ಸೋಮಣ್ಣನವರನ್ನ ಸೋಲೊಪ್ಪದ ಸರದಾರ ಅಂತ ಕರೆಯಬಹುದೇ?!

ಲೋಕಸಭಾ ಅಭ್ಯರ್ಥಿ ಅಂತ ಘೋಷಣೆ ಆದ ದಿನದಿಂದ ಇಲ್ಲಿಯವರೆಗೂ ಎದುರು ಪಕ್ಷ ಕಾಂಗ್ರೆಸ್‌ನ ಪ್ರತಿಸ್ಪರ್ಧೆಗಿಂತ ಪಕ್ಷದೊಳಗಿನ ವಿರೋಧಿಗಳನ್ನು ಸರಿಮಾಡಿಕೊಳ್ಳುವುದರಲ್ಲೇ ಹೆಚ್ಚಿನ ಬೆವರನ್ನು ಸೋಮಣ್ಣನವರು ಹರಿಸಬೇಕಾಗಿಬಂದಿದೆ. 73ರ ಇಳಿ ಹರೆಯದಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಡುವ ಅನಿವಾರ್ಯತೆ ಬೇಕಿರಲಿಲ್ಲ ಅಂತ ಅನ್ನಿಸಿದರೂ, ಹೋರಾಡುವುದು ಅನಿವಾರ್ಯವಾಗಿಬಿಟ್ಟಿದೆ. ಫಲಿತಾಂಶ ಏನಾದರೂ ಆಗಲಿ, ಸೋಮಣ್ಣನವರ ಆಗಮನದಿಂದಾಗಿ ಬಿರು ಬೇಸಿಗೆಯ ಉರಿಬಿಸಿಲಲ್ಲೂ ಸೋತು ಸುಣ್ಣವಾಗಿದ್ದ ಕೆಲ ದಳಪತಿಗಳೂ ಸೇರಿದಂತೆ  ನಮ್ಮೂರಿನ ಒಂದಷ್ಟು ಜನರು ತಂಪಾಗಿಬಿಟ್ಟಿದ್ದಾರೆ.

ಸೋಮಣ್ಣನವರನ್ನ ಸೋಲೊಪ್ಪದ ಸರದಾರ ಅಂತ ಕರೆಯಬಹುದೇ?!

 

99% ಲೋಕಲ್‌

ಕುಚ್ಚಂಗಿ ಪ್ರಸನ್ನ

 

     ಸೋಮಣ್ಣನವರು ತುಮಕೂರಿನಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ ಅಂತ ಗೊತ್ತಾದ ಮೇಲೆ ಪ್ರೆಸ್‌ ಕ್ಲಬ್‌ ಗ್ರೂಪ್‌ನಲ್ಲಿ ಪತ್ರಕರ್ತ ಗೆಳೆಯರೊಬ್ಬರು ಲಂಕೇಶರ ಕಾಲದ ಪ್ರಸಂಗವೊಂದನ್ನು ಬರೆದಿದ್ದರು. ಜರ್ನಲಿಸ್ಟ್‌ ಕಾಲೋನಿಯಲ್ಲಿ ವಾಸವಿದ್ದ ಲಂಕೇಶ್ ಸಮೀಪದ ಹೊಸಕೆರೆಹಳ್ಳಿ ಕೆರೆ ಏರಿ ಮೇಲೆ ದಿನವೂ ವಾಕ್‌ ಹೋಗುತ್ತಿದ್ದರಂತೆ, ಲಂಕೇಶ್‌ ಅವರ ಗಮನ ಸೆಳೆಯುವ ಸಲುವಾಗಿ ಸೋಮಣ್ಣನವರು ಚೆನ್ನಾಗಿ ಉರಿಯುತ್ತಿದ್ದ ಬೀದಿ ದೀಪವನ್ನು ಕೆಡಿಸಿ, ಲಂಕೇಶ್‌ ವಾಕ್‌ ಬರುವಾಗಲೇ ಏಣಿ ಹಾಕಿಸಿ ರಿಪೇರಿ ಮಾಡಿಸಿಕೊಟ್ಟು “ ಸೋಮಣ್ಣ ಒಳ್ಳೆ ಕೆಲಸಗಾರ ಅಂತ” ಲಂಕೇಶರಿಂದ ಹೊಗಳಿಸಿಕೊಂಡಿದ್ದರಂತೆ.  ಬಿನ್ನಿಪೇಟೆಯಲ್ಲೂ ಹಂಗೇ ಅಂತೆ, ನೀರು ನಿಲ್ಲಿಸುವಂತೆ ಸೂಚನೆ ಕೊಟ್ಟು,ನಂತರ ಇವರೇ ಗಲಾಟೆ ಮಾಡಿ ನೀರು ಬಿಡಿಸಿ , ನೋಡಿ ಸೋಮಣ್ಣ ಬಂದು ನೀರು ಬಿಡಿಸಿದರು ಅಂತಾ ಜನ ಮೆಚ್ಚುತ್ತಿದ್ದರಂತೆ.

