವಾಸಿ ಸ್ಥಳಗಳಿಗೂ, ಚರಾ-ರೇ- ಷರೀಫ್ ಪಟ್ಟಣದಲ್ಲಿರುವ ನಂದ್‌ರುಷಿ ಎಂಬ ಸೂಫಿ ಸಂತನ ಗದ್ದುಗೆಗೂ ಭೇಟಿ ನೀಡಿದ್ದೆವು. (ನೀವು ಸಲ್ಮಾನ್ ಖಾನ್‌ನ ಭಜರಂಗಿ ಬಾಯಿ ಜಾನ್ ಸಿನಿಮಾ ನೋಡಿದ್ದರೆ, ಅದರಲ್ಲಿ ಅದ್ನಾನ್ ಸಾಮಿ ಎಂಬ ಪಾಕ್ ಗಾಯಕನ “ ಭರ್ ದೋ ಜೋಲಿ ಯೇ ಮೇರಿ ಮೊಹಮ್ಮದೂ” ಎಂಬ ಸೂಫಿ ಹಾಡಿನ ಚಿತ್ರೀಕರಣವಾಗಿರುವ ಸ್ಥಳವೇ ಈ ಚರಾ-ರೇ- ಷರೀಫ್ ದರ‍್ಗಾ. 


ಕಾಶ್ಮೀರದಲ್ಲಿ ಆಗ ಹೆಚ್‌ಎಂಟಿ ಕೈಗಡಿಯಾರ ಕಾರ್ಖಾನೆಯ ಘಟಕ ಇನ್ನೂ ಚೆನ್ನಾಗಿ ಉತ್ಪಾದನೆ ಮಾಡುತ್ತಿತ್ತು, ಆರಡಿಗೂ ಮೀರಿದ ನಿಲುವಿನ ಮಾಗಿ ಹಣ್ಣಾದ ಸೇಬಿನಷ್ಟೇ ಕೆಂಪನೆಯ ಕೆನ್ನೆಗಳ ಗೋದಿ ಬಣ್ಣದ ಮೈಬಣ್ಣದ ಹೆಂಗಸರು ನಮ್ಮಲ್ಲಿ ಜೆಂಟ್ಸ್ ವಾಚ್‌ಗಳು ಎಂದು ಕರೆಯುತ್ತಿದ್ದ ದೊಡ್ಡ ಡಯಲ್‌ನ ಹೆಚ್‌ಎಂಟಿ ವಾಚುಗಳನ್ನೇ ಕಟ್ಟಿಕೊಂಡಿರುತ್ತಿದ್ದರು. ಚರಾರ್-ಏ-ಷರೀಫ್‌ನಲ್ಲಿ ಇಂತದ್ದೇ ಹೆಂಗಸರು ಕಂಚಿನ ಹರಿವಾಣಗಳನ್ನು ಕಂಕುಳಿಗೆ ಇರುಕಿಸಿಕೊಂಡು ಬಂದು ಎಮ್ಮೆಯನ್ನು ಕಟಾವು ಮಾಡುವ ದುಖಾನಿನ ಮುಂದೆ ಮಾಂಸಕ್ಕಾಗಿ ಗುಂಪಾಗಿ ನಿಂತಿದ್ದನ್ನು ಕಂಡಿದ್ದೆ.


ಕಾಶ್ಮೀರವನ್ನು ಭೂಮಿಯ ಮೇಲಿನ ಸ್ವರ್ಗ ಎನ್ನುತ್ತಾರೆ. ಪ್ರಕೃತಿಯ ಮಟ್ಟಿಗೆ ಬೇಸಿಗೆ ಕಾಲದಲ್ಲಿ ನಿಜಕ್ಕೂ ಹಾಗೇ ಅನಿಸುತ್ತದೆ. ಶ್ರೀನಗರದ ನಡುವಲ್ಲಿರುವ ದಾಲ್ ಲೇಕ್ ಹೆಪ್ಪು ಗಟ್ಟಿ ಅದರ ಮೇಲೆ ಕ್ರಿಕೆಟ್ ಆಡುವ ದಿನಗಳ ಮೈನಸ್ ಡಿಗ್ರಿಗಳಿಗೆ ಇಳಿಯುವ ತೀವ್ರ ಚಳಿಗಾಲದಲ್ಲಿ ಸರಿಯಾಗಿ ಉಡಲು, ಹೊದೆಯಲು, ಉಣ್ಣಲು ಇಲ್ಲದ ನಿರ್ಗತಿಕರ ಬದುಕು ದುಸ್ತರವಾಗಿಬಿಡುತ್ತದೆ.


ನಾವು ಹೋದಾಗ ಅದು ಅಲ್ಲಿ ಬೇಸಿಗೆ ಲೆಕ್ಕ, ಇರುಳಿನಲ್ಲಿ ಏಳೆಂಟು ಡಿಗ್ರಿ, ಹಗಲು ಅದರ ಡಬ್ಬಲ್ ಉಷ್ಣಾಂಶ ಇರುತ್ತಿತ್ತು, ಹೆಚ್ಚೂ ಕಮ್ಮಿ ನಮ್ಮ ಕಡೆಯ ಚಳಿಗಾಲದಂತೆ. ಬೆಳಗಿನ ನಾಲ್ಕು ಗಂಟೆಗೇ ಸೂರ‍್ಯೋದಯ, ರಾತ್ರಿ ಎಂಟರ ಹೊತ್ತಿಗೆ ಸೂರ‍್ಯಾಸ್ತ. ಹಗಲು ದೊಡ್ಡದು. 


ಇಲ್ಲಿರುವಂತೆ ಅಲ್ಲೂ ಬಡವರ ಸಂಖ್ಯೆಯೇ ಹೆಚ್ಚು,  ಪೋನಿಗಳೆಂದು ಕರೆಯುವ ಗಿಡ್ಡ ಕುದುರೆಗಳನ್ನ ದಂಡನ್ನೇ ಹೊಂದಿರುವ ಮಾಲಿಕನಿಂದ ದಿನದ ಬಾಡಿಗೆ ಲೆಕ್ಕಕ್ಕೆ ಕುದುರೆ ತರುವ ಜನರು, ಇಡೀ ದಿನ ಒಂದಷ್ಟು ಪ್ರವಾಸಿಗರ ಸವಾರಿ ಮಾಡಿಸಿ, ಬರುವ ಹಣದಲ್ಲಿ ಪೋನಿ ಮಾಲಿಕನಿಗೆ ಕೊಟ್ಟು ಆ ಪ್ರಾಣಿಗೆ ಮೇವು, ಹುರುಳಿ ತಿನ್ನಿಸಿ ಉಳಿದ ಚಿಲ್ಲರೆ ಹಣದಲ್ಲಿ ಜೀವನ ಸಾಗಿಸಬೇಕು.  ಭೂಮಿಯೂ ಅಷ್ಟೇ, ಪ್ರತಿ ಊರಿಗೆ ಬೆರಳೆಣಿಕೆಯಷ್ಟು ಭೂಮಾಲೀಕರ ಪಾಲು, ಹಾಗಾಗಿ ಆ ಬಹುಪಾಲು ಭೂಮಾಲೀಕರೆಲ್ಲ ಈ ಪಂಡಿತ ಬ್ರಾಹ್ಮಣರೇ ಆಗಿದ್ದರು. ಆಗ ಇನ್ನೂ ಈ ಕಾಶ್ಮೀರಿ ಫೈಲ್ಸ್ ಸಿನಿಮಾದಲ್ಲಿ ಹೇಳಿರುವ 1990ರ ದುರ್ಘಟನೆ ಆಗಿರಲಿಲ್ಲ. ನೋಡಲು ಪಂಡಿತರು ಹಾಗೂ ಮುಸ್ಲಿಮರು ಒಂದೇ ತರ, ತಳಿಯೂ ಅಷ್ಟೇ , ವೇಷ ಭೂಷಣಗಳಲ್ಲೂ ಅಷ್ಟೇ. ಎಲ್ಲ ಪರ್ಶಿಯಾದಿಂದ ಬಂದವರ ತರ. 


