ʼಕರ್ನಾಟಕದ ಅಜಿತ್ ಪವಾರ್ ಯಾರಾಗಬಹುದು ಕುಮಾರಣ್ಣ!?ʼ - ರಾಜಕೀಯ ವಿಶ್ಲೇಷಣೆ - ಕುಚ್ಚಂಗಿ ಪ್ರಸನ್ನ
ʼಆಪರೇಶನ್ ಕಮಲʼ ಸೃಷ್ಟಿಯಾಗಿದ್ದೇ ಬಿಜೆಪಿಯಿಂದ ಅದೂ ಕರ್ನಾಟಕದಲ್ಲಿ. 2019ರಲ್ಲಿ ಈ ಸರ್ಜರಿಗೆ ಬಲಿಯಾಗಿದ್ದೂ ಇದೇ ಕುಮಾರಸ್ವಾಮಿಯವರ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ.
ರಾಜಕೀಯ ವಿಶ್ಲೇಷಣೆ
ಕುಚ್ಚಂಗಿ ಪ್ರಸನ್ನ
“ ಪಕ್ಕದ ಮಹಾರಾಷ್ಟ್ರದಲ್ಲಿ ಒಬ್ಬ ಅಜಿತ್ ಪವಾರ್ ಬಂದಾಯ್ತು, ಈ ಕರ್ನಾಟಕದಲ್ಲಿ ಯಾವಾಗ ಇನ್ನೊಬ್ಬ ಅಜಿತ್ ಪವಾರ್ ಬರ್ತಾನೋ ನೋಡಬೇಕು, ನಿನ್ನೆಯ ಬೆಳವಣಿಗೆಗಳನ್ನ ನೋಡಿದರೆ ಹಂಗನ್ನಿಸ್ತಾ ಇದೆ”
2006ರಲ್ಲಿ ಕರ್ನಾಟಕದ ಅಜಿತ್ ಪವಾರ್ ತಾನೇ ಆಗಿದ್ದೆ ಎನ್ನುವುದನ್ನು ಒಂದು ಕ್ಷಣ ಮರೆತು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನಿನ್ನೆ ಈ ಮಾತನ್ನು ಸುದ್ದಿಗೋಷ್ಟಿಯಲ್ಲಿ ಆಡಿಬಿಟ್ಟರು.
ರಾಜಕೀಯದಲ್ಲಿ ಅದರಲ್ಲೂ ಇಂಡಿಯಾದ ರಾಜಕೀಯದಲ್ಲಿ ಪಕ್ಷಗಳನ್ನು ಬದಲಿಸುವುದು ಹಾಗೂ ಪಕ್ಷಗಳನ್ನು ಒಡೆದು ಅಧಿಕಾರ ಹಿಡಿಯುವುದು ರಾಜಕಾರಣಿಗಳ ಜನ್ಮ ಸಿದ್ಧ ಹಕ್ಕಾಗಿಬಿಟ್ಟಿದೆ. ಆಡಳಿತದಲ್ಲಿರುವ ಸರಕಾರಗಳನ್ನು ಉರುಳಿಸಿ ಹೊಸ ಸರಕಾರಗಳನ್ನು ಅಸ್ತಿತ್ವಕ್ಕೆ ತರಲು ಈ ಕೃತ್ಯ ಅನಿವಾರ್ಯ. ಎಲ್ಲ ಕಾಲಕ್ಕೂ ಇದು ನಡೆಯುತ್ತಲೇ ಬಂದಿದೆ. ಪಕ್ಷ ಒಡೆಯುವ ಹಾಗೂ ಸರಕಾರಗಳನ್ನು ಉರುಳಿಸುವ ವಿಧಾನಗಳನ್ನು ದೇಶಕ್ಕೆ ತೋರಿಸಿಕೊಟ್ಟಿದ್ದೇ ಕಾಂಗ್ರೆಸ್. ಈಗ ಬಿಜೆಪಿಯ ಸುವರ್ಣಯುಗ ನಡೆಯುತ್ತಿದೆ. ಹಾಗಾಗಿ ಜನಾದೇಶ ಅಂದರೆ ಸರಳ ಬಹುಮತ ಬರದೇ ಇದ್ದಾಗಲೂ ಅಧಿಕಾರ ಹಿಡಿಯುವ ತಂತ್ರ(ಕುತಂತ್ರ)ದಲ್ಲಿ ಬಿಜೆಪಿ ಎಕ್ಸ್ಪರ್ಟ್ ಆಗಿದೆ. ʼಆಪರೇಶನ್ ಕಮಲʼ ಸೃಷ್ಟಿಯಾಗಿದ್ದೇ ಬಿಜೆಪಿಯಿಂದ ಅದೂ ಕರ್ನಾಟಕದಲ್ಲಿ. 2019ರಲ್ಲಿ ಈ ಸರ್ಜರಿಗೆ ಬಲಿಯಾಗಿದ್ದೂ ಇದೇ ಕುಮಾರಸ್ವಾಮಿಯವರ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ.
