ಬಾಳ ದಾರಿಯಲ್ಲಿ ಜಾರಿ ಹೋದ ಸೂರ‍್ಯ ! -ಕುಚ್ಚಂಗಿ ಪ್ರಸನ್ನ

ಬಾಳ ದಾರಿಯಲ್ಲಿ ಜಾರಿ ಹೋದ ಸೂರ‍್ಯ ! ಒಂದು ಗಳಿಗೆ   -ಕುಚ್ಚಂಗಿ ಪ್ರಸನ್ನ

ಬಾಳ ದಾರಿಯಲ್ಲಿ ಜಾರಿ ಹೋದ ಸೂರ‍್ಯ !                      -ಕುಚ್ಚಂಗಿ ಪ್ರಸನ್ನ

 

ಬಾಳ ದಾರಿಯಲ್ಲಿ ಜಾರಿ ಹೋದ ಸೂರ‍್ಯ !

ಒಂದು ಗಳಿಗೆ   -ಕುಚ್ಚಂಗಿ ಪ್ರಸನ್ನ


ಭಾಷೆ ಮಾತ್ರವಲ್ಲ ಸಿನಿಮಾ ವಿಷಯದಲ್ಲೂ ಅಷ್ಟೇ, ಕನ್ನಡವರಿಗಿಂತ ತಮಿಳರು ಹೆಚ್ಚು ದುರಭಿಮಾನಿಗಳು ಎನ್ನುವ ಮಾತಿದೆ. ತಮಿಳು ಸಿನಿಮಾಗಳ ಮುಂದೆ ಕನ್ನಡ ಸಿನಿಮಾಗಳು ಸಿನಿಮಾಗಳೇ ಅಲ್ಲ ಎಂಬ ತೀವ್ರವಾದಿ ಗೆಳೆಯರೂ ಇದ್ದಾರೆ. ಭಾಷೆಯನ್ನು ಮೀರಿ ಭಾವದಲ್ಲೇ ಎಲ್ಲವನ್ನೂ ಸೃಷ್ಟಿಸಿಕೊಟ್ಟ ಚರ‍್ಲಿ ಚಾಪ್ಲಿನ್ ಸಿನಿಮಾಗಳು ನಮ್ಮ ಕಣ್ಣ ಮುಂದಿರುವಾಗ ಸಿನಿಮಾ ಅಥವಾ ದೃಶ್ಯ ಮಾಧ್ಯಮವನ್ನು ಗಂಭೀರವಾಗಿ ತೆಗೆದುಕೊಂಡ ನನ್ನಂತವರಿಗೆ ಭಾಷೆ ಮುಖ್ಯ ಎನ್ನಿಸಿಯೇ ಇಲ್ಲ.


ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ ಆಸುಪಾಸಿನಲ್ಲೇ ಚಿತ್ರೀಕರಿಸಿದ ಮಣಿರತ್ನಂರ ‘ದಳಪತಿ’ ತಮಿಳು ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡಾಗ ಆ ಸಿನಿಮಾ ಕುರಿತು ಮೆಚ್ಚುಗೆಯ ಲೇಖನವೊಂದನ್ನು ಬರೆದಿದ್ದೆ. ತು.ಪು.ಮಹೇಶ ಎಂಬ ಕನ್ನಡಾಭಿಮಾನಿ ವಕೀಲ ಗೆಳೆಯ ತಮಿಳು ಸಿನಿಮಾ ಮೆಚ್ಚುವುದು ತಪ್ಪಷ್ಟೇ ಅಲ್ಲ ಮಹಾಪರಾಧ ಎಂದು ನಾನು ಆಗ ಕೆಲಸ ಮಾಡುತ್ತಿದ್ದ ಪತ್ರಿಕಾ ಕಚೇರಿಗೇ ಬಂದು ಜಗಳ ಕಾದದ್ದುಂಟು.