ಪಂಡಿತರೆಂಬುದು ಅವರ ಬಿರುದು, 15ನೇ ಶತಮಾನದಲ್ಲಿ ಸುಲ್ತಾನರಿಂದ ಕಾಶ್ಮೀರವನ್ನು ವಶಪಡಿಸಿಕೊಂಡ ಮೊಘಲ್ ಚಕ್ರವರ್ತಿ ಅಕ್ಬರ್ ಈ ಜನರ ಬುದ್ದಿವಂತಿಕೆ,ಲೆಕ್ಕಾಚಾರದ ಬದುಕು, ಪರ್ಶಿಯನ್ ಭಾಷಾ ಪರಿಣಿತಿ, ಆಡಳಿತ ವಿಧಾನ ಕಂಡು ಇವರನ್ನು ಪಂಡಿತ್ ಎಂದು ಗೌರವದಿಂದ ಕರೆಯುತ್ತಾನೆ. ಕಾಶ್ಮೀರ ಕಣಿವೆಗೆ ಕಾಲಿಟ್ಟ ಮೊದಲ ವಿದೇಶಿ ಆಕ್ರಮಣಕಾರ ಗ್ರೀಕ್‌ನ ಅಲೆಗ್ಸಾಂಡರ್ ದಿ ಗ್ರೇಟ್, ಆತನ ಮೆಚ್ಚಿನ ಶ್ರೇಷ್ಟ ಕುದುರೆ ಕಾಶ್ಮೀರದಲ್ಲೇ ಪ್ರಾಣ ಬಿಟ್ಟಿದ್ದು. ಅದನ್ನು ಸಮಾಧಿ ಮಾಡಿದ ಊರಿಗೆ ಆ ಕುದುರೆಯ ಹೆಸರನ್ನು ಇಟ್ಟಿದ್ದಾನೆ. ನಂತರ ಬಂದವರು ಮುಸ್ಲಿಮ್ ದಾಳಿಕೋರರು, ಅವರು ಅಲ್ಲಿನ ಜನರನ್ನು ಇಸ್ಲಾಮಿಗೆ ಮತಾಂತರ ಮಾಡಿದರು. ಹಾಗಾಗಿ ಕೆಲವು ಕಾಶ್ಮೀರಿ ಮುಸ್ಲಿಮರ ಸರ್‌ನೇಮ್‌ಗಳಲ್ಲಿ ಅವರ ಮೂಲ ಹೆಸರಿನಲ್ಲಿದ್ದ ಭಟ್ ಎಂಬುದು ಇನ್ನೂ ಉಳಿದುಕೊಂಡಿದೆ. 


ಕಾಶ್ಮೀರವನ್ನು ಆಳ್ವಿಕೆ ಮಾಡಿದವರ ಆಸ್ಥಾನಗಳಲ್ಲೇ ಮಹತ್ವದ ಹಾಗೂ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಿದ್ದ ಈ ಪಂಡಿತರು ಸಹಜವಾಗೇ ದೊಡ್ಡ ಪ್ರಮಾಣದ ಭೂ ಮಾಲೀಕರೂ ಆ ಮೂಲಕ ಸಿರಿವಂತರೂ ಆಗಿ ಹೋದರು. ದೊಡ್ಡ ಸಂಖ್ಯೆಯಲ್ಲಿದ್ದ ಪರಿವರ್ತಿತ ಮುಸ್ಲಿಮರು ಕಾಲಾನುಕ್ರಮದಲ್ಲಿ ಮಧ್ಯ ಏಶ್ಯಾದಿಂದ ಬಂದ ಕೆತ್ತನೆ, ಬಿದರಿ ಕಲೆ, ಶಾಲು ನೇಯ್ಗೆ ಮೊದಲಾದ ಕುಸುರಿ ಕಲೆಗಳನ್ನು ಅವಲಂಬಿಸಿದರು. ಭೂರಹಿತರೂ ಆಗಿದ್ದ ಅವರು ಸಹಜವಾಗೇ  ಕೃಷಿ ಕಾರ್ಮಿಕರೂ ಆಗಿದ್ದರು.