     ಮತ್ತೊಂದು ಪ್ರಸಂಗ, 2004ರಲ್ಲಿ ಮಲ್ಲತ್ತಹಳ್ಳಿಯಲ್ಲಿ ವಾಸವಿದ್ದ ನಾವು ದಿನವೂ ವಿಧಾನಸೌಧದಿಂದ ಕೆಲಸ ಮುಗಿಸಿಕೊಂಡು ಸಂಜೆ ನಾಗರಬಾವಿ - ಮೂಡಲಪಾಳ್ಯದ ಹಾವಿನಂತ ರಸ್ತೆಯಲ್ಲಿ ಸಾಗುವಾಗ ತಲೆಗೊಂದು ಬಿಳಿ ಕ್ಯಾಪ್‌ ಹಾಕಿಕೊಂಡು, ವಿಶಲ್‌ನಿಂದ ಪೀ ಪೀ ಎನ್ನುತ್ತ ಟ್ರಾಫಿಕ್‌ ಜಾಮ್‌ ಕ್ಲಿಯರ್‌ ಮಾಡುತ್ತಿದ್ದ ಶಾಸಕ ಸೋಮಣ್ಣನವರನ್ನು ಕಂಡಿದ್ದೆವು. ಇವೆಲ್ಲ ಈಗ ಬೆಂಗಳೂರಿನ ದಂತ ಕತೆಗಳು, ಸದ್ಯಕ್ಕೆ ಒಂದು ತಿಂಗಳಿಂದ ನಮ್ಮೂರಿನಲ್ಲಿ ನೆಲೆಯಾಗಿರುವ ಮಾಜಿ ಸಚಿವ , ಹಾಲಿ ಬಿಜೆಪಿಯ ಲೋಕಸಭಾ ಅಭ್ಯರ್ಥಿ ವಿ.ಸೋಮಣ್ಣನವರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವಿದು.

    ಯಾವುದೇ ಸಾರ್ವಜನಿಕ ಕಾರ್ಯವಿದ್ದರೂ ಲಾಭ ನಷ್ಟ ಯೋಚಿಸದೇ ಮಾಡಿದ ಕೆಲಸದ ಬಗ್ಗೆ ಕೊರಗದೇ ಮುನ್ನುಗ್ಗುವ ಮೂಲ ಗುಣ ಸೋಮಣ್ಣನವರದು. ಅವರನ್ನು ಹತ್ತಿರದಿಂದ ಕಂಡ ಎಲ್ಲರಿಗೂ ಅವರ ಈ ಗುಣ ಅರಿವಾಗದೇ ಹೋಗದು. ಸೋಮಣ್ಣನವರು ಸಾಮಾನ್ಯವಾಗಿ ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ನಂಬಿದ ಮೇಲೆ ಕೈ ಬಿಡುವುದಿಲ್ಲ ಎಂಬ ನಂಬಿಕೆ ಅವರ ಆಪ್ತರಲ್ಲಿದೆ. ಇದು ನಿಜ ಎಂಬುದಕ್ಕೆ ಅವರು ವಸತಿ ಸಚಿವರಾಗಿದ್ದಾಗ ಕರ್ನಾಟಕ ಹೌಸಿಂಗ್‌ ಬೋರ್ಡ್‌ನಿಂದ ಬೋರ್ಡ್‌ ಮೀಟಿಂಗ್‌ ಮಾಡಿಸದೇ, ತಮ್ಮ 135 ಆಪ್ತರಿಗೆ ಬೆಲೆಬಾಳುವ ಪ್ಲಾಟ್‌ಗಳನ್ನು ವಿಶೇಷ ಕೆಟಗರಿಯಲ್ಲಿ ಹಂಚಿಕೆ ಮಾಡಿದ ಪ್ರಕರಣವೇ ನಿದರ್ಶನ. ಸೋಮಣ್ಣನವರು ವ್ಯಕ್ತಿಗತ ನೆರವಾದ ಬಿಡಿ ಪ್ರಕರಣಗಳಿಗೆ ಲೆಕ್ಕವೇ ಇಲ್ಲ.

    ಸತ್ಯ ಕಹಿ ಎನಿಸಿದರೂ ನೇರ ಮುಖಕ್ಕೆ ಹೊಡೆದಂತೆ ಹೇಳುವ, ಯಾರನ್ನೂ ಯಾವುದಕ್ಕೂ ಗೋಗರೆಯದೇ ಅಭಿವೃದ್ಧಿಯೇ ತಮ್ಮ ಏಕೈಕ ಗುರಿ ಎಂದು ಸಾರುವ ಸೋಮಣ್ಣ ಯಾವ ಗಾಡ್‌ ಫಾದರ್‌ಗಳಿಲ್ಲದೇ ಬೆಳೆದ ರಾಜಕಾರಣಿ. ಈಗ ತುಮಕೂರಿನ ಚುನಾವಣೆಯಲ್ಲಿ ಜೆಡಿಎಸ್‌ ಮೈತ್ರಿ ಆಗಿರುವ ಕಾರಣಕ್ಕೆ ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವನು ಎನ್ನುತ್ತಾರೆ, ಆದರೆ ಇದೇ ದೇವೇಗೌಡರು ಬಿನ್ನಿಪೇಟೆಯಿಂದ ಟಿಕೆಟ್‌ ಕೊಡದ ಕಾರಣಕ್ಕೆ ಇಂಡಿಪೆಂಡೆಂಟ್‌ ಆಗಿ ನಿಂತಿದ್ದರು ಸೋಮಣ್ಣ. 45 ವರ್ಷಗಳಿಂದ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಡುತ್ತಲೇ ಬಂದ ಸೋಮಣ್ಣನವರಿಗೆ ದಶಕಗಳಿಂದ ತುಮಕೂರು ಮತ್ತು ಸಿದ್ದಗಂಗೆಯ ನಂಟು ಇದ್ದರೂ “ಗೋ ಬ್ಯಾಕ್‌ ಸೋಮಣ್ಣ” ಎಂಬ ಘೋಷಣೆ ನ್ಯಾಶನಲ್‌ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದದ್ದನ್ನು ನೋಡಬೇಕಾಗಿ ಬಂದಿತು ಮತ್ತು ಹೊರಗಿನವರು ಅಂತ ಅನ್ನಿಸಿಕೊಳ್ಳಬೇಕಾಗಿ ಬಂದಿದೆ ಅನ್ನುವುದೇ ಅವರಿಗೆ ಬೇಸರದ ಸಂಗತಿಯಾಗಿದೆ. ಮೋದಿಯವರು ಗುಜರಾತಿನಿಂದ ಉತ್ತರ ಪ್ರದೇಶದ  ವಾರಣಾಸಿಗೆ ಬರಬಹುದು, ರಾಹುಲ್‌ ಗಾಂಧಿ ಅಮೇಥಿಯಿಂದ ಕೇರಳದ ವಯನಾಡಿಗೆ ಬರಬಹುದು,ನಾನು ಪಕ್ಕದೂರಿಗೆ ಬಂದರೆ ಏನು ಅಪರಾಧವೇ ಎನ್ನುತ್ತಾರೆ ಅವರು.

    ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಯಲವನತ್ತ ಗ್ರಾಮದ ವೀರಣ್ಣ-ಕೆಂಪಮ್ಮ ಬಡ ರೈತ ದಂಪತಿಯ ಮಗ ವಿ.ಸೋಮಣ್ಣ ಅವರ ಮನೆ ದೇವರು ಮಲೆ ಮಾದೇಶ್ವರ. ಕಳೆದ ವರ್ಷ ಚಾಮರಾಜನಗರ ಸಾಲದು ಅಂತ ಮೈಸೂರಿನ ವರುಣ ವಿಧಾನ ಸಭಾ ಕ್ಷೇತ್ರದಲ್ಲೂ ಸಿದ್ದರಾಮಯ್ಯನವರ ವಿರುದ್ಧ ಕಣಕ್ಕಿಳಿಸಿದ ಹೈಕಮಾಂಡ್‌ನ ಜೂಜಾಟಕ್ಕೆ ತಮ್ಮನ್ನು ತಾವು ದಾಳವನ್ನಾಗಿ ಮಾಡಿಕೊಂಡು ಎರಡು ಕಣ ನೆಚ್ಚಿ ಕುರುಡು ದಾಸಯ್ಯ ಕೆಟ್ಟ ಎಂಬ ಗಾದೆಯಂತೆ ಎರಡೂ ಕ್ಷೇತ್ರಗಳಿಂದ ಸೋತ ಸೋಮಣ್ಣನವರು, ವರುಣಾದಲ್ಲಿ ತಮ್ಮ ಸೋಲಿಗೆ ಪಕ್ಷದ ಉನ್ನತ ನಾಯಕರೇ ಕಾರಣ ಎಂದು ಗುಟುರು ಹಾಕಿ ದಿಲ್ಲಿ ಹೈಕಮಾಂಡ್‌ಗೆ ಲಿಖಿತ ದೂರು ಕೊಟ್ಟದ್ದನ್ನೂ ಮರೆಯುವಂತಿಲ್ಲ. ಜೊತೆಗೆ ತಮ್ಮ ಸೋಲಿಗೆ ಕಾರಣರಾದವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ ಅಂತಲೂ ಹೇಳಿದ್ದರು.

    ಹೈಸ್ಕೂಲು ಮುಗಿಸಿ ಕಾಲೇಜು ಹತ್ತುವ ಹೊತ್ತಿಗೆ ಭವಿಷ್ಯ ಅರಸಿ ಬೆಂಗಳೂರು ಸೇರುವುದು ಅವತ್ತಿನ ಕನಕಪುರ ತಾಲೂಕಿನ ಯುವಜನರಲ್ಲಿ ರೂಡಿಯಲ್ಲಿತ್ತು. ಇವತ್ತು ಉಪಮುಖ್ಯಮಂತ್ರಿ ಆಗಿರುವ ಡಿ.ಕೆ.ಶಿವಕುಮಾರ್‌ ಕೂಡಾ ಹೀಗೇ ಬೆಂಗಳೂರಿಗೆ ಬಂದು ನೆಲೆ ಕಂಡವರು. ಸೋಮಣ್ಣನವರೂ ಬೆಂಗಳೂರಿಗೆ ಬಂದರು. ಕೆ.ಕೆ.ಮೂರ್ತಿ, ಪರಮಶಿವಯ್ಯ ಮುಂತಾದ ಲಿಂಗಾಯತ ಮುಖಂಡರ ಸಂಪರ್ಕದಲ್ಲಿ ಜನತಾಬಜಾರ್‌ನಲ್ಲಿ ಸೇಲ್ಸ್‌ಮನ್‌ ಕೆಲಸಕ್ಕೂ ಸೇರಿದರು.