1973ರಿಂದಲೂ ನಾನು ಇದೇ ತುಮಕೂರಿನಲ್ಲಿ ಬೆಳೆದವನು, ಆಗ ಇದ್ದದ್ದೇ ಕೃಷ್ಣ, ಪ್ರಶಾಂತ್, ನ್ಯೂ ವಿನೋದ ಮತ್ತು ಶ್ರೀ ಟಾಕೀಸ್ ಎಂಬ ನಾಲ್ಕು ಚಿತ್ರಮಂದಿರಗಳು. ಕೃಷ್ಣ ಸಿನಿಮಾ ಮಂದಿರ ಹೆಂಚಿನ ಕಟ್ಟಡವಾಗೇ ಇತ್ತು. ನಾವು ತುಮಕೂರಿಗೆ ಬಂದ ನಂತರ ಆ ಥಿಯೇಟರಿನಲ್ಲಿ ನೋಡಿದ ಮೊದಲ ಸಿನಿಮಾ ‘ ನಂದ ಗೋಕುಲ’, ಅದಾದ ಮೇಲೆ ಅದೆಷ್ಟೋ ಲೆಕ್ಕವಿಲ್ಲದಷ್ಟು ಸಿನಿಮಾಗಳನ್ನು ಈ ಊರಿನಲ್ಲಿ ನೋಡಿರುವೆನಾದರೂ ಮೊದಲ ಸಿನಿಮಾ ಎಂಬುದು ನಾವು ಮೋಹಿಸಿದ, ಪ್ರೀತಿಸಿದ ಮೊದಲ ಹುಡುಗಿಯಷ್ಟೇ ಅಚ್ಚಳಿಯದ ನೆನಪನ್ನು ಉಳಿಸಿಬಿಟ್ಟಿರುತ್ತದೆ ಅಲ್ವಾ.


ಅಣ್ಣ -ತಂಗಿ ಎಂಬ ಸಿನಿಮಾವನ್ನು ಅದೆಷ್ಟು ಸಲ ನೋಡಿಬಿಟ್ಟಿದ್ದೇನೋ ಗೊತ್ತಿಲ್ಲ, ಅದೊಂದೇ ಅಲ್ಲ ಬಹಳಷ್ಟು ಸಿನಿಮಾಗಳನ್ನು ಒಂದಕ್ಕಿಂತ ಹೆಚ್ಚು ಸಲ ನೋಡಲು ಬೇರೆಯೇ ಕಾರಣವಿತ್ತು. ಗುಬ್ಬಿ ಗೇಟಿನಿಂದ ಬೆಂಗಳೂರು ಗೇಟ್, ಕುಣಿಗಲ್ ಗೇಟ್‌ನಿಂದ ಶಿರಾ ಗೇಟ್ ವರೆಗೆ ಮಾತ್ರವೇ ಬೆಳೆದುಕೊಂಡಿದ್ದ ತುಮಕೂರಿನಲ್ಲಿ ಈ ನಾಲ್ಕು ಸಿನಿಮಾ ಮಂದಿರಗಳಲ್ಲಿ ಓಡುವ ಸಿನಿಮಾಗಳನ್ನು ಬಿಟ್ಟರೆ ವರ್ಷದಲ್ಲಿ ಕೆಲವು ತಿಂಗಳು ಬಾಳನಕಟ್ಟೆ ಬಯಲಲ್ಲಿ ಹಾಕುತ್ತಿದ್ದ ಹೊಳೆಹುಚ್ಚೇಶ್ವರ ಡ್ರಾಮಾ ಕಂಪನಿಯ ಟೆಂಟು ಮಾತ್ರವೇ ಮನರಂಜನೆಗೆ ಅಂತ ಇದ್ದದ್ದು. ನಾಟಕಗಳೋ ದಿನಕ್ಕೆ ಒಂದು ಪ್ರದರ್ಶನ ಮಾತ್ರ ಅದೂ ತಡರಾತ್ರಿಯಲ್ಲಿ, ಶನಿವಾರ ಮತ್ತು ಭಾನುವಾರ ಮಾತ್ರ ಎರಡು ಶೋಗಳಿರುತ್ತಿದ್ದವು. ಊರುಗಳಿಂದ ನಮ್ಮ ಮನೆಗೆ ಬರುತ್ತಿದ್ದ ತಾತ ಮತ್ತು ಸೋದರ ಮಾವಂದಿರನ್ನು ನಾನೇ ಪುಸಲಾಯಿಸಿ ಆ ಸಿನಿಮಾ ನೋಡಿದ್ದೀಯ, ಈ ಸಿನಿಮಾ ಬಂದಿದೆ ಅಂತ ಯಾವುದಾದರೂ ಒಂದು ಶೋಗೆ ಹೊರಡಿಸಿಬಿಡುತ್ತಿದ್ದೆ. ಮಯೂರ ಸಿನಿಮಾ ಬಂದಾಗಲಂತೂ ಆ ಸಿನಿಮಾ ನೋಡಲೆಂದೇ ಊರೂರುಗಳಿಂದ ಗಾಡಿ ಕಟ್ಟಿಕೊಂಡು ಜನರು ಬರುತ್ತಿದ್ದರು, ಹಾಗಾಗಿ ಕಮ್ಮಿ ಎಂದರೂ ಹತ್ತಾರು ಸಲ ಆ ಸಿನಿಮಾ ನೋಡಿ ಡಯಲಾಗ್‌ಗಳನ್ನೆಲ್ಲ ಬಾಯಿ ಪಾಠ ಮಾಡಿಕೊಂಡು ಬಿಟ್ಟಿದ್ದೆ.