ದೊಡ್ಡ ದೊಡ್ಡ ಚೀನಾರ್ ಮರಗಳ ತೋಪುಗಳಲ್ಲಿ ಹುದುಗಿರುವ ಕಾಶ್ಮೀರದ ಹಳ್ಳಿಗಳಲ್ಲಿ ಒಂದೋ ಎರಡೋ ಮನೆಗಳಲ್ಲಿ ಬ್ರೆಡ್, ಬಿಸ್ಕತ್ ಮಾಡುವ ಬೇಕರಿಗಳಿರುತ್ತಿದ್ದವು. ಅಲ್ಲಿ ಒಮ್ಮೆ ಬಿಸ್ಕತ್ ಕೊಳ್ಳಲು ತಂಡದಲ್ಲಿದ್ದವನೊಬ್ಬ ನೂರು ರೂಪಾಯಿಯ ದೊಡ್ಡ ನೋಟು ತೆಗೆದದ್ದೇ ತಡ, ನಮಗೋ ತೀರಾ ಗಾಬರಿ ಆಗುವಂತೆ ಅಲ್ಲಿದ್ದ ಇಡೀ ಗ್ರಾಮಸ್ಥರು ಗಂಡು ಹೆಣ್ಣೆನ್ನದೇ ಆತನನ್ನು ಸುತ್ತುವರೆದುಬಿಟ್ಟಿದ್ದರು. ನಮ್ಮ ಜೊತೆ ಬಂದೂಕದಾರಿ ಮಿಲಿಟರಿಯವರು ಇದ್ದದ್ದರಿಂದ ಸರಿ ಹೋಯಿತು ಅಂತ ಅಂದುಕೊಂಡೆವು. ಅಗಿನ ಕಾಶ್ಮೀರದ ಎಕಾನಮಿ ಆ ಮಟ್ಟಕ್ಕಿತ್ತು. ಅದು 1986, ಅದಾದ ಒಂದೂವರೆ ವರ್ಷದ ಬಳಿಕ ತುಮಕೂರಿನಲ್ಲಿ ವರದಿಗಾರನಾಗಿ ಕೆಲಸಕ್ಕೆ ಸೇರಿದ ನಾನು ಪಡೆದ ಮೊದಲ ತಿಂಗಳ ಸಂಬಳ ರೂ.250 ಎಂದರೆ ನಿಮಗೆ ಅವತ್ತಿನ ಇಡೀ ದೇಶದ ಆರ್ಥಿಕತೆ ಅರ್ಥವಾಗಬಹುದು.


ತುಮಕೂರಿನ ಆ ಪತ್ರಿಕೆಯಲ್ಲಿ ಎಂಟು ವರ್ಷ ಕೆಲಸ ಮಾಡಿ,ನಂತರ ಸ್ವಂತದ ಪ್ರೆಸ್ ಸ್ಥಾಪಿಸಿ, ಆರು ತಿಂಗಳ ಆಯುಸ್ಸಿನ ‘ ಸುದ್ದಿ ಆಮೂಲ್ಯ’ ವಾರಪತ್ರಿಕೆ ನಡೆಸಿ, ಮತ್ತೆ ರಾಜಧಾನಿಯಲ್ಲಿ ನಾಲ್ಕೈದು ವರ್ಷ ರಾಜ್ಯ ಮಟ್ಟದ ‘ ಜನವಾಹಿನಿ’ ದಿನಪತ್ರಿಕೆಯ ವರದಿಗಾರನಾಗಿ ಕಾರ‍್ಯ ನಿರ್ವಹಿಸಿದೆ. ಆ ಅವಧಿಯಲ್ಲಿ ಬರೆದಿದ್ದ ಕೆಪಿಎಸ್‌ಸಿ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿದ್ದರಿಂದ ವಿಧಾನ ಸೌಧದಲ್ಲಿ ರ‍್ಕಾರಿ ನೌಕರಿ ದೊರಕಿತು. ಅಲ್ಲಿ ಕೆಲಸ ಮಾಡುವಾಗ ಸರ‍್ಕಾರಿ ನೌಕರರ ಒಕ್ಕೂಟದ ರಾಷ್ಟ್ರೀಯ ಅಧಿವೇಶನದಲ್ಲಿ ಭಾಗವಹಿಸಲು 2016ರಲ್ಲಿ ಕಾಶ್ಮೀರಕ್ಕೆ ಹೋಗಬೇಕಾಗಿ ಬಂತು, ಅದೇ ಶ್ರೀನಗರ, ಅದೇ ಗುಲ್‌ಮಾರ್ಗ್ ಹಾಗೂ ಪೆಹಲ್‌ಗಾಮ್‌ಗಳಿಗೆ ಭೇಟಿ ನೀಡಿದೆವು. ಜೊತೆಗೆ ಹಿಮ ತುಂಬಿದ್ದ ಸೋನ್ ಮಾರ್ಗ್, ಜೊತೆಗೆ ಜಮ್ಮುವಿನಲ್ಲಿ ವೈಷ್ಣೋದೇವಿಯನ್ನೂ ಕಂಡು ಬಂದೆವು. 