ಕರ್ನಾಟಕದಲ್ಲಿ ಮೇ 10ರಂದು ವಿಧಾನ ಸಭಾ ಚುನಾವಣೆಗೆ ಮತದಾನ, 13ರಂದು ಮತ ಎಣಿಕೆ, 224 ಕ್ಷೇತ್ರಗಳ ಪೈಕಿ 135ರಲ್ಲಿ ಗೆದ್ದು ಭಾರೀ ಬಹುಮತ ಪಡೆದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದದ್ದು ಮೇ 20ರಂದು. “ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರ ಅಲ್ಲ, ಅದು ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಸಮ್ಮಿಶ್ರ ಸರಕಾರ” ಅಂತ ಇದೇ ಕುಮಾರಸ್ವಾಮಿ ಹೇಳಿದ್ದೂ ಆಗಿದೆ. ಇನ್ನೂ ಒಂದೂವರೆ ತಿಂಗಳೂ ಪೂರೈಸದ, ಚುನಾವಣೆಯಲ್ಲಿ ಮತದಾರರಿಗೆ ನೀಡಿದ ಎಲ್ಲ ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತರಲು ಒದ್ದಾಡುತ್ತಿರುವ ಕಾಂಗ್ರೆಸ್ ಸರ್ಕಾರ ಇನ್ನೇನು ನಾಳೆ ಬೆಳಗಿನಜಾವವೇ ಬಿದ್ದು ಹೋಗುತ್ತದೆ ಎಂದು ಈ ಕುಮಾರಸ್ವಾಮಿ ತರದವರು ಹಾಗೂ ಅವರಿಗೆ ಪುಳ್ಳೆ ಇಕ್ಕುವಂತೆ ನಮ್ಮ ಟಿವಿ ಚಾನೆಲ್‌ಗಳ ಆಂಕರ್‌ಗಳು ಎತ್ತರದ ತಾರಕ ಸ್ವರದಲ್ಲಿ ಕೂಗುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್‌ನ ಶಾಸಕರನ್ನು ಮುಂಬೈಗೆ ಏರೋಪ್ಲೇನ್ ಹತ್ತಿಸಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿದ ಯಡಿಯೂರಪ್ಪ ಅಂಡ್ ಸನ್ ಅಸ್ತಿತ್ವಕ್ಕೆ ತಂದ ಅತಂತ್ರ ಸರ್ಕಾರವೇ ಮೂರೂವರೆ ವರ್ಷ ಅಧಿಕಾರ ಪೂರೈಸಿರುವಾಗ, ಇನ್ನು 135 ಸೀಟುಗಳನ್ನು ಗೆದ್ದಿರುವ , ಕೆಲವೇ ತಿಂಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲೂ ಮೋದಿ-ಶಾ ಗ್ಯಾಂಗನ್ನು ಮಣ್ಣುಮುಕ್ಕಿಸಲು ಕಾದಿರುವ, ಸಿಬಿಐ-ಇಡಿ ಕೇಸೇ ನೆಪದಲ್ಲಿ ಜೈಲಿಗೆ ಹಾಕಿ ಬೆಂಡೆತ್ತಿದರೂ ಪಕ್ಷ ನಿಷ್ಟೆ ಬಿಡದ, ಉಪಮುಖ್ಯಮಂತ್ರಿ ಸ್ಥಾನವನ್ನೂ ಬೇಸರವಿಲ್ಲದೆ ನಿರ್ವಹಿಸುತ್ತಿರುವ ಡಿ.ಕೆ.ಶಿವಕುಮಾರ್ ಇನ್ನೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವಾಗ ಕರ್ನಾಟಕದ ಅಜಿತ್ ಪವಾರ್ ಯಾರಾಗುತ್ತಾರೆ ಎಂದು ಕುಮಾರಣ್ಣ ಕೇಳತೊಡಗಿದ್ದಾರೆ ಎಂದರೆ ಅವರಿಗೆ ಅವರ ಬೆನ್ನು ಕಾಣುತ್ತಿಲ್ಲ ಅಂತಾನೇ ಅರ್ಥ.