     ಸೋಮಣ್ಣನವರು 1983ರಲ್ಲಿ ಬಿನ್ನಿಪೇಟೆಯಿಂದ ಮಹಾನಗರಪಾಲಿಕೆ ಸದಸ್ಯರಾಗಿ ಗೆಲ್ಲುವ ಮೂಲಕ ರಾಜಕಾರಣ ಪ್ರವೇಶಿಸಿದರು. ನಂತರ ಅದೇ ಬಿನ್ನಿಪೇಟೆ ಕ್ಷೇತ್ರದಿಂದ 1994ರಲ್ಲಿ ಜನತಾದಳದಿಂದ ಗೆಲ್ಲುವುದಲ್ಲದೆ, 1996-99ರ ಅವಧಿಯಲ್ಲಿ ಸೆರೆಮನೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದರು. 1999ರಲ್ಲಿ ಜೆಡಿಎಸ್‌ ಟಿಕೆಟ್‌ ಬಿ.ಕೃಷ್ಣಪ್ಪನವರ ಪಾಲಾಗಿದ್ದರಿಂದ ಸ್ವತಂತ್ರ ಅಭ್ಯರ್ಥಿಯಾಗಿ, ನಿಂತು ಗೆದ್ದರು.  ಇವರಿಂದ ಟಿಕೆಟ್‌ ಕಸಿದುಕೊಂಡ ಎಂ.ಕೃಷ್ಣಪ್ಪ ಮೂರನೇ ಸ್ಥಾನದಲ್ಲಿ ಬಂದು ನಿಲ್ಲುತ್ತಾರೆ. ಜನತಾ ಪರಿವಾರದಿಂದ ಕಾಂಗ್ರೆಸ್‌ಗೆ ಹೋಗುವ ಸೋಮಣ್ಣನವರು 2004ರಲ್ಲಿ ಕಾಂಗ್ರೆಸ್‌ನಿಂದಲೂ ಎರಡು ಸಲ ಶಾಸಕರಾಗಿದ್ದಾರೆ, ಸಚಿವರೂ ಆಗಿದ್ದಾರೆ. ಸುಮ್ಮನೇ ಬಸ್‌ ಸ್ಟಾಪ್‌ನಲ್ಲಿ ಯಾವತ್ತೋ ಬರಬಹುದಾದ ಒಂದೇ ಬಸ್ಸಿಗೆ ಕಾಯುವ ಬದಲು, ಬಂದ ಬಸ್‌ ಹತ್ತಿ ಮುಂದಿನ ಸ್ಟಾಪ್‌ ಇಳಿಯುವುದೇ ಸರಿ ಎಂಬ ಕ್ವಿಕ್‌ ಫಿಕ್ಸ್‌ ಫಿಲಾಸಫಿ ಸೋಮಣ್ಣನವರದು.

    2008ರಲ್ಲಿ ಕ್ಷೇತ್ರ ಮರುವಿಂಗಡಣೆ ಪರಿಣಾಮ ಗೋವಿಂದರಾಜನಗರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸೋಮಣ್ಣ ಗೆಲ್ಲುತ್ತಾರೆ. ಯಡಿಯೂರಪ್ಪನವರ ದೆಸೆಯಿಂದ 2008ರ ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವುದಲ್ಲದೇ ಶಾಸಕ ಸ್ಥಾನಕ್ಕೂ ರಾಜಿನಾಮೆ ಸಲ್ಲಿಸಿಬಿಡುತ್ತಾರೆ. ಹೀಗೆ ಎರಡು ಸಲ ಶಾಸಕರನ್ನಾಗಿ ಮಾಡಿದ ಕಾಂಗ್ರೆಸ್‌ ತೊರೆದು ಬಂದ ಕಾರಣವಾಗಿ ದೊಡ್ಡ ಬಹುಮಾನವೋ ಎಂಬಂತೇ ಕೋಲಾರ ಜಿಲ್ಲೆಯ ಮಾಲೂರಿನ ಕೃಷ್ಣಯ್ಯಶೆಟ್ಟರನ್ನು ಮಂತ್ರಿ ಸ್ಥಾನದಿಂದ ಇಳಿಸಿ ಸೋಮಣ್ಣನವರನ್ನು ಮುಜರಾಯಿ ಹಾಗೂ ವಸತಿ ಸಚಿವರನ್ನಾಗಿ ಮಾಡುತ್ತಾರೆ ಯಡಿಯೂರಪ್ಪ. 2009ರ ಜೂನ್‌ 18ರಂದು ರಾಜಭವನದ ಗಾಜಿನ ಮನೆಯಲ್ಲಿ ಸೋಮಣ್ಣ ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ಪ್ರಮಾಣವಚನ ಕೈಗೊಂಡು ಗಮನಸೆಳೆಯುತ್ತಾರೆ. ಆದರೆ ಅದೇ ಗೋವಿಂದರಾಜನಗರಕ್ಕೆ 21.09.2009ರಂದು ನಡೆದ ಉಪಚುನಾವಣೆಯಲ್ಲಿ ಲೇಔಟ್‌ ಕೃಷ್ಣಪ್ಪನವರ ಮಗ ಪ್ರಿಯ ಕೃಷ್ಣ ಎದುರು ಸೋಲು ಕಾಣುತ್ತಾರೆ. ಆದರೆ ಯಡಿಯೂರಪ್ಪ ಸೋಮಣ್ಣನವರ ಕೈ ಬಿಡುವುದಿಲ್ಲ, ವಿಧಾನ ಪರಿಷತ್‌ ಸದಸ್ಯರಾಗಿ ಸಚಿವ ಸ್ಥಾನದಲ್ಲಿ ಮುಂದುವರೆಯುತ್ತಾರೆ ಸೋಮಣ್ಣ.