ಕಣಗಾಲದಲ್ಲಿ ಊರುಗಳಲ್ಲೂ ಅಷ್ಟೇ , ಹಿಡುಲ್ಲು ಹುಯ್ದು ಒಕ್ಕಿದ್ದೆಲ್ಲ ಆದರೆ ಸಿನಿಮಾಕ್ಕೆ ಕರಕೊಂಡು ಹೋಗ್ತೀನಿ ಅಂತ ಹೇಳಿಬಿಟ್ರೆ ಸಾಕು, ಚಕಾಚಕ್ಕಂತ ಎಲ್ಲ ಮಾಡಿ ಮುಗಿಸಿಬಿಡೋರು. ಯಾವತ್ತಾದರೂ ಒಂದು ಎಲ್ಲಾರನೂ ಗಾಡಿ ಕಟ್ಟಿಸಿಕೊಂಡು ತುಮಕೂರಿಗೆ ಕರಕೊಂಡು ಬಂದು ರಾತ್ರಿ ಸೆಕೆಂಡ್ ಶೋ ಸಿನಿಮಾ ತೋರಿಸಿಬಿಟ್ರೆ ಸರಿಹೋಗಿ ಬಿಡ್ತಿತ್ತು. ವೈಯಕ್ತಿಕವಾಗಿ ಕತೆ, ಕಾದಂಬರಿಗಳ ಮುಖಾಂತರ ಓದಿನ ಗೀಳು ಬೆಳೆಸಿಕೊಂಡರೂ, ಸಿನಿಮಾದಂಥ ದೃಶ್ಯ ಮಾಧ್ಯಮ ಎಷ್ಟು ದೊಡ್ಡ ಪ್ರಭಾವವನ್ನು ಬೀರಬಲ್ಲದು ಎಂಬುದಕ್ಕೆ ‘ ಕಾಂತಾರ’ ಎಂಬ ಸಿನಿಮಾ ಕಳೆದ ಎರಡು ವಾರದಿಂದ ಫೇಸ್ ಬುಕ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಎಬ್ಬಿಸಿದ ಧೂಳು ಮತ್ತು ಅದರಿಂದ ಉಂಟಾಗಿರುವ ಗದ್ದಲವನ್ನು ಗಮನಿಸಿದರೆ ಅರ್ಥವಾಗುತ್ತದೆ.


ಸಿನಿಮಾಗಳನ್ನು ನೋಡ ನೋಡುತ್ತಲೇ ಸಿನಿಮಾದ ನಟರನ್ನೂ ಮೆಚ್ಚುವ, ಮೆಚ್ಚುತ್ತಲೇ ಅಭಿಮಾನಿಗಳೂ ಆಗಿ ಬಿಡುತ್ತೇವೆ. ಹಾಗೇ ಇಷ್ಟವಾಗದ ನಟರನ್ನು ದ್ವೇಷಿಸಲೂತೊಡಗುತ್ತೇವೆ. ಸಿನಿಮಾ ನಟರ ಮೇಲಿನ ಅಭಿಮಾನ ಅವರ ಕಟ್‌ಔಟ್‌ಗೆ ಹಾಲಿನ ಅಭಿಷೇಕ ಮಾಡಿಸುತ್ತದೆ, ಇಬ್ಬರು ನಾಯಕ ನಟರ ಅಭಿಮಾನಿಗಳು ಹುಚ್ಚೆದ್ದು ಹೊಡೆದಾಡಿಕೊಳ್ಳುವಂತೆ ಮಾಡುತ್ತದೆ. ಬೇಕಿದ್ದರೆ ನೋಡಿ, ರಾಜಕಾರಣಿಗಳ ರಾಜಕೀಯ ಸಮಾವೇಶಗಳಿಗೆ ಜನರನ್ನು ಕಲೆ ಹಾಕಬೇಕೆಂದರೆ ಹಣ, ಊಟ, ಮದ್ಯ ಎಲ್ಲವನ್ನೂ ಕೊಟ್ಟು ಬಸ್ಸು, ಲಾರಿಗಳಲ್ಲಿ ಕರೆತರಬೇಕು, ಆದರೆ ಸಿನಿಮಾಗಳಿಗೆ ಮತ್ತು ಸಿನಿಮಾ ನಟರನ್ನು ನೋಡಲೆಂದು ಜನರೇ ಸ್ವಂತ ಖರ್ಚಿನಲ್ಲಿ ಓಡಿ ಬರುತ್ತಾರೆ. 


