ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ ಸಾವಿನ ಭಯವು ಸೃಷ್ಟಿಸುವ ಆತಂಕದಲ್ಲಿ .., 

ondu-galige-kuchangi-prasanna, ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ ಸಾವಿನ ಭಯವು ಸೃಷ್ಟಿಸುವ ಆತಂಕದಲ್ಲಿ ..,

ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ   ಸಾವಿನ ಭಯವು ಸೃಷ್ಟಿಸುವ ಆತಂಕದಲ್ಲಿ .., 

ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ


ಸಾವಿನ ಭಯವು ಸೃಷ್ಟಿಸುವ ಆತಂಕದಲ್ಲಿ .., 


ನನ್ನ ತಮ್ಮ ಎರಡೂವರೆಯೋ ಮೂರೋ ವರ್ಷದವನಾಗಿದ್ದಾಗ ನಡೆದ ಘಟನೆ, ನಾನು ಅವನಿಗಿಂತ ಮೂರು ವರ್ಷ ದೊಡ್ಡವನು, ನಾವಾಗ ಊರಿನಲ್ಲಿ ವಾಸವಿದ್ದೆವು. ಪಕ್ಕದ ಮನೆಯವರ ಅಡಿಗೆ ಮನೆ ಅವರ ಮನೆಯ ಹಿತ್ತಲ ಅಂಗಳದಲ್ಲಿತ್ತು, ಉರಿಯುತ್ತಿದ್ದ ಒಲೆಯ ಮೇಲೆ ಇರಿಸಿದ್ದ ದೊಡ್ಡ ಮಡಕೆಯಲ್ಲಿ ಸಪ್ಪೆಸರು ಕಿವುಚಲೆಂದು ಹಸಿ ಅಲಸಂದೆ ಕಾಳನ್ನು ಬೇಯಲು ಇರಿಸಿದ್ದರು. ಒಲೆಯ ಮಗ್ಗುಲಿಗೆ ಹೋಗಿ ನಿಂತ ಆ ಪುಟ್ಟ ಹುಡುಗ ಮರಳುತ್ತಿದ್ದ ನೀರಿನಲ್ಲಿ ಎದ್ದೆದ್ದು ಕುಣಿಯುತ್ತಿದ್ದ ಅಲಸಂದೆ ಕಾಳುಗಳನ್ನು ಕಂಡ, ಕಾಳಿನ ಕಾಲದಲ್ಲಿ ಎಲ್ಲರ ಮನೆಗಳಲ್ಲೂ ಸಪ್ಪೆಸರು, ಬಸ್ಸಾರುಗಳೇ ತಾನೇ, ಬಾಯಿಗಿರಿಸಿದರೆ ಬೆಣ್ಣೆಯ ತುಣುಕುಗಳಂತೆ ಕರಗುವ ಅಲಸಂದೆ ಕಾಳನ್ನು ಈ ಮೊದಲು ತಿಂದಿದ್ದ ನೆನಪಿನಲ್ಲಿ ಆತ ಅತ್ತಿತ್ತ ನೋಡಿ, ಯಾರೂ ಇವನತ್ತ ಗಮನ ಹರಿಸಿರಲಿಲ್ಲ ಅಂತ ಕಾಣುತ್ತದೆ. ಕಾಳು ಕಾಳು ಎನ್ನುತ್ತ ಸೀದಾ ಎರಡೂ ಕೈಗಳನ್ನು ಕುದಿಯುವ ಮಡಕೆಯೊಳಗೇ ಇಟ್ಟುಬಿಟ್ಟಿದ್ದಾನೆ!


ಮುಂದೆ ಏನೆಲ್ಲ ಆಗಿರುತ್ತದೆ ಎಂಬುದನ್ನು ನೀವು ಊಹಿಸಿಕೊಳ್ಳಬಲ್ಲಿರಿ, ನೀರು ತುಂಬಿದ ಬಲೂನಿನಂತೆ ಊದಿಕೊಂಡ ಎರಡು ಕೈಗಳನ್ನು ವಾಸಿ ಮಾಡಲು ತಿಂಗಳುಗಟ್ಟಲೆ ಹಿಡಿಯಿತಂತೆ, ಕರ‍್ರೋ ಅಂತ ಒಂದೇ ಸಮನೆ ಅಳುತ್ತಿದ್ದ ಕಂದನನ್ನು ಮಾವ ದೊಡ್ಡಯ್ಯ (ನಮ್ಮ ಅಪ್ಪನ ಅಕ್ಕನ ಗಂಡ) ಊರ ಮುಂದಿನ ಅರಳಿ ಮರಕ್ಕೆ ಜೋಲಿಕಟ್ಟಿ ರಾತ್ರಿಯಿಡೀ ತೂಗುತ್ತ ಮಲಗಿಸುವ ಪ್ರಯತ್ನ ಮಾಡುತ್ತಿತ್ತಂತೆ. ಆ ಕ್ಷಣದ ನೋವು ಆತನಿಗೆ ಈಗ ನೆನಪಿರುವುದಿಲ್ಲ, ಘಟನೆಯೂ ಸಹ, ಆದರೆ, ಆ ಕ್ಷಣದಲ್ಲಿ ಕೊತ ಕೊತ ಕುದಿಯುತ್ತಿದ್ದ ಎಸರಿನೊಳಕ್ಕೆ ಕೈಯಿಟ್ಟರೆ ಏನಾಗುತ್ತದೆ ಎಂಬ ಅರಿವಿಲ್ಲದ ಆ ವಯಸ್ಸಿಗೆ ಭಯ ಎನ್ನುವ ಅರಿವೇ ಇರುವುದಿಲ್ಲ.


