ಒಂದು ಗಳಿಗೆ -ಕುಚ್ಚಂಗಿ ಪ್ರಸನ್ನ -ನಿಷ್ಕಾಮ ಕಾಮಿಯ ಕಾಲ್ನಡಿಗೆ ಪಯಣ
ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ ನಿಷ್ಕಾಮ ಕಾಮಿಯ ಕಾಲ್ನಡಿಗೆ ಪಯಣ
ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ
ನಿಷ್ಕಾಮ ಕಾಮಿಯ ಕಾಲ್ನಡಿಗೆ ಪಯಣ
“ ಬಹು ಜನ ಸುಖಾಯ, ಬಹು ಜನ ಹಿತಾಯಚ” ಎನ್ನುವ ಋಗ್ವೇದದ ಸಾಲನ್ನು ಉಲ್ಲೇಖಿಸಿ ಬುದ್ಧ ಕುಟುಂಬ, ಅಧಿಕಾರ, ಆಸ್ತಿ ಎಲ್ಲವನ್ನೂ ತೊರೆದು ಬಂದು ಶರಣಾದ ಭಿಕ್ಕುಗಳಿಗೆ ಹೀಗೆ ಹೇಳುತ್ತಾನೆ,
“ ಚಾರತಮ್ ಭಿಕ್ಕುವೇ ಚಾರತಮ್,
ಬಹು ಜನ ಸುಖಾಯ, ಬಹು ಜನ ಹಿತಾಯ,
ಲೋಕಾನುಕಂಪಾಯ”
ಹೀಗೆ ಬಹು ಜನರ ಸುಖ, ಬಹು ಜನರ ಹಿತ ಹಾಗೂ ಲೋಕಾನುಕಂಪಕ್ಕೆ ಕಾರಣವಾಗುವಾತನನ್ನು ಬೋಧಿಸತ್ವ ಅವಲೋಕಿತೇಶ್ವರ ಎಂದು ಗುರುತಿಸಲಾಗುತ್ತದೆ.
ಗಮ್ಯ ವಿಸ್ತಾರವಾದಂತೆ ಪ್ರಾಣಿಗಳನ್ನು ಪಳಗಿಸಿಕೊಂಡು ಸವಾರಿ ಮಾಡತೊಡಗಿದ ಮನುಷ್ಯ ಚಕ್ರವನ್ನೂ ಉರುಳಿಸುತ್ತ, ಉರುಳಿದ್ದು ಸಾಕು ತೇಲುವ, ತೇಲಿದ್ದು ಸಾಲದು ಹಾರುವ ಎನ್ನುತ್ತ, ಗುರುತ್ವವನ್ನೂ ಮೀರಿ ತನ್ನ ಸುತ್ತ ಸುತ್ತುತ್ತ ಸರ‍್ಯನನ್ನೂ ಸುತ್ತುತ್ತಿರುವ ಪೃಥ್ವಿಯನ್ನೂ ಚಂದ್ರದನ್ನೂ ಸುತ್ತು ಹಾಕತೊಡಗಿದ.
ಉರುಳಾಟ, ತೇಲಾಟ, ಹಾರಾಟಗಳೆಲ್ಲವನ್ನು ಒಂದು ಬದಿಗಿರಿಸಿದ ರಾಹುಲ್ ಗಾಂಧಿಗೆ ಕಾಲ್ನಡಿಗೆಯೇ ಚಂದ ಅಂತನ್ನಿಸಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೀಗೇ ಸಾಗಿದರೆ ಹೇಗೆ ಅಂತ ಯಾಕನ್ನಿಸಿತೋ ಗೊತ್ತಿಲ್ಲ, ಆದರೆ ಆರು ತಿಂಗಳಿಡೀ ನಡೆಯುವ ಈ ಭಾರತ ಐಕ್ಯತಾ ಯಾತ್ರೆ ಎರಡು ರಾಜ್ಯ ದಾಟಿ ಕರ್ನಾಟಕಕ್ಕೆ ಕಾಲಿಡುವ ಹೊತ್ತಿಗೇ ಬಿಜೆಪಿ ಚಡಪಡಿಸತೊಡಗಿದೆ. ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾಂಗ್ರೆಸ್‌ನ ಗುರುತು ಹಸ್ತದೊಂದಿಗೆ ಒಂದು ಪುಟದ ಜಾಹಿರಾತು ಕೊಡುವಷ್ಟರ ಮಟ್ಟಿಗೆ ಬಿಜೆಪಿ ತಲೆ ಕೆಡಿಸಿಕೊಂಡಿದೆ. ಹೀಗೆ ರಾಹುಲ್ ದಿನವೂ ತಲಾ ಇಪ್ಪತ್ತರಂತೆ ಮೂರು ಸಾವಿರದೈನೂರು ಚಿಲ್ಲರೆ ಕಿಲೋಮೀಟರ್ ಕ್ರಮಿಸುವ ಹೊತ್ತಿಗೆ ಇನ್ನೂ ಏನೆಲ್ಲವನ್ನು ಕಾಣಬೇಕೋ ಗೊತ್ತಿಲ್ಲ.
