ಒಂದು ಗಳಿಗೆ  ಕುಚ್ಚಂಗಿ ಪ್ರಸನ್ನ “ತಣಿದ ಮನವು ದುಃಖವನ್ನು ನಿವಾರಿಸುತ್ತದೆ” 

ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ “ತಣಿದ ಮನವು ದುಃಖವನ್ನು ನಿವಾರಿಸುತ್ತದೆ”

ಒಂದು ಗಳಿಗೆ  ಕುಚ್ಚಂಗಿ ಪ್ರಸನ್ನ   “ತಣಿದ ಮನವು ದುಃಖವನ್ನು ನಿವಾರಿಸುತ್ತದೆ” 


ಒಂದು ಗಳಿಗೆ 
ಕುಚ್ಚಂಗಿ ಪ್ರಸನ್ನ


“ತಣಿದ ಮನವು ದುಃಖವನ್ನು ನಿವಾರಿಸುತ್ತದೆ” 


ಆಕಾಶ ಹಗಲಿಗಿಂತ ಇರುಳಲ್ಲಿ ಹೆಚ್ಚು ಆಳ ಮತ್ತು ಅನಂತವಾಗಿ ಕಾಣುತ್ತದೆ. ನಗರಗಳ ಕಣ್ಣುಕುಕ್ಕುವ ಬೆಳಕಿನಾಚೆಗೆ ದೂರದ ಹಳ್ಳಿಗಾಡುಗಳ ಕದ್ದಿಂಗಳ ಬಯಲಲ್ಲಿ ನಿಂತು ಕತ್ತು ನೋವು ಬರುವ ತನಕ ಆಗಸವನ್ನು ದಿಟ್ಟಿಸಿ ನೋಡಿ, ಅದೆಷ್ಟು ಅಸಂಖ್ಯ ಅಗಣಿತ ಮಿನುಗುವ ಚುಕ್ಕಿಗಳು. ಡಿಸೆಂಬರ್ , ಜನವರಿ ತಿಂಗಳಲ್ಲಿ ಮತ್ತು ಚಂದ್ರನಿಲ್ಲದ ಅಂತರಿಕ್ಷದಲ್ಲಿ ಹೆಚ್ಚು ನಕ್ಷತ್ರಗಳನ್ನು ನೋಡಬಹುದು.  ಇಂಥಾ ನಕ್ಷತ್ರಗಳಲ್ಲಿ ಕೆಲವು ಒಂದಕ್ಕೊಂದು ಅದೃಶ್ಯ ತಂತುವಿನಿಂದ ಬಂಧಿಸಿಕೊಂಡಂತೆ ಕಾಣುತ್ತವೆ ಅಲ್ವಾ. ವಾಸ್ತವದಲ್ಲಿ ಅವುಗಳ ನಡುವೆ ಯಾವ ಬಂಧವೂ ಇರುವಿಲ್ಲವಾದರೂ, ಅಂಥಾ ನಕ್ಷತ್ರಗಳ ನಿರ್ದಿಷ್ಟ ಹೊಳಪೇ ನಮ್ಮೊಳಗೆ ಈ ಭಾವ ಮೂಡಲು ಕಾರಣ.