ಕಳೆದ ವಾರ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ಒಂದಷ್ಟು ಶಾಸಕರನ್ನು ಕರೆದುಕೊಂಡು ಬಿಜೆಪಿ-ಏಕನಾಥಶಿಂಧೆ ಶಿವಸೇನಾ ಸಮ್ಮಿಶ್ರ ಸರ್ಕಾರದೊಳಗೆ ತೂರಿಕೊಂಡು ಉಪಮುಖ್ಯಮಂತ್ರಿಯಾದರು. ಮಹಾರಾಷ್ಟ್ರ ರಾಜ್ಯದ ರಾಜಕೀಯದ ಭೀಷ್ಮಪಿತಾಮಹ ಎಂದು ಕಳೆದ ವರ್ಷ ಕರೆಸಿಕೊಂಡ, ಇಟಲಿ ಮೂಲದ ಸೋನಿಯಾ ಪ್ರಧಾನಿ ಆಗಬಾರದು, ದೇಶೀಯರೇ ಆಗಬೇಕು ಎಂದು ಪಿ.ಎ.ಸಂಗ್ಮಾ ಹಾಗೂ ತಾರೀಕ್ ಅನ್ವರ್ ಜೊತೆ ಬಂಡಾಯವೆದ್ದು ಕಾಂಗ್ರೆಸ್‌ನಿAದ ಉಚ್ಚಾಟನೆಯಾದ ಬಳಿಕ ಶರದ್ ಪವಾರ್ 1999ರಲ್ಲಿ ರಚಿಸಿದ ಪ್ರಾದೇಶಿಕ ರಾಜಕೀಯ ಪಕ್ಷವೇ ಎನ್‌ಸಿಪಿ(ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ).
ಬಿಜೆಪಿ ನಾಯಕರು ಬಾಯಿಮಾತಿಗೆ ಕಾಂಗ್ರೆಸ್ ಮಕ್ತ ಭಾರತ ಮಾಡುತ್ತೇವೆ ಅಂತ ಹೇಳಿಕೊಂಡರೂ ಅವರು ಒಡೆದು ಚೂರು ಚೂರು ಮಾಡುತ್ತಿರುವುದು ಪ್ರಾದೇಶಿಕ ಪಕ್ಷಗಳನ್ನು ಮಾತ್ರವೇ . ಬಿಜೆಪಿಗೆ ನಿಜವಾಗಿಯೂ ಸವಾಲಾಗಿರುವುದು ಈ ಪ್ರಾದೇಶಿಕ ಪಕ್ಷಗಳೇ ಎನ್ನುವುದೇ ವಾಸ್ತವ. ಕಾಂಗ್ರೆಸ್ ಜೀವಂತವಾಗಿರುವುದು ಹಾಗೂ ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಗಳೇ ಮುಂಚೂಣಿಯಲ್ಲಿರಬೇಕು, ಹಾಗೂ ಅವರನ್ನು ಗುರಿಮಾಡಿಕೊಂಡೇ ವಂಶಾಡಳಿತದ ಕತೆ ಹೇಳಿಕೊಂಡು ಚುನಾವಣೆ ಗೆಲ್ಲಬೇಕಿರುವುದು ಬಿಜೆಪಿಗೆ ಅನಿವರ‍್ಯ.
ಮಹಾರಾಷ್ಟ್ರದಲ್ಲಿ 1995ರಲ್ಲಿ ಇದೇ ಬಿಜೆಪಿ-ಶಿವಸೇನಾ ಜೊತೆ ಸೇರಿ ಅಧಿಕಾರ ಹಿಡಿಯಿತು. ದಿಲ್ಲಿಯ ಎನ್‌ಡಿಎ ಸರ್ಕಾರದಲ್ಲಿದ್ದ ಏಕೈಕ ಮಂತ್ರಿಯನ್ನು ವಾಪಸ್ ಕರೆಸಿಕೊಂಡು ಬಿಜೆಪಿ ಸಂಗದಿಂದ ಹೊರಬಂದ ಶಿವಸೇನೆ- ಕಾಂಗ್ರೆಸ್ ಹಾಗೂ ಎನ್‌ಸಿಪಿ ಸೇರಿ 2019ರಲ್ಲಿ ರಚಿಸಿದ ರಾಜಕೀಯ ಮೈತ್ರಿಯೇ ಮಹಾವಿಕಾಸ್ ಆಘಾಢಿ. ಕೇವಲ ಎರಡು ವರ್ಷ ಕಳೆಯುವಷ್ಟರಲ್ಲಿ ಮುಖ್ಯಮಂತ್ರಿ ಉದ್ಧವ ಠಾಕ್ರೆಯನ್ನು ಕೆಳಕ್ಕಿಳಿಸಲು ಅದೇ ಶಿವಸೇನೆಯ ಏಕನಾಥ ಶಿಂಧೆಯನ್ನು ಬಿಜೆಪಿ ಬಳಸಿಕೊಂಡಿತು. ಶಿಂಧೆಗೇ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಟ್ಟಿತು, ಬಿಜೆಪಿಗೆ ಮಹಾರಾಷ್ಟ್ರದಲ್ಲಿ ತನ್ನ ಮುಖ್ಯಮಂತ್ರಿಯನ್ನೇ ಕೂರಿಸಿ ಆಡಳಿತ ಮಾಡುವುದಕ್ಕಿಂತ ಶಿವಸೇನೆಯನ್ನು ಒಡೆದು ಚೂರು ಚೂರು ಮಾಡುವುದು ಮುಖ್ಯವಾಗಿತ್ತು. ಏಕನಾಥ್ ಶಿಂಧೆ ಶಿವಸೇನೆ ಒಡೆದ ಕ್ಷಿಪ್ರ ಕ್ರಾಂತಿ ನಡೆದದ್ದು ಕಳೆದ ವರ್ಷದ ಜೂನ್ ತಿಂಗಳಲ್ಲಿ . ಕರಾರುವಕ್ಕಾಗಿ ಒಂದೇ ವರ್ಷದಲ್ಲಿ ಎನ್‌ಸಿಪಿಯನ್ನೂ ಒಡೆಯುವಲ್ಲಿ ಬಿಜೆಪಿ ಯಶಸ್ಸು ಕಂಡಿದೆ.