ಇಂಡಿಯಾದ ಇತಿಹಾಸದಲ್ಲಿ ಮಹಾತ್ಮ ಗಾಂಧಿ, ಸಂತ ವಿನೋಬಾ ಭಾವೆ, ದಿವಂಗತ ಪ್ರಧಾನಿ ಚಂದ್ರಶೇಖರ್ ಸೇರಿ ಅನೇಕರು ಜನ ಹಿತದ ಕಾರಣವಾಗಿಯೇ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದನ್ನು ನೆನಪಿಸಿಕೊಳ್ಳಿ. ರಾಮಾಯಣದಲ್ಲಿ 14 ವರ್ಷಗಳ ವನವಾಸ ಅನುಭವಿಸಬೇಕಾಗಿ ಬಂದಾಗ ಆನೆ, ಕುದುರೆ, ಒಂಟೆ, ರಥಗಳಿದ್ದರೂ ರಾಮ, ಅನುಜ ಲಕ್ಷ್ಮಣ, ಮಡದಿ ಸೀತೆಯೊಂದಿಗೆ ಕಾಲ್ನಡಿಗೆಯಲ್ಲೇ ಕಾಡು ಸೇರುತ್ತಾನೆ.
ಆಧುನಿಕ ಇಂಡಿಯಾದಲ್ಲಿ ಮಹಾತ್ಮ ಗಾಂಧಿ 1930ರ ಮಾರ್ಚಿ 12ರಂದು ಸಬರಮತಿ ಆಶ್ರಮದಿಂದ ಕಾಲ್ನಡಿಗೆಯಲ್ಲೇ 272 ಕಿಲೋಮೀಟರ್ ನಡೆದು ದಂಡಿ ಸಮುದ್ರ ದಂಡೆ ತಲುಪಿ ಸ್ವಾಭಿಮಾನದ ಮೇರು ಸಂಕೇತವಾದ ಉಪ್ಪನ್ನು ತಯಾರಿಸುತ್ತಾರೆ. ಆದರೆ ಇದೇ ಗಾಂದಿ ದಂಡಿ ಯಾತ್ರೆಗೂ ಮೊದಲು 1913ರಲ್ಲಿ ü ದಕ್ಷಿಣ ಆಫ್ರಿಕಾದಲ್ಲಿ ನ್ಯೂಕ್ಯಾಸೆಲ್‌ನಿಂದ ಟ್ರಾನ್ಸ್ವಾಲ್‌ಗೆ ಸಾವಿರಾರು ಜನರೊಂದಿಗೆ 36 ಕಿಲೋ ಮೀಟರ್ ಪಾದಯಾತ್ರೆ ಮಾಡುತ್ತಾರೆ. ಜೊತೆಗೆ ಅಸ್ಪೃಶ್ಯತೆ ತೊಲಗಲಿ ಎಂಬ ಘೋಷಣೆಯೊಂದಿಗೆ 1933-34ರಲ್ಲಿ ದೇಶದಲ್ಲಿ ಪಾದಯಾತ್ರೆ ಕೈಗೊಳ್ಳುತ್ತಾರೆ.