ಹೀಗೆ ಕಾಲ್ಪನಿಕ ಜೋಡಣೆಯಲ್ಲಿರುವ ತಾರೆಗಳನ್ನು ಜೋಡಿಸಿ ರಾಶಿಗಳನ್ನು ಸೃಜಿಸಲಾಗಿದೆ. ಮೇಷ, ವೃಷಭ, ಮಿಥುನ, ಕಟಕ, ಕನ್ಯಾ, ಸಿಂಹ, ತುಲಾ, ವೃಶ್ಚಿಕ, ಧನಸ್ಸು, ಕರ್ಕಾಟಕ, ಕುಂಭ, ಮೀನ ಇವು ಹನ್ನೆರಡು ಜನಪ್ರಿಯ ರಾಶಿಗಳು, ಈ ರಾಶಿಗಳನ್ನು ನಿರ್ದಿಷ್ಟು ತಿಂಗಳುಗಳಿಗೆ ಜೋಡಿಸಲಾಗಿದೆ. ಈ ಅವಧಿಯಲ್ಲಿ ಜನಿಸಿದವರು ಇಂಥಾ ರಾಶಿಗೆ ಸೇರುತ್ತಾರೆ. ಇವರು ಜನ್ಮ ಸಹಜ ನಡವಳಿಕೆಗಳು ಹೀಗಿರುತ್ತವೆ ಅಂತ ಹೇಳುತ್ತಾರೆ. ಮತ್ತು ಇವರ ಮುಂದಿನ ಆಗು ಹೋಗುಗಳನ್ನು ಮೊದಲೇ ಹೇಳುವ, ಬರೆದುಕೊಡುವ ವಿಧಾನವನ್ನು ಜಾತಕ, ಭವಿಷ್ಯ, ಜ್ಯೋತಿಷ್ಯ ಅಂತಲೂ ಹೇಳುತ್ತಾರೆ. ಈ ಶಾಸ್ತçದಲ್ಲಿ ಭಾರತೀಯ ಮತ್ತು ಪಾಶ್ಚಿಮಾತ್ಯ ವಿಧಾನಗಳು ಮೇಲ್ನೋಟಕ್ಕೆ ಒಂದೇ ಎಂಬAತೆ ಕಂಡರೂ ಪ್ರತ್ಯೇಕ ಶಾಸ್ತçಗಳಾಗಿವೆ.


ಇಂದಿಗೆ ಮೂರು ಸಾವಿರದ ಏಳುನೂರು ವರ್ಷಕ್ಕೂ ಹಿಂದಿನ ಬ್ಯಾಬಿಲೋನಿಯಾ ಹಾಗೂ ಮೆಸಪಟೋಮಿಯಾ ನಾಗರಿಕತೆಗಳು ಈ ನಕ್ಷತ್ರ ಹಾಗೂ ಗ್ರಹಗಳ ಚಲನೆಯನ್ನು ನಿರಂತರ ಗಮನಿಸಿ, ದಾಖಲಿಸಿದ ವಿಚಾರವನ್ನೂ ಖಗೋಳ ಶಾಸ್ತç ಎನ್ನಲಾಗಿತ್ತು. ಎರಡನೇ ಶತಮಾನದಲ್ಲಿ ಈಜಿಪ್ಟ್ನ ಅಲೆಕ್ಸಾಂಡ್ರಿಯಾದಲ್ಲಿ ಜೀವಿಸಿದ್ದ ಕ್ಲಾಡಿಯಸ್ ಟಾಲೆಮಿ ಎಂಬ ಗಣಿತ, ಭೂಗೋಳ ಹಾಗೂ ಖಗೋಳ ಶಾಸ್ತçಜ್ಞ ಗ್ರೀಕ್ ಭಾಷೆಯಲ್ಲಿ ರಚಿಸಿದ ನಾಲ್ಕು ಗ್ರಂಥಗಳು ಈ ಖಗೋಳ ಶಾಸ್ತçದ ನಿಖರ ಆಕರಗಳಾಗಿದ್ದವು. ಪಶ್ಚಿಮದವರು ನಿರ್ದಿಷ್ಟವಾಗಿ ಸರ‍್ಯನನ್ನು ಕೇಂದ್ರವಾಗಿರಿಸಿಕೊAಡರೆ. ಭಾರತೀಯ ಖಗೋಳ ಶಾಸ್ತçವು ಚಂದ್ರ ಮತ್ತು ಇತರ ಗ್ರಹಗಳ ಚಲನೆಯನ್ನು ಲೆಕ್ಕಕ್ಕೆ ತೆಗೆದುಕೊಂಡಿತ್ತು. ಯೂರೋಪ್ ಖಂಡದಲ್ಲಿ 17ನೇ ಶತಮಾನದವರೆಗೆ ಅಂದರೆ ಕೈಗಾರಿಕಾ ಕ್ರಾಂತಿ ಎನ್ನುವ ದಿನಗಳ ನಂತರ ಈ ಖಗೋಳ ಶಾಸ್ತçವನ್ನು ಕಡೆಗಣಿಸಲಾಯಿತು ಮತ್ತು ಇದನ್ನು ಹುಸಿ ವಿಜ್ಞಾನ ಎಂದು ಪರಿಗಣಿಸಲಾಯಿತು.


