ದಶ ದಿಕ್ಕಿಗೆ ಹಾರಾಡುವ ಹಕ್ಕಿಯು ದಿಕ್ಕು ತಪ್ಪಿದ ಪರಿ.., 

his journey in journaism

ದಶ ದಿಕ್ಕಿಗೆ ಹಾರಾಡುವ ಹಕ್ಕಿಯು ದಿಕ್ಕು ತಪ್ಪಿದ ಪರಿ.., 

ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

 
‘ ಬೆವರ ಹನಿ’ ದಿನಪತ್ರಿಕೆಯನ್ನು ಕಳೆದ ನಾಲ್ಕು ವರ್ಷಗಳಿಂದ ಓದುತ್ತಿರುವ ನಿಮಗೆ ಹಾಗೂ ಈ ಪತ್ರಿಕೆಯ ಉಸಿರು ನಿಲ್ಲದಂತೆ ಪೋಷಿಸಿಕೊಂಡು ಬಂದಿರುವ ಚಂದಾದಾರರು, ಜಾಹಿರಾತುದಾರರು ಹಾಗೂ ಹಿತೈಷಿಗಳಿಗೆ ಒಂದು ಸಂತಸದ ಸುದ್ದಿ.


ನಿಮ್ಮ ಅಚ್ಚುಮೆಚ್ಚಿನ ‘ ಬೆವರ ಹನಿ’ ದಿನಪತ್ರಿಕೆಯ ತುಮಕೂರು ಆವೃತ್ತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಗೆ ಸೇರ್ಪಡೆ ಮಾಡಿ ಕರ್ನಾಟಕ ಸರ್ಕಾರ ಕಳೆದ ವಾರ ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ ಇನ್ನು ಮುಂದೆ ತುಮಕೂರು ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಪ್ರಕಟಣೆಗಳನ್ನು ಜಾಹಿರಾತು ರೂಪದಲ್ಲಿ ‘ ಬೆವರ ಹನಿ’ ದಿನಪತ್ರಿಕೆಯಲ್ಲೂ ಪ್ರಕಟಿಸಲು ಅವಕಾಶ ದೊರಕಿದೆ. ಅಲ್ಲದೇ ವಾರ್ತಾ ಇಲಾಖೆಯು ಬಿಡುಗಡೆ ಮಾಡುವ ಜಾಹಿರಾತುಗಳೂ ‘ ಬೆವರ ಹನಿ’ ದಿನಪತ್ರಿಕೆಯಲ್ಲಿ ಪ್ರಕಟವಾಗಲಿವೆ. ಈ ಆದೇಶದಿಂದಾಗಿ ‘ ಬೆವರ ಹನಿ’ ದಿನಪತ್ರಿಕೆ ಇನ್ನಷ್ಟು ಸದೃಡವಾಗಿ ಪ್ರಕಟಣೆಯನ್ನು ಮುಂದುವರೆಸಲು ಅನುಕೂಲವಾಗುತ್ತದೆ.


 ಇಂಡಿಯಾದಂಥ ಬೆಳವಣಿಗೆ ಹೊಂದುತ್ತಿರುವ ದೇಶದಲ್ಲಿ ರೈತರು ಮತ್ತು ಪತ್ರಿಕೋದ್ಯಮಿಗಳು ಮಾತ್ರವೇ ತಮ್ಮ ಉತ್ಪನ್ನಗಳನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ರೈತರು ಮಾರುಕಟ್ಟೆಯ ವ್ಯವಸ್ಥಿತ ವಂಚನೆಯಿಂದಾಗಿ ನಷ್ಟಕ್ಕೊಳಗಾಗಿದ್ದರೆ, ಪತ್ರಿಕೆಗಳವರು ಅನಿವಾರ್ಯ ಪರಿಸ್ಥಿತಿಯಲ್ಲಿ ತಮ್ಮ ಉತ್ಪನ್ನಗಳಾದ ಪತ್ರಿಕೆಗಳನ್ನು ಪ್ರಕಟಣೆಯ ವೆಚ್ಚಕ್ಕಿಂತ ಕಡಿಮೆ ದರ ನಿಗದಿ ಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. 


ನಾನು ನಾಲ್ಕು ವರ್ಷಗಳ ಹಿಂದೆ 2018ರ ಅಕ್ಟೋಬರ್ 14ರಂದು ಪ್ರಕಟಣೆ ಆರಂಭಿಸಿದ ‘ ಬೆವರ ಹನಿ’ ದಿನಪತ್ರಿಕೆಯ ತುಮಕೂರು ಆವೃತ್ತಿಯನ್ನೇ ತೆಗೆದುಕೊಳ್ಳಿ. ಆರಂಭದಲ್ಲಿ ಪತ್ರಿಕೆಯನ್ನು ಕಪ್ಪು ಬಿಳುಪಿನಲ್ಲಿ ಮುದ್ರಿಸುತ್ತಿದ್ದೆ, ಇದೀಗ 2021ರ ಜುಲೈ 5ರಿಂದ ಬಣ್ಣದಲ್ಲಿ ಮುದ್ರಿಸಲಾಗುತ್ತಿದೆ. ಪ್ರಕಟವಾಗುತ್ತಿರುವ ನಾಲ್ಕು ಪುಟಗಳ ಪೈಕಿ ಒಂದು ಮತ್ತು ನಾಲ್ಕನೇ ಪುಟ ಬಣ್ಣದಲ್ಲೂ ಒಳ ಪುಟಗಳು ಮತ್ತೆ ಕಪ್ಪು ಬಿಳುಪಿನಲ್ಲೂ ಮುದ್ರಣಗೊಳ್ಳುತ್ತಿವೆ. ನಮ್ಮ ಮುದ್ರಣ ಯಂತ್ರದಲ್ಲಿ ಒಳಪುಟಗಳನ್ನೂ ಬಣ್ಣದಲ್ಲಿ ಮುದ್ರಿಸಲು ಅವಕಾಶವಿದೆಯಾದರೂ ಮುದ್ರಣ ವೆಚ್ಚ ಇನ್ನೂ ಹೆಚ್ಚಾಗುವ ಲೆಕ್ಕದಲ್ಲಿ ಕಪ್ಪು ಬಿಳುಪಿನಲ್ಲೇ ಕೊಡುತ್ತಿದ್ದೇವೆ.