ದೇಶದಲ್ಲಿ ಉಳ್ಳವರ ಮನವೊಲಿಸಿ ನಿರ್ಗತಿಕರಿಗೆ ಭೂಮಿ ಹಂಚುವ ಸಲುವಾಗಿ ಸಂತ ವಿನೋಬಾ ಭಾವೆ 1951ರಲ್ಲಿ ತೆಲಂಗಾಣದ ಪೂಚಂಪಲ್ಲಿಯಿಂದ ದೇಶವಿಡೀ ಕಾಲ್ನಡಿಗೆಯಲ್ಲೇ ಸುತ್ತುತ್ತ 13 ವರ್ಷ ಸಾಗಿದ ಅವರು ಒಟ್ಟು 58 ಸಾವಿರ ಕಿಲೋ ಮೀಟರ್ ಕ್ರಮಿಸಿ ಬಿಹಾರದ ಬೋಧಗಯಾದಲ್ಲಿ ನಡಿಗೆ ಅಂತ್ಯಗೊಳಿಸುತ್ತಾರೆ.
ಮುಂದೊಮ್ಮೆ ಕಾಂಗ್ರೆಸ್ ಬೆಂಬಲದೊಂದಿಗೆ ದೇಶದ ಪ್ರಧಾನ ಮಂತ್ರಿಯಾಗುವ ಜನತಾ ಪಕ್ಷದ ಚಂದ್ರಶೇಖರ್ ತಮ್ಮ 56ನೇ ವಯಸ್ಸಿನಲ್ಲಿ ದೇಶದ ಜನರ ಕಷ್ಟ ಸುಖ ಅರ್ಥ ಮಾಡಿಕೊಳ್ಳುವ ಸಲುವಾಗಿ ಕನ್ಯಾಕುಮಾರಿಯಿಂದ ದಿಲ್ಲಿಯ ಗಾಂಧಿ ಸಮಾಧಿ ರಾಜಘಾಟ್‌ವರೆಗೆ ನೂರಾರು ಬೆಂಬಲಿಗರೊAದಿಗೆ 1983ರ ಜನವರಿ ಆರರಿಂದ ಜೂನ್ 25ರವರೆಗೆ 4260 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದನ್ನೂ ನೆನಪಿಸಿಕೊಳ್ಳಿ.
ಆಂಧ್ರ ಪ್ರದೇಶದಲ್ಲಿ ದಿವಂಗತ ವೈ.ಎಸ್.ರಾಜಶೇಖರ ರೆಡ್ಡಿ 2003ರಲ್ಲಿ 64 ದಿನ 1470 ಕಿಲೋಮೀಟರ್ ಪಾದಯಾತ್ರೆ ಮಾಡಿ ಮರು ವರ್ಷ ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸಿದರು. ಅವರ ಮಗ ಜಗನ್ ಮೋಹನ ರೆಡ್ಡಿ 2017ರ ನವೆಂಬರ್ 6ರಿಂದ 2019ರ ಜನವರಿ 9ರವರೆಗೆ 13 ಜಿಲ್ಲೆಗಳ 125 ವಿಧಾನ ಸಭಾ ಕ್ಷೇತ್ರಗಳಲ್ಲಿ 430 ದಿನಗಳ ಕಾಲ 3648 ಕಿಲೋಮೀಟರ್ ಪ್ರಜಾ ಸಂಕಲ್ಪ ಯಾತ್ರೆ ನಡೆಸಿದರು. ಜಗನ್ ಸೋದರಿ ಶರ್ಮಿಳಾ ಕೂಡಾ 2800 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದಾರೆ ಎಂದರೆ ಕಾಲ್ನಡಿಗೆ ಯಾತ್ರೆಯ ಮಹತ್ವ ಅರ್ಥ ಮಾಡಿಕೊಳ್ಳಿ.