     2012ರ ನವೆಂಬರ್‌ 30ರಂದು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಹಾಗೂ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವ ಯಡಿಯೂರಪ್ಪನವರು 9.12.2012ರಂದು ಕರ್ನಾಟಕ ಜನತಾ ಪಕ್ಷ ಅಲಿಯಾಸ್‌ ಕೆಜೆಪಿ ಕಟ್ಟುತ್ತಾರೆ. 203 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಕೇವಲ ಆರು ಕ್ಷೇತ್ರಗಳಲ್ಲಿ ಗೆದ್ದರೂ 110 ಸೀಟುಗಳನ್ನು ಗೆದ್ದಿದ್ದ ಬಿಜೆಪಿಯನ್ನು ಕೇವಲ 40 ಸ್ಥಾನಗಳಿಗೆ ಕುಗ್ಗಿಸಿ ಹೈಕಮಾಂಡಿಗೆ ಪಾಠ ಕಲಿಸುತ್ತಾರೆ ಯಡಿಯೂರಪ್ಪ. ತುಮಕೂರಿನ ಸೊಗಡು ಶಿವಣ್ಣನವರಂತೆಯೇ ಸೋಮಣ್ಣನವರೂ ಯಡಿಯೂರಪ್ಪನವರನ್ನು ಅನುಸರಿಸಿ ಕೆಜೆಪಿಗೆ ಹೋಗದೇ ಬಿಜೆಪಿಯಲ್ಲೇ ಉಳಿದು ಬಿಡುತ್ತಾರೆ. ಆದರೆ ಕೆಜೆಪಿ ಸ್ಥಾಪಿಸಿದ ಒಂದು ವರ್ಷ ಒಂದೇ ತಿಂಗಳಲ್ಲಿ ಯಡಿಯೂರಪ್ಪ ಬಿಜೆಪಿಗೆ ವಾಪಸಾಗುತ್ತಾರೆ. ಇಂಥಾ ಕಡು ಸ್ವಾಭಿಮಾನದ ಸನ್ನಿವೇಶದಲ್ಲಿ ಸೋಮಣ್ಣ ತಮ್ಮ ಜೊತೆ ಬರದೇ ಬಿಜೆಪಿಯಲ್ಲೇ ಉಳಿದದ್ದು ಇವರಿಬ್ಬರ ನಡುವಿನ ಆಪ್ತ ಸಂಬಂಧಕ್ಕೆ ಧಕ್ಕೆಯಾಗಲು ಕಾರಣವಾಯಿತೇ ಗೊತ್ತಿಲ್ಲ.

    ಜೆಡಿಯುನಲ್ಲಿದ್ದ ಚಿಕ್ಕನಾಯಕನಹಳ್ಳಿಯ ಜೆ.ಸಿ.ಮಾಧುಸ್ವಾಮಿ ಹಾಗೂ ತುಮಕೂರಿನ ಜಿ.ಎಸ್.ಬಸವರಾಜು ಅವರು ಯಡಿಯೂರಪ್ಪನವರನ್ನು ಹಿಂಬಾಲಿಸಿ ಕೆಜೆಪಿಗೆ ಹೋಗಿದ್ದರಿಂದ ಹೆಚ್ಚು ಆಪ್ತರಾಗಿ ಉಳಿದುಕೊಳ್ಳುತ್ತಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋತು ಮನೆಯಲ್ಲಿದ್ದ ಮಾಧುಸ್ವಾಮಿ ಅವರನ್ನು ಇದೇ ಯಡಿಯೂರಪ್ಪನವರು ಲೋಕಸಭೆಗೆ ಟಿಕೆಟ್‌ ಕೊಡಿಸುತ್ತೇನೆ, ಕ್ಷೇತ್ರದಲ್ಲಿ ಓಡಾಡಿ ಅಂತ ಎಂಎಲ್‌ಎ ಜ್ಯೋತಿಗಣೇಶ್‌ ಅವರ ಮೊಬೈಲಿನಿಂದ ಕರೆ ಮಾಡಿಸಿ ಹೇಳಿದ್ದರಂತೆ, ಆದರೆ , ಚಾಮರಾಜನಗರ ಮತ್ತು ಮೈಸೂರು ಎರಡೂ ಕಡೆಯಲ್ಲಿ ಸೋತು , ಮತ್ತು ತಮ್ಮ ಸೋಲಿಗೆ ಪಕ್ಷದ ಒಳಗಿನವರೇ ಕಾರಣ ಎಂದು ಬೆಂಕಿಯಂತಾಗಿದ್ದ ಸೋಮಣ್ಣನವರು ತುಮಕೂರಿನಿಂದ ಲೋಕಸಭೆಗೆ ಇಳಿಯುತ್ತಾರೆ ಎಂಬ ಸುದ್ದಿ ಬಹಳ ಹಿಂದಿನಿಂದಲೂ ಹರಡಿತ್ತು. ಕೊಡುವುದಾದರೆ ಬೆಂಗಳೂರು ಉತ್ತರದಿಂದ ಕೊಡಿ ಅಂತ ಸೋಮಣ್ಣ ಕೇಳಿದ್ದರಂತೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೇರ ಅಮಿತ್‌ ಶಾ ಮತ್ತು ನಡ್ಡಾ ಅವರನ್ನು ಕಳೆದ ಜನವರಿ 15ರಂದು ದಿಲ್ಲಿಯಲ್ಲೇ ಭೇಟಿಯಾಗಿ, “ ನೋಡಿ ಸ್ವಾಮಿ ನನಗೆ ಯಾವುದಾದರೂ ಮೂರು ಲೋಕಸಭಾ ಕ್ಷೇತ್ರಗಳನ್ನು ವಹಿಸಿ ಕೊಡಿ, ಖರ್ಚು ಮಾಡಿ ಗೆಲ್ಲಿಸಿ ದಿಲ್ಲಿಗೆ ಕಳಿಸುತ್ತೇನೆ, ನನ್ನನ್ನು ರಾಜ್ಯಸಭೆಗೆ ನಾಮಿನೇಟ್‌ ಮಾಡಿ ಬಿಡಿ” ಅಂತ ಖಡಕ್ಕಾಗಿ ಹೇಳಿ ಬಂದಿದ್ದೇನೆ” ಅಂತಲೂ ಸೋಮಣ್ಣನವರ ಹೆಸರಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.  

