ಸಮಕಾಲೀನ ಸವಾಲುಗಳ ನಡುವೆ ಸಮಾನತೆಯೆಡೆಗೆ - ನಾ ದಿವಾಕರ
“ ಸಾಂವಿಧಾನಿಕ ಆಶಯಗಳಾದ ಸಮಾಜವಾದ ಮತ್ತು ಸಮಾನತೆ ಇಂದು ಶಿಥಿಲವಾಗುತ್ತಿರುವುದರ ನಡುವೆಯೇ ಜನಸಮೂಹಗಳ ಪ್ರತಿರೋಧದ ದನಿಯನ್ನು ಹತ್ತಿಕ್ಕುವಂತಹ ಕರಾಳ ಶಾಸನಗಳನ್ನು ಸಂವಿಧಾನದ ಚೌಕಟ್ಟಿನಲ್ಲೇ ಜಾರಿಗೊಳಿಸಲಾಗುತ್ತಿದೆ. ಭಾರತದ ಪ್ರಜೆಗಳಾದ ನಾವು ವಾಕ್ ಸ್ವಾತಂತ್ರö್ಯ, ಅಭಿವ್ಯಕ್ತಿ ಸ್ವಾತಂತ್ರö್ಯ ಮತ್ತು ಬದುಕುವ ಹಕ್ಕನ್ನು ಪಡೆದುಕೊಂಡಿದ್ದೇವೆಯೇ ಹೊರತು ಯಾರಿಂದಲೂ ನೀಡಲ್ಪಟ್ಟಿಲ್ಲ ಎನ್ನುವ ವಾಸ್ತವವನ್ನೇ ಮರೆತ ಸಮಾಜ ನವ ಉದಾರವಾದದ ಭ್ರಮಾಲೋಕದಲ್ಲಿ ಮೈಮರೆತಂತೆ ವರ್ತಿಸುತ್ತಿದೆ. ದೇಶದ ಸುಶಿಕ್ಷಿತ ಸಮಾಜದ ಈ ನಿರ್ಲಿಪ್ತತೆ ಮತ್ತು ನಿಷ್ಕಿçಯತೆಯೇ ಅಧಿಕಾರ ರಾಜಕಾರಣದ ವಾರಸುದಾರರ ದಬ್ಬಾಳಿಕೆ ಮತ್ತು ಕ್ರೌರ್ಯಕ್ಕೆ ಮುಕ್ತ ಪರವಾನಗಿ ನೀಡುವಂತಾಗಿದೆ.”
ಸಮಕಾಲೀನ ಸವಾಲುಗಳ ನಡುವೆ ಸಮಾನತೆಯೆಡೆಗೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ವರ್ಗಗಳ ಆಟಾಟೋಪಗಳನ್ನು ನಿಯಂತ್ರಿಸಬಹುದಾದ ಅಂಕುಶ ಇರುವುದು ಮೂರು ನೆಲೆಗಳಲ್ಲಿ. ಮೊದಲನೆಯದು ನ್ಯಾಯಾಂಗ, ನಂತರ ಮಾಧ್ಯಮ ವಲಯ ಮತ್ತು ಮೂರನೆಯದು ಪ್ರಜಾದನಿ. ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರ ನಡೆಸುವ ಚುನಾಯಿತ ಸರ್ಕಾರಗಳಿಗೆ ಈ ಪರಿಜ್ಞಾನ ಇಲ್ಲದೆ ಹೋದರೆ ಅಥವಾ ಈ ಮೂರೂ ನೆಲೆಗಳನ್ನು ಧಿಕ್ಕರಿಸುವ ಅಹಮಿಕೆ ಆಡಳಿತ ಕೇಂದ್ರಗಳನ್ನು ಆವರಿಸಿದ್ದರೆ ಅಗ ಆಡಳಿತ ವ್ಯವಸ್ಥೆ ನಿರ್ಲಜ್ಜವಾಗುತ್ತದೆ, ಸಾಪೇಕ್ಷವಾಗಿ ನಿಷ್ಕಿçಯವಾಗುತ್ತದೆ ಕೆಲವೊಮ್ಮೆ ಕ್ರೂರವೂ ಆಗುತ್ತದೆ. ತನ್ನ 75ನೆಯ ವರ್ಷದಲ್ಲಿ ಸ್ವತಂತ್ರ ಭಾರತ ಈ ಪರಿಸ್ಥಿತಿಯನ್ನು ಎದುರಿಸುತ್ತಿದೆ. ದೇಶದ ಮೂಲೆ ಮೂಲೆಗಳಲ್ಲೂ ಹಕ್ಕೊತ್ತಾಯದ ದನಿಗಳು ಕೇಳಿಬರುತ್ತಿದ್ದರೂ ಭಾರತದ ಜನದನಿ ಕ್ಷೀಣಿಸುತ್ತಿರುವುದು ನಿಚ್ಚಳವಾಗಿ ಗೋಚರಿಸುತ್ತಿದೆ.