ಹೌದು ತಿಳುವಳಿಕೆ ಬರುತ್ತ ಬರುತ್ತ ಭಯವೆನ್ನುವುದು ಮನುಷ್ಯನನ್ನು ಆವರಿಸಿಕೊಳ್ಳುತ್ತ ಹೋಗುತ್ತದೆ. ನಮ್ಮ ಬಹುಪಾಲು ಸಮಸ್ಯೆಗಳ ಮೂಲ ಕಾರಣ ಭಯವೇ ಆಗಿರುತ್ತದೆ ಎಂದರೆ ಹೌದಾ ಅಂತ ಅಚ್ಚರಿಪಡಬೇಡಿ. ಭಯ ಎನ್ನುವುದು ನಮ್ಮನ್ನು ಒಂದರಗಳಿಗೆಯೂ ಸಂತಸಪಡದಂತೆ ಮಾಡಿಬಿಡುತ್ತದೆ. ಈ ಭಯವೆನ್ನುವುದು. ಜೀವನದ ಮಹತ್ವದ ನಿರ್ಧಾರಗಳನ್ನು ದಿಟ್ಟತನದಿಂದ ಕೈಗೊಳ್ಳದಂತೆ ಮಾಡಿಬಿಡುತ್ತದೆ. ಅಯ್ಯೋ ಇಂಥ ತೀರ್ಮಾನ ತೆಗೆದುಕೊಂಡರೆ ಮುಂದಿನ ಜೀವನ ಏನಾಗಿಬಿಡುತ್ತದೆ ಎಂಬ ಆತಂಕವನ್ನು ಈ ಭಯ ನಮ್ಮೊಳಗೆ ಸೃಷ್ಟಿಸಿಬಿಡುತ್ತದೆ.


ಹೀಗೆ ಕೈಗೊಳ್ಳಬೇಕಿರುವ ಪ್ರತಿಯೊಂದು ಮಹತ್ವದ ಅಥವಾ ದೊಡ್ಡ ನಿರ್ಧಾರವು ಮುಂದೊಮ್ಮೆ ಯಾವುದೋ ಅನಿರ್ದಿಷ್ಟ ಗಳಿಗೆಯಲ್ಲಿ ನಮ್ಮೊಳಗೆ ತೀವ್ರ ವಿಷಾದವನ್ನು ಉಂಟು ಮಾಡಿದರೆ ಹೇಗಪ್ಪಾ ಎನ್ನುವ ಆತಂಕವನ್ನು ಈ ಭಯ ಮೂಡಿಸಿಬಿಡುತ್ತದೆ. ಇಂಥಾ ಭಯವು ನಮ್ಮನ್ನು ಯಾವುದೇ ನಿರ್ಧಾರವನ್ನು ಕೈಗೊಳ್ಳದಂತೆ ಮಾಡುವ ಜೊತೆಗೆ ನಮ್ಮನ್ನು ಸುರಕ್ಷಿತವಾಗಿರಿಸುತ್ತದೆ ಎಂಬ ವಿಶ್ವಾಸವನ್ನೂ ನಮ್ಮೊಳಗೆ ಮೂಡುವಂತೆ ಮಾಡುತ್ತದೆ. ಒಂದು ವೇಳೆ ಭಯವು ಸೃಷ್ಟಿಸಿದ ಆತಂಕವನ್ನು ಬದಿಗಿಟ್ಟು ಗಟ್ಟಿ ನಿರ್ಧಾರವನ್ನು ಕೈಗೊಳ್ಳುವ ಹಂತಕ್ಕೆ ಬಂದಾಗ ಅಂಥ ನಿರ್ಧಾರದಿಂದಾಗಿ ಭವಿಷ್ಯವು ಮಸುಕಾಗಿಬಿಡುವ ಕಲ್ಪನೆಯಲ್ಲೇ ತೀವ್ರ ವಿಷಾದದಿಂದ ದುಗುಡಗೊಳ್ಳತೊಡಗುತ್ತೇವೆ. ಇಂಥ ಸನ್ನಿವೇಶವು ಸಂಬಂಧಗಳಿಗೆ ಸಂಬಂಧಿಸಿದಂತೆ ನಮ್ಮನ್ನು ಮತ್ತಷ್ಟು ತೀವ್ರ ವ್ಯಾಕುಲಗೊಳಿಸಿಬಿಡುತ್ತದೆ.


ಭಯದ ಅರಿವು ಮೂಡುವ ಮುನ್ನ ಎಳವೆಯಲ್ಲಿ ನಿರಾತಂಕವಾಗಿ ಮುಂದಡಿ ಇಡುವ ನಾವು ಬೆಳೆದು ದೊಡ್ಡವರಾದಂತೆಲ್ಲ ಸಣ್ಣ ಪುಟ್ಟ ನಿರ್ಧಾರಗಳನ್ನು ಪ್ರಕಟಿಸುವಲ್ಲೂ ತೀರಾ ಆಮೆಯ ತರ ಆಗಿಬಿಡುತ್ತೇವೆ. ಆಮೆ ಎಂದರೆ ಎರಡು ತರ ಒಂದು, ಚಿಪ್ಪೊಳಗೆ ತನ್ನನ್ನು ತಾನು ಹುದುಗಿಸಿಕೊಂಡು ಸುರಕ್ಷಿತ ಎನ್ನುವ ಭಾವವನ್ನು ಅನುಭವಿಸುವುದು ಮತ್ತು ನಿಧಾನಗತಿಯನ್ನು ಅನುಸರಿಸುವುದು. ಇಂಡಿಯಾದಂಥ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಹುಟ್ಟಿನ ಕಾರಣದಿಂದಾಗಿಯೇ ತಾರತಮ್ಯದಿಂದ ಕೂಡಿರುವ ಸಮಾಜದಲ್ಲಿ ವ್ಯಕ್ತಿಯೊಬ್ಬ ತನ್ನ ಜೀವನದ ಯಾವ ಹಂತದಲ್ಲೂ ಸ್ವಯಂ ನಿರ್ಧಾರವನ್ನು ಕೈಗೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲವೇ ಇಲ್ಲ ಎಂದು ಕೊಳ್ಳುವುದು ಸಹಜ.


ವಯಸ್ಸು ಕಳೆದಂತೆ ಸಾವಿನ ಕುರಿತ ಚಿಂತನೆಗಳು ಆರಂಭಗೊಳ್ಳುತ್ತವೆ, ಇತ್ತೀಚಿನ ಕೊರೊನಾ ವೈರಸ್ ಸೋಂಕಿನ ಪಿಡುಗು ಹಾಗೂ ಅದರಿಂದ ಉಂಟಾದ ಅಸಂಖ್ಯ ಸಾವು ನೋವುಗಳು ನಮ್ಮನ್ನು ಆತಂಕದ ತಂತಿ ನಡಿಗೆಯಲ್ಲಿ ತೊಡಗಿಸಿಬಿಟ್ಟಿದೆ. ನಿಜ, ನಾವೆಲ್ಲರೂ ಒಂದಲ್ಲಾ ಒಂದು ದಿನ ಸಾಯುತ್ತೇವೆ. ಇದು ಶಾಶ್ವತ ಸತ್ಯ, ನಾವು ಎಂದರೆ ನಮ್ಮ ದೇಹ ನಶಿಸುತ್ತದೆ, ಆದರೆ ನಮ್ಮ ಜೀವಪರ ಕ್ರಿಯೆಗಳು ಮತ್ತು ಚಿಂತನೆಗಳು ಜೀವಂತವಾಗಿ ಉಳಿಯುತ್ತವೆ. ಆದರೆ ಭಯವು ಸೃಷ್ಟಿಸುವ ಆತಂಕದಲ್ಲಿ ಪ್ರತಿ ಗಳಿಗೆಯೂ ಸಾಯುವುದಿದೆಯಲ್ಲ. ಅದು ನಮ್ಮನ್ನು ಬೇಗ ಸಾವಿನ ಹತ್ತಿರಕ್ಕೆ ಸೆಳೆದುಬಿಡುತ್ತದೆ. ಸಾವಿನ ಕುರಿತ ಏಕೈಯ ಭಯವು ನಮ್ಮ ಜೀವಗಳನ್ನು ವಿಲಿವಿಲಿ ಒದ್ದಾಡಿಸತೊಡಗಿದೆ. ಹಾಗಾಗಿ ಈ ಸಾವೆಂಬ ಮುಖ್ಯವಾದ ಹಾಗೂ ಅನಿವರ‍್ಯ ಘಟನೆಯ ಕುರಿತ ಆಳವಾದ ತಿಳುವಳಿಕೆ ಪಡೆಯುವ ಕಾಲ ಬಂದಿದೆಯಲ್ಲವೇ ಎನ್ನುತ್ತಾರೆ ಓಶೋ.


 ಸಾವು ಸದಾ ನಮ್ಮ ಸನಿಹದಲ್ಲೇ ಇರುತ್ತದೆ, ಬಹುಪಾಲು ನಮ್ಮ ನೆರಳಿನಂತೆ, ಆ ಕುರಿತು ನಮ್ಮ ಗಮನವಿರಲಿ ಬಿಡಲಿ ಹುಟ್ಟಿದ ಗಳಿಗೆಯಿಂದ ಕಡೇ ಕ್ಷಣದವರೆಗಿನ ನಮ್ಮ ಸಂಗಾತಿ ಎಂದರೆ ಸಾವು ಮಾತ್ರವೇ. ಜೀವವು ಸಾವಿಲ್ಲದೇ ಇಲ್ಲ ಹಾಗೂ ಜೀವವಿಲ್ಲದೇ ಸಾವಿಗೂ ಅಸ್ತಿತ್ವವಿಲ್ಲ. ಆದರೆ ನಮ್ಮ ಮನಸಿಗೋ ಸದಾ ಜೀವದಿಂದಿರಬೇಕೆAಬ ಹುಚ್ಚು ಬಯಕೆ. ಆದರೂ ಸಾವು ಎಲ್ಲ ಸಂದರ್ಭಗಳಲ್ಲೂ ತಾನು ಬರುವ ಮುನ್ಸೂಚನೆ ನೀಡುವುದಿಲ್ಲ, ಆಚಾನಕ್ಕಾಗಿ ಎಲ್ಲೆಂದರೆ ಅಲ್ಲಿ, ಹೇಗೆಂದರೆ ಹಾಗೆ ಬಂದು ಅವತರಿಸಿಬಿಡುತ್ತದೆ. ದುಃಖದ ಸಂಗತಿಯೆಂದರೆ ಸಾವೆಂಬ ಸತ್ಯದ ಹೊರತಾಗಿಯೂ ಜೀವನವನ್ನು ಅದು ಇರುವಂತೆಯೇ ಜೀವಿಸಲು ನಿರಾಕರಿಸುತ್ತೇವೆ. ಹಾಗೆ ನಿರಾಳವಾಗಿ ಜೀವಿಸಲು ನಿರಾಕರಿಸುತ್ತ ಮುಂದೂಡುತ್ತಲೇ ಹೋಗುತ್ತೇವೆ.


ಜೀವನವನ್ನು ಒಂದು ಅವಕಾಶ ಎಂದು ಪರಿಗಣಿಸುವುದೇ ಆದಲ್ಲಿ ಸಾವು ಅದರ ಅಂತ್ಯವಾಗಿರುತ್ತದೆ ಅಷ್ಟೇ. ನಾವು ಒಮ್ಮೆ ಸಾವನ್ನು ಆರ್ಥ ಮಾಡಿಕೊಂಡುಬಿಟ್ಟಲ್ಲಿ ಜೀವನ ನಮಗೆ ಅತ್ಯಂತ ತೀವ್ರ ಮತ್ತು ಸಂಪೂರ್ಣವಾಗಿ ಪರಿಣಮಿಸುತ್ತದೆ ಎನ್ನುತ್ತಾರೆ ಓಶೋ. 


ಸಾವಿರದ ಮನೆಯ ಸಾಸಿವೆಯ ತಾ ಎಂದು ಹೇಳುವ ಮೂಲಕ ಮಗನನ್ನು ಕಳೆದುಕೊಂಡ ಕಿಸಾಗೋತಮಿಗೆ ಸಾವಿನ ಅರಿವನ್ನು ನೀಡಿದ ಗೌತಮ ಬುದ್ಧ ಗುರುವಿನಿಂದ ಹಿಡಿದು ಆ ಹಾದಿಯಲ್ಲಿ ಸಾಗಿ ಬಂದ ಎಲ್ಲ ಗುರುಗಳೂ ಸಾವಿನ ಆತಂಕದಲ್ಲೇ ಕಣ್ಣೆದುರಿನ ಜೀವನವನ್ನು ಕಳೆದುಕೊಳ್ಳಬೇಡಿ ಎಂದು ಹೇಳುತ್ತಾರೆ. ಚಿಯರ್ ಅಪ್.