ಮನಸೂರೆಗೊಂಡ ನಾಗಿನ್ ಹಾಡು

ಮನಸೂರೆಗೊಂಡ ನಾಗಿನ್ ಹಾಡು

ಮನಸೂರೆಗೊಂಡ ನಾಗಿನ್ ಹಾಡು


ಚಿಕ್ಕಣ್ಣ


(ಹಿಂದಿನ ‘ಕಿನ್ನರಿ’ಯಿಂದ)


 ಸಂತೆಬೈಲಿನ ಪಕ್ಕ ಒಂದು ಟೆಂಟ್ ಸಿನಿಮಾ, ಪ್ರತಿ ಬೇಸಿಗೆಯಲ್ಲೂ ಬಡವನಹಳ್ಳಿಯಲ್ಲಿ ಜಾಂಡ ಹೂಡುತ್ತಿತ್ತು. ಒಂದು ದಿನ ಸಂತೆಯಲ್ಲಿ ಪಕೋಡ ಕಟ್ಟಿಸಿಕೊಳ್ಳುತ್ತಾ ಇರುವಾಗ, ಪಕ್ಕದ ಟೆಂಟಿನಿAದ ಒಂದು ಸುಶ್ರಾವ್ಯವಾದ ಹಿಂದಿ ಹಾಡು ಹಾಕಿದ್ದನ್ನು ಕೇಳಿದೆ. 'ಮನಡೋಲೆ, ಮೇರತನ ಡೋಲೆ' ಎಂಬ ಹಾಡು ನನ್ನನ್ನು ಮಂತ್ರಮುಗ್ಧನನ್ನಾಗಿ ಮಾಡಿತು. ಕೈಯಲ್ಲಿದ್ದ ಪಕೋಡದ ಪಟ್ಟಣವನ್ನು ಜಯಣ್ಣನ ಕೈಗೆ ಕೊಟ್ಟು, ನಾನು ಸೀದಾ ಟೆಂಟ್ ಸಿನಿಮಾ ಕಡೆ ಹೊರಟೆ. “ಏ!! ಎಲ್ಲಿಗೋ, ಏನು ಸಿನಿಮಾಕ್ಕೋಗ್ತಾ ಇದ್ದೀಯಾ? ಅದಿನ್ನು 7 ಗಂಟೆಗೆ ಎಂದು ಫಕ್ರು ಕೂಗಿಕೊಳ್ಳುತ್ತಿದ್ದ. ನಾನೆಂದೂ ಇದುವರೆಗೆ ಟೆಂಟ್ ಸಿನಿಮಾ ತಂಟೆಗೆ ಹೋದವನೇ ಅಲ್ಲ. ಸೀದ ಹಾಡು ಹಾಕಿದ್ದ ಮುಂದಿನ ಟೆಂಟ್ ಆಫೀಸಿಗೆ ನುಗ್ಗಿದೆ. 'ಯಾರದು?' ಎಂದರು, ಅಲ್ಲಿದ್ದ ಒಬ್ಬ ವ್ಯಕ್ತಿ. 'ಸಿನಿಮಾ 7 ಗಂಟೆಗೆ, ಈಗಲೇ ಯಾಕೆ ಬಂದಿದ್ದೀಯ' ಎಂದರು. 'ನಾನು ಸಿನಿಮಾಕ್ಕೆ ಬರಲಿಲ್ಲ ಅಣ್ಣ, ಈಗ ಹಾಡಾಕಿದ್ದೀರಲ್ಲಾ ಅದು ಯಾವ ಸಿನಿಮಾದ್ದು ಅಂತ ತಿಳ್ಕೊಬೇಕಾಗಿತ್ತು' ಅಂದೆ. ‘ಓಹೋ, ಅಷ್ಟೇನಾ', ಅಂತ ಹೇಳಿ ಆತ ನನ್ನನ್ನು ಒಂದು ಸಣ್ಣ ಪ್ಲೇಯರ್ ಮೇಲೆ, ಕರಿಬಣ್ಣದ ತಟ್ಟೆಯ ತರಹ ಸುತ್ತುತ್ತಿರುವ ಊಒಗಿ ಪ್ಲೇಯರ್ ತೋರಿಸಿದ. ಅಷ್ಟರಲ್ಲಿ ಆ ಹಾಡು ಮುಗಿಯಿತು. ಆ ಪ್ಲೇಟನ್ನು ತೆಗೆದು ನನ್ನ ಕೈಗೆ ಕೊಟ್ಟು, ಇಂಗ್ಲೀಷ್ ಓದೋಕೆ ಬರುತ್ತಾ? ಓದಿಕೋ ಎಂದ. ಓದಿದೆ. ಸಿನಿಮಾ ಹೆಸರು - ನಾಗಿನ್, ಹಾಡಿದವರು ಲತಾಮಂಗೇಶ್ವರ್, ಸಂಗೀತ, ಹೇಮಂತ ಕುಮಾರ್' ಎಂದು ಬರೆದಿತ್ತು. ನಂತರ ಆತನ ಕೈಗೆ ವಾಪಸು ಕೊಟ್ಟು ಇದನ್ನು ಇನ್ನೊಂದು ಸಲ ಹಾಕಿ' ಎಂದೆ. ‘ಎಲ್ಲೋ ಹುಚ್ಚಪ್ಪ' ಎಂದು ಲೊಚಗುಟ್ಟುತ್ತಾ, ಆದೇ ಹಾಡನ್ನು ಮತ್ತೆ ಹಾಕಿದ. ಅದನ್ನು ಕೇಳುತ್ತಾ ನಾನು ಮೈಮರೆತ ಹಾಡು ಮುಗಿದ ನಂತರ ಎಚ್ಚರಿಸಿದರು. ‘ಹಾಡು ಚೆನ್ನಾಗಿತ್ತು' ಅಂದೆ. 'ಇದನ್ನು ದಿನ ಹಾಕ್ತೀನಿ , ನಿಮ್ಮ ಸ್ಕೂಲ್ ವರೆಗೂ ಇದು ಕೇಳುತ್ತೆ. ದಿನ ಕೇಳ್ಕೊಂಡು ಊರಿಗೆ ಹೋಗು' ಎಂದು ತಿಳಿಹೇಳಿ ಕಳುಹಿಸಿದ, ಅಂದಿನಿAದ ನಾನು ಲತಾಮಂಗೇಶ್ವರ್, ಹೇಮಂತ ಕುಮಾರ್ ಅಭಿಮಾನಿಯಾದೆ, ಇಂದಿಗೂ ಈ ವಯಸ್ಸಿನಲ್ಲೂ ಅದೇ ಅಭಿಮಾನವನ್ನು ಉಳಿಸಿಕೊಂಡಿದ್ದೇನೆ.


 ಪರೀಕ್ಷೆಯ ತಯಾರಿ ಚೆನ್ನಾಗಿಯೇ ಆಗುತ್ತಿತ್ತು. ನಮ್ಮಕ್ಕ ನೀನು ಚೆನ್ನಾಗಿ ಓದಿ ಪರೀಕ್ಷೆಲಿ, ನಂ. 1ರಲ್ಲಿ ಪಾಸು ಮಾಡಬೇಕು' ಎಂದು ಹೇಳಿ, ನನಗೆ ಯಾವುದೇ ವ್ಯವಸಾಯದ ಕೆಲಸವನ್ನಾಗಲಿ, ಮನೆ ಕೆಲಸವನ್ನಾಗಲಿ ಕೊಡುತ್ತಿರಲಿಲ್ಲ. ಹಜಾರದಲ್ಲಿ ಒಂದು ಚಾಪೆ ಹಾಕಿಕೊಂಡೋ, ದೊಡ್ಡ ತೋಟದ ಹುಣಿಸೆ ಮರದ ಕೆಳಗೆ ಕುಳಿತು ಪರೀಕ್ಷೆ ತಯಾರಿ ಮಾಡಿಕೊಳ್ಳುತ್ತಿದ್ದ. ರಾತ್ರಿ ಊಟವಾದ ಮೇಲೆ ಹಜಾರದಲ್ಲಿ ಹೊಂಗೆ ಎಣ್ಣೆ ದೀಪದಲ್ಲೋ, ಸೀಮೆಎಣ್ಣೆ ಬುಡ್ಡಿಯ ಬೆಳಕಲ್ಲೋ 10 ಗಂಟೆಯವರೆಗೂ ಓದುತ್ತಿದೆ. ಹೀಗೆ ಓದುವಾಗ ತೂಕಡಿಸಿ ಮುಂದೆ ಇಟ್ಟಿದ್ದ ಸೀಮೆ ಎಣ್ಣೆ ಬುಡ್ಡಿಗೆ ನನ್ನ ಮುಂದಿನ ಜುಟ್ಟು ತಗಲಿ ಒಂದಷ್ಟು ಕೂದಲು ಉರಿದು ಕರಕಲು ವಾಸನೆ ಬರುತ್ತಿತ್ತು.


