ಈ ಸ್ವರ ಸಾಮ್ರಾಜ್ಞಿಗೆ ಸಾಟಿ ಯಾರೂ ಇಲ್ಲ
ರೊಮ್ಯಾಂಟಿಕ್ ಹಾಡುಗಳಿಗಾಗಿಯೇ ಖ್ಯಾತಿ ಪಡೆದಿರುವ ಮಧುರ ಕಂಠದ ಆಶಾ ಜೀ.
ನಾ ದಿವಾಕರ
ಹಂ ದೋನೋ ಚಿತ್ರದ “ ಅಭೀ ನಾ ಜಾವೋ ಚೋಡ್ ಕರ್ ”, ಯಾದೋಂಕಿ ಬಾರಾತ್ ಚಿತ್ರದ “ ಚುರಾಲಿಯಾ ಹೈ ತುಮ್ ನೆ ಜೊ ದಿಲ್ ಕೋ ” , ಖೇಲ್ ಖೇಲ್ ಮೆ ಚಿತ್ರದ “ ಸಪ್‌ನಾ ಮೆರಾ ಟೂಟ್ ಗಯಾ ” , ಗೀತ್ ಗಾಯಾ ಪತ್ಥರೋನೆ ಚಿತ್ರದ “ ತೇರೇ ಖಯಾಲೋಂ ಮೆ ಹಮ್ ”, ನವರಂಗ್ ಚಿತ್ರದ “ ಆಧಾ ಹೈ ಚಂದ್ರಮಾ ರಾತ್ ಆಧೀ ”, ಬಂದಿನಿ ಚಿತ್ರದ “ ಅಬ್ ಕೆ ಬರಸ್ ಭೇಜೋ ಭಯ್ಯಾ ಕೊ ಬಾಬುಲ್ ”, ಕಾರವಾನ್ ಚಿತ್ರದ " ಪಿಯಾ ತೂ ಅಬ್ ತೊ ಆಜಾ “, ಉಮ್ರಾವ್ ಜಾನ್ ಚಿತ್ರದ " ಯೇ ಕ್ಯಾ ಜಗಾ ಹೈ ದೋಸ್ತೋ “ , ಓಹ್ ಈ ಮಧುರ ಕಂಠದ ಹಾಡುಗಳಿಗೆ ಒಡತಿಯಾಗಿರುವ ಆಶಾಭೋಂಸ್ಲೆ ಕೇವಲ ರೊಮ್ಯಾಂಟಿಕ್ ಹಾಡುಗಳಿಗೆ ಹೇಗೆ ಸೀಮಿತವಾಗಲು ಸಾಧ್ಯ ?
ಆದರೂ ಇತ್ತೀಚೆಗೆ ತಮ್ಮ ಪಯಣ ಮುಗಿಸಿದ ಆಶಾ ಜೀ ಅವರನ್ನು ನೆನಪಿಸಿಕೊಳ್ಳುವುದೇ ಹೀಗೆ. ಬಹುಶಃ ಆಕೆಯ ಸ್ವರದಲ್ಲೇ ಅಡಗಿದ್ದ ರೊಮ್ಯಾಂಟಿಸಿಸಂನ ಛಾಯೆ ಈ ವಿಶೇಷ ಬಿರುದಿಗೆ ಕಾರಣವಾಗಿರಬಹುದು. ಆದರೆ 1948ರಿಂದ 2025ರವರೆಗೆ ಆಶಾ ಜೀ ನಡೆದುಬಂದ ಹಾದಿಯಲ್ಲಿ ಒಮ್ಮೆ ಪಯಣಿಸಿದಾಗ, ಈ ಸ್ವರದಲ್ಲಿ ಶಾಸ್ತ್ರೀಯ ಮಾಧುರ್ಯ, ಭಾವನಾತ್ಮಕ ಆರ್ದ್ರತೆ, ಪ್ರಣಯದ ಸವಿ, ತುಂಟಾಟದ ಕಚಗುಳಿ, ದುಃಖದ ಛಾಯೆ, ಹುಡುಗಾಟಿಕೆಯ ಚೇಷ್ಟೆ ಇವೆಲ್ಲವನ್ನೂ ಗುರುತಿಸಬಹುದು. ಸಾವಿರಾರು ಗೀತೆಗಳ ಒಡತಿ ಕೊನೆಯುಸಿರೆಳೆದಾಗ ಒಂದು ಕ್ಷಣ ಆವರಿಸಿದ ಶೂನ್ಯ ಸುಲಭವಾಗಿ ಮರೆಯುವಂತಹುದಲ್ಲ.