ಬಾಲ್ಯದಿಂದಲೂ ನನಗೆ ಪುಸ್ತಕಗಳ ಜೊತೆಗೆ ಸಿನಿಮಾಗಳೂ ಸಮಾನ ಆಸಕ್ತಿಯ ಸಂಗತಿಗಳಾಗಿ, ಕ್ರೀಡೆ ತುಸು ಹಿಂದೆ ಬಿತ್ತು, ಕ್ರಿಕೆಟ್ ಆಟ ಆಡಲು ಇಷ್ಟವಾಗಿತ್ತೇ ಹೊರತು ಸ್ಟೇಡಿಯಂಗಳಲ್ಲಾಗಲೀ ಟಿವಿ ಮುಂದೆ ಕೂತಾಗಲೀ ನೋಡಲು ಇಷ್ಟ ಆಗುವುದಿಲ್ಲ. ಟಿವಿಗಳು ಮನೆಗಳಿಗೆ ಕಾಲಿಡುವ ಮೊದಲು ರೇಡಿಯೋಗಳಲ್ಲಿ ಇಂಗ್ಲಿಷ್- ಹಿಂದಿ ಕಾಮೆಂಟರಿಗಳನ್ನು ಕ್ಷಣ ಬಿಡದೆ ಪಾಕೆಟ್ ಟ್ರಾನ್ಸಿಸ್ಟರ್‌ಗಳನ್ನು ಕಿವಿಗೆ ತಗುಲಿಸಿಕೊಂಡೇ ಇರುತ್ತಿದ್ದವರನ್ನು ನೋಡಿ ಅಯ್ಯೋ ಅನಿಸುತ್ತಿತ್ತು. 


ಆದರೆ ನನಗೆ ಹಾಡುಗಳು ಬಹಳ ಇಷ್ಟವಾಗಿಬಿಡುತ್ತಿದ್ದವು, ಸಿನಿಮಾ ಅಂತಲೇ ಅಲ್ಲ, ಯಾವ ಹಾಡಾದರೂ ಸರಿಯೇ, ನನ್ನ ಮೆಚ್ಚುಗೆ ಗಳಿಸಿಕೊಂಡ ಯಾವುದೇ ಹಾಡನ್ನು ನಿರಂತರ ನೂರು ಸಲ ಕೇಳಲೂ ನನಗೆ ಬೇಸರ ಎನಿಸುವುದಿಲ್ಲ, ನನ್ನ ಅಂಥಾ ಪ್ಯಾಶನೇಟ್ ಆದ ನಡವಳಿಕೆ ನನ್ನ ಜೊತೆ ಇರುವ ಎಲ್ಲರಿಗೂ ಇಷ್ಟವಾಗಬೇಕೂ ಅಂತಲೂ ಇಲ್ಲವಲ್ಲ. 
ಹೀಗೆ ಸಿನಿಮಾಗಳನ್ನು ನೋಡುತ್ತ ನೋಡುತ್ತ ಅರಿವಿಲ್ಲದಂತೆಯೇ ಕೆಲ ಸಿನಿಮಾ ನಟರು ನನ್ನ ಮೆಚ್ಚುಗೆಗೆ ಪಾತ್ರರಾಗಿಬಿಟ್ಟರು, ಅವರಲ್ಲಿ ಕನ್ನಡದ ರಾಜ್‌ಕುಮಾರ್‌ಗೆ ಮೊಟ್ಟ ಮೊದಲ ಸ್ಥಾನ, ನಂತರ ಅದೆಷ್ಟೊಂದು ನಟ, ನಟಿಯರೂ ಈ ಪಟ್ಟಿ ಸೇರಿದ್ದಾರೆ, ಪಟ್ಟಿ ಬೆಳೆಯುತ್ತಲೇ ಇದೆ. 1980 ನಾನು ಹೈಸ್ಕೂಲು ಮುಗಿಸಿ ಕಾಲೇಜಿಗೆ ಕಾಲಿಟ್ಟ ವರ್ಷ. ಉಗಾದಿಗೆ ವಾರವಿತ್ತು ಅಂತ ಕಾಣುತ್ತದೆ, ಸೋಮೇಶ್ವರಪುರದ ಎಂಸಿ ಕಾಲೋನಿ ಅಂದರೆ ಮಿಡ್ಲ್ಕ್ಲಾಸ್ ಕಾಲೋನಿಯ ಒಂದನೇ ಕ್ರಾಸಿನಲ್ಲಿ ಒಂದು ವಿಶಾಲವಾದ ಕಾಂಪೌಂಡ್ ಇದ್ದ ಪುಟ್ಟ ಹೆಂಚಿನ ಮನೆಯಲ್ಲಿ ವಾಸವಿದ್ದೆವು. ವಿಧಾನಸೌಧದಲ್ಲಿ ನೌಕರಿಯಲ್ಲಿದ್ದರೂ ಹುಟ್ಟು, ಬಾಲ್ಯವನ್ನೆಲ್ಲ ಕುಚ್ಚಂಗಿ ಎಂಬ ತುಮಕೂರು ನಗರಕ್ಕೆ ಸಮೀಪದ ಹಳ್ಳಿಯಲ್ಲೇ ಬೆಳೆದಿದ್ದ ನಮ್ಮಪ್ಪ ಆ ಹೆಂಚಿನ ಬಾಡಿಗೆ ಮನೆಗೆ ಆ ಭಾನುವಾರ ತಾನೇ ಕೈಯಾರೆ ಕುಂಚಮಟ್ಟೆ ತಂದು ಸುಣ್ಣ ಬಿರಿ ಹುಯ್ದು ಬಳಿಯತೊಡಗಿತು. ಎಲ್ಲ ಸೇರಿಕೊಂಡು ಬೇಗ ಮುಗಿಸಿಬಿಟ್ಟರೆ ರಾಜಕುಮಾರ್ ಪಿಕ್ರ‍್ರಿಗೆ ಕರಕೊಂಡು ಹೋಗ್ತೀರಾ ಅಲ್ವೇನ್ರೀ ಅಂತ ನಮ್ಮಮ್ಮ ಹುರಿದಿಂಬಿಸಿಬಿಟ್ಟಿತ್ತು. 


