ಬೆಳ್ಳಿ ಬೆಲೆಯೂ ಏರುತ್ತಿದೆ ದಾಖಲೆಗಳನ್ನು ಮುರಿದು..,!
ಕಿಲೋಗೆ ರೂ. 2.04 ಲಕ್ಷ ತಲುಪಿದ ಅಮೂಲ್ಯ ಲೋಹ
ʼ ಬೆವರ ಹನಿʼ ವಿಶೇಷ

ಎಸ್.ಆರ್.ವೆಂಕಟೇಶ ಪ್ರಸಾದ್
ಬೆಂಗಳೂರು:ಗಗನಮುಖಿ ಬೆಳ್ಳಿಯ ಬೆಲೆ ಎಲ್ಲಿಗೆ ತಲುಪುತ್ತದೆ ಬಲ್ಲವರಿಲ್ಲ.ಇತ್ತೀಚಿನ ದಿನಗಳಲ್ಲಿ ಕೈಗೆಟುಕಲೇಬಾರದು ಎನ್ನುವಂತೆ ನಾಗಾಲೋಟದಲ್ಲಿ ಏರಿಕೆಯಾಗುತ್ತಿರುವ ಬೆಳ್ಳಿ ಶುಕ್ರವಾರ (ಡಿ.12) ಭಾರತೀಯ ಬಹು ವಿಧದ ಸರಕು ಪೇಟೆ(ಎಂಸಿಎಕ್ಸ್)ಯಲ್ಲಿ ಅಭೂತಪೂರ್ವ ದಾಖಲೆಯ ಗರಿಷ್ಠ ಮಟ್ಟ ಅಂದರೆ ಕೆ.ಜಿ.ಗೆ 2,00,362 ರೂಪಾಯಿಗಳಿಗೆ ತಲುಪಿತು.ಇದು ವಾರ್ಷಿಕ ಶೇಕಡಾ 100ಕ್ಕೂ ಹೆಚ್ಚು ಹೆಚ್ಚಳದ ದಾಖಲೆ.ಶನಿವಾರ ಬೆಳಗ್ಗೆ ಮತ್ತಷ್ಟು ದುಬಾರಿಯಾಗಿ 2,04,100 ರೂಪಾಯಿಗಳಿಗೆ ತಲುಪಿ ಮಧ್ಯಾಹ್ನದ ವೇಳೆಗೆ ಕೆ.ಜಿ.ಗೆ 1,92,240 ರೂಪಾಯಿನಲ್ಲಿತ್ತು.

ಬೇಡಿಕೆಯಷ್ಟು ಪೂರೈಕೆ ಇಲ್ಲದಿರುವುದು,ಪೂರೈಕೆಗೆ ಇರುವ ನಿರ್ಬಂಧಗಳು,ಜಾಗತಿಕ ಆರ್ಥಿಕ ಪರಿಸ್ಥಿತಿಯ ಪ್ರಭಾವ ಮತ್ತು ತಂತ್ರಜ್ಞಾನ ಮುಂದುವರಿದಂತೆ ತೀವ್ರ ಸ್ವರೂಪದಲ್ಲಿ ಏರುತ್ತಿರುವ ಬೇಡಿಕೆ ಬೆಳ್ಳಿ ಬೆಲೆಯ ದಾಖಲೆಯ ಏರಿಕೆಗೆ ಕಾರಣಗಳು ಎನ್ನಲಾಗುತ್ತಿದೆ. ಅಮೆರಿಕದ ಡಾಲರ್ ಸೂಚ್ಯಂಕದ ಕುಸಿತ ಮತ್ತು ರೂಪಾಯಿ ಅಪಮೌಲ್ಯವೂ ಕೂಡ ಬೆಳ್ಳಿಯನ್ನು ದುಬಾರಿಯಾಗಿಸುತ್ತಿದೆ.2016ರಲ್ಲಿ 31,000 ಮೆಟ್ರಿಕ್ ಟನ್ ಇದ್ದ ಬೇಡಿಕೆ 2024ರ ವೇಳೆಗೆ 36,000 ಮೆಟ್ರಿಕ್ ಟನ್‌ಗೆ ತಲುಪಿದೆ.
ಬೆಳ್ಳಿ ಅಮೂಲ್ಯ ಲೋಹ.ಆಭರಣದ ಜೊತೆಗೆ ಕೈಗಾರಿಕೆಗಳಿಗೂ ಅನಿವಾರ್ಯ. ಈ ದ್ವಿಪಾತ್ರದ ಬಹು ಬೇಡಿಕೆ ಬೆಳ್ಳಿಗೆ ಹಿಂದೆಂದಿಗಿಂತಲೂ ಹೆಚ್ಚು ಬೆಲೆಯನ್ನು ತರುತ್ತಿದೆ.ಕಳೆದ ಎಂಟು ವರ್ಷಗಳಿಂದ ಉದ್ಯಮಗಳಿಂದ ಭಾರೀ ಬೇಡಿಕೆ ಬರುತ್ತಿದೆ.