ಭಾವನೆಗಳನ್ನು ತಟ್ಟುತ್ತಿದ್ದ ಗಾಯನ
ಯಾರೇ ಸಂಗೀತ ಪ್ರಿಯರಾದರೂ ತಮ್ಮ ಮೂಡ್‌ಗೆ ತಕ್ಕಂತಹ ಸಿನಿಮಾ ಹಾಡುಗಳನ್ನು ಕೇಳಬಯಸಿದರೆ ಅಲ್ಲಿ ಥಟ್ಟನೆ ನೆನಪಾಗುವ ಮಧುರ ಕಂಠಗಳೆಂದರೆ ಮೊಹಮ್ಮದ್ ರಫಿ, ಕಿಶೋರ್ ಕುಮಾರ್ ಮತ್ತು ಆಶಾ ಭೋಂಸ್ಲೆ ಎಂಬ ಸುಮಧುರ ಕಂಠದ ಗಾಯಕಿ. ಮನಸ್ಥಿತಿ ಮತ್ತು ಅಭಿವ್ಯಕ್ತಿ (Mood and Expression ) ಎರಡನ್ನೂ ಮೇಳೈಸಿ ಗಾಯನದಲ್ಲಿ ತಲ್ಲೀನವಾಗುವ ಗಾಯಕಿಯರಲ್ಲಿ ಅಗ್ರಶ್ರೇಣಿಯಲ್ಲಿ ನಿಲ್ಲುವ ಪ್ರತಿಭೆಯ ಮೇರು ಆಶಾ ಭೋಂಸ್ಲೆ. ಉಮ್ರಾವ್ ಜಾನ್ ಚಿತ್ರದ ಹಾಡುಗಳು ಇದಕ್ಕೊಂದು ಅತ್ಯುತ್ತಮ ನಿದರ್ಶನ (ಇದಕ್ಕೆ ಪೂರಕವಾದ ರೇಖಾ ಅವರ ಅಭಿನಯವನ್ನೂ ಮರೆಯಲಾಗುವುದಿಲ್ಲ ). ಬಹುಶಃ ಈ ಮಾತುಗಳು ಕೆಲವರಿಗಾದರೂ ಉತ್ಪ್ರೇಕ್ಷೆ ಎನಿಸಬಹುದು. ಆದರೆ 55 ವರ್ಷಗಳಿಂದ ಕೇಳುತ್ತಲೇ ಬಂದಿರುವ ಈ ಮಧುರ ಕಂಠವನ್ನು ನೆನಪಿಸಿಕೊಳ್ಳುವಾಗೆಲ್ಲಾ, ಈ ಉತ್ಪ್ರೇಕ್ಷೆಯೇ ಸಹಜ ಎನಿಸಿಬಿಡುತ್ತದೆ.
ಹಾಡುವ ಧಾಟಿ- ಶೈಲಿ, ಗಾಯನದ ಲಾಲಿತ್ಯ, ಕಂಠ ವೈವಿಧ್ಯತೆ ಮತ್ತು ಧ್ವನಿಯ ಏರಿಳಿತಗಳನ್ನು ಒಂದೇ ಹಾಡಿನಲ್ಲಿ ಗುರುತಿಸಬಹುದಾದ ಸಾವಿರಾರು ಮಧುರ ಗೀತೆಗಳನ್ನು ಆಶಾ ಜೀ ಬಿಟ್ಟುಹೋಗಿದ್ದಾರೆ. ಹೆಲೆನ್, ಅರುಣಾ ಇರಾನಿಯ ಕ್ಲಬ್ ಡ್ಯಾನ್ಸ್ ಇರಲಿ, ಜಯಾಬಾಧುರಿ-ರೇಖಾ ಅವರ ತುಂಟತನ ಇರಲಿ, ಮೀನಾ ಕುಮಾರಿ ಅವರ ಗಾಂಭೀರ್ಯ ಇರಲಿ, ಹೇಮಾ ಮಾಲಿನಿಯ ಪ್ರಣಯ ಗೀತೆಯಾಗಲೀ, ಉರ್ಮಿಳಾ ಮಟೋಡ್ಕರ್ ರಂಗೀಲಾ ರೇ ಅಂತಹ ರಸಭರಿತ ಯೌವ್ವನದ ಹಾಡಾಗಲೀ ಆಶಾ ಜೀ ಅಲ್ಲಿ ತಮ್ಮ ಮಧುರ ಕಂಠದ ಮೂಲಕ ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದರು. ಸೋದರಿ ಲತಾಮಂಗೇಶ್ಕರ್ ಅವರಷ್ಟು Deep Voice ಅಥವಾ ನಾಭಿ ಸ್ವರ ಹೊರಹೊಮ್ಮಿಸುವ ಸಾಮರ್ಥ್ಯ ಇಲ್ಲ ಎಂದು ಹೇಳಲಾದರೂ, ಗೀತ್ ಗಾಯಾ ಪತ್ಥರೋನೇ ಚಿತ್ರದ “ ತೇರೇ ಖಯಾಲೋ ಮೆ ಹಮ್ ” ಮತ್ತು ನವರಂಗ್ ಚಿತ್ರದ " ತೂ ಚುಪೀ ಹೈ ಕಹ್ಞಾ “ (ಮನ್ನಾಡೇ ಅವರೊಂದಿಗೆ) ಹಾಡುಗಳನ್ನು ಕೇಳಿದಾಗ ಇದು ಅರ್ಧಸತ್ಯ ಎನಿಸಿಬಿಡುತ್ತದೆ.
