ಬೋಧನೆ ಎಂಬುದು ಅಸಾಧ್ಯದ ಸಂಗತಿಯೇ?!
ಪ್ಲೆಟೋ, ಮೆನೋ ಸಂವಾದ
ವಿಶ್ಲೇಷಣೆ
ಕೇಶವ ಮಳಗಿ
*
ಮೆನೊ: ಪ್ರಿಯ ಸಾಕ್ರೆಟಿಸ್, ಸಚ್ಚಾರಿತ್ರ್ಯ (ಸದ್ಗುಣ-ಋಜುತ್ವ) ವನ್ನು ಬೋಧಿಸಲು ಸಾಧ್ಯವೆ? ಅಥವ ಬೋಧನೆಯ ಮೂಲಕವಲ್ಲದೆ ಆಚರಣೆಯ ಮೂಲಕ ಅದನ್ನು ಸಾಧಿಸಬಹುದೆ? ಇಲ್ಲವೆ ಮನುಷ್ಯ ಇವೆರಡರಿಂದಲೂ ಅಲ್ಲದೆ ನಿಸರ್ಗದಿಂದಲೇ ಅದನ್ನು ಪಡೆಯಬೇಕೆ, ಎಂಬುದನ್ನು ನನಗೆ ತಿಳಿಸುತ್ತೀಯ?
ಸಾಕ್ರೆಟಿಸ್: . . . ಸಚ್ಚಾರಿತ್ರ್ಯವನ್ನು ಬೋಧಿಸಬಹುದೆ ಇಲ್ಲವೆ ಎಂದು ನಾನು ಬಲ್ಲೆ ಎಂಬುದು ನಿನಗರಿವಾದರೆ ನೀನು ಖುಷಿ ಪಡಬಹುದು. . . ಆದರೆ, ಸಚ್ಚಾರಿತ್ರ್ಯವನ್ನು ಬೋಧಿಸಬಹುದೆ, ಇಲ್ಲವೆ ಎಂಬುದು ನನಗೆ ಈವರೆಗೆ ತಿಳಿಯದು, ಮಾತ್ರವಲ್ಲ, ಸಚ್ಚಾರಿತ್ರ್ಯವೆಂದರೇನು ಎಂಬುದೇ ನನಗೆ ಅರಿಯದು!
*
ಮೆನೊ: ಸರಿ, ಸಾಕ್ರೆಟಿಸ್, ನಾವು ಕಲಿಯಲಾರೆವು ಎಂದು ನಾವು ಅರಿಯುವ ಬಗೆ ಹೇಗೆ? ಜತೆಗೆ, ಕಲಿಕೆ ಎಂದು ನಾವು ಕರೆಯವುದೆಲ್ಲ ಸ್ಮರಣಶಕ್ತಿಯೇ ಅಲ್ಲವೆ? ಇದರ ಮರ್ಮವೇನು ಎಂದು ಕಲಿಸುತ್ತೀಯ?
ಸಾಕ್ರೆಟಿಸ್: . . . ಮೆನೊ, ನೀನು ನಿಜಕ್ಕೂ ಕಿಲಾಡಿಯೇ ಸೈ. ನೀನಿಲ್ಲಿ, ನನ್ನ ’ಬೋಧನೆ’ ಅನ್ನುವುದನ್ನೆಲ್ಲ ಕೊಟ್ಟುಬಿಡು ಅನ್ನುತ್ತಿದ್ದೀಯ. ಆದರೆ, ನಾನು ಹೇಳುತ್ತೇನೆ ಕೇಳು, ಇರುವುದೆಲ್ಲ ಸ್ಮರಣಶಕ್ತಿಯೇ ಹೊರತು, ಬೋಧನೆ ಅನ್ನುವುದೇನೂ ಇಲ್ಲ.
* ಪ್ಲೆಟೋ, ಮೆನೋ ಸಂವಾದ
*
ಬೋಧನೆ ಅಂದರೇನೆಂದು? ಇಡೀ ಮಾನವಕುಲಕ್ಕೆ ತಿಳಿಸಿಕೊಡುತ್ತ ಬೋಧನಾಶಾಸ್ತ್ರಕ್ಕೆ ವಿಜ್ಞಾನದ ಮನ್ನಣೆ ತಂದಿತ್ತ ಮಹಾಗುರು ಸಾಕ್ರೆಟಿಸ್. ಇಲ್ಲಿ ತನ್ನ ಬೋಧನೆಯನ್ನು ಆರಂಭಿಸುತ್ತಿರುವುದು ತನ್ನಲ್ಲಿರಬಹುದಾದ ಅಜ್ಞಾನಕ್ಕೆ ಒತ್ತು ನೀಡುತ್ತ. ಮಾತ್ರವಲ್ಲ, ಕಲಿಸುವ ಪ್ರಕ್ರಿಯೆಯೇ ಮೂಲಭೂತವಾಗಿ ಅಸಾಧ್ಯ ಎಂದು ಸೂಚಿಸುವ ಮೂಲಕ.
