ತಿರು ಶ್ರೀಧರ ವ್ಯಕ್ತಿ-ವ್ಯಕ್ತಿತ್ವ ನಮ್ಮಾನಂದಮಯ-ಶಿವಮೊಗ್ಗ ಸುಬ್ಬಣ್ಣ
ತಿರು ಶ್ರೀಧರ ವ್ಯಕ್ತಿ-ವ್ಯಕ್ತಿತ್ವ ನಮ್ಮಾನಂದಮಯ-ಶಿವಮೊಗ್ಗ ಸುಬ್ಬಣ್ಣ
ವ್ಯಕ್ತಿ-ವ್ಯಕ್ತಿತ್ವ
ನಮ್ಮಾನಂದಮಯ-ಶಿವಮೊಗ್ಗ ಸುಬ್ಬಣ್ಣ
ಕನ್ನಡದ ಕಂಠಸಿರಿ, ನಮ್ಮ ಶಿವಮೊಗ್ಗ ಸುಬ್ಬಣ್ಣ 2022ರ ಆಗಸ್ಟ್ 11 ರಾತ್ರಿ ನಿಧನರಾಗಿದ್ದಾರೆ.
ಸುಬ್ಬಣ್ಣನವರು ಹುಟ್ಟಿದ್ದು 1938ರ ಡಿಸೆಂಬರ್ 14ರಂದು. ಅವರ ಮೂಲ ಹೆಸರು ಜಿ. ಸುಬ್ರಮಣ್ಯ. ಅವರು ಕಂಬಾರರ ಚಿತ್ರ ‘ಕರಿಮಾಯಿ’ಯಲ್ಲಿ ಹಾಡಿದ್ದರು. ಜನಪದ ಸೊಗಡಿನ ಆ ಹಾಡು ಹೀಗೆ ಪ್ರಾರಂಭವಾಗುತ್ತದೆ ‘ಸಾವಿರದ ಶರಣವ್ವ ಕರಿಮಾಯಿ ತಾಯೆ...’. ಆ ಹಾಡು ಪ್ರಸಾರವಾದಾಗಲೆಲ್ಲಾ ‘ಎಸ್. ಪಿ. ಬಾಲಸುಬ್ರಮಣ್ಯಂ ಹಾಡಿರುವ ಹಾಡು’ ಎಂದು ಪ್ರಸಾರವಾಗುತ್ತಿತ್ತು. ಕಾರಣ ಆ ಹಾಡಿನ ಡಿಸ್ಕ್ ಮೇಲೆ ಹೆಸರು ತಪ್ಪು ಮುದ್ರಿತವಾಗಿ ಹೋಗಿತ್ತು. ‘ಅಯ್ಯೋ ಯಾರೋ ತಪ್ಪು ತಪ್ಪಾಗಿ ಎಸ್. ಪಿ. ಬಾಲಸುಬ್ರಮಣ್ಯಂ ಅವರನ್ನು ಜಿ. ಸುಬ್ರಮಣ್ಯ’ ಅಂತ ಬರೆದಿದ್ದಾರೆ ಎಂದು ಮುದ್ರಕ ಬುದ್ಧಿವಂತಿಕೆ ತೋರಿಬಿಟ್ಟ! ಆದರೆ ತಾವು ಹಾಡಿರುವ ಮೊದಲ ಹಾಡು ಪ್ರತೀ ಸಲ ಪ್ರಸಾರವಾದಾಗಲೂ ಮತ್ತೊಬ್ಬರ ಹೆಸರಿನಲ್ಲಿ ಪ್ರಸಾರವಾಗುವ ನೋವು ಸುಬ್ಬಣ್ಣನವರನ್ನು ಆವರಿಸಿತ್ತು.