ಹೀಗೆ ಪ್ರಕಟವಾಗುವ ದಿನಪತ್ರಿಕೆಗಳಿಗೆ ರಾಜ್ಯ ಸರ್ಕಾರ ಜಾಹಿರಾತುಗಳನ್ನು ಬಿಡುಗಡೆ ಮಾಡಲು ಕೆಲವು ಕನಿಷ್ಟ ಅರ್ಹತೆಗಳನ್ನು ಬಯಸುತ್ತದೆ. ಒಂದು ಒಂದು ದಿನಪತ್ರಿಕೆ ಕನಿಷ್ಟ ಎರಡು ವರ್ಷಗಳ ಕಾಲ ಪ್ರಕಟವಾಗಿದ್ದು ನಿರಂತರ ಪ್ರಕಟಣೆ ಮುಂದುವರೆಸಿರತಕ್ಕದ್ದು, ಹೀಗೆ ಪ್ರಕಟವಾಗುವ ದಿನಪತ್ರಿಕೆಯು ದಿನಂಪ್ರತಿ ಕನಿಷ್ಟ 2000 ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿರಬೇಕು. ಈ ಕುರಿತಂತೆ ಮುದ್ರಣ ಕಾಗದ ಮತ್ತಿತರ ಕಚ್ಚಾ ಪದಾರ್ಥ ಖರೀದಿ ಬಿಲ್‌ಗಳನ್ನು ಪ್ರಕಟಿತ ಪ್ರತಿಗಳೊಂದಿಗೆ ವಾರ್ತಾ ಇಲಾಖೆಗೆ ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕಾಗುತ್ತದೆ. ವಾರ್ತಾ ಇಲಾಖೆಯು ಪತ್ರಿಕೆಗಳು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ, ಜಿಲ್ಲಾ ಮಟ್ಟದ ಮಾಧ್ಯಮ ಪರಿಶೀಲನಾ ಸಮಿತಿ ಮುಂದಿರಿಸಿ ಅನುಮೋದನೆ ಕೋರುತ್ತದೆ. ಜಿಲ್ಲಾಧಿಕಾರಿಯವರು ಈ ಸಮಿತಿಯ ಅಧ್ಯಕ್ಷರಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸದಸ್ಯರಾಗಿರುತ್ತಾರೆ. ಈ ಸಮಿತಿ ಶಿಫಾರಸ್ಸನ್ನು ಆಧರಿಸಿ ಕೇಂದ್ರ ವಾರ್ತಾ ಇಲಾಖೆ ಪತ್ರಿಕೆಗಳನ್ನು ‘ಮಾಧ್ಯಮ ಪಟ್ಟಿ’ಗೆ ಸೇರ್ಪಡೆ ಮಾಡಿ ಆದೇಶ ಹೊರಡಿಸುತ್ತದೆ.


ಜಿಲ್ಲಾ ಮಟ್ಟದ ದಿನಪತ್ರಿಕೆಯೊಂದು ‘ಮಾಧ್ಯಮ ಪಟ್ಟಿ’ಗೆ ಸೇರ್ಪಡೆಯಾಯಿತು ಎಂದರೆ ಸಾಮಾನ್ಯವಾಗಿ ಇನ್ನು ಆ ಪತ್ರಿಕೆ ಅಕಾಲಿಕ ಮರಣವನ್ನು ಹೊಂದುವುದಿಲ್ಲ ಎಂಬುದನ್ನು ದೃಢೀಕರಿಸಿದಂತೆ. ಅಪವಾದಗಳಿಲ್ಲ ಎನ್ನುವಂತಿಲ್ಲ.


ಮಾಧ್ಯಮ ಪಟ್ಟಿಗೆ ಸೇರ್ಪಡೆಯಾದ ಕೂಡಲೇ ಇಡೀ ಪತ್ರಿಕೆಯ ಉತ್ಪಾದನಾ ಹಾಗೂ ನಿರ್ವಹಣಾ ವೆಚ್ಚದಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಜಾಹಿರಾತು ರೂಪದಲ್ಲಿ ಕೊಟ್ಟುಬಿಡುತ್ತದೆ, ಪತ್ರಿಕೆಯ ಮಾಲೀಕರು ನೆಮ್ಮದಿಯಾಗಿ ಸುಮ್ಮನಿದ್ದುಬಿಡಬಹುದು ಅಂತಲ್ಲ, ಸರ್ಕಾರ ಬಿಡುಗಡೆ ಮಾಡುವ ಜಾಹಿರಾತಿನ ಪ್ರಮಾಣ ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸವಾಗುತ್ತದೆ ಹಾಗೂ ಆಯಾ ಜಿಲ್ಲೆಯಲ್ಲಿ ಪ್ರಕಟಗೊಳ್ಳುತ್ತಿರುವ ದಿನಪತ್ರಿಕೆಗಳ ಸಂಖ್ಯೆಯನ್ನು ಆಧರಿಸಿರುತ್ತದೆ. ತುಮಕೂರು ಇತರ ಜಿಲ್ಲೆಗಳಂತೆ ಇನ್ನೂ ವಿಭಜನೆ ಆಗದೇ ಇರುವುದರಿಂದ ತುಸು ಹೆಚ್ಚಿನ ಸಂಖ್ಯೆಯ ಜಾಹಿರಾತು ಒದಗಬಹುದಷ್ಟೇ. ತುಮಕೂರು ಜಿಲ್ಲೆಯಿಂದ ಒಂದು ಪ್ರಾದೇಶಿಕ ದಿನಪತ್ರಿಕೆ ಹಾಗೂ 20ಕ್ಕೂ ಹೆಚ್ಚು ಜಿಲ್ಲಾ ಮಟ್ಟದ ದಿನಪತ್ರಿಕೆಗಳು ಪ್ರಕಟವಾಗುತ್ತಿವೆ. ಈ ಎಲ್ಲಾ ಜಿಲ್ಲಾ ಮಟ್ಟದ ದಿನಪತ್ರಿಕೆಗಳಿಗೆ ನೀಡುವ ಪ್ರತಿ ಜಾಹಿರಾತನ್ನು ಈ ಜಿಲ್ಲೆಯಿಂದ ಪ್ರಕಟವಾಗುವ ಪ್ರಾದೇಶಿಕ ದಿನಪತ್ರಿಕೆಗೆ ಕಡ್ಡಾಯವಾಗಿ ಬಿಡುಗಡೆ ಮಾಡುವಂತೆ ಸರ್ಕಾರ 2018ರಲ್ಲಿ ಆದೇಶ ಹೊರಡಿಸಿದೆ. 


