ವಿಧಾನಸೌಧಕ್ಕೇಕೆ ಹಣದ ಹೊಳೆ ಹರಿಯುತ್ತದೆ.., ?!

1951ರಲ್ಲಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಐದೂವರೆ ಲಕ್ಷ ಚದರಡಿಯ ವಿಧಾನ ಸೌಧವನ್ನು ತಾವೇ ಮುಂದೆ ನಿಂತು 1.80 ಕೋಟಿ ರೂ. ಮೊತ್ತದಲ್ಲಿ ಕಟ್ಟಿಸಿದರು,

ವಿಧಾನಸೌಧಕ್ಕೇಕೆ ಹಣದ ಹೊಳೆ ಹರಿಯುತ್ತದೆ.., ?!


ಒಂದು ಗಳಿಗೆ


ಕುಚ್ಚಂಗಿ ಪ್ರಸನ್ನ


ವಿಧಾನಸೌಧಕ್ಕೇಕೆ ಹಣದ ಹೊಳೆ ಹರಿಯುತ್ತದೆ.., ?!


     ಮೊನ್ನೆ ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿದ ವಯೋವೃದ್ಧ ಎಸ್.ಎಂ ಕೃಷ್ಣ 1999ರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗುವ ತನಕ ವಿಧಾನ ಸೌಧದ ಒಳಕ್ಕೆ ಹೋಗೋದು ಅಷ್ಟೊಂದು ಕಷ್ಟ ಏನೂ ಆಗಿರ‍್ಲಿಲ್ಲ, ನಾಲ್ಕೂ ಬಾಗಿಲಲ್ಲಿ ಒಂದಿಬ್ಬರು ಪೊಲೀಸರು ನಿಂತರ‍್ತಾ ಇದ್ರೂನೂ, ಜನಕ್ಕೇನೂ ಅಡ್ಡಿ ಮಾಡ್ತಾಇರ‍್ಲಿಲ್ಲ, ಚಡ್ಡಿ ಹಾಕಂಡೋರನ್ನ ಒಳಕ್ಕೆ ಬಿಡದೇ ಹೋದ್ರೂ, ಪಂಚೆ, ಲುಂಗಿ ಉಟ್ಟೋರೆಲ್ಲ ಹೋಗಬಹುದಿತ್ತು. ಫಾರಿನ್ ರಿಟರ‍್ನ್ ಕೃಷ್ಣ ಅಂತಾನೇ ಫೇಮಸ್ ಆಗಿದ್ದ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ತುಸು ನಯ ನಾಜೂಕು ನೋಡಿ, ಅವರಿಗೆ ಬೆವರಿನ ವಾಸನೆ ಕಂಡರೆ ವಾಕರಿಕೆ ಬರಂಗೆ ಆಗ್ತಾ ಇತ್ತಂತೆ, ಹಂಗಾಗಿ, ಪಾರ್ಲಿಮೆಂಟಿಗೆ ಭಯೋತ್ಪಾದಕರು ನುಗ್ಗಿದ ಘಟನೆ ನೆಪದಲ್ಲಿ ವಿಧಾನಸೌಧದ ಇಡೀ 60 ಎಕರೆಗೂ ಕಬ್ಬಿಣದ ಸರಳುಗಳ ಬೇಲಿ ಹಾಕಿಸಿಬಿಟ್ಟರು. ಎಂತಾ ಡಿಸೈನ್ ಬೇಲಿ ಹಾಕಬೇಕು ಅಂತಾನೇ ಒಂದು ತಾಂತ್ರಿಕ ಸಮಿತಿ ಮಾಡಿದ್ದರು, ಕಡೆಗೆ ಆ ಸಮಿತಿಯನ್ನು ಲಂಡನ್‌ಗೆ ಕಳಿಸಿ, ಬಕ್ಕಿಂಗ್ ಹ್ಯಾಮ್ ಅರಮನೇಗೆ ಹಾಕಿರೋ ಅಂಥದ್ದೇ ಡಿಸೈನಿನ ಬೇಲಿ ಕಂ ಕಾಂಪೌಂಡನ್ನು ನಿರ್ಮಿಸಿದರು. ಆ ತಂಡದಲ್ಲಿದ್ದ, ಕಾರ್ಯಪಾಲಕ ಇಂಜಿನಿಯರ್ ಚಿತ್ರದುರ್ಗದ ದೊಡ್ಡನಾಗಯ್ಯ ಇದೀಗ ನಿವೃತ್ತರಾದ ಬಳಿಕ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಜೊತೆ ಇದ್ದಾರೆ. ಇಡೀ ರಾಜ್ಯದ ಎಲ್ಲ ಸರ್ಕಾರಿ ಕಟ್ಟಡಗಳಿಗೂ ಅಂಥದ್ದೇ ಕಬ್ಬಿಣದ ಬೇಲಿ ಎದ್ದು ನಿಂತಿದೆ ಗಮನಿಸಿ. 


ನಾನು ಹೈಸ್ಕೂಲಿನಲ್ಲಿದ್ದಾಗ ನಮ್ಮಪ್ಪ ನೌಕರಿಯಲ್ಲಿದ್ದ ವಿಧಾನ ಸೌಧದೊಳಕ್ಕೆ ಬಾಗಿಲು ಮೂಲಕ ಹೋಗಿದ್ದೇ ಕಮ್ಮಿ, ಆ ಕಡೆ ಕಬ್ಬನ್ ಪಾರ್ಕಿನಲ್ಲಿರುವ ಕೆಂಪು ಕಟ್ಟಡ ಸೆಂಟ್ರಲ್ ಲೈಬ್ರರಿಯಿಂದ ಬಂದು, ಗೋಪಾಲ ಗೌಡ ವೃತ್ತದ ಕಡೆಯಿಂದ ಒಳಕ್ಕೆ ಬಂದು ಮೇನ್ ದ್ವಾರದ ಮಗ್ಗುಲಲ್ಲಿರುವ ಪೋಸ್ಟ್ ಆಫೀಸ್ ಹತ್ರ ಜಗುಲಿ ಮೇಲೆ ಎರಡೂ ಕೈಗಳನ್ನೂ ಊರಿ ಜಂಪ್ ಮಾಡಿ ಒಳಕ್ಕೆ ಹೋಗಿ ಬಿಡ್ತಿದ್ದೆ. 