ಮುಂದೆ ಕಂಬಾರರು ‘ಕಾಡು ಕುದುರೆ’ ಚಿತ್ರದಲ್ಲಿ ‘ಕಾಡು ಕುದುರೆ ಓಡಿ ಬಂದಿತ್ತಾ’ ಹಾಡನ್ನು ಹಾಡಿಸುವಾಗ ಹೆಸರನ್ನು ಶಿವಮೊಗ್ಗ ಸುಬ್ಬಣ್ಣ ಎಂದು ಬದಲಿಸಿದರು. ನಮ್ಮ ಜಿ. ಸುಬ್ರಮಣ್ಯ ಉರುಫ್ ಶಿವಮೊಗ್ಗ ಸುಬ್ಬಣ್ಣರಿಗೆ ರಾಷ್ಟ್ರಪ್ರಶಸ್ತಿಯೇ ಬಂತು. ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡಿಗರಾದರು ನಮ್ಮ ಶಿವಮೊಗ್ಗ ಸುಬ್ಬಣ್ಣ. ಅಂದಿನ ದಿನಗಳಲ್ಲಿ ವಕೀಲಿ ವೃತ್ತಿಯಲ್ಲಿ ಜಿ. ಸುಬ್ರಮಣ್ಯರಾಗಿ ಮತ್ತು ಗಾಯನದಲ್ಲಿ ಸುಬ್ಬಣ್ಣರಾಗಿ, ಹೀಗೆ ದ್ವಿಪಾತ್ರ ಅಭಿನಯ ಮಾಡಬೇಕಾಗಿ ಬಂತು. ಕಡೆಗೆ ಅದು ಹುಟ್ಟಿಸುತ್ತಿದ್ದ ದ್ವಂದ್ವಗಳಿಂದ ಹೊರಬಂದು ನ್ಯಾಯಾಲಯದಲ್ಲಿ ಅಫಿಡೆವಿಟ್ ಸಲ್ಲಿಸಿ ಪೂರ್ಣ ಶಿವಮೊಗ್ಗ ಸುಬ್ಬಣ್ಣ ಆದರು.
ಹಾಡುಗಳಲ್ಲಿ ಭಾವಪೂರ್ಣತೆ ಅನುಭಾವಿಸಲು ನಮ್ಮ ಸುಬ್ಬಣ್ಣ ಅವರ ಹಾಡು ಕೇಳುತ್ತಿರಬೇಕು. ‘ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ’ ಎಂದರೆ ಸಾಕು ಅವರ ಗಾನ ಮಾಧುರ್ಯದಲ್ಲಿ ಎಲ್ಲ ಭಾವಗಳೂ ಓಡಿಬಂದು ಸಮ್ಮಿಳಿಸಿ ಬಿಡುತ್ತವೆ. ‘ಆನಂದಮಯ ಈ ಜಗಹೃದಯ’ ಎಂದು ಅವರು ಹಾಡುತ್ತಿದ್ದರೆ ಕೇಳುಗನ ಹೃದಯ ಜಗದಂತರ್ಯಾಮಿಯನ್ನು ಹುಡುಕುತ್ತ ಹೃದಯದಾಳಕ್ಕೆ ಇಳಿದು ಮುದ ಅನುಭವಿಸ ತೊಡಗುತ್ತದೆ. ‘ನಿನ್ನೆಡೆಗೆ ಬರುವಾಗ ಸಿಂಗರದ ಹೊರೆ ಏಕೆ’ ಎಂದು ಅವರು ಹಾಡುವುದನ್ನು ಕೇಳಿದಾಗ ‘ಸಿಂಗರದ ಹೊರೆ ಉಳಿದು, ಮಂತ್ರಗಳ ಮೊರೆ ಉಳಿದು ಪ್ರೇಮದಾರತಿ ಹಿಡಿದು ತೇಲಿ ಬರುವೆ’ ಎಂಬಂತೆ ಜೀವಭಾವಗಳು ಸಚ್ಚಿದಾನಂದದೆಡೆಗೆ ಧಾವಿಸುವಂತಹ ಅನಂತತೆ ನೀಡುತ್ತವೆ. ಇದೊಂದು ಅಪೂರ್ವ ಇನಿಧ್ವನಿ.