ಪ್ರಜಾವಾಣಿಯಷ್ಟು ಪುಟ ವಿಸ್ತಾರವಿರುವ ನಾಲ್ಕು ಪುಟಗಳ ಒಂದು ಜಿಲ್ಲಾ ದಿನಪತ್ರಿಕೆಯನ್ನು ರಾಜ್ಯ ಸರ್ಕಾರ ನಿಗದಿ ಪಡಿಸಿದ ಪ್ರಮಾಣದಲ್ಲಿ ದಿನವೂ ಮುದ್ರಿಸಲು ತಗಲುವ ವೆಚ್ಚ ಎಷ್ಟು ಎಂಬುದನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ದಿನಕ್ಕೆ ಕನಿಷ್ಟ 2000 ಪ್ರತಿಗಳಂತೆ ತಿಂಗಳಿಗೆ ಕನಿಷ್ಟ 25 ದಿನ ಹಾಗೂ ವರ್ಷಕ್ಕೆ ಕನಿಷ್ಟ 300 ದಿನ ಪ್ರಕಟಿಸಬೇಕು, ಅಂದರೆ 2000/300 = 6 ಲಕ್ಷ ಪ್ರತಿಗಳು ಅಂದರೆ ವರ್ಷಕ್ಕೆ 12 ಮೆಟ್ರಿಕ್ ಟನ್ ನ್ಯೂಸ್ ಪ್ರಿಂಟ್ ಬೇಕಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಪ್ರತಿ ಟನ್‌ಗೆ ಕೇವಲ ರೂ.28000-31000 ಇದ್ದ ನ್ಯೂಸ್ ಪ್ರಿಂಟ್ ಕೋವಿಡ್ ಹಾಗೂ ರಶ್ಯಾ ದಾಳಿಯೇ ನೆಪ ಮತ್ತು  ಕಾರಣವಾಗಿ ಟನ್‌ಗೆ 75,000 ತಲುಪಿದೆ. ಹೀಗಾಗಿ ಕೇವಲ ಮುದ್ರಣ ಕಾಗದವೊಂದಕ್ಕೇ 9-10 ಲಕ್ಷ ರೂ. ವೆಚ್ಚವಾಗುತ್ತದೆ. ಮುದ್ರಣ ಯಂತ್ರದ ಬಂಡವಾಳ, ಪ್ಲೇಟ್, ಇಂಕ್, ಕೆಮಿಕಲ್‌ಗಳು ಹಾಗೂ ಮುದ್ರಕರು ಮತ್ತು ಸಹಾಯಕರ ಸಂಬಳ, ಜೊತೆಗೆ ವರದಿಗಾರರು, ಉಪ ಸಂಪಾದಕರು, ಪುಟ ವಿನ್ಯಾಸಕಾರರ ಸಂಬಳ, ಕಚೇರಿ,ಮುದ್ರಣಾಲಯ ಬಾಡಿಗೆ, ವಿದ್ಯುತ್ ಬಿಲ್, ಇಂಟರ್ ನೆಟ್ ಹಾಗೂ ದೂರವಾಣಿ ಬಿಲ್, ಸಾರಿಗೆ ಇತ್ಯಾದಿ ಲೆಕ್ಕ ಹಾಕಿದರೆ ತಿಂಗಳೊAದಕ್ಕೆ ಎರಡೂವರೆಯಿಂದ ಮೂರು ಲಕ್ಷ ಖರ್ಚು ಬರುತ್ತದೆ. ವರ್ಷಕ್ಕೆ ಲೆಕ್ಕ ಮಾಡಿದರೆ 36-40 ಲಕ್ಷ ರೂ ಆಗುತ್ತದೆ. ಅಬ್ಬಾ ಎನ್ನಬೇಡಿ. ಈ ಲೆಕ್ಕದಲ್ಲಿ ಒಂದು ಪ್ರತಿಯನ್ನು ಮುದ್ರಿಸಲು ಆರು ರೂ. ತಗಲುತ್ತದೆ. ಆದರೆ ನಾವು ನಾಲ್ಕು ಪುಟಗಳ ಸ್ಥಳೀಯ ಸುದ್ದಿಗಳನ್ನು ಒಳಗೊಂಡ ಸಾಧಾರಣವಾಗಿ ಕಾಣಿಸುವ ಜಿಲ್ಲಾ ದಿನಪತ್ರಿಕೆಯ ಬಿಡಿ ಪ್ರತಿಗೆ ಆರು ರೂಪಾಯಿ ನಿಗದಿಪಡಿಸಲು, ಅದೂ 12-16 ಪುಟಗಳನ್ನು ಅತ್ಯುತ್ತಮ ನ್ಯೂಸ್ ಪ್ರಿಂಟ್‌ನಲ್ಲಿ ಮುದ್ರಿಸುವ ರಾಜ್ಯ ಮಟ್ಟದ ದಿನಪತ್ರಿಕೆಗಳು ತಮ್ಮ ಬಿಡಿ ಪ್ರತಿಯ ದರವನ್ನು ಕೇವಲ ನಾಲ್ಕರಿಂದ ಆರು ರೂಪಾಯಿ ನಿಗದಿಪಡಿಸಿರುವಾಗ ಸಾಧ್ಯವೇ. “ ಹೌದು,ಸಾಧ್ಯವಿಲ್ಲ” ಎಂದು ನೀವೇ ಹೇಳಿಬಿಡುತ್ತೀರಿ.