1986ರ ಹಾಗೂ 2016ರ ನಡುವೆ ದಾಲ್‌ಲೇಕ್‌ನಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಪೆಹಲ್‌ಗಾಮ್‌ಗೆ ಹೋಗುವ ದಾರಿಯಲ್ಲಿ ಉಳಿದುಕೊಂಡಿದ್ದ ಹೋಟೆಲ್‌ನ ಸಮೀಪದ ಹಳ್ಳಿಗೆ ಬೆಳಗಿನ ವಾಕ್ ಹೋಗಿದ್ದೆ. ಆ ಊರಿನಲ್ಲಿ ದೊಡ್ಡ ಬಂಗಲೆಯಂಥ ಒಂದೆರಡು ಮನೆಗಳು ಖಾಲಿ ಬಿದ್ದು ಈಗಲೋ ಆಗಲೋ ಬಿದ್ದುಹೋಗುವಂತಿದ್ದನ್ನು ಕಂಡೆ, ಅಲ್ಲಿದ್ದ ಹಳ್ಳಿಗರನ್ನು ಹಿಂದಿಯಲ್ಲಿ ಮಾತನಾಡಿಸಿದಾಗ, ಅವರು ಹೇಳಿದ್ದು “ಇವು ಪಂಡಿತರ ಮನೆಗಳು, ಅವರೀಗ ದಿಲ್ಲಿಯಲ್ಲಿದ್ದಾರೆ. ಪ್ರತಿ ಶಿವರಾತ್ರಿಗೆ ಬಂದು ಹಬ್ಬ ಮಾಡಿ ಹೋಗುತ್ತಾರೆ” ಅಂತ. “ ಅವರು ಬಿಟ್ಟು ಹೋದ ಜಮೀನು ಏನಾಯಿತು” ಅಂತ ಕೇಳಿದಾಗ ಅವರಲ್ಲಿ ತಕ್ಷಣಕ್ಕೆ ಯಾರೂ ಮಾತನಾಡಲಿಲ್ಲ, ಒಬ್ಬ ಮಾತ್ರ ತುಸು ಲಜ್ಜೆಯಿಂದ “ ನಾವೇ ಬೆಳೆ ಬೆಳೆಯುತ್ತಿದ್ದೇವೆ, ಅವರು ವಾಪಸ್ ಬಂದು ಇಲ್ಲೇ ಇರುವಂತಾದರೆ ಅವರಿಗೇ ಬಿಟ್ಟು ಕೊಡುತ್ತೇವೆ” ಅಂತಂದ. “ ಮತ್ಯಾಕೆ ಇಲ್ಲಿಂದ ಕಳಿಸಿಬಿಟ್ರಿ” ಎನ್ನುವ ನನ್ನ ಮಾತಿಗೆ, ಆತ ಅಲ್ಲೇ ಸಮೀಪದಲ್ಲೇ ಕಾಣುತ್ತಿದ್ದ ಮಸೀದಿಯ ಮಿನಾರಿನ ಕಡೆ ತಿರುಗಿ ನೋಡಿ ಸುಮ್ಮನಾದ. ನಾನು ಒಬ್ಬನೇ ಇದ್ದೆನಲ್ಲ, ಹೆಚ್ಚು ಕೆದಕಲು, ಕೆಣಕಲು ಹೋಗಲಿಲ್ಲ.

ನಿಜ, 1990ರಲ್ಲಿ ನೂರಾರು ಪಂಡಿತರನ್ನು ಕೊಂದು, ಮನೆಗಳಿಗೆ ಬೆಂಕಿ ಹಾಕಿ, ಜೀವ ಭಯ ಸೃಷ್ಟಿಸಿ ಊರು ಬಿಡಿಸಿ, ಉಟ್ಟ ಬಟ್ಟೆಯಲ್ಲಿ ಓಡಿಸಿದಾಗ ಅಲ್ಲಿ ಕಾಶ್ಮೀರದಲ್ಲಿ 94-95 % ಮುಸ್ಲಿಮರಿದ್ದರು, 24 ಸಾವಿರದಷ್ಟು ಪಂಡಿತರ ಕುಟುಂಬಗಳಿದ್ದವು. ಆದರೆ  ಎಲ್ಲ ಪಂಡಿತರೂ ಊರು ಬಿಡಲಿಲ್ಲ, ಸುಮಾರು ಹೋಬಳಿ ಮಟ್ಟದ ದೊಡ್ಡ ಊರುಗಳಲ್ಲಿ ವ್ಯಾಪಾರ ಮಾಡುತ್ತ ಅಂಗಡಿಗಳನ್ನು ಹೊಂದಿದ್ದ ಕೆಲವು ಪಂಡಿತರು ಆದದ್ದಾಗಲೀ ಎಂದು ಅಲ್ಲೇ ಉಳಿದುಕೊಂಡರು. wildfilms.com, newsX   ಚಾನೆಲ್‌ನ ಡಾಕ್ಯುಮೆಂಟರಿಗಳಲ್ಲಿ ಆ ಕಾಲದ ಎಲ್ಲ ನೈಜ ದೃಶ್ಯಗಳ ವರದಿಗಳಿವೆ, ಯೂ ಟ್ಯೂಬ್‌ನಲ್ಲಿ ಹುಡುಕಿ ನೋಡಿಕೊಳ್ಳಬಹುದು.