ಆಶಾ ಜೀ ಅವರ ಧ್ವನಿಯಲ್ಲಿ ಶೃಂಗಾರ ರಸ, ಪ್ರಣಯ ಭಾವ ಇದ್ದಷ್ಟೇ ಆಳವಾಗಿದ್ದುದು ಭಕ್ತಿ ರಸವೂ ಇದ್ದುದನ್ನು ಕಾಜಲ್ ಚಿತ್ರದ " ತೊರಾ ಮನ್ ದರ್ಪಣ್ ಕೆಹಲಾಯೇ “ ಹಾಡಿನಲ್ಲಿ ಗುರುತಿಸಬಹುದು. ಇದೇ ತನ್ಮಯತೆಯನ್ನೇ ಆಶಾ ಜೀ ಮಾದಕ ವ್ಯಸನಿ ಹಾಡುವ “ ದಂ ಮಾರೋ ದಂ ” (ಹರೇರಾಮ ಹರೇಕೃಷ್ನ) ಹಾಡಿನಲ್ಲಿ ತೋರುತ್ತಾರೆ. ಅವರ ರೊಮ್ಯಾಂಟಿಕ್ ಹಾಡುಗಳನ್ನೂ ದಾಟಿ ನೋಡುವುದಾದರೆ, ಆಶಾ ಜೀ ಲತಾ ದೀದಿಗೆ ಸರಿಸಾಟಿಯಾಗಿ ನಿಲ್ಲುವ ಕ್ಷಮತೆ ಹೊಂದಿದ್ದರು. ಆದರೆ 1950ರ ಆರಂಭದಲ್ಲಿ ಗಾಯನ ಲೋಕ ಪ್ರವೇಶಿಸಿದಾಗ ಅವರಿಗೆ ಲತಾ ಫೋಬಿಯಾ ಇದ್ದುದನ್ನು ಅಲ್ಲಗಳೆಯಲಾಗುವುದಿಲ್ಲ.
1950ರ ಸುವರ್ಣ ಯುಗದಲ್ಲಿ
1940ರ ದಶಕದಲ್ಲಿ ಹಿಂದಿ ಗಾಯಕರಾಗಿ ಪ್ರವೇಶಿಸಿದ ಗಾಯಕರಿಗೆ ಕೆ.ಎಲ್. ಸೈಗಲ್ ಮತ್ತು ಗಾಯಕಿಯರಿಗೆ ನೂರ್ ಜಹಾನ್ ಮಾದರಿಯಾಗಿದ್ದರು. ಖ್ಯಾತ ಸಂಗೀತ ನಿರ್ದೇಶಕರೂ ಸಹ ಇವರ ಧಾಟಿಯಲ್ಲೇ ಹಾಡಲು ಗಾಯಕರಿಂದ ನಿರೀಕ್ಷಿಸುತ್ತಿದ್ದರು. ಮುಖೇಶ್ ಅವರ “ ದಿಲ್ ಜಲ್ತಾ ಹೈ ಓ ಜಲ್ನೇ ದೋ ” (ಪೆಹಲಿ ನಜರ್ ) ಮತ್ತು ಮೊಹಮ್ಮದ್ ರಫಿ ಅವರ “ ಯಹ್ಞಾ ಬದಲಾ ವಫಾ ಕಾ ಬೇವಫಾಯಿ ಕೆ ಸಿವಾ ಕ್ಯಾ ಹೈ ” ( ಚಿತ್ರ ಜುಗ್ನು – ನೂರ್ ಜಹಾನ್ ಜೊತೆಗೆ) ) ಇದರ ಉದಾಹರಣೆಗಳು. ಲತಾ ದೀದಿ ಅವರ ಈ ದಶಕದ ಹಾಡುಗಳಲ್ಲೂ ನೂರ್ ಜಹಾನ್ ಛಾಯೆ ಕಾಣಬಹುದಿತ್ತು.