ದೇಶದ ವಿಭಜನೆಗೆ ಕಾರಣವಾದ ಶಕ್ತಿಗಳೇ ಇಂದು ಸ್ವತಂತ್ರ ಭಾರತ ನಿರ್ಮಾತೃಗಳ ನಡುವೆ ಗೋಡೆಗಳನ್ನು ನಿರ್ಮಿಸುವ ಮೂಲಕ ಜನಸಮುದಾಯಗಳ ನಡುವೆ ಬಹುದೊಡ್ಡ ಕಂದಕಗಳನ್ನು ಸೃಷ್ಟಿಸಲು ಯತ್ನಿಸುತ್ತಿವೆ. ಕೋಮುವಾದ, ಜಾತಿವಾದ ಮತ್ತು ಮತ ಕೇಂದ್ರಿತ ರಾಜಕಾರಣ ಭಾರತದ ಬಹುತ್ವ ಮತ್ತು ಬಹುಸಂಸ್ಕೃತಿಯ ನೆಲೆಗಳನ್ನು ಹಂತಹAತವಾಗಿ ಕೊಲ್ಲುತ್ತಲೇ ಬಂದಿರುವ ಸಂದರ್ಭದಲ್ಲೇ, ಇತಿಹಾಸದ ಪುಟಗಳನ್ನೇ ವಿಕೃತಗೊಳಿಸುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಒಂದು ಪ್ರಜಾಸತ್ತಾತ್ಮಕ-ಜಾತ್ಯತೀತ-ಸಮ ಸಮಾಜವನ್ನು ನಿರ್ಮಿಸುವ ಕನಸು ಹೊತ್ತಿದ್ದ ಸ್ವಾತಂತ್ರö್ಯ ಪೂರ್ವ ನೇತಾರರನ್ನು ಪರಸ್ಪರ ಮುಖಾಮುಖಿಯಾಗಿಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ.
ಈ ವಿಕೃತಿಗಳ ನಡುವೆಯೇ ಭಾರತ ಬದಲಾಗುತ್ತಿರುವುದನ್ನೂ ಗಮನಿಸಬೇಕಿದೆ. ಸಾಂವಿಧಾನಿಕ ಮೌಲ್ಯಗಳನ್ನು ಮೂಲೆಗುಂಪು ಮಾಡುತ್ತಿರುವ ಅಧಿಕಾರ ರಾಜಕಾರಣದ ವಾರಸುದಾರರು, ನವ ಉದಾರವಾದದ ಮಾರುಕಟ್ಟೆಯ ಜಗುಲಿಯಲ್ಲಿ ನಿಂತು ದೇಶದ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಹರಾಜು ಹಾಕುತ್ತಿದ್ದಾರೆ. ಸಾಂವಿಧಾನಿಕ ಆಶಯಗಳಾದ ಸಮಾಜವಾದ ಮತ್ತು ಸಮಾನತೆ ಇಂದು ಶಿಥಿಲವಾಗುತ್ತಿರುವುದರ ನಡುವೆಯೇ ಜನಸಮೂಹಗಳ ಪ್ರತಿರೋಧದ ದನಿಯನ್ನು ಹತ್ತಿಕ್ಕುವಂತಹ ಕರಾಳ ಶಾಸನಗಳನ್ನು ಸಂವಿಧಾನದ ಚೌಕಟ್ಟಿನಲ್ಲೇ ಜಾರಿಗೊಳಿಸಲಾಗುತ್ತಿದೆ. ಭಾರತದ ಪ್ರಜೆಗಳಾದ ನಾವು ವಾಕ್ ಸ್ವಾತಂತ್ರö್ಯ, ಅಭಿವ್ಯಕ್ತಿ ಸ್ವಾತಂತ್ರö್ಯ ಮತ್ತು ಬದುಕುವ ಹಕ್ಕನ್ನು ಪಡೆದುಕೊಂಡಿದ್ದೇವೆಯೇ ಹೊರತು ಯಾರಿಂದಲೂ ನೀಡಲ್ಪಟ್ಟಿಲ್ಲ ಎನ್ನುವ ವಾಸ್ತವವನ್ನೇ ಮರೆತ ಸಮಾಜ ನವ ಉದಾರವಾದದ ಭ್ರಮಾಲೋಕದಲ್ಲಿ ಮೈಮರೆತಂತೆ ವರ್ತಿಸುತ್ತಿದೆ. ದೇಶದ ಸುಶಿಕ್ಷಿತ ಸಮಾಜದ ಈ ನಿರ್ಲಿಪ್ತತೆ ಮತ್ತು ನಿಷ್ಕಿçಯತೆಯೇ ಅಧಿಕಾರ ರಾಜಕಾರಣದ ವಾರಸುದಾರರ ದಬ್ಬಾಳಿಕೆ ಮತ್ತು ಕ್ರೌರ್ಯಕ್ಕೆ ಮುಕ್ತ ಪರವಾನಗಿ ನೀಡುವಂತಾಗಿದೆ.