ಇಂದಿರಾ ಹಾಗೂ ಸಂಜಯ್‌ಗಾಂದಿಯ ಆಪ್ತ , ದಿಲ್ಲಿಯ ಸ್ಲಂಗಳನ್ನು ನಿರ್ದಾಕ್ಷಿಣ್ಯವಾಗಿ ನಿರ್ಮೂಲನೆ ಮಾಡಿ ನಗರದ ಸೌಂದರ‍್ಯೀಕರಣಕ್ಕೆ ನೆರವಾದ ಆಸಾಮಿ,  1971ರಲ್ಲೇ ಪದ್ಮಶ್ರೀ ನಂತರ ಪದ್ಮಭೂಷಣ, ಪದ್ಮವಿಭೂಷಣ ಪಡೆದ ಪಂಜಾಬ್ ಮೂಲದ ಐಎಎಸ್ ಅಧಿಕಾರಿ ಜಗಮೋಹನ್ ಮಲ್ಹೋತ್ರಾ ಎಂಬಾತ ಎರಡು ಅವಧಿಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲನಾಗಿ ಭಯೋತ್ಪಾದಕರನ್ನು ಹತೋಟಿಗೆ ತರಲು ಶ್ರಮಿಸಿದಾತ.

 ಮೊದಲ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯಪಾಲರಾದರೆ, ಎರಡನೇ ಅವಧಿಯಲ್ಲಿ  ಕಾಂಗ್ರೆಸ್ ತೊರೆದು ಜನತಾದಳ ಸಮ್ಮಿಶ್ರ ಸರ್ಕಾರ ರಚಿಸಿ ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್ ಅವರಿಂದ ನೇಮಕಗೊಂಡವರು ಇವರು. ಆಗ 1990.ಎರಡನೇ ಅವಧಿಗೆ ಜಗಮೋಹನ್ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸುವಂತೆ ಪ್ರಧಾನಿ ಸಿಂಗ್ ಅವರಿಗೆ ಸೂಚನೆ ನೀಡಿದ್ದೇ ಬಹುಮತವಿಲ್ಲದ ಅವರ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದ ಬಿಜೆಪಿ ಅಲಿಯಾಸ್ ಆರ್‌ಎಸ್‌ಎಸ್ ಎಂದು ಎಲ್ಲರೂ ಹೇಳುತ್ತಾರೆ. 