ಇನ್ನೇನು ನಮ್ಮನ್ನು ಹಿಡಿಯೋರು ಯಾರು, ಪಟಾ ಪಟ್ ಅಂತ ಮನೆ ತುಂಬ ಗಾರೆ ನೆಲದ ಮೇಲೆ ಸಿಡಿದಿದ್ದ ಸುಣ್ಣವನ್ನೆಲ್ಲ ತೆಂಗಿನ ನಾರಿನಲ್ಲಿ ಉಜ್ಜಿ ತೆಗೆದು ನೀರಿನಲ್ಲಿ ತೊಳೆದು ಸ್ವಚ್ಚ ಮಾಡತೊಡಗಿದೆವು. ಪಾತ್ರೆ ಪಡಗಗಳೆಲ್ಲ ಫಳಪಳ ಹೊಳೆಯತೊಡಗಿದವು. ಕತ್ತಲಾಗುವ ಹೊತ್ತಿಗೆ ಎಲ್ಲ ಕೆಲಸ ಮುಗಿದು, ರಾತ್ರಿ ಪ್ರಶಾಂತ್ ಥಿಯೇಟರ್‌ನಲ್ಲಿ ಸೆಕೆಂಡ್ ಶೋಗೆ ಹೊರಟೆವು. ನಮ್ಮಪ್ಪ ಸೈಕಲ್‌ನಲ್ಲಿ ನನ್ನ ತಮ್ಮ ಮತ್ತು ತಂಗಿಯನ್ನು ತ್ರಿಬಲ್ ಕೂರಿಸಿಕೊಂಡು ಹೊರಟು ಥಿಯೇಟರ್ ತಲುಪುವ ಹೊತ್ತಿಗೆ ನಾನು ಓಡೋಡುತ್ತಲೇ ಹೋಗಿ ಟಿಕೆಟ್ ತಗಂಡು ನಿಂತು ಬಿಟ್ಟಿದ್ದೆ. ರಾಜ್‌ಕುಮಾರ್ ಸಿನಿಮಾ ಅಂದರೆ ಸಾಕಾಗುತ್ತಿತ್ತು, ಜೊತೆಗೆ ವಾಲ್‌ಪೋಸ್ಟರ್‌ನಲ್ಲಿ ರಾಜಕುಮಾರ್ ಇದ್ದರೆ ಮುಗೀತು, ಸಿನಿಮಾ ಯಾವುದು ಅನ್ನೋದು ಮುಖ್ಯ ಆಗ್ತಿರಲಿಲ್ಲ ಅವಾಗ. ಆದರೆ ಆ ಸಿನಿಮಾ ಹೆಸರು ಹೇಳುವುದೂ ಇಲ್ಲಿ ಮುಖ್ಯವಾಗುತ್ತದೆ. ಆ ಸಿನಿಮಾ ಹೆಸರು- ‘ ವಸಂತ ಗೀತ’. 