ಈ ಸಂದರ್ಭದಲ್ಲಿ, ಬದಲಾಗುತ್ತಿರುವ ಭಾರತವನ್ನು ಪ್ರಶ್ನಿಸಬೇಕಾದ ಮಾಧ್ಯಮ ವಲಯ ಮಾರುಕಟ್ಟೆಯ ಸಂಕೋಲೆಗಳಲ್ಲಿ ಬಂಧಿತವಾಗಿರುವುದು ಶತಮಾನದ ದುರಂತ. ಜಾಗತಿಕ ಬಂಡವಾಳ ಸಂವಹನ ಮಾಧ್ಯಮಗಳನ್ನು ಖರೀದಿಸುವ ಮೂಲಕವೇ ತನ್ನ ವಿಸ್ತರಣೆ ಮತ್ತು ಪಾರಮ್ಯಕ್ಕೆ ಅಗತ್ಯವಾದ ನೆಲೆಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಪ್ರಜಾತಂತ್ರದ ನಾಲ್ಕನೆಯ ಸ್ತಂಭ ಎನಿಸಿಕೊಳ್ಳುವ ಮಾಧ್ಯಮದ ಈ ಅವಸಾನದ ನಡುವೆಯೇ, ಜನಸಮೂಹದ ನಡುವೆ ಇಂದಿಗೂ ಕ್ರಿಯಾಶೀಲವಾಗಿರುವ ಸಾಮಾಜಿಕ ಮಾಧ್ಯಮದ ನೆಲೆಗಳು ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಿವಂತವಾಗಿರಿಸುವ ಪ್ರಯತ್ನಗಳಲ್ಲಿ ತೊಡಗಿವೆ. 75 ವರ್ಷಗಳ ನಂತರವೂ ದೇಶವನ್ನು ಕಾಡುತ್ತಿರುವ ಅಸ್ಪೃಶ್ಯತೆ, ಜಾತಿ ತಾರತಮ್ಯ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಮತಾಂಧತೆಯನ್ನು ಧಿಕ್ಕರಿಸುವ ಮೂಲಕ ಈ ಸಮೂಹ ಮಾಧ್ಯಮಗಳು ತಳಮಟ್ಟದ ಜನತೆಯ ಆಶಯಗಳನ್ನು ಜೀವಂತವಾಗಿರಿಸಿವೆ.
ಹಿAದುತ್ವದ ಸಾಂಸ್ಕೃತಿಕ ರಾಜಕಾರಣ ಮತ್ತು ಮತಾಂಧತೆಯ ನೆಲೆಗಳು ತಮ್ಮ ಬಾಹುಗಳನ್ನು ವಿಸ್ತರಿಸಿಕೊಳ್ಳಲು ಬಂಡವಾಳ ಮತ್ತು ಮಾರುಕಟ್ಟೆ ಶಕ್ತಿಗಳನ್ನು ಮೊರೆಹೋಗುತ್ತಿದೆ. ಹಾಗಾಗಿಯೇ ಜಾಗತಿಕ ಬಂಡವಾಳದ ಹಿಡಿತದಲ್ಲಿರುವ ದೃಶ್ಯ ಮತ್ತು ಮುದ್ರಣ ಮಾಧ್ಯಮದ ಸಂಸ್ಥೆಗಳು ಅಧಿಕಾರ ರಾಜಕಾರಣದ ಬಾಲಂಗೋಚಿಗಳಾಗಿವೆ. ಕಣ್ಣೆದುರೇ ನಡೆಯುವ ಅಸ್ಪೃಶ್ಯತೆ, ಅತ್ಯಾಚಾರ, ಹತ್ಯೆ ಮತ್ತು ದೈಹಿಕ ಹಲ್ಲೆಗಳಿಗೆ ಕುರುಡಾಗುವ ದೃಶ್ಯ ಮಾಧ್ಯಮಗಳು ಬಂಡವಾಳ ಮಾರುಕಟ್ಟೆಯನ್ನು ಪೋಷಿಸುವ ಶೋಷಕ ಶಕ್ತಿಗಳಿಗೆ ಒತ್ತಾಸೆಯಾಗಿ ನಿಲ್ಲುತ್ತಿವೆ. ಅಸ್ಪೃಶ್ಯರ ದೇವಾಲಯ ಪ್ರವೇಶ, ಅಂತರ್ ಮತ ವಿವಾಹ, ಅಂತರ್‌ಜಾತಿ ವಿವಾಹ ಮತ್ತು ಪ್ರೇಮ ವಿವಾಹಗಳು ಅಸ್ಪೃಶ್ಯತೆ, ಜಾತಿ ದೌರ್ಜನ್ಯ, ಅತ್ಯಾಚಾರ , ಅನೈತಿಕ ಗೂಂಡಾಗಿರಿ ಮತ್ತು ಗೌರವ ಹತ್ಯೆಗಳಿಗೆ ಕಾರಣವಾಗುತ್ತಿರುವುದು ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಸಂಕೇತವಾಗಿವೆ.