ವಿಪಿಸಿಂಗ್ ಪ್ರಧಾನಿಯಾದ ಆರೇ ದಿನಗಳಲ್ಲಿ ಗೃಹ ಸಚಿವ ಕಾಶ್ಮೀರದ ಮುಫ್ತಿ ಮೊಹಮದ್ ಸಯೀದ್ ಮಗಳ ಅಪಹರಣವಾಗುತ್ತದೆ. ಆಕೆಯನ್ನು ಬಿಡಿಸಿಕೊಂಡು ಬರಲು ಸೆರೆಯಲ್ಲಿದ್ದ ಕೆಲ ಭಯೋತ್ಪಾದಕರನ್ನು ಬಿಡುಗಡೆ ಮಾಡುತ್ತದೆ ಕೇಂದ್ರ ಸರ್ಕಾರ. ಅದೇ ದಿನಗಳಲ್ಲಿ ಪಕ್ಕದ ಪಾಕ್ ಮುಖ್ಯಸ್ಥೆ ಬೇನಜೀರ್ ಭುಟ್ಟೋ ಎಂಬ ಅವಿವೇಕಿ ಟಿವಿ ಭಾಷಣಗಳಲ್ಲಿ ‘ ಇಂಡಿಯಾದಿಂದ ಸ್ವತಂತ್ರರಾಗುವಂತೆ ಕಾಶ್ಮೀರಿಗಳಿಗೆ ಪ್ರಚೋದನೆ ಕೊಡುತ್ತಾಳೆ. ಜೊತೆಗೆ ರಶ್ಯಾ ನಿರ್ಮಿತ ಬಂದೂಕುಗಳು,ಮದ್ದು ಗುಂಡುಗಳು ಭಯೋತ್ಪಾದಕರ ಕೈಲಿ ಕೆಂಡ ಕಾರುತ್ತವೆ. ಪಾಕ್‌ನಿಂದ ಬಾಡಿಗೆ ಭಯೋತ್ಪಾದಕರು ಸಾವಿರ ಸಂಖ್ಯೆಯಲ್ಲಿ ಒಳನುಸುಳುತ್ತಾರೆ. ಅಲ್ಲಿನ ಧರ್ಮಗುರುವೊಬ್ಬನನ್ನು ಗುಂಡಿಟ್ಟು  ಕೊಲ್ಲಲಾಗುತ್ತದೆ, ರಾಜ್ಯಪಾಲ ಜಗಮೋಹನ್ ಅವರೇ ಇದನ್ನೆಲ್ಲ ಮಾಡಿಸಿದ್ದು ಅಂತ ಜನರು, ಮುಲ್ಲಾನ ಅಂತ್ಯ ಸಂಸ್ಕಾರ ಮೆರವಣಿಗೆಯಲ್ಲಿ ದಂಗೆ ಏಳುತ್ತಾರೆ. ಆಗ ಸುಮಾರು 60 ಜನ ಅಮಾಯಕರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗುತ್ತಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಜನರು ಪಂಡಿತರ ಕಡೆ ತಿರುಗುತ್ತಾರೆ. ಇದು ಆಗ ನಡೆದ ಘಟನೆಗಳ ಸಂಕ್ಷಿಪ್ತ ಮಾಹಿತಿ. ವಿವರ ಬಹಳವಿದೆ. ಹಿನ್ನೆಲೆ ದೀರ್ಘವಾಗಿದೆ. 


ಜಗಮೋಹನ್ ರಾಜ್ಯಪಾಲರಾಗಿ ತಾವು ಶ್ರದ್ದೆಯಿಂದ ಕೆಲಸ ಮಾಡಿದ್ದಾಗಿ ಸಂದರ್ಶನಗಳಲ್ಲಿ ತಿಳಿಸುತ್ತಾರೆ. ಅವತ್ತು ದಂಗೆಯನ್ನು ನಿಯಂತ್ರಿಸುವ ಸಲುವಾಗಿ ಭದ್ರತಾಪಡೆಗಳ ಗುಂಡಿಗೆ 60 ಮಂದಿ ಕಾಶ್ಮೀರಿಗಳು ಬಲಿಯಾದದ್ದೇ ಕಡಿಮೆ ಎಂದುಕೊಳ್ಳಿ, ನಾವು ನಿಯಂತ್ರಿಸದೇ ಹೋಗಿದ್ದರೆ ಸಾವಿರಾರು ಅಮಾಯಕರು ಪ್ರಾಣಕಳೆದುಕೊಳ್ಳುತ್ತಿದ್ದರು ಎಂದು ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾರೆ. ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಪ್ರತಿದಿನವೂ ನೂರಾರು ಸಾರ್ವಜನಿಕರನ್ನು ಭೇಟಿಮಾಡಿ ಅವರ ಕಷ್ಟ ಸುಖಗಳನ್ನು ಆಲಿಸುತ್ತಿದ್ದ ಜಗಮೋಹನ್ ಬಿಜೆಪಿ ಸೇರಿ ಮೂರು ಸಲ ದಿಲ್ಲಿಯಿಂದ ಎಂಪಿಯಾಗಿ ಗೆಲ್ಲುತ್ತಾರೆ. ಒಂದು ಸಲ ರಾಜ್ಯ ಸಭೆಯಲ್ಲೂ ಇರುತ್ತಾರೆ. 