ಇದೇ ರೀತಿ, ಮಾನವಕುಲದ ಇನ್ನೊಬ್ಬ ಪರಿಣಾಮಕಾರಿ ಬೋಧಕ ಸಿಗ್ಮೆಂಡ್ ಫ್ರಾಯ್ಡ್ ಇಂಥದ್ದೇ ಮಾತುಗಳನ್ನು ಇನ್ನೊಂದು ಬಗೆಯಲ್ಲಿ ಹೇಳುತ್ತ ಅಧ್ಯಾಪನವು ಒಂದು ಅಸಾಧ್ಯವಾದ ವೃತ್ತಿಯಾಗಿದೆ ಎನ್ನುತ್ತಾರೆ: `ಮನೋವಿಶ್ಲೇಷಣೆಯ ಅನ್ವಯಿಕ ಪರಿಕರಗಳು ಶಿಕ್ಷಣ ಸಿದ್ಧಾಂತ ಮತ್ತು ಆಚರಣೆಗಳಂತೆಯೇ ಆಸಕ್ತಿಯನ್ನಾಗಲಿ, ಭರವಸೆಗಳನ್ನಾಗಲಿ ನೀಡುವುದಿಲ್ಲ . . .’
`ಮನೋವಿಶ್ಲೇಷಣೆಗಳನ್ನು ಅನ್ವಯಿಸಿ ನೋಡುವಲ್ಲಿ ನನ್ನ ಕೊಡುಗೆ ಏನಿದ್ದರೂ ಶೂನ್ಯವೇ. ಆರಂಭದಲ್ಲಿ, ಕಲಿಸುವುದು, ಗುಣಪಡಿಸುವುದು ಮತ್ತು ಆಡಳಿತ ನಡೆಸುವುದು ಅಸಾಧ್ಯವಾದ ವೃತ್ತಿಗಳೆಂದೇ ನನ್ನ ಜಾಣ್ಮೆ ಹೇಳುತ್ತಿತ್ತು. ಹಾಗೆ ಹೇಳುವಾಗ 'ಗುಣಪಡಿಸುವ' ಮನೋವಿಜ್ಞಾನಿಯ ವೃತ್ತಿಯಲ್ಲಿ ನಾನಾಗಲೇ ತೊಡಗಿದ್ದೆ'.
ಸಾಕ್ರೆಟಿಸ್ ಮತ್ತು ಫ್ರಾಯ್ಡ್ ಹೇಳುವಂತೆ ಬೋಧನೆ ನಿಜಕ್ಕೂ ಅಸಾಧ್ಯವಾದುದು ಎಂದಾದರೆ, ಶಿಕ್ಷಕರಾದ ನಾವೆಲ್ಲ ಏನು ಮಾಡುತ್ತಿದ್ದೇವೆ? ನಮ್ಮ ಕೆಲಸವನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದನ್ನು ಸಾಧಿಸುವುದು ಹೇಗೆ? ಮತ್ತು ಅಧ್ಯಾಪನದಲ್ಲಿಯೇ ತೊಡಗಿಕೊಂಡಿದ್ದ ಮನುಕುಲದ ಈ ಇಬ್ಬರು ಶ್ರೇಷ್ಠ ಗುರುಗಳು ಬೋಧನೆಯೊಂದು ಅಸಾಧ್ಯವಾದ ವೃತ್ತಿ ಎಂದೇಕೆ ಭಾವಿಸಿದರು? ಆ ಮೂಲಕ ಯಾವ ಪಾಠವನ್ನವರು ಕಲಿಸುತ್ತಿದ್ದಾರೆ? ಯಾವ ಬಗೆಯ ಅಸಾಧ್ಯತೆಯನ್ನು ಅಧ್ಯಾಪನವು ನಮಗೆ ಬೋಧಿಸುತ್ತಿದೆ?
ಸಾಕ್ರೆಟಿಸ್‌ನಂತೆಯೇ ಫ್ರಾಯ್ಡ್ ಕೂಡ ಕ್ರಾಂತಿಕಾರಿ ಬೋಧನಾಕ್ರಮವನ್ನು ಆವಿಷ್ಕರಿಸಿದವರು. ಶೈಕ್ಷಣಿಕ ಆಚರಣೆ ಮತ್ತು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ತಮ್ಮ ಮನೋ ವಿಶ್ಲೇಷಣಾ ವಿಧಾನದ ಮೂಲಕ ಹೊಸ ಒಳನೋಟಗಳನ್ನೇ ಒದಗಿಸಿದರು.