     ಮೊನ್ನೆ ಬುಧವಾರ ಮುಸ್ಸಂಜೆ ಆರು ಗಂಟೆ ಸುಮಾರಿಗೆ ಮಂಡ್ಯ ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಜೆ.ಜಗದೀಶ್ ವಿಧಾನಸೌಧದ ಪಶ್ಚಿಮ ದ್ವಾರದಿಂದ ಒಳ ಪ್ರವೇಶಿಸುವಾಗ ಎಡವಟ್ಟು ಮಾಡಿಕೊಂಡು ಬಿಟ್ಟಿದ್ದಾರೆ. ಅವರ ಕೈಯಲ್ಲಿದ್ದ ಬ್ಯಾಗಲ್ಲಿ ಹತ್ತೂವರೆ ಲಕ್ಷ ರೂಪಾಯಿ ಇದೆ ಅಂತ ತಪಾಸಣೆ ಮಾಡಿದ ಪೊಲೀಸರಿಗೆ ಕಂಡು ಬಿಟ್ಟಿದೆ. ಲೆಕ್ಕಬುಕ್ಕಿಲ್ಲದ ದೊಡ್ಡ ಮೊತ್ತ ನೋಡಿ, ಸಹಜವಾಗೇ ದೊಡ್ಡ ಸುದ್ದಿ ಆಯಿತು, ಕೇಸೂ ಆಗಿ, ಜಾಮೀನೂ ಆಗಿ ಆತ ಮನೆ ಸೇರಿಕೊಂಡಿದ್ದೂ ಆಯಿತು, ಕಾಸು ಸರ್ಕಾರಿ ಖಜಾನೆ ತಲುಪಿತು.


     ಮಳೆ ಹನಿ ನಿಂತ್ರೂ ಮರದ ಹನಿ ನಿಲ್ಲಲ್ಲ ನೋಡಿ, ಆ ಇಲಾಖೆ ಮಂತ್ರಿ ಸಿಸಿ ಪಾಟೀಲರೂ ನಿನ್ನೆ ಅದೇ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ, ನಂಗೂ ಆ ಹತ್ತೂವರೆ ಲಕ್ಷಕ್ಕೂ ಸಂಬಂಧ ಇಲ್ಲ ಅಂಥ ಸ್ಪಷ್ಟೀಕರಣ ಕೊಟ್ಟಿದ್ದೂ ಆಯಿತು. ಆತ ಹೋಗುತ್ತಾ ಇದ್ದದ್ದು ವಿಧಾನ ಸೌಧಕ್ಕೆ, ವಿಧಾನ ಸೌಧದಲ್ಲಿ ಲೋಕೋಪಯೋಗಿ ಸಚಿವರನ್ನು ಮತ್ತು ಅವರ ಆಪ್ತ ಸಿಬ್ಬಂದಿ ಬಿಟ್ಟರೆ ಉಳಿದಂತೆ ಅವರ ಇಡೀ ಇಲಾಖೆ ಇರುವುದು ಪಕ್ಕದ ವಿಕಾಸಸೌಧದ ಮೂರನೇ ಮಹಡಿಯಲ್ಲಿ ಮಾತ್ರವೇ. ಹೀಗಾಗಿ ಸಿದ್ಧಣ್ಣ ಸಹಜವಾಗೇ ಲೋಕೋಪಯೋಗಿ ಸಚಿವರು ಅಥವಾ ಮುಖ್ಯಮಂತ್ರಿಗೆ ಹಣ ಕೊಡಲು ಆತ ಹೋಗುತ್ತಿದ್ದ ಎಂದು ಚಾರ್ಜ್ ಮಾಡಿದ್ದಾರೆ. 


    ಈ ಪ್ರಕರಣದಲ್ಲಿ ಎಇ ಜೆ.ಜಗದೀಶ್ ಕೇವಲ ಒಂದು ಟೂಲ್ ಮಾತ್ರ, ಲೋಕೋಪಯೋಗಿ ಇಲಾಖೆಗೆ ಜೆಇ, ಎಇಗಳೇ ಆಧಾರ ಸ್ತಂಭ, ಅದು ಕೆಲಸ ಮಾಡುವಾಗ ಮಾತ್ರ, ವ್ಯವಹಾರವೆಲ್ಲ ಎಇಇ, ಇಇ, ಎಸ್‌ಇ, ಸಿಇ ಮತ್ತು ಮೇಲ್ಪಟ್ಟ ಹಂತದಲ್ಲಿ ನಡೆಯುತ್ತವೆ. 