ಹಿಂದೂಗಳ ಸ್ವಘೋಷಿತ ರಕ್ಷಕ ಬಿಜೆಪಿಯೇ ಹೇಳಿ ನೇಮಿಸಿದ ಜಗಮೋಹನ್ ರಾಜ್ಯಪಾಲರಾಗಿದ್ದಾಗಲೇ ಈ ಪಂಡಿತರು ಉಟ್ಟಬಟ್ಟೆಯಲ್ಲಿ ಊರು ಬಿಡುವಂತಾದದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ನೀಡಲು ಜಗಮೋಹನ್ ಇನ್ನೂ ಜೀವಂತವಾಗಿಲ್ಲ. 93 ವರ್ಷ ಬದುಕಿದ್ದ ಅವರು ತೀರಿಕೊಂಡು ಬರುವ ಮೇ 3ಕ್ಕೆ ಕೇವಲ ಒಂದು ವರ್ಷ, ಜಗಮೋಹನ್ ತೀರಿಕೊಂಡ ಬಳಿಕವಷ್ಟೇ “ ಕಾಶ್ಮೀರಿ ಫೈಲ್ಸ್” ಬಿಡುಗಡೆ ಆದದ್ದು ಕೇವಲ ಕಾಕತಾಳೀಯ ಎನ್ನಬಹುದೇ ನೀವೇ ಹೇಳಿ. 


ಈಗ ಇದೀಗ ಏಳು ವರ್ಷಗಳಿಂದ ಇಡೀ ದೇಶದ ಆಡಳಿತ ಚುಕ್ಕಾಣಿ  ಹಿಡಿದಿರುವ ಇದೇ ಬಿಜೆಪಿಗೆ ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಇಲ್ಲದಂತೆ ಮಾಡಲು ಆಗಿಲ್ಲವೆಂದರೆ, ಅಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಎರಡು ವರ್ಷಗಳಾದರೂ ಪಂಡಿತರನ್ನು ಅವರವರ ಊರುಗಳಲ್ಲಿ ನೆಲೆಸುವಂತೆ ಮಾಡಲು ಆಗಿಲ್ಲವೆಂದರೆ, ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ದಾಸರು ಹಾಡುವಂತೆಯೇ ನಮ್ಮ ರಾಜಕೀಯ ಪಕ್ಷಗಳು ಮಾಡುವುದೆಲ್ಲಾ ಓಟಿಗಾಗಿ,ಅಧಿಕಾರಕ್ಕಾಗಿ ಎಂಬುದು ಅರ್ಥವಾಗುವುದಿಲ್ಲವೇ. ಹಾಗಾಗಿ ಈ ಕಾಶ್ಮೀರಿ ಫೈಲ್ಸ್ ಎನ್ನುವ ಸಿನಿಮಾ ಜಾಹಿರಾತಿನ ಅಬ್ಬರಕ್ಕೆ ಮಾರುಹೋಗಿ ಮನಸ್ಸು ಕೆಡಿಸಿಕೊಳ್ಳಬೇಡಿ. ಸ್ವಲ್ಪ ದಿನ ಸುಮ್ಮನಿದ್ದು ಬಿಡಿ, ವಿಶ್ರಾಂತ ಜೀವನದಲ್ಲಿದ್ದ ಜಗಮೋಹನ್ ಅವರನ್ನು ಭೇಟಿ ಮಾಡಿದ ಬಿಜೆಪಿ ನಾಯಕರು


1) ಈಗಲೂ ಕಾಶ್ಮೀರದಲ್ಲಿರುವ ಮಣ್ಣಲ್ಲೇ ನಿರ್ಮಿಸಿದ ಮಾಳಿಗೆ ಮನೆಗಳು (ಫೆಹಲ್‌ಗಾಮ್) 

2) ಪೆಹಲ್‌ಗಾಮ್‌ನ ರಸ್ತೆ ಬದಿ ಮುರುಕಲು ಪೆಟ್ಟಿಗೆಯೊಂದರಲ್ಲಿ ಕಂಡ ಕ್ಷೌರದಂಗಡಿ

3) ಪ್ರವಾಸಿಗಳಿಗಾಗಿ ಬಾಡಿಗೆ ಪೋನಿಗಳೊಂದಿಗೆ ಕಾಯುತ್ತಿರುವ ಬಡ ಕಾಶ್ಮೀರಿಗಳು (ಗುಲ್‌ಮಾರ್ಗ್)

4) ಲೂಧಿಯಾನಾದಿಂದ ತರಿಸಿದ ಶಾಲುಗಳನ್ನು ಕಾಶ್ಮೀರಿ ಶಾಲುಗಳೆಂದೇ ನಂಬಿಸಿ ಪ್ರವಾಸಿಗಳಿಗೆ ಮಾರುವ ಸ್ಥಳೀಯ ವರ್ತಕರು