ಭಾರತದಲ್ಲಿ ಈ ವರ್ಷದ ಸುಗ್ಗಿ ಮತ್ತು ದೀಪಾವಳಿ ಹಬ್ಬದ ವೇಳೆಗೆ ಆಭರಣ ಮತ್ತು ಸಾಂಸ್ಕೃತಿಕ ಬಳಕೆಗಾಗಿ ಸುಮಾರು ನಾಲ್ಕು ಸಾವಿರ ಮೆಟ್ರಿಕ್ ಟನ್ ನಷ್ಟು ಬೆಳ್ಳಿಗೆ ಬೇಡಿಕೆ ಕಂಡು ಬಂದಿತ್ತು.
ಬೆಳ್ಳಿ ಬೆಲೆ ಏರಿಕೆಗೆ ಕಾರಣಗಳು:
ಸ್ವಚ್ಛ ಇಂಧನ ಸ್ಥಿತ್ಯಂತರ: ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿ ಜಗತ್ತು ಪರ್ಯಾಯ ಇಂಧನಗಳ ಕಡೆಗೆ ಮುಖ ಮಾಡುತ್ತಿದ್ದಂತೆ ಸೌರ ಇಂಧನದ ಬಳಕೆ ಹೆಚ್ಚಿತು. ಸೌರ ಇಂಧನದ ಸೌರ ಫಲಕಗಳ ತಯಾರಿಕೆಗೆ ಬೆಳ್ಳಿ ಬೇಕೇಬೇಕು.ಹಾಗಾಗಿ, ಬೆಳ್ಳಿಯ ಬೇಡಿಕೆ ರಾಕೆಟ್ ವೇಗ ಪಡೆದುಕೊಂಡಿದೆ.
ವಿದ್ಯುತ್ ವಾಹನ: ವಿದ್ಯುತ್ ವಾಹನಗಳ ಬ್ಯಾಟರಿ ಮತ್ತು ವಾಹನದ ಉನ್ನತ ತಂತ್ರಜ್ಞಾನದ ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆಗೆ ಬೆಳ್ಳಿ ಬೇಕು. ಹಾಗಾಗಿ,ವಾಹನ ತಯಾರಕರು ಭಾರಿ ಪ್ರಮಾಣದಲ್ಲಿ ಬೆಳ್ಳಿ ಖರೀದಿಗೆ ಮುಂದಾಗಿದ್ದಾರೆ.
ಉನ್ನತ ತಂತ್ರಜ್ಞಾನದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು: ಸೆಮಿಕಂಡಕ್ಟರ್ ತಯಾರಿಕೆ, ಕೃತಕ ಬುದ್ಧಿಮತ್ತೆ ದತ್ತಾಂಶ ಕೇಂದ್ರಗಳು, ರೋಬೋಟ್ ಗಳು ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆಗೂ ಬೆಳ್ಳಿ ಅನಿವಾರ್ಯ.
ಹೂಡಿಕೆಯಾಗಿ ಬೆಳ್ಳಿ: ದುಬಾರಿಯ ದಾರಿ ಹಿಡಿಯುತ್ತಿದ್ದಂತೆ ಈಗ ಬೆಳ್ಳಿಯೂ ಚಿನ್ನದಂತೆ ಹೂಡಿಕೆಯ ಅಮೂಲ್ಯ ಲೋಹವಾಗಿ ಮಾರ್ಪಟ್ಟಿದೆ.ಸರಕು ಪೇಟೆಯಲ್ಲಿ ಬಹು ಬೇಡಿಕೆಯ ಸರಕಾಗಿ ಉತ್ತಮ ಲಾಭಾಂಶವನ್ನು ತಂದು ಕೊಡುತ್ತಿದೆ.ಹಾಗಾಗಿ, ಹೂಡಿಕೆ ಹೆಚ್ಚುತ್ತಿದಂತೆ ಬೇಡಿಕೆ ತೀವ್ರಗತಿಯಲ್ಲಿ ಏರುಗತಿ ಕಾಣುತ್ತಿದೆ. ಆರ್ಥಿಕ ಅಸ್ಥಿರತೆ ಮತ್ತು ಹಣದುಬ್ಬರದಿಂದ ರಕ್ಷಣೆಗೆ ಆಪತ್ಕಾಲಿನ ನಿಧಿಯಾಗಿ ಬೆಳ್ಳಿ ಬದಲಾಗುತ್ತಿದೆ.
ಅಮೆರಿಕದ ಕೇಂದ್ರ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಸಂಸ್ಥೆ,ಸತತ ಮೂರನೇ ಬಾರಿಗೆ ತನ್ನ ಬಡ್ಡಿ ದರವನ್ನು 25 ಮೂಲಾಂಶಗಳಷ್ಟು ಇಳಿಸಿದೆ.ಈ ಬಡ್ಡಿದರ ಇಳಿಕೆಯಿಂದ ಕಳೆದ ಎರಡು ತಿಂಗಳಿನಲ್ಲೇ ಡಾಲರ್ ಸೂಚ್ಯಂಕ ಅತ್ಯಂತ ಕೆಳಕ್ಕೆ ಜಾರಿದೆ. ಡಾಲರ್ ದುರ್ಬಲಗೊಂಡಾಗಲೆಲ್ಲಾ ಚಿನ್ನ-ಬೆಳ್ಳಿಯಂತಹ ಸುರಕ್ಷಿತ ಹೂಡಿಕೆಗಳಿಗೆ ಬೇಡಿಕೆ ಹೆಚ್ಚುವುದು.ಆಗ ಸಹಜವಾಗಿ ಚಿನ್ನ-ಬೆಳ್ಳಿ ಬೆಲೆ ಮತ್ತಷ್ಟು ಏರುವ ಸಾಧ್ಯತೆ ಇರುತ್ತದೆ.