ಆವರೆಗೆ ನನ್ನ ಮೆಚ್ಚಿನ ನಟನ ಮುಖ್ಯ ಸ್ಥಾನದಲ್ಲಿದ್ದ ರಾಜಕುಮಾರ್ ಜೊತೆಗೆ ಮತ್ತೊಬ್ಬ ನಟ ನನ್ನ ಮನಸೆಳೆದುಬಿಟ್ಟ, ಯಾರು ಅಂತ ಹೇಳಿ ನೋಡುವ ಅಂತ ಗಿಮಿಕ್ ಮಾಡಲ್ಲ, ಅವತ್ತು ನನ್ನ ಮನ ಸೆಳೆದ ಆ ಪುನೀತ್ ರಾಜಕುಮಾರ್ ಎಂಬ ಪುಟ್ಟ ಬಾಲಕ ಕಳೆದ ವರ್ಷ ಇದೇ ತಿಂಗಳು ಇಡೀ ಕನ್ನಡದ ಜನರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿಬಿಟ್ಟನಲ್ಲ. ಮುಂದಿನ ಶನಿವಾರಕ್ಕೆ ವರ್ಷ ತುಂಬುತ್ತದಂತೆ, ವರ್ಷ ಪೂರ್ತಿ  ಈತನ ನೆನಪು ಮತ್ತು ಸ್ತುತಿಯಲ್ಲೇ ಕಳೆದು ಹೋಗಿದೆ.


ವಸಂತಗೀತ ನಂತರ ವರ್ಷಕ್ಕೊಂದರಂತೆ ನಿರಂತರ ಪುನೀತ್ ಸಿನಿಮಾಗಳು ಬಿಡುಗಡೆಯಾಗುತ್ತ ಆತ ನನ್ನಂತೆಯೇ ಕನ್ನಡ ಜನರ ಮನಸ್ಸಲ್ಲಿ ನೆಲೆ ನಿಲ್ಲತೊಡಗಿದ. ‘ ಭಾಗ್ಯವಂತ’, ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’ ¨’ ಭಕ್ತ ಪ್ರಹ್ಲಾದ’, ‘ ಯಾರಿವನು’ ಈ ಸಿನಿಮಾಗಳನ್ನೆಲ್ಲ ಪುನೀತ್‌ಗಾಗಿಯೇ ಸೃಷ್ಟಿಸಲಾಯಿತು, ಇವೆಲ್ಲ ಸಿನಿಮಾಗಳಿಗೆ ಕಳಸವಿಟ್ಟಂತೆ ‘ ಬೆಟ್ಟದ ಹೂ’ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಗಳಿಸಿ ಕೇವಲ ಹತ್ತು ವರ್ಷದ ಬಾಲಕ ಪುನೀತ್‌ನ ಎರಡೂ ಕೈಗಳಿಗೆ ಒಂದೊಂದು ಐಸ್ ಕ್ಯಾಂಡಿಯಂತೆ ಕೊಟ್ಟು ಬಿಟ್ಟಿತಲ್ಲ.


ಅದಾದ ಹನ್ನೆರಡು ವರ್ಷಗಳ ನಂತರ ‘ ಅಪ್ಪು’, ‘ಅಭಿ’ ಸಿನಿಮಾಗಳ ಮೂಲಕ ನಾಯಕನಟನಾಗಿ ಬಂದ ಪುನೀತ್ ಮೊದಲ ಒಂದಷ್ಟು ಸಿನಿಮಾಗಳಲ್ಲಿ ಹೇಳಿಕೊಳ್ಳುವಷ್ಟು ಇಷ್ಟವಾಗದೇ ಇದ್ದರೂ 2010ರಲ್ಲಿ ಗಣಿ ಅಕ್ರಮ ಕುರಿತ ಗಂಭೀರ ಕತೆ ಹೊಂದಿದ್ದ ‘ ಪೃಥ್ವಿ’ ಹಾಗೂ ಸೂರಿ ನಿರ್ದೇಶನದ ‘ ಜಾಕಿ’ ಸಿನಿಮಾಗಳ ಮೂಲಕ ಎಲ್ಲರ ಮನೆ ಮಗ ಅಥವಾ ನೆರೆ ಮನೆ ಹುಡುಗನಂತೆ ಮೆಚ್ಚುಗೆ ಗಳಿಸಿದ. ಈ ನಡುವೆ ಕನ್ನಡ ಕೋಟ್ಯಧಿಪತಿಯೂ ಆದ. 