ಆದರೆ 1950ರ ಆರಂಭದ ವೇಳೆಗೆ ಲತಾ ಮಂಗೇಷ್ಕರ್ ತಮ್ಮದೇ ಆದ ವಿಶಿಷ್ಟ ಕಂಠದಿಂದ ಸಂಗೀತ ನಿರ್ದೇಶಕರನ್ನು ಆಕರ್ಷಿಸಿದ್ದರು. ಮಹಲ್ ಚಿತ್ರದ “ ಆಯೇಗಾ ಆಯೇಗಾ ಆಯೇಗಾ ಆನೇವಾಲ ” ಹಾಡು ಲತಾ ದೀದಿಯ ವಿಶಿಷ್ಟ ಕಂಠದ ಪೇಟೆಂಟ್ ಆಗಿಹೋಗಿತ್ತು. ಈ ಸಮಯದಲ್ಲೇ ಗಾನಲೋಕ ಪ್ರವೇಶಿಸಿದ ಆಶಾ ಭೋಂಸ್ಲೆಗೆ ಲತಾ ಫೋಬಿಯಾ, ಅಂದರೆ ಲತಾ ಧಾಟಿಯಲ್ಲೇ ಹಾಡಬೇಕಾದ ಅನಿವಾರ್ಯತೆಯ ಭೀತಿ, ಕಾಡತೊಡಗಿತ್ತು. ಈ ಭೀತಿಯನ್ನು ಹೋಗಲಾಡಿಸಿದ್ದು Foot Tapping ಸಂಗೀತ ನಿರ್ದೇಶಕ ಒ.ಪಿ. ನಯ್ಯರ್. ಲತಾ ಮಂಗೇಷ್ಕರ್ ಅವರಿಂದ ಒಂದು ಹಾಡನ್ನೂ ಹಾಡಿಸದ ನಯ್ಯರ್ ಅವರಿಗೆ ಆಶಾ ಅವರ ಧ್ವನಿಯಲ್ಲಿ ವಿಶಿಷ್ಟ ಶೈಲಿ ಗೋಚರಿಸಿತ್ತು.
ಎಲ್ಲಾ ಖ್ಯಾತ ಸಂಗೀತ ನಿರ್ದೇಶಕರೂ ಲತಾ ಮಂಗೇಷ್ಕರ್ ಅವರ ವಿಶಿಷ್ಟ ಸ್ವರ ಶ್ರುತಿ (pitch) ಮತ್ತು ವೈವಿಧ್ಯತೆಯ ಶ್ರೇಣಿಯನ್ನು ಗುರುತಿಸಿ ಅವರೇ ಹಾಡಬೇಕೆಂಬ ಅಲಿಖಿತ ನಿಯಮವನ್ನು ಪಾಲಿಸುತ್ತಿದ್ದುದುಂಟು. ಬೇರೆ ಗಾಯಕಿಯರಿಂದಲೂ ಇದೇ ಧಾಟಿ-ಶೈಲಿಯನ್ನು ಅಪೇಕ್ಷಿಸುತ್ತಿದ್ದರು. ಈ ನಡುವೆ ಒ.ಪಿ. ನಯ್ಯರ್ ತಮ್ಮ ಕೈಡಿದು ಲತಾಫೋಬಿಯಾ ಹೋಗಲಾಡಿಸಿದರು ಎಂದು ಆಶಾ ಹೇಳಿಕೊಂಡಿದ್ದಾರೆ. ತನ್ನ ಧ್ವನಿಯಲ್ಲಿ ನವಿರಾದ ಕೆಳಸ್ಥಾಯಿಯ ಲಕ್ಷಣವಿದೆ, ದೀರ್ಘಕಾಲ ಶ್ವಾಸ ಹಿಡಿದು ಹಾಡುವ ಕ್ಷಮತೆ ಇದೆ ಎಂದು ಗುರುತಿಸಿದ ನಯ್ಯರ್, ಈ ಗುಣಗಳನ್ನೇ ಬಳಸಿಕೊಂಡು, ಮಂದಗತಿಯ, ದುಃಖಭರಿತ, ವಿಷಣ್ಣತೆಯ ಭಾವವನ್ನು ಅವರ ಹಾಡುಗಳಲ್ಲಿ ಸೃಷ್ಟಿಸುತ್ತಿದ್ದರು ಎಂದು ಆಶಾಭೋಂಸ್ಲೆ ಸಂದರ್ಶನವೊಂದರಲ್ಲಿ ಹೇಳುತ್ತಾರೆ. (ರಾಜು ಭರತನ್ ಅವರ A Musical Biography) .