ಈ ಹೊಸ ಬೋಧನಾಕ್ರಮವನ್ನು ಫ್ರಾಯ್ಡ್ ಅವರಾಗಲಿ, ಅವರ ಅನುಯಾಯಿಗಳಾಗಲಿ ಕ್ರಮಬದ್ಧವಾಗಿ ಅಭಿವ್ಯಕ್ತಿಸಲಿಲ್ಲ. ಬದಲಿಗೆ, ಅದು ತರಗತಿಕೋಣೆಗಳಲ್ಲಿ ಸಾಕಾರಗೊಂಡಂಥದ್ದು. ಹಾಗೆ ನೋಡಿದರೆ, ಈ ಬಗೆಯ ಮನೋವಿಶ್ಲೇಷಣಾ ಬೋಧನಾಕ್ರಮವನ್ನು ನಿಜವಾಗಿಯೂ ಆಚರಣೆಗೆ ತಂದವರೆಂದರೆ ಜಾಕ್ ಲಕಾನ್ (Jacques Lacan). ಫ್ರಾಯ್ಡರ ಕೃತಿಗಳನ್ನು ವ್ಯಾಖ್ಯಾನ ಮಾಡಿ, ಅವರ ಬೋಧನಾ ಒಳನೋಟಗಳನ್ನು ಮನನ ಮಾಡಿಕೊಂಡವರಲ್ಲಿ ಅವರು ಮೊದಲಿಗರು. ಲಕಾನ್‌ರ ಈ ಹೊಸಬಗೆಯ ಬೋಧನೆಯನ್ನು ಅರ್ಥ ಮಾಡಿಕೊಂಡರೆ ಅಧ್ಯಾಪನಾಕ್ರಮಕ್ಕೆ ಮನೋವಿಶ್ಲೇಷಣೆ ನೀಡಿರುವ ಕೊಡುಗೆ ಅರಿವಾಗುತ್ತದೆ.
ಶಿಕ್ಷಣದ ರೂಢಿಗತ ವಿಧಾನ ಮತ್ತು ಗ್ರಹಿಕೆಗಳು ಫ್ರಾಯ್ಡ್ ಹಾಗೂ ಲಕಾನ್‌ರ ಬೋಧನಾಕ್ರಮವನ್ನು ಅತಿ ಸರಳಗೊಳಿಸಿ ಅಪಾರ್ಥಕ್ಕೆ ಎಡೆ ಮಾಡಿಕೊಟ್ಟವು. ’ಶೈಕ್ಷಣಿಕ ಸಂಕಥನ'ವೆನ್ನುವುದು ಜ್ಞಾನ ಸಂವಹನದ ಅತಿ ಕೆಟ್ಟ ಚಾಳಿಯಾಗಿದೆ. `ಮಾಸ್ಟರ್ ಆಫ್ ಆರ್ಟ್' ಮತ್ತು ಇಂಥದ್ದೇ ಪದವಿ ಬಾವಲಿಗಳು ಕಳಪೆ ಜ್ಞಾನವನ್ನು ಮುಚ್ಚಿಡುವ ರಕ್ಷಾಕವಚಗಳಾಗಿವೆ. ಬೋಧನಾಪದ್ಧತಿಯ ಸಂಕುಚಿತ ಪರಿಧಿಗಳು ಅತ್ಯಂತ ಪರಿಣಾಮಕಾರಿ ಅಸ್ತ್ರವನ್ನು ತರಬೇತಿ ಕಾರ್‍ಯವಿಧಾನಕ್ಕೆ ಕುಗ್ಗಿಸಿವೆ’ ಎಂದು ಲಕಾನ್ ಇಂತಹ ಪದ್ಧತಿಯನ್ನು ಅತ್ಯಂತ ತಿರಸ್ಕಾರದಿಂದ ಜರೆದರು.
`ಶಿಕ್ಷಣದ ಮೊದಲ ಕೆಲಸ ಏನು ಎನ್ನುವುದನ್ನು ನಾವೇ ಸ್ಪಷ್ಟಪಡಿಸಿಕೊಳ್ಳೋಣ: ಮಗು ತನ್ನ ಸಹಜ ಸ್ವಭಾವವನ್ನು ನಿಯಂತ್ರಿಸಿಕೊಳ್ಳಲು ಕಲಿಯಬೇಕು. ಆತನ ಎಲ್ಲ ಬಯಕೆಗಳನ್ನು ಪೂರೈಸಿಕೊಳ್ಳಲು ಬಿಡದೆ ನಿಯಂತ್ರಿಸಬೇಕು. . .
`ಅಂತೆಯೇ, ಶಿಕ್ಷಣವು ನಿಷೇಧ, ನಿಯಂತ್ರಣ ಮತ್ತು ತಡೆಗಳನ್ನು ಹೇರಬೇಕು. ಇದನ್ನು ಇತಿಹಾಸದ ಉದ್ದಕ್ಕೂ ನಾವು ನೋಡಿದ್ದೇವೆ. ಆದರೆ, ಸಹಜ ಬಯಕೆಗಳಿಗೆ ನಿಷೇಧ ಹೇರಿದಾಗ ನರದೌರ್ಬಲ್ಯದ ಕಾಯಿಲೆಗಳು ಆವರಿಸುವುದನ್ನೂ ನಾವು ವಿಶ್ಲೇಷಣೆಯ ಮೂಲಕ ಅರಿತಿದ್ದೇವೆ. . . ಅತ್ತ ದರಿ, ಇತ್ತ ಪುಲಿ ಎಂಬ ಈ ಉಭಯ ಸಂಕಟದಿಂದ ಪಾರಾಗುವ ವಿಧಾನವನ್ನು ಶಿಕ್ಷಣ ಕಂಡುಕೊಳ್ಳಬೇಕು. ಗರಿಷ್ಠವಾದುದನ್ನು ಸಾಧಿಸುತ್ತ, ಕನಿಷ್ಠ ಹಾನಿಗೊಳಗಾಗುವ ಪರಿಯನ್ನು ಶಿಕ್ಷಣವು ಆವಿಷ್ಕರಿಸಬೇಕು . . . ಆದರೆ ನಮಗೆ ಕಾಣಸಿಕ್ಕುವುದೆಲ್ಲ ಮಕ್ಕಳಿಗೆ ಅಪಾರ ಹಾನಿಯನ್ನುಂಟುಮಾಡಿದ ಶಿಕ್ಷಣವೇ. . .'