     ಜೊತೆಗೆ ಎರಡು ಸಲ ಶಾಸಕರಾಗಿ ಸಚಿವರೂ ಆಗಿದ್ದ ಕಾಂಗ್ರೆಸ್‌ನತ್ತಲೂ ಸೋಮಣ್ಣನವರ ಹೆಚ್ಚು ಗಮನ ಹರಿದಿತ್ತು. ಸಿದ್ಧಗಂಗೆಯಲ್ಲಿ ಸ್ವಾಮಿಗಳಿಗೆ ಗೆಸ್ಟ್‌ ಹೌಸ್‌ ಕಟ್ಟಿಸಿ ಉದ್ಘಾಟಿಸುವ ಸಮಾರಂಭವೇ ಹೆಚ್ಚೂ ಕಮ್ಮಿ ಇವರ ಕಾಂಗ್ರೆಸ್‌ನ “ಮರಳಿ ಮನೆಗೆ” ಘೋಷಿಸುವ ಕಾರ್ಯಕ್ರಮವೇ ಆಗಲಿದೆ ಎಂಬ ಗಟ್ಟಿಮುಟ್ಟಾದ ಸುದ್ದಿಯೂ ಹರಡಿತ್ತು. 2018ರಲ್ಲಿ ಸೋಮಣ್ಣನವರ ಮಗ ಡಾ.ಅರುಣ್‌ ಗೆ ಅರಸೀಕೆರೆಯಿಂದ ಕಣಕ್ಕಿಳಿಯಿರಿ ಎಂದು ಬಿಜೆಪಿ ಹೈಕಮಾಂಡ್‌ ಹೇಳಿತ್ತಾದರೂ, ಬೆಂಗಳೂರು ಮಹಾನಗರದಲ್ಲೇ ಹುಟ್ಟಿ ಬೆಳೆದು ನೂರಾರು ಕಿಲೋ ಮೀಟರ್‌ ದೂರದ ಕಾಣದ ಊರಲ್ಲಿ ಅದೂ ಬಿಜೆಪಿ ನೆಲೆ ಕಳೆದುಕೊಂಡಿರುವ ಅರಸೀಕೆರೆಯಲ್ಲಿ ನಿಲ್ಲಲು ಡ್ಯಾಡಿ ಮತ್ತು ಸನ್‌ಗಳಿಬ್ಬರೂ ಒಪ್ಪಿರಲಿಲ್ಲ. ಅಟ್‌ ಲೀಸ್ಟ್‌ ಕಾಂಗ್ರೆಸ್‌ ಸೇರಿಕೊಂಡರೆ, ಮಗನಿಗಾದರೂ ಒಂದು ಗಟ್ಟಿ ನೆಲೆ ಆಗಬಹುದು ಎಂಬುದು ಸೋಮಣ್ಣನವರ ನಂಬಿಕೆಯಾಗಿತ್ತು. ಆದರೆ ಹೊರ ಹೋಗಲು ಹೈಕಮಾಂಡ್‌ ಬಿಡಬೇಕಲ್ಲ.

    ಯಡಿಯೂರಪ್ಪನವರ ವಿರುದ್ಧ ಬೇಕಾಬಿಟ್ಟಿ ಟೀಕೆ ಮಾಡಲು ಉತ್ತರದಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌ ಇರುವಂತೆಯೇ ದಕ್ಷಿಣದಲ್ಲಿ ಅವರಿಗೆ ಸೆಡ್ಡು ಹೊಡೆಯಲು ಅದೇ ಸಮುದಾಯದ ಒಬ್ಬ ನಾಯಕ ಅಂತ ಇದ್ದರೆ ಅದು ಸೋಮಣ್ಣ ಮಾತ್ರ ಅಂತ ದಿಲ್ಲಿ ದೊರೆಗಳಿಗೆ ಗೊತ್ತಿತ್ತಲ್ಲ. ಜೊತೆಗೆ ತುಮಕೂರಿನ ಹಾಲಿ ಎಂಪಿ ಬಸವರಾಜು ತಮ್ಮ ರುಣಭಾರ ಇಳಿಸಿಕೊಳ್ಳುವ ಜರೂರತ್ತಿನಲ್ಲಿ ಹಾಕಿದ ಒತ್ತಡ ಸೋಮಣ್ಣನವರನ್ನು ತುಮಕೂರಿಗೆ ತಂದು ಲ್ಯಾಂಡ್‌ ಮಾಡಿಬಿಟ್ಟಿತು.

    ಒಂದು ವೇಳೆ ಇಲ್ಲಿ ಗೆದ್ದರು ಅಂತ ಇಟ್ಟುಕೊಂಡರೂ ಸೋಮಣ್ಣ ಪುರ್‌ ಅಂತ ಬೆಂಗಳೂರಿಗೆ ಹಾರಿಬಿಡುತ್ತಾರೆ ಎಂಬ ಮಾತನ್ನು ಸುಳ್ಳು ಮಾಡಲೆಂದೇ ಮಾರುತಿ ನಗರದಲ್ಲಿ ಜಿಎಸ್‌ಬಿ ತೋರಿಸಿದ ಪುಟ್ಟದೊಂದು ಮನೆ ಖರೀದಿಸಿ ಮಹದೇವಪ್ಪನವರ ಸಾಲದ ಹೊರೆ ಇಳಿಸಿಬಿಟ್ಟರು ಸೋಮಣ್ಣ. ಮೊನ್ನೆ ಅದೇ ಮನೆಯನ್ನು ಸುದ್ದಿಗಾರರಿಗೆ ತೋರಿಸಲೆಂದೇ ಬ್ರೇಕ್‌ ಫಾಸ್ಟ್‌ ಪ್ರೆಸ್‌ ಮೀಟ್‌ ಕರೆದು ತಮ್ಮ ನೋವನ್ನೆಲ್ಲ ಪ್ರಾಮಾಣಿಕವಾಗಿ ತೋಡಿಕೊಂಡರು.