ವಿಶಿಷ್ಟ ಕಂಠದ ಪ್ರಯೋಗಶೀಲ ಆಶಾ
ಇತರ ಸಂಯೋಜಕರು ಕಟ್ಟುನಿಟ್ಟಾಗಿ ಗಾಯಕರು ಅವರ ಸಂಯೋಜನೆಗಳನ್ನು ಹಾಗೆಯೇ ಹಾಡುವಂತೆ ಅಪೇಕ್ಷಿಸುತ್ತಿದ್ದರು, ಆದರೆ ನಯ್ಯರ್ ಆಶಾ ಭೋಂಸ್ಲೆಗೆ 'ಈಗ ನೀವು ಮುಂದಿನ ಚರಣವನ್ನು ನೀವು ಬಯಸಿದ ರೀತಿಯಲ್ಲಿ ಹಾಡಿ'" ಎಂದು ಮುಕ್ತ ಸ್ವಾತಂತ್ರ್ಯ ನೀಡುತ್ತಿದ್ದರು ಎಂದು ಆಶಾ ಜೀ ನೆನಪಿಸಿಕೊಳ್ಳುತ್ತಾರೆ. ಇದೇ ರೀತಿ ತಮ್ಮ ಪತಿ ರಾಹುಲ್ ದೇವ್ ಬರ್ಮನ್ ಅವರ ಸಂಗೀತ ನಿರ್ದೇಶನದಲ್ಲೂ ಆಶಾ ಜೀ ತಮ್ಮದೇ ಆದ ಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದರು. ಕಟೀ ಪತಂಗ್ ಚಿತ್ರದ ಒಂದು ಕ್ಲಬ್ ದೃಶ್ಯದಲ್ಲಿ ಚಿತ್ರದ ನಿರ್ದೇಶಕರು ಸಂಭಾಷಣೆಯಾಗಿ ಬರೆದಿದ್ದ ಸಾಲುಗಳನ್ನು ಉನ್ನತ್ತತೆಯ ಹಾಡನ್ನಾಗಿ ಪರಿವರ್ತಿಸಿದ್ದ ಆರ್ ಡಿ ಬರ್ಮನ್ “ ಮೇರಾ ನಾಮ್ ಹೈ ಶಬ್ನಮ್ ” ಹಾಡಿನ ಮೂಲಕ ಆಶಾ ಭೋಂಸ್ಲೆಯ ವಿಶಿಷ್ಟ ಕಂಠಶೈಲಿಗೆ ಮೆರುಗು ನೀಡಿದ್ದರು.
ಸಿಐಡಿ (1956) ಚಿತ್ರದ “ ಲೇಕೆ ಪೆಹಲಾ ಪೆಹಲಾ ಪ್ಯಾರ್ ” (ರಫಿ-ಶಂಶಾದ್ ಬೇಗಂ ಜೊತೆಗೂಡಿ ) ರೊಮ್ಯಾಂಟಿಕ್ ಹಾಡಿನಿಂದ ತಮ್ಮದೇ ಆದ ವಿಶಿಷ್ಟ ಹಾಡುಗಳೊಂದಿಗೆ ರಂಜಿಸಿದ ಒ. ಪಿ. ನಯ್ಯರ್ ಆಶಾಭೋಂಸ್ಲೆ ಮತ್ತು ಮೊಹಮ್ಮದ್ ರಫಿ ಅವರ ಗಾಯನ ಜೋಡಿಯನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿದ್ದರು. ನಯಾದೌರ್ ಚಿತ್ರದ " ಮಾಂಗ್ ಕೆ ಸಾಥ್ ತುಮ್ಹಾರಾ ” , ಏಕ್ ಮುಸಾಫಿರ್ ಏಕ್ ಹಸೀನಾ ಚಿತ್ರದ “ ಬಹುತ್ ಶುಖ್ರಿಯಾ ಬಡೀ ಮೆಹರ್‌ಬಾನಿ ̧” ಮೊಹಬ್ಬತ್ ಜಿಂದಗಿ ಹೈ (1966) ಚಿತ್ರದ “ ರಾತೋಂ ಕೋ ಚೋರಿ ಚೋರಿ ” ಮೊದಲಾದ ಸುಮಧುರ ಗೀತೆಗಳು ನಯ್ಯರ್-ಆಶಾ ಜೋಡಿಯಿಂದ ಸಿನಿರಸಿಕರನ್ನು ರಂಜಿಸಿದೆ, ಇಂದಿಗೂ ರಂಜಿಸುತ್ತಲೇ ಇದೆ.