     ಇಂಥದ್ದೇ ಒಂದು ಪ್ರಕರಣ ಈ ಇಲಾಖೆಯಲ್ಲಿ 2015ರ ಮೇ ತಿಂಗಳ ಏಳರಂದು ನಡೆಯಿತು. ಲೋಕೋಪಯೋಗಿ ಇಲಾಖೆಯಲ್ಲಿ ಎರಡು ಮುಖ್ಯ ಕಚೇರಿಗಳಿವೆ, ಒಂದು ಮುಖ್ಯ ಇಂಜಿನಿಯರ್ (ಸಂಪರ್ಕ ಮತ್ತು ಕಟ್ಟಡಗಳು-ದಕ್ಷಿಣ) ಅಂತ ಬೆಂಗಳೂರಿನ ಕೃಷ್ಣರಾಜೇಂದ್ರ ಸರ್ಕಲ್‌ನಲ್ಲಿ, ಹಾಗೂ ಮತ್ತೊಂದು ಮುಖ್ಯ ಇಂಜಿನಿಯರ್ (ಸಂಪರ್ಕ ಮತ್ತು ಕಟ್ಟಡಗಳು-ಉತ್ತರ ) ಅಂತ ಧಾರವಾಡದಲ್ಲಿದೆ. ಈ ಧಾರವಾಡದ ಕಚೇರಿಯಲ್ಲಿ ಆಗ ಚಂದ್ರಶೇಖರ ಎಲಿಗಾರ ಎಂಬುವವರು ಸೂಪರಿಂಟೆಂಡಿಂಗ್ ಇಂಜಿನಿಯರ್ ಆಗಿದ್ದರು, ಜೊತೆಗೆ ಮುಖ್ಯ ಇಂಜಿನಿಯರ್ ಹುದ್ದೆಯ ಪ್ರಬಾರದಲ್ಲೂ ಇದ್ದರು ಅಂತ ಕಾಣುತ್ತೆ. ಅವತ್ತು ಗುರುವಾರ ಅವರು ಇಡೀ ವಲಯದ ಎಲ್ಲ ಇಂಜಿನಿಯರ್‌ಗಳ ಸಭೆ ಮುಗಿಸಿಕೊಂಡು ಸರಕಾರದ ಇನ್ನೋವಾ ಕಾರ್ ನೊಂದಣಿ ಸಂಖ್ಯೆ  ಕೆಎ 01 ಜಿ 4572ರಲ್ಲಿ ಬೆಂಗಳೂರಿಗೆ ಹೊರಟಿದ್ದರು. ವಿಕಾಸಸೌಧದಲ್ಲಿ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ರಿವ್ಯೂ ಮೀಟಿಂಗ್ ಅಟೆಂಡ್ ಮಾಡಬೇಕಿತ್ತು ಅವರು.  ಲೋಕಾಯುಕ್ತ ಪೊಲೀಸರು ತನ್ನ ಬೆನ್ನ ಹಿಂದೆ ಬಿದ್ದಿದ್ದಾರೆ, ಇನ್ನೇನು ಇಲ್ಲೇ ಎಲ್ಲೋ ಕಾರಿಗೆ ಅಡ್ಡ ನಿಂತು ಕೈಹಾಕುತ್ತಾರೆ ಎಂಬ ಸೂಜಿ ಮೊನೆಯಷ್ಟು ಸುಳಿವೂ ಆ ಎಲಿಗಾರರಿಗೆ ಇರಲಿಲ್ಲ ಬಿಡಿ. 


   ಲೋಕಾಯುಕ್ತ ಎಡಿಜಿಪಿಯೊಬ್ಬರು ನೀಡಿದ ಸುಳಿವು ಮತ್ತು ಸೂಚನೆ ಮೇರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿರಿಯೂರು ತಾಲೂಕಿನ ಗುಯಿಲಾಳು ಟೋಲ್ ಪ್ಲಾಜಾ ಬಳಿ ಎಲಿಗಾರರಿದ್ದ ಇನ್ನೋವಾ ಕಾರನ್ನು ಚಿತ್ರದುರ್ಗ ಎಸ್ ಪಿ ತಡೆದರು. ಎಲಿಗಾರ್ ಅವರ ಕಾರನ್ನು ತಪಾಸಣೆ ಮಾಡಿದಾಗ ಹಣ ಕಂಡಿತು, ಎಣಿಸಿದಾಗ, ಅದು ಸರಿಯಾಗಿ 36 ಲಕ್ಷದ 85 ಸಾವಿರದ 500 ರೂಪಾಯಿ ಇದೆ ಎಂದು ಗೊತ್ತಾಯಿತು. ಅಷ್ಟು ದೊಡ್ಡ ಮೊತ್ತ ನೋಡಿ ಪೊಲೀಸರು ಗಾಬರಿಯಾಗಿಬಿಟ್ಟರು. ತಮ್ಮ ಕಾರಿನಲ್ಲಿ ಅಷ್ಟೊಂದು ದೊಡ್ಡ ಮೊತ್ತದ ಹಣ ಯಾಕಿತ್ತು, ಯಾರು ಕೊಟ್ಟದ್ದು, ಯಾರಿಗೆ ಕೊಡಲು ಒಯ್ಯುತ್ತಿದ್ದಿರಿ ಎಂಬ ಪ್ರಶ್ನೆಗಳಿಗೆ ಎಲಿಗಾರರು ಸಮರ್ಪಕ ಉತ್ತರ ಕೊಡಲಾಗಲಿಲ್ಲ. ಹೀಗಾಗಿ ಹಣ ಮತ್ತು ವಾಹನದೊಂದಿಗೆ ಆ ಅಧಿಕಾರಿಯನ್ನೂ ಪೊಲೀಸರು ಬಂಧಿಸಿ ಚಿತ್ರದುರ್ಗದ ಲೋಕಾಯುಕ್ತ ಡಿವೈಎಸ್‌ಪಿಗೆ ಒಪ್ಪಿಸಿದರು.


  (ಆಕ್ಚುಯಲಿ ಎಲಿಗಾರರ ಕಾರಿನಲ್ಲಿ ಬಹಳ ದೊಡ್ಡ ಮೊತ್ತವಿತ್ತು, ಅದು ಗ್ರಾಮ ಪಂಚಾಯಿತಿ ಚುನಾವಣೆ ಖರ್ಚಿಗೆ ಅಂದಿನ ಮುಖ್ಯಮಂತ್ರಿಯ ಬಲಗೈನಂತಿದ್ದ ಲೋಕೋಪಯೋಗಿ ಮಂತ್ರಿ ಡಾ.ಹೆಚ್.ಸಿ. ಮಹದೇವಪ್ಪನವರಿಗೆ ಸಲ್ಲಿಸಬೇಕಿದ್ದ ಕಪ್ಪ, ಅಷ್ಟೂ ಮೊತ್ತವನ್ನು ಲೆಕ್ಕಕ್ಕೆ ಬರೆದುಬಿಟ್ಟರೆ ಇಡೀ ಕೇಸನ್ನು ದಿಲ್ಲಿಯ ಇಡಿಗೆ ಒಪ್ಪಿಸಬೇಕಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಅದರ ಮೂರನೇ ಒಂದರಷ್ಟನ್ನು ಮಾತ್ರವೇ ಜಮಾ ಮಾಡಲಾಯಿತು ಎಂದು ಹೇಳಲಾಗಿದೆ, ಈ ಮಾತು ಎಷ್ಟರ ಮಟ್ಟಿಗೆ ನಿಜ ಎನ್ನುವುದನ್ನು ಎಲಿಗಾರರೇ ಖಚಿತಪಡಿಸಬೇಕು.)


