ಒಂದು ಗಳಿಗೆ -ಕುಚ್ಚಂಗಿ ಪ್ರಸನ್ನ - ಇಂಗ್ಲೆಂಡ್ ರಾಣಿಯ ಪುಸ್ಸಿ ಕ್ಯಾಟ್ ಮತ್ತು ಮೈಸೂರು ಅರಮನೆಯ ಮುದ್ದಿನ ಸೊಕ್ಕು

ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ ಇಂಗ್ಲೆಂಡ್ ರಾಣಿಯ ಪುಸ್ಸಿ ಕ್ಯಾಟ್ ಮತ್ತು ಮೈಸೂರು ಅರಮನೆಯ ಮುದ್ದಿನ ಸೊಕ್ಕು

ಒಂದು ಗಳಿಗೆ -ಕುಚ್ಚಂಗಿ ಪ್ರಸನ್ನ   -  ಇಂಗ್ಲೆಂಡ್ ರಾಣಿಯ ಪುಸ್ಸಿ ಕ್ಯಾಟ್ ಮತ್ತು  ಮೈಸೂರು   ಅರಮನೆಯ ಮುದ್ದಿನ ಸೊಕ್ಕು

ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ

ಇಂಗ್ಲೆಂಡ್ ರಾಣಿಯ ಪುಸ್ಸಿ ಕ್ಯಾಟ್ ಮತ್ತು ಮೈಸೂರು ಅರಮನೆಯ ಮುದ್ದಿನ ಸೊಕ್ಕು  


ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್ 
ವೇರ್ ಹ್ಯಾವ್ ಯು ಬೀನ್ 


ಎಂಬ ಪದ್ಯ ನಮಗೆ ಐದನೇ ತರಗತಿಯ ಪಠ್ಯದಲ್ಲಿತ್ತು, ಇದು ಇಂಗ್ಲೆಂಡಿನ ಶಿಶು ಪ್ರಾಸ ಜನಪದ ಗೀತೆ, 1805ರಲ್ಲೇ ಇಂಥ ಪದ್ಯಗಳ ಸಂಕಲನ ಆ ದೇಶದಲ್ಲಿ ಪ್ರಕಟವಾಗಿತ್ತು. ಈ ಪದ್ಯವನ್ನು ಅತ್ಯಂತ ಸೃಜನಶೀಲವಾಗಿ ಕನ್ನಡಕ್ಕೆ ತಂದವರು ಚುಟುಕ ಬ್ರಹ್ಮ ಎಂಬ ಬಿರುದಾಂಕಿತ ದಿನಕರ ದೇಸಾಯಿಯವರು. ದಿನಕರ ದೇಸಾಯಿ ಕೇವಲ ಕವಿ ಮಾತ್ರವೇ ಆಗಿರಲಿಲ್ಲ. 1967ರಲ್ಲೇ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಸಂಸದರಾಗಿದ್ದವರು, ಉಳುವವನೇ ಹೊಲದೊಡೆಯ ಹೋರಾಟದಲ್ಲಿ, ಹತ್ತಿ ಗಿರಣಿ ಕಾರ್ಮಿಕರ ಪರ ಹೋರಾಡಿದ ಸರಳ ಜೀವಿ ಸಮಾಜವಾದಿ. ಇವರ ಕುರಿತು ಪ್ರತ್ಯೇಕವಾಗಿಯೇ ಬರೆಯುವಷ್ಟಿದೆ.


ಕವಿ ದಿನಕರ ದೇಸಾಯಿಯವರು ಇಂಗ್ಲೆಂಡಿನ ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್ ಪದ್ಯವನ್ನು ಕೇವಲ ಕನ್ನಡಕ್ಕೆ ಒರಟು ಅನುವಾದ ಮಾಡಲಿಲ್ಲ, ಬದಲಿಗೆ ಇಲ್ಲಿನ ನೆಲದ ಮೂಲ ಪದ್ಯವೇ ಅದೇನೋ, ನಮ್ಮ ಕನ್ನಡದ ಶಿಶು ಪ್ರಾಸವನ್ನು ಇಂಗ್ಲಿಷಿಗೆ ತೆಗೆದುಕೊಳ್ಳಲಾಗಿದೆಯೇನೋ ಎಂಬಂತೆ ಸೃಜಿಸಿದರು. 

ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ
ಎಲ್ಲಿಗೆ ಹೋಗಿದ್ದೆ
ಕರೆದರು ಇಲ್ಲ ಹಾಲು ಬೆಲ್ಲ
ಕಾಯಿಸಿ ಇಟ್ಟಿದ್ದೆ

ಕೇಳೋ ಕಳ್ಳ ಮುದ್ದಿನ ಮಳ್ಳ
ಮೈಸೂರರಮನೆಗೆ
ರಾಜನ ಸಂಗಡ ರಾಣಿಯೂ ಇದ್ದಳು
ಅಂತಃಪುರದೊಳಗೆ

ಬೆಕ್ಕೇ ಬೆಕ್ಕೇ ಬೇಗನೆ ಹೇಳೋ
ನೋಡಿದ ಆನಂದ
ರಾಣಿಯ ಮಂಚದ ಕೆಳಗೇ ಕಂಡೆನು
ಚಿಲಿಪಿಲಿ ಇಲಿಯೊಂದ 


ಇಂಗ್ಲಿಷ್ ಪದ್ಯದಲ್ಲಿ ಬ್ರಿಟನ್‌ನ ಒಂದನೇ ರಾಣಿ ಎಲಿಜûಬತ್ ಕುರಿತ ಉಲ್ಲೇಖವಿದೆ, ಆಕೆಯ ಸಿಂಹಾಸನದ ಕೆಳಗೆ ಕಂಡ ಇಲಿಯನ್ನು ಬೆದರಿಸಿಬಿಟ್ಟೆ ಎಂದು ಇಂಗ್ಲೆಂಡಿನ ಬೆಕ್ಕು ಹೇಳಿದರೆ, ಕನ್ನಡದ ಬೆಕ್ಕು ಮೈಸೂರು ಅರಮನೆಯ ಅಂತಪುರದಲ್ಲಿ ರಾಜ-ರಾಣಿಯ ಸಂಗಡ ಇದ್ದಾಗ, ಅವರ ಮಂಚದ ಕೆಳಗೆ ಇಲಿಯೊಂದನ್ನು ಕಂಡದ್ದನ್ನು ವಿವರಿಸುತ್ತದೆ. ಒಟ್ಟಾರೆ ಅರಮನೆ-ಗುರುಮನೆಗಳಲ್ಲಿ ಕೈ ಕಾಲಿಗೆ ಸೇವಕರಿದ್ದರೂ ಇಲಿಗಳನ್ನು ಇಲ್ಲದಂತೆ ಮಾಡಲು ಆಗಿರುವುದಿಲ್ಲ ಎಂಬರ್ಥವನ್ನು ಈ ಪದ್ಯ ಧ್ವನಿಸುತ್ತದೆ. 


ಕಳೆದ ವಾರ ತೀರಿಕೊಂಡ ಯುನೈಟೆಡ್ ಕಿಂಗ್‌ಡಂನ ರಾಣಿಯ ಹೆಸರು ಎಲಿಜûಬತ್-2, ಬ್ರಿಟನ್ ಇತಿಹಾಸದಲ್ಲಿ ಮುಖ್ಯವಾಗಿ ಇಂಥ ಆರು ಮಂದಿ ರಾಣಿಯರು ಆಗಿ ಹೋಗಿದ್ದಾರೆ. ಈಕೆ ಬ್ರಿಟನ್‌ಗೆ ಮಾತ್ರವಲ್ಲದೇ ಬ್ರಿಟಿಷರು ವಸಾಹತು ಮಾಡಿಕೊಂಡಿದ್ದ ಮತ್ತು ಈಗಲೂ ಅವರ ಅಂಕೆಯಲ್ಲಿರುವ ಹದಿನೈದು ದೇಶಗಳಿಗೆ ಆಕೆ ರಾಣಿಯಾಗಿದ್ದಳು. ಇಡೀ ಜಗತ್ತಿನ ಎಲ್ಲ ದೇಶಗಳೂ ಆಧುನಿಕಗೊಂಡು ಪ್ರಜಾಪ್ರಭುತ್ವ ಮಾದರಿಯ ಆಡಳಿತ ವ್ಯವಸ್ಥೆ ಹೊಂದಿರುವಾಗಲೂ ಒಂಬತ್ತನೇ ಶತಮಾನದಿಂದ ಆರಂಭಗೊAಡ ರಾಜ-ರಾಣಿಯರ ಸಾಮ್ರಾಜ್ಯಶಾಹಿ ಆಳ್ವಿಕೆ ಮಾತ್ರ ಬ್ರಿಟನ್‌ನಲ್ಲಿ ಮುಂದುವರೆದಿರುವುದು ವಿಲಕ್ಷಣ ಎನಿಸುತ್ತದೆ ಅಲ್ವಾ. ಅಲ್ಲೂ ಪ್ರಜಾಪ್ರಭುತ್ವ ಮಾದರಿ ಆಡಳಿತವಿದೆ, ಸಂವಿಧಾನವಿದೆ, ಸಾರ್ವತ್ರಿಕ ಚುನಾವಣೆಗಳು ನಡೆಯುತ್ತವೆ, ತನ್ನ ವಿರುದ್ಧ ಹತ್ತಾರು ಹಗರಣಗಳು ಇದ್ದರೂ ಬ್ರಿಟನ್ ಪ್ರಧಾನಿಯಾಗಿದ್ದ ಬೊರಿಸ್ ಜಾನ್ಸನ್ ಕಳೆದ ಜೂನ್‌ನಲ್ಲಿ ವಿಶ್ವಾಸ ಮತ ಗೆಲ್ಲುತ್ತಾನೆ, ಆದರೆ ಲೈಂಗಿಕ ಹಗರಣಗಳ ಆರೋಪಿಯಾಗಿದ್ದ ಕ್ರಿಸ್ ಪಿಂಚರ್‌ಗೆ ಬಡ್ತಿ ನೀಡಿ ಉಪ ಮುಖ್ಯ ಸಚೇತಕನನ್ನಾಗಿ ಮಾಡಿಕೊಂಡಿದ್ದನ್ನೇ ಕಡೇ ಅಸ್ತçವಾಗಿ ಬಳಸಿಕೊಂಡ ಆರ್ಥಿಕ ಇಲಾಖೆ ಛಾನ್ಸೆಲರ್ ಅಗಿದ್ದ ಭಾರತ ಮೂಲದ ರಿಷಿ ಸುನಕ್ ಮತ್ತು ಆರೋಗ್ಯ ಕಾರ್ಯದರ್ಶಿಯಾಗಿದ್ದ ಬ್ರಿಟಿಷ್ -ಪಾಕಿಸ್ತಾನಿ ಕುಟುಂಬದ ಸಾಜಿದ್ ಜಾವಿದ್ ರಾಜಿನಾಮೆ ಕೊಟ್ಟುಬಿಡುತ್ತಾರೆ. ಇವರಿಬ್ಬರನ್ನು ಅನುಸರಿಸಿ ಇಡೀ ಮಂತ್ರಿಮAಡಲದ 179 ಮಂದಿ ಸಚಿವರು ಹಾಗೂ ಕಾರ್ಯದರ್ಶಿಗಳು ರಾಜಿನಾಮೆ ಸಲ್ಲಿಸಿದ್ದರಿಂದ ಬೋರಿಸ್ ಜಾನ್ಸನ್ ಪ್ರಧಾನಿ ಪದವಿಚ್ಯುತನಾಗುತ್ತಾನೆ. ಹೊಸ ಪ್ರಧಾನಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅತ್ಯಂತ ಸಾವಧಾನವಾಗಿ ನಡೆಯುತ್ತದೆ. ಇನ್ನೇನು ನಮ್ಮ ಇನ್‌ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ- ಸುಧಾ ಮೂರ್ತಿ ಅಳಿಯ ರ‍್ಯಾಣ ಮೂಲದ ರಿಷಿ ಸುನಕ್ ಪ್ರಧಾನಿ ಆಗೇ ಬಿಟ್ಟ ಎಂಬಂತೆ ನಮ್ಮ ಟಿವಿ ಚಾನೆಲ್‌ಗಳು ಅಬ್ಬರಿಸಿ ಬೊಬ್ಬಿರಿಯುವಾಗ ಟೋರಿಗಳ ಕೃಪೆ ದೊರಕದ ಕಾರಣ, ಆಡಳಿತದಲ್ಲಿರುವ ಕನ್ಸರ್ವೇಟೀವ್ ಪಕ್ಷ ಲಿಸ್ ಟ್ರಸ್‌ಳನ್ನು ಆಯ್ಕೆ ಮಾಡುತ್ತದೆ. ಈ ಸಂಗತಿಯನ್ನು ತಿಳಿಸಿ ಪ್ರಧಾನಿ ಪದವಿಗೆ ಅಧಿಕೃತವಾಗಿ ರಾಜಿನಾಮೆ ಸಲ್ಲಿಸಲು ಬೋರಿಸ್ ಬಕಿಂಗ್ ಹ್ಯಾಂ ಅರಮನೆಗೆ ತಕ್ಷಣವೇ ಓಡುತ್ತಾರೆ. ಅದಾದ ಮರುದಿನವೇ ರಾಣಿ ಎಲಿಜûಬತ್ ತೀರಿಕೊಂಡದ್ದಕ್ಕೆ ವಿಶೇಷ ಅರ್ಥವನ್ನೇನೂ ಕಲ್ಪಿಸಬೇಕಾಗಿಲ್ಲ, ಆಕೆಗೆ ಸಾಯುವಷ್ಟು ವಯಸ್ಸಾಗಿರುತ್ತದೆ.


ನಾವೂ ಇದೇ ಬ್ರಿಟಿಷರ ಆಡಳಿತದಲ್ಲಿದ್ದೆವು, ನಮ್ಮ ಪಾರ್ಲಿಮೆಂಟ್ ಹಾಗೂ ಇಡೀ ದೇಶದ ಆಡಳಿತ ಸೂತ್ರ ಹಿಡಿದಿರುವ ಒಕ್ಕೂಟ ಸರಕಾರದ ಕೇಂದ್ರ ಸ್ಥಾನವಿರುವ ಹೊಸ ದಿಲ್ಲಿ ಕೂಡಾ ಈ ಬ್ರಿಟಿಷರ ಆಡಳಿತಾವಧಿಯಲ್ಲೇ ನಿರ್ಮಾಣವಾದದ್ದು. ಬ್ರಿಟಿಷರ ಆಡಳಿತವನ್ನು ಗುಲಾಮಗಿರಿ ಎಂದು ಕರೆದ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ವಾರ ‘ರಾಜ್’ ಪಥ್ ಅನ್ನು ‘ಕರ್ತವ್ಯ’ ಪಥ್ ಎಂದು ಹೆಸರು ಬದಲಾಯಿಸಿದರು. ವಸಾಹತುಶಾಹಿ ಆಡಳಿತದ ಗುಲಾಮೀ ಮನಸ್ಥಿತಿಯಿಂದ ಹೊರಬರಬೇಕೆಂದು ಕರೆ ನೀಡಿದ ಮರು ದಿನವೇ ಬ್ರಿಟನ್ ರಾಣಿ ನಿಧನದ ಗೌರವಾರ್ಥ ಇಡೀ ಇಂಡಿಯಾದಲ್ಲಿ ಒಂದು ದಿನ ಶೋಕಾಚರಣೆ ಮಾಡುವಂತೆ, ತ್ರಿವರ್ಣ ಧ್ವಜವನ್ನು ಎಲ್ಲೆಡೆ ಅರ್ಧ ಮಟ್ಟಕ್ಕೆ ಇಳಿಸುವಂತೆ ಆದೇಶ ಹೊರಡಿಸಿದರು. ಇಂಥ ವಿರೋಧಾಭಾಸಗಳನ್ನು ಪ್ರಶ್ನೆ ಮಾಡಿದವರು ಅರ್ಬನ್ ನಕ್ಸಲ್‌ಗಳೋ, ಯುಎಪಿಎ ಕಾಯ್ದೆಯಡಿ ಮೊಕದ್ದಮೆ ಹೂಡಲು ಅರ್ಹರಿರುವ ದೇಶ ದ್ರೋಹಿಗಳೋ ಆಗಿ ಬಿಡುವ ಅಪಾಯ ನಮ್ಮ ದೇಶದಲ್ಲಿ ಸದ್ಯಕ್ಕಿದೆ. 


ಇವತ್ತು ನಮ್ಮ ಪ್ರಧಾನಿ ಮೋದಿ ಹುಟ್ಟಿದ ದಿನ, ಇವರ ಹುಟ್ಟು ಹಬ್ಬವನ್ನು ಬಿಜೆಪಿ ಎರಡು ವಾರದ ಕಾಲ ಸೇವಾ ಪಾಕ್ಷಿಕ ಎಂದು ಆಚರಿಸುತ್ತಿದೆ. ಮೋದಿ ಹೆಸರಲ್ಲಿ ಘೋಷಿಸಿರುವ ಕಾರ್ಯಕ್ರಮಗಳಲ್ಲಿ ರಕ್ತದಾನ’ ವೊಂದನ್ನು ಬಿಟ್ಟು ಉಳಿದ ಎಲ್ಲವೂ ಸರ್ಕಾರದ ಕಾರ್ಯಕ್ರಮಗಳೇ ಆಗಿವೆ. ಮೋದಿ-ಶಾ ಹಿಡಿತಕ್ಕೆ ಸಿಕ್ಕ ಮೇಲೆ ಭಾರತೀಯ ಜನತಾ ಪಾರ್ಟಿಯೊಳಗೂ ಆಂತರಿಕ ಪ್ರಜಾಪ್ರಭುತ್ವ ಎನ್ನುವುದು ನಾಪತ್ತೆಯಾಗಿ, ಮೇಲಿಂದ ಬರುವ ಆದೇಶಗಳನ್ನು ಸುದ್ದಿಗೋಷ್ಟಿಗಳಲ್ಲಿ ಟೇಪ್ ರೆಕಾರ್ಡರ್‌ಗಳಂತೆ ಮರುನುಡಿಯುವುದೇ ಜಿಲ್ಲಾ ಘಟಕಗಳು, ತಾಲೂಕು ಘಟಕಗಳ ಕೆಲಸ ಆಗಿಬಿಟ್ಟಿದೆ. ಎಷ್ಟಾದರೂ ಶಿಸ್ತಿನ ಪಕ್ಷವಲ್ಲವೇ? 


ಇಂಥಾ ಶಿಸ್ತಿನ ಪಕ್ಷದೊಳಗೇ ಅಶಿಸ್ತು ತಾಂಡವವಾಡುತ್ತಿದೆ ಎನ್ನುವುದನ್ನು ಹುಳಿಯಾರಿನಲ್ಲಿ ಬಿಜೆಪಿಯ ಮಾಜಿ ಶಾಸಕ ಕಿರಣ್‌ಕುಮಾರ್ ಹುಟ್ಟುಹಬ್ಬ ಪ್ರತಿಧ್ವನಿಸಿದೆ. ಕಿರಣ್ ಕುಮಾರ್ ಬರುವ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಪಡೆದೇ ತೀರುತ್ತೇನೆ ಎಂದು ಪಣ ತೊಟ್ಟವರಂತೆ ಆಡುತ್ತಿದ್ದಾರೆ. ಅದು ಏನಾದರೂ ಸರಿಯೇ ಹೇಗಾದರೂ ಸರಿಯೇ ಬ್ಯಾಲೆಟ್ ಪೇಪರ್‌ನಲ್ಲಿ ನನ್ನ ಹೆಸರು ಇದ್ದೇ ಇರುತ್ತದೆ ಎನ್ನುವುದು ಕಿರಣ್ ಕುಮಾರ್ ಹಠ. ಅದರರ್ಥ ಪಕ್ಷ ‘ಬಿ’ ಫಾರಂ ಕೊಡದೇ ಹೋದರೆ ಸ್ವತಂತ್ರವಾಗಿ ಐ ಮೀನ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎನ್ನುವುದು. ಜೊತೆಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ದೊಡ್ಡ ಹೋಬಳಿ ಕೇಂದ್ರ ಹುಳಿಯಾರನ್ನು ತಾಲೂಕು ಮಾಡುವ ಘೋಷಣೆ ಬೇರೆ. ಕ್ಷೇತ್ರದ ಹಾಲಿ ಶಾಸಕರಾಗಿ 2018ರಲ್ಲಿ ಚುನಾಯಿತರಾಗಿ ಈಗ ಸಚಿವರೂ ಆಗಿರುವ ಜೆ.ಸಿ.ಮಾಧುಸ್ವಾಮಿ ಕೂಡಾ ಇದೇ ಬಿಜೆಪಿಯವರೇ ಎನ್ನುವುದೂ ನಿಮ್ಮ ಗಮನದಲ್ಲಿರಲಿ. ಹೀಗಾಗಿ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯೊಳಗೆ ಮಾಧುಸ್ವಾಮಿ ಮತ್ತು ಕಿರಣ್ ಕುಮಾರ್ ಎಂಬ ಎರಡು ಬಣಗಳ ಪರಸ್ಪರ ವಿರೋಧಿಸುವ ರಾಜಕೀಯ ಜಿದ್ದಾಜಿದ್ದಿ ಬಹಳ ವರ್ಷಗಳಿಂದ ನಡೆಯುತ್ತಿದೆ. ಅದು ಮುಂಬರುವ ಚುನಾವಣೆಯಲ್ಲಿ ಅತಿ ಘೋರ ಎನಿಸಲಿದೆ. 


ಬಿಜೆಪಿಯೊಳಗೆ ಇದೇ ಮಾಧುಸ್ವಾಮಿಯವರ ವಿರುದ್ಧ ಜಿಲ್ಲಾ ಮಟ್ಟದಲ್ಲೂ ವಿರೋಧಿಗಳಿದ್ದಾರೆ ಎಂಬುದನ್ನೂ ಕಿರಣ್ ಕುಮಾರ್ ಅವರ ಹುಟ್ಟು ಹಬ್ಬದ ಸಮಾರಂಭವೇ ಪ್ರತಿಫಲಿಸಿತು. ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಮತ್ತು ತುಮಕೂರು ಗ್ರಾಮಾಂತರದ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಸುರೇಶಗೌಡರಿಬ್ಬರನ್ನೂ ಈ ಹುಟ್ಟುಹಬ್ಬಕ್ಕೆ ಆಹ್ವಾನಿಸಲಾಗಿತ್ತು, ಆದರೆ ಜಿಲ್ಲಾ ಬಿಜೆಪಿಯ ಹಾಲಿ ಅಧ್ಯಕ್ಷರು ಮತ್ತು ಅವರ ಹೆಸರು ಎರಡೂ ನಾಪತ್ತೆಯಾಗಿತ್ತು. ವೇದಿಕೆಯಲ್ಲಿ ಸುರೇಶಗೌಡರು ಹಾಗೂ ಜಿ.ಎಸ್.ಬಸವರಾಜು ಇಬ್ಬರೂ ಚಿಕ್ಕನಾಯಕನಹಳ್ಳಿಗೆ ಹೇಮಾವತಿ ನಾಲೆ ತರುವ ಯೋಜನೆ ಮೂಲತಃ ಕಿರಣ್ ಕುಮಾರ್ ಅವರದ್ದು, ಇದು ಬರುವ ಚುನಾವಣೆಯಲ್ಲಿ ಕಿರಣ್ ಕುಮಾರ್ ಗೆಲುವಿಗೆ ಪ್ರಯೋಜನವಾಗುತ್ತದೆ ಎಂದು ಹೇಳುವ ಮೂಲಕ ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು. 


ಅದರೆ ಇದೆಂಥ ವಿಚಿತ್ರ ನೋಡಿ, ಕಿರಣ್ ಕುಮಾರ್  ಈ ಪಕ್ಷದೊಳಗಿನ ಮೂಲ ಬಿಜೆಪಿಗರು ಹಾಗೂ ಮಾಧುಸ್ವಾಮಿ ವಲಸಿಗರು ಎಂಬ ತಮ್ಮ ವಾದದ ಬೆಂಬಲಕ್ಕೆ ಮತ್ತೊಬ್ಬ ವಲಸಿಗ ಸಂಸದ ಜಿ.ಎಸ್. ಬಸವರಾಜು ಅವರನ್ನು ಕರೆತರುತ್ತಾರೆ ! ಯಾಕೆಂದರೆ ಬಸವರಾಜು ಮಾಧುಸ್ವಾಮಿ ಅವರಿಗಿಂತ ತುಸು ಮೊದಲು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದವರು, ಮಾಧುಸ್ವಾಮಿ ಯಡಿಯೂರಪ್ಪನವರು 2012ರ ಡಿಸೆಂಬರ್‌ನಲ್ಲಿ ಸ್ಥಾಪಿಸಿ 110 ಸೀಟುಗಳಲ್ಲಿ ಗೆದ್ದಿದ್ದ್ ಬಿಜೆಪಿಯನ್ನು 40 ಸೀಟುಗಳಿಗೆ ಇಳಿಸಿ, ಮಣಿಸಿದ ಅಲ್ಪಾಯು ಕೆಜೆಪಿ ಸೇರಿ, ಆ ಮೂಲಕ ಬಿಜೆಪಿಗೆ ಬಂದವರು. 


ಹಾಗಾಗಿ ಕಿರಣ್‌ಕುಮಾರ್‌ಗೆ ಮಾಧುಸ್ವಾಮಿ ಮೇಲೆ ಇಷ್ಟೊಂದು ಸಿಟ್ಟು ಇರಲು ಸಕಾರಣವೂ ಇದೆ. 2013ರ ಚುನಾವಣೆಯಲ್ಲಿ ಅಧಿಕೃತ ಬಿಜೆಪಿ ಅಭ್ಯರ್ಥಿಯಾಗಿದ್ದ ಕಿರಣ್ ಕುಮಾರ್ ಸೋಲಿಗೆ ಕೆಜೆಪಿಯಿಂದ ಕಣಕ್ಕಿಳಿದಿದ್ದ ಮಾಧುಸ್ವಾಮಿಯವರೇ ಕಾರಣ ಅಲ್ವಾ. 


ಕಿರಣ್‌ಕುಮಾರ್ ನಿಜಕ್ಕೂ ಮೂಲ ಬಿಜೆಪಿಗರು, ಇವರು ಕಳ್ಳಂಬೆಳ್ಳ ವಿಧಾನಸಭಾ ಕ್ಷೇತ್ರವಾಗಿದ್ದಾಗ 1994ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ ಎದುರು ಮೂರನೇ ಸ್ಥಾನದಲ್ಲಿ, 1999ರಲ್ಲಿ ಎರಡನೇ ಸ್ಥಾನದಲ್ಲಿ ಸೋತು, 2004ರಲ್ಲಿ 18,000ಕ್ಕೂ ಹೆಚ್ಚು ಓಟುಗಳ ಭಾರೀ ಲೀಡಿಂಗ್‌ನಿAದ ಗೆದ್ದಿದ್ದರು. ನಂತರ ಕಳ್ಳಂಬೆಳ್ಳ ಕ್ಷೇತ್ರ ಇಲ್ಲವಾಯಿತು. ಹಾಗಾಗಿ ಚಿಕ್ಕನಾಯಕನಹಳ್ಳಿಯತ್ತ ಕಿರಣ್ ಕುಮಾರ್ ಹೊರಳಿದರು. 


ಇತ್ತ ಚಿಕ್ಕನಾಯಕನಹಳ್ಳಿಯಲ್ಲಿ ಜನತಾ ಪರಿವಾರದ ಜೆ.ಸಿ.ಮಾಧುಸ್ವಾಮಿಯವರು 1989ರಿಂದಲೂ ಮತದಾರನ ಹಾವು ಏಣಿಯಾಟದಲ್ಲಿ ಸರದಿ ಪ್ರಕಾರ ನಾಲ್ಕು ಸಲ ಶಾಸಕರಾಗಿ ಚುನಾಯಿತರಾಗಿದ್ದಾರೆ. 1989 ಮತ್ತು 94ರ ಚುನಾವಣೆಯಲ್ಲಿ ಜನತಾದಳ, 1997ರ ಉಪ ಚುನಾವಣೆಯಲ್ಲಿ ಸ್ವತಂತ್ರ, 1999 , 2004 ಹಾಗೂ 2008ರ ಚುನಾವಣೆಗಳಲ್ಲಿ ಜೆಡಿ(ಯು), 2013ರಲ್ಲಿ ಕೆಜೆಪಿ ಮತ್ತು ಅಂತಿಮವಾಗಿ 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಇತಿಹಾಸ ಇವರದು. ಪಕ್ಷ, ಕಾರ್ಯಕರ್ತರು, ಪತ್ರಿಕೆಗಳು, ಟಿವಿಗಳನ್ನೆಲ್ಲ ಕೇರು ಮಾಡದೇ ಕೇವಲ ತಮ್ಮ ದಕ್ಷತೆ ಮತ್ತು ಮೇಧಾವಿತನವನ್ನೇ ಅವಲಂಬಿಸಿದ್ದು ಬರುವ ಚುನಾವಣೆಯಲ್ಲಿ ನಾನೇ ಬಿಜೆಪಿ ಅಭ್ಯರ್ಥಿ ಎಂದು ಮಾಧುಸ್ವಾಮಿ ಹೇಳುತ್ತಾರೆ. 


ಕಳ್ಳಂಬೆಳ್ಳದಿಂದ ಚಿಕ್ಕನಾಯಕನಹಳ್ಳಿಗೆ ಬಂದ ಕಿರಣ್‌ಕುಮಾರ್ 2008ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಜೆಡಿಎಸ್‌ನ ಸುರೇಶಬಾಬು ಎದುರು 29ಸಾವಿರ ಓಟುಗಳಿಂದ ಸೋಲುತ್ತಾರೆ. ಆ ಚುನಾವಣೆಯಲ್ಲಿ ಸಿಟ್ಟಿಂಗ್ ಎಂಎಲ್‌ಎ ಆಗಿದ್ದ ಜೆಡಿಯುನ ಮಾಧುಸ್ವಾಮಿಯವರು ಮೂರನೇ ಸ್ಥಾನಕ್ಕಿಳಿದು ಬಿಡುತ್ತಾರೆ. 


2013ರಲ್ಲೂ ಸುರೇಶ್ ಬಾಬು ಗೆಲ್ಲುತ್ತಾರೆ, ಆ ಚುನಾವಣೆಯಲ್ಲಿ ಮಾಧುಸ್ವಾಮಿ ರೆಬೆಲ್ ಯಡಿಯೂರಪ್ಪನವರ ಕೆಜೆಪಿ ಅಭ್ಯರ್ಥಿಯಾಗಿ 49000 ಓಟು ಪಡೆದು ರನ್ನರ್ ಅಪ್ ಆದರೆ, ಬಿಜೆಪಿಯ ಕಿರಣ್ ಕುಮಾರ್ 29000 ಓಟು ಗಳಿಸಿ ಮೂರನೇ ಸ್ಥಾನಕ್ಕೆ ಬಂದು ನಿಲ್ಲುತ್ತಾರೆ. ಹಾಗೂ ಹೀಗೂ ಚುನಾವಣೆಗಳಲ್ಲಿ ನಿರಂತರ ಸ್ಪರ್ಧಿಸುತ್ತಲೇ ಬಂದ ಕಿರಣ್‌ಕುಮಾರ್‌ಗೆ 2018ರಲ್ಲಿ ಬಿಜೆಪಿ ಟಿಕೆಟ್ ತಪ್ಪಲು ಯಡಿಯೂರಪ್ಪನವರ ಜೊತೆಗೇ ಕೆಜೆಪಿಯಿಂದ ಬಿಜೆಪಿಗೆ ಬಂದ ಮಾಧುಸ್ವಾಮಿಯವರೇ ಕಾರಣ ಎನ್ನುವುದು ವಾಸ್ತವ ಸಂಗತಿ ಎಂಬುದೇನೋ ನಿಜವಾದರೂ ಯಡಿಯೂರಪ್ಪನವರನ್ನು ಕಳೆದುಕೊಂಡ ಬಿಜೆಪಿ 2013ರಲ್ಲಿ ಅಧಿಕಾರವನ್ನೂ ಕಳೆದು ಕೊಂಡದ್ದರಿಂದ ಇಂಥ  ನಷ್ಟವನ್ನು ಕಿರಣ್ ಕುಮಾರ್ ಅನುಭವಿಸಬೇಕಾಗಿ ಬಂದಿತು ಎನ್ನುವುದೂ ಮತ್ತೊಂದು ನಿಜ. 


ಇದೇ ಸಂದರ್ಭದಲ್ಲಿ ಕರ್ನಾಟಕದ ನೈಜ ಅಹಿಂದ ಮತ್ತು ಕಾಂಗ್ರೆಸ್ಸೇತರರ ಕ್ಷೇತ್ರವಾಗೇ ಉಳಿದು ಬೆಳೆದು ಬಂದಿರುವ ಚಿಕ್ಕನಾಯಕನಹಳ್ಳಿಯ ರಾಜಕೀಯದ ಇತರ ಆಯಾಮಗಳನ್ನೂ ಗಮನಿಸಬೇಕಾಗುತ್ತದೆ. ಸ್ವಾತಂತ್ರಾö್ಯನಂತರ ಚುನಾವಣೆಗಳು ಮೊದಲ ಸಲ ನಡೆದದ್ದು 1957ರಲ್ಲಿ ಎನ್ನುವುದಾದರೆ, ಈವರೆಗೆ ನಡೆದಿರುವ 15 ವಿಧಾನ ಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿರುವುದು ಕೇವಲ ಮೂರೇ ಸಲ ಹಾಗೂ ಅರ್ಧದಷ್ಟು ಸಲ ಹಿಂದುಳಿದ ವರ್ಗದ ಅಭ್ಯರ್ಥಿಗಳೇ ಗೆದ್ದಿದ್ದಾರೆ ಎನ್ನುವುದನ್ನೂ ಗಮನಿಸಬೇಕು.


ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ನಿರೀಕ್ಷೆಗಿಂತ ಮೊದಲೇ 2023ರ ಚುನಾವಣೆಯ ಕಾವನ್ನು ಕಿರಣ್‌ಕುಮಾರ್ ಏರಿಸತೊಡಗಿದ್ದಾರೆ. 2013ರಲ್ಲಿ ಜೆಡಿಎಸ್‌ನಿಂದ ಶಾಸಕರಾಗಿದ್ದ ಸಿ.ಬಿ.ಸುರೇಶಬಾಬು ಬರುವ ಚುನಾವಣೆಯಲ್ಲಿ ಕಿರಣ್‌ಕುಮಾರ್- ಮಾಧುಸ್ವಾಮಿಯವರ ದ್ವಂದ್ವ ಯುದ್ಧದ ಲಾಭವನ್ನು ಗಿಟ್ಟಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ ಎಂದು ಹೇಳಲಾಗುತ್ತಿದೆ. ಜೊತೆಗೆ ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್‌ಗೆ ಅದರ ಪರವಾದ ಅಲೆಯಲ್ಲಿ ತೇಲಿಹೋಗಲು ಈ ಕ್ಷೇತ್ರದಲ್ಲಿ ಅಭ್ಯರ್ಥಿಯೇ ಇಲ್ಲ ಎಂಬಂಥ ಸನ್ನಿವೇಶವಿದೆ.


ಈ ಎಲ್ಲ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿಯ 2023ರ ಚುನಾವಣೆ ಹೆಚ್ಚಿನ ಮಹತ್ವ ಪಡೆದುಕೊಳ್ಳಲಿದೆ. ಜೊತೆಗೆ ಬಾದಾಮಿ ಬಹು ದೂರ, ಇಲ್ಲೇ ಎಲ್ಲಾದರೂ ಹತ್ತಿರದ ಕ್ಷೇತ್ರ ಹುಡುಕಿಕೊಳ್ಳಿ ಎಂದು ಸಿದ್ದರಾಮಯ್ಯನವರಿಗೆ ಸಲಹೆ ಮಾಡಲಾಗಿರುವ ಕ್ಷೇತ್ರಗಳ ಪಟ್ಟಿಯಲ್ಲಿ ಕೋಲಾರ, ಚಾಮರಾಜಪೇಟೆ ನಂತರ ಚಿಕ್ಕನಾಯಕನಹಳ್ಳಿ ಇದೆ. ಅಖಾಡ ರೆಡಿಯಾಗಿದೆ, ಪೈಲ್ವಾನರೂ ಕಣಕ್ಕಿಳಿಯಬೇಕಾಗಿದೆ. ಮುಂದ…., 



ಡಾ.ಸಾಸಲು ಸತೀಶ್ ಮತ್ತು  ‘ ರಾಜಕೀಯ ನ್ಯಾಯ’ 


ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ 2018ರಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾದ ಡಾ.ಸಾಸಲು ಸತೀಶ್ ಮೊನ್ನೆ 42ನೇ ಹುಟ್ಟು ಹಬ್ಬ ಆಚರಿಸಿಕೊಂಡರು. ನೆಲಮಂಗಲ ಟೋಲ್‌ನಿಂದ ಹಿರಿಯೂರು ತನಕ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುವ ಬಾಹುಬಲಿ  ಅಳತೆಯ ಪೋಸ್ಟರ್‌ಗಳಲ್ಲಿ ಹಗಲಿರುಳೂ ಮಿಂಚತೊಡಗಿದ್ದಾರೆ ಇವರು. ಅಷ್ಟೇ ಅಲ್ಲದೆ, ಹಿರಿಯೂರಿನಿಂದ ಶಿರಾವರೆಗೆ ಹಾದಿಯುದ್ದದ ಹಳ್ಳಿಗಳಲ್ಲಿ ಕೇಕ್ ಕತ್ತರಿಸುತ್ತ, ಹಾರ ಶಾಲುಗಳನ್ನು ಹಾಕಿದ ಅಭಿಮಾನಿಗಳ ಸಂಭ್ರಮ ಸ್ಥಳೀಯ ಯೂ ಟ್ಯೂಬ್ ಚಾನೆಲ್‌ಗಳಲ್ಲಿ ವೈರಲ್ ಆಗಿವೆ. 


ಮೂಲತಃ ಚಿಕ್ಕನಾಯಕನಹಳ್ಳಿಯವರಾದ 2013ರಲ್ಲಿ ಭಾರತೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ 10 ಸಾವಿರ ಚಿಲ್ಲರೆ ಓಟು ಪಡೆದು ನಾಲ್ಕನೇ ಸ್ಥಾನ ಪಡೆದಿದ್ದ ಡಾ. ಸಾಸಲು ಸತೀಶ್ ಚಿನಾಹಳ್ಳಿ ಕ್ಷೇತ್ರವನ್ನು ತೊರೆದು ಪಕ್ಕದ ಶಿರಾದಲ್ಲಿ ನೆಲೆಯೂರಿದ್ದಾರೆ. 2018ರ ಚುನಾವಣೆಯಲ್ಲಿ ಈ ಸಾಸಲು ಸತೀಶ್‌ಗೆ ಟಿಕೆಟ್ ತಪ್ಪಿಸಿ, ತಮ್ಮ ಮಗ ಸಂತೋಷ್‌ನನ್ನ ಕಣಕ್ಕಿಳಿಸಿದ್ದು ಇದೇ ಶಿರಾ ಮಾಜಿ ಶಾಸಕ ಟಿ.ಬಿ.ಜಯಚಂದ್ರ ಎನ್ನುವುದು ಅವರು ಶಿರಾ ಹೈವೇ ತಲುಪಲು ನಿಜ ಕಾರಣ. 
ಆದರೆ 2018ರಲ್ಲಿ 45 ಸಾವಿರಕ್ಕೂ ಹೆಚ್ಚು ಓಟು ಗಳಿಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿವರ್ಧನೆ ಮಾಡಿದ  ಸಂತೋಷ್ ಜಯಚಂದ್ರ ಕೂಡಾ ಮತ ಎಣಿಕೆ ನಂತರ ಚಿಕ್ಕನಾಯಕನಹಳ್ಳಿ ಕಡೆ ತಲೆ ಹಾಕಿಲ್ಲ. ಕಾರಣ ಏನು ಎಂಬುದನ್ನು ಅವರೇ ಹೇಳಬೇಕಿದೆ. 


ವಾಸ್ತವದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ಕಾಯಿ ತಿಮ್ಮನಹಳ್ಳಿಯಲ್ಲೇ ಹುಟ್ಟಿ ಬೆಳೆದ ಜಯಚಂದ್ರ ಅವರ ಸ್ವಕ್ಷೇತ್ರವಿದು ಎಂದರೆ ತಪ್ಪಿಲ್ಲ, ಆದರೆ ಅವರು ಕಳ್ಳಂಬೆಳ್ಳ ಮರುವಿಂಗಡಣೆಯಾದ ನಂತರ ಆ ಹೋಬಳಿ ಶಿರಾ ಕ್ಷೇತ್ರಕ್ಕೆ ಸೇರಿಕೊಂಡದ್ದರಿಂದ ಅವರೂ ಶಿರಾಕ್ಕೆ ಕಚ್ಚಿಕೊಂಡರು. 2008 ಹಾಗೂ 2013ರಲ್ಲಿ ಜಯಚಂದ್ರರಿಗೆ ಜಯ ನೀಡಿದ ಶಿರಾ ಓಟುದಾರರು 2018 ಹಾಗೂ 2020ರ ಉಪಚುನಾವಣೆಯಲ್ಲಿ ಪುರಸ್ಕರಿಸಿಲ್ಲ ಎಂಬುದೂ ನಿಜ. 
ಶಿರಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ತಮ್ಮ ಗೊಲ್ಲ ಸಮುದಾಯದ ಜನರೊಂದಿಗೆ ಒಡನಾಡುತ್ತ, ತಮಗೆ 2018ರಲ್ಲಿ ಚಿನಾ ಹಳ್ಳಿ ಟಿಕೆಟ್ ತಪ್ಪಲು ಕಾರಣರಾದ ಜಯಚಂದ್ರ ಅವರನ್ನು ಸೋಲಿಸಿದ್ದು ಇದೇ ಡಾ.ಸಾಸಲು ಸತೀಶ್ ಎಂದರೆ ಜಯಚಂದ್ರ ಮೇಲುಮಾತಿಗೆ ಒಪ್ಪುವುದಿಲ್ಲ ಎಂಬುದೂ ನಿಜ. ಶಿರಾ ಮತ್ತು ಚಿಕ್ಕನಾಯಕನಹಳ್ಳಿ ಎರಡರಲ್ಲೂ ಅಪ್ಪ ಮತ್ತು ಮಗ ಇಬ್ಬರಿಗೂ ಟಿಕೆಟ್ ಪಡೆಯುವಷ್ಟು ದುರಾಸೆ ಯಾಕೆ ಬೇಕಿತ್ತು ಅಂತ ಕೇಳಿದರೆ “ ಅಯ್ಯೋ , ಆ ಘಟನೆಯ ಐತಿಹಾಸಿಕ ಹಿನ್ನೆಲೆಯೇ ಬೇರೆ ಇತ್ತು” ಎನ್ನುತ್ತಾರೆ ಅವರು.


ಆದರೆ ಜಯಚಂದ್ರ ಅವರು ಕೇವಲ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣಾ ಟಿಕೆಟ್‌ಗೆ ಮಾತ್ರವೇ ಸೀಮಿತರಾಗದೇ ಸ್ಥಳೀಯ ಪಾಲಿಟಿಕ್ಸ್ನಲ್ಲಿ ಕೈಯಾಡಿಸಲು ಬಂದದ್ದು ಏಕೆ ಎನ್ನುವುದು ಸಾಸಲು ಸತೀಶ್ ಪ್ರಶ್ನೆ.


ಹೀಗಾಗಿ ಸಾಸಲು ಶಿರಾದತ್ತ ವಲಸೆ ಬಂದರು. ಮಾಜಿ ಸಚಿವ ಜೆಡಿಎಸ್‌ನ ಬಿ.ಸತ್ಯನಾರಾಯಣ ನಿಧನದ ಕಾರಣ ನಡೆದ ಉಪಚುನಾವಣೆಗೆ ಸಿದ್ದು, ಡಿಕೆ ಸೇರಿ ಎಲ್ಲ ರಾಜ್ಯ ಹಾಗೂ ಕೆಎನ್‌ಆರ್, ಪರಮೇಶ್ವರ್ ಆದಿಯಾಗಿ ಎಲ್ಲ ಜಿಲ್ಲಾ ನಾಯಕರು ಬಂದು ಕ್ಯಾನ್ವಾಸ್ ಮಾಡಿದರೂ ಜಯಚಂದ್ರ ಸೋತರು. ಎರಡು ಸಲ ಸೋತವರಿಗೆ ಮೂರನೇ ಸಲ ಟಿಕೆಟ್ ಕೊಡಬೇಕೇ ಎನ್ನುವ ಪ್ರಶ್ನೆಯನ್ನೂ ಸಾಸಲು ಮುಂದಿಡುತ್ತಾರೆ.


ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿರುವ ಡಾ.ಸಾಸಲು ಸತೀಶ್ ಕಾಡುಗೊಲ್ಲರ ಸಮುದಾಯಕ್ಕೆ ಸೇರಿದವರು. ಶಿರಾ, ಹಿರಿಯೂರು, ಹೊಸದುರ್ಗ ಸೇರಿ ಎರಡು ಜಿಲ್ಲೆಗಳ ಎಂಟತ್ತು ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಡುಗೊಲ್ಲ ಸಮುದಾಯ ರಾಜಕೀಯವಾಗಿ ನಿರ್ಣಾಯಕ ಸ್ಥಾನದಲ್ಲಿದೆ. ಹೀಗಾಗಿ ಹಿರಿಯೂರಿನಲ್ಲಿ ಮಾಜಿ ಸಚಿವ ದಿವಂಗತ ಎ.ಕೃಷ್ಣಪ್ಪನವರ ಮಗಳು ಪೂರ್ಣಿಮಾ ಶ್ರೀನಿವಾಸ್ ಬೆಂಗಳೂರಿನ ಕೆ.ಆರ್.ಪುರದಿಂದ ಬಂದು ನಿಂತು ಗೆದ್ದು ಶಾಸಕರಾಗಿದ್ದಾರೆ. ಇನ್ನು ಇಲ್ಲೇ ಆಸುಪಾಸಿನಲ್ಲಿ ಹುಟ್ಟಿಬೆಳೆದ ನನಗೆ ಕಷ್ಟವೇ ಎನ್ನುತ್ತಾರೆ ಸಾಸಲು ಸತೀಶ್. 


“ ನಾನು ರಾಜಕೀಯ ಕುಟುಂಬದಿಂದ ಅಥವಾ ಸ್ಥಿತಿವಂತ ಕುಟುಂಬದಿಂದ ಬಂದವನಲ್ಲ, ನನ್ನ ರಾಜಕೀಯ ವೈಯಕ್ತಿಕವಲ್ಲ, ಬುಡಕಟ್ಟು ನಡವಳಿಕೆಗಳ, ಇನ್ನೂ ಮುಖ್ಯವಾಹಿನಿ ಸೇರಲು ಹಿಂಜರಿಯುವ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ಜಾತಿಗೆ ‘ರಾಜಕೀಯ ನ್ಯಾಯ’ ಕೇಳುವ ಸಲುವಾಗಿ ಮಾಡುತ್ತಿರುವ ಹೋರಾಟ ನನ್ನದು. ನನ್ನಂಥ ಎಲ್ಲರನ್ನೂ ಆರಂಭದಲ್ಲಿ ರಾಜಕೀಯ ಅಸ್ಪೃಶ್ಯನಂತೆಯೇ ನೋಡಲಾಗುತ್ತದೆ. ಅದರ ಅರಿವು ನನಗಿದ. ಕಾಂಗ್ರೆಸ್‌ನಲ್ಲಿ ಯಾವುದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಲು ಅವಕಾಶವಿದೆ. ಹಾಗೇ ನನ್ನ ಸಮುದಾಯದ ಮುಖವಾಣಿಯಾಗಿ, ನಾನು ಗೆಲ್ಲಲು ಸಾಧ್ಯವಿರುವ ಶಿರಾ ಕ್ಷೇತ್ರದಿಂದ ಪಕ್ಷದ ಟಿಕೆಟ್ ಬಯಸಿದ್ದೇನೆ. ಜೊತೆಗೆ ಪಕ್ಷ ಸಂಘಟನೆ ಮಾಡುತ್ತಿದ್ದೇನೆ” ಎನ್ನುತ್ತಾರೆ.


ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ನಿಂತು ಗೆಲ್ಲುತ್ತಿರುವ ಯಾರದೂ ಸ್ವಕ್ಷೇತ್ರ ಎನ್ನುವಂತದ್ದು ಇಲ್ಲವೇ ಇಲ್ಲ, ನೋಡಿ, ಕೆ.ಎನ್.ರಾಜಣ್ಣನವರು ಮಧುಗಿರಿಯಲ್ಲಿ, ಪರಮೇಶ್ವರ ಕೊರಟಗೆರೆಯಲ್ಲಿ, ಜಯಚಂದ್ರ ಶಿರಾದಲ್ಲಿ ಹೀಗೆ ಎಲ್ಲೆಂದರೆಲ್ಲಿ ಗೆಲ್ಲುತ್ತಿಲ್ಲವೇ, ನನಗೂ ಅವಕಾಶ ಕೊಡಿ ಎನ್ನುತ್ತಾರೆ ಸಾಸಲು.


ಗೊಲ್ಲರಿರಲಿ, ಕುರುಬರರಿಲಿ ಅತಿ ಹೆಚ್ಚು ಕುರಿಗಾಹಿಗಳು ಇರುವ ಕ್ಷೇತ್ರ ಶಿರಾ, ಜೊತೆಗೆ ಶಿರಾ ಪಟ್ಟಣದಲ್ಲಿ ಮುಸ್ಲಿಮರೂ ನಿರ್ಣಾಯಕರಾಗಿದ್ದಾರೆ. ಹತ್ತಾರು ಸೂಕ್ಷö್ಮ ಮತ್ತು ಅತಿ ಸೂಕ್ಷ್ಮ ಹಿಂದುಳಿದ ಜಾತಿಗಳು ಇಲ್ಲಿವೆ. ಹೀಗಾಗಿ ಇದು ನಿಜಕ್ಕೂ ಹಿಂದುಳಿದ ವರ್ಗಗಳು ಗೆಲ್ಲಬೇಕಾದ ಕ್ಷೇತ್ರ, ಹಿಂದುಳಿದ ಜಾತಿಗಳು ಐತಿಹಾಸಿಕವಾಗಿ ಒಗ್ಗೂಡದ ಪರಿಣಾಮವಾಗಿ ಕುಂಚಿಟಿಗರು ಗೆಲ್ಲತೊಡಗಿದ್ದಾರೆ ಎನ್ನುತ್ತಾರೆ ಅವರು.


ಸಾಸಲು ಸತೀಶ್ ಕೂಡಾ ಉಡದಂತೆ ಬಿಗಿ ಪಟ್ಟು ಹಾಕಿದ್ದು, ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿಯ ಕಿರಣ್ ಕುಮಾರ್ ಹೇಳುವಂತೆಯೇ “ ಈ ಸಲ ಬ್ಯಾಲೆಟ್ ಪೇಪರ್‌ನಲ್ಲಿ ನನ್ನ ಹೆಸರು ಇದ್ದೇ ಇರುತ್ತದೆ” ಎನ್ನುತ್ತಿದ್ದಾರೆ.


ಇವರ ಮಾತಿನ ಅರ್ಥ ಬಹು ದೂರದವರೆಗೂ ಎಳೆದುಕೊಂಡು ಹೋಗುತ್ತದೆ. ಗೊಲ್ಲ ಸಮುದಾಯವನ್ನು ಪ್ರತಿನಿಧಿಸುವ ಯಾರೂ ರಾಜ್ಯ ಜೆಡಿಎಸ್‌ನಲ್ಲಿ ಇಲ್ಲ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಗೆಲುವಿನ ನಿರ್ಣಾಯಕರೆನಿಸುವ ಮತ್ತು ಇಡಿಯಾಗಿ ಓಟು ಮಾಡಬಲ್ಲ ಈ ಸಮುದಾಯದ ಪ್ರತಿನಿಧಿಯಾಗಿ ಡಾ.ಸಾಸಲು ಸತೀಶ್ ಜೆಡಿಎಸ್‌ಗೇಕೆ ಬರಬಾರದು ಎಂಬ ಪ್ರಶ್ನೆ ಆ ಪಕ್ಷದ ಉನ್ನತ ವಲಯದಲ್ಲಿ ಹರಿದಾಡುತ್ತಿದೆ. 


“ ನೀನು ಹೆದರಬೇಡ, ಯರ‍್ಯಾರೋ ಕ್ಷೇತ್ರದಲ್ಲಿ ಅಡ್ಡಾಡಿದರೇನು, ನಿನ್ನನ್ನು ಬಿಡಲು ಸಾಧ್ಯವೇ, ಒಳ್ಳೇ ತಾಲೂಕು ಪಂಚಾಯಿತಿ ಮೆಂಬರ್ ಥರ ಆಡ್ತೀಯಲ್ಲ” ಎಂದು ಜೂಂ ಮೀಟಿಂಗ್‌ನಲ್ಲಿ ಡಿ.ಕೆ.ಶಿವಕುಮಾರ್ ಜಯಚಂದ್ರರನ್ನುದ್ದೇಶಿಸಿ ಆಡಿದ ಮಾತು ಸಾಸಲು ಸತೀಶ್ ಬರ್ತ್ಡೇ ದಿನವೇ ವೈರಲ್ ಆಗುವುದಕ್ಕೂ, ಮರು ದಿನ ತಡರಾತ್ರಿ ಶಿರಾದಲ್ಲಿ ನಡೆದ ರಾಹುಲ್ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಇದೇ ಡಿ.ಕೆ.ಶಿವಕುಮಾರ್ “ ಜಯಚಂದ್ರ ಈ ಕ್ಷೇತ್ರದವರು ಮಾತ್ರವಲ್ಲ, ಅವರು ಇಡೀ ರಾಜ್ಯಕ್ಕೆ ಸೇರಿದ ನಾಯಕ, ಮತ್ತು  “ಊರಲ್ಲಿ ಹುಟ್ಟುವ ಕರುಗಳೆಲ್ಲ ಬಸವ ಆಗುವುದಿಲ್ಲ” ಎಂದು ಮಾರ್ಮಿಕವಾಗಿ ಹೇಳಿದ ಮಾತುಗಳಲ್ಲಿ ಗೂಡಾರ್ಥ ಹುಡುಕುತ್ತ ಕೂರಬೇಕಿಲ್ಲ.


ಎಲ್ಲ ರಾಜಕೀಯ ಪಕ್ಷಗಳಲ್ಲಿರುವಂತೆ ಕಾಂಗ್ರೆಸ್‌ನಲ್ಲೂ ಒಂದಕ್ಕಿಂತ ಹೆಚ್ಚು ಅಧಿಕಾರ ಕೇಂದ್ರಗಳು ಹಾಗೂ ಬಹು ಸಿಎಂ ಆಕಾಂಕ್ಷಿಗಳೂ ಇದ್ದಾರೆ. ಏಡಿಗಳಂತೆ ಪರಸ್ಪರ ಕಾಲೆಳೆಯುವುದೇ ರಾಜಕೀಯ ಎಂದು ಭಾವಿಸಿರುವವರದೇ ಬಹುಮತ ಇರುವಾಗ, ಚಿಕ್ಕನಾಯಕನಹಳ್ಳಿಯ ಬಿಜೆಪಿ ಬಣ ರಾಜಕೀಯ ಮತ್ತು ಶಿರಾದ ಕಾಂಗ್ರೆಸ್ ರಾಜಕೀಯ ಚದುರಂಗದಾಟಗಳಿಗೂ ದೂರದ ಬ್ರಿಟನ್‌ನಲ್ಲಿ ನಡೆಯುವ ರಾಜಕೀಯ ಮೇಲಾಟಗಳಿಗೂ ಅಂತದ್ದೇನೂ ವ್ಯತ್ಯಾಸ ಕಾಣುತ್ತಿಲ್ಲ ಎಂದು ಹೇಳಲು ಇಷ್ಟೆಲ್ಲ ತಿಣುಕಬೇಕಾಯಿತು.