“ ನನ್ನ ಸುದೀರ್ಘ ವೃತ್ತಿಜೀವನದಲ್ಲಿ, ನಾನು ವಿಭಿನ್ನ ಶೈಲಿಗಳನ್ನು ಹೊಂದಿದ್ದ ಮತ್ತು ತಮ್ಮದೇ ಆದ ಪರಿಣತಿ ವಿಭಾಗದಲ್ಲಿ ಶ್ರೇಷ್ಠತೆಯನ್ನು ಸಾಧಿಸಿದ ಎಲ್ಲಾ ಸಂಯೋಜಕರೊಂದಿಗೆ ಹಾಡಿದ್ದೇನೆ. ಆದರೆ ಕೆಲವೇ ಕೆಲವು ಟ್ರೆಂಡ್‌ಗಳು ಇದ್ದವು. ಅವರು ವಿಭಿನ್ನ ವೈಯಕ್ತಿಕ ಶೈಲಿಯನ್ನು ಅಳವಡಿಸಿದ್ದೇ ಅಲ್ಲದೆ ಇತರರು ಅದನ್ನು ಅನುಸರಿಸುವಂತೆ ಪ್ರಭಾವ ಬೀರಿದರು. ಒ.ಪಿ. ನಯ್ಯರ್ ಅಂತಹ ಕ್ರಾಂತಿಕಾರಿ ಟ್ರೆಂಡ್ ಸೃಷ್ಟಿಸಿದರು ಎಂದು ” ಆಶಾ ಒ.ಪಿ. ನಯ್ಯರ್ ಅವರಿಗೆ ತಮ್ಮ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಇದೇ ರೀತಿ ಆಶಾ ಭೋಂಸ್ಲೆ ಅವರ ವೈವಿಧ್ಯತೆಯನ್ನು ಬಳಸಿಕೊಂಡು ಟ್ರೆಂಡ್ ಸೃಷ್ಟಿಸಿದವರು ರಾಹುಲ್ ದೇವ್ ಬರ್ಮನ್. ತೀಸ್ರಿ ಮಂಜಿಲ್ ಚಿತ್ರದ “ ಆಜಾ ಆಜಾ ಮೈ ಹ್ಞೂ ಪ್ಯಾರ್ ತೆರಾ ” ಹಾಡಿನಲ್ಲಿ ಆಶಾ ಜೀ ಪ್ರಯೋಗಿಸಿದ ಧ್ವನಿ ಏರಿಳಿತ ಮತ್ತು ಶ್ವಾಸ ಬಿಗಿಹಿಡಿದು ಹಾಡುವ ಶೈಲಿ ಈ ಜೋಡಿಯನ್ನು ಜನಪ್ರಿಯತೆಯ ಶಿಖರಕ್ಕೇರಿಸಿತ್ತು.
ಪ್ರತಿಭೆಯಿಂದಲೇ ಸಿಕ್ಕ ಅವಕಾಶಗಳು
1950-60ರ ದಶಕದಲ್ಲಿ ಎಸ್.ಡಿ. ಬರ್ಮನ್ ಮತ್ತು ಲತಾ ಮಂಗೇಷ್ಕರ್ ನಡುವೆ ವಿರಸ ಏರ್ಪಟ್ಟು ಕೆಲವು ವರ್ಷಗಳ ಕಾಲ ಎಸ್. ಡಿ.ಬರ್ಮನ್ ಲತಾ ದೀದಿಗೆ ಹಾಡುಗಳನ್ನು ನೀಡಿರಲಿಲ್ಲ. ಈ ಅವಧಿಯಲ್ಲಿ ಆಶಾ ಭೋಂಸ್ಲೆ , ಬರ್ಮನ್ ನಿರ್ದೇಶನದಲ್ಲಿ ಸುಮಧುರ ಗೀತೆಗಳನ್ನು ಹಾಡಿದ್ದರು. ಸುಜಾತಾ ಚಿತ್ರದ " ಕಾಲಿ ಘಟಾ ಛಾಯಿ “ ಹಾಡು ಏಕ್‌ದಂ ಜನಪ್ರಿಯವಾಗಿತ್ತು. ದೇವಾನಂದ್ ನಟನೆಯ ಜೆವೆಲ್ ಥೀಫ್ ಚಿತ್ರದಲ್ಲಿ ಬರ್ಮನ್-ಲತಾ ಪುನಃ ಒಂದಾಗಿದ್ದರು, " ದಿಲ್ ಪುಕಾರೇ ಆರೆ ಆರೆ ಆರೆ “ ಹಾಡಿನ ಮೂಲಕ. ಆದರೆ ಈ ಚಿತ್ರದಲ್ಲಿ ಆಶಾ ಹಾಡಿರುವ “ ರಾತ್ ಅಖೇಲಿ ಹೈ ಬುಜ್‌ಗಯೆ ದಿಯೇ ” ಹಾಡು ರಸಿಕರ ಹೃದಯ ಗೆದ್ದಿತ್ತು. ಈ ಹಾಡಿನಲ್ಲಿ ಆಶಾ ಭೋಂಸ್ಲೆಯ ಶ್ವಾಸ ನಿಯಂತ್ರಣ ಅಭೂತಪೂರ್ವ ಎನ್ನಬಹುದು.