ಜಾತಿ-ಮತದ ಅಸ್ಮಿತೆಗಳನ್ನು ತಮ್ಮ ಅಧಿಕಾರ ಪೀಠದ ಮೆಟ್ಟಿಲುಗಳನ್ನಾಗಿ ಮಾಡಿಕೊಂಡಿರುವ ಸಾಂಸ್ಕೃತಿಕ ರಾಜಕಾರಣದ ಅಧಿಪತಿಗಳು ಮತ್ತು ಊಳಿಗಮಾನ್ಯ ವ್ಯವಸ್ಥೆಯ ಪರಿಚಾರಕರು, ಭಾರತದ ರಾಜಕಾರಣವನ್ನು ಅವಸಾನದತ್ತ ಕೊಂಡೊಯ್ಯುತ್ತಿದ್ದಾರೆ. ಈ ಅಕ್ರಮಗಳ ವಿರುದ್ಧ, ಅನ್ಯಾಯದ ವಿರುದ್ಧ ಮತ್ತು ದೌರ್ಜನ್ಯ-ತಾರತಮ್ಯಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಬೇಕಾದ ಮಾಧ್ಯಮ ವಲಯ ಇಂದು ಬಂಡವಾಳಶಾಹಿ ದಾಸ್ಯದ ಸಂಕೋಲೆಗಳಿAದ ಆವೃತವಾಗಿದೆ. ಈ ಹಂತದಲ್ಲಿ ನಿತ್ಯ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ, ದೌರ್ಜನ್ಯ-ಅತ್ಯಾಚಾರಗಳ ವಿರುದ್ಧ ದನಿ ಎತ್ತಬೇಕಾದ ಹಿತವಲಯದ ಸುಶಿಕ್ಷಿತ ಸಮುದಾಯ ತನ್ನ ಸ್ವಂತಿಕೆಯನ್ನೇ ಕಳೆದುಕೊಂಡು ಬೆತ್ತಲಾಗಿದೆ. ಮನುಜ ಸಂವೇದನೆಯನ್ನು ಪ್ರಕ್ಷÄಬ್ಧಗೊಳಿಸಬೇಕಾದ ಅನ್ಯಾಯಗಳು ಕ್ರಮೇಣ ಸಾಪೇಕ್ಷತೆಯನ್ನು ಪಡೆದುಕೊಳ್ಳುತ್ತಿದ್ದು, ಅಪರಾಧ ಮತ್ತು ಶಿಕ್ಷೆಯ ನಿಷ್ಕರ್ಷೆ ಜಾತಿ-ಮತಗಳ ಅಸ್ಮಿತೆಯ ನೆಲೆಯಲ್ಲಿ ನಡೆಯುತ್ತಿವೆ.