ಇಂಡಿಯಾದಲ್ಲಿ ಈ ಖಗೋಳ ಶಾಸ್ತçವು ಮಾನವನ ಹಣೆಬರಹಕ್ಕೆ ಜೋತು ಬಿದ್ದ ಪರಿಣಾಮವಾಗಿ ಆಧುನಿಕ ವೈಚಾರಿಕರು ಇಂತದ್ದೆನ್ನೆಲ್ಲ ಒಪ್ಪುವುದಿಲ್ಲ ಮತ್ತು ನಮಗೆ ಅಂಥದ್ದರಲ್ಲಿ ಯಾವ ನಂಬಿಕೆಯೂ ಇಲ್ಲ ಎಂದು ಘೋಷಿಸುತ್ತಾರೆ ಹಾಗೂ ಖಾಸಗಿಯಾಗಿ ಕುಟುಂಬದ ಸದಸ್ಯರ ಆಗ್ರಹದ ಕಾರಣವಾಗಿ “ ಅಯ್ಯೋ, ಏನು ಮಾಡುವುದು, ಮನೇಲಿ ಇರೋರೆಲ್ಲ ನಮ್ಮಂಗೆ ಇರಬೇಕಲ್ಲಾ” ಅಂತ ರಾಗ ಎಳೆಯುತ್ತ ಮಕ್ಕಳ ಮದುವೆಗೆ ಮುಹೂರ್ತದ ಗಳಿಗೆ ನಿಗದಿ ಮಾಡಿಸಲು ಜ್ಯೋತಿಷಿಗಳ ಮನೆಗಳ ವಿಳಾಸ ಹುಡುಕುತ್ತಾ ಇರುತ್ತಾರೆ.


ಮನುಷ್ಯನ ದುಃಖಕ್ಕೆ ಅನೇಕ ರೀತಿಯಲ್ಲಿ ಒಂದೊAದಾಗಿ ಅಥವಾ ಕೆಲವೊಮ್ಮೆ ಎಲ್ಲವೂ ಒಟ್ಟಾಗಿ ಸೇರಿ ಕಾರಣವಾಗುವ ಬಡತನ, ದಾರಿದ್ರö್ಯ, ಅಸಮಾನತೆ, ಮೇಲು-ಕೀಳು, ಅಸ್ಪೃಶ್ಯತೆಗಳೆಲ್ಲವೂ ಸೃಷ್ಟಿ ಮೂಲದಿಂದಲೇ ಬಂದಿರುವ ಅಂಶಗಳು ಎಂಬುದನ್ನು ಪುರಾಣಗಳು, ಶಾಸ್ತçಗಳು ಪ್ರತಿಪಾದಿಸುತ್ತಲೇ ಮಾನವನನ್ನು ಬೌದ್ಧಿಕ ಗುಲಾಮಗಿರಿಯಲ್ಲಿ ಶತಮಾನಗಳಿಂದಲೂ ನರಳಿಸುತ್ತಾ ಬಂದಿವೆ. ಇಂಥ ಒಂದು ದೃಷ್ಟಿಕೋನಕ್ಕೆ ಖಗೋಳ ಶಾಸ್ತçದಲ್ಲಿ ದಾಖಲಿಸಲಾಗಿರುವ ಭೂಮಿಯನ್ನು ಕೇಂದ್ರ ಬಿಂದು ಮಾಡಿಕೊಂಡು ಅದರ ಸುತ್ತ ಪರಿಭ್ರಮಿಸುತ್ತಿರುವ ಗ್ರಹಗಳು,ಸರ‍್ಯ, ನಕ್ಷತ್ರ ಪುಂಜಗಳೇ ಕಾರಣ ಎಂದಾಗ, ಅಂಥ ಶಾಸ್ತçವನ್ನೂ ಇವತ್ತು ತಿರಸ್ಕರಿಸದೇ ಅನ್ಯ ದಾರಿ ಉಳಿಯುವುದಿಲ್ಲ. 