ಆರ್.ಡಿ. ಬರ್ಮನ್-ಆಶಾ ಭೋಂಸ್ಲೆ ನಿಜ ಜೀವನದಲ್ಲಿ ದಂಪತಿಗಳಾಗಿದ್ದಂತೆಯೇ ಸಿನೆಮಾ ಹಾಡುಗಳಲ್ಲೂ ಮರೆಯಲಾಗದ ಜೋಡಿಯಾಗಿದ್ದರು. ಹರೇ ರಾಮ ಹರೇಕೃಷ್ಟ ಚಿತ್ರದಿಂದ ಆರಂಭವಾದ ಈ ಜೋಡಿಯ ಪಯಣದಲ್ಲಿ ನೂರಾರು ಹಾಡುಗಳು ಚಿರಸ್ಮರಣೀಯವಾಗಿವೆ. 1981ರಲ್ಲಿ ಬಂದ ಅಮಿತಾಬ್ ಬಚ್ಚನ್ ನಟನೆಯ ಕಾಲಿಯಾ ಚಿತ್ರದಲ್ಲಿ “ ಸನಮ್ ತುಮ್ ಜಹ್ಞಾ ಮೆರಾ ದಿಲ್ ವಹ್ಞಾ ” ಎಂಬ ಹಾಡು ಆಶಾಭೋಂಸ್ಲೆಯ ಸ್ವರ ವೈವಿಧ್ಯತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಅದೇ ರೀತಿ ಸದಾ ನೆನಪಾಗುವ ಹಾಡು ಡಾನ್ ಚಿತ್ರದ (1978) “ ಏ ಮೆರಾ ದಿಲ್ ಪ್ಯಾರ್ ಕಾ ದೀವಾನಾ ̧̧” ದೇವಾನಂದ್ ಅವರ ಲೂಟ್ ಮಾರ್ ಚಿತ್ರದ (1980) “ ಜಬ್ ಛಾಯೇ ಮೇರಾ ಜಾದೂ ” ಹಾಡುಗಳು ಆಶಾ ಭೋಂಸ್ಲೆಯ ಸ್ವರ ವೈವಿಧ್ಯತೆ ಮತ್ತು ವಿಶಿಷ್ಟ ಶೈಲಿಗೆ ಉದಾಹರಣೆಗಳು.
1940-90ರ ದಶಕದ ಹಿಂದಿ ಚಲನಚಿತ್ರ ಗಾಯಕ-ಗಾಯಕಿಯರ ಶ್ರೇಷ್ಠತೆಯನ್ನು ಅವರು ಪಡೆದ ಪ್ರಶಸ್ತಿಗಳಿಂದ ಅಳೆಯುವುದು ಸಾಧ್ಯವೇ ಇಲ್ಲ. ಏಕೆಂದರೆ ಅವರಲ್ಲೇ ಇದ್ದ ಸ್ಪರ್ಧೆ ಕೆಲವರನ್ನು ಪ್ರಶಸ್ತಿಯಿಂದ ವಂಚಿಸುತ್ತಿತ್ತು. ಕೆಲವೊಮ್ಮೆ ಅತ್ಯುತ್ತಮ ಎನಿಸುವ ಹಾಡುಗಳಿಗೆ ಬದಲು ಸಾಧಾರಣ ಹಾಡುಗಳಿಗೂ ಪ್ರಶಸ್ತಿ ಲಭಿಸುತ್ತಿತ್ತು. ಮೇರಾ ನಾಮ್ ಜೋಕರ್ ಚಿತ್ರದ “ಭಾಯ್ ಜರ ದೇಖ್ ಕೆ ಚಲೋ” ಹಾಡಿಗೆ ರಾಷ್ಟ್ರಪ್ರಶಸ್ತಿ ಬಂದಾಗ ಖ್ಯಾತ ಗಾಯಕ ಮನ್ನಾ ಡೇ ವಿವಿಧ್ ಭಾರತಿಯ ಸಂದರ್ಶನವೊಂದರಲ್ಲಿ “ ನನ್ನ ಬಸಂತ್ ಬಹಾರ್, ಮೇರಿ ಸೂರತ್ ತೇರಿ ಆಂಖೆ, ಕಾಬೂಲಿವಾಲಾ, ಉಪಕಾರ್ ಚಿತ್ರದ ಹಾಡುಗಳಿಗೆ ಹೋಲಿಸಿದರೆ ಇದು ಪ್ರಶಸ್ತಿಗೆ ಅರ್ಹವಾಗುವ ಹಾಡೇ ಅಲ್ಲ, ಆದರೆ ಆ ಹಾಡುಗಳಿಗೆ ಇಂತಹ ಅದೃಷ್ಟ ಇರಲಿಲ್ಲ ” ಎಂದು ಹೇಳುತ್ತಾರೆ.