ಏಪ್ರಿಲ್ ತಿಂಗಳಲ್ಲಿ ಬಡವನಹಳ್ಳಿಯ ನಮ್ಮ ಶಾಲೆಯಲ್ಲಿ ಎಂಟನೇ ತರಗತಿಯ ಪಬ್ಲಿಕ್ ಪರೀಕ್ಷೆ, ಸುಮಾರು 10 ದಿನಗಳ ಪರೀಕ್ಷೆಯನ್ನು ಧೈರ್ಯದಿಂದ, ಹುಮ್ಮಸ್ಸಿನಿಂದ ಬರೆದಿದ್ದೆ. ಸ್ನೇಹಿತರೂ ಕೂಡಾ ಚೆನ್ನಾಗಿ ಮಾಡಿದ್ದೇವೆಂದು ಪರೀಕ್ಷೆ ಆದ ಮೇಲೆ ಆಗಾಗ್ಗೆ ತಿಳಿಸುತ್ತಿದ್ದರು.
ಜೂನ್ ತಿಂಗಳ ಮೊದಲನೇ ವಾರ, ಅಕ್ಕನಿಗೆ ಮನೆಯಲ್ಲಿಯೇ ಅಜ್ಜಿ ಚಿಕ್ಕರಂಗಜ್ಜಿ, ರಂಗಜ್ಜಿ, ಒಬ್ಬಳು ಸೂಲಗಿತ್ತಿ ಸಹಾಯದಿಂದ ಹೆರಿಗೆ ಮಾಡಿಸಿದರು. ಚೊಚ್ಚಲ ಹೆರಿಗೆಯಾದ್ದರಿಂದ ಎಲ್ಲರಿಗೂ ಆತಂಕವಿತ್ತು, ಧರ್ಮಸ್ಥಳದ ಮಂಜುನಾಥನಿಗೆ ಮೀಸಲು ಕಟ್ಟಿಕೊಂಡರು ಅಮ್ಮ. ಕೊನೆಗೆ ಮನೆಯ ಕೊಟ್ಟಿಗೆಯಲ್ಲಿ ಅಕ್ಕನ ಹೆರಿಗೆ ಸುಸೂತ್ರವಾಗಿ ನಡೆದು, ಕಾತುರದಿಂದ ಹೊರಗೆ ಕಾಯುತ್ತಿದ್ದ ಎಲ್ಲರ ಮುಂದೆ 'ಗಂಡು ಮಗು, ತಾಯಿ ಮಗು ಚೆನ್ನಾಗವೆ' ಎಂದು ಅಜ್ಜಿ ರಂಗಜ್ಜಿ ಘೋಷಣೆ ಮಾಡಿದರು. ಆಗ ಎಲ್ಲರ ಮನದಲ್ಲಿದ್ದ ಆತಂಕ ಶಂಕೆಗಳು ಮಾಯವಾಗಿ ಸಂತೋಷದ ಕಿರುನಗೆ ಮೂಡಿತ್ತು. ಮೇ ತಿಂಗಳಲ್ಲಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿ ರಿಸಲ್ಟ್ ಲಿಸ್ಟನ್ನು ನೋಟೀಸು ಬೋರ್ಡಿನಲ್ಲಿ ಅಂಟಿಸಿದ್ದರು. ಪರೀಕ್ಷೆ ತೆಗೆದುಕೊಂಡಿದ್ದ ನನ್ನ ಸ್ನೇಹಿತರೆಲ್ಲ ಕಾತುರದಿಂದ ಓಡೋಡಿ ಶಾಲೆಗೆ ಬಂದರು. ಅಲ್ಲಿ ಜನಗಳ ಜಾತ್ರೆಯೇ ನೆರೆದಿತ್ತು. ಅಷ್ಟರಲ್ಲಿ ನಮ್ಮ ಕ್ಲಾಸ್ ಟೀಚರ್ ರಂಗಶಾಮಯ್ಯನವರು ಶಾಲೆಯಿಂದ ಹೊರಬಂದು ಮನೆ ಕಡೆ ಹೊರಟಿದ್ದರು. ಅವರಿಗೆ ನಾನು ನಮಸ್ಕರಿಸಿದೆ. 