140,49,76,711ರಲ್ಲಿ ಈ ಇಬ್ಬರ ಜೀವ ಯಾವ ಲೆಕ್ಕ ಅಂತೀರಾ….

140,49,76,711ರಲ್ಲಿ ಈ ಇಬ್ಬರ ಜೀವ ಯಾವ ಲೆಕ್ಕ ಅಂತೀರಾ….

140,49,76,711ರಲ್ಲಿ ಈ ಇಬ್ಬರ ಜೀವ ಯಾವ ಲೆಕ್ಕ ಅಂತೀರಾ….

 

140,49,76,711ರಲ್ಲಿ ಈ ಇಬ್ಬರ ಜೀವ ಯಾವ ಲೆಕ್ಕ ಅಂತೀರಾ….,

ಮೇ,7, ಶನಿವಾರ, 2022ರಂದು ಇಡೀ ಇಂಡಿಯಾದ ಒಟ್ಟು ಜನಸಂಖ್ಯೆ 140 ಕೋಟಿ, 49 ಲಕ್ಷ, 76 ಸಾವಿರದ 711 ಅಂತ ವೆಬ್‍ಸೈಟ್ ಹೇಳುತ್ತಿದೆ. ಇಷ್ಟು ಬೃಹತ್ ಜನಸಂಖ್ಯೆಯಿರುವ ಈ ದೇಶದಲ್ಲಿ ಕೇವಲ ಇಬ್ಬರು, ಅದರಲ್ಲೂ ದಲಿತ ಹುಡುಗರ ಜೀವ ಯಾವ ಲೆಕ್ಕ. ಕೃತ್ಯ ನಡೆದು 16 ದಿನಗಳಾದ ಮೇಲೂ ಘಟನೆ ಯಾರು, ಹೇಗೆ, ಯಾಕೆ ಕೊಂದರು ಎಂಬುದನ್ನು ನಿಖರವಾಗಿ ತಿಳಿಸಲು ಆಗುತ್ತಿಲ್ಲ ಎಂಬ ಕುರಿತು ನನಗೆ ವಿಷಾದವಿದೆ.

ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಕಡಬಾ ಹೋಬಳಿಯಲ್ಲಿ ಮಾಯಸಂದ್ರ ಶಿರಾ ಹೆದ್ದಾರಿಯಲ್ಲಿ ಕಡಬಾ-ಕಲ್ಲೂರು ಕ್ರಾಸ್ ನಡುವೆ ಇರುವ ಪೆದ್ದನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಏಪ್ರಿಲ್ 21ರ ಗುರುವಾರ ರಾತ್ರಿ ಕೊಲ್ಲಾಪುರದಮ್ಮನ ಉತ್ಸವ ಇತ್ತು. ಉತ್ಸವದ ತಮಟೆ, ಅರೆಯ ಸದ್ದಿನಲ್ಲಿ ಸಿಡಿಮದ್ದಿನ ಸಿಡಿಲ ಆರ್ಭಟದಲ್ಲಿ ಈ ಇಬ್ಬರು ಯುವಕರ ಪ್ರಾಣಪಕ್ಷಿಗಳು ಪಟಪಟ ರೆಕ್ಕೆ ಬಡಿದು ಪತರುಗಟ್ಟಿ ಹಾರಿದ ಸದ್ದು ಯಾರಿಗೆ ತಾನೇ ಕೇಳೀತು.

ಬೆಳಕು ಹರಿಯುವ ಹೊತ್ತಿಗೆ  ಹೆದ್ದಾರಿಗೆ ಆತುಕೊಂಡಂತೇ ಇರುವ ನೀರಿನ ಕಟ್ಟೆಯಲ್ಲಿ ಪೆದ್ದನಹಳ್ಳಿ ಮೂಡಲಗಿರಯ್ಯ, ಗೌರಮ್ಮರ ಮಗ 37 ವರ್ಷದ ಪಿ.ಎಂ.ಗಿರೀಶನ ಹೆಣ ಮಕಾಡೆ ಮಲಗಿತ್ತು. ಅಲ್ಲಿಂದ ಅನತಿ ಹೆಜ್ಜೆ ದಾಟುಗಳಲ್ಲಿ ಬದುವಿನ ಮೇಲೆ ಅವನ ಗೆಳೆಯ ಮಂಚಲದೊರೆಯ ಗಿರೀಶ ಎಂಬುವವನ ಶವವೂ ಇತ್ತು. ಇಬ್ಬರ ಮೈಮೇಲೆಲ್ಲ ಗಾಯದ, ರಕ್ತ ಸುರಿದು ಹೆಪ್ಪುಗಟ್ಟಿದ ಗುರುತುಗಳಿದ್ದವು. ಅವರಿಬ್ಬರನ್ನೂ ಕೊಂದು ಹಾಕಿದ್ದಾರೆ ಎಂಬುದನ್ನು ಇವೆಲ್ಲ ಖಚಿತಪಡಿಸಿದ್ದವು.