ಸರಿ, 1988ರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 13(2) ರ ಜೊತೆಗೆ ಓದಿಕೊಂಡಂತೆ , ಸೆಕ್ಷನ್ 13(1) (ಡಿ), 13(1)(ಇ)ಗಳಡಿ ಶಿಕ್ಷಿಸಬಹುದಾದ ಅಪರಾಧ ಸಂಖ್ಯೆ 4/2015ನ್ನು ದಾಖಲಿಸಿ, ಚಂದ್ರಶೇಖರ ಎಲಿಗಾರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಜೈಲುಪಾಲಾದ ಕಾರಣ ಅವರನ್ನು ಸರಕಾರ ಅಮಾನತುಗೊಳಿಸಿದ್ದೂ ಆಯಿತು. ‘ಹಣ್ಣು ತಿಂದವ ತಪ್ಪಿಸಿಕೊಂಡ -ಸಿಪ್ಪೆ ತಿಂದವ ಸಿಕ್ಕಿಹಾಕಿಕೊಂಡ ‘ ಗಾದೆಯನ್ನು ತುಸು ಬದಲಿಸಿ ಹೇಳುತ್ತೇನೆ ಕೇಳಿ, ಹಣ್ಣು ತರುತ್ತಿದ್ದವನು ಸಿಕ್ಕಿಹಾಕಿಕೊಂಡ- ಹಣ್ಣು ತಿನ್ನಬೇಕಿದ್ದವನು ಬಚಾವ್ ಆದ”, ಮೊನ್ನಿನ ಎಇ ಜೆ.ಜಗದೀಶ್ ಕೇಸಿನಲ್ಲೂ ಇದೇ ಆದದ್ದು. 


ಮೇ 15ರಂದು ಲೋಕಾಯುಕ್ತ ನ್ಯಾ. ಭಾಸ್ಕರರಾವ್ ಸುದ್ದಿಗೋಷ್ಟಿ ನಡೆಸಿ, ಅವತ್ತು ಆ ಕಾರಿನಲ್ಲಿ ದೊಡ್ಡ ಮೊತ್ತದ ಹಣ ರಾಜಧಾನಿಗೆ ಬರುತ್ತಿದೆ ಎಂದು ಗುಪ್ತ ಮಾಹಿತಿ ಕೊಟ್ಟ ಮಾಹಿತಿದಾರನಿಗೆ ಬಹಿರಂಗವಾಗಿ ಥ್ಯಾಂಕ್ಸ್ ಹೇಳಿದರು, ಆದರೆ ಮುಂದೊಂದು ದಿನ ನ್ಯಾಯಾಂಗ ಬಂಧನದಿಂದ ಹೊರಬಂದ ಚಂದ್ರಶೇಖರ ಎಲಿಗಾರರು “ತಾವು ಆ ದೊಡ್ಡ ಮೊತ್ತವನ್ನು ಖುದ್ದು ಲೋಕಾಯುಕ್ತರಿಗೇ ಕೊಡಲು ತರುತ್ತಿದ್ದೆ” ಅಂತ ಹೇಳಿಕೊಂಡರು, ಒಂದು ವೇಳೆ ಆ ಮೊತ್ತ ತಮಗೇ ಸೇರಬೇಕು ಅಂತ ಆಗಿದ್ದರೆ ಪಾಪ ಆ ಭಾಸ್ಕರ್ ರಾವ್ ಎಂಬ ಲೋಕಾಯುಕ್ತರೇಕೆ ದೂರವಾಣಿ ಕರೆ ಮಾಡಿ, ಇಂಥಾ ವಾಹನ ಹಿಡೀರಿ ಅಂತ ಸೂಚನೆ ಕೊಡುತ್ತಿದ್ದರು. 


   ಚಂದ್ರಶೇಖರ ಎಲಿಗಾರರ ಇಡೀ ಆಸ್ತಿ ಪಾಸ್ತಿ ತನಿಖೆ ಮಾಡಲಾಯಿತು, 1983ರಲ್ಲಿ ಸಹಾಯಕ ಇಂಜಿನಿಯರ್(ಎಇ) ಹುದ್ದೆಗೆ ನೇಮಕಗೊಂಡ ಚಂದ್ರಶೇಖರ ಎಲಿಗಾರ್, 2014ರ ಮಾರ್ಚಿ 30ರಂದು ಅಧೀಕ್ಷಕ ಇಂಜಿನಿಯರ್ ಹುದ್ದೆಗೆ ಮುಂಬಡ್ತಿ ಹೊಂದಿರುತ್ತಾರೆ. ಈ ಅಧಿಕಾರಿ ಬಳಿ 37 ಎಕರೆ ಭೂಮಿ ಇದೆ, 58 ಲಕ್ಷ ನಗದು ಠೇವಣಿ ಇದೆ, ಬೆಂಗಳೂರು ಮತ್ತು ಹುಬ್ಬಳ್ಳಿಗಳಲ್ಲಿ ಸರ್ಕಾರಕ್ಕೆ ತಿಳಿಸದೇ ಮುಚ್ಚಿಟ್ಟಿದ್ದ ಹಲವಾರು ನಿವೇಶನಗಳಿವೆ, ಒಟ್ಟಾರೆ ಮೂರು ಕೋಟಿ ರೂ.ಮೌಲ್ಯದ ಅಕ್ರಮ ಆಸ್ತಿ ಇದೆ ಎಂದು ಲೋಕಾಯುಕ್ತ ತನಿಖೆಯಿಂದ ಬೆಳಕಿಗೆ ಬರುತ್ತದೆ, ಘೋಷಿತ ಆದಾಯಕ್ಕೂ ಮೀರಿದ ಆಸ್ತಿ ಹೊಂದಿರುವ ಕಾರಣಕ್ಕೂ ಅವರ ಮೇಲೆ ಮತ್ತೊಂದು ಪ್ರಕರಣ ದಾಖಲಾಯಿತು. ಅವರ ಪತ್ನಿ, ಮಗಳು ಮತ್ತು ಮಗನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಯಿತು, ತದನಂತರ ತಮ್ಮನ್ನು ಹೊರತು ಪಡಿಸಿ ಕುಟುಂಬದ ಇತರರ ಬ್ಯಾಂಕ್ ಖಾತೆ ಮುಕ್ತಗೊಳಿಸಿಕೊಡುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಯಶಸ್ವಿಯೂ ಆದರು, ಆದರೆ ಅದೇ ರೀತಿ ರಿಟ್ ಅರ್ಜಿ ಸಂ. 108338/2015ರಲ್ಲಿ     ಎಫ್‌ಐಆರ್ ರದ್ದುಪಡಿಸುವಂತೆ ಎಲಿಗಾರರ ಕೋರಿಕೆಯನ್ನು ಮಾನ್ಯ ಹೈಕೋರ್ಟ್ ಮಾನ್ಯ ಮಾಡಲಿಲ್ಲ, ಬದಲಿಗೆ ವಜಾ ಮಾಡಿತು. 