ಸಾಮಾಜಿಕ ಸಮಾನತೆಯ ಆಶಯದೊಂದಿಗೆ ವಸಾಹತುಶಾಹಿಯಿಂದ ವಿಮೋಚನೆ ಹೊಂದಿದ ಭಾರತ ತನ್ನ 75ನೆಯ ವರ್ಷದಲ್ಲಿ, ಪ್ರತಿಗಂಟೆಗೆ ಇಬ್ಬರು ದಲಿತರ ಮೇಲಿನ ಹಲ್ಲೆಯನ್ನು , ದಿನಕ್ಕೆ ಮೂರು ದಲಿತ ಮಹಿಳೆಯರ ಅತ್ಯಾಚಾರವನ್ನು, ದಿನಕ್ಕೆ ಇಬ್ಬರು ದಲಿತರ ಹತ್ಯೆಯನ್ನು, ಪ್ರತಿ ಗಂಟೆಗೆ 26 ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಾಣುತ್ತಿದೆ. ಈ ತಾರತಮ್ಯಗಳು, ದೌರ್ಜನ್ಯಗಳು ಮುಕ್ತವಾಗಿಯೇ ನಡೆಯುತ್ತಿದ್ದರೂ ನಮ್ಮ ಸಮಾಜದಲ್ಲಿ ಅಂತರ್ಗತವಾಗಿರಬಹುದಾದ ಮಾನವೀನ ಸಂವೇದನೆ ಜಾಗೃತವಾಗಿಲ್ಲ ಎನ್ನುವ ಅಂಶವೇ ನಮ್ಮನ್ನು ನಾಚಿ ತಲೆತಗ್ಗಿಸುವಂತೆ ಮಾಡಬೇಕಲ್ಲವೇ ? ಈ ದುಷ್ಕೃತ್ಯಗಳನ್ನು ನಿಯಂತ್ರಿಸಬೇಕಾದ ಆಡಳಿತ ವ್ಯವಸ್ಥೆಯ ಪರಿಚಾರಕರು ಸಮಾಜವನ್ನು ಇನ್ನೂ ವಿಘಟನೆಯತ್ತ ಕೊಂಡೊಯ್ಯುತ್ತಿದ್ದಾರೆ. ಕತ್ತಿ ಝಳಪಿಸುವ, ಶಿರಚ್ಚೇದನ ಮಾಡುವ, ಅತ್ಯಾಚಾರ ಎಸಗುವ ವಿಕೃತ ಮನಸುಗಳಿಗೆ ತಾತ್ವಿಕ ತಳಹದಿಯನ್ನು ಒದಗಿಸುವ ನಿಟ್ಟಿನಲ್ಲಿ ಭಾರತದ ಮತ ಕೇಂದ್ರಿತ ರಾಜಕಾರಣ ಮುನ್ನಡೆಯುತ್ತಿದೆ. 8 ವರ್ಷದ ಹಸುಳೆಯ ಮೇಲೆ ಅತ್ಯಾಚಾರ ಎಸಗಿದ ಸಂದರ್ಭದಲ್ಲಿ ಮೌನ ವಹಿಸಿದ್ದ ಸಮಾಜ ಇಂದು ಒಂಬತ್ತು ತಿಂಗಳ ಹೆಣ್ಣು ಕೂಸಿಗೆ ಅತ್ಯಾಚಾರದ ಬೆದರಿಕೆ ಒಡ್ಡುವ ವಿಕೃತಿಗೆ ಮೂಕಸಾಕ್ಷಿಯಾಗಿ ನಿಂತಿದೆ.
ಸಾಂಸ್ಕೃತಿಕ ರಾಜಕಾರಣ ಮತ್ತು ಮತಾಂಧತೆ ಸೃಷ್ಟಿಸಿರುವ ಪಾಪ ಕೂಪದಲ್ಲಿ ಮಿಂದೆದ್ದಿರುವ ಭ್ರಷ್ಟ ರಾಜಕೀಯ ವ್ಯವಸ್ಥೆ ಇಂದು ಭಾರತದ ಬಹುತ್ವದ ತಳಹದಿಯನ್ನೇ ಬುಡಮೇಲು ಮಾಡಲು ಸಜ್ಜಾಗುತ್ತಿರುವುದನ್ನೂ ಹೀಗೆಯೇ ಮೌನವಾಗಿ ಸಹಿಸಿಕೊಳ್ಳಲಾಗುತ್ತಿದೆ. ಜಾಗತಿಕ ಬಂಡವಾಳ ಸೃಷ್ಟಿಸುವ ಭ್ರಮಾತ್ಮಕ ಲೋಕದಲ್ಲಿ ಈ ದೌರ್ಜನ್ಯಕ್ಕೊಳಗಾದ, ಶೋಷಿತ ಜನಸಮುದಾಯಗಳು ಸಂಪೂರ್ಣ ಪರಕೀಯತೆಯನ್ನು ಎದುರಿಸಬೇಕಾದ ಅಪಾಯವನ್ನೂ ಮೌನವಾಗಿಯೇ ಗಮನಿಸಲಾಗುತ್ತಿದೆ. ಇದೇ ಬಂಡವಾಳ ವ್ಯವಸ್ಥೆ ಸೃಷ್ಟಿಸಿರುವ ಹಿತವಲಯಗಳಲ್ಲಿ ವಿರಮಿಸುತ್ತಿರುವ ಮನಸುಗಳಿಗೆ, ಸಮಾಜದಲ್ಲಿ ನಿತ್ಯ ನಡೆಯುತ್ತಿರುವ ಅನ್ಯಾಯಗಳು, ಅಭಿವೃದ್ಧಿ ಪಥದ ಮೈಲಿಗಲ್ಲುಗಳಾಗಿಯೋ, ಹಾಸುಗಲ್ಲುಗಳಾಗಿಯೋ ಕಾಣುತ್ತಿರುವುದು ದುರಂತ.