ಆದರೆ ಈ ಖಗೋಳ ಶಾಸ್ತçವೇ 16ನೇ ಶತಮಾನದ ಗೆಲಿಲಿಯೋ ನಂತರ ಖಗೋಳ ವಿಜ್ಞಾನವಾಗಿ ಬೆಳೆದು, ಐಸಾಕ್ ನ್ಯೂಟನ್, ಆಲ್ಬರ್ಟ್ ಐನ್‌ಸ್ಟೆçöÊನ್ ಮೊದಲಾದವರ ಸಂಶೋಧನೆಗಳು  ಮನುಷ್ಯನನ್ನು ಆಕಾಶದಲ್ಲಿ ಹಾರಾಡಲು, ಚಂದ್ರನನ್ನು ತಲುಪಲು. ಮಂಗಳನಲ್ಲಿ ಲೇಔಟ್ ಮಾಡಿ, ವಿಲ್ಲಾಗಳನ್ನು ನಿರ್ಮಿಸಿ ನೆಲೆಸುವ ಕನಸುಗಳನ್ನು ತೇಲಿ ಬಿಡುವ ತಾಂತ್ರಿಕತೆಯ ಆವಿಷ್ಕಾರಕ್ಕೆ ಕಾರಣ ಎನ್ನುವುದನ್ನೂ ಗಮನದಲ್ಲಿರಿಸಿಕೊಳ್ಳಬೇಕು. ಇದು ಒಂದು ಕಡೆ ಇರಲಿ.


ದಾಖಲಿತ ಇತಿಹಾಸದಲ್ಲಿ ಹಿಂಸೆಗೆ ಎಡೆಗೊಡದೇ, ಒಟ್ಟು ಮಾನವನ ದುಃಖವನ್ನು ಪರಿಹರಿಸುವತ್ತ ಆದ್ಯ ಗಮನ ಕೊಟ್ಟವರಲ್ಲಿ ಗೌತಮ ಬುದ್ಧ ಮೊದಲಿಗನಾಗಿ ನಿಲ್ಲುತ್ತಾನೆ. ದೈನಂದಿನ ಜೀವನದಲ್ಲಿ ನಾವು ಅನುಭವಿಸುವ ದುಃಖಕ್ಕೆ ನಮ್ಮ ಮನಸ್ಸೇ ಕಾರಣ ಎನ್ನುವ ಮನೋವೈದ್ಯ ಈ ಬುದ್ಧ. ಅದು ಅರಿವಾದ ಮೇಲೂ ನಾವು ಒಂದಲ್ಲಾ ಒಂದು ಕಾರಣಕ್ಕೆ ಅನು ದಿನವೂ ಅನು ಕ್ಷಣವೂ ದುಃಖದ ಛಾಯೆಯಲ್ಲೇ ನರಳುತ್ತಾ ಇರುತ್ತೇವೆ ಅಲ್ವಾ. ಹೌದು ಅದು ಹಾಗೇ.