ಆದರೆ ಈ ಪ್ರಕರಣ ಅಲ್ಲಿಗೇ ನಿಲ್ಲಲಿಲ್ಲ, ಟೋಲ್ ಪ್ಲಾಜಾದಲ್ಲಿ ದೊಡ್ಡ ಮೊತ್ತ ಸೀಜ್ ಆದ ಕೆಲವೇ ದಿನಗಳಲ್ಲಿ ಲೋಕಾಯುಕ್ತ ಎಡಿಜಿಪಿ ಸತ್ಯನಾರಾಯಣ ಹಾಗೂ ಧಾರವಾಡದಲ್ಲಿ ಲೋಕಾಯುಕ್ತ ಎಸ್‌ಪಿ ಆಗಿದ್ದ ಕೆ.ಪರಶುರಾಮ್ ಅವರನ್ನು ಸರಕಾರ ಏಕಾಏಕಿ ವರ್ಗಾವಣೆ ಮಾಡುತ್ತದೆ. ಲೋಕಾಯುಕ್ತ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮುನ್ನ ಲೋಕಾಯುಕ್ತರ ಅಭಿಪ್ರಾಯ ಪಡೆಯಬೇಕೆಂಬ ನಿಯಮವನ್ನು ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ಪಾಲಿಸುವುದಿಲ್ಲ. ಚಂದ್ರಶೇಖರ ಎಲಿಗಾರರು ತರುತ್ತಿದ್ದ ಹಣವನ್ನು ಅದು ತಲುಪಬೇಕಾದವರಿಗೆ ತಲುಪದಂತೆ ಮಾಡಿದ ಅಧಿಕಾರಿಗಳ ವಿರುದ್ಧ ಸೇಡಿನ ಕ್ರಮ ಈ ವರ್ಗಾವಣೆ ಎಂದು ನೀವು ಭಾವಿಸಿದಲ್ಲಿ ಯಾರೇನೂ ಮಾಡಲಾಗದು.


ಅಂದು ಎಲಿಗಾರರು ತರುತ್ತಿದ್ದ 36.85ಲಕ್ಷ ಹಾಗೂ ಮೊನ್ನೆ ಜಗದೀಶ್ ತಂದಿದ್ದ 10.50ಲಕ್ಷ ರೂಗಳ ನಡುವಣ ಆರೂವರೆ ವರ್ಷಗಳಲ್ಲಿ ಇಂಥ ಅದೆಷ್ಟೋ ಲಕ್ಷಗಳನ್ನು ನಮ್ಮ ಇಂಜಿನಿಯರ್‌ಗಳು ಕರ್ನಾಟಕದ ಮೂಲೆ ಮೂಲೆಯಿಂದ ವಿಧಾನ ಸೌಧಕ್ಕೆ ಸಾಗಿಸಿ ತಂದಿದ್ದಾರೆ. ಮುಂದೆಯೂ ತರುತ್ತಾರೆ. 


2016ರ ನವೆಂಬರ್ ಎಂಟರ ಮಂಗಳವಾರ ರಾತ್ರಿ ಎಂಟು ಗಂಟೆಗೆ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 1000 ಹಾಗೂ 500 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡಿದ ಬಳಿಕ ತಂದ ಹೊಸ ಹಣಕಾಸು ನೀತಿ ಪ್ರಕಾರ ಇವತ್ತು ನಾವು ಎರಡು ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ನಗದಾಗಿ ಬ್ಯಾಂಕಿನಿಂದ ಅಥವಾ ಎಟಿಎಂಗಳಿಂದ ಡ್ರಾ ಮಾಡುವಂತಿಲ್ಲ ಹಾಗೂ ಮಾಡಲು ಆಗುವುದೂ ಇಲ್ಲ, ಇದು ಇತರ ಎಲ್ಲ ವಹಿವಾಟುಗಳಿಗೂ ಅನ್ವಯವಾಗುತ್ತದೆ, ಆದಾಗ್ಯೂ ನೋಟು ಬಂದಿ ನಂತರ ದೇಶದಲ್ಲಿ ನಗದು ಚಲಾವಣೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಅದೇ ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಜೊತೆಗೆ ನಮ್ಮ ಕರ್ನಾಟಕ ಮೂಲದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹೊರತು ಪಡಿಸಿ ನ್ಯಾಯ ಪೀಠದ ಉಳಿದ ನ್ಯಾಯಮೂರ್ತಿಗಳು ಡಿಮಾನಿಟೈಸೇಶನ್ ತಪ್ಪಲ್ಲ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ.