ಬೋಧನಾ ಪದ್ಧತಿಯಲ್ಲಿ ಮನೋವಿಶ್ಲೇಷಣೆ ಕೇವಲ ವಸ್ತುವಿಷಯ/ಥೀಮ್ ಮಾತ್ರವಲ್ಲ, ಅದೊಂದು ಅಲಂಕಾರ. ಕೇವಲ ಹೇಳಿಕೆ ಮಾತ್ರವಲ್ಲ; ಉಕ್ತಿ. ಅದು ಅರ್ಥ ಮಾತ್ರವಲ್ಲ, ಹಲವೊಮ್ಮೆ ಅರ್ಥಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಕ್ರಿಯೆ ಕೂಡ.
ಮನೋವಿಶ್ಲೇಷಣಾತ್ಮಕ 'ಥೆರಪಿಯ ಪ್ರಕ್ರಿಯೆ'ಯನ್ನು (ಶಮನ ವಿಧಾನ) 'ಕಲಿಕೆಯ ಕ್ರಮ' ಎಂದು ಫ್ರಾಯ್ಡ್ ಗುರುತಿಸುತ್ತಾರೆ:
'ಮನೋವಿಶ್ಲೇಷಣೆಯು ವಿಲಕ್ಷಣವಾದ ಅಸ್ತವ್ಯಸ್ತತೆಯನ್ನು ಬಿಡಿಸಿಡುತ್ತದೆ; ಕಾಳಜಿಪೂರ್ವಕವಾದ, ವಿಸ್ತೃತವಾದ ಶೋಧನೆಯನ್ನು ಕೈಗೆತ್ತಿಕೊಳ್ಳುತ್ತದೆ . . . ಆದರಿದು ಸಾಧ್ಯವಾಗುವುದು ಎಲ್ಲವನ್ನೂ 'ಈಗೊ'(Ego) ದೊಂದಿಗೆ ಹಂಚಿಕೊಳ್ಳುವವರೆಗೂ.
. . . ನಿಮ್ಮದೇ ಮನಸ್ಸಿನ ಚಟುವಟಿಕೆಯ ಭಾಗವೊಂದು ನಿಮ್ಮ ಅರಿವಿನಿಂದ ಮತ್ತು ನಿಮ್ಮ ಇಚ್ಛಾಶಕ್ತಿಯಿಂದ ದೂರ ಸರಿದುಬಿಟ್ಟಿರುತ್ತದೆ. . . ನೀವು ನಿಮ್ಮ ಒಂದು ಭಾಗದಿಂದ ನಿಮ್ಮದೆ ಇನ್ನೊಂದು ಭಾಗದೊಂದಿಗೆ ಹೋರಾಡುತ್ತಿರುತ್ತೀರಿ. ನಿಮ್ಮ ಪ್ರಜ್ಞೆಗೆ ಅರಿವೇ ಇಲ್ಲದಂತಹ ಎಷ್ಟೋ ಸಂಗತಿಗಳು ನಿಮ್ಮ ಮನಸ್ಸಿನಲ್ಲಿ ನಿರಂತರವಾಗಿ ನಡೆಯುತ್ತಿರಬಹುದು. ಇದೀಗ ನಿಮಗೆ ನೀವೆ ಬೋಧಿಸುವ ಸಮಯ. . . . ! ನಿಮ್ಮ ಮನಸ್ಸಿನೊಳಗಿರುವುದು; ನಿಮಗೆ ಅರಿವಿರುವುದು ಎರಡೂ ತಾಳೆಯಾಗುವುದಿಲ್ಲ. ನಿಮ್ಮ ಮನಸ್ಸಿನೊಳಗೆ ನಡೆಯುತ್ತಿರುವುದು; ನೀವು ಕೇಳಿಸಿಕೊಳ್ಳುತ್ತಿರುವುದು ಎರಡೂ ಬೇರೆ ಬೇರೆ ಸಂಗತಿಗಳು. ಸಾಮಾನ್ಯ ಸನ್ನಿವೇಶದಲ್ಲಿ ನಿಮ್ಮ ಪ್ರಜ್ಞೆಯನ್ನು ತಲುಪುವ ಬುದ್ಧಿವಂತಿಕೆ ನಿಮ್ಮ ಅಗತ್ಯಗಳಿಗೆ ಸಾಕಾಗುತ್ತದೆ; ಮತ್ತು ನಾನು ಎಲ್ಲ ಮುಖ್ಯ ವಿಷಯಗಳನ್ನೂ ಕಲಿಯುತ್ತಿದ್ದೇನೆ ಎಂಬ ಭ್ರಮೆಯಲ್ಲಿ ನೀವು ಸುಖಿಸುತ್ತಿರುತ್ತೀರಿ. ಆದರೆ, ಕೆಲವೊಮ್ಮೆ ಸಹಜ ಪ್ರೇರಣೆಯಿಂದ . . . ನಿಮ್ಮ ಬುದ್ಧಿಪೂರ್ವಕ ಕ್ರಿಯೆ ಕುಸಿದು ಹೋಗುತ್ತದೆ. ಪ್ರತಿಸಲವೂ ನಿಮ್ಮ ಪ್ರಜ್ಞಾವ್ಯವಸ್ಥೆಯನ್ನು ತಲುಪುವ ಸಂಗತಿ ಅಪೂರ್ಣವಾಗಿರುತ್ತದೆ, ಎಷ್ಟೋ ಸಲ ನಂಬುವಂಥದ್ದಾಗಿರುವುದಿಲ್ಲ. . . ನಿಮ್ಮ ದೃಷ್ಟಿಯನ್ನು ಅಂತರಂಗಕ್ಕೆ ತಿರುಗಿಸಿ. . . ಬೇಗ ನಿಮ್ಮ ಕುರಿತು ಅರಿಯಲು ಕಾರ್‍ಯಪ್ರವೃತ್ತರಾಗಿ!. . .
ಮನೋವೈಜ್ಞಾನಿಕ ವಿಶ್ಲೇಷಣೆಯು ಈ ರೀತಿಯಾಗಿ ಮನುಷ್ಯನ `ಈಗೋ'ವನ್ನು ಪಳಗಿಸುವ ಕೆಲಸವನ್ನು ಮಾಡುತ್ತದೆ.
ಆದ್ದರಿಂದಲೇ, ಮನೋವೈಜ್ಞಾನಿಕ ವಿಶ್ಲೇಷಣೆಯು ಒಂದು ಬೋಧನಾಕ್ರಮದ ಅನುಭವವಾಗಿದೆ. ಒಂದು ಪ್ರಕ್ರಿಯೆಯಾಗಿ ಪ್ರಜ್ಞೆಗೆ ನಿಲುಕಲಾರದಂತಹ ಹೊಸ ಅರಿವನ್ನು ಒದಗಿಸಿಕೊಡುತ್ತದೆ. ಸಂವೇದನಾಶೀಲತೆಗೆ ಪಾಠವನ್ನು ಹೇಳಿಕೊಡುವ ಇದನ್ನು 'ಜ್ಞಾನಮೀಮಾಂಸೆಯ ಬೋಧನೆ’, ಎಂದು ಕರೆಯಬಹುದು.
ಈ ರೀತಿಯಾಗಿ ಮನೋವಿಶ್ಲೇಷಣೆಯು ಅತ್ಯಂತ ಸ್ವೋಪಜ್ಞವಾದ ಕಲಿಕೆಯನ್ನು ಒದಗಿಸುತ್ತದೆ. ತನ್ನ ರೀತಿನೀತಿಗಳಲ್ಲಿ ಮಾತ್ರ ಇದು ಸ್ವೋಪಜ್ಞವಾಗಿಲ್ಲ. ಬದಲಿಗೆ, ಇನ್ನಾವುದೇ ವಿಧಾನದ ಕಲಿಕೆಯಲ್ಲೂ ದೊರಕದ ಮಾಹಿತಿಯನ್ನು ನೀಡುತ್ತದೆ. ಬೇರಾವುದೇ ವಿಧಾನದಿಂದಲೂ ಪಡೆಯಲಾರದ ಕಲಿಕೆಯನ್ನು ನಾವು ವಿಶ್ಲೇಷಣೆಯಿಂದ ಸಾಧಿಸಿದ್ದೇವೆ, ಎಂದು ಫ್ರಾಯ್ಡ್ ಹೇಳುತ್ತಾರೆ.
ಹೊಸ ಬಗೆಯ ಈ ಆವಿಷ್ಕಾರ ಮತ್ತು ಕಲಿಕೆಯ ವಿಧಾನದ ಸಾರ್ವಕಾಲಿಕತೆಯು ಸಂಪೂರ್ಣವಾಗಿ ವಿಭಿನ್ನವಾಗಿದೆ. ಸಾಂಪ್ರದಾಯಿಕ ಬೋಧನಾ ಸಿದ್ಧಾಂತ ಮತ್ತು ಆಚರಣೆಗಳನ್ನು ಆಧರಿಸಿರುವ ರೂಢಿಗತ ಕಲಿಕಾ ವಿಧಾನದಲ್ಲಿ ಕಲಿಕೆಯು ರೇಖೆಯಂತೆ ಲಂಬವಾಗಿದೆ; ಒಂದು ಮೊತ್ತದಂತಿದ್ದು, ಬೆಳೆಯುತ್ತಲೇ ಹೋಗುವಂಥದ್ದಾಗಿದೆ. ಆದರೆ, ಸೂಚಿಸಿದ ಹೊಸ ವಿಧಾನದಲ್ಲಿ ಕಲಿಕೆ ಲಂಬವಾಗಿರದೆ, ಅನಿರೀಕ್ಷಿತ ಅಡೆತಡೆ, ನೆಗೆತ, ಸಾತತ್ಯವಿಲ್ಲದಿರುವುದು, ಹಿಂಚಲನೆ, ಮುಂದೂಡಿದ ಕ್ರಿಯೆಗಳನ್ನು ಒಳಗೊಂಡಿರುತ್ತದೆ. ಈ ಹಿನ್ನೆಲೆಯಲ್ಲಿಯೇ ಸಾಂಪ್ರದಾಯಿಕ ಕಲಿಕಾ ಪದ್ಧತಿಯನ್ನಿದು ಗಡುಸಾಗಿ ಪ್ರಶ್ನಿಸುತ್ತದೆ. ಕಲಿಕೆ ಏರುಗತಿಯಲ್ಲಿ (ಪ್ರಗತಿಶೀಲವಾಗಿ) ಸಾಗುತ್ತಲೇ ಹೋಗುವ ಹಳೆಯ ಕಲ್ಪನೆ ಅಜ್ಞಾನದಿಂದ ಜ್ಞಾನದೆಡೆಗೆ ಎಂಬ ಒಂದೇ ದಾರಿಯ ಪರಿಕಲ್ಪನೆಯನ್ನು ಹೊಂದಿದೆ.