ಈ ವಿಷಯದಲ್ಲಿ ಮನುಷ್ಯನೇ ಅತ್ಯಂತ ವಿಚಿತ್ರ ಪ್ರಾಣಿ, ಮನುಷ್ಯನನ್ನು ಬಿಟ್ಟು ಈ ಭೂಮಿಯ ಮೇಲಿನ ಇತರ ಜೀವಿಗಳಿಗೆ ಮನುಷ್ಯನಿಗಿರುವಷ್ಟು ಸುಖವೂ ಇಲ್ಲ,ಕಷ್ಟಗಳೂ ಇಲ್ಲ, ಜೊತೆಗೆ ದುಃಖಗಳೂ ಇಲ್ಲ ನೋಡಿ. ಮನುಷ್ಯನನ್ನು ಬಿಟ್ಟು ಉಳಿದ ಯಾವ ಪ್ರಾಣಿ, ಪಕ್ಷಿಗಳೂ, ಜಲ ಚರ, ಜೀವಚರಗಳ್ಯಾವುವೂ ಪ್ರಕೃತಿ ಸಹಜ ಜನನ ಮತ್ತು ಮರಣದ ನಡುವೆ ಆಹಾರ ಸೇವನೆ, ವಂಶಾಭಿವೃದ್ಧಿ ಮತ್ತು ಅದಕ್ಕಾಗಿ ಮೈಥುನಗಳ ಹೊರತಾಗಿ ಅನ್ಯ ಸಂಗತಿಗಳ ಕಡೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಇರುವೆಯಾದಿಯಾಗಿ ಕೆಲ ಕೀಟಗಳು, ಪಕ್ಷಿಗಳು ಮತ್ತು ಪ್ರಾಣಿಗಳು ಕೆಲ ತಾಂತ್ರಿಕತೆಯನ್ನು ರೂಡಿಸಿಕೊಂಡಿರುತ್ತವೆ ಮತ್ತು ವಾಸದ ಸ್ಥಳಗಳನ್ನು ನಿರ್ಮಿಸಿಕೊಳ್ಳುತ್ತವೆ ಎಂದರೆ ಅದನ್ನು ಅವು ಅನುಷಂಗಿಕವಾಗಿ ಮಾಡುತ್ತಾ ಇರುತ್ತವೆಯೋ ಹೊರತು ಅವುಗಳ ಈ ಕ್ರಿಯೆ ಉದ್ದೇಶಪೂರ್ವಕ ಎನಿಸುವುದಿಲ್ಲ. ಆದರೆ ನಾವಿದ್ದೀವಲ್ಲ ಮನುಷ್ಯರು ಹಾಗಲ್ಲ. ಎಲ್ಲವೂ ಉದ್ದೇಶಪೂರ್ವಕವೇ. ಅತ್ಯಂತ ನೈಸರ್ಗಿಕವಾದ ನಮ್ಮ ಬಾಯಾರಿಕೆ, ಹಸಿವು ಮತ್ತು ಮೈಥುನದ ಬಯಕೆಗಳೂ ಅನ್ಯರ ಹತೋಟಿಯಲ್ಲೇ ಇರುತ್ತವೆ ಎಂದರೆ ಈ ಮನುಷ್ಯ ಜೀವಿ ಅದೆಂಥ ಸರ್ವಾಧಿಕಾರಿ ಅಂತ ಅರ್ಥ ಮಾಡಿಕೊಳ್ಳಿ.


ಇಂಥ ಸರ್ವಾಧಿಕಾರಿ ಧೋರಣೆಯ ಮನುಷ್ಯರಿಂದಲೇ ಯುದ್ಧಗಳು ಸಂಭವಿಸುತ್ತವೆ. ಚೀನಾ,ಕಾಂಬೋಡಿಯಾ, ಲಾವೋಸ್‌ಗಳಿಗೆ ಅಂಟಿಕೊAಡ ವಿಯೆಟ್ನಾಮ್ ಎಂಬ ಪುಟ್ಟ ಫ್ರೆಂಚ್ ವಸಾಹತು ದೇಶ ಬೌದ್ಧ ಧರ್ಮವನ್ನು ಅಪ್ಪಿಕೊಂಡಿದೆ. ಈ ದೇಶದ ಆಂತರಿಕ ವ್ಯವಹಾರದೊಳಗೆ ಮೂಗು ತೂರಿಸಿದ ಅಮೆರಿಕಾ ವಿಯೆಟ್ನಾಮಿ ಜನರನ್ನು ಹತ್ತಾರು ವರ್ಷ ಯುದ್ದದಲ್ಲೇ ನರಳಿ, ಸಾಯುವಂತೆ ಮಾಡಿತು. ಗಂಡಾAತರಕಾರಿ ರಾಸಾಯನಿಕ ವಿಷವನ್ನು ವಿಮಾನಗಳ ಮೂಲಕ ಸಿಂಪಡಿಸಿ ಕೊಂದಿತು. ಅಲ್ಲಿನ ಬೌದ್ಧ ಭಿಕ್ಕು ಟಿಕ್ ನಾಟ್ ಹಾನ್ 1960ರಲ್ಲಿ ಈ ಯುದ್ಧವನ್ನು ವಿರೋಧಿಸಿ, ಶಾಂತಿ ಸ್ಥಾಪನೆಗೆ ಒತ್ತಾಯಿಸಿ ದೇಶ ತೊರೆದು ಫ್ರಾನ್ಸ್ನಲ್ಲಿ ನೆಲೆಕಾಣುತ್ತಾರೆ. ಅಲ್ಲಿ ಬೌದ್ಧ ವಿಹಾರವೊಂದನ್ನು ಆರಂಭಿಸುತ್ತಾರೆ. ಅಮೆರಿಕಾದ ಗಾಂಧಿ ಎಂದು ಹೆಸರಾದ ಮಾರ್ಟಿನ್ ಲೂಥರ್ ಕಿಂಗ್ 1967ರಲ್ಲಿ ಈ ಭಿಕ್ಕುವನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಹೆಸರಿಸುತ್ತಾರೆ.