ಇದೇ ಡಿಮಾನಿಟೈಸೇಶನ್ ಪರಿಣಾಮವಾಗಿಯೇ ಲೋಕೋಪಯೋಗಿ ಇಲಾಖೆಯೂ ಸೇರಿ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕಾಮಗಾರಿ ನಡೆಸುವ ಗುತ್ತಿಗೆದಾರರು ಕಷ್ಟಕ್ಕೊಳಗಾಗಿ ನಷ್ಟದಲ್ಲಿದ್ದಾರೆ, ಉರಿವ ಬೆಂಕಿಗೆ ಎಣ್ಣೆ ಸುರಿದಂತೆ, ಉರಿವ ಗಾಯಕ್ಕೆ ಉಪ್ಪು ಕಾರ ಸವರಿ ನಿಂಬೆ ಹುಳಿ ಹಿಂಡಿದಂತೆ ಜಿಎಸ್‌ಟಿ ಈ ಗುತ್ತಿಗೆದಾರರನ್ನು ಜೀವಂತ ಹತ್ತಿ ಉರಿಸುತ್ತಿದೆ, ಅವರ ಮಗ್ಗಲು ಮುರಿಯುತ್ತಿದೆ.


  ಬರುವ ಮಂಗಳವಾರ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲು ಹೊರಟಿರುವ ಗುತ್ತಿಗೆದಾರರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎ.ಡಿ.ಬಲರಾಮಯ್ಯನವರು ಮೊನ್ನೆ ಸುದ್ದಿಗೋಷ್ಟಿಯಲ್ಲಿ ಇದೇ ವಿಚಾರವನ್ನು ಪದೇ ಪದೇ ಹೇಳಿದರು.


“ ನೋಡಿ ನಾವು ಟೆಂಡರ್ ಹಾಕುವಾಗ ಜಿಎಸ್‌ಟಿ 12% ಇತ್ತು, ಕೆಲಸ ಮುಗಿಸಿ ಬಿಲ್ ಕೊಡುವ ಹೊತ್ತಿಗೆ ಅದನ್ನು 18%ಗೆ ಏರಿಸಿಬಿಟ್ಟರೆ ಉಳಿದ 6% ಎಲ್ಲಿಂದ ತಂದುಕೊಡಬೇಕು ನಾವು?” ಎಂದು ಅವರು ಪ್ರಶ್ನಿಸಿದರು.


ಗುತ್ತಿಗೆದಾರರಾದ ನೀವೇ ಭ್ರಷ್ಟಾಚಾರದ ಮೂಲವಲ್ಲವೇ, ನೀವೇಕೆ 35% ಲೆಸ್ ಹಾಕಿ ಗುತ್ತಿಗೆ ಪಡೆಯುತ್ತೀರಾ” ಎಂದು ನಾನು ಪ್ರಶ್ನಿಸಿದೆ. 
“ ನಿಜ, ನಾವು ಎಷ್ಟೋ ನಮ್ಮ ಲಾಭದಲ್ಲಿ ಒಂದಿಷ್ಟು ಇಂಜಿನಿಯರ್‌ಗಳು ಹಾಗೂ ರಾಜಕಾರಣಿಗಳಿಗೆ ಕೊಡುತ್ತಿದ್ದೆವು. ಆದರೆ ಈಗ ಈ ಲಂಚದ ಹಣವನ್ನು ಇಂಜಿನಿಯರ್‌ಗಳು ತಮ್ಮ ಹಕ್ಕು ಅಂತ ಅಂದುಕೊಂಡು ಬಿಟ್ಟಿದ್ದಾರೆ, ಏನು ಮಾಡುವುದು, ಇದು ತಪ್ಪು, ಹೊಸ ಹುಡುಗರು ಗೊತ್ತಿಲ್ಲದೇ 35% ಲೆಸ್ ಹಾಕುತ್ತಾರೆ” ಎಂದವರು ಬಲರಾಮಯ್ಯ.


   ಅವರಿಗೆ ಬೇಕಾದವರಿಗೆ ಗುತ್ತಿಗೆ ಕೊಡಿಸುವ ಸಲುವಾಗಿ ನಾವು ಟೆಂಡರ್ ಹಾಕದಂತೆ ಜನಪ್ರತಿನಿಧಿಗಳು ಧಮಕಿ ಹಾಕುವ ಹಂತಕ್ಕೆ ಬಂದಿದ್ದಾರೆ. ಹಾಗೂ ಮುಂದುವರೆದರೆ ಹಾಕಿದ ಟೆಂಡರ್‌ನಲ್ಲಿ ದಾಖಲೆ ಕಿತ್ತು ಹಾಕಿಸಿ ನಮಗೆ ಗುತ್ತಿಗೆ ದಕ್ಕದಂತೆ ಮಾಡಲಾಗುತ್ತಿದೆ.  ಕೆಲಸ ಪಡೆಯಲೂ ದುಡ್ಡು, ಗ್ರಾಂಟ್‌ಗೂ ದುಡ್ಡು, ಎಲ್‌ಓಸಿಗೂ ದುಡ್ಡು ಅಂದರೆ ಎಲ್ಲಿಂದ ತರಬೇಕು, ಜೊತೆಗೆ ಸಕಾಲದಲ್ಲಿ ಬಿಲ್ ಪಾಸ್ ಮಾಡಿ ಹಣ ಬಿಡುಗಡೆ ಮಾಡುವುದಿಲ್ಲ, ಏಕ ರೂಪವಾಗಿ ಎಲ್ಲರಿಗೂ ಸಮಾನವಾಗಿ ಹಣ ಬಿಡುಗಡೆ ಮಾಡುವುದಿಲ್ಲ, ಎಲ್ಲ ಹಣವನ್ನೂ ಸಿಎಂ ಕಚೇರಿಯಲ್ಲಿ ಹಿಡಿದಿಟ್ಟುಕೊಳ್ಳಲಾಗಿದೆ, ಪರ್ಸೆಂಟೇಜ್ ಕೊಟ್ಟವರಿಗೆ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಹಾಗಾಗಿಯೇ ಸಾಲ ಮಾಡಿ, ಹೆಚ್ಚಿನ ಪ್ರಮಾಣದ ಬಡ್ಡಿಗೆ ಕೈ ಸಾಲ ತಂದಿರುವ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಮೊನ್ನೆ ದೇವರಾಯನದುರ್ಗದ ಗೆಸ್ಟ್ ಹೌಸ್‌ನಲ್ಲಿ ಟಿ.ಎನ್.ಪ್ರಸಾದ್ ನೇಣು ಹಾಕಿಕೊಂಡು ಸತ್ತದ್ದೂ ಈ ಕಾರಣದಿಂದಲೇ, ಜೊತೆಗೆ ಈಗಾಗಲೇ ನಾಲ್ಕೈದು ಗುತ್ತಿಗೆದಾರರು ಊರು ಬಿಟ್ಟು ನಾಪತ್ತೆಯಾಗಿದ್ದಾರೆ” ಎಂದು ವಿಷಾದಿಸಿದರು ಬಲರಾಮಯ್ಯ.


   ಗುತ್ತಿಗೆದಾರರ ಸಂಘವು ಹೇಳುವ ಮಾತುಗಳಲ್ಲಿ ಸತ್ಯಾಂಶವಿದೆ. 1951ರಲ್ಲಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಐದೂವರೆ ಲಕ್ಷ ಚದರಡಿಯ ವಿಧಾನ ಸೌಧವನ್ನು ತಾವೇ ಮುಂದೆ ನಿಂತು 1.80 ಕೋಟಿ ರೂ. ಮೊತ್ತದಲ್ಲಿ ಕಟ್ಟಿಸಿದರು, ಆದರೆ ಇಡೀ ಕಟ್ಟಡದ ಗೋಡೆಗಳಿಗೆ ಬಣ್ಣ ಬಳಿಯಲು, ಕಿಟಕಿ ಬಾಗಿಲುಗಳಿಗೆ ಪಾಲಿಶ್ ಹೊಡೆಸಲು ನಮ್ಮ ಇಂಜಿನಿಯರ್‌ಗಳು ವರ್ಷಕ್ಕೆ ರೂ. 200 ಕೋಟಿಗಿಂತ ಹೆಚ್ಚು ಖರ್ಚು ಮಾಡುತ್ತಿದ್ದಾರೆ ಎಂದರೆ ಭ್ರಷ್ಟಾಚಾರದ ಪ್ರಮಾಣವನ್ನು ಅರ್ಥ ಮಾಡಿಕೊಳ್ಳಿ. 


   ಸಾಮಾಜಿಕ ಅಸಮಾನತೆಯೇ ಬುನಾದಿಯಾಗಿರುವ, ವಸಾಹತು ಆಳ್ವಿಕೆಯ ಇತಿಹಾಸವಿರುವ ಈ ದೇಶದಲ್ಲಿ ಎಲ್ಲವನ್ನೂ ಆರ್ಥಿಕ ಭ್ರಷ್ಟಾಚಾರದ ದೃಷ್ಟಿಯಿಂದಲೇ ನೋಡಲಾಗುವುದಿಲ್ಲ. ಪ್ರತಿ ಘಟನೆಗೂ, ಪ್ರಕರಣಕ್ಕೂ, ಹಗರಣಕ್ಕೂ ಭಿನ್ನ ಭಿನ್ನ ಆಯಾಮಗಳಿರುತ್ತವೆ. ಹಿಂದುಳಿದ ವರ್ಗಗಳವರು ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರದ ಪ್ರಮಾಣ ಹಿಂದೆಂದಿಗಿಂತಲೂ ಹೆಚ್ಚಾಗಿಬಿಟ್ಟಿದೆ, ದಲಿತ ಅಧಿಕಾರಿಗಳನ್ನೂ ಕೇಳುವಂತೆಯೇ ಇಲ್ಲ, ಮೈಯೆಲ್ಲಾ ಬಾಯಿ ಎಂದು ಟೀಕಿಸಲಾಗುತ್ತದೆ. ಈ ಮಾತುಗಳಲ್ಲಿ ಸತ್ಯಾಂಶವಿಲ್ಲದೆಯೂ ಇಲ್ಲ ಮತ್ತು ಅದು ಹಾಗಲ್ಲ ಎಂದು ಸಮರ್ಥಿಸಿಕೊಳ್ಳಲೂ ಸಾಕಷ್ಟು ಅಂಶಗಳೂ ಇವೆ. ಆದರೆ, ಮೇಲ್ಜಾತಿ ಅಧಿಕಾರಿಗಳ ಭ್ರಷ್ಟಾಚಾರ ಬೆಳಕಿಗೇ ಬರುವುದಿಲ್ಲ, ಕಂಡೂ ಕಾಣದಂತೆ ಮುಚ್ಚಿ ಹಾಕಿಬಿಡುವ ದೊಡ್ಡದೊಂದು ಜಾಲ ಸ್ವಾತಂತ್ರ‍್ಯ ಪೂರ್ವದಿಂದಲೂ ಈ ನೆಲದಲ್ಲಿದೆ. “ ಹೂಸಿದ್ದು ಯಾರು ಎಂದರೆ ಮಾಸಿದ ಸ್ಯಾಲೆಯವಳು” ಎನ್ನುವ ಗಾದೆಯಂತೆ. ಹಂಗಂತ ಹಿಂದುಳಿದ ವರ್ಗಗಳಿಗೆ ಸೇರಿದ, ದಲಿತರ ಮತ್ತು ಮುಸ್ಲಿಮರು ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುತ್ತಿದ್ದೇನೆ ಎಂದು ಭಾವಿಸಿಕೊಳ್ಳಬೇಡಿ.


   ಬಂಗಾರಪ್ಪ ಅಧಿಕಾರ ಕಳೆದುಕೊಂಡ, ಲಾಲೂ ಪ್ರಸಾದ್ ಯಾದವ್, ಕನ್ನಿಮೋಳಿ ಮತ್ತು ರಾಜಾ ಜೈಲುಪಾಲಾದ ದೃಶ್ಯಗಳನ್ನು ಕಣ್ಣಮುಂದೆ ಇರಿಸಿಕೊಂಡೇ ಕಳೆದ ಎಂಟು ವರ್ಷಗಳಲ್ಲಿ ಭಾರತ ಸರ್ಕಾರದ ದೊಡ್ಡ ದೊಡ್ಡ ಹಗರಣಗಳಾಗ ಬಲ್ಲಂಥ ಭ್ರಷ್ಟಾಚಾರದ ಪ್ರಕರಣಗಳನ್ನು ಅವರ ಮಡಿಲಲ್ಲೇ ಇರುವ ಟಿವಿ ಮಾಧ್ಯಮಗಳು ಹೇಗೆ ಕಣ್ಮರೆ ಮಾಡುತ್ತಿವೆ ಎಂಬ ಎಚ್ಚರದಲ್ಲಿ ಈ ಮಾತುಗಳನ್ನು ಹೇಳುತ್ತಿದ್ದೇನೆ.


   ರಾಜಕಾರಣಿಗಳು, ಇಂಜಿನಿಯರ್‌ಗಳು, ಐಎಎಸ್, ಐಪಿಎಸ್, ಐಎಫ್‌ಎಸ್‌ಗಳು ಮತ್ತು ಇತರ ಇಲಾಖೆಗಳ ಅಧಿಕಾರಿಗಳು, ಮುಖ್ಯಮಂತ್ರಿ ಹಾಗೂ ಮಂತ್ರಿಗಳ ಮಕ್ಕಳು, ಅಳಿಯಂದರು, ಸೊಸೆಯಂದಿರು, ಮೊಮ್ಮಕ್ಕಳು, ಆಪ್ತ ಸಹಾಯಕರು, ಆಪ್ತರು, ಗುಮಾಸ್ತರು, ಜವಾನರು, ಮಧ್ಯವರ್ತಿಗಳು, ಗುತ್ತಿಗೆದಾರರು ಎಲ್ಲರೂ ಸೇರಿಯೇ ಸರ್ಕಾರದ ಹಣವನ್ನು ಅಂದರೆ ಜನರ ತೆರಿಗೆ ಹಣವನ್ನು ಯೋಜನೆಗಳು ಮತ್ತು ಕಾಮಗಾರಿಗಳ ಹೆಸರಿನಲ್ಲಿ ಪಾಲು ಮಾಡಿಕೊಳ್ಳುವ ಕ್ರಿಯೆಯನ್ನು ನಾವು ಭ್ರಷ್ಟಾಚಾರ ಎನ್ನುತ್ತೇವೆ. 


   ಚುನಾವಣೆಗಳಲ್ಲಿ ಅಭ್ಯರ್ಥಿಗಳು ಹಂಚುವ ಹಣವನ್ನು ಓಟುದಾರರಾದ ನಾವು ನೀವು, ಈ ರಾಜಕಾರಣಿಗಳು ಭ್ರಷ್ಟತನದಿಂದ ಗಳಿಸಿದ ಮೊತ್ತದಲ್ಲಿ ಪಡೆಯುತ್ತಿರುವ ಪಾಲು ಎಂದು ಸಂತೋಷದಿಂದ ಕೈಯೊಡ್ಡಿ ಪಡೆದುಕೊಂಡು ಓಟು ಹಾಕಿ ಕೃತಾರ್ಥರಾಗುತ್ತೇವೆ. 


   ಇಂಥದ್ದೇ ಒಬ್ಬ ಮಧ್ಯವರ್ತಿ ಮೂರು ದಿನಗಳಿಂದ ಸುದ್ದಿಯಲ್ಲಿದ್ದಾನೆ. ಈತ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವ ದಂಧೆಗೆ ವೇಶ್ಯಾವಾಟಿಕೆಯನ್ನೂ ಲಗತ್ತಿಸಿಕೊಂಡಿದ್ದಾನೆ. ಈತ ವಂಚಿಸಿ ಮದುವೆ ಆಗಿರುವ ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ತಾನು ಸೂಚಿಸಿದ ಐಎಎಸ್ ಅಧಿಕಾರಿಯೊಂದಿಗೆ ಮಂಚ ಹತ್ತಲಿಲ್ಲ ಎಂಬ ಆಕ್ರೋಶಕ್ಕೆ ಸುಳ್ಳು ಕೇಸು ಹಾಕಿಸಿ ಜೈಲಿಗೆ ಕಳಿಸುತ್ತಾನೆ. ಈತ ಮುಖ್ಯಮಂತ್ರಿಯ ಮಗ, ಗೃಹ ಮಂತ್ರಿ, ಶಿಕ್ಷಣ ಮಂತ್ರಿ, ಸಹಕಾರ ಮಂತ್ರಿ ಎಲ್ಲರ ಜೊತೆ ಸಲೀಸಾಗಿ ಬೆರೆಯುತ್ತಾನೆ, ಈತ ಯಾರೋ ನಮಗೆ ಗೊತ್ತಿಲ್ಲ ಎಂದು ಎಲ್ಲರೂ ನುಣುಚಿಕೊಳ್ಳುತ್ತಾರೆ. ಈತನ ವಿರುದ್ದದ ಎಲ್ಲ ಸರ್ಕಾರಗಳ ಅವಧಿಯ ತನಿಖೆ ಮಾಡಿಸುತ್ತೇನೆ ಎಂದು ಸಿಎಂ ಗುಡುಗುತ್ತಾರೆ, ಆದರೆ ಅವರ ಮಗನೇ ಈ ಪಿಂಪ್ ಗೆ ಸ್ವೀಟ್ ಬ್ರದರ್ ಅಂತ ವಾಟ್ಸಪ್ ಸ್ಟೇಟಸ್‌ನಲ್ಲಿ ದಾಖಲಾಗಿದೆ. ಈತನ ಕುರಿತಾದ ಲೇಖನವನ್ನು ಮೈಸೂರಿನ ಒಡನಾಡಿ ಗೆಳೆಯರು ಬರೆದಿದ್ದು, ಇದೇ ಕಿನ್ನರಿಯಲ್ಲಿ ಹಂಚಿಕೊಳ್ಳಲಾಗಿದೆ. ಓದಿ ಅರ್ಥ ಮಾಡಿಕೊಳ್ಳಿ, ನಮ್ಮನ್ನು ಯಾರೋ ಉದ್ದಾರ ಮಾಡುವುದಿಲ್ಲ, ನಮ್ಮ ಎಚ್ಚರದಲ್ಲಿ ನಾವಿದ್ದರೆ ಮಾತ್ರ ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಾಗಿ ಇರಬಲ್ಲದು. ತುಸು ಯೋಚಿಸಿ.