    ವಿಧಾನ ಸಭಾ ಚುನಾವಣೆ ಬಳಿಕ ಸೋಮಣ್ಣನವರು “ ನನ್ನನ್ನು ರಾಜ್ಯ ಬಿಜೆಪಿ ಅಧ್ಯಕ್ಷನನ್ನಾಗಿ ಮಾಡಿ, ಕೇವಲ 10 ದಿನದೊಳಗೆ ಪಕ್ಷವನ್ನು ಅದು ಹೇಗೆ ಕಟ್ಟಿ ಬೆಳೆಸುತ್ತೇನೆ, ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವುದಲ್ಲದೇ ಪಕ್ಷದಲ್ಲಿ ಶಿಸ್ತನ್ನು ಮರುಸ್ಥಾಪಿಸುತ್ತೇನೆ” ಎಂದು ಹೈಕಮಾಂಡ್‌ ಮುಂದೆ ಬೇಡಿಕೆ ಇಟ್ಟಿದ್ದರು. ಆದರೆ, ಯಡಿಯೂರಪ್ಪನವರನ್ನು ಇಳಿಸಿ, ಬೊಮ್ಮಾಯಿಯವರನ್ನು ಸಿಎಂ ಮಾಡಿದ ಪರಿಣಾಮವನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಕಂಡುಂಡ ಬಿಜೆಪಿ ಹೈಕಮಾಂಡ್‌ ಸೋಮಣ್ಣನವರ ಬದಲಿಗೆ ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿತು.

 

    ಮಾಧುಸ್ವಾಮಿಯವರಿಗೆ ತುಮಕೂರು ಲೋಕಸಭಾ ಟಿಕೆಟ್‌ ಕೊಡಿಸುತ್ತೇವೆ ಅಂತ ಮಾತುಕೊಟ್ಟದ್ದು ಯಡಿಯೂರಪ್ಪನವರು, ಆದರೆ ಹೈಕಮಾಂಡ್‌ ಟಿಕೆಟ್‌ ಕೊಟ್ಟದ್ದು ಸೋಮಣ್ಣನವರಿಗೆ. ಆದರೆ ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ ಎನ್ನುವಂತೆ  ಮಾಧುಸ್ವಾಮಿಯವರು ಸೋಮಣ್ಣ ಸೋಲುತ್ತಾರೆ, ಅವರ ಪರ ಪ್ರಚಾರ ಮಾಡಲ್ಲ ಅಂತ ಪಟ್ಟು ಹಿಡಿಯಲು ಕಾರಣವೇನು ಅಂತ ಬಿಜೆಪಿಯೊಳಗಿನ ಮತ್ತು ಹೊರಗಿನ ಬಹಳ ಮಂದಿ ತಲೆಕೆಡಿಸಿಕೊಂಡಿದ್ದಾರೆ. ತುಮಕೂರಿನ ಔಟ್‌ ಗೋಯಿಂಗ್‌ ಎಂಪಿ ಬಸವರಾಜು ಅವರು 2009ರಲ್ಲೇ ಮಾಧುಸ್ವಾಮಿ ಅವರಿಗೆ ಕಾಂಗ್ರೆಸ್‌ನಿಂದ ಎಂಪಿ ಟಿಕೆಟ್‌ ಸಿಗುವುದನ್ನು ಇದೇ ಸೋಮಣ್ಣ-ಸಿದ್ದರಾಮಯ್ಯಅವರನ್ನು ಹಿಡಿದು ತಪ್ಪಿಸಿದ್ದರಂತೆ ಎನ್ನುವ ಹಳೆಯ ಸುದ್ದಿ ಬೇರೆ ಇದೆ.  ಜೊತೆಗೆ ಕಳೆದ ವಿಧಾನ ಸಭೆಯಲ್ಲಿ ಗುಬ್ಬಿಯಲ್ಲಿ ದಿಲೀಪ್‌ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ನಾನು ಸೋಲಲು ಇದೇ ಜಿಎಸ್‌ಬಿ ಕುತಂತ್ರ ಕಾರಣ ಎಂದು ಮಾಧುಸ್ವಾಮಿಯವರು ಎರಡು ವಾರದ ಹಿಂದೆ ಗಂಟೆಗಟ್ಟಲೆ ಟಿವಿಯವರ ಮುಂದೆ ವಿವರವಾಗಿ ವಿವರಿಸಿದ್ದನ್ನೂ ಗಮನಿಸಿದರೆ ಅವರ ಆಪಾಟಿ ಸಿಟ್ಟಿಗೆ ಕಾರಣವೇನು ಅಂತಲೂ ಅರ್ಥವಾಗುತ್ತದೆ.