'ಏ, ನೀನು ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿದ್ದೀಯ, ನಿನ್ನ ಕ್ಲಾಸ್‌ನಲ್ಲಿ ಫಸ್ಟ್ ಬಂದವರು ನಾಲ್ಕೇ ಜನ, ಅದರಲ್ಲಿ ನೀನು ಒಬ್ಬ, ಶಭಾಷ್, ನಮ್ಮ ಶಾಲೆಗೆ ಹೆಸರು ತಂದೆ. ಹೈಸ್ಕೂಲಿಗೆ ಸೇರಿ ಚೆನ್ನಾಗಿ ಓದು. ನಿನಗೆ ಒಳ್ಳೆ ಭವಿಷ್ಯವಿದೆ' ಎಂದು ಬೆನ್ನು ತಟ್ಟಿದರು. ನಾನು ಅವರ ಕಾಲಿಗೆ ನಮಸ್ಕರಿಸಿ 'ಎಲ್ಲ ನಿಮ್ಮ ಆಶೀರ್ವಾದ, ನನಗೆ ಚೆನ್ನಾಗಿ ಪಾಠ ಆದರಲ್ಲೂ ಇಂಗ್ಲೀಷ್ ಪಾಠ, ಹೇಳಿಕೊಟ್ಟವರು ನೀವು, ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ' ಎಂದು ಬೇಡಿದೆ.
 ಶಾಲೆಯಲ್ಲಿ ರಿಸಲ್ಟ್ ನೋಡುವ ಗೊಂದಲ ಕಡಿಮೆಯಾದ ಮೇಲೆ, ನೋಟೀಸು ಬೋರ್ಡ್ನ ಹತ್ತಿರ ಹೋಗಿ ರಿಸಲ್ಟ್ ನೋಡಿದೆ. ನನ್ನ ಹೆಸರು ಫಸ್ಟ್ ಕ್ಲಾಸ್‌ನಲ್ಲಿ 3ನೇಯದಾಗಿತ್ತು. ನನ್ನ ಸ್ನೇಹಿತರಾದ ಉಪೇಂದ್ರ, ಫಕ್ರುದ್ದೀನ್, ಚಿಕ್ಕಪ್ಪನ ಮಗ ಚೌಡಪ್ಪ II ಅಟಚಿssನಲ್ಲಿ ಪಾಸಾಗಿದ್ದರು. ಹೆಡ್ ಮಾಸ್ಟರ್ ರೂಂಗೆ ಭಯದಿಂದಲೇ 4 ಜನರೂ ಹೋದವು, ಕೆ.ಜಿ. ರಂಗಯ್ಯ ಮೇಷ್ಟ್ರು 'ಏ, ಬಾರಪ್ಪ ತಿಪ್ಪನಹಳ್ಳಿ, ನೀನು ಈiಡಿsಣ ಅಟಚಿss ಬಂದಿದ್ದೀಯ. ನನಗೆ ತುಂಬಾ ಹೆಮ್ಮೆ ಅನಿಸುತ್ತೆ. ನಿಮ್ಮಪ್ಪ ಸಾವ್ಕಾರು, ಚೆನ್ನಾಗಿ ಓದುತ್ತಾರೆ. ಓದಿ ದೊಡ್ಡ ಆಫೀಸರಾಗು” ಎಂದು ಹರಸಿದರು. ನಾನು ಅವರ ಕಾಲಿಗೆರಗಿ ಪಕ್ಕದಲ್ಲಿಯೇ ಕೂತಿದ್ದ ಕನ್ನಡ ಮೇಷ್ಟ್ರು ರಂಗೇಗೌಡ ಹಾಗೂ ಇತರರಿಗೆ ನಮಸ್ಕರಿಸಿದೆ. ಚೆನ್ನಾಗಿ ಓದು ಎಂದು ಎಲ್ಲರೂ ಹರಸಿದರು. ನನ್ನ ನಂತರ, ಇತರರೂ ಕಾಲಿಗೆರಗಿ, ಆಶೀರ್ವಾದ ಪಡೆದರು. ಖುಷಿಯಲ್ಲಿ ಕೇಕೆ ಹಾಕಿಕೊಂಡು ಊರ ಕಡೆ ನಡೆದವು.