ಇಂಡೋ ಚೀನಾ ಎಂದು ಕರೆಯುವ ವಿಯೆಟ್ನಾಮ್ ಬೌದ್ಧ ಧರ್ಮದ ಥೇರವಾದ ಹಾಗೂ ಮಹಾಯಾನಗಳೆರಡನ್ನೂ ಏಕಕಾಲಕ್ಕೆ ಆಚರಿಸುತ್ತ ಬಂದಿದೆ. ಈ ದೇಶದ ಪರಂಪರೆಗೆ ಪೂರಕವಾಗಿ ಭಿಕ್ಕು ಟಿಕ್ ನಾಟ್ ಹಾನ್ ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಗೆ ಭಿಕ್ಕುವಾಗಿ, ಪರಿವ್ರಾಜಕನಾಗಿ , ಅವಲೋಕಿತೇಶ್ವರನಾಗಿ 300 ವರ್ಷಗಳ ಆಧುನಿಕ ನಾಗರಿಕತೆಯ ಕೃತ್ರಿಮದಿಂದಾಗಿ ಘಾಸಿಗೊಂಡ ಮನಸ್ಸುಗಳಿಗೆ ಸರಳ ಇಂಗ್ಲಿಷ್‌ನಲ್ಲಿ ತಣ್ಣನೆಯ ಸಾಂತ್ವನ ನೀಡುವ ಮೆಲುನುಡಿಗಳ ಪ್ರವಚನ ನೀಡುತ್ತ, ಅಷ್ಟೇ ಸರಳ ಭಾಷೆಯಲ್ಲಿ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆಯುತ್ತ, ಪೂರ್ವ ಪಶ್ಚಿಮಗಳೆರಡರ ಸೇತುವಾಗಿದ್ದರು.


“ ದುಃಖವನ್ನು ತಣಿದ ಮನವು ಕಾರುಣ್ಯದ ಕಸುವಿನಿಂದ ನಿವಾರಿಸುತ್ತದೆ” ಎನ್ನುವ ಟಿಕ್ ನಾಟ್ ಹಾನ್ ಚೀನಾದ ಬಿದಿರು ವನ e಼ೆನ್ ಶಾಲೆಯ ಪರಂಪರೆಗೆ ಸೇರಿದ ಜೆನ್ ಗುರುವಾಗಿದ್ದರು. ಜೆನ್ ಎಂದರೆ ಆರನೇ ಶತಮಾನದಲ್ಲಿ ಬೌದ್ಧ ಧರ್ಮದೊಳಗೇ ಸೃಷ್ಟಿಯಾದ ಧ್ಯಾನವನ್ನು ಆದರಿಸಿದ ವಿಧಾನ. ಮನವು ತಣಿಯದ ಹೊರತು ದುಃಖ ನಿವಾರಣೆಯಾಗದು, ಆದರೆ ನಾವು ಮತ್ತು ನಮ್ಮ ಮನವು ನಮ್ಮೊಳಗೆ ನಮ್ಮದೇ ಆಗಿರುವುದಿಲ್ಲ, ಸುತ್ತಲ ಪರಿಸರದ ಎಲ್ಲ ಪದಾರ್ಥಗಳು ಮತ್ತು ಸಂಗತಿಗಳ ಪ್ರಭಾವಕ್ಕೊಳಗಾಗಿರುತ್ತದೆ. ಪರಿಸರದಲ್ಲಿನ ಇತರ ಸಹಜೀವಿ ಮನುಷ್ಯರು ನಮ್ಮ ಮನವನ್ನು ವ್ಯಗ್ರಗೊಳಿಸಲೂ ಬಹುದು, ನಾವು ನಮ್ಮೊಳಗೂ ವ್ಯಗ್ರರಾಗಲೂ ಬಹುದು. ಹೀಗೆ ದುಃಖವೆನ್ನುವುದು ಮನುಷ್ಯನನ್ನು ಬಿಟ್ಟೂ ಬಿಡದೇ ಆವರಿಸಿಕೊಂಡೇ ಇರುವಾಗ ಮನವನ್ನು ತಣಿಸಿಕೊಳ್ಳುವುದು ಮುಖ್ಯವಾಗುತ್ತದೆ. ಆದ್ದರಿಂದ ನಿಧಾನವಾಗಿ ನಡೆಯುತ್ತ,ನಡೆಯುತ್ತ, ನಿಧಾನವಾಗಿ ಉಸಿರಾಡುತ್ತ, ಸಮಾಧಾನವಾಗಿ ಒಂದು ಕಡೆ ಕೂರುತ್ತ, ಮನಸ್ಸನ್ನು ಧ್ಯಾನಕ್ಕೆ ಅಣಿಮಾಡಿಕೊಳ್ಳಬೇಕು, ಕೆಲವೊಮ್ಮೆ ನಡಿಗೆಯೇ ಧ್ಯಾನವಾಗಿ, ನಡಿಗೆಯಲ್ಲೂ ಧ್ಯಾನವನ್ನು ಮಾಡಬಹುದು, ಹೀಗೆ  ವರ್ತಮಾನದಲ್ಲಿ ಮತ್ತು ಆ ಕ್ಷಣದಲ್ಲಿ ಬದುಕುವುದು ಮುಖ್ಯ” ಎನ್ನುತ್ತಾರೆ ಟಿಕ್ ನಾಟ್ ಹಾನ್.