ಇವತ್ತಿನ ಮಹಾರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಹಿರಿಯರಾದ 82 ವರ್ಷದ ಶರದ್ ಪವಾರ್‌ಗೆ ಶಾಕ್ ಕೊಡುವ ರೀತಿಯಲ್ಲಿ ಅಜಿತ್ ಪವಾರ್ ಎನ್‌ಸಿಪಿಯನ್ನು ಒಡೆದಿರುವುದಷ್ಟೇ ಅಲ್ಲದೇ ಸಂಖ್ಯಾ ಬಲವನ್ನು ಒಪ್ಪುವ ಕಾನೂನಿನ ಪ್ರಕಾರ ತಮ್ಮದೇ ನೈಜ ಎನ್‌ಸಿಪಿ ಎಂದು ಹಕ್ಕು ಸಾಧಿಸಿದ್ದಾರೆ ಮತ್ತು ಶಿವಸೇನೆಯ ಚುನಾವಣಾ ಚಿಹ್ನೆಯನ್ನೂ ಪಡೆದ ಏಕನಾಥ ಶಿಂಧೆ ರೀತಿಯಲ್ಲೇ ಅಜಿತ್ ಪವಾರ್ ಕೂಡಾ ಎನ್‌ಸಿಪಿ ಚಿಹ್ನೆ ಪಡೆದು ಪಕ್ಷವನ್ನು ತಮ್ಮದನ್ನಾಗಿ ಮಾಡಿಕೊಳ್ಳುತ್ತಾರೆ. ಇಂಥದ್ದಕ್ಕೆಲ್ಲ ಹಸ್ತ ಸಾಮುದ್ರಿಕೆಯವರನ್ನೋ, ಗಿಳಿ ಶಾಸ್ತ್ರದವರನ್ನೋ , ಕಪ್ಪು ಅಥವಾ ಅಂಜನ ಹಾಕುವವರ ಮೊರೆ ಹೋಗುವ ಅಗತ್ಯವಿಲ್ಲ, ಇಂತಾ ಸಣ್ಣ ಪುಟ್ಟ ಹೆಲ್ಪ್ ಮಾಡಲು ದಿಲ್ಲಿಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದೇ ಇದೆ!
ಇವತ್ತು ಕಾಂಗ್ರೆಸ್‌ನಲ್ಲಿ ಹೌಸಿಂಗ್ ಮಿನಿಸ್ಟರ್ ಆಗಿರುವ ನ್ಯಾಶನಲ್ ಬಸ್ ಓನರ್ ಜಮೀರ್ ಅಹಮದ್ ಖಾನ್ 2006ರಲ್ಲಿ ತಾನೇ ಬುರ್ ಅಂತ ಬಸ್ ಡ್ರೈವ್ ಮಾಡಿಕೊಂಡು ರಾತ್ರೋರಾತ್ರಿ ಜೆಡಿಎಸ್ ಶಾಸಕರನ್ನೆಲ್ಲ ಬಿಡದಿಯ ರೆಸಾರ್ಟ್ನ ಬಿಡದಿ ಮನೆಗೆ ಬಿಟ್ಟಾಗಲೂ ಅಷ್ಟೇ ಜೆಡಿಎಸ್ ಒಡೆದೇ ಹೋಯಿತು ಎನ್ನುವಂತಾಗಿತ್ತು. ಕುಮಾರಸ್ವಾಮಿ ಕೇವಲ ಮುಖ್ಯಮಂತ್ರಿಯಾಗುವ ಹಂಬಲದಿಂದ ಧರ್ಮ ಸಿಂಗ್ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಿಬಿಟ್ಟರು. ಆದರೆ ಅವರಿಗೆ ಅಂದಿನಿಂದ ಇಂದಿನವರೆಗೂ ರಾಜ್ಯದಲ್ಲಿ ಜನಾದೇಶ ಅಂದರೆ ಸರಳ ಬಹುಮತಕ್ಕಾಗುವಷ್ಟು ಶಾಸಕರನ್ನು ಗೆಲ್ಲಿಸಿಕೊಳ್ಳಲಾಗದೇ ಇರುವ ಬಿಜೆಪಿಗೆ ಕರ್ನಾಟಕದ ಅಧಿಕಾರವನ್ನು ಚಿನ್ನದ ತಟ್ಟೆಯಲ್ಲಿಟ್ಟು ಕೊಡುತ್ತಿದ್ದೇನೆ ಎಂಬ ಕಿಂಚಿತ್ ಅರಿವೂ ಇರಲಿಲ್ಲ. ಇವರ ಹೊಣೆಗೇಡಿತನ ಅಲ್ಲಿಗೇ ಮುಗಿಯಲಿಲ್ಲ. 20-20 ತಿಂಗಳ ಒಪ್ಪಂದ ಮುರಿಯುವ ಮೂಲಕ ರಾಜ್ಯದ ಮತದಾರರಿಗೆ ಬಿಜೆಪಿ ಅದರಲ್ಲೂ ಯಡಿಯೂರಪ್ಪ ಅವರ ಮೇಲೆ ಅನುಕಂಪ ಮೂಡುವಂತೆ ಮಾಡಿದ್ದೂ ಇದೇ ಕುಮಾರಸ್ವಾಮಿ. ಒಂದು ವೇಳೆ ತಮ್ಮ 20 ತಿಂಗಳ ಆಡಳಿತ ಮುಗಿಸಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಲು ಅವಕಾಶ ಕೊಟ್ಟಿದ್ದರೆ,ನಂತರದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 110 ಸೀಟುಗಳನ್ನು ಗೆಲ್ಲಲು ಯಾವ ಕಾರಣಕ್ಕೂ ಅವಕಾಶವಾಗುತ್ತಿರಲಿಲ್ಲ ಎಂಬ ಸರಳ ಸಂಗತಿಯ ಅರಿವು ಕುಮಾರಸ್ವಾಮಿಯವರಿಗೆ ಇರಲಿಲ್ಲವೇ ಎಂಬ ಪ್ರಶ್ನೆಗೆ ಅವರೇ ಉತ್ತರ ಕೊಟ್ಟುಕೊಳ್ಳಬೇಕಿದೆ.