 ಶಾಲಾ ಪರೀಕ್ಷೆ ಫಲಿತಾಂಶ ಕೇಳಿ ಮನೆಯಲ್ಲಿ ಎಲ್ಲರೂ ಸಂಭ್ರಮಪಟ್ಟರು. ಅಕ್ಕ ಬಾಣಂತಿಯಿದ್ದರೂ, ಒಳಗೆ ಹೋಗಿ ಆರತಿ ಮಾಡಿಕೊಂಡು ಬಂದು ನೀವಳಿಸಿದರು. ನಂತರ ಸಕ್ಕರೆ ಹುರಿಗಡಲೆ ತಂದು ಬಾಯಿಗೆ ಹಾಕಿ 'ಚೆನ್ನಾಗಿ ಓದಪ್ಪ' ಅಂದರು. ಅಲ್ಲಿಯೇ ಇದ್ದ ಅಪ್ಪ ನಿರ್ಲಿಪ್ತರಾಗಿ ನಿಂತಿದ್ದರು. ಹೋಗಿ ಕಾಲಿಗೆ ನಮಸ್ಕರಿಸಿದೆ. 'ದೇವರು ಒಳ್ಳೇದು ಮಾಡಲಿ' ಎಂದರು. ಪಕ್ಕದಲ್ಲಿ ನಿಂತಿದ್ದ ಅಮ್ಮನ ಕಣ್ಣಲ್ಲಿ ಆನಂದಭಾಷ್ಪ ಹರಿದಿತ್ತು. ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡೆ, ತಮ್ಮಂದಿರಿಗೂ ನಾನು ಕಡಲೆ ಸಕ್ಕರೆ ಬಾಯಿಗೆ ಹಾಕಿ ಬೆನ್ನು ತಟ್ಟಿದೆ.


 ರಾತ್ರಿ ಅಮ್ಮ ಒಬ್ಬಟ್ಟು ಊಟ ಮಾಡಿದ್ದರು. ಭಕ್ತರಹಳ್ಳಿಯಿಂದ ಬಂದಿದ್ದ ಭಾವ ಅವರನ್ನು ಅಲ್ಲಿಯೇ ಇರಿಸಿಕೊಂಡಿದ್ದರು. ದೊಡ್ಡವರು ಎಲ್ಲರೂ ಊಟವಾದ ಮೇಲೆ, ಅಡಿಕೆ ಎಲೆ ಹಾಕಿಕೊಳ್ಳುತ್ತ ಕೂತಿದ್ದರು. ಅಕ್ಕ ಮಧ್ಯೆ ಬಾಯಿಹಾಕಿ ಚಿಕ್ಕಣ್ಣನನ್ನು ಹೈಸ್ಕೂಲ್‌ಗೆ ಮಧುಗಿರಿಗೆ ಸೇರಿಸಬೇಕಪ್ಪ, ಅವನು ಡಿಗ್ರಿ ಓದಬೇಕು' ಎಂದರು. ನನ್ನನ್ನು ಮುಂದೆ ಓದಿಸುವ ಬಗ್ಗೆ ತಂದೆಯವರಿಗೆ ದ್ವಂದ್ವ ಇದ್ದಂತೆ ಬೆಳಗಿನಿಂದ ಬಾಬ ಹೊಲಿದುಕೊಂಡವರAತೆ ಇದ್ದ ಅವರು "ಅದು ಸರಿ ಕಣಮ್ಮ, ಅವನೇ ಚೆನ್ನಾಗಿ ಓದಾನೆ. ಇಲ್ಲಿ ಈ ಜಮೀನು, ಕಾಣಿ, ಮನೆ ಕೆಲಸ ಎಲ್ಲಾ ನೋಡಿಕೊಳಿಸು ನನ್ನ ಶೈಲಿ ಸಾಧ್ಯವಾಗ್ತಾ ಇಲ್ಲ. ಎಲ್ಲಾನೂ ಆಳುಗಳ ಮೇಲೆ ಬಿಟ್ಟರೆ ಆಳು ಮಾಡಿದ್ದ ಹಾಳು' ಎಂಬ ಗಾದೆನೇ ಇದೆ. ಅವನು ದೊಡ್ಡ ಮಗ, ವ್ಯವಸಾಯವನ್ನು ಪ್ರ ಮಾಡ್ತಾನೆ, ಅವನು ನನ್ನ ಜತೆಲಿದ್ರೆ ನನಗೆ ಆನೆ ಬಲ' ಎಂದರು. ಸುಮ್ಮನೆ ಕೂದ ಭಾವ 'ಅದ್ಯಾಕಂಗAತೀರ, ಮಡ್ಡಿರಿಗೆ ಸೇರಿಸಿ, ನಮ್ಮೂರಿಂದ ಓಡಾಡ್ಕಂಡಿರಲಿ, ಚೆನ್ನಾಗಿ `ಓಡ್ತಾನೆ ಪಾಪ' ಎಂದರು. ಅಕ್ಷ ಅಳಲು ಶುರು ಮಾಡಿದರು. ಹಸಿ ಬಾಣಂತಿ, ನೀನು ಅಳಬಾರದು' ಎಂದು ಅಮ್ಮ ಸಾಂತ್ವನ ಹೇಳಿದರು. ಅಕ್ಕನ ಕಣ್ಣಲ್ಲಿ ನೀರನ್ನು ನೋಡಿದ ತಂದೆಯವರು ಮೆತ್ತಗಾದರು. 'ಆಗಲಿ, ಹೈಸ್ಕೂಲಿಗೆ ಹೋಗಿ 3 ವರ್ಷ ಓದಿ ಅವ ಎಸ್.ಎಸ್.ಎಲ್.ಸಿ. ಮುಗಿಸಲಿ. ಆ ನಂತರ ಅವನನ್ನು ವ್ಯವಸಾಯಕ್ಕೆ ಹಾಕೋಣ ಎಂದರು. ಅದಕ್ಕೆ ನಮ್ಮಕ್ಕ 'ಅದು ಸರಿ, ಆದರೆ ಒಂದು ಮಾತು, ಚಿಕ್ಕಣ್ಣ ಎಲ್ಲಿವರೆಗೆ ಪ್ರತೀ ವರ್ಷ ಪಾಸಾಗುತ್ತಾನೆ. ಅಲ್ಲಿವರೆಗೂ ಓದಿಸು, ಫೇಲಾದ ವರ್ಷದಿಂದ ಅವನು ಮನೇಲಿದ್ದು, ವ್ಯವಸಾಯ ನೋಡಿಕೊಳ್ಳಲಿ' ಎಂದು ಅಕ್ಕ ನ್ಯಾಯಾಲಯ ತೀರ್ಪು ಕೊಟ್ಟಂತೆ ತೀರ್ಮಾನ ಹೇಳಿದರು. ವಿಧಿ ಇಲ್ಲದೆ ಅಪ್ಪ ಒಪ್ಪಿಗೆ ನೀಡಿದರು. ಅಮ್ಮನೂ ಸಂತೋಷಪಟ್ಟರು


( ಮುಂದಿನ ‘ಕಿನ್ನರಿ’ಗೆ)