ಜ್ಞಾನ ಮತ್ತು ಅಜ್ಞಾನಗಳ (ಯಾವುದನ್ನು ತಿಳಿಯಬೇಕು ಎನ್ನುವ ಅರಿವು, ಯಾವುದು ತಿಳಿಯಬೇಕಿಲ್ಲ ಎನ್ನುವ ಅಜ್ಞಾನ) ಪರಿಕಲ್ಪನೆಯನ್ನು ಈ ಮನೋವಿಶ್ಲೇಷಣೆ ಪರಿಷ್ಕರಿಸಿ, ನವೀಕರಿಸಿತು. ಲಕಾನ್ ಹೇಳುವುದು ಕೂಡ ಇದನ್ನೇ- ಜ್ಞಾನ ಮೀಮಾಂಸೆ, ಬೋಧನಾಪದ್ಧತಿ, ಸಂಸ್ಕೃತಿಗಳನ್ನು ಅರಿಯಲು ಪ್ರತ್ಯೇಕವಾದ ನಿರ್ದಿಷ್ಟ ಹಾದಿಗಳಿದ್ದು ಅವು ಅಪ್ರಜ್ಞಾನೆಲೆಯಲ್ಲಿ ಬೇರು ಬಿಟ್ಟಿವೆ.
ಪಾಶ್ಚಿಮಾತ್ಯ ಬೋಧನಾ ಪದ್ಧತಿಯು ಹೆಗೆಲ್‌ನ ’ಪರಿಪೂರ್ಣ ಜ್ಞಾನದ’ ಸೈದ್ಧಾಂತಿಕ ಪರಿಕಲ್ಪನೆಯ ಮೇಲೆ ನಿರ್ಮಿಸಿದ್ದಾಗಿದೆ. ಒಂದು ಬೋಧನಾ ಪದ್ಧತಿಯ ಮೂಲಕ ಸಮಗ್ರವನ್ನೂ ಕಲಿತು ಶಿಷ್ಯವೃತ್ತಿಯನ್ನು ಪೂರೈಸುವುದು. ಹೀಗೆ ಸಂಪಾದಿಸಿದ ಸಂಪೂರ್ಣವಾದ, ಸಮರ್ಪಕವಾದ ಜ್ಞಾನ, ಸಾಧನೆಯಾಗಿರುತ್ತದೆ.
’ಹೆಗೆಲಿಯನ್ ದೃಷ್ಟಿಕೋನದಲ್ಲಿ, ಪೂರ್ಣಗೊಳಿಸಿದ ಜ್ಞಾನವು ಪರಮಾಧಿಕಾರದ ರಾಜದಂಡ ಮತ್ತು ಅದನ್ನು ಸಂಪಾದಿಸಿರುವ ವ್ಯಕ್ತಿ ಎಂಬಂತೆ ಅಧಿಕಾರದ ಊರುಗೋಲಾಗಿದೆ. ಈ ಬಗೆಯ ಪರಿಪೂರ್ಣ ಜ್ಞಾನ ಸಂಕಥನದ ಚೋದ್ಯವೆಂದರೆ ಅದು ತನ್ನಲ್ಲೇ ಕೊನೆಯಾಗಿ, ತನ್ನದೆಲ್ಲವನ್ನೂ ಸಂಪೂರ್ಣ ಸರಿಯೆಂದು ಅಂಗೀರಕರಿಸುವುದಾಗಿದೆ’, ಎಂಬುದು ಜಾಕ್ ಲಕಾನ್ ಅವರ ಆಕ್ಷೇಪವಾಗಿದೆ. ಲಕಾನ್ ಅವರ ಪರಿಕಲ್ಪನೆಯಲ್ಲಿ ಅಪ್ರಜ್ಞಾ ಸ್ಥಿತಿಯು ಮನುಷ್ಯನ ಆವಿಷ್ಕಾರವಾಗಿದ್ದು ಅದರೊಂದಿಗೆ ಸಂಪೂರ್ಣ ಸಹಮತಿ ಸಾಧ್ಯವಾಗದು. ಹೊರಗಿನ ಜ್ಞಾನದೊಂದಿಗೆ ತನ್ನೊಳಗಿನ ಜ್ಞಾನವನ್ನು ಬೆಸೆಯಬಲ್ಲ ಇದು ಜ್ಞಾನದಲ್ಲಿರುವ ಭಿನ್ನತೆಯನ್ನು ಎತ್ತಿ ತೋರಿಸುತ್ತದೆ. ಹಾಗೆಂದೆ, ಅಪ್ರಜ್ಞಾನೆಲೆಯು ’ಅರಿವು ಹೆಂದಿರುವುದರ ಕುರಿತು ಅರಿವಿದೆ ಎಂದು ಒಪ್ಪಿಕೊಳ್ಳದ ಜ್ಞಾನವಾಗಿದೆ’ ಎಂದು ಲಕಾನ್ ಬಣ್ಣಿಸುತ್ತಾರೆ.