ಕೆಲವೇ ದಶಕಗಳ ಹಿಂದೆ ಸಮಾಜಘಾತುಕ ಶಕ್ತಿಗಳ ನಡುವೆ ಕಾಣಬಹುದಾಗಿದ್ದ ಪಾತಕಿಗಳ ಲೋಕವನ್ನು, ಪಾಶವೀ ಶಕ್ತಿಗಳನ್ನು ಇಂದು ಅಧಿಕಾರ ರಾಜಕಾರಣದ ಮಡಿಲಲ್ಲೇ ಕಾಣುವಂತಾಗಿರುವುದು ಸಾಂಸ್ಕೃತಿಕ ರಾಜಕಾರಣ ಮತ್ತು ನವ ಉದಾರವಾದದ ಕೊಡುಗೆ. ರಾಜಕೀಯವನ್ನು ಪಾತಕೀಕರಣದಿಂದ ಮುಕ್ತಗೊಳಿಸುವ ಕನಸು ಕಾಣುತ್ತಿದ್ದ ಭಾರತದ ಯುವ ಪೀಳಿಗೆ ಇಂದು ಪಾತಕಲೋಕದ ರಾಜಕಾರಣಕ್ಕೆ ಮೂಕಸಾಕ್ಷಿಯಾಗಿದೆ. ಹಾಗಾಗಿಯೇ ನಮ್ಮ ಸಂಸತ್ತಿನಲ್ಲಿ ಶೇ 44ರಷ್ಟು ಪಾತಕಿಗಳಿರುವುದು ಸಾಧ್ಯವಾಗಿದೆ. ಜಾಗತಿಕ ಬಂಡವಾಳದೊಡನೆ ಸಮ್ಮಿಳಿತಗೊಳ್ಳಲು ತವಕಿಸುತ್ತಿರುವ ಭಾರತದ ಬಂಡವಳಿಗ ವರ್ಗಕ್ಕೆ ಈ ಪಾತಕೀಕರಣ ಒಂದು ವರದಾನವಾಗಿ ಪರಿಣಮಿಸುತ್ತದೆ. ಏಕೆಂದರೆ ಇದು ಅನ್ಯಾಯಕ್ಕೊಳಗಾದ ಸಂತ್ರಸ್ತರ ಪ್ರಜ್ಞೆಯನ್ನೇ ನಿಷ್ಕಿçಯಗೊಳಿಸುತ್ತದೆ. ಸಾತ್ವಿಕ ಮನಸುಗಳನ್ನು ನಿರ್ಲಿಪ್ತಗೊಳಿಸುತ್ತದೆ.
ಈ ನಿರ್ಲಿಪ್ತ/ನಿಷ್ಕಿçಯ ಮನಸುಗಳನ್ನು ಬಡಿದೆಬ್ಬಿಸುವ ನೈತಿಕ ಜವಾಬ್ದಾರಿಯಿಂದ ಮಾಧ್ಯಮ ವಲಯ ನುಣುಚಿಕೊಂಡಿರುವುದರಿAದ, ಜಾಗೃತಗೊಂಡಿರುವ ಕೆಲವೇ ಮನಸುಗಳು ಇನ್ನೂ ಹೆಚ್ಚು ಕ್ರಿಯಾಶೀಲತೆಯಿಂದ ಮುನ್ನುಗ್ಗಬೇಕಿದೆ. ಭ್ರಷ್ಟ ರಾಜಕಾರಣವನ್ನು ಏಳು ದಶಕಗಳ ಕಾಲ ಸಹಿಸಿಕೊಂಡಿರುವ ಭಾರತೀಯ ಸಮಾಜ ಈಗ ಅನೈತಿಕ ರಾಜಕಾರಣವನ್ನೂ ಸಹಿಸಿಕೊಂಡು ಮುನ್ನಡೆಯುತ್ತಿದೆ. ಈ ಭ್ರಷ್ಟತೆ ಮತ್ತು ಅನೈತಿಕತೆಯೇ ಆಡಳಿತ ವ್ಯವಸ್ಥೆಯ ಕ್ರೌರ್ಯಕ್ಕೂ ಅಡಿಪಾಯ ಹಾಕಿದೆ. ಚುನಾವಣಾ ರಾಜಕಾರಣದಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರ ಮತ್ತು ಅನೈತಿಕತೆಯನ್ನು ಸಂಸ್ಕೃತಿಯ ಸೋಗಿನಲ್ಲಿ, ಮತೀಯ ನಂಬಿಕೆಗಳಲ್ಲಿ, ಸಾಮುದಾಯಿಕ ಅಸ್ಮಿತೆಗಳಲ್ಲಿ ಮುಚ್ಚಿಡುವ ಆಳುವವರ ಚಾಣಾಕ್ಷತೆಯನ್ನು ಬಯಲಿಗೆಳೆಯುವುದು ಈ ಜಾಗೃತ ಮನಸುಗಳ ಧ್ಯೇಯವಾಗಬೇಕಿದೆ.