ಇಂಡಿಯಾದಲ್ಲಿ ಕೆಲ ಸಮುದಾಯಗಳು, ವ್ಯಕ್ತಿಗಳೂ ಮನೆ ದೇವರಿಗೆ ಕಾಲ್ನಡಿಗೆ ಯಾತ್ರೆಯಲ್ಲೇ ಸಾಗುವುದೂ ರೂಡಿಯಲ್ಲಿದೆ. ಥೇರ ಪಂಥದ ಮಹಾಶ್ರಮಣರು ಅಹಿಂಸೆ, ಭಾವೈಕ್ಯತೆ ಸೌಹಾರ್ದದ ಮಹತ್ವ ಸಾರಲು 2014ರಿಂದ ಭಾರತ, ನೇಪಾಳ ಹಾಗೂ ಭೂತಾನ್ ಈ ಮೂರು ದೇಶಗಳಲ್ಲಿ 50 ಸಾವಿರ ಕಿಲೋಮೀಟರ್‌ಗೂ ಹೆಚ್ಚು ನಡೆದಿದ್ದಾರೆ.
ದೇಹದ ಫಿಟ್‌ನೆಸ್ ಗೀಳಿಗೆ ಬಿದ್ದವರೂ ತಲ್ಲಣಗೊಳ್ಳುವಂತೆ ರಾಹುಲ್ ಗಾಂಧಿ ಅತ್ಯಂತ ಫಿಟ್ ಆಗಿರುವುದು ಅವರ ಆರಂಭದ ಮೂರು ವಾರಗಳ ಕಾಲ್ನಡಿಗೆ ಯಾತ್ರೆ ಕಾಣುತ್ತಿದೆ.
ಅತ್ತ ಗುಜರಾತಿನಲ್ಲಿ ವಿಧಾನ ಸಭಾ ಚುನಾವಣೆ ಕಾವೇರಿದೆ, ಅಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುವ ಹಂಬಲ ರಾಹುಲ್‌ಗೆ ಇದ್ದಂತಿಲ್ಲ, ಇತ್ತ ದಿಲ್ಲಿಯಲ್ಲಿ ಕಾಂಗ್ರೆಸ್ ಗದ್ದುಗೆಗೆ ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿದ್ದು, ಶಶಿ ತರೂರ್ ಎದುರು ಕರ್ನಾಟಕದ ಧೀಮಂತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೈಕಮಾಂಡ್ ಕಣಕ್ಕಿಳಿಸಿದೆ ಎಂದು ನಂಬಲಾಗಿದ್ದು, ಅನಾಯಾಸವಾಗಿ ದೊರಕಬಹುದಾಗಿದ್ದ ಪಕ್ಷದ ಅಧ್ಯಕ್ಷಗಿರಿಯ ಮೋಹವೂ ತನಗಿಲ್ಲ ಎಂಬಂತೆ ರಾಹುಲ್ ನಿಷ್ಕಾಮ ಕಾಮಿಯಂತೆ ಹೆಜ್ಜೆ ಹಾಕುತ್ತಿದ್ದಾರೆ.
ಅಧಿಕಾರವನ್ನು ದಕ್ಕಿಸಿಕೊಂಡು ನಂತರ ತೊರೆದರೆ ಅಂಥವರನ್ನು ತ್ಯಾಗಿ ಎನ್ನುತ್ತಾರೆ, ಒಲ್ಲೆ ಎಂದು ದೂರವೇ ಹೋಗುವವರನ್ನು ಪುಕ್ಕಲ ಎನ್ನುತ್ತಾರೆ ಎಂದು ಕಳೆದ ಒಂಬತ್ತು ವರ್ಷಗಳಿಂದ ಕಾಂಗ್ರೆಸ್ ಆಶ್ರಯದಲ್ಲೇ ಇರುವ ಹಿರಿಯ ಪತ್ರಕರ್ತರೊಬ್ಬರು ರಾಜ್ಯದ ದಿನಪತ್ರಿಕೆಯೊಂದರಲ್ಲಿ ಹಿತವಾದ ಹೇಳಿದ್ದಾರೆ.
ರಾಹುಲ್ ಜೊತೆ ಇರುವ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಅವರ ಈ ಲೇಖನವನ್ನು ಕನ್ನಡದಿಂದ ಇಂಗ್ಲಿಷ್ ಅಥವಾ ಹಿಂದಿಗೆ ಅನುವಾದಿಸಿ ಓದಿಸಿದರೋ ಇಲ್ಲವೋ ಗೊತ್ತಿಲ್ಲ.