2005ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವೇ ಅವಧಿ ಪೂರೈಸಿದ್ದರೆ, ಆ ಸರ್ಕಾರದಲ್ಲಿ ಜೆಡಿಎಸ್‌ನಿಂದ ಉಪ ಮುಖ್ಯಮಂತ್ರಿಯಾಗಿದ್ದ, ಹಣಕಾಸು ಖಾತೆಯಲ್ಲಿ ದಕ್ಷತೆ ತೋರಿದ್ದ ಸಿದ್ದರಾಮಯ್ಯನವರೇ ಜೆಡಿಎಸ್ ಸರದಿ ಬಂದಾಗ ಮುಖ್ಯಮಂತ್ರಿಯಾಗಿಬಿಟ್ಟರೆ ಎಂಬ ಆತಂಕವೇ ಕುಮಾರಸ್ವಾಮಿಯವರ ಈ ಕ್ಷಿಪ್ರಕ್ರಾಂತಿಗೆ ಕಾರಣ ಎನ್ನುವ ಮಾತನ್ನು ಅವರು ಇವತ್ತಿಗೂ ಒಪ್ಪುವುದಿಲ್ಲ ಬಿಡಿ. ಕೆಲವೊಮ್ಮೆ ಇಂಥ ಆಕಸ್ಮಿಕಗಳೇ ಕೆಲವೊಮ್ಮೆ ಕೆಳಗೆ ಬಿದ್ದವರಿಗೆ ವರದಂತೆ ಬಂದು ಬಿಡುತ್ತವೆ. ಕುಮಾರಸ್ವಾಮಿ ಹೀಗೆ ಸಮ್ಮಿಶ್ರ ಸರ್ಕಾರವನ್ನು ಕೆಡವದೇ ಹೋಗಿದ್ದರೆ ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರುತ್ತಿರಲಿಲ್ಲ ಹಾಗೂ ಇವತ್ತು ಎರಡನೇ ಭಾರಿಗೂ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಯಾಗುತ್ತಿರಲಿಲ್ಲ.