ಈ ಕಾರಣದಿಂದಾಗಿಯೇ, ಪರಿಪೂರ್ಣ ಜ್ಞಾನವೆನ್ನುವುದು ಇರುವುದು ಸಾಧ್ಯವಿಲ್ಲ. ಅಂತೆಯೇ, ಬೋಧನೆ ಎಂದರೆ ಸ್ವಯಂಸಿದ್ಧ ಜ್ಞಾನವನ್ನು ಹಸ್ತಾಂತರಿಸುವುದಲ್ಲ. ಬದಲಿಗೆ, ಜ್ಞಾನದ ಸೃಷ್ಟಿಗೆ ಹೊಸ ಅವಕಾಶಗಳನ್ನು, ಸೋಪಜ್ಞ ಕಲಿಕೆಗೆ ಸನ್ನಿವೇಶವನ್ನು ಒದಗಿಸಿಕೊಡುವುದಾಗಿದೆ. ಬೋಧನೆಗೆ ಒಳಪಡುತ್ತಿರುವುದೆಲ್ಲ ಸನ್ನಿವೇಶದ ಅಭಿವ್ಯಕ್ತಿಯೇ ಆಗಿರುತ್ತದೆ. ಪಾಠವು ಏನನ್ನೂ ಕಲಿಸುವುದಿಲ್ಲ, ಆದರೆ ಕಲಿಯಲು ಸಾಧ್ಯವಾಗುವ ಸನ್ನಿವೇಶವನ್ನು ನಿರ್ಮಿಸುತ್ತದೆ. ಹೀಗಾಗಿಯೇ, ಜ್ಞಾನವನ್ನು ಒಂದೊಮ್ಮೆ ಎಂಬಂತೆ ಸಂಪಾದಿಸಲು ಅಥವ ಸಾಧಿಸಲು ಆಗದು. ಪ್ರತಿ ಪ್ರಕರಣದ, ಪ್ರತಿ ಪಠ್ಯವೂ ತನ್ನದೇ ಆದ ನಿರ್ದಿಷ್ಟ ಕಾರ್‍ಯವಿಧಾನವನ್ನು ಹೊಂದಿದ್ದು, ಅದನ್ನು ವ್ಯಾಖ್ಯಾನಕ್ಕೊಳಪಡಿಸಲು ಸ್ವೋಪಜ್ಞವಾದ, ಪ್ರತ್ಯೇಕವಾದ ವಿಧಾನದ ಅಗತ್ಯವಿರುತ್ತದೆ.
ಪರಂಪರೆಯಿಂದ ಬಂದ ಐತಿಹ್ಯದ ಆವಿಷ್ಕಾರವು ಇದನ್ನು ಖಚಿತಪಡಿಸುತ್ತಿದೆ. . . ಕವಿ ಇತ್ತ ಈಡಿಪಸ್‌ನ ಪಾಪಪ್ರಜ್ಞೆಯ ಮೇಲೆ ಬೆಳಕು ಚೆಲ್ಲುತ್ತಾನೆ, ಜತೆಜತೆಗೆ, ನಮ್ಮ ಮನಸ್ಸಿನ ಆಳಕ್ಕಿಳಿಯುವಂತೆಯೂ, ನಾವೇ ನೋಡಿಕೊಳ್ಳುವಂತೆಯೂ ಮಾಡುತ್ತಿದ್ದಾನೆ. . .
ನಾವು ಕೂಡ ಈಡಿಪಸ್‌ನಂತೆಯೇ ಬಯಕೆಯ ಅಜ್ಞಾನದಲ್ಲಿ ತೊಳಲುತ್ತೇವೆ. . . ಎಲ್ಲವೂ ಬಯಲಾದ ಮೇಲೆ ನಮ್ಮ ಬಾಲ್ಯದ ಘಟನೆಗಳತ್ತ ನಮ್ಮ ಕಣ್ಣುಗಳನ್ನೇ ನಾವು ಮುಚ್ಚಿಬಿಡಬಹುದು.