ಸುಬ್ಬಣ್ಣನವರ ತಾತ ಶಾಮಣ್ಣನವರು ಘನ ವಿದ್ವಾಂಸರಾಗಿದ್ದು ಮನೆಯಲ್ಲಿ ಸಂಸ್ಕೃತ ವೇದಘೋಷಗಳು ಮೊಳಗುತ್ತಿದ್ದ ಆವರಣವಿತ್ತು. ಚಿಕ್ಕಂದಿನಲ್ಲಿ ಒಂದಷ್ಟು ಸಂಗೀತ ಕಲಿಯುತ್ತಿದ್ದರೂ ಮುಂದೆ ಓದಿನಲ್ಲಿ ಗಮನ ಹರಿಸಿದ ಸುಬ್ಬಣ್ಣರು ಸಂಗೀತದ ಬಗ್ಗೆ ಗಂಭೀರವಾಗಿ ಗಮನ ಹರಿಸಲಿಲ್ಲ. ಕಾಲೇಜಿನ ದಿನಗಳಲ್ಲಿ ರಫಿ, ಕಿಶೋರ್, ಮನ್ನಾಡೆ ಹಾಡುಗಳನ್ನು ಸೊಗಸಾಗಿ ಹಾಡುತ್ತಾ ಬಹುಮಾನ ಗೆಲ್ಲುತ್ತಿದ್ದರು. ಗೆಳೆಯ ಲಕ್ಷ್ಮೀನಾರಾಯಣ ಭಟ್ಟರಿಗೆ ವ್ಯಥೆ. ಇಷ್ಟೊಂದು ಒಳ್ಳೆಯ ಧ್ವನಿ ಅನುಕರಣೆಯಲ್ಲಿ ಕಳೆದು ಹೋಗುತ್ತಿದೆಯೆಲ್ಲ ಎಂದು. ಕಡೆಗೂ ಹುಡುಗ ಕನ್ನಡಿಗರಿಗೆ ದಕ್ಕಿದ. ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಬಿಡುಗಡೆಯಾದ ಮೊಟ್ಟ ಮೊದಲ ಧ್ವನಿಸುರುಳಿ ನಿತ್ಯೋತ್ಸವದಲ್ಲಿ ಕೂಡ ಸುಬ್ಬಣ್ಣ ಹಾಡಿದರು. ಅಂದು ಬನುಮಯ್ಯ ಕಾಲೇಜಿನಲ್ಲಿ ಓದುವಾಗ ಪಾಠ ಮಾಡುತ್ತಿದ್ದ ಸರೋದ್ ವಿದ್ವಾಂಸ ರಾಜೀವ್ ತಾರಾನಾಥ್, ಎಚ್ಎಸ್‍ಕೆ ಮುಂತಾದವರು ಬರೀ ಅಕೌಂಟೆನ್ಸಿ ಮಾತ್ರ ಹೇಳಿಕೊಡದೇ ಕನ್ನಡ ಸಾಹಿತ್ಯವನ್ನು ಕೂಡ ಪ್ರೀತಿಯಿಂದ ಹೇಳುತ್ತಿದ್ದುದನ್ನು ಸುಬ್ಬಣ್ಣ ಆತ್ಮೀಯವಾಗಿ ನೆನೆಯುತ್ತಿದ್ದರು.
ಎಂ.ಎಸ್.ಐ.ಎಲ್ ಪ್ರಾಯೋಜಕತ್ವದಲ್ಲಿ ಶಿಶುನಾಳ ಷರೀಫ್ ಸಾಹೇಬರ ಗೀತೆಗಳು ಮೂಡಿಬಂದಾಗ ಸುಬ್ಬಣ್ಣರ ಇನಿಧ್ವನಿಯಲ್ಲಿ ಮೂಡಿ ಬಂದ ‘ಬಿದ್ದೀಯಬ್ಬೆ ಮುದುಕಿ ಬಿದ್ದೀಯಬ್ಬೆ’, ‘ಅಳಬೇಡ ತಂಗಿ ಅಳಬೇಡ’, ‘ಕೋಡಗನ್ನ ಕೋಳಿ ನುಂಗಿತ್ತ’ ಮುಂತಾದ ಗೀತೆಗಳು ಕನ್ನಡಿಗರ ಹೃದಯದಲ್ಲಿ ಆಚ್ಚಳಿಯದೆ ನೆಲೆನಿಂತವು. ಮುಂದೆ ‘ಕುವೆಂಪು ಗೀತೆಗಳು’, ‘ಗೀತಗಂಗಾ’, ‘ದೀಪಿಕಾ’, ‘ಕವಿಶೈಲ’, ‘ಬಾರೋ ವಸಂತ’, ‘ಅಗ್ನಿಹಂಸ’, ‘ನಾಮಸ್ಮರಣ’, ‘ಉಪಾಸನಾ’, ‘ದೇವ ನಿನ್ನ ಬೇಡುವೆ’ ಮೊದಲಾದ ನೂರಾರು ಧ್ವನಿಸುರುಳಿಗಳಿಗೆ ಸುಬ್ಬಣ್ಣ ಧ್ವನಿಯಾದರು. ಜೊತೆಗೆ ತಮ್ಮ ವಕೀಲಿ ವೃತ್ತಿಯನ್ನು ಕೂಡ ಮುಂದುವರೆಸಿಕೊಂಡು ಬಂದರು. ಶಿವಮೊಗ್ಗದಲ್ಲಿ, ನಂತರ ಬೆಂಗಳೂರಿನ ಹೈಕೋರ್ಟುಗಳಲ್ಲಿ ತಮ್ಮ ವಕೀಲಿ ವೃತ್ತಿಯನ್ನು ನಡೆಸಿದರು. ಸಿನಿಮಾದಲ್ಲಿ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಹೆಗ್ಗಳಿಕೆ ಅವಕಾಶಗಳನ್ನು ಹೊತ್ತು ತಂದರೂ ಅಂದಿನ ದಿನಗಳಲ್ಲಿ ಧ್ವನಿಮುದ್ರಣ ಮದರಾಸಿನಲ್ಲಿ ನಡೆಯುತ್ತಿದುದರಿಂದ ಇರುವ ವೃತ್ತಿ ಬಿಟ್ಟು ಮದರಾಸಿನಲ್ಲಿ ಜೀವನ ನಡೆಸುವ ಧೈರ್ಯ ಬರಲಿಲ್ಲ ಎನ್ನುತ್ತಿದ್ದರು ಸುಬ್ಬಣ್ಣ.
ಮೇಲೆ ಹೇಳಿದ ಗೀತೆಗಳಲ್ಲದೆ ‘ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ ಮುಂದೆ ನಿಂತಳು ನನ್ನ ಕೈ ಹಿಡಿದ ಹುಡುಗಿ’, ‘ಬಾರಿಸು ಕನ್ನಡ ಡಿಂಡಿಮವ’, ‘ದೂರಕೆ ದೂರಕೆ ಬಹು ಬಹು ದೂರಕೆ ಹಾರುವೆ ಗಾನ ವಿಮಾನದಲಿ’, ‘ಏಕೆ ಕಾಡುತಿದೆ ಸುಮ್ಮನೆ ನನ್ನನ್ನು ಯಾವುದೋ ಈ ರಾಗ’, ‘ಹೂವಿನ ಸೊಬಗನು ನೋಡುತ ನೀನು ಕೋಮಲವೆನ್ನುತ ಮುತ್ತಿಡುವೆ’, ‘ಅಂತರತಮ ನೀ ಗುರು ಹೇ ಆತ್ಮ ತಮೋಹಾರಿ’, ‘ನೀನು ನಕ್ಕರೆ ಹಾಲು ಸಕ್ಕರೆ’, ‘ದೇಹವಿದು ನೀನಿರುವ ಗುಡಿಯೆಂದು ತಿಳಿದು’, ‘ತೇನ ವಿನಾ ತೃಣಮಪಿ ನ ಚಲತಿ ತೇನ ವಿನ’ ಹೀಗೆ ಒಂದಾಂದ ಮೇಲೆ ಒಂದು ಬಂದು ನೂರಾರು ಹಾಡುಗಳು ಹೃದಯತುಂಬಿ ನೆನಪಿನಂಗಳದಲ್ಲಿ ನಲಿಯುತ್ತವೆ. ‘ಚಿಂತೆ ಯಾತಕೆ ಗೆಳತಿ’ ಚಿತ್ರಗೀತೆ ಕೂಡ ನೆನಪಾಗುತ್ತೆ. ಭಾವಗೀತೆಗಳಲ್ಲದೆ ಬಹಳಷ್ಟು ಜನಪದ ಗೀತೆ, ಭಕ್ತಿಗೀತೆಗಳ ಕ್ಯಾಸೆಟ್ಗಳಲ್ಲೂ ಸುಬ್ಬಣ್ಣ ತಮ್ಮ ಸುಮಧುರ ನಾದವನ್ನು ಪಸರಿಸಿದ್ದಾರೆ. ಜೊತೆಗೆ ದೇಶ ವಿದೇಶಗಳಲ್ಲಿರುವ ಕನ್ನಡಿಗರಿಗೆ ಸಾಂಸ್ಕೃತಿಕ ಉತ್ಸವಗಳಲ್ಲಿ ಮತ್ತು ಹಲವಾರು ವೇದಿಕೆಗಳಲ್ಲಿ ಕೂಡ ಅವರ ಗಾನಗಂಗೆ ನಿರಂತರವಾಗಿ ಹರಿದಿತ್ತು.