ಚಿನ್ನವೂ ದುಬಾರಿ: ಚಿನ್ನದ ಬೆಲೆ ಸಹ ಕಳೆದ ಏಳು ವಾರಗಳಲ್ಲೇ ಅತ್ಯಂತ ದುಬಾರಿಯಾಗಿದೆ.ಬೆಂಗಳೂರಿನ ಚಿನಿವಾರ ಪೇಟೆಯಲ್ಲಿ ಶನಿವಾರ ಮಧ್ಯಾಹ್ನ ಈ ಲೇಖನ ಬರೆಯುವ ವೇಳೆಗೆ 10 ಗ್ರಾಮ್ ಚಿನ್ನ(24 ಕ್ಯಾರೆಟ್) 1,33,660 ರೂಪಾಯಿಗಳಿಗೆ ತಲುಪಿತ್ತು.
ಜಾಗತಿಕ ಉದ್ವಿಗ್ನ ಸ್ಥಿತಿ: ರಷ್ಯಾ-ಉಕ್ರೇನ್ ದೇಶಗಳ ನಡುವಿನ ಯುದ್ಧದ ಜೊತೆಗೆ ಜಗತ್ತಿನ ಅನೇಕ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಚಿನ್ನದೊಂದಿಗೆ ಬೆಳ್ಳಿ ಮೇಲಿನ ಹೂಡಿಕೆಯೂ ಲಾಭದಾಯಕವಾದ್ದರಿಂದ ಬೇಡಿಕೆ ಹೆಚ್ಚುತ್ತಿದೆ.
ಸಿಲ್ವರ್ ಇಟಿಎಫ್(ಸಿಲ್ವರ್ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್):ಇಟಿಎಫ್ ನಲ್ಲಿ ಬೆಳ್ಳಿ ಅಥವಾ ಬೆಳ್ಳಿ ಸಂಬಂಧಿತ ಸಾಧನಗಳಲ್ಲಿ ಹೂಡಿಕೆಗೆ ಅವಕಾಶ ಇರುತ್ತದೆ.ಬೆಳ್ಳಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಶೇಕಡ ನೂರರಷ್ಟು ಏರಿಕೆ ಕಂಡಿರುವುದರಿಂದ ಇದು ಹೂಡಿಕೆಯ ಅತ್ಯುತ್ತಮ ಆಯ್ಕೆಯಾಗಿ ಪರಿವರ್ತನೆಗೊಂಡಿದೆ. ತಜ್ಞರ ಪ್ರಕಾರ, ಬೆಳ್ಳಿ ಮತ್ತಷ್ಟು ದುಬಾರಿಯಾಗುವ ಸಾಧ್ಯಗಳು ಹೆಚ್ಚಿವೆ.
ಬೆಳ್ಳಿ ಗಣಿಗಾರಿಕೆ ಹೇಗೆ ?
ತಾಮ್ರ,ಸೀಸ ಇಲ್ಲವೇ ಚಿನ್ನದ ಗಣಿಗಾರಿಕೆ ಸಂದರ್ಭದಲ್ಲಿ ಅವುಗಳ ಉಪ ಉತ್ಪನ್ನವಾಗಿ ಬೆಳ್ಳಿಯನ್ನು ಗಣಿಗಾರಿಕೆ ಮಾಡಲಾಗುತ್ತದೆ.ಬೆಲೆ ಏರಿಕೆಯಾದಾಗ ಬೇಡಿಕೆ ತಕ್ಕಂತೆ ಉತ್ಪಾದನೆಯನ್ನು ತ್ವರಿತವಾಗಿ ಹೆಚ್ಚಿಸಲಾಗುವುದಿಲ್ಲ. ಅಮೆರಿಕಾದ ಕೇಂದ್ರ ಮತ್ತು ದಕ್ಷಿಣ ಪ್ರಾಂತ್ಯಗಳಲ್ಲಿ ಹತ್ತು ವರ್ಷಗಳಿಗೂ ಹಿಂದಿನಿಂದಲೇ ಗಣಿಗಳ ಮುಚ್ಚುವಿಕೆ, ಖನಿಜಗಳ ಕೊರತೆ ಮತ್ತು ಮೂಲಸೌಕರ್ಯಗಳ ಸಮಸ್ಯೆಯಿಂದಾಗಿ ಬೆಳ್ಳಿಯ ಲಭ್ಯತೆ ಕಡಿಮೆಯಾಗಿದೆ.
bevarahani1