“ ಇವತ್ತು ಸಂವಹನವೆನ್ನುವುದು ಬಹಳ ವೇಗವನ್ನು ಪಡೆದುಕೊಂಡಿದೆ. ಮೊಬೈಲ್ ದೂರವಾಣಿ ಬಳಸಿ, ಎಸ್‌ಎಂಎಸ್, ವಾಟ್ಸಪ್, ಫೇಸ್ ಬುಕ್, ಟೆಲಿಗ್ರಾಂ, ಇ-ಮೇಲ್ ಮೊದಲಾದ ತಾಂತ್ರಿಕತೆ ಬಳಸಿ ಸಾವಿರಾರು ಮೈಲಿ ದೂರದಲ್ಲಿರುವ ಜನರಿಗೆ ಕ್ಷಣಾರ್ಧದಲ್ಲಿ ನಮ್ಮ ಭಾವನೆಗಳನ್ನು ಸಂದೇಶದ ರೂಪದಲ್ಲಿ ರವಾನಿಸಿ, ತಲುಪಿಸಬಹುದು, ಆದರೆ ನಮ್ಮ ಜೊತೆಯಲ್ಲೇ ನಮ್ಮೊಡನೆಯೇ ಇರುವ ಹೆಂಡತಿ,ಮಕ್ಕಳು, ಅಪ್ಪ, ಅಮ್ಮಂದಿರು, ಗೆಳೆಯರು ಹಾಗೂ ನೆರೆಯವರೊಂದಿಗೆ ನಮಗೆ ನೈಜ ಸಂವಹನ ಸಾಧ್ಯವಾಗುತ್ತಿಲ್ಲ, ಹಾಗಾಗಿ ಎಲ್ಲರೂ ಒಂದಲ್ಲ ಒಂದು ರೀತಿಯ ದುಃಖದಲ್ಲಿದ್ದೇವೆ. ನೋವು ನಿರಂತರವಾಗಿದೆ,” ಎನ್ನುತ್ತಾರೆ ಗುರು ಹಾನ್.