ಪುನೀತ್ ನಟಿಸಿದ ಬೆರಳೆಣಿಕೆಯ ಕೆಲವನ್ನು ಬಿಟ್ಟು ಉಳಿದ ಬಹುಪಾಲು ಸಿನಿಮಾಗಳು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತಯಾರಾಗಿ ಯಶಸ್ಸು ಗಳಿಸಿದ ಸಿನಿಮಾಗಳ ರಿಮೇಕ್‌ಗಳು ಹಾಗೂ ಹೊಡೆದಾಟವೇ ಪ್ರಧಾನವಾಗಿದ್ದ ಕತೆಗಳು. ಆರಂಭದಲ್ಲೇ ಅಭಿಮಾನಿಗಳು ಕೊಟ್ಟಿದ್ದ ‘ಪವರ್ ಸ್ಟಾರ್’ ಬಿರುದಿಗೆ ತಕ್ಕಂತೆ ನಟಿಸುವ ಅನಿವರ‍್ಯತೆ ‘ಅಪ್ಪು’ಗಿತ್ತಾ ಗೊತ್ತಿಲ್ಲ. ಆದರೂ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ಕನ್ನಡದ ಸ್ಟಾರ್ ಆಗಿ ಪುನೀತ್ ರೂಪುಗೊಂಡಿದ್ದರು ಎನ್ನುವುದನ್ನು ನಿರಾಕರಿಸುವಂತಿಲ್ಲ.


ಪಾರ್ವತಮ್ಮ ರಾಜಕುಮಾರ್ ಸಿನಿಮಾ ನಿರ್ಮಾಣ ಸಂಸ್ಥೆಯ ಮೂಲಕ ಒಂದಷ್ಟು ಹೊಸ ನಟ, ನಟಿಯರಿಗೆ ಪ್ರೋತ್ಸಾಹ ಕೊಡುತ್ತಾ, ಕೌಟುಂಬಿಕ ತೆಳು ಹಾಸ್ಯ ನೆಲೆಯ ಸಿನಿಮಾಗಳನ್ನು ನಿರ್ಮಿಸುತ್ತಾ, ಅಣ್ಣ ಶಿವರಾಜ್‌ಕುಮಾರ್ ಸೇರಿದಂತೆ ಹತ್ತಾರು ನಟರಿಗೆ ಹಿನ್ನೆಲೆ ಗಾಯಕನಾಗಿ, ಬದುಕಿನ ದೊಡ್ಡದೊಂದು ಕ್ಯಾನ್‌ವಾಸ್‌ನಲ್ಲಿ ಬಣ್ಣ ತುಂಬುತ್ತಿರುವ ಗಳಿಗೆಯಲ್ಲೇ ಹೀಗೆ ‘ ಕಾಣದಂತೆ ಮಾಯ’ ವಾಗಿ ‘ ಬಾಳ ದಾರಿಯಲ್ಲಿ ಜಾರಿ ಹೋದ ಸರ‍್ಯ’ ನಾಗಿಬಿಟ್ಟೆಯಲ್ಲಾ ಎಂದು ಅಭಿಮಾನಿಗಳ ನಿರಂತರ ಶೋಕಕ್ಕೆ ಕಾರಣವಾಗಿದ್ದೂ ಇದೇ ಪುನೀತ್ ರಾಜಕುಮಾರನೇ ಅಲ್ವಾ.


ಅದೇಕೋ ಏನೋ ಗೊತ್ತಿಲ್ಲ, ಅತ್ಯಂತ ಕ್ರಿಯಾಶೀಲರಾಗಿರುವವರೇ ಬೇಗ ನಿರ್ಗಮಿಸಿಬಿಡುತ್ತಾರೆ. ಕನ್ನಡ ಸಿನಿಮಾ ರಂಗದ ಮಟ್ಟಿಗೆ ಶಂಕರ್‌ನಾಗ್ ಕೂಡಾ ಹೀಗೇ ‘ ಆಕ್ಸಿಡೆಂಟ್ ‘ ಸಿನಿಮಾ ನಿರ್ಮಿಸಿ, ಆಕ್ಸಿಡೆಂಟ್‌ನಲ್ಲೇ ತೀರಿಹೋದರು. ಶಂಕರ್ ನಾಗ್ ಅದ್ಯಾವ ಕಾರಣಕ್ಕೆ ‘ ಆಟೋ ರಾಜ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದರೋ ಅರಿಯದು, ಇಡೀ ಕನ್ನಡನಾಡಿನ ಆಟೋ ಚಾಲಕರ ಮನೆ ದೇವರಂತೆ ಯಾವ ಆಟೋ ನೋಡಿ, ಯಾವ ಆಟೋ ಸ್ಟಾಂಡ್ ನೋಡಿ ಎಲ್ಲ ಶಂಕರ್‌ನಾಗ್‌ಗೆ ಅರ್ಪಿತ. ಶಂಕರ್‌ನಾಗ್ ನಂತರ ಇದೀಗ ಪುನೀತ್ ರಾಜಕುಮಾರ್‌ಗೆ ಅದೇ ಪ್ರೀತಿ ಮತ್ತು ಗೌರವವನ್ನು ಇಡೀ ಕನ್ನಡಿಗರು ನೀಡುತ್ತಿದ್ದಾರೆ. 