ಫ್ರಾಯ್ಡ್‌ರ ಮಹತ್ವವಿರುವುದೇ, ನಾನೇ ಗುರುವೆಂಬ ಅಧಿಕಾರದ ಹಮ್ಮಿಲ್ಲದ, ವಿಜ್ಞಾನದ ವಿಧಿಯಿಂದ ಕಂಡುಕೊಳ್ಳಬಲ್ಲುದಾದ ಜ್ಞಾನವಿಧಾನವನ್ನು ಪರಿಚಯಿಸಿರುವುದಾಗಿದೆ. ಫ್ರಾಯ್ಡ್ ವಿವಿಧ ಮೂಲಗಳಿಂದ ಪಡೆದ ಈ ಜ್ಞಾನಬೋಧನಾ ವಿಧಾನವನ್ನು ಬಹುಶಃ ಲಕಾನ್ ಅವರಷ್ಟು ಸಮರ್ಥವಾಗಿ ಉಳಿದವರು ಅರಗಿಸಿಕೊಳ್ಳಲಿಲ್ಲವೆಂದೇ ಹೇಳಬೇಕು. ಭವಿಷ್ಯದ ವಿಶ್ಲೇಷಣಾಕಾರರ ತರಬೇತಿಯ ಕುರಿತು ಮಾತನಾಡುತ್ತ ಲಕಾನ್ ಹೇಳುತ್ತಾರೆ:
'ನಮ್ಮ ಅನುಭವಗಳ ಮೇಲೆ ಸಾಹಿತ್ಯಕೃತಿಗಳ ಪಠ್ಯಗಳು ಎಂಥ ಹೊಸ ಬೆಳಕು ಚೆಲ್ಲಬಲ್ಲವು; ಅವು ನಿರ್ವಹಿಸುವ ಪಾತ್ರ ಯಾವ ರೀತಿಯದು' ಎಂದು ಅರಿಯಲು ಫ್ರಾಯ್ಡ್ ಸಾಹಿತ್ಯಕೃತಿಗಳ ಕುರಿತು ಬರೆದ ವಿಸ್ತ್ರೃತ ಬರಹಗಳನ್ನು ಓದಬೇಕು.
ಫ್ರಾಯ್ಡ್‌ರ ಸಿದ್ಧಾಂತದ ಆಧಾರದ ಮೇಲೆ ಲಕಾನ್ ಅಭಿವೃದ್ಧಿಪಡಿಸಿದ 'ಕಾವ್ಯಕೃತಿ ಬೋಧನಾ ಪದ್ಧತಿ'ಯು ನನ್ನ ಅರ್ಥೈಸಿಕೊಳ್ಳುವಿಕೆಯ ನೆಲೆ ಯಾವುದು? ನನ್ನ ಅಸಮಗ್ರತೆಯನ್ನು ಸೂಚಿಸುತ್ತಿರುವ ನಿರ್ದುಷ್ಟತೆ ಯಾವುದು? ಜ್ಞಾನದ ಮುಸುಕಿನಲ್ಲಿರುವ ಯಾವ ರೀತಿಯ ಒಡಪನ್ನು ನಾನು ಎದುರಿಸುತ್ತಿರುವೆ? ಎಂಬ ತಾತ್ವಿಕ ಪ್ರಶ್ನೆಗಳಿಗೆ ಒತ್ತು ನೀಡುತ್ತದೆ.
ಹಿಂದೊಮ್ಮೆ ಜರಾತುಷ್ಟ್ರ ನಿನಗೆ ಹೇಳಿದ್ದೇನು? ಕವಿಗಳು ಮಹಾ ಸುಳ್ಳುಬುರುಕರು ಎಂದಲ್ಲವೆ? ಆದರೆ, ಜರಾತುಷ್ಟ್ರ ಕೂಡ ಕವಿಯಾಗಿದ್ದವನೆ ಅಲ್ಲವೆ? ಆತ ಸತ್ಯ ಹೇಳುತ್ತಿದ್ದಾನೆ ಎಂಬುದರಲ್ಲಿ ನಿನಗೆ ನಂಬಿಕೆಯೇ? ನೀನು ಅದನ್ನೇಕೆ ನಂಬುತ್ತೀಯ?
ಶಿಷ್ಯ ಉತ್ತರಿಸಿದ: `ನಾನು ಜರಾತುಷ್ಟ್ರರನ್ನು ನಂಬುತ್ತೇನೆ'.
ಆದರೆ, ಜರಾತುಷ್ಟ್ರ ಮಾತ್ರ ತಲೆಯಾಡಿಸುತ್ತ ನಕ್ಕ.
ಸಂಸ್ಕೃತಿ ತನ್ನನ್ನು ಅನಾವರಣಗೊಳಿಸಿಕೊಳ್ಳುವಲ್ಲಿ ಸತ್ಯದ ದಾರಿ ತೆರೆದುಕೊಳ್ಳುತ್ತದೆ. ಫ್ರಾಯ್ಡ್ ಅವರು ನಿರೂಪಿಸಿದ ಬೋಧನಾ ಪದ್ಧತಿಯು ಇಂಥಲ್ಲಿ ಮಹತ್ವ ಪಡೆದುಕೊಳ್ಳುತ್ತದೆ. ನಮ್ಮನ್ನು ಅನುಸರಿಸುವವರಿಗೆ ನಾವು ಆ ದಾರಿಯಲ್ಲಿ ಸಾಗುವ ತರಬೇತಿ ನೀಡಬಹುದು. ಅದನ್ನೇ `ಶೈಲಿ', ಅನ್ನಬಹುದು.
ಚಿತ್ರ: ಫ್ರಾಯ್ಡ್, ಲಕಾನ್