ಆದ್ದರಿಂದಲೇ ‘ ಬೆವರ ಹನಿ’ ಯಂಥ ನಾಲ್ಕು ಪುಟಗಳ ದಿನಪತ್ರಿಕೆಯ ಬಿಡಿ ಪ್ರತಿಗೆ ತಲಾ ಎರಡು ರೂಪಾಯಿ ಮಾತ್ರ ದರ ನಿಗದಿಪಡಿಸಲು ಸಾಧ್ಯ. ಉಳಿದ ನಾಲ್ಕು ರೂಪಾಯಿಗಳನ್ನು ಜಾಹಿರಾತು ವರಮಾನದಿಂದ ಭರಿಸಿಕೊಳ್ಳಬೇಕಾಗುತ್ತದೆ. ಆದರೆ ಕೋವಿಡ್ ಬಿಕ್ಕಟ್ಟಿನ ಬಳಿಕ ಆರ್ಥಿಕ ಕುಸಿತ ಅಥವಾ ಹಿಂಜರಿತ ಅಧಿಕೃತವಾಗಿ ಆಳ್ವಿಕೆ ನಡೆಸುತ್ತಿರುವ ಈ ಸಂದರ್ಭದಲ್ಲಿ, ಈಗಾಗಲೇ ದಶಕಗಳಿಂದ ಬೇರು ಬಿಟ್ಟುಕೊಂಡಿರುವ ಪತ್ರಿಕೆಗಳ ಆಕ್ರಮಣಕಾರಿ ಪೈಪೋಟಿ ಎದುರಿಸಿ ಇಡೀ ಪತ್ರಿಕೆಯನ್ನು ನಿಭಾಯಿಸುವಷ್ಟು ಮೊತ್ತದ ಜಾಹಿರಾತುಗಳನ್ನು ಪಡೆಯಲಾಗುವುದಿಲ್ಲ ಎನ್ನುವುದೂ ವಾಸ್ತವ ಸಂಗತಿ. ಹಾಗಿದ್ದರೆ ಅದು ಹೇಗೆ ಮತ್ತು ಏಕೆ ಪತ್ರಿಕೆಯನ್ನು ಪ್ರಕಟಿಸುತ್ತಿದ್ದೀರಾ ಎಂಬ ನಿಮ್ಮ ಪ್ರಶ್ನೆಗೆ ನಿಮಗೆ ಸಮಾಧಾನವಾಗುವಷ್ಟು ಉತ್ತರ ಕೊಡಲು ಆಗುವುದಿಲ್ಲ ಎಂಬುದು ನನ್ನ ತಿಳುವಳಿಕೆ.

 


ವಾಸ್ತವಿಕ ಚಂದಾ ವರಮಾನ ಹಾಗೂ ಜಾಹಿರಾತು ವರಮಾನ ಮೀರಿ ತಗಲುವ ವೆಚ್ಚವನ್ನು ಪೋಷಕ ಚಂದಾ, ಆಗಾಗ ಪ್ರಕಟಿಸುವ ವಿಶೇಷ ಸಂಚಿಕೆಗಳ ವರಮಾನ ಹಾಗೂ ಕೈ ಸಾಲಗಳಿಂದಾಗಿ ಭರಿಸುತ್ತಿದ್ದು ಇದೀಗ ಮಾಧ್ಯಮ ಪಟ್ಟಿ ಸೇರ್ಪಡೆಯಿಂದ ಒದಗಿ ಬರಬಹುದಾದ ಹೆಚ್ಚುವರಿ ಜಾಹಿರಾತು ಮೊತ್ತದ ನಿರೀಕ್ಷೆಯಲ್ಲಿ ನಿಭಾಯಿಸುತ್ತಿದ್ದೇನೆ. 


ನೀವು ದಿನಪತ್ರಿಕೆ ಆರಂಭಿಸಿ ಎಂದು ಇಡೀ ತುಮಕೂರು ನಗರದ ಜನರು ಕೇಳದೇ ಇದ್ದಾಗ ನೀವೇಕೆ ಪತ್ರಿಕೆ ಪ್ರಕಟಿಸಲು ಆರಂಭಿಸಿದಿರಿ ಎಂಬ ಪ್ರಶ್ನೆಗೆ ನಾನು ನೀಡುವ ಸಮಜಾಯಿಷಿ ನಿಮಗೆ ಅರ್ಥವಾದೀತು ಎಂದು ಭಾವಿಸುತ್ತೇನೆ.