    ಸೋಮಣ್ಣನವರ ಮಗ ಡಾ.ಅರುಣ್‌ ಅವರಿಗೂ ತುಮಕೂರಿಗೂ ಬಹಳ ಹಿಂದಿನ ನಂಟಿದೆ, ತುಮಕೂರು ಅನ್ನುವುದಕ್ಕಿಂತ ಗುಬ್ಬಿ ತಾಲೂಕು ಅಂದರೆ ಸಾಕು. ಗುಬ್ಬಿ ತಾಲೂಕಿನಲ್ಲಿ ಮ್ಯಾಂಗನೀಸ್‌ ಅದಿರು ಗಣಿಗಾರಿಕೆಯಲ್ಲಿ ತೊಡಗಿದ್ದ ಕಂಪನಿಯೊಂದರ ಎಂಡಿಯಾಗಿ ಇದೇ ಅರುಣ್‌ 19.09.2008ರಂದು ಏಕಾಏಕಿ ನೇಮಕಗೊಂಡಿದ್ದರು. ಗಣಿಗಾರಿಕೆ ಅಂದ ಮೇಲೆ ಅಕ್ರಮ ಇದ್ದದ್ದೇ. ಇಲ್ಲೂ ಅಂತದ್ದೆಲ್ಲ ನಡೆದು ಒಂದೂವರೆ ದಶಕ ಕಳೆದಿದೆ. ಹಾಗಾಗಿ ಗುಬ್ಬಿಯಲ್ಲಿ ಹೆಚ್ಚು ಸುತ್ತಾಡಿರುವುದರಿಂದ ಕಳೆದ ಚುನಾವಣೆಯಲ್ಲಿ ಮಗನಿಗೆ ಗುಬ್ಬಿಯ ಟಿಕೆಟ್‌ ಕೊಡಿಸಲು ಮಾಡಿದ ಪ್ರಯತ್ನ ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಯಡಿಯೂರಪ್ಪನವರಿಂದಾಗಿಯೇ ಜೆಡಿಯುನಿಂದ ಬಿಜೆಪಿಗೆ ಬಂದಿರುವ ಮಾಧುಸ್ವಾಮಿಯವರಿಂದಾಗಿ ವಿಫಲಗೊಂಡಿತ್ತು. ಆಗಲೂ ಅಷ್ಟೇ ಸೋಮಣ್ಣನವರಿಗೆ ಹೇರೂರಿನ ಪರಮಣ್ಣನವರ ಎರಡೆಕೆರೆ ಜಮೀನು, ಮನೆ ಕೊಡಿಸುವ ಜಿಎಸ್‌ಬಿ ಪ್ರಯತ್ನದಲ್ಲಿ ಸೋಮಣ್ಣನವರ ಹತ್ತು ಲಕ್ಷ ಮುಂಗಡ ಕೈ ಬಿಟ್ಟಿತಂತೆ. ಅದೆಷ್ಟು ಖರ್ಚಾದರೂ ಪರವಾಗಿಲ್ಲ, ಗೆದ್ದೇ ತೋರಿಸುವೆ ಎನ್ನುತ್ತಿರುವ ಸೋಮಣ್ಣನವರಿಗೆ ಹತ್ತು ಲಕ್ಷ ಯಾವ ಲೆಕ್ಕ ಅಂತ ಮೊನ್ನೆ ಅವರ ಮನೆ ಅಂಗಳದಲ್ಲಿ ಬಿಜೆಪಿ ಮುಖಂಡರೊಬ್ಬರು ಹೇಳುತ್ತಿದ್ದರು.

   ಹೋದ ಚುನಾವಣೆಯಲ್ಲಿ ಯಾವ ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರನ್ನು ಯಾವ ಬಿಜೆಪಿಯ ಜಿಎಸ್‌ಬಿ ಸೋಲಿಸಿದ್ದರೋ ಕೇವಲ ಐದೇ ವರ್ಷದಲ್ಲಿ ಅದೇ ದೇವೇಗೌಡರು ಅದೇ ಜಿಎಸ್‌ಬಿ ಆಯ್ಕೆ ಮಾಡಿರುವ ಅಭ್ಯರ್ಥಿ ಸೋಮಣ್ಣನವರನ್ನು ಗೆಲ್ಲಿಸಿ ಅಂತ ಪ್ರಚಾರ ಮಾಡಬೇಕಾಗಿ ಬಂದಿರುವುದನ್ನು ಏನಂತ ಬಣ್ಣಿಸಬೇಕು ನೀವೇ ಹೇಳಿ.

   ಯಡಿಯೂರಪ್ಪನವರ ಘನ ವ್ಯಕ್ತಿತ್ವಕ್ಕೆ ಸೋಮಣ್ಣನವರನ್ನು ಸರಿದೂಗಿಸಲು ಆಗುವುದಿಲ್ಲವಾದರೂ ಸ್ವಾಭಿಮಾನ, ನೇರ ಸೆಡ್ಡು ಹೊಡೆಯುವ ಶೈಲಿಯ ರಾಜಕಾರಣ, ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಪರಿಶ್ರಮ ಮುಂತಾದ ಸಂಗತಿಗಳಲ್ಲಿ ಈ ಇಬ್ಬರಿಗೂ ಸಾಮ್ಯತೆಯಿದೆ.

   ಲೋಕಸಭಾ ಅಭ್ಯರ್ಥಿ ಅಂತ ಘೋಷಣೆ ಆದ ದಿನದಿಂದ ಇಲ್ಲಿಯವರೆಗೂ ಎದುರು ಪಕ್ಷ ಕಾಂಗ್ರೆಸ್‌ನ ಪ್ರತಿಸ್ಪರ್ಧೆಗಿಂತ ಪಕ್ಷದೊಳಗಿನ ವಿರೋಧಿಗಳನ್ನು ಸರಿಮಾಡಿಕೊಳ್ಳುವುದರಲ್ಲೇ ಹೆಚ್ಚಿನ ಬೆವರನ್ನು ಸೋಮಣ್ಣನವರು ಹರಿಸಬೇಕಾಗಿಬಂದಿದೆ. 73ರ ಇಳಿ ಹರೆಯದಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಡುವ ಅನಿವಾರ್ಯತೆ ಬೇಕಿರಲಿಲ್ಲ ಅಂತ ಅನ್ನಿಸಿದರೂ, ಹೋರಾಡುವುದು ಅನಿವಾರ್ಯವಾಗಿಬಿಟ್ಟಿದೆ. ಫಲಿತಾಂಶ ಏನಾದರೂ ಆಗಲಿ, ಸೋಮಣ್ಣನವರ ಆಗಮನದಿಂದಾಗಿ ಬಿರು ಬೇಸಿಗೆಯ ಉರಿಬಿಸಿಲಲ್ಲೂ ಸೋತು ಸುಣ್ಣವಾಗಿದ್ದ ಕೆಲ ದಳಪತಿಗಳೂ ಸೇರಿದಂತೆ  ನಮ್ಮೂರಿನ ಒಂದಷ್ಟು ಜನರು ತಂಪಾಗಿಬಿಟ್ಟಿದ್ದಾರೆ.