ವ್ಯಸನಗಳಾಗಿ ಮಾರ್ಪಡುವ ಹವ್ಯಾಸಗಳು ನಮ್ಮೊಳಗಿನ ದುಃಖವನ್ನು ಪರಿಹರಿಸುವುದಿಲ್ಲ, ನರಳುವಿಕೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತವೆ. ಯಾವ ಆಧುನಿಕ ಸಂವಹನ ವಿಧಾನಗಳೂ ಸುಲಭ ಸಾಧನಗಳಲ್ಲ, ಬೋಧಿಸತ್ವ ಅವಲೋಕಿತೇಶ್ವರನು ನಮ್ಮ ಮಾತುಗಳನ್ನು ಸಹಾನುಭೂತಿಯಿಂದ ಆಲಿಸುತ್ತಾನೆ. ಹೀಗೆ ನಮ್ಮೊಳಗಿನ ದುಃಖವನ್ನು ಆಲಿಸುತ್ತಾ ಆಲಿಸುತ್ತಾ ನಮ್ಮ ಮನವನ್ನು ತಣಿಸುತ್ತಾನೆ.ಇದು ಸಾಧನೆಯೆಂಬ ಗಿಡದ ಮೇಲೆ ಅರಳಿದ ಸಾಂತ್ವನವೆಂಬ ಹೂವು. ಇದು ಶೂನ್ಯವನ್ನು ಅರಿಯುವ ಪರಿ ” ಎನ್ನುತ್ತಾರೆ ಈ ಗುರು.


ದಲಾಯಿ ಲಾಮಾ ನಂತರದ ಎರಡನೇ ಜೀವಂತ ಬುದ್ಧ ಎಂದು ವಿಯಟ್ನಾಮಿನ ಜನರು ಮೆಚ್ಚಿ ಅನುಸರಿಸುತ್ತಿದ್ದ ಟಿಕ್ ನಾಟ್ ಹಾನ್ ಶನಿವಾರ ಮಧ್ಯರಾತ್ರಿ 12.00 ಗಂಟೆ ಸುಮಾರಿಗೆ ಫ್ರಾನ್ಸಿನ ಬೋರ್ಡಾಕ್ಸ್ನಲ್ಲಿನ ಪ್ಲಮ್ ವಿಲೇಜ್ ವಿಹಾರದಲ್ಲಿ ಮಲಗಿ ನಿದ್ರಿಸುವಾಗಲೇ ಶಾಂತಿಯುತವಾಗಿ ಕೊನೆ ಉಸಿರೆಳೆದರು ಎಂಬ ಟ್ವಿಟರ್ ಸಂದೇಶ ಹೊರ ಬಿದ್ದಿದೆ. ಹೆಚ್ಚೂ ಕಮ್ಮಿ ಒಂದು ಶತಮಾನ ಟಿಕ್ ನಾಟ್ ಹಾನ್ ಪೂರ್ವ ಪಶ್ಚಿಮದ ಶಾಂತಿ ಸರಪಳಿಯ ಮುಖ್ಯ ಕೊಂಡಿಯಾಗಿದ್ದರು.


“ ಕೇವಲ ಬುದ್ಧಿ ಮತ್ತೆಯೊಂದೇ ನಮಗೆ ಹಾದಿ ತೋರಲಾರದು, ಈ ಶತಮಾನವನ್ನು ರೂಪಿಸಲು ಅದರ ಜೊತೆಗೆ ಮತ್ತೇನೋ ಬೇಕು, ಶಾಂತಿ ಮತ್ತು ಸಂತಸದ ಹೊರತಾಗಿ ನಮ್ಮನ್ನು ನಾವು, ಅಥವಾ ಇತರ ಜೀವಿಗಳನ್ನು ಹಾಗೂ ಜಗತ್ತನ್ನು ಪೊರೆಯಲಾರೆವು” ಎನ್ನುವ ಗುರು ಟಿಕ್ ನಾಟ್ ಹಾನ್ ಇಂಡಿಯಾದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ರೀತಿಯಲ್ಲೇ ಜಾಗತಿಕ ಮಟ್ಟದಲ್ಲಿ ಬುದ್ಧನ ಚಿಂತನೆಗಳ ಮೂಲಕ ಅಸಮಾನತೆ, ಶೋಷಣೆ ಮತ್ತು ದುರಾಸೆಗಳಿಂದಾಗಿ ಮನುಷ್ಯ ಜೀವಿ ನರಳುವುದನ್ನು  ಮತ್ತು ದುಃಖಿಸುವುದನ್ನು ಪರಿಹರಿಸುವ ಪ್ರಯತ್ನ ಮಾಡಿದ್ದರು.


( ಗುರು ಟಿಕ್ ನಾಟ್ ಹಾನ್ ಇಂಗ್ಲಿಷಿನಲ್ಲಿ ಮೈಂಡ್‌ಫುಲ್‌ನೆಸ್ ಎನ್ನುತ್ತಿದ್