ಇಲ್ಲಿ ಭಾರತದ ಎಡಪಂಥೀಯ ಚಳುವಳಿ ಮತ್ತು ಪ್ರಗತಿಪರ ಚಳುವಳಿಯ ಕರ್ತವ್ಯ ಪ್ರಜ್ಞೆ ಜಾಗೃತಗೊಳ್ಳಬೇಕಿದೆ. ಈಗಾಗಲೇ ವಿಘಟನೆಗೊಳಗಾಗಿರುವ ಎರಡೂ ಚಳುವಳಿಗಳ ವ್ಯಾಪ್ತಿ ದೇಶವ್ಯಾಪಿಯಾಗಿದ್ದರೂ, ಬೌದ್ಧಿಕ ಮಡಿವಂತಿಕೆ ಮತ್ತು ತಾತ್ವಿಕ ಭಿನ್ನಾಭಿಪ್ರಾಯಗಳು, ಸೈದ್ಧಾಂತಿಕ ಪ್ರತ್ಯೇಕತೆಯ ಭಾವನೆಗಳು ಭಾರತದ ಪುರೋಗಾಮಿ ಚಳುವಳಿಯ ಪ್ರಭಾವವನ್ನು ಕಡಿಮೆ ಮಾಡುತ್ತಿದೆ. ಇಂದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದು ಸಮಾನ ಎಳೆಯನ್ನು ಕಾಣಬಹುದಾದರೆ ಅದು ದಲಿತರ ಮೇಲಿನ ದೌರ್ಜನ್ಯಗಳಲ್ಲಿ, ಅಸ್ಪೃಶ್ಯತೆಯ ಆಚರಣೆಯಲ್ಲಿ, ಮಹಿಳೆಯರ ಮೇಲಿನ ಅತ್ಯಾಚಾರಗಳಲ್ಲಿ, ಶೋಷಿತ- ಅವಕಾಶವಂಚಿತ ಜನಸಮುದಾಯಗಳ ಹಸಿವೆಯಲ್ಲಿ ಕಾಣಬಹುದಲ್ಲವೇ ? ಈ ಎಳೆಯನ್ನೇ ಅನುಸರಿಸಿ ಕ್ರಮಿಸುವ ಯಾವುದೇ ಮನಸ್ಸಿಗೆ ಕಾಣಬೇಕಾದ್ದು ಈ ಅನ್ಯಾಯಗಳಿಗೆ ಕಾರಣವಾದ ಪಾಶವೀ ಶಕ್ತಿಗಳು.
ಖಡ್ಗ, ತಲವಾರುಗಳನ್ನು ಹಿಡಿದ ಮತಾಂಧ ಶಕ್ತಿಗಳು ಮನುಜ ಸಂಬAಧಗಳನ್ನೇ ಕೊನೆಗೊಳಿಸಲು, ಮಾನವ ಸಂವೇದನೆಯನ್ನೂ ಸಾಪೇಕ್ಷಗೊಳಿಸಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ, ಸೂಕ್ಷö್ಮ ಸಂವೇದನೆಯ ಮೂಲಕ ಮಾನವ ಸಮಾಜವನ್ನು ಬೆಸೆಯುವ ದುರ್ಗಮ ಹಾದಿಯನ್ನು ನಾವು ಕ್ರಮಿಸಬೇಕಿದೆ. ಶ್ರೇಣೀಕೃತ ಭಾರತೀಯ ಸಮಾಜದ ಗರ್ಭದಲ್ಲೇ ಅಡಗಿದ್ದ ಒಡೆದು ಆಳುವ ವಿಭಜಕ ನೀತಿಯನ್ನು ವಸಾಹತುಶಾಹಿ ಬ್ರಿಟೀಷರಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಸಮಕಾಲೀನ ಭಾರತದ ಆಳುವ ವರ್ಗಗಳು ಅನುಸರಿಸುತ್ತಿರುವುದನ್ನೂ ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಜಾತಿ ರಾಜಕಾರಣ ಮತ್ತು ಮತೀಯ ಅಸ್ಮಿತೆಯ ನೆಲೆಗಳು ಈ ಆಡಳಿತ ನೀತಿಗೆ ಪೂರಕವಾಗಿ ಪರಿಣಮಿಸಿವೆ. ಭಾರತದ ಶೋಷಿತ ಸಮುದಾಯಗಳ ದೃಷ್ಟಿಯಲ್ಲಿ ಈ ಸಾಂಸ್ಕೃತಿಕ ದಾಳಿಗಳು, ಅನೈತಿಕ ಗೂಂಡಾಗಿರಿ, ಅತ್ಯಾಚಾರಗಳು, ಗುಂಪು ಹಲ್ಲೆಗಳು ಮತ್ತು ಅಸ್ಪೃಶ್ಯತೆಯ ವಿಭಿನ್ನ ಆಯಾಮಗಳು, ಜಾಗತಿಕ ಭಯೋತ್ಪಾದನೆಗಿಂತಲೂ ಹೆಚ್ಚು ಅಪಾಯಕಾರಿಯಾಗಿ ಕಾಣುತ್ತವೆ.