ವಿದಾಯ ಹೇಳುವ ಮುನ್ನ,,,,
ಈ ಮಾತುಗಳು ಆ ಕಾಲದ ಎಲ್ಲ ಗಾಯಕರಿಗೂ ಅನ್ವಯಿಸುತ್ತದೆ. ಅಶಾ ಭೋಂಸ್ಲೆ ಹಲವು ರಾಷ್ಟ್ರೀಯ, ಫಿಲಂ ಫೇರ್ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇಜಾಝತ್ (1987) ಚಿತ್ರದ “ ಮೇರಾ ಕುಚ್ ಸಾಮಾನ್ ತುಮ್ಹಾರಿ ಪಾಸ್ ” ಮತ್ತು 1981 ಉಮ್ರಾವ್ ಜಾನ್ ಚಿತ್ರದ " ದಿಲ್ ಚೀಜ್ ಕ್ಯಾ ಹೈ ಆಪ್ ಮೆರಿ ಜಾನ್ ಲೀಜಿಯೇ “ ಹಾಡುಗಳಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಹಲವು ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1977ರಲ್ಲಿ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರೊಡನೆ ʼ Legacy ́ ಆಲ್ಬಮ್ ಗ್ರಾಮಿ ಅವಾರ್ಡ್‌ಗೆ ನಾಮ ನಿರ್ದೇಶನ ಪಡೆದಿತ್ತು. 2008ರಲ್ಲಿ ಪದ್ಮವಿಭೂಷಣ್ ಮತ್ತು 2000ದಲ್ಲಿ ಜೀವಮಾನ ಸಾಧನೆಗೆ ನೀಡುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಶಾ ಭೋಂಸ್ಲೆ ಪಾತ್ರರಾಗಿದ್ದಾರೆ. ಆದರೆ 55 ವರ್ಷಗಳಿಂದ ಈ ಸುಮಧುರ ಕಂಠದ ಸವಿಯನ್ನು ಆನಂದಿಸಿರುವವರಿಗೆ, ನನ್ನನ್ನೂ ಸೇರಿದಂತೆ, ಆಶಾ ಮತ್ತು ಲತಾ ಸಂಗೀತ ಲೋಕದ ಎರಡು ಹೃದಯಗಳಂತೆಯೇ ಕಾಣುತ್ತಾರೆ.
ಈಗ ಇಬ್ಬರೂ ನಮ್ಮೊಡನಿಲ್ಲ. ಆಶಾ ಜೀ ಅವರ ನಿರ್ಗಮನ ವಯೋಸಹಜ ಪ್ರಕ್ರಿಯೆ. 92 ವರ್ಷದ ಸುದೀರ್ಘ ಜೀವನದಲ್ಲಿ 78 ವರ್ಷ ಸಂಗೀತದಲ್ಲೇ ತಲ್ಲೀನರಾಗಿ ಕಳೆದ ಈ ಅಮೂಲ್ಯ ಜೀವಕ್ಕೆ ಶ್ರದ್ಧಾಂಜಲಿ ಹೇಳುವುದೋ, ಹೋಗಿ ಬನ್ನಿ ಎನ್ನುವುದೋ, ಬಾಷ್ಪಾಂಜಲಿ ಅರ್ಪಿಸುವುದೋ ? ಜಿಜ್ಞಾಸೆ. ಅವರದೇ ಹಾಡಿನ ಮೂಲಕ ವಿದಾಯ ಹೇಳುವುದಾದರೆ :
ಆಶಾ ಜೀ
“ ಅಭೀ ನಾ ಜಾವೋ ಚೋಡ್ ಕರ್ ಏ ದಿಲ್ ಅಭೀ ಭರಾ ನಹ್ಞೀ ”. (ಹಂ ದೋನೋ)
ಲೆಕಿನ್ ಆಪ್ ಚಲ್ ಬಸೇ ಅಬ್ ಕ್ಯಾ ಸುನಾವ್ಞೂ
“ ಇಸ್ ಅಂಜುಮನ್ ಮೆ ಆಪ್ ಕೋ ಆನಾ ಹೈ ಬಾರ್ ಬಾರ್ ”.(ಉಮ್ರಾವ್ ಜಾನ್)
ಸಂಗೀತ ಸಾಮ್ರಾಜ್ಞಿಗೆ ಅಂತಿಮ ನಮನಗಳು.
-೦-೦-೦-೦-
bevarahani1