ಕಾಡುಕುದುರೆ ಚಿತ್ರದ ಗಾಯನಕ್ಕೆ ಸಂದ ರಾಷ್ಟ್ರ ಪ್ರಶಸ್ತಿಯಲ್ಲದೆ, ‘ಕನ್ನಡ ಕಂಪು’ ಪ್ರಶಸ್ತಿ, ‘ಸುಂದರಶ್ರೀ ಪ್ರಶಸ್ತಿ’, ‘ಶಿಶುನಾಳ ಷರೀಫ್ ಪ್ರಶಸ್ತಿ’, ‘ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಗೌರವ’, ‘ಕುವೆಂಪು ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವ’ ಮುಂತಾದ ಅನೇಕ ಪ್ರತಿಷ್ಠಿತ ಗೌರವಗಳು ಶಿವಮೊಗ್ಗ ಸುಬ್ಬಣ್ಣ ಅವರಿಗೆ ಸಂದಿದ್ದವು.
ಮತ್ತೊಮ್ಮೆ ನೆನಪಾಗುತ್ತದೆ ಶಿವಮೊಗ್ಗ ಸುಬ್ಬಣ್ಣರ ಧ್ವನಿಯಲ್ಲಿನ ಈ ಹಾಡಿನ ಕೆಲವು ಸಾಲುಗಳು...
“ಬನ್ನಿ ಬನ್ನಿ ನನ್ನದೆಯ ಬಯಲಿದು ಬತ್ತದ ಕನ್ನೆ ನೆಲ,
ಬೆಳೆಯಿರಿ ಇಲ್ಲಿ ಬಗೆ ಬಗೆ ತೆನೆಯ ನಮಿಸುವೆ ನೂರು ಸಲ
ನಿಮ್ಮನೆ ಕನವರಿಸಿ, ನಿಮದೇ ಮನವಿರಿಸಿ,
ಕಾಯುತ್ತಿರುವೆನು ಕ್ಷಣ ಕ್ಷಣವೂ ಎದೆಯನು ಹದಗೊಳಿಸಿ
ಬನ್ನಿ ಭಾವಗಳೆ ಬನ್ನಿ ನನ್ನದೆಗೆ ಕರೆಯುವೆ ಕೈ ಬೀಸಿ....”
ಇಂಥಹ ಸೊಗಸಿನ ಸುಬ್ಬಣ್ಣರ ಇನಿದನಿಯನ್ನು ಕೇಳಲು ಶ್ರೋತೃಗಳ ಹೃದಯವೂ ಎಂದೆಂದೂ ಆಶಿಸುತ್ತಲೇ ಇರುತ್ತದೆ.
ತಮ್ಮ ನಾದ ಮಾಧುರ್ಯದಿಂದ ಜನರ ಹೃದಯವನ್ನು ನಿರಂತರವಾಗಿ ಬೆಳಗಿದ ಸುಬ್ಬಣ್ಣರು ಇಲ್ಲ ಎಂದು ಎದ್ದ ತಕ್ಷಣ ಸುದ್ಧಿ ಓದಿದಾಗ ಮನಸು ಮೂಕವಾಗುತ್ತಿದೆ. ಅಳುವ ಮನ ಹೇಗೆ ತಾನೇ "ಆನಂದಮಯ ಈ ಜಗಹೃದಯ ಎನ್ನಬಲ್ಲದು ”.
ಸಾವೆಂಬುದು ದೇಹ ಬಡವಾದಾಗ ಜೀವಕ್ಕೆ ಅನಿವಾರ್ಯ ಗವಾಕ್ಷಿ. ಆದರೆ ಬದುಕನ್ನು ಭವ್ಯ ಸಾಧನೆಯಾಗಿ ಸರಳ ಸಜ್ಜನತೆಯಿಂದ ಬಾಳಿದ ಶಿವಮೊಗ್ಗ ಸುಬ್ಬಣ್ಣ ಎಂಬ ದಿವ್ಯ ಚೇತನ ಅಮರ.
(ಸೌಜನ್ಯ: ಸಲ್ಲಾಪ.ಕಾಮ್)