ಕಳೆದ ವಾರ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಪಕ್ಷದ ಬಹುಪಾಲು ಶಾಸಕರನ್ನು ಕರೆದುಕೊಂಡು ಬಿಜೆಪಿ-ಏಕನಾಥ ಶಿಂಧೆ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾದ ಕಾರ್ಯಾಚರಣೆಗೆ ಖುದ್ದು ಅವರ ಚಿಕ್ಕಪ್ಪ ಶರದ್ ಪವಾರ್ ಅವರ ಪರೋಕ್ಷ ಬೆಂಬಲ ಹಾಗೂ ಆಶೀರ್ವಾದವಿದೆ ಎಂಬ ಸುದ್ದಿ ಹಬ್ಬಿದೆ. ದೇವೇಗೌಡರ ಕುರಿತು ಇಂಥಾ ಸುದ್ದಿ 2006ರಲ್ಲಿ ಕುಮಾರಸ್ವಾಮಿ ಜೆಡಿಎಸ್ ಶಾಸಕರನ್ನು ಕರೆದುಕೊಂಡು ಹೋಗಿ ಬಿಜೆಪಿ ಜೊತೆ ಸರ್ಕಾರ ಮಾಡಿದಾಗಲೂ ಹಬ್ಬಿತ್ತು. ಆದರೆ ಆಗ ದೇವೇಗೌಡರು ತಮ್ಮ ವಿವೇಚನಾ ಶಕ್ತಿ ಬಳಸಿ ಜೆಡಿಎಸ್ ಅನ್ನು ಒಡೆದು ಹೋಗಲು ಬಿಡಲಿಲ್ಲ, ಬದಲಿಗೆ ಮುಂದೊಮ್ಮೆ ತಮ್ಮ ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ರಾಜ್ಯವಾಳಲು ಅಡ್ಡಿಯಾಗಬಹುದಾಗಿದ್ದ ಸಿದ್ದರಾಮಯ್ಯ ಮತ್ತು ಆ ಹಂತದ ನಾಯಕರನ್ನು ನಿವಾರಿಸಿಕೊಂಡು ಬಿಟ್ಟರು. ಇದನ್ನು ಧೃತರಾಷ್ಟ್ರ ಪ್ರೇಮ ಎಂದರೆ ಅವರ ಕಣ್ಣು ಕೆಂಪಾಗುತ್ತದೆ ಏನು ಮಾಡುವುದು.
ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲಿವೆ, ಸೀಟು ಹಂಚಿಕೆ ಮಾಡಿಕೊಳ್ಳಲಿವೆ, ಆ ಲೆಕ್ಕಾಚಾರದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ 2024ರ ಮಹಾಚುನಾವಣೆಗೆ ಮತ್ತೆ ಮಾಜಿ ಪ್ರಧಾನಮಂತ್ರಿ ದೇವೇಗೌಡರೇ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂದು ಮೊನ್ನೆ ತಾನೇ ಲೋಕಲ್ ಕೇಬಲ್ ವಾಹಿನಿಯೊಂದು ಸ್ಟೋರಿ ಪ್ರಸಾರ ಮಾಡಿದೆ. ಇದು ನಿಜವೇ ಆದಲ್ಲಿ ತುಮಕೂರು ಲೋಕ ಸಭಾ ಕ್ಷೇತ್ರವನ್ನು ಕಾಂಗ್ರೆಸ್ ಸಲೀಸಾಗಿ ಗೆದ್ದುಕೊಳ್ಳುವ ಎಲ್ಲ ಅವಕಾಶಗಳೂ ಮುಕ್ತವಾಗಿವೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದೂ ಮುಖ್ಯವಾಗುತ್ತದೆ.
2019ರ ಚುನಾವಣೆಯಲ್ಲಿ ಇದೇ ದೇವೇಗೌಡರ ಸ್ಪರ್ಧೆಯ ಕಾರಣದಿಂದಲೇ ಟಿಕೆಟ್ ಕಳೆದುಕೊಂಡ ಅಂದಿನ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಈಗ ಬಿಜೆಪಿಯಲ್ಲಿದ್ದಾರೆ ಮತ್ತು ತುಮಕೂರು ಲೋಕ ಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂಬ ಹಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರನ್ನು ಬಿಜೆಪಿಗೆ ಕರೆದುಕೊಂಡಿರುವುದೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸಲು ಎನ್ನುವ ಬಲವಾದ ಸುದ್ದಿಯೂ ಇದೆ. ಆದರೆ ಮುದ್ದಹನುಮೇಗೌಡರು ತುಮಕೂರೇ ಬೇಕೆಂದು ಪಟ್ಟು ಹಿಡಿಯುವ ಹೊತ್ತಿಗೇನಾದರೂ ಬಿಜೆಪಿ-ಜೆಡಿಎಸ್ ಚುನಾವಣಾ ಮೈತ್ರಿ ಭವಿಷ್ಯ ನಿಜವೇ ಆಗಿಬಿಟ್ಟು, ಒಂದು ವೇಳೆ ದೇವೇಗೌಡರೇ ಏನಾದರೂ ಬಂದುಬಿಟ್ಟರೇನು ಮಾಡುವುದು. ಇನ್ನೇನು ಮಾಡುವುದು, ಮುದ್ದಹನುಮೇಗೌಡರು ಸೀದಾ ವಾಪಸ್ ಕಾಂಗ್ರೆಸ್ ಗೆ ಬಂದು ಬಿಡಲಿ ಎನ್ನುವವರೂ ಕಾಂಗ್ರೆಸ್‌ನಲ್ಲಿದ್ದಾರೆ.ಇಂತಾ ಊಹಾ ಪೋಹಗಳೇ ರೆಕ್ಕೆ ಪಡೆದುಕೊಂಡು ನಿಜದ ಹಕ್ಕಿಯಾಗಿ ಹಾರಿದರೆ ಯಾರೇನು ಮಾಡಲಾಗುವುದಿಲ್ಲ. ವಾಪಸ್ ಮುಖ್ಯ ವಿಷಯಕ್ಕೆ ಬರೋಣ,
ಬಿಜೆಪಿಯ ನಡೆಗಳನ್ನು ಗಮನಿಸಿದಲ್ಲಿ, ತಕ್ಷಣದಲ್ಲಿ ನಿಜಕ್ಕೂ ಕರ್ನಾಟಕದಲ್ಲಿ ಪಕ್ಷವನ್ನು ಕಳೆದುಕೊಳ್ಳುವ ಬೆದರಿಕೆ ಇರುವುದು ಜೆಡಿಎಸ್ ಪಕ್ಷಕ್ಕೆ. ಈ ಮಾತನ್ನು ತೀರಾ ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಮೊನ್ನಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ಹೊರಟಿದ್ದು ಹಾಗೂ ತುಸು ಯಶಸ್ಸು ಪಡೆದುಕೊಂಡಿದ್ದು ಬಿಜೆಪಿ ಜೆಡಿಎಸ್ ಪ್ರಾಬಲ್ಯವಿರುವ ಹಳೇ ಮೈಸೂರು ಜಿಲ್ಲೆಗಳಲ್ಲೇ ಎಂಬುದನ್ನೂ ಗಮನಿಸಬೇಕಿದೆ. ಜೆಡಿಎಸ್ ಗಳಿಸುವ ಓಟುಗಳನ್ನು ತನ್ನತ್ತ ಮಾಡಿಕೊಂಡರೆ ಆಮೇಲೆ ಕಾಂಗ್ರೆಸ್ ತಂಟೆಗೆ ಹೋದರಾಯಿತು ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿರುತ್ತದೆ. ಹಾಗಾಗಿ ಸದ್ಯಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅಜಿತ್ ಪವಾರ್ ಯಾರಾಗಬಹುದು ಎಂದು ಕೇಳುತ್ತ ಆನಂದಪಡುವ ಮೊದಲು ರಾಮನಗರ-ಚನ್ನಪಟ್ಟಣಗಳಲ್ಲಿ ನೆಲೆಯಾಗಿರುವ ಕುಮಾರಸ್ವಾಮಿ ಮತ್ತು ಅವರ ಹುಟ್ಟೂರು ಹಾನಸ ಜಿಲ್ಲೆಯಲ್ಲಿ ನೆಲೆ ಕಂಡುಕೊAಡಿರುವ ಅವರ ಸೋದರ ರೇವಣ್ಣನವರ ಕುಟುಂಬದೊಳಗಿನ ತೀವ್ರ ಭಿನ್ನಮತ, ಸಾಮರಸ್ಯದ ಕೊರತೆಗಳೇ ಬಿಜೆಪಿಗೆ ಮತ್ತೊಬ್ಬ ಅಜಿತ್ ಪವಾರ್‌ರನ್ನು ಸೃಷ್ಟಿಸಲು ಬಂಡವಾಳವಾದರೆ ಅಚ್ಚರಿ ಪಡುವಂತಿಲ್ಲ.