ನನ್ನ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ಹೇಳಿದಾಗ ನಿಮಗೆ ಇನ್ನಷ್ಟು ಚೆನ್ನಾಗಿ ಅರ್ಥವಾದೀತು. ನಾನು ತುಮಕೂರು ನಗರದಲ್ಲೇ ಮೂರನೇ ತರಗತಿಯಿಂದಲೂ ಬೆಳೆದವನು. ಈ ನಗರಕ್ಕೆ ಕೇವಲ ಐದು ಮೈಲಿಯಷ್ಟು ಸಮೀಪದ ಕುಚ್ಚಂಗಿ ಗ್ರಾಮದಲ್ಲಿ ನಮ್ಮ ಹೊಲ, ಗದ್ದೆ ಮನೆಗಳಿದ್ದವು. ನನ್ನ ತಂದೆ ಕೆ.ಹೆಚ್.ಪುಟ್ಟಯ್ಯ ವಿಧಾನ ಸೌಧದಲ್ಲಿ ಉದ್ಯೋಗಿಯಾಗಿದ್ದು ದಿನವೂ ರೈಲಿನಲ್ಲಿ ಬೆಂಗಳೂರಿಗೆ ಹೋಗಿ ಬರುತ್ತ , ವಾರಾಂತ್ಯ ಹಾಗೂ ಇನ್ನಿತರ ರಜೆ ದಿನಗಳಲ್ಲಿ ವ್ಯವಸಾಯ ಮಾಡುತ್ತಿದ್ದರು, ಚಿಕ್ಕವನಿಂದಲೂ ನಾನು ಅವರೊಂದಿಗೇ ಊರಿಗೆ ಹೋಗಿ ಬರುತ್ತ ಶ್ರಮಜೀವಿಯಾಗಿ ರೂಪುಗೊಂಡೆ. ಜೊತೆಗೆ ತುಮಕೂರಿನ ಬಾಡಿಗೆ ಮನೆಯಲ್ಲೂ ಒಂದೆರಡು ಹಸು , ಎಮ್ಮೆ ಕಟ್ಟಿಕೊಂಡು ಕರಾವು ಮಾಡುತ್ತ ಮನೆ, ಹೊಟೆಲ್ ಗಳಿಗೆ ಹಾಲು ಹಾಕುತ್ತ ಜೀವನ ಸಾಗಿಸುತ್ತಿದ್ದ ಮಧ್ಯಮ ವರ್ಗದ ಕುಟುಂಬ ನಮ್ಮದು.


ವಿಧಾನಸೌಧದ ನೌಕರಿಯಲ್ಲಿ ಬರಬಹುದಿದ್ದ ಅಕ್ರಮ ಸಂಭಾವನೆ ಅಥವಾ ಲಂಚವನ್ನು ನಮ್ಮಪ್ಪ ಮುಟ್ಟದೇ ಇದ್ದುದರಿಂದ ಸೇವೆ ಪೂರೈಸಿ ವಯೋನಿವೃತ್ತಿ ಹೊಂದಿದರೂ ಬೆಂಗಳೂರು ಇರಲಿ ತುಮಕೂರು ನಗರದಲ್ಲೂ ಒಂದು ನಿವೇಶನ ಅಥವಾ ಮನೆಯನ್ನು ನಮ್ಮಪ್ಪ ಹೊಂದಲು ಆಗಿರಲಿಲ್ಲ ಮತ್ತು ಅದಕ್ಕಾಗಿ ಅವರಿಗೆ ವಿಷಾದವೂ ಇರಲಿಲ್ಲ.


1975-77ರಲ್ಲಿ ನಾನು ಆರು-ಏಳನೇ ತರಗತಿಯಲ್ಲಿದ್ದೆ. ಅಂದಿನ ಕಾಂಗ್ರೆಸ್ ಸರ್ಕಾರದ ಪ್ರಧಾನಮಂತ್ರಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ವಿರುದ್ಧ ನಾವು ವಾಸವಿದ್ದ ಸೋಮೇಶ್ವರ ಪುರದಲ್ಲಿ ನಡೆಯುತ್ತಿದ್ದ ಯುವಕರ ಪ್ರತಿರೋಧ, ಹೋರಾಟಗಳನ್ನು ನಾನು ಬಲು ಹತ್ತಿರದಿಂದ ಗಮನಿಸುತ್ತಿದ್ದೆ. ಮತ್ತು ಸಹಜವಾಗೇ ಎಮರ್ಜೆನ್ಸಿ ಮುಗಿದ ಮೇಲೆ ಕಾಂಗ್ರೆಸ್ ವಿರುದ್ಧದ ರಾಜಕೀಯ ವಾತಾವರಣದ ಭಾಗವಾಗಿ ರೂಪುಗೊಂಡೆ.


ಕಾಲೇಜು ದಿನಗಳಲ್ಲಿ ರೈತ- ದಲಿತ ಚಳವಳಿಯಲ್ಲಿ ಸಕ್ರಿಯವಾಗಿದ್ದವರು ಗೆಳೆಯರಾದರು, ಈ ಚಳವಳಿಗಳಿಗೆ ಆಧಾರವಾಗಿದ್ದ ಸಮಾಜವಾದಿ ವಿಚಾರದ ಸಂಪರ್ಕ ದೊರಕಿತು. ರೈತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕನಾಗಿ ಕೆಲ ವರ್ಷ ಕಾರ್ಯ ನಿರ್ವಹಿಸಿದೆ. ಪದವಿ ಓದುವಾಗ ನಾನು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಎನ್‌ಸಿಸಿ ಕೂಡಾ ನನ್ನಲ್ಲಿ ನಾಯಕತ್ವದ ಗುಣಗಳನ್ನು ಉದ್ದೀಪಿಸಿತು. ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸಿ ನಡೆಸಬೇಕೆಂಬ ಹಂಬಲ ಕಾಲೇಜು ದಿನಗಳಲ್ಲೇ ನನ್ನೊಳಗೆ ಇತ್ತು, ಅದಕ್ಕಾಗಿ ಬೇಸಿಗೆ ರಜೆಯಲ್ಲಿ ಬೆಂಗಳೂರಿನ ಗೆಳೆಯರ ಪ್ರೆಸ್ ಒಂದರಲ್ಲಿ ತರಬೇತಿಯನ್ನೂ ಪಡೆದಿದ್ದೆ.