ಆಳುವ ವರ್ಗಗಳ ಶೋಷಕ ನೀತಿಗಳ ವಿರುದ್ಧ, ಸಾಮಾಜಿಕ ಅನ್ಯಾಯ ಮತ್ತು ದೌರ್ಜನ್ಯಗಳ ವಿರುದ್ಧ, ಹೆಚ್ಚಾಗುತ್ತಲೇ ಇರುವ ತಾರತಮ್ಯಗಳ ವಿರುದ್ಧ, ಬಡತನ, ಅಸ್ಪೃಶ್ಯತೆ, ಅತ್ಯಾಚಾರಗಳ ವಿರುದ್ಧ ಪ್ರತಿರೋಧದ ದನಿಗಳು ಮೊಳಗುತ್ತಲೇ ಇದ್ದರೂ ಈ ಭಿನ್ನ ದನಿಗಳನ್ನು ಏಕೀಕೃತಗೊಳಿಸುವ ನಿಟ್ಟಿನಲ್ಲಿ ಇಂದಿಗೂ ಕ್ರಿಯಾಶೀಲವಾಗಿರುವ ವಿಘಟಿತ ಎಡಪಂಥೀಯ ಮತ್ತು ಪ್ರಗತಿಪರ ಚಳುವಳಿಗಳು ಒಂದು ಸಮಾನ ವೇದಿಕೆಯನ್ನು ರೂಪಿಸಿಕೊಳ್ಳಬೇಕಾದ ತುರ್ತು ಎದುರಾಗಿದೆ. ಚುನಾವಣಾ ರಾಜಕಾರಣದಿಂದಾಚೆಗೂ ಒಂದು ಸಾಮಾಜಿಕ ಹೊಣೆಗಾರಿಕೆ ನಮ್ಮ ಮೇಲಿರುವುದನ್ನು ಸಂವಿಧಾನಬದ್ಧ ರಾಜಕಾರಣಿಗಳೂ, ರಾಜಕೀಯ ಪಕ್ಷಗಳೂ ಮನಗಾಣಬೇಕಿದೆ. ವಿಷಯಾಧಾರಿತ ಚಳುವಳಿಗಳಿಂದಾಚೆಗೆ, ನಮ್ಮ ಹೋರಾಟ ಪರಂಪರೆಯೊಳಗಿನ ಬೌದ್ಧಿಕ ಶ್ರಮವಿಭಜನೆಯನ್ನು ಬದಿಗೊತ್ತಿ, ಸಮಗ್ರ ನೆಲೆಯಲ್ಲಿ ಶೋಷಕ ಶಕ್ತಿಗಳ ವಿರುದ್ಧ ಹೋರಾಡಲು ಸಜ್ಜಾಗಬೇಕಿದೆ.
ಇದು ಈ ದೇಶದ ಸಂವಿಧಾನ, ಪ್ರಜ್ಞಾವಂತ ಜನತೆಯಿಂದ ಬಯಸುವ ಮಹತ್ತರವಾದ ಕೊಡುಗೆ. ಸಾಮಾಜಿಕ-ಆರ್ಥಿಕ ಸಮಾನತೆ, ಸಾಂಸ್ಕೃತಿಕ ಸೌಹಾರ್ದತೆ ಮತ್ತು ಭ್ರಾತೃತ್ವದ ಉದಾತ್ತ ಧ್ಯೇಯಗಳನ್ನು ಸಾಧಿಸುವ ನಿಟ್ಟಿನಲ್ಲಿ ಈಗ ಜಾಗೃತರಾಗದೆ ಹೋದರೆ, ಬಹುಶಃ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ.
-0-0-0-0-