ಮೊನ್ನೆ ಪುನೀತ್‌ರ ಪಿಆರ್‌ಕೆ ಸಂಸ್ಥೆ ನಿರ್ಮಿಸಿದ ‘ ಲಕ್ಕಿ ಮ್ಯಾನ್’ ಸಿನಿಮಾವನ್ನು ಓಟಿಟಿಯಲ್ಲೇ ನೋಡಿದೆ, ಹೆಚ್ಚೂ ಕಮ್ಮಿ ಲಕ್ಕಿ ಮ್ಯಾನ್ ಪುನೀತ್‌ರ ಕೊನೇ ಸಿನಿಮಾ ಇರಬಹುದು, ಆ ಸಿನಿಮಾದಲ್ಲಿ ಪುನೀತ್‌ಗೆ ದೇವರ ಪಾತ್ರ, ಅದು ತೆಲುಗು ರಿಮೇಕ್ ಸಿನಿಮಾ ಅಂತೆ, ಪುನೀತ್ ಅದೆಷ್ಟು ಸುಂದರವಾಗಿ, ಮುಗ್ದವಾಗಿ, ನಯವಾಗಿ ಕಾಣುತ್ತಾರೆ ಎಂದರೆ, ಶ್ರೀನಿವಾಸಕಲ್ಯಾಣದ ರಾಜಕುಮಾರ್ ತರ ಅನ್ನಿಸಿತು. ಅಕ್ಟೋಬರ್ 29, 2021ಕ್ಕೇ ನನ್ನ ಆಟ ನಿಲ್ಲಿಸುತ್ತೇನೆ ಅಂತ ಈ ‘ ಕರ್ನಾಟಕ ರತ್ನ’ಕ್ಕೆ ಮೊದಲೇ ಗೊತ್ತಿತ್ತಾ ಹಂಗಾಗೇ ಈ ದೇವರ ಪಾತ್ರ ಮಾಡಿಬಿಟ್ಟರಾ ಅಂತ ಅನ್ನಿಸಿ, ದುಗುಡಗೊಳ್ಳತೊಡಗಿದೆ. 


ಪುನೀತ್ ಸೇರಿದಂತೆ ಬಹುಪಾಲು ಎಲ್ಲ ನಾಯಕನಟರ ಸಿನಿಮಾಗಳಲ್ಲಿ ಅವರ ಇಮೇಜ್‌ಗಳನ್ನು ವೃದ್ಧಿಸುವಂಥ ಕತೆ, ಹಾಡು, ಫೈಟ್ ಹಾಗೂ ಡ್ಯಾನ್ಸ್ಗಳನ್ನು ಸೃಷ್ಟಿಸುವುದು ಸಹಜ, ಆದರೆ ಇಲ್ಲಿ ನೋಡಿ, ಈ ‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಕನ್ನಡದ ಮೈಕೆಲ್ ಜಾಕ್ಸನ್ ಎನ್ನುವ ಅಚ್ಚ ಕನ್ನಡಿಗ ಪ್ರಭುದೇವನೊಂದಿಗೆ ಪುನೀತ್ ಹೆಜ್ಜೆ ಹಾಕುತ್ತಾರೆ. ಒಂದು ವರ್ಷದಿಂದ ಪುನೀತ್‌ರ ಯಾವುದೇ ಸಿನಿಮಾ ಮತ್ತು ಹಾಡುಗಳನ್ನು ನೋಡಲು ಇಷ್ಟವಾಗದೇ ಒಂಥರಾ ಸೂತಕದಲ್ಲಿದ್ದಂತೆ ಇದ್ದ ನನಗೆ ಈ ಲಕ್ಕಿ ಮ್ಯಾನ್ ಮತ್ತಷ್ಟು ವಿಷಾದದ ಬೆಟ್ಟವನ್ನು ಹೊರಿಸಿಬಿಟ್ಟಿತು. 


‘ ಬಾನ ದಾರಿಯಲ್ಲಿ ಸೂರ‍್ಯ ಜಾರಿ ಹೋದ,
ಚಂದ್ರ ಮೇಲೆ ಬಂದ, ಮಿನುಗು ತಾರೆ ಅಂದ,
ನೋಡು ಎಂತ ಚೆಂದ, ರಾತ್ರಿಯಾಯ್ತು ಮಲಗು 
ನನ್ನ ಪುಟ್ಟ ಕಂದ, ನನ್ನ ಪುಟ್ಟ ಕಂದ ..,