ಮೀಡಿಯಾ ವಾಟ್ಸಪ್ ಗ್ರೂಪ್‍ಗಳಲ್ಲಿ ಫೋಟೋ ವಿಡಿಯೋಗಳು ಹರಿದಾಡತೊಡಗಿದವು. ಅಷ್ಟೊತ್ತಿಗೆ ಪೊಲೀಸರೂ ಅವರ ಮೂಸು ನಾಯಿಗಳೂ ತಲುಪಿದ್ದವು. ಅವು ಮೂಸುತ್ತ ಮೂಸುತ್ತ ಪೆದ್ದನಹಳ್ಳಿಯ ಹತ್ತಾರು ಮನೆಗಳ ಬಾಗಿಲವರೆಗೆ ಹೋಗಿ ನಿಂತವು.

ಆ ಊರಿನವರೇ ಮಾಡಿದ ಕಗ್ಗೊಲೆಗಳಿವು ಎಂಬುದು ಮೇಲ್ನೋಟಕ್ಕೆ ಸಾಬೀತಾಗಿಬಿಟ್ಟಿತು. ಗಿರೀಶನ ಅಮ್ಮ ಗೌರಮ್ಮ ಹೇಳಿದಂತೆ, ಆ ಹಿಂದಿನ ರಾತ್ರಿ ಮನೆಯಲ್ಲಿ ಅವರ ಮಗ ಗಿರೀಶ ಟಿವಿ ನೋಡುತ್ತ ಮಲಗಿದ್ದ, ಜೊತೆಗೆ ಅವನ ಗೆಳೆಯ ಮಂಚಲದೊರೆಯ ಗಿರೀಶ ಎಂಬಾತನೂ ಇದ್ದ, ಅವರ ಮನೆ ಬಾಗಿಲಿಗೆ ಅದೇ ಊರಿನ ನಂದೀಶ ಎಂಬ ಯುವಕ ಬಂದು ಗಿರೀಶನನ್ನು ಮಿಸುಗಿ ಹೊರಗೆ ಕರೆದ, ಜೊತೆಗೆ ಈ ಗಿರೀಶನ ಗೆಳೆಯ ಆ ಗಿರೀಶನೂ ಹೋದ. ರಾತ್ರಿ ಎಷ್ಟೋ ಹೊತ್ತಾದರೂ ಆ ಇಬ್ಬರೂ ಬರಲಿಲ್ಲವಾಗಿ, ಊರಲ್ಲಿ ನಡೆಯುತ್ತಿದ್ದ ಉತ್ಸವದ ದೇವರ ನೋಡುತ್ತ ನಿಂತುಬಿಟ್ಟಿರಬೇಕು ಎಂದು ಕೊಂಡೆ ಮಲಗಿಬಿಟ್ಟೆ ಅಂತು ಗೌರಮ್ಮ.

ಆದರೆ ಅಷ್ಟು ಹೊತ್ತಿಗಾಗಲೇ ಊರೊಳಗೆ ಯಾರ ಮನೆಯಲ್ಲೂ ನೀನೇ ಗಂಡು ಎನ್ನುವ ಒಂದು ಪ್ರಾಣಿಯೂ ಇರಲಿಲ್ಲ. ಹಾಗೇ ನಂದೀಶನೂ ಇರಲಿಲ್ಲ. ಕ್ರಮೇಣ ಒಂದಷ್ಟು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಎಂಟತ್ತು ದಿನ ಕಳೆಯುವ ಹೊತ್ತಿಗೆ ಪೆದ್ದನಹಳ್ಳಿಯ ಒಟ್ಟು 25 ಜನರನ್ನು ಬಂಧಿಸಿ, ನ್ಯಾಯಾಲಯದ ಹಾಜರು ಮಾಡಿ, ನ್ಯಾಯಾಧೀಶರ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಅಂದರೆ ಅರಕೆರೆ ಸಮೀಪದ ಬಂದೀಖಾನೆಯಲ್ಲಿ ಇರಿಸಲಾಯಿತು.

 ಈ 25 ಮಂದಿ ಯಾರು ಯಾರು ಅಂತ ಹೇಳಿಲ್ಲ. ಇನ್ನೂ ತನಿಖೆ ಪೂರ್ಣ ಮುಗಿದಿಲ್ಲ, ಮುಖ್ಯ ಆರೋಪಿಗಳು ಸಿಕ್ಕಿಲ್ಲ ಎನ್ನುತ್ತವೆ ನಂಬಲರ್ಹ ಪೊಲೀಸ್ ಮೂಲಗಳು. ಈಗಾಗಲೇ ಬಂಧನದಲ್ಲಿರುವವರಲ್ಲಿ ಮೂವರು ದಲಿತರೂ ಇದ್ದಾರೆ, ಜೊತೆಗೆ ಏಳು ಮಂದಿ ತಿಗಳರು ಹಾಗೂ ಉಳಿದವರಲ್ಲಿ ಬಹುಪಾಲು ಲಿಂಗಾಯಿತರೂ ಇದ್ದಾರೆ.

ಮೊದಲಿಗೆ ಈ ಇಬ್ಬರು ಯುವಕರ ಹತ್ಯೆಯ ಕುರಿತಂತೆ ಪೊಲೀಸರ ನೆರೆಟೀವ್ ಏನೂ ಅಂತ ಹೇಳಿಬಿಡುತ್ತೇನೆ. ಈ ಪೆದ್ದನಹಳ್ಳಿ ಗಿರೀಶ್ ಅವನಲ್ಲಾ ಅವನು ವೃತ್ತಿಪರ ಕಳ್ಳನಂತೆ, ಜೊತೆಗೆ ಊರಿನಲ್ಲಿ ಮಾತಿಗೆ ಮಾತು ಕೊಟ್ಟು ಗಟ್ಟಿಯಾಗಿ ನಿಲ್ಲುತ್ತಿದ್ದನಂತೆ, ಬೇಯಿಸಿ ಹಾರಾಕಿದ್ದ ಅಡಕೆ ಎತ್ತಿ ಕೊಂಡು ಹೋಗುತ್ತಿದ್ದನಂತೆ. ಎಲ್ಲೋ ಕೆಲಸ ಮಾಡಿಕೊಂಡಿದ್ದ ಈ ಗಿರೀಶ ಸದಾ ಊರಲ್ಲೇನೂ ಇರುತ್ತಿರಲಿಲ್ಲ, ಆದರೆ ವಾರಕ್ಕೋ ಹದಿನೈದು ದಿನಕ್ಕೋ ಒಂದು ಸಲ ಈತ ಬಂದು ಹೋದ ಬಳಿಕ ಯಾರ ಯಾರದೋ ತೋಟದಲ್ಲಿ ಸ್ಟಾರ್ಟರ್ ಗಳು ಕಾಣೆಯಾಗುತ್ತಿದ್ದವಂತೆ. ಈ ಕೃತ್ಯ ಗಿರೀಶನದೇ ಇರಬಹುದು ಅಂತಲೂ ಗುಮಾನಿ ಇತ್ತಂತೆ ಊರವರಿಗೆ.

ಇತ್ತ ಅವತ್ತು ರಾತ್ರಿ ಹಟ್ಟಿಯಲ್ಲಿ ಗಿರೀಶನ ಮನೆ ಹತ್ರ ಬಂದು ಮಿಸುಗಿ ಕರೆದುಕೊಂಡು ಹೋದ ನಂದೀಶನೂ ಇವರಿಬ್ಬರೊಂದಿಗೆ ಕಳ್ಳತನ ಮಾಡುತ್ತಿದ್ದವನೇ ಅಂತೆ, ಆದರೆ ಈ ನಂದೀಶ ಗಿರೀಶನ ಕಳವು ಮಾಲಿನಲ್ಲಿ ಪಾಲು ಪಡೆಯುತ್ತಿರಲಿಲ್ಲವಂತೆ, ಜೊತೆಗೆ ಇವರೊಂದಿಗೆ ಕಳ್ಳತನಕ್ಕೆ ಹೋಗುವುದೂ ಅಲ್ಲದೇ ಕಳುವಿನ ಸಂಗತಿಯನ್ನು ಊರಿನವರಿಗೆ ಇವನೇ ತಿಳಿಸುತ್ತ ಎರಡೂ ಕಡೆ ಒಳ್ಳೆಯವನಾಗಿದ್ದನಂತೆ.

ಅವತ್ತು ರಾತ್ರಿಯೂ ಅಷ್ಟೇ, ಮನೆಯಿಂದ ಗಿರೀಶ ಮತ್ತು ಗಿರೀಶರನ್ನು ಕರೆದುಕೊಂಡು ಹೋದ ನಂದೀಶ ತೋಟವೊಂದರ ಬೋರ್ ನ ಸ್ಟಾರ್ಟರ್ ಕದಿಯಲು ಹೋದರಂತೆ, ಅವರ ಬಳಿ ಸ್ಟಾರ್ಟರ್ ಬಾಕ್ಸ್ ಬೀಗ ಮುರಿದು ತೆಗೆಯಲು , ಸ್ಟಾರ್ಟರ್ ಬಿಚ್ಚಲು ಹತಾರಗಳೂ ಇದ್ದವಂತೆ. ಇವರ ಕಳ್ಳತನದ ಸದ್ದೋ ಸುದ್ದಿಯೋ ಏನೋ ಒಂದು ಊರ ಜನರಿಗೆ ತಲುಪಿ ಕೆಲವರು ಸ್ಪಾಟ್‍ತಲುಪುತ್ತಾರೆ. ಜನ ಬರುವುದನ್ನೇ ಕಾಯುತ್ತ ನಿಂತವನಂತಿದ್ದ ನಂದೀಶ ಅಲ್ಲಿಂದ ಪರಾರಿಯಾಗಿಬಿಡುತ್ತಾನೆ. ಬಂದಿದ್ದ ಜನರು ಇನ್ನೊಂದಷ್ಟು ಜನರನ್ನು ಕರೆ ಮಾಡಿ ಕರೆಸಿಕೊಳ್ಳುತ್ತಾರೆ. ತಲಾಕತಟ್ಟಿ ಈ ಇಬ್ಬರನ್ನೂ ತಟ್ಟುತ್ತಾರೆ. ಸ್ಥಳದಲ್ಲಿ ಬಿದ್ದಿದ್ದ ದೊಡ್ಡ ರಕ್ತಸಿಕ್ತ ಬಿದಿರು ಗಳುವೇ ಕೊಲೆಯ ಮೂಕ ಸಾಕ್ಷಿ.

ಹೊಡೆದವರು ಪೂ‍ರ್ಣ ಪ್ರಾಣವನ್ನು ತೆಗೆದಿದ್ದರೋ ಇಲ್ಲವೋ ಗೊತ್ತಿಲ್ಲ. ಇಬ್ಬರನ್ನೂ ಎಳೆದು ತಂದಿರುವ ಕುರುಹುಗಳಿವೆ. ಸ್ಟಾರ್ಟರ್‍ಗಳನ್ನು ಪದೇ ಪದೇ ಕಳೆದುಕೊಂಡು ಬೇಸತ್ತಿದ್ದ ಪೆದ್ದನಹಳ್ಳಿ ಜನರು ಕಳ್ಳರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕೂಡಲೇ ಆಕ್ರೋಶದಿಂದ ಅವರನ್ನು ಕೊಂದು ಬಿಟ್ಟರು. ಜೊತೆಗೆ ಮರೆತಿದ್ದ ಒಂದು ಸಂಗತಿ ಏನೆಂದರೆ, ಆ ಇಬ್ಬರೂ ಸಖತ್ ಕುಡುಕರಂತೆ, ಸಖತ್ತಾಗೇ ಕುಡಿದು ತೂರಾಡುತ್ತಿದ್ದರಂತೆ,ಹಾಗಾಗಿ ಅವರಿಗೆ ಜನರನ್ನು ಕಂಡ ಕೂಡಲೇ ನಂದೀಶನಂತೆ ಓಡಿ ಹೋಗಲು ಆಗಲಿಲ್ಲವಂತೆ.

( ಪೆದ್ದನಹಳ್ಳಿ ಗಿರೀಶ ಮಾದಿಗರ, ಮಂಚಲದೊರೆ ಗಿರೀಶ ನಾಯಕರ ಜಾತಿಗೆ ಹಾಗೂ ಇವರ ಸಹವರ್ತಿ ನಂದೀಶ ಲಿಂಗಾಯಿತರವನು)

ಇದಿಷ್ಟೇ ಪೊಲೀಸರ ವರ್ಶನ್, ನೀವು ಹೇಗೆ ತಿರುಚಿ ಪರಚಿ ಕೇಳಿದರೂ ತಣ್ಣಗೆ ಇಷ್ಟೇ ಕತೆ ನಿಮಗೆ ಸಿಕ್ಕುವುದು. ನ್ಯಾಯಾಲಯದಲ್ಲೂ ಇದೇ ಮಾಹಿತಿ ಮುಂದುವರೆಯುತ್ತದೆ. ಪ್ರತ್ಯಕ್ಷ ದರ್ಶಿ ಸಾಕ್ಷಿಗಳು ಇಲ್ಲದೇ ಇರುವ ಕೇಸು ಇದು. ಯಾರು ಯಾರಿಗೆ ಶಿಕ್ಷೆ ಆಗುತ್ತದೆಯೋ, ಯಾರು ಯಾರು ಖುಲಾಸೆ ಆಗುತ್ತಾರೋ ಗೊತ್ತಿಲ್ಲ, ಪೊಲೀಸರಿಗೆ ಚಾರ್ಜ್ ಶೀಟ್ ಅಂದರೆ ದೋಷಾರೋಪಣ ಪಟ್ಟಿ ಸಲ್ಲಿಸಲು 90 ದಿನಗಳ ಕಾಲಾವಕಾಶ ಇರುವುದರಿಂದ, ಈ ಅವಧಿಯಲ್ಲಂತೂ ಅವರು ಜೈಲಿನಲ್ಲಿ ಇರಬೇಕಾದದ್ದು ಅನಿವಾರ್ಯ.

240 ಜನರನ್ನು ಇರಿಸಬಲ್ಲ ಜೈಲಿನಲ್ಲಿ 380 ಜನರನ್ನು ತುರುಕಲಾಗಿದೆ, ಕೋವಿಡ್ ಸೋಂಕು ತಗುಲಿಸಿಕೊಳ್ಳದೇ ಇದ್ದ ಏಕೈಕ ಜೈಲಿದು. ಇಲ್ಲಿ ಬಂಧನದಲ್ಲಿರುವ ಪೆದ್ದನಹಳ್ಳಿಯವರಲ್ಲಿ ವಯಸ್ಸಾದವರೂ  ಇದ್ದಾರೆ. ಸುಮ್ಮನೆ ನೋಡುತ್ತ ನಿಂತವರೂ ಇದ್ದಾರೆ. ವಿಚಾರಣೆಗೆಂದು ವಶಕ್ಕೆ ತೆಗೆದುಕೊಂಡ ಎಲ್ಲರನ್ನೂ ಬಂಧಿಸಿಲ್ಲ ಗೊತ್ತಾ. ಸತ್ತ ಇಬ್ಬರೂ ಕಳ್ಳತನದ ಪ್ರಕರಣಗಳಲ್ಲಿ ಹಲವು ಸಲ ಜೈಲಿಗೆ ಹೋಗಿ ಬಂದಿದ್ದವರಂತೆ. ಆದರೆ ನಂದೀಶನ ಮೇಲೆ ಅಂತ ಯಾವುದೇ ದಾಖಲಿತ ಆಪಾದನೆಗಳಿಲ್ಲವಂತೆ. ಈತ ಹೊಡೆದು ಕೊಲ್ಲದೇ ಇದ್ದರೂ ಈತನನ್ನ ಆಪಾದಿತ ಎಂದೇ ಪರಿಗಣಿಸಲಾಗಿದೆಯಂತೆ.

ಇದು ಒಂದು ಕಡೆ ಇರಲಿ, ಇನ್ನು ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಸಾಮಾಜಿಕ ಸಂಘಟನೆಗಳ ಜನರು, ರಾಜಕಾರಣಿಗಳು, ಪತ್ರಕರ್ತರು ಮತ್ತು ಇಲ್ಲೇ ಕುಳಿತು ಅಲ್ಲಿನ ಮಾಹಿತಿ ಸಂಗ್ರಹಿಸುವವರ ನೆರೇಟೀವ್ ತುಸು ಭಿನ್ನವಾಗಿದೆ.

ಮಂಚಲದೊರೆ ಗಿರೀಶ ತನ್ನ ಊರಿನಲ್ಲಿ ವಾಸವಿರಲಿಲ್ಲ, ಬೋಚಿಹಳ್ಳಿ ಎಂಬಲ್ಲಿ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ, ಬಿಡುವಿನ ಸಮಯದಲ್ಲಿ ಸಣ‍್ಣ ಪುಟ್ಟ ಕಳ್ಳತನ ಮಾಡುತ್ತಿದ್ದರಂತೆ. ಇವರ ಕಳ್ಳತನದ ಸಂಗತಿ ಊರಿನವರಿಗೆ ಅರಿವಾಗಿದ್ದರೂ ಮಾಲು ಸಮೇತ ಸಿಕ್ಕಿಬೀಳಲಿ ಅಂತ ಕಾದಿದ್ದರಂತೆ. ಹೀಗಾಗಿ ಆ ರಾತ್ರಿ ನಂದೀಶ್ ಇವರನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾನೆ.

ಒಂದು ಥಿಯರಿ ಪ್ರಕಾರ ಇವರನ್ನು ಕೊಲ್ಲುವ ಸಂಚನ್ನು ಮೊದಲೇ ಹೂಡಲಾಗಿತ್ತು ಎನ್ನುತ್ತಾರೆ. ಮತ್ತೊಂದರ ಪ್ರಕಾರ ಕಳ್ಳತನಕ್ಕೆ ಹೋದವರಲ್ಲಿ ನಾಲ್ವರು ಇದ್ದರು, ನಂದೀಶನಂತೇ ಮತ್ತೊಬ್ಬನೂ ಪರಾರಿಯಾಗಿದ್ದಾನೆ. ಆತ ಯಾರು ಎಂಬುದನ್ನು ಹೇಳಲು ಉಳಿದ ಇಬ್ಬರು ಬದುಕಿಲ್ಲ, ನಂದೀಶ ಹೇಳುತ್ತಿಲ್ಲ ಅಷ್ಟೇ. ಹೊಡೆದು ಕೊಲ್ಲುವ ದೃಶ್ಯವು ಯಾರದೋ ಫೋನಿನ ವಿಡಿಯೋದಲ್ಲಿ ದಾಖಲಾಗಿದೆ ಮತ್ತು ಇದು ಪೊಲೀಸರ ಕೈವಶದಲ್ಲಿದೆ, ಅದರಲ್ಲಿ ಇರುವವರನ್ನು ಗುರ್ತಿಸಿ ಬಂಧಿಸಲಾಗುತ್ತಿದೆ ಇತ್ಯಾದಿ. ಆದರೆ ಪೊಲೀಸ್ ಮೂಲಗಳ ಪ್ರಕಾರ ಯಾವುದೇ ವಿಡಿಯೋ ಸಿಕ್ಕಿಲ್ಲ.

ಹದಿನಾರು ದಿನಗಳಾದರೂ ಇನ್ನೂ ಊರು ಸಾಮಾನ್ಯ ಸ್ಥಿತಿಗೆ ಹಿಂದಿರುಗಿಲ್ಲ. ಇನ್ನೂ ಒಂದಷ್ಟು ಜನ ತಲೆ ಮರೆಸಿಕೊಂಡಿದ್ದಾರೆ. ಮತ್ತು ಈಗಾಗಲೇ 25 ಗಂಡಸರು ಜೈಲು ಪಾಲಾಗಿದ್ದಾರೆ.ಹಾಗಾಗಿ ಊರು ಹಾಳು ಸುರಿಯುತ್ತಿದೆ.

ನಾನು ಪದವಿ ಓದುತ್ತಿದ್ದಾಗ ಇದೇ ಗುಬ್ಬಿ ತಾಲೂಕಿನ ಕೆ.ಜಿ.ಟೆಂಪಲ್ ಬಳಿಯ ನಾಗಸಂದ್ರದಲ್ಲಿ ಯುವಕನೊಬ್ಬನನ್ನು ಹಾಡಹಗಲಲ್ಲಿ ಕೊಚ್ಚಿ ಕೊಲ್ಲಲಾಗಿತ್ತು. ಸರಿ ಸುಮಾರು 35ಕ್ಕೂ ಹೆಚ್ಚು ಜನರು ಜೈಲು ಪಾಲಾಗಿ ಎಷ್ಟೋ ಮನೆಗಳಲ್ಲಿ ದನ ಹಿಡಿದು ಆಚೆಗೆ ಕಟ್ಟಲೂ, ದೀಪ ಹಚ್ಚಲೂ ಯಾರೂ ಇಲ್ಲದಂತಾಗಿಬಿಟ್ಟಿತ್ತು. ಆಗ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಆತ ತನ್ನ ಮೇಲೆ ದಾಳಿ ಮಾಡಿದವರ ಹೆಸರುಗಳನ್ನು ಹೇಳಿಬಿಟ್ಟಿದ್ದ. ಆದರೆ ಇಲ್ಲಿ ಕೊಂದವರು ಮಾತ್ರವೇ ಉಳಿದಿದ್ದಾರೆ.

ಪೆದ್ದನಹಳ್ಳಿ ಹತ್ಯೆ ಪ್ರಕರಣ ಜಾತಿಯ ಕಾರಣಕ್ಕೆ, ಗಿರೀಶ ದಲಿತ ಎಂಬ ಕಾರಣಕ್ಕೆ ಆಗಿರುವುದಲ್ಲ ಎಂಬ ಸಮಜಾಯಿಷಿಯನ್ನು ಎಲ್ಲ ದಿಕ್ಕಿನಿಂದಲೂ ಸಾಬೀತು ಪಡಿಸಲು ಹೆಣಗಾಡುತ್ತಿದ್ದಾರೆ. ಆದರೂ ಯಾರಿಗೂ ಇದು ಮನವರಿಕೆ ಆಗುತ್ತಿಲ್ಲ.

ಗುಬ್ಬಿ ತಾಲೂಕು ಹೇಮಾವತಿ ನೀರನ್ನು ಅಗತ್ಯಕ್ಕಿಂತ ಹೆಚ್ಚು ಹೀರಿಕೊಂಡು ಸಂಪದ್ಭರಿತವಾಗತೊಡಗಿದೆ. ಮಾವು, ತೆಂಗು, ಅಡಿಕೆ,ಬಾಳೆಯಂಥ ವಾರ್ಷಿಕ, ಬಹು ವಾರ್ಷಿಕ ಬೆಳೆಗಳು

ರೈತರ ಕೈ ಹಿಡಿದಿವೆ. ಅಡಿಕೆ ಪಟ್ಟೆಯ ದಂಧೆಯೇ ದೊಡ್ಡ ಮಾಫಿಯಾ ಆಗಿ ಪರಿಣಮಿಸಿದೆ. ಹೀಗಾಗಿ ಗುಬ್ಬಿ ಮತ್ತು ತುರುವೇಕೆರೆ ತಾಲೂಕುಗಳು ನೆರೆಯ ಮಂಡ್ಯ ಜಿಲ್ಲೆಯ ಸ್ವರೂಪವನ್ನು ತಾಳಿವೆ. ಹಾಗೇ ಅಲ್ಲಿನ ಸಂಸ್ಖೃತಿಯನ್ನೂ ಮೈಗೂಡಿಸಿಕೊಂಡಿವೆ. ಹೊಡಿ, ಬಡಿ, ಕಡಿ ಪ್ರಕರಣಗಳು ಹೆಚ್ಚಾಗುತ್ತಿವೆ.

ಆದರೂ, ಹಾಗಿದ್ದರೂ ಪೆದ್ದನಹಳ್ಳಿಯಲ್ಲಿ ಆ ಇಬ್ಬರು ಯುವಕರನ್ನು ಹೀಗೆ ಅಮಾನುಷವಾಗಿ ಕೊಲ್ಲಬಾರದಿತ್ತು . ಯಾರಿಗೆ ಏನೇ ಶಿಕ್ಷೆ ಕೊಟ್ಟರೂ ಆ ಯುವಕರ ಜೀವಗಳು ಮರಳಿ ಬಾರವು. ಛೇ.

 

ಎಫ್‍ಐಆರ್ ಮುಚ್ಚಿಡಲು ಕಾರಣವೇನು?

 

ಇದು ಪಾರದರ್ಶಕ ಆಡಳಿತದ ಕಾಲ, ಮಾಹಿತಿ ಹಕ್ಕು ಕಾಯ್ದೆಯೂ ಅನುಷ್ಟಾನದಲ್ಲಿದೆ. ಅಪರಾಧ ಪ್ರಕರಣಗಳ ಎಫ್‍ಐಆರ್‍ಗಳನ್ನು  ರಾಜ್ಯ ಸರ್ಕಾರದ ವೆಬ್ ಸೈಟ್   https://ksp.karnataka.gov.in ನಿಂದ ಯಾರು ಬೇಕಾದರೂ  ಡೌನ್ ಲೋಡ್ ಮಾಡಿಕೊಳ್ಳಬಹುದು, ಕ್ರೈಂ ನಂಬರ್ ಗೊತ್ತಿದ್ದರೆ ಸಾಕು. ಪೆದ್ದನಹಳ್ಳಿಯಲ್ಲಿ ಏಪ್ರಿಲ್ 21ರ ರಾತ್ರಿ ಎಷ್ಟೋ ಹೊತ್ತಿನಲ್ಲಿ ನಡೆದಿರ ಬಹುದಾದ ಇಬ್ಬರು ಯುವಕರ ಕೊಲೆ ಪ್ರಕರಣದ ಕ್ರೈಂ ನಂಬರ್‍0080/2022, ಮೇಲ್ಕಂಡ ವೆಬ್‍ಸೈಟ್‍ನಲ್ಲಿ ಈ ಸಂಖ್ಯೆಯ ಹಿಂದಿನ ಮತ್ತು ಮುಂದಿನ ಎರಡೂ ಅಪರಾಧ ಪ್ರಕರಣಗಳ ಎಫ್ ಐ ಆರ್‍ಗಳು ಒಂದೇ ಕ್ಲಿಕ್ಕಿಗೆ  ಡೌನ್‍ಲೋಡ್ ಆಗುತ್ತವೆ. ಆದರೆ ಪೆದ್ದನಹಳ್ಳಿ ಹತ್ಯೆಗೆ ಸಂಬಂಧಿಸಿದ ಎಫ್‍ಐಆರ್ ಮಾತ್ರ ಡೌನ್ ಲೋಡ್ ಆಗುತ್ತಿಲ್ಲ.

ಹಲವಾರು ಕಳ್ಳತನ ಪ್ರಕರಣಗಳಲ್ಲಿ ಜೈಲು ಕಂಡಿದ್ದ ಮತ್ತು ಕೊಲೆಯಾದ ರಾತ್ರಿಯೂ ಕಳ್ಳತನ ಮಾಡಲೆಂದೇ ಹೋಗಿದ್ದರು, ಇವರು ಕೊಳವೆಬಾವಿ ಸ್ಟಾರ್ಟರ್ ಕದಿಯುವುದನ್ನು ಕಂಡ ಹತ್ತಾರು ಜನರು ಆಕ್ರೋಶದಿಂದ ಹೊಡೆದರು, ಏಟುಗಳ ತೀವ್ರತೆಗೆ ಇವರಿಬ್ಬರೂ ಸತ್ತರು ಎನ್ನುವ ಸರಳ ನೆರೇಟಿವ್ ಅನ್ನೇ ಮೊದಲ ದಿನದಿಂದಲೂ ಗಿಳಿಪಾಠದಂತೆ ಒಪ್ಪಿಸುತ್ತಿರುವ ತನಿಖಾಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್‍ಐಆರ್ ಅನ್ನು ಸಾರ್ವಜನಿಕಗೊಳಿಸಲು ಹಿಂದೇಟು ಹೊಡೆಯುತ್ತಿರುವುದೇಕೆ ಎಂಬ ಪ್ರಶ್ನೆ ನಮ್ಮದು.

ಹೈಕೋರ್ಟ್ ತೀರ್ಪೊಂದನ್ನು ಉಲ್ಲೇಖಿಸಿ, ಅಪರಾಧ ಪ್ರಕರಣಗಳ ಪ್ರಾಥಮಿಕ ಮಾಹಿತಿಯನ್ನೂ ಪೊಲೀಸರು ಸುದ್ದಿಗಾರರಿಗೆ ಕೊಡುತ್ತಿಲ್ಲ. ಕಡೇ ಪಕ್ಷ ಎಫ್‍ಐ ಆರ್ ಪ್ರತಿಯನ್ನಾದರೂ ಪಡೆದು ಕಣ್ಣಾಡಿಸಿ ಓದುಗರಿಗೆ ಮಾಹಿತಿ ನೀಡಲು ಇದ್ದ ಅವಕಾಶವನ್ನೂ ತನಿಖಾ ತಂಡ ನಿರಾಕರಿಸಿರುವುದನ್ನು ಒಪ್ಪಲು ಬರುವುದಿಲ್ಲ. 

 

 

ಪಿಟ್ ಕ್ಲೀನಿಂಗ್ ಮತ್ತು ಗಿರೀಶ!

 

“ನನ್ನ ಮಗ ಪಿಟ್ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ, ಇಂಥಾ ಕೆಲಸ ಮಾಡೋನು ಕಳ್ಳತನ ಯಾಕೆ ಮಾಡ್ತಾನೆ “ ಅಂತ ಮೃತ ಗಿರೀಶನ ಅಮ್ಮ ಆ ವೃತ್ತಿ ಸಂಬಂಧಿಸಿದ ವಿಸಿಟಿಂಗ್ ಕಾರ್ಡ್ ಗಳ ಕಟ್ಟನ್ನೇ ಕೈಯಲ್ಲಿ ಹಿಡಿದ ದೃಶ್ಯವನ್ನು ವೆಬ್ ಪತ್ರಿಕೆಯೊಂದು ಪ್ರಕಟಿಸಿದೆ. ಸದರಿ ವಿಸಿಟಿಂಗ್ ಕಾರ್ಡಿನಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಲಾಗಿ, ಬಾಬು ಎಂಬಾತ ಕರೆ ಸ್ವೀಕರಿಸಿ, ಸೆಪ್ಟಿಕ್ ಟ್ಯಾಂಕ್ ಎತ್ತುವಳಿ ಹಾಗೂ ಸಾಗಾಣಿಕೆ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಸತ್ತ ಗಿರೀಶ ನನ್ನ ಹತ್ರ ಕೆಲಸಕ್ಕಿದ್ದ, ಆತ ಕೆಲಸ ಬಿಟ್ಟು ಆರೇಳು ತಿಂಗಳಾದವು. ಮೊನ್ನೆ ಆತ ಸತ್ತ ಅಂತ ಗೊತ್ತಾಯಿತು ಅಂತ ಉತ್ತರಿಸಿದರು.

ಬಾಕ್ಸ್ 3

ತಾಳ್ಮೆಗೂ ಮಿತಿ ಇದೆ: ಡಾ.ಲಕ್ಷ್ಮೀಕಾಂತ್‍

ಪೆದ್ದನಹಳ್ಳಿಯಲ್ಲಿ ದಲಿತ ಯುವಕರ ಹತ್ಯೆಯಿಂದ ಸಮಾನತೆಯ ಸಮಾಜಕ್ಕಾಗಿ ಹಂಬಲಿಸಿದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಕನಸು ಮತ್ತೊಮ್ಮೆ ನುಚ್ಚು ನೂರಾದಂತಾಗಿದೆ. ಅವರ ಸಂವಿಧಾನಕ್ಕೆ ಅಪಮಾನವಾಗಿದೆ. ಮನುಷ್ಯತ್ವ ಎನ್ನುವ ಪದಕ್ಕೆ ಅರ್ಥವೇ ಇಲ್ಲದಂತಾಗಿಬಿಟ್ಟಿದೆ.

ಈ ದುಷ್ಕೃತ್ಯದಿಂದ ಎಲ್ಲರೂ ಡಿಸ್ಟರ್ಬ್ ಆಗಿದ್ದಾರೆ. ಅವರಿಬ್ಬರೂ ಕಳ್ಳತನ ಮಾಡುತ್ತಿದ್ದರು ಎನ್ನುವುದು ಸತ್ಯವೇ ಆಗಿರಲಿ, ಅವರು ಮಾಡುತ್ತಿದ್ದ ಸಣ್ಣ ಪುಟ್ಟ ಕಳ್ಳತನಗಳಿಗೆ ಶಿಕ್ಷೆ ಕೊಡಲು ನಾಗರಿಕ ವ್ಯವಸ್ಥೆಯಿದೆ.

ಈ ದೇಶದಲ್ಲಿ ಬಡತನ, ಅನಕ್ಷರತೆ, ನಿರುದ್ಯೋಗ, ಅರೆ ಉದ್ಯೋಗಗಳಿಗೆ ಇಲ್ಲಿನ ಪರಂಪರಾಗತ ಮೇಲು ಕೀಳಿನ ಸಾಮಾಜಿಕ ವ್ಯವಸ್ಥೆ, ಶ್ರೇಣೀಕೃತ ಜಾತಿ ಪದ್ಧತಿ ಹಾಗೂ ಅಸ್ಪೃಶ್ಯತೆ ಹಾಗೂ ಅದರಿಂದಾಗಿಯೇ ಸೃಷ್ಟಿಯಾಗಿರುವ ಆರ್ಥಿಕ ಅಸಮತೋಲನ, ಮಿತಿ ಮೀರಿದ ಆಸ್ತಿ ಮತ್ತು ಸಂಪತ್ತು ಶೇಖರಣೆಗಳೇ ಮೂಲ ಕಾರಣ ಎನ್ನುವುದನ್ನು ಗಮನಿಸಬೇಕು.

ಒಂದು ವೇಳೆ ಪೆದ್ದನಹಳ್ಳಿಯಲ್ಲಿ ಗಿರೀಶನೊಂದಿಗೆ ಕಳ್ಳತನದಲ್ಲಿ ಪಾಲ್ಗೊಳ್ಳುತ್ತಿದ್ದ ನಂದೀಶನನ್ನು ದಲಿತರು ಹೊಡೆದು ಕೊಂದು ಬಿಟ್ಟಿದ್ದರು ಅಂತ ಊಹಿಸಿಕೊಳ್ಳಿ. ಮತ್ತೊಂದು ಬದನವಾಳು, ಕಂಬಾಲಪಲ್ಲಿ ಇಲ್ಲೇ ಸೃಷ್ಟಿಯಾಗಿಬಿಡುತ್ತಿತ್ತು. ಮತ್ತು ಇಷ್ಟೆಲ್ಲ ಆದರೂ ದಲಿತರು ದೈಹಿಕ ಪ್ರತಿಕ್ರಿಯೆಯಿರಲಿ ಮಾತಿನ ಪ್ರತಿಕ್ರಿಯೆ ನೀಡಲೂ ಆಗದಷ್ಟು ನಿಸ್ತೇಜರಾಗಿದ್ದಾರೆ.

ಆದರೆ ಪೆದ್ದನಹಳ್ಳಿ ಕೃತ್ಯ ಪೂರ್ವ ನಿದರ್ಶನದಂತಾಗಿ, ಇತರೆಡೆ ಪ್ರತಿಧ್ವನಿಸಬಾರದು. ಶತಮಾನಗಳಿಂದ ತುಳಿತಕ್ಕೊಳಗಾದವರು ತಾಳ್ಮೆಗೆಡುವಂತೆ ಬೇಜವಾಬ್ದಾರಿಯಿಂದ ಸಮಾಜ ವರ್ತಿಸಬಾರದು. ಇಂಥ ಕೃತ್ಯಗಳು ಮರುಕಳಿಸಬಾರದು.