ರಾಹುಲ್ ಹಾದಿಯಲ್ಲಿ ದಿನವೂ ಸುದ್ದಿಗೋಷ್ಟಿ ನಡೆಸುತ್ತಿದ್ದಾರೆ. ದಿನದಿಂದ ದಿನಕ್ಕೆ ರಾಹುಲ್ ಮಾತುಗಳು ಸ್ಫುಟಗೊಳ್ಳತೊಡಗಿವೆ. “ನೋಡಿ ಈ ಐಕ್ಯತಾ ಪಾದಯಾತ್ರೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ, ಈ ಯಾತ್ರೆಯಲ್ಲಿ ನೂರಕ್ಕೂ ಹೆಚ್ಚು ತರುಣ ತರುಣಿಯರು ಪಾಲ್ಗೊಂಡು ಹುಮ್ಮಸ್ಸಿನಿಂದ ನಡೆಯುತ್ತಿದ್ದಾರೆ, ನಾನೂ ಇವರ ಜೊತೆಯಲ್ಲಿ ಹೆಜ್ಜೆ ಹಾಕುತ್ತಿದ್ದೇನೆ, ಆದರೆ ನೀವು ಪತ್ರಕರ್ತರು, ಮಾಧ್ಯಮದ ಮಂದಿ ನನ್ನ ಮೇಲೆ ನಿಮ್ಮ ಗಮನವನ್ನು ಫೋಕಸ್ ಮಾಡಿದ್ದೀರಿ ಅಷ್ಟೇ” ಎನ್ನುತ್ತಾರೆ ರಾಹುಲ್ ಗಾಂಧೀ,
ಆದರೆ ಅವರ ಮಾತಿನಂತೆ ಅಷ್ಟೇ ಆಗಿ ಅದು ಉಳಿದಿಲ್ಲ. ಈ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿರದೇ ಹೋಗಿದ್ದರೆ ಇಡೀ ರಾಜ್ಯದ ಕಾಂಗ್ರೆಸ್ ನಾಯಕರು ನಿದ್ದೆಗೆಟ್ಟು ಏರ್ಪಾಡುಗಳನ್ನು ಮಾಡುತ್ತಿರಲಿಲ್ಲ ಎಂಬುದೂ ಅಷ್ಟೇ ಸತ್ಯ.
ಹಿಂದೆ ಚಂದ್ರಶೇಖರ್ ಭಾರತ ಯಾತ್ರೆ ನಡೆಸಿದಾಗ ಕರ್ನಾಟಕದಿಂದಲೂ ಕೆಲವು ಯುವಕರು ಪಾಲ್ಗೊಂಡಿದ್ದರು, ತುಮಕೂರಿನಿಂದಲೂ ತುಂಬಾಡಿ ದೇವರಾಜ್ ಎಂಬ ಉತ್ಸಾಹಿ ಯುವಕ ಪಾದಯಾತ್ರೆಯಲ್ಲಿ ನಡೆದು ಬಂದಿದ್ದಾರೆ. ದೇವರಾಜ್ ಈಗಲೂ ದೇವೇಗೌಡರ ಜೆಡಿಎಸ್‌ನಲ್ಲಿ ಸಕ್ರಿಯವಾಗಿದ್ದಾರೆ.
ರಾಹುಲ್ ಪಾಲ್ಗೊಂಡಿರುವ ಪಾದಯಾತ್ರೆ ಯಾವ ರಂಗದ ಮೇಲೆ ಮತ್ತು ಯರ‍್ಯಾರ ಮೇಲೆ ಯಾವ ಪರಿಣಾಮ ಬೀರುತ್ತದೆಯೋ ಇಲ್ಲವೋ, ಇಡೀ ಕಾಲ್ನಡಿಗೆ ಪಯಣ ಆಖೈರುಗೊಳ್ಳುವ ಹೊತ್ತಿಗೆ ರಾಹುಲ್ ಗಾಂಧಿ ಹೊಸ ರಾಹುಲ್ ಗಾಂಧಿಯಾಗಿ ಹೊರ ಹೊಮ್ಮಲಿದ್ದಾರೆ ಎಂಬುದಂತೂ ಸತ್ಯ.