ಚಾಮುಂಡೇಶ್ವರಿ-ವರುಣಾ-ಬಾದಾಮಿ-...............? ಕುಚ್ಚಂಗಿ ಪ್ರಸನ್ನ
ಚಾಮುಂಡೇಶ್ವರಿ-ವರುಣಾ-ಬಾದಾಮಿ-...............? ಕುಚ್ಚಂಗಿ ಪ್ರಸನ್ನ
ಒಂದು ಗಳಿಗೆ
ಚಾಮುಂಡೇಶ್ವರಿ-ವರುಣಾ-ಬಾದಾಮಿ-...............?
ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಮುಖ್ಯಮಂತ್ರಿ, ಹಾಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು?! ಪ್ರಸ್ತುತ ಅವರು ಶಾಸಕರಾಗಿ ಚುನಾಯಿತರಾಗಿರುವ ಬಾದಾಮಿ ವಿಧಾನ ಸಭಾ ಕ್ಷೇತ್ರದಿಂದಲೇ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯಬಾರದೇಕೆ?
ಬೆಂಗಳೂರು ಮಹಾನಗರದ ಚಾಮರಾಜಪೇಟೆ, ಕೋಲಾರ ಜಿಲ್ಲಾ ಕೇಂದ್ರ ಅಥವಾ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ ಈ ಯಾವುದಾದರೊಂದು ಕ್ಷೇತ್ರಗಳಿಂದ ಕಣಕ್ಕಿಳಿಯುವಂತೆ ಸ್ಪರ್ಧಿಸುವಂತೆ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡುತ್ತಿರುವುದೇಕೆ?
2023ರ ವಿಧಾನಸಭಾ ಚುನಾವಣೆಗೆ ಕಮ್ಮಿ ಎಂದರೂ ಇನ್ನೂ ಒಂದೂಕಾಲು ವರ್ಷ ಇರುವಾಗಲೇ ಹೀಗೇಕೆ ಗೊಂದಲ ಸೃಷ್ಟಿಸಲಾಗುತ್ತಿದೆ. ಚಾಮುಂಡೇಶ್ವರಿ-ವರುಣಾ-ಬಾದಾಮಿಗಳ ನಂತರ ಸಿದ್ದು ಅವರು ಕಣಕ್ಕಿಳಿಯಲಿರುವ ಮುಂದಿನ ವಿಧಾನಸಭಾ ಕ್ಷೇತ್ರ ಯಾವುದಿರಬಹುದು ಎಂಬ ಕುತೂಹಲವಂತೂ ಎಲ್ಲರಿಗೂ ಇದೆ.
ರಾಜ್ಯದ ರಾಜಕೀಯ ಹಾಗೂ ಸಿದ್ದರಾಮಯ್ಯನವರ ಚುನಾವಣಾ ರಾಜಕೀಯ ಚರಿತ್ರೆಯ ಒಂದು ಹಿನ್ನೋಟದೊಂದಿಗೆ ಮುಂದೆ ಸಾಗೋಣ.
2013ರ ವಿಧಾನಸಭಾ ಚುನಾವಣೆಯಲ್ಲಿ 122 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಐದು ವರ್ಷ ನಿರಾತಂಕವಾಗಿ ಆಡಳಿತ ನಡೆಸಿದ ಕಾಂಗ್ರೆಸ್‌ನ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಮತದಾರ ಅವಕಾಶ ನೀಡಲಿಲ್ಲ. 2018ರ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಮುಗಿದ ಮೇಲೆ 78 ಸೀಟುಗಳಿಗೆ ಕಾಂಗ್ರೆಸ್ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ ಇದೇ ಮತದಾರ 2013-18ರ ಅವಧಿಯಲ್ಲಿ ಐದು ವರ್ಷ ವಿರೋಧ ಪಕ್ಷದಲ್ಲಿ ಕೂತಿದ್ದ ಬಿಜೆಪಿಗೆ ಸರಳ ಬಹುಮತವನ್ನೂ ಕೊಡದೆ 104 ಸೀಟುಗಳಿಗೆ ಮಿತಿಗೊಳಿಸಿ ಆ ಪಕ್ಷದ ಅಧಿಕಾರಕ್ಕೆ ಬರುವ ಕನಸನ್ನೂ ನನಸು ಮಾಡಲಿಲ್ಲ. ಈ ಅತಂತ್ರ ರಾಜಕೀಯ ಪರಿಸ್ಥಿತಿಯ ಲಾಭ ದಕ್ಕಿದ್ದು 37 ಶಾಸಕರನ್ನು ಗೆಲ್ಲಿಸಿಕೊಂಡಿದ್ದ ಜೆಡಿಎಸ್‌ಗೆ. ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಬೆಂಬಲ ನೀಡಿದರೆ ಉಪಮುಖ್ಯಮಂತ್ರಿ ಹುದ್ದೆ ದೊರಕಬಹುದೇನೋ ಎಂಬ ಲೆಕ್ಕಾಚಾರವನ್ನು ಹಾಕುವ ಮೊದಲೇ ಕಾಂಗ್ರೆಸ್ ಮುಖ್ಯಮಂತ್ರಿ ಗದ್ದುಗೆಯನ್ನು ಜೆಡಿಎಸ್‌ನ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಮತ ಎಣಿಕೆ ಪೂರ್ಣಗೊಳ್ಳುವ ಮೊದಲೇ ಎಲೆಕ್ಷನ್ ಗಿಫ್ಟ್ ಆಗಿ ನೀಡಿಬಿಟ್ಟಿತು.
ಆದರೂ ರಾಜ್ಯಪಾಲರು ಏಕೈಕ ದೊಡ್ಡ ಪಕ್ಷವಾಗಿದ್ದ ಬಿಜೆಪಿಗೆ ಸರ್ಕಾರ ರಚಿಸಲು ಕರೆ ನೀಡಿದರಲ್ಲದೇ, ಬಹುಮತ ಸಾಬೀತು ಪಡಿಸಲು 15 ದಿನಗಳ ಅವಕಾಶ ನೀಡುವ ಮೂಲಕ ರಾಜಭವನ ದಿಲ್ಲಿ ದೊರೆಗಳ ಸೂಚನೆಯನ್ನು ಪಾಲಿಸುತ್ತಿದೆ ಎಂಬ ಆರೋಪ ಹೊತ್ತುಕೊಂಡಿತು. ಯಡಿಯೂರಪ್ಪನವರು ಬಹುಮತ ಸಾಬೀತು ಪಡಿಸಲಾಗದೇ ಹೋದರೂ ದುರಂತನಾಯಕನಂತೆ ಅಸೆಂಬ್ಲಿ ಹಾಲ್‌ನಲ್ಲಿ ಭಾಷಣ ಮಾಡಲೂ ಅವಕಾಶ ಸುಪ್ರೀಂ ಕೋರ್ಟ್ ಅವಕಾಶ ನೀಡಲಿಲ್ಲ, 15 ದಿನಗಳ ಬದಲಿಗೆ ಮೂರೇ ದಿನದಲ್ಲಿ ಬಹುಮತ ಸಾಬೀತು ಪಡಿಸಿ ಎಂದು ತಾಕೀತು ಮಾಡಿತು. ಬಹುಮತ ಸಾಬೀತು ಮಾಡಲು ಹತ್ತು ನಿಮಿಷ ಮೊದಲೇ ಯಡಿಯೂರಪ್ಪ ಕೆಳಗಿಳಿದುಬಿಟ್ಟರು.
ಜೆಡಿಎಸ್ ಅನ್ನು ಡ್ರೈವಿಂಗ್ ಸೀಟಿನಲ್ಲಿ ಕೂರಿಸಿದರೂ ಬ್ರೇಕ್, ಎಕ್ಸಲೇಟರ್‌ಗಳನ್ನು ಕಾಂಗ್ರೆಸ್ ಹಿಡಿದುಕೊಂಡಿದೆಯೇನೋ ಎಂದು ನಾಡಿನ ಜನತೆಗೆ ಅನ್ನಿಸುವ ಹೊತ್ತಿಗೆ ಮೈತ್ರಿ ಮುರಿದು ಬಿತ್ತು, ಈ ನಡುವೆ ಲೋಕಸಭಾ ಚುನಾವಣೆಯೂ ಬಂದು ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಕಣಕ್ಕಿಳಿಸಿದ ಪರಿಣಾಮ ಆಗ ತುಮಕೂರು ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಜನಪ್ರಿಯರಾಗಿ ಮತ್ತೊಮ್ಮೆ ನಿರಾಯಾಸವಾಗಿ ಗೆಲ್ಲುವ ನಿರೀಕ್ಷೆಯಿದ್ದ ಸಂಸದ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಹೋಯಿತು. ಇತ್ತ ದೇವೇಗೌಡರೂ ಗೆಲ್ಲದೇ ಹೋದದ್ದರಿಂದಾಗಿ, ಈ ಲೋಕಸಭಾ ಸೀಟನ್ನು ಉಳಿಸಿಕೊಳ್ಳುವ ಅವಕಾಶವನ್ನೂ ಕಾಂಗ್ರೆಸ್ ಕಳೆದುಕೊಂಡಿತು.
ಲೋಕಸಭಾ ಚುನಾವಣಾ ಮೈತ್ರಿಯೂ ವರ್ಕ್ ಔಟ್ ಆಗಲಿಲ್ಲ, 14 ತಿಂಗಳ ಅವಧಿಯ ಮೈತ್ರಿ ಸರ್ಕಾರದಲ್ಲಿ ನಿದ್ದೆ ಬಾರದೇ ಚಡಪಡಿಸುತ್ತಿದ್ದ ಆಡಳಿತದ ಪಕ್ಷದ 16 ಶಾಸಕರು ರಾತ್ರೋರಾತ್ರಿ ಮುಂಬೈನ ಸೆವೆನ್ ಸ್ಟಾರ್ ಹೋಟೆಲ್ ಸೇರಿ ಮೂರು ವಾರ ಬೆಚ್ಚಗೆ ರಗ್ಗು ಹೊದ್ದು ಮಲಗಿದ ಪರಿಣಾಮ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾದರು. ಸರ್ಕಾರದ ಸಂಖ್ಯೆ 100ಕ್ಕೆ ಕುಸಿದು ಇಬ್ಬರು ಪಕ್ಷೇತರರ ನೆರವು ಪಡೆದ ಬಿಜೆಪಿ 107ಕ್ಕೆ ತಲುಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. 26 ಜುಲೈ 2019ರಂದು ಬಿ.ಎಸ್.ಯಡಿಯೂರಪ್ಪ ಮತ್ತೆ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ಕೈಗೊಂಡರು. ಯಡಿಯೂರಪ್ಪನವರು ಖರಾರುವಕ್ಕಾಗಿ ಎರಡು ವರ್ಷ ಎರಡು ದಿನ ಅಧಿಕಾರದಲ್ಲಿ ಇದ್ದದ್ದೇ ಹೆಚ್ಚು ಎನ್ನುವಂತೆ ಅವರನ್ನು ಸ್ವಇಚ್ಚೆಯಿಂದ ರಾಜಿನಾಮೆ ಸಲ್ಲಿಸುವಂತೆ ಮಾಡಿತು ಬಿಜೆಪಿ ಹೈಕಮಾಂಡ್. ಪ್ರಸ್ತುತ ಬಸವರಾಜ ಬೊಮ್ಮಾಯಿ ಅವರು ಈ ತಿಂಗಳ ಇದೇ ದಿನ ತಮ್ಮ ಸರ್ಕಾರದ ಆರು ತಿಂಗಳ ಸಾಧನೆಯ ಪಟ್ಟಿಯನ್ನೂ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದರು, ಬಿಜೆಪಿಯೊಳಗಿನ ಈ ಎಲ್ಲ ಬೆಳವಣಿಗೆಗಳು ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವುದರಿಂದ ಇದು ಅವರ ಪಕ್ಷದ ಆಂತರಿಕ ವಿಚಾರ ಅಂತ ಸುಮ್ಮನಾಗುವಂತಿಲ್ಲ.
ಬಿಜೆಪಿ ಹೀಗೇ ಅಧಿಕಾರಕ್ಕೆ ಬಂದಿದ್ದ 2008-13ರ ಅವಧಿಯನ್ನೊಮ್ಮೆ ಹಿಂದಿರುಗಿ ನೋಡಿ, 2008ರ ಮೇ 30ರಂದು ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪನವರು 3 ವರ್ಷ 66 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದು, ಗಣಿ ಹಗರಣದ ಕಾರಣ ರಾಜಿನಾಮೆ ಸಲ್ಲಿಸಿದರು, ಅವರ ನಂತರ ಮುಖ್ಯಮಂತ್ರಿಯಾದ ಸದಾನಂದ ಗೌಡರು ವರ್ಷವನ್ನೂ ಪೂರೈಸದೇ 341 ದಿನಗಳಿಗೇ ಔಟ್ ಆದರು, ಬಿಜೆಪಿ ಸರ್ಕಾರದ ಮೂರನೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸದಾನಂದ ಗೌಡರಿಗಿಂತ ಇನ್ನೂ 37 ದಿನ ಕಡಿಮೆ ಆಳ್ವಿಕೆ ಮಾಡಿದರು. ಕಾಂಗ್ರೆಸ್ ಕೂಡಾ ವೀರೇಂದ್ರ ಪಾಟೀಲರು-ಬಂಗಾರಪ್ಪ-ವೀರಪ್ಪ ಮೊಯ್ಲಿ ತ್ರಿವಳಿ ಮುಖ್ಯಮಂತ್ರಿಗಳ ಆಡಳಿತವನ್ನು ಹಿಂದೆ ಕೊಟ್ಟಿದೆ.
ದಿವಂಗತ ವೀರೇಂದ್ರ ಪಾಟೀಲರು 1989ರ ನವೆಂಬರ್ 30ರಿಂದ 314 ದಿನ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದರು, ಆನಂತರ ದಿವಂಗತ ಎಸ್.ಬಂಗಾರಪ್ಪನವರು 1990ರ ಅಕ್ಟೋಬರ್ 17ರಿಂದ ಎರಡು ವರ್ಷ 33 ದಿನ ಹಾಗೂ ಅವರ ನಂತರ ವೀರಪ್ಪ ಮೊಯ್ಲಿ ಅವರು 1994 ಡಿಸೆಂಬರ್ 11ರವರೆಗೆ ಎರಡು ವರ್ಷ 22 ದಿನ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದನ್ನು ನೆನಪಿಸಿಕೊಳ್ಳಬಹುದು.
ಇವರಿಗೆಲ್ಲ ಹೋಲಿಸಿಕೊಂಡಾಗ ಎಸ್.ಎಂ.ಕೃಷ್ಣ ಮತ್ತು ಸಿದ್ದರಾಮಯ್ಯನವರು ಅದೃಷ್ಟವಂತರೆನ್ನಬೇಕು, ಅದರಲ್ಲೂ ಸಿದ್ದರಾಮಯ್ಯನವರು ಕೃಷ್ಣ ಅವರಿಗಿಂತ ಹೆಚ್ಚು ಅದೃಷ್ಟಶಾಲಿ. ಎಸ್.ಎಂ.ಕೃಷ್ಣ 4 ವರ್ಷ 230 ದಿನ ಸಿಎಂ ಆಗಿದ್ದರೆ ಸಿದ್ದರಾಮಯ್ಯ 5 ವರ್ಷ ಪೂರ್ಣಗೊಳಿಸಿದ ಮೇಲೂ 4 ದಿನ ಹೆಚ್ಚಿಗೆ ಮುಖ್ಯಮಂತ್ರಿ ಗದ್ದುಗೆಯಲ್ಲಿದ್ದರು!
ಕೊರೊನಾ-ಕೋವಿಡ್, ಅತಿಮಳೆ-ಪ್ರವಾಹ, ಮಿತಿಮೀರಿದ ಭ್ರಷ್ಟಾಚಾರ, ಜೀವನಾವಶ್ಯಕ ಪದಾರ್ಥಗಳ ಅತೀವ ಬೆಲೆ ಏರಿಕೆ, ಮುಚ್ಚಿದ ಕಾರ್ಖಾನೆಗಳು, ತಗ್ಗಿದ ವರಮಾನ, ಏರಿದ ನಿರುದ್ಯೋಗ ಇವೆಲ್ಲದರ ಜೊತೆಗೆ ಆಂತರಿಕ ಭಿನ್ನಮತಗಳ ಭಾರದಲ್ಲಿ ಕುಸಿದ ಆಡಳಿತ ಪಕ್ಷ ಬಿಜೆಪಿಯು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ, ಆದ್ದರಿಂದ ಮುಂದಿನ ಅವಧಿ ತನ್ನದೇ ಎಂದು ಕಾಂಗ್ರೆಸ್ ಖಚಿತಪಡಿಸಿಕೊಂಡಿದೆ.
ಇಂಥಾ ಉತ್ತೇಜಿತ ರಾಜಕೀಯ ಸನ್ನಿವೇಶದಲ್ಲಿ ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬಯಸಿದರೆ ತಪ್ಪೇನು ಎಂದು ಕೇಳುವಂತಿಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರ ಜೊತೆಗೆ ಮುಖ್ಯಮಂತ್ರಿಯಾಗಲು ಅರ್ಹತೆ ಹೊಂದಿರುವ ಕನಿಷ್ಟ ಇನ್ನೂ ಮೂವರು ಆಕಾಂಕ್ಷಿ ಅಭ್ಯರ್ಥಿಗಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ-ಡಾ.ಜಿ.ಪರಮೇಶ್ವರ ಹಾಗೂ ಡಿ.ಕೆ.ಶಿವಕುಮಾರ್. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಗುಪ್ತ ಮತದಾನ ಪದ್ಧತಿ ಅಳವಡಿಸಿಕೊಂಡಿರುವುದರಿAದ ಒಂದು ವೇಳೆ ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚಿಸುವಂತಾದಲ್ಲಿ ಇವರಲ್ಲಿ ಯಾರಾದರೂ ಒಬ್ಬರು ಮುಖ್ಯಮಂತ್ರಿಯಾಗುವುದು ಖಚಿತ. ಆದರೆ ಅದಕ್ಕಿಂತ ಮೊದಲು ಮುಖ್ಯಮಂತ್ರಿ ರೇಸ್‌ನಲ್ಲಿರುವ ನಾಲ್ವರಲ್ಲಿ ಮುಖ್ಯರಾದ ಸಿದ್ದರಾಮಯ್ಯನವರು ಸ್ಪರ್ಧಿಸಬೇಕಾದ ವಿಧಾನ ಸಭಾ ಕ್ಷೇತ್ರದ ಕುರಿತ ಸುದ್ದಿಯೇ ದೊಡ್ಡದಾಗುತ್ತಿದೆಯಲ್ಲ. ಈ ಕುರಿತು ನಿಜಕ್ಕೂ ಗೊಂದಲವಿದೆಯೇ ಅಥವಾ ಗೊಂದಲವನ್ನು ಸೃಷ್ಟಿ ಮಾಡಲಾಗುತ್ತಿದೆಯೇ? ಈ ಅಂಶವನ್ನೂ ಪರಿಶೀಲಿಸಬೇಕಾಗಿದೆ.
ಸಿದ್ದರಾಮಯ್ಯನವರು ಮೊದಲ ಸಲ ಶಾಸಕರಾಗಿದ್ದು 1983ರಲ್ಲಿ, ಆಗ ಅವರು ಭಾರತೀಯ ಲೋಕದಳ ಟಿಕೆಟ್‌ನಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ, ಕಾಂಗ್ರೆಸ್‌ನ ಎಂ.ರಾಜಶೇಖರಮೂರ್ತಿಯವರನ್ನು ಸೋಲಿಸಿದರು. 1985ರ ಮಧ್ಯಂತರ ಚುನಾವಣೆಯಲ್ಲೂ ಸಿದ್ದರಾಮಯ್ಯ ಗೆದ್ದರು. ಅಷ್ಟು ಹೊತ್ತಿಗೆ ಅವರು ಜನತಾ ಪಕ್ಷ ಸೇರಿದ್ದರು. ಆದರೆ 1989ರಲ್ಲಿ ಇದೇ ಮೂರ್ತಿಯವರ ಎದುರು ಸಿದ್ದು ಸೋತರು. 1994ರಲ್ಲಿ ಮತ್ತೆ ಅದೇ ರಾಜಶೇಖರ ಮೂರ್ತಿಯವರನ್ನು ಸೋಲಿಸಿ ಸಿದ್ದು ಶಾಸಕರಾದರು. 1999ರಲ್ಲಿ ಎ.ಎಸ್.ಗುರುಸ್ವಾಮಿ ವಿರುದ್ಧ ಸಿದ್ದರಾಮಯ್ಯ ಮತ್ತೆ ಸೋಲು ಕಂಡರು.
2004ರ ಮಹಾ ಚುನಾವಣೆಯಲ್ಲಿ ಜೆಡಿ(ಎಸ್) ಅಭ್ಯರ್ಥಿಯಾಗಿ ಗೆದ್ದ ಸಿದ್ದರಾಮಯ್ಯನವರು, ಆ ಪಕ್ಷದಿಂದ ಉಚ್ಚಾಟಿತರಾದ ಕಾರಣ ಕಾಂಗ್ರೆಸ್ ಸೇರಿ, 2006ರ ಮಧ್ಯಂತರ ಚುನಾವಣೆಯಲ್ಲಿ ಕಾಂಗ್ರೆಸ್ ಉಮೇದುವಾರರಾಗಿ ಗೆದ್ದರು, ಆಗ ಅವರ ಗೆಲುವಿನ ಅಂತರ ಕೇವಲ 257, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಬಲವಾದ ಪ್ರಚಾರದ ಎದುರು ಗೆದ್ದದ್ದೇ ಒಂದು ಸಾಧನೆ ಎನ್ನಬೇಕು.
2008ರಲ್ಲಿ ಹೊಸದಾಗಿ ಸೃಜಿಸಲಾದ ವರುಣಾ ವಿಧಾನ ಸಭಾ ಕ್ಷೇತ್ರದತ್ತ ಸಿದ್ದರಾಮಯ್ಯನವರ ಚಿತ್ತ ಹರಿಯಿತು. ಅಲ್ಲಿ ಅವರು ಗೆದ್ದರು. 2013ರಲ್ಲೂ ಸಿದ್ದು ಅಲ್ಲಿ ಗೆದ್ದರು. 2008ರಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ರೇವಣಸಿದ್ದಯ್ಯ 2013ರಲ್ಲಿ ಯಡಿಯೂರಪ್ಪ ಭಂಟ ಕಾಪು ಸಿದ್ಧಲಿಂಗಸ್ವಾಮಿ ಇವರ ಎದುರಾಳಿಗಳು. ತಮಗೆ ಅತ್ಯಂತ ಸುರಕ್ಷಿತ ಎಂಬಂತಿರುವ ವರುಣಾ ಕ್ಷೇತ್ರವನ್ನು 2018ರಲ್ಲಿ ಸಿದ್ದರಾಮಯ್ಯ ಮಗ ಡಾ.ಯತೀಂದ್ರ ಅವರಿಗೆ ಕೊಟ್ಟು ಗೆಲ್ಲಿಸಿಕೊಂಡರು.
2018ರ ವಿಧಾನ ಸಭಾ ಚುನಾವಣೆಯಲ್ಲಿ ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳೆರಡರಲ್ಲೂ ಕಣಕ್ಕಿಳಿದ ಸಿದ್ದು ಜೆಡಿಎಸ್‌ನ ಜಿ.ಟಿ.ದೇವೇಗೌಡರ ಎದುರು ಸೋತರು, ಆದರೆ ಬಾದಾಮಿಯಲ್ಲಿ ಸಚಿವ ಶ್ರೀರಾಮುಲು ವಿರುದ್ಧ 1696 ಓಟುಗಳಿಂದ ಗೆಲುವು ಕಂಡರು. 2004ರಲ್ಲಿ 1ಲಕ್ಷದ 15 ಸಾವಿರದಷ್ಟು ದೊಡ್ಡ ಮೊತ್ತದ ಓಟು ಪಡೆದಿದ್ದ ಸಿದ್ದರಾಮಯ್ಯನವರು ಈ ಸಲ ಚಾಮುಂಡೇಶ್ವರಿಯಲ್ಲಿ 36 ಸಾವಿರ ಓಟುಗಳ ಅಂತರದಲ್ಲಿ ಸೋತುಬಿಟ್ಟರು. ಗೆಲುವು ಕಷ್ಟ ಅಂತ ಗೊತ್ತಿದ್ದೂ ಅಲ್ಲಿ ಕಣಕ್ಕಿಳಿದದ್ದು ಸಿದ್ದು ಕೆಪಾಸಿಟಿ ಅಂತೀರಾ.
ಕೇವಲ 1696 ಓಟುಗಳಲ್ಲಿ ಗೆಲ್ಲಬೇಕಾಗಿ ಬಂದ ಬಾದಾಮಿ ವರುಣಾದಷ್ಟು ಸುರಕ್ಷಿತವಲ್ಲ, ಜೊತೆಗೆ ರಾಜಧಾನಿಗೆ ಬಹಳ ದೂರ, ಒಂದು ಸಲ ಹೋಗಿ ಬರಲು ಕನಿಷ್ಟ ಮೂರು ದಿನ ಬೇಕು. ಈಗ ಚುನಾವಣೆ ನಡೆಯುವುದು ಬಿಜೆಪಿ ಸರ್ಕಾರದ ಉಸ್ತುವಾರಿಯಲ್ಲಿ. ಈ ಎಲ್ಲ ಅಂಶಗಳು ಬಾದಾಮಿ ಬೇಡ ಅಂತ ಅನ್ನುವಂತೆ ಮಾಡಿರಬೇಕು.
ಹಿಂದೆ 2004ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ವಿವೇಕದಿಂದ ಆಯ್ಕೆ ಮಾಡಿಕೊಂಡು ಬೆಂಗಳೂರು ಕೇಂದ್ರಕ್ಕೆ ಸೇರಿದ ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಗೆದ್ದರು. ಅಲ್ಲಿ ಎಸ್.ಎಂ.ಕೃಷ್ಣ ಮಹಾರಾಷ್ಟ್ರ ರಾಜ್ಯಪಾಲರಾಗಲು ತೊರೆದು ಹೋದ ನಂತರದ ಉಪಚುನಾವಣೆ ಹಾಗೂ ಆನಂತರದ ಚುನಾವಣೆಗಳಲ್ಲಿ ಗೆಲ್ಲುತ್ತಲೇ ಬಂದಿರುವ ಇದೀಗ ಕಾಂಗ್ರೆಸ್‌ನಲ್ಲಿ ಸಿದ್ದು ಭಂಟ ಎನಿಸಿಕೊಂಡಿರುವ ಜಮೀರ್ ಅಹಮದ್ ಖಾನ್ “ ನೀವು ಚಾಮರಾಜಪೇಟೆಯಲ್ಲಿ ನಾಮಿನೇಶನ್‌ಗೆ ಹಾಕಿ” ಎಂದು ಸಿದ್ದರಾಮಯ್ಯನವರಿಗೆ ದುಂಬಾಲು ಬಿದ್ದಿದ್ದಾರೆ.
ಚಾಮರಾಜಪೇಟೆಯಂತೆಯೇ ಕೋಲಾರ ನಗರ ಕೂಡಾ ಕಾಂಗ್ರೆಸ್‌ಗೆ ಸುರಕ್ಷಿತ ಕ್ಷೇತ್ರ ಅಲ್ಲಿಂದ ಸ್ಪರ್ಧಿಸಿ ಎಂಬ ಸಲಹೆಯೂ ಬಂದಿದೆ. ಇದೀಗ ಚಿಕ್ಕನಾಯಕನಹಳ್ಳಿಯತ್ತ ಸಿದ್ದರಾಮಯ್ಯನವರನ್ನು ಸೆಳೆಯುವ ಪ್ರಯತ್ನ ಆರಂಭಗೊಂಡಿದೆ. ಸಿದ್ದು ಅವರನ್ನು ಚಿಕ್ಕನಾಯಕನಹಳ್ಳಿಗೆ ಆಹ್ವಾನಿಸುತ್ತಿರುವವರು ನೀಡುತ್ತಿರುವ ಕಾರಣ ಏನೇ ಇದ್ದರೂ ಅದು ಟಿ.ಬಿ.ಜಯಚಂದ್ರ ಅವರ ಶಿರಾ ಕ್ಷೇತ್ರ ಉಳಿಸಿಕೊಳ್ಳುವ ದೂ(ದು)ರಾಲೋಚನೆ ಎನ್ನುತ್ತಾರೆ ಪಕ್ಷದೊಳಗಿನ ಅವರ ಹಿತ ಶತ್ರುಗಳು.
ಹೇಗೆ ಅಂತೀರಾ, ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ 2013ರಲ್ಲಿ ಕಾಂಗ್ರೆಸ್‌ನಿಂದ ಕಾಡುಗೊಲ್ಲ ಸಮುದಾಯದ ಸಾಸಲು ಸತೀಶ್‌ಗೆ ಟಿಕೆಟ್ ಕೊಡಲಾಗಿತ್ತು. ಆ ಚುನಾವಣೆಯಲ್ಲಿ ಸತೀಶ್ 10,344 ಓಟು ಪಡೆದು ನಾಲ್ಕನೇ ಸ್ಥಾನದಲ್ಲಿ ಉಳಿದರು. ಆದರೆ, 2018ರಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಆಗ ಸಚಿವರಾಗಿದ್ದ ಶಿರಾ ಶಾಸಕ ಟಿ.ಬಿ.ಜಯಚಂದ್ರ ಅವರ ಮಗ ಸಂತೋಷ್ ಅವರನ್ನು ಕಣಕ್ಕಿಳಿಸಿದ್ದರಿಂದ ಸಾಸಲು ಸತೀಶ್ ಕಾಂಗ್ರೆಸ್ ಟಿಕೆಟ್ ವಂಚಿತರಾದರು. ಸಂತೋಷ್ ಜಯಚಂದ್ರ 45893 ಓಟು ಪಡೆದು ಕಾಂಗ್ರೆಸ್ ನಾಲ್ಕರಿಂದ ಮೂರನೇ ಸ್ಥಾನಕ್ಕೆ ಬರುವಂತೆ ಮಾಡಿದರು. ಮತ್ತು ಅದಾದ ನಂತರ ಚಿಕ್ಕನಾಯಕನಹಳ್ಳಿಯ ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ವ್ಯವಹಾರಗಳಲ್ಲಿ ಸಂತೋಷ್ ಹಾಗೂ ಜಯಚಂದ್ರ ಅವರ ಹಸ್ತಕ್ಷೇಪ ಹೆಚ್ಚುತ್ತಾ ಹೋಯಿತು. ಇದು ಈಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರೂ ಆಗಿರುವ ಸಾಸಲು ಸತೀಶ್ ರಾಜಕೀಯ ಬೆಳವಣಿಗೆಗೆ ಮಾರಕವಾಯಿತು.
2018ರಲ್ಲಿ ಟಿಕೆಟ್ ತಪ್ಪಲು ಕಾರಣರಾದ ಜಯಚಂದ್ರ ಅವರ ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ತಮಗೇಕೆ ಟಿಕೆಟ್ ಕೊಡಬಾರದು ಎಂಬ ಪ್ರಶ್ನೆಯನ್ನು ಸಾಸಲು ಸತೀಶ್ ಮಾಧ್ಯಮಗಳ ಮುಂದೆ ಎತ್ತಿದ್ದಾರೆ ಅಲ್ಲದೇ ಶಿರಾದಲ್ಲಿ ನೆಲೆಸುವ ಪ್ರಯತ್ನದಲ್ಲಿದ್ದಾರೆ. ಕಳೆದ ಎರಡು ಸಲ ಜಯಚಂದ್ರ ಸೋಲಿಗೆ ಸಾಸಲು ಸತೀಶ್ ಅವರೇ ಕಾರಣ ಎಂಬ ಸುದ್ದಿಯೂ ಪ್ರಚಾರದಲ್ಲಿದೆ. ಆದ್ದರಿಂದ ಚಿಕ್ಕನಾಯನಹಳ್ಳಿ ತಾಲೂಕಿನವರೇ ಆಗಿರುವ ತಿಮ್ಮನಹಳ್ಳಿ(ಕಾಯಿ)ಯ ಜಯಚಂದ್ರ ಅದೇ ಕ್ಷೇತ್ರದಿಂದ ಕಣಕ್ಕಿಳಿಯಬಾರದೇಕೆ ಎಂಬುದು ಸಾಸಲು ಸತೀಶ್ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿಗೆ ಸಿದ್ದರಾಮಯ್ಯನವರನ್ನು ಆಹ್ವಾನಿಸಲಾಗಿದೆ ಎಂಬುದು ಅವರ ವಿರೋಧಿಗಳ ಪಿಸುಮಾತು.
ಇನ್ನೂ ಚುನಾವಣೆಗೆ ಸಾಕಷ್ಟು ಕಾಲವಿದೆ ಎನ್ನುವವರೂ ಇದ್ದಾರೆ, ಅಯ್ಯೋ ಕಡೇ ಗಳಿಗೆಯಲ್ಲಿ ಏನು ಮಾಡಲು ಸಾಧ್ಯ, ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕಲ್ಲವೇ ಎನ್ನುವ ಜನರೂ ಉಂಟು. ಕರ್ನಾಟಕದ ವಿಧಾನ ಸಭಾ ಚುನಾವಣೆ ಲೆಕ್ಕದಲ್ಲಿ ಇರಿಸಿಕೊಂಡು ರಾಜಕೀಯ ಧ್ರುವೀಕರಣಕ್ಕೆ ಈಗ ತಾನೇ ಚಾಲನೆ ದೊರಕಿದೆ. ರಾಜಕೀಯ ಪಲ್ಲಟಗಳೇನೂ ನಡೆಯದೇ ಹೋದರೆ ಅಂದರೆ ಬಿಜೆಪಿ ಸರ್ಕಾರ ಅವಧಿಗೆ ಮುನ್ನವೇ ವಿಧಾನ ಸಭೆ ವಿಸರ್ಜಿಸಿ ಚುನಾವಣೆ ಘೋಷಿಸದೇ ಹೋದರೆ, ಮುಂದಿನ ಜನವರಿ ಹೊತ್ತಿಗೆ ಯಾರು ಯಾವ ಪಕ್ಷದಲ್ಲಿರುತ್ತಾರೆ ಎಂಬುದೇ ದೊಡ್ಡ ಆಶ್ಚರ್ಯದ ವಿದ್ಯಮಾನವಾಗಿಬಿಡುತ್ತದೆ.
ಹಾಲಿ ಆಡಳಿತ ಪಕ್ಷದಲ್ಲಿರುವ ಕೆಲವರೂ ಕಾಂಗ್ರೆಸ್ ಬರಲಿದ್ದಾರೆ, ಅವರು ನನ್ನ ಸಂಪರ್ಕದಲ್ಲಿದ್ದಾರೆ, ಆದರೆ ಯಾರ ಹೆಸರನ್ನೂ ಹೇಳುವುದಿಲ್ಲ ಎಂದಿದ್ದಾರೆ ಖುದ್ದು ಸಿದ್ದರಾಮಯ್ಯನವರು. ಇನ್ನು ಚಿಕ್ಕನಾಯಕನಹಳ್ಳಿಯ ಬಿಜೆಪಿ ಶಾಸಕರೂ ಆಗಿರುವ ಸಚಿವ ಮಾಧುಸ್ವಾಮಿಯವರು ಕಾಂಗ್ರೆಸ್‌ಗೆ ಬಂದರೆ ತಪ್ಪೇನು ಅಂತ ಕೇಳಿದ್ದಾರೆ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿರುವ ಮಾಜಿ ಶಾಸಕ ಕೆ.ಎನ್.ರಾಜಣ್ಣನವರು. ಇಂಥಾ ಸನ್ನಿವೇಶದಲ್ಲಿ ಯಾರು ಎಲ್ಲಿಗೆ ಬೇಕಾದರೂ ಚಲಿಸಲು ಸಾಕಷ್ಟು ಅವಕಾಶ ಮತ್ತು ಕಾಲಾವಕಾಶವಿರುವುದರಿಂದಾಗಿ ಸಿದ್ದರಾಮಯ್ಯನವರನ್ನು ಚಿಕ್ಕನಾಯಕನಹಳ್ಳಿಗೆ ತಗುಲಿಹಾಕುವುದರಲ್ಲಿ ಅರ್ಥವಿಲ್ಲ. ಚಾಮರಾಜಪೇಟೆ ಬೆಸ್ಟ್ ಆಪ್ಷನ್ ಅಂತ ಮೇಲ್ನೋಟಕ್ಕೇ ಅನಿಸುತ್ತದೆ. ಪ್ರಚಾರದ ಕೆಲಸವನ್ನು ಜಮೀರ್ ಅಹಮದ್ ಹೆಗಲಿಗೆ ಹೊರಿಸಿ ಸುಮ್ಮನೆ ಅಡ್ಡಾಡಿ ಬಂದರೂ ಗೆದ್ದು ಬಿಡುತ್ತಾರೆ ಸಿದ್ದರಾಮಯ್ಯನವರು. ಎಲ್ಲಾದರೂ ಸರಿ ಎಂತಾದರೂ ಸರಿ ಸಿದ್ದು ಗೆದ್ದು ಬರಲಿ ಅಂತ ಹಾರೈಸೋಣ.
ವಿಧಾನ ಸಭೆಯಲ್ಲಿ ಪಕ್ಷಗಳ ಬಲಾಬಲ
ಬಿಜೆಪಿ 121 * ಕಾಂಗ್ರೆಸ್ 69
ಪಕ್ಷೇತರ 01 * ಜೆಡಿಎಸ್ 32
ಕುಚ್ಚಂಗಿ ಪ್ರಸನ್ನ