ಪದವಿ ಮುಗಿಸಿ ಊರಿನಲ್ಲಿ ತೋಟ ನಿಭಾಯಿಸುತ್ತಿದ್ದೆ, 1988ರ ಜನವರಿಯಲ್ಲಿ ಹಿಂದಿನ ದಿನವಷ್ಟೇ ಬಿಡುಗಡೆಯಾಗಿದ್ದ ‘ಪ್ರಜಾ ಪ್ರಗತಿ’ ದಿನಪತ್ರಿಕೆಯಲ್ಲಿ ವರದಿಗಾರನಾಗಲು ಅವಕಾಶ ದೊರಕಿತು. ಆ ಪತ್ರಿಕೆಯ ಸಂಪಾದಕರೂ ಮಾಲೀಕರೂ ಆಗಿದ್ದ ಎಸ್. ನಾಗಣ್ಣನವರು ನೀಡಿದ ಮುಕ್ತ ಸ್ವಾತಂತ್ರ‍್ಯವನ್ನು ಸದುಪಯೋಗ ಪಡಿಸಿಕೊಂಡು ಪತ್ರಿಕೆಯ ಸರ್ವತೋಮುಖ ಬೆಳವಣಿಗೆಗೆ ಮುಂದಾದೆ, ನಾನೂ ಸೇರಿದಂತೆ ಐದು ಮಂದಿ ಇದ್ದ ಸಿಬ್ಬಂದಿ  ಸಂಖ್ಯೆ ಐದಾರು ಪಟ್ಟು ಹೆಚ್ಚಾಯಿತು.  ಪ್ರಸಾರ ಸಂಖ್ಯೆಯಲ್ಲೂ ಅದೇ ಪ್ರಮಾಣದ ಹೆಚ್ಚಳ ಕಂಡಿತು. ನಮ್ಮ ಹಳ್ಳಿಯ ನಮ್ಮ ಸೋದರ ಸಂಬಂಧಿಗಳನ್ನು ದೂರದ ಹಾಸನದ ‘ ಜನತಾ ಮಾಧ್ಯಮ’ ದಿನಪತ್ರಿಕೆಯಲ್ಲಿ ಇರಿಸಿ ಮೂರು ತಿಂಗಳು ತರಬೇತಿ ಕೊಡಿಸಿ, ಕರೆ ತಂದು ಪುಟ ವಿನ್ಯಾಸ ಹಾಗೂ ಮುದ್ರಣಕಾರರನ್ನಾಗಿ ಮಾಡಿಕೊಂಡೆ. ಮೈಸೂರಿನಲ್ಲಿ ಜಿಲ್ಲಾ ಪತ್ರಿಕಾ ವೃತ್ತಿಗೇ ಮಾದರಿಯಾಗಿದ್ದ ದಿ. ರಾಜಶೇಖರ ಕೋಟಿಯವರ ‘ ಆಂದೋಲನ’ ದಿನಪತ್ರಿಕೆ ಕಚೇರಿ ಹಾಗೂ ಮುದ್ರಣಾಲಯಕ್ಕೆ ಆಗಾಗ ಭೇಟಿ ಕೊಡುತ್ತಿದ್ದ ನನಗೆ ನಾನು ಕೆಲಸ ಮಾಡುತ್ತಿದ್ದ ಪತ್ರಿಕೆಯನ್ನೂ ಅದೇ ರೀತಿ ಅಭಿವೃದ್ಧಿ ಪಡಿಸಬೇಕು ಅಂತನ್ನಿಸಿ, ಸಾಂಪ್ರದಾಯಿಕ ಅಚ್ಚು ಮೊಳೆ ಜೋಡಣೆ ವಿಧಾನದಿಂದ ಆಫ್ ಸೆಟ್ ಮುದ್ರಣ ವ್ಯವಸ್ಥೆಗೆ ಶಿಫ್ಟ್ ಮಾಡಿಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾದೆ . ಹೀಗೆ ಎಂಟು ವರ್ಷ ಹಗಲಿರುಲೂ ಪರಿಶ್ರಮ ವಹಿಸಿ ಪತ್ರಿಕಾ ರಂಗ ಹಾಗೂ ಮುದ್ರಣ ತಂತ್ರಜ್ಞಾನದ ಎಲ್ಲ ಅನುಭವ ಪಡೆದೆ. 


ಪ್ರತಿ ಜಿಲ್ಲಾ ಪರಿಷತ್ ಸಭೆಯಲ್ಲೂ ಗದ್ದಲ ಎಬ್ಬಿಸಿ ಸಭೆ ಬರಕಾಸ್ತಾಗುವಂತೆ ಮಾಡುತ್ತಿದ್ದ ಭ್ರಷ್ಟಾಚಾರ ಹಗರಣಗಳ ತನಿಖಾ ವರದಿಗಳು, ಹೇಮಾವತಿ ನಾಲೆಯ ಕಳಪೆ ಕಾಮಗಾರಿ, ಸಾಕ್ಷರತಾ ಆಂದೋಲನದ ಹಗರಣಗಳು, ಕಲ್ಲು ಗಣಿ ಅಕ್ರಮಗಳು, ಮರಳು ಮಾಫಿಯಾ, ಪೊಲೀಸ್ ಲಾಕಪ್ ಡೆತ್‌ಗಳ ತನಿಖಾ ವರದಿಗಳು, ವಾಸ್ತವಕ್ಕೆ ಹತ್ತಿರವಾದ ಚುನಾವಣಾ ಸಮೀಕ್ಷೆಗಳನ್ನು ಬರೆದು ಪ್ರಕಟಿಸುತ್ತಾ ಪತ್ರಕರ್ತನ ವ್ಯಕ್ತಿತ್ವ ರೂಪಿಸಿಕೊಂಡೆ. ಇಷ್ಟು ಸಾಕು ಎನಿಸಿ, ಸಾಕಷ್ಟು ಮುಂಚಿತವಾಗಿ ತಿಳಿಸಿ ಸಂಪಾದಕರ ಪೂರ್ವಾನುಮತಿ ಪಡೆದು ಅಲ್ಲಿಂದ ಹೊರ ಬಂದೆ. ಹೀಗೆ ಏನೂ ಅಲ್ಲದ ಹಳ್ಳಿ ಹುಡುಗ ಪತ್ರಕರ್ತನಾಗಿ ರೂಪುಗೊಳ್ಳಲು ಅವಕಾಶ ನೀಡಿದ ಸಂಪಾದಕ ನಾಗಣ್ಣ ಹಾಗೂ ಶಾರದಮ್ಮ ದಂಪತಿಗೆ ಹಾಗೂ ನನ್ನೊಂದಿಗೆ ಹೆಣಗಿದ ಇಡೀ ಗೆಳೆಯರ ತಂಡಕ್ಕೆ ನಾನು ಸದಾ ರುಣಿ. 


ಹೊರಬಂದು ಸ್ವಂತ ಮುದ್ರಣಾಲಯ ಸ್ಥಾಪಿಸಿದೆ. ಒಂದು ಅಲ್ಪಾಯು ವಾರ ಪತ್ರಿಕೆ ‘ ಸುದ್ದಿ ಅಮೂಲ್ಯ’ ವನ್ನು ಆರು ತಿಂಗಳು ಹೊರ ತಂದೆ. ಬಳಿಕ ಬೆಂಗಳೂರಿನ ಸಪ್ನ ಬುಕ್ ಹೌಸ್ ನಲ್ಲಿ ಐದಾರು ತಿಂಗಳು ಪುಸ್ತಕಗಳನ್ನು ಪ್ರಕಟಿಸುವ ಸಂಪಾದಕನ ಹುದ್ದೆ, ಆನಂತರ ಹಾಸನದ ಹಿರಿಯ ಗೆಳೆಯರ ‘ ಜನತಾ ಮಾಧ್ಯಮ’ದಲ್ಲಿ ಕಾರ್ಯನಿರ್ವಹಿಸಿದೆ. ಆನಂತರ ರಾಜಧಾನಿಯಿಂದಲೂ ಪ್ರಕಟಣೆ ಆರಂಭಿಸಿದ ‘ ಜನವಾಹಿನಿ’ ದಿನಪತ್ರಿಕೆಯಲ್ಲಿ ವರದಿಗಾರ ಕಂ ಉಪ ಸಂಪಾದಕನಾಗಿ ಮೂರೂವರೆ ವರ್ಷ ಕಾರ್ಯನಿರ್ವಹಿಸಿದೆ. ಈ ಅವಧಿಯಲ್ಲಿ ವಿಧಾನ ಸಭೆ, ವಿಧಾನ ಪರಿಷತ್ತಿನ ಕಾರ್ಯಕಲಾಪಗಳಲ್ಲಿ ಎರಡೂ ಸದನಗಳ ಪತ್ರಕರ್ತರ ಗ್ಯಾಲರಿಗಲ್ಲಿ ಆಡಳಿತ ಪಕ್ಷ ವಿರೋಧ ಪಕ್ಷಗಳ ಮೊಗಸಾಲೆಗಳಲ್ಲಿ ರಾಜ್ಯ ರಾಜಕಾರಣದ ಆಪ್ತ ನೋಟ ದಕ್ಕಿತು. 


ಎಂದೋ ಬರೆದಿದ್ದ ಲೋಕ ಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ದೊರಕಿ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ನೌಕರಿ ದೊರಕಿತು. ಒಲ್ಲದ ಮನದಿಂದಲೇ ಪತ್ರಿಕಾ ವೃತ್ತಿಯನ್ನು ತೊರೆದು ವಿಧಾನ ಸೌಧ ಸೇರಿದೆ. ಬಾಲ್ಯದಿಂದ ತಂದೆಯ ಜೊತೆಗೆ ವಿಧಾನ ಸೌಧಕ್ಕೆ ಹೋಗುತ್ತಿದ್ದೆ, ‘ಜನ ವಾಹಿನಿ’ ವರದಿಗಾರನಾಗಿ ವಿಧಾನ ಸೌಧಕ್ಕೆ ಹೋಗುತ್ತಿದ್ದೆ, ಮತ್ತೆ ಉದ್ಯೋಗಿಯಾಗಿ ವಿಧಾನ ಸೌಧ ಪ್ರವೇಶ. 


16 ವರ್ಷದ ಸರಕಾರಿ ನೌಕರಿ ಸಾಕೆನಿಸಿತು, ನಡುವೆ ಎರಡು ಪುಸ್ತಕಗಳನ್ನೂ ಬರೆದೆ, ಮತ್ತೆ ಪತ್ರಕರ್ತನಾಗಲೇ ಬೇಕೆಂಬ ಹಂಬಲ ಚಿಗುರೊಡೆಯಿತು. ಹಾಗಾಗಿ 2017ರಲ್ಲಿ ಸ್ವಯಂ ನಿವೃತ್ತಿ ಪಡೆದು ಮತ್ತೆ ಪತ್ರಕರ್ತನಾಗಿ ವಿಧಾನ ಸೌಧ ಪ್ರವೇಶಿಸಿದೆ. ಕೋಲಾರದಲ್ಲಿ ಐದಾರು ವರ್ಷಗಳಿಂದ ಪ್ರಕಟವಾಗುತ್ತಿದ್ದ ‘ ಬೆವರ ಹನಿ’ ದಿನಪತ್ರಿಕೆಯ ಮಾಲಿಕತ್ವವನ್ನು ನನ್ನ ಹೆಸರಿಗೆ ವರ್ಗಾಯಿಸಿಕೊಂಡೆ. 2018ರ ಜನವರಿಯಲ್ಲಿ ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 4 ಪುಟ ಮುದ್ರಿಸಬಲ್ಲ ಕಪ್ಪು ಬಿಳುಪು ವೆಬ್ ಆಫ್ ಸೆಟ್ ಮುದ್ರಣಾಲಯ ‘ ಮೈತ್ರೇಯ ಬುದ್ಧ ಪ್ರೆಸ್’ ಸ್ಥಾಪಿಸಿದೆ. ಮೂರೇ ವರ್ಷದಲ್ಲಿ ಬಣ್ಣದ ಮುದ್ರಣಾಲಯ ಸ್ಥಾಪನೆಗೊಳ್ಳಲು ಟಿಎಂಸಿಸಿ ಅಧ್ಯಕ್ಷ ಹಾಗೂ ದಾನಿ ಡಾ. ಎನ್.ಎಸ್. ಜಯಕುಮಾರ್ ಅವರ ಪ್ರೇರಣೆಯೇ ಕಾರಣ. ತುಮಕೂರಿನಲ್ಲಿ ಮನೆ ಕಟ್ಟಲು ಸಾಲ ಕೇಳಲು ಪ್ರಸ್ತಾಪ ಇರಿಸಿದವನಿಗೆ ಮೊದಲು ಉದ್ಯಮದಲ್ಲಿ ಬೆಳೆಯಿರಿ, ಮನೆ ಇದ್ದೇ ಇರುತ್ತೆ ಎಂದವರು ಜಯಕುಮಾರ್. ಹೀಗೆ ನಿಮ್ಮ ಕಣ್ಣ ಮುಂದೆ, ಕೈಯಲ್ಲಿ ದಿನವೂ ‘ ಬೆವರ ಹನಿ’ ದಿನಪತ್ರಿಕೆ ಬಣ್ಣದಲ್ಲಿ ಬರಲು ಸಾಧ್ಯವಾಯಿತು.


ನಾಲ್ಕು ವರ್ಷಗಳಲ್ಲಿ ಪತ್ರಿಕೆ ಒಂದು ಘಟ್ಟಕ್ಕೆ ಬಂದು ತಲುಪಿದೆ, ಇಲ್ಲಿ ಹೆಸರುಗಳನ್ನು ಬರೆಯುತ್ತ ಹೋದರೆ ಮುಗಿಯಲಾರದಷ್ಟು ದೊಡ್ಡ ಪಟ್ಟಿ ಇರುವಷ್ಟು ಹಿತೈಷಿಗಳು ನನ್ನ ಈ ಕಾರ್ಯಕ್ಕೆ ತುಂಬು ಮನಸ್ಸಿನಿಂದ ತೆರೆದ ಹೃದಯದಿಂದ ಬೆಂಬಲ ಕೊಟ್ಟಿದ್ದಾರೆ. ಇವರಲ್ಲಿ ಅಕಾಲಿಕವಾಗಿ ತೀರಿ ಹೋದ ಭೂಮಿ ಬಳಗದ ಜಿ.ಎಸ್.ಸೋಮಣ್ಣನವರನ್ನು ಮರೆತರೆ,  ಮತ್ತು  ಸದಾ ನನಗೆ ನೆರಳಾಗಿ, ಮಾರ್ಗದರ್ಶಿಯಾಗಿ , ಬೆಂಬಲಕ್ಕೆ ನಿಂತಿರುವ ತನು, ಮನ, ಧನವನ್ನೆಲ್ಲ ಮೊಗೆದು ಕೊಟ್ಟಿರುವ ಸಂಗಾತಿ ನೇತ್ರಾವತಿ ಹೆಸರನ್ನು ಹೇಳದೆ ಹೋದರೆ ಕೇಡಿಗನಾಗಿಬಿಡುತ್ತೇನೆ. ಕಳೆದ ನಾಲ್ಕು ವರ್ಷಗಳಲ್ಲಿ ನನ್ನೊಂದಿಗೆ ಹೆಣಗಿದ ಮತ್ತು ಹೆಣಗುತ್ತಿರುವ ಸಿಬ್ಬಂದಿ ಗೆಳೆಯರಿಗೆ ನನ್ನ ನಮನಗಳು .


“ಮನಸೇ ಮನಸಿನ ಮನಸ ನಿಲ್ಲಿಸುವುದು
ಮನಸಿನ ಮನ ತಿಳಿಯುವ ಮನ ಬ್ಯಾರೆಲೊ ಮನಸೇ “ 


ಎಂದು ಆರಂಭಗೊಳ್ಳುವ ನಾನು ಬಹುವಾಗಿ ಮೆಚ್ಚುವ ಶಿಶುನಾಳ ಷರೀಫರ ವಚನವೊಂದರ ಮೂರನೇ ಚರಣದಲ್ಲಿ “ ದಶದಿಕ್ಕಿಗೆ ಹಾರಾಡುವ ಹಕ್ಕಿಯ ಪ್ರಸ್ತಾಪವಿದೆ. ಇಲ್ಲಿ ದಶ ದಿಕ್ಕಿಗೆ ಹಾರಾಡುವ ಹಕ್ಕಿ ನಮ್ಮ ಮನಸ್ಸಲ್ಲದೇ ಬೇರೇ ಏನೂ ಅಲ್ಲ. ಮನಸ್ಸೆಂದರೆ ಏನು, ಅದೆಲ್ಲಿದೆ ಅಂತೆಲ್ಲ ಕೇಳಿ ಗೊಂದಲ ಸೃಷ್ಟಿಸಬೇಡಿ, ಅಲೆಗಳ ಮೇಲೆ ತರಗೆಲೆಯಂತೆ ನಮ್ಮ ಬದುಕಿನ ದಿಕ್ಕನ್ನು ಅಗಾಗ ತಪ್ಪಿಸುವ ಮನಸ್ಸನ್ನು ಮರ್ಕಟ ಅಂದರೆ ಹೋಲಿಸುತ್ತಾರೆ, ಶಿವರಾಮ ಕಾರಂತರು ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು ಕುರಿತು ಬರೆಯುತ್ತಾರೆ. ಜಾಡಿನೊಳಗೇ ಬಂಡಿ ಸಾಗುವಂತೆ, ಯಾರೋ ಹಾಕಿ ಬಿಟ್ಟ ಹಳಿಗಳ ಮೇಲೆ ಉರುಳುತ್ತಾ ಹೋಗುವವರೇ ಬಹುಪಾಲು. ಹೀಗೆ ಸಿದ್ಧ ಜಾಡು, ಹಾಕಿದ ಹಳಿಗಳನ್ನು ಆಗಾಗ ದಿಡೀರನೆ ಬದಲಿಸುತ್ತ ಹೊಸ ಹಾದಿ ಕಂಡುಕೊಳ್ಳುತ್ತಿರುವೆನೆಂಬ ನನ್ನ ದಿಕ್ಕನ್ನು ಈ ದಶ ದಿಕ್ಕಿಗೆ ಹಾರಾಡುವ ಹಕ್ಕಿಯು ಬದಲಿಸದೇ ಇರಲಿ ಅಂತ ಪ್ರಾರ್ಥಿಸುವೆ.