ವಿಧಾನ ಪರಿಷತ್ ಚುನಾವಣೆ- ಯಾರು ಹಿತವರು ಈ ಮೂವರೊಳಗೆ  99% ಲೋಕಲ್ ಕುಚ್ಚಂಗಿ ಪ್ರಸನ್ನ

ವಿಧಾನ ಪರಿಷತ್ ಚುನಾವಣೆ- ಯಾರು ಹಿತವರು ಈ ಮೂವರೊಳಗೆ  99% ಲೋಕಲ್ ಕುಚ್ಚಂಗಿ ಪ್ರಸನ್ನ kuchangi prasanna

ವಿಧಾನ ಪರಿಷತ್ ಚುನಾವಣೆ- ಯಾರು ಹಿತವರು ಈ ಮೂವರೊಳಗೆ  99% ಲೋಕಲ್ ಕುಚ್ಚಂಗಿ ಪ್ರಸನ್ನ

ವಿಧಾನ ಪರಿಷತ್ ಚುನಾವಣೆ- ಯಾರು ಹಿತವರು ಈ ಮೂವರೊಳಗೆ 
99% ಲೋಕಲ್
ಕುಚ್ಚಂಗಿ ಪ್ರಸನ್ನ


ತುಮಕೂರು: ವಿಧಾನ ಪರಿಷತ್ ಚುನಾವಣೆಯ ಮತದಾನಕ್ಕೆ ಇನ್ನು ಮೂರೇ ದಿನ. ಜಿಲ್ಲೆಯಲ್ಲಿ ನಾಲ್ವರು ಕಣದಲ್ಲಿದ್ದರೂ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಎಲ್ಲರ ಕಣ್ಣಿಗೆ ಎದ್ದು ಕಾಣುತ್ತಿದ್ದಾರೆ. ಇದು ಸಾಮಾನ್ಯ ಮತದಾರರು ಓಟು ಮಾಡುವ ಚುನಾವಣೆ ಅಲ್ಲ, ಸಾಮಾನ್ಯ ಮತದಾರರಿಂದ ಚುನಾಯಿತರಾದ ಗ್ರಾಮ ಪಂಚಾಯಿತಿ, ಪುರಸಭೆ, ಪಟ್ಟಣ ಪಂಚಾಯಿತಿ, ನಗರ ಸಭೆ ಹಾಗೂ ಮಹಾನಗರಪಾಲಿಕೆ ಸದಸ್ಯರು ಮಾತ್ರವೇ ಓಟುದಾರರು. ಹಾಗಾಗಿ ಇವರಿಗೆ ಈ ಎರಡು ವಾರಗಳಲ್ಲಿ ಎಲ್ಲಿಲ್ಲದ ಬೇಡಿಕೆ. ಸದ್ಯಕ್ಕೆ ಇವರೇ ವಿವಿಐಪಿಗಳು!


ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯ ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರು ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಮಾವೇಶಗಳನ್ನು ನಡೆಸಿ ತಮ್ಮ ಅಭ್ಯರ್ಥಿಗಳ ಪರ ಓಟು ಕೇಳುವ ಕಾರ್ಯಕ್ರಮಗಳೆಲ್ಲ ಆಖೈರುಗೊಂಡಿವೆ. ಇವೆಲ್ಲ ಈ ಚುನಾವಣೆಯಲ್ಲಿ ಅಷ್ಟೇನೂ ಪರಿಣಾಮ ಬೀರುವುದಿಲ್ಲ ಎಂದು ಅವರಿಗೂ ಗೊತ್ತು, ಆದರೂ ಶಾಸ್ತç, ಸಂಪ್ರದಾಯ ಅಲ್ಲವಾದರೂ ವಾತಾವರಣ ನಿರ್ಮಾಣದ ಭಾಗವಾಗಿ ಇಂಥ ಸಭೆ, ಸಮಾವೇಶಗಳಿಗೆ ಇನ್ನೂ ಬೆಲೆಯಿದೆ.


ಕಾಂಗ್ರೆಸ್‌ನಿಂದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಾಗಿರುವ ಆ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡೆರೆಡು ಸಲ ಮೂರೇ ಅನ್ನಿ ಬಂದು ಹೋಗಿದ್ದಾರೆ. ಚಪ್ಪಾಳೆ, ಶಿಳ್ಳೆ ಗಿಟ್ಟಿಸಿಕೊಳ್ಳುವ ಭಾಷಣ ಮಾಡಿದ್ದಾರೆ. ರಾಜ್ಯ ಮಟ್ಟದ ನಾಯಕರಾದರೂ ಜಿಲ್ಲೆಯವರೇ ಆಗಿರುವ ಕಾರಣದಿಂದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ನಿರಂತರವಾಗಿ ಪಕ್ಷದ ಅಭ್ಯರ್ಥಿ ರಾಜೇಂದ್ರ ರಾಜಣ್ಣನವರ ಪರವಾಗಿ ಎಲ್ಲ ವೇದಿಕೆಗಳಲ್ಲೂ ಮುಂದೆ ನಿಂತು ಪ್ರಚಾರ ಮಾಡಿದ್ದಾರೆ. ಜೊತೆಗೆ ಮಾಜಿ ಮಂತ್ರಿ ಟಿ.ಬಿ.ಜಯಚಂದ್ರ ಮತ್ತು ರಾಜೇಂದ್ರ ತಂದೆ ಕೆ.ಎನ್.ರಾಜಣ್ಣನವರೂ ಸೇರಿ ಇತರ ಎಲ್ಲ ಹಾಲಿ ಮಾಜಿ ಶಾಸಕರು ಸಂಸದರೂ ‘ ಕೈ ‘ ಜೋಡಿಸಿದ್ದಾರೆ.


ಆರು ವರ್ಷದ ಹಿಂದೆ ಇದೇ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದ ಜಾತ್ಯತೀತ ಜನತಾ ದಳ(ಜೆಡಿಎಸ್) ಕಳೆದ ಸಲದಂತೆ ಈ ಸಲವೂ ಹೊಸ ಮುಖವನ್ನೇ ತಂದು ನಿಲ್ಲಿಸಿದೆ. ಕಳೆದ ಚುನಾವಣೆಯಲ್ಲಿ ಜಿಲ್ಲೆಗೆ ತೀರಾ ಹೊಸಬರಾಗಿದ್ದ ಬೆಮೆಲ್ ಕಾಂತರಾಜು ಅರು ವರ್ಷ ಪೂರೈಸುವುದರೊಳಗಾಗಿ ಪಕ್ಷಕ್ಕೆ ‘ಕೈ’ ಕೊಟ್ಟು ತುರುವೇಕೆರೆಯಲ್ಲಿ ಶಾಸಕರಾಗುವ ಹಂಬಲದಿAದ ಕಾಂಗ್ರೆಸ್ ಕಡೆ ಜಿಗಿದಿದ್ದಾರೆ. ಕಡೇ ದಿನದವರೆಗೂ ಜಿಲ್ಲೆಯ ಯಾರಾದರೂ ಅಭ್ಯರ್ಥಿಗಳಾಗಬಹುದು ಎಂದು ಕಾದಿದ್ದೆಲ್ಲ ವ್ಯರ್ಥ ಎನ್ನುವಂತೆ ಜಿಲ್ಲೆಯವರೇ ಆದರೂ ಕೆಎಎಸ್ ಅಧಿಕಾರಿ ಆರ್.ಅನಿಲ್‌ಕುಮಾರ್ ನೇರ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಇವರ ರಾಜಿನಾಮೆಯನ್ನು ಅಂಗೀಕರಿಸುವAತೆ ಮಾಡುವಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಪಾತ್ರ ದೊಡ್ಡದಿದೆ ಎಂದು ವಿಧಾನ ಸೌಧ ಹೇಳುತ್ತಿದೆ. ಅವರ ರಾಜಿನಾಮೆ ಅಂಗೀಕರಿಸಲು ಸರ್ಕಾರದಿಂದಲೇ ಅಷ್ಟು ಒತ್ತಡ ಬಂದದ್ದು ನೋಡಿದಾಗ ಅವರು ಬಿಜೆಪಿ ಅಭ್ಯರ್ಥಿಯಾಗಬಹುದು ಎಂದು ಕೊಂಡಿದ್ದೆವು, ಆದರೆ ಅವರು ಜೆಡಿಎಸ್‌ಗೆ ಹೋಗಿ ಬಿಟ್ಟರು ಎನ್ನುತ್ತಾರೆ ಅಲ್ಲಿನ ಅಧಿಕಾರಿಗಳು. ಕುಮಾರಸ್ವಾಮಿ ಮತ್ತು ಅವರ ತಂದೆ ಜೆಡಿಎಸ್ ರಾಷ್ಟಿçÃಯ ಅಧ್ಯಕ್ಷ ಮಾಜಿ ಪ್ರಧಾನಿ ದೇವೇಗೌಡರೂ ಕೂಡಾ ಮರ‍್ನಾಲ್ಕು ದಿನ ತೀವ್ರ ಶ್ರಮ ವಹಿಸಿ ಪ್ರಚಾರ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಇವರಿಬ್ಬರ ಗುರಿ ಮತ್ತು ದಾರಿ ಒಂದೇ- ರಾಜೇಂದ್ರರನ್ನು ಹೇಗಾದರೂ ಸೋಲಿಸುವ ಮೂಲಕ ಜಿಲ್ಲೆಯಲ್ಲಿನ ಅವರ ಸದ್ಯದ ರಾಜಕೀಯ ವೈರಿ ಕೆ.ಎನ್.ರಾಜಣ್ಣನವರ ಮೇಲೆ ಸೇಡು ತೀರಿಸಿಕೊಳ್ಳುವುದು.ಇದು ಅವರಿಬ್ಬರ ಮಾತುಗಳಲ್ಲಿ, ಹೇಳಿಕೆಗಳಲ್ಲಿ ಎದ್ದು ಕಾಣುತ್ತಿದೆ.
ದಿಲ್ಲಿ, ಅಲ್ಲಿ ಮತ್ತು ಇಲ್ಲಿ ಎಲ್ಲ ಕಡೆ ಆಡಳಿತದಲ್ಲಿರುವ ಬಿಜೆಪಿಗೆ ವಿಧಾನ ಪರಿಷತ್ ಚುನಾವಣೆಗೆ ಜಿಲ್ಲೆಯಲ್ಲೇ ಹತ್ತಾರು ವರ್ಷ ರಾಜಕೀಯ ಮಾಡುತ್ತಿರುವ ಅಭ್ಯರ್ಥಿಯನ್ನು ಹುಡುಕುವುದೇ ದೊಡ್ಡ ಕಷ್ಟವಾಗಿ, ಕಡೆಗೆ ಜಿಲ್ಲೆಯ ಮೂಲದ ನೆರೆಯ ಬೆಂಗಳೂರಿನ ಹೊರವಲಯದ ರಾಜಕಾರಣಿ ಲೋಕೇಶ್‌ಗೌಡರನ್ನು ತಂದಿಳಿಸಿ ನಿಟ್ಟುಸಿರು ಬಿಟ್ಟಿದೆ. ಹಂಗAತ ಅವರನ್ನು ಕಡೆಗಣಿಸುವಂತೆಯೂ ಇಲ್ಲ. ಬೂತ್ ಮಟ್ಟದ ರಾಜಕಾರಣಿಯಾಗಿ ಪಳಗಿರುವ ಲೋಕೇಶ್‌ಗೌಡರು ಅವರ ಚುನಾವಣೆ ನಡೆಸಲು ಜಿಲ್ಲೆಯ ಬಿಜೆಪಿಯವರನ್ನು ಹೆಚ್ಚಿನ ಮಟ್ಟಿಗೆ ನೆಚ್ಚಿಕೊಂಡಿಲ್ಲ. ಅವರ ಅಣ್ಣ ತಮ್ಮಂದಿರು ದಾಯಾದಿಗಳು ಇತ್ಯಾದಿ ಸುಮಾರು ನೂರಾರು ಮಂದಿ ಇಡೀ ಜಿಲ್ಲೆಯಲ್ಲಿ ಬಂದಿಳಿದು ಚುನಾವಣೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಇವರಾಗಲೇ ಅವರಿಗೆ ಓಟು ಕೊಡಬಲ್ಲ ಮತದಾರರನ್ನು ಎ, ಬಿ,ಸಿ ಎಂದು ಎ ಎಂದರೆ ಖಾತರಿ ಇರುವ ಓಟುಗಳು, ಬಿ ಎಂದರೆ ಬೇಲಿ ಮೇಲೆ ಕೂತಿರುವ ಓಟುಗಳು ಮತ್ತು ಸಿ ಎಂದರೆ ಯಾವ ಕಾರಣಕ್ಕೂ ಬಿಜೆಪಿಗೆ ಬಾರದೇ ಇರುವ ಓಟುಗಳು ಎಂದು ವಿಂಗಡಿಸಿಕೊAಡು ಅವರನ್ನು ನಿಭಾಯಿಸತೊಡಗಿದ್ದಾರೆ. ಇತರ ಎರಡು ಪಕ್ಷಗಳು ತಲುಪುವ ಮೊದಲೇ ಅವರ ಓಟುದಾರರನ್ನು ತಲುಪಿಯೂ ಬಿಟ್ಟಿದ್ದಾರೆ.


ವೇದಿಕೆ ಭಾಷಣಗಳೆಲ್ಲ ಈ ಚುನಾವಣೆಯಲ್ಲಿ ಲೆಕ್ಕಕ್ಕೆ ಬರುವುದಿಲ್ಲ, ಏನಿದ್ದರೂ ನೇರ ಮತದಾರ ಬಾಂಧವರನ್ನು ತಲುಪುವುದು ಅಥವಾ ಅವರಿಗೆ ತಲುಪಬೇಕಾಗಿರುವುದನ್ನು ತಲುಪಿಸುವುದು ಅಷ್ಟೇ ಮುಖ್ಯ ಎಂದೂ ಎಲ್ಲರೂ ಹೇಳುತ್ತಿದ್ದಾರೆ. ಈ ‘ ಮತ ಬಾಂಧವರೂ’ ಅಷ್ಟೇ, ಅಭ್ಯರ್ಥಿಗಳನ್ನು ನೇರವಾಗಿ ಸಂಪರ್ಕಿಸಿ ಯಾವ ಮಧ್ಯವರ್ತಿಗಳೂ ಬೇಡ ನೇರ ನಮ್ಮನ್ನೇ ತಲುಪಿ ಎಂದು ಸೂಚನೆ ನೀಡತೊಡಗಿದ್ದಾರೆ.


ಕುರುಡು ಕಾಂಚಾಣ, ಝಣ ಝಣ ಕಾಂಚಾಣ ಕುಣಿತದ ಬಗ್ಗೆ ಎಲ್ಲರೂ ಹೇಳುತ್ತಿದ್ದಾರೆ ಮತ್ತು ಬರೆಯುತ್ತಿದ್ದಾರೆ, ಎಂಎಲ್‌ಎ ಚುನಾವಣೆಗಿಂತ ಬಹಳ ಕಷ್ಟ ಈ ವಿಧಾನ ಪರಿಷತ್ ಚುನಾವಣೆ ಅಂತಲೂ ಹೇಳುತ್ತಿದ್ದಾರೆ. ಇಡೀ ಜಿಲ್ಲೆ ಸುತ್ತಬೇಕು, ನಿರ್ದಿಷ್ಟ ಮತದಾರರನ್ನು ತಲುಪಬೇಕು, ಜೊತೆಗೆ ಪೈಪೋಟಿ ಬೇರೆ.


ರಾಜಕೀಯ ಮತ್ತು ಚುನಾವಣೆಯಲ್ಲಿ ಭ್ರಷ್ಟಾಚಾರ ಪ್ರಮುಖ ವಿಚಾರವಲ್ಲ, ಇನ್ನೆರಡು ಪಕ್ಷಗಳಲ್ಲಿ ಸತ್ಯಸಂಧರು ಯಾರಾದರೂ ಇದ್ದರೆ ಮುಂದೆ ಬರಲಿ ಚರ್ಚೆ ಮಾಡೋಣ ಎಂದು ಹೇಳುವ ಮೂಲಕ ಮೊನ್ನೆ ತಾನೇ ದಿಲ್ಲಿಯಲ್ಲಿ ಹಾಲಿ ಪ್ರಧಾನಿಗಳ ಕೈ ಹಿಡಿದು ಬಂದ ಮಾಜಿ ಪ್ರಧಾನಿ ದೇವೇಗೌಡರು ಶನಿವಾರ ಸುದ್ದಿಗೋಷ್ಟಿಯಲ್ಲಿ ಹೇಳುವ ಮೂಲಕ ಅವರ ಅಭ್ಯರ್ಥಿ ಸರ್ಕಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುವಾಗ ಭ್ರಷ್ಟಾಚಾರ ನಡೆಸಿ ಅಕ್ರಮವಾಗಿ ನೂರಾರು ಕೋಟಿ ಸಂಪಾದಿಸಿದ್ದಾರೆ, ಆ ಕಾರಣವಾಗಿ ಹಲವಾರು ಅಪರಾಧ ಪ್ರಕರಣಗಳಲ್ಲಿ ಆಪಾದಿತರಾಗಿದ್ದಾರೆ ಎಂಬ ಸಂಗತಿಗೆ ಸಮ್ಮತಿಯ ಸೀಲ್ ಒತ್ತಿದಂತಾಗಿಬಿಟ್ಟಿತು.


ಹಾಗಾಗಿ ಇದೇ ವಿಚಾರವಾಗಿ ಅಂದರೆ ಸಾಕಷ್ಟು ಹಣ ಖರ್ಚು ಮಾಡಸಲಾಗಲಿಲ್ಲ ಎಂಬ ಮುಖ್ಯ ಕಾರಣಕ್ಕೇ ಕಳೆದ ಚುನಾವಣೆಯಲ್ಲಿ ಸೋಲು ಕಂಡ ಕಾಂಗ್ರೆಸ್‌ನ ರಾಜೇಂದ್ರ ರಾಜಣ್ಣನವರಿಗೆ ಈ ಸಲವೂ ಎದುರಾಳಿಗಳ ಇದೇ ‘ ಸಾಮರ್ಥ್ಯ’ವನ್ನು ಫೇಸ್ ಮಾಡಬೇಕಾಗಿ ಬಂದಿದೆ. ನಿಜವಾದ ಚುನಾವಣೆ ನಡೆಯುವುದೇ ಉಳಿದಿರುವ ಎರಡು ಹಗಲು ಮತ್ತು ಎರಡು ರಾತ್ರಿಗಳಲ್ಲಿ, ಕಾದು ನೋಡಿ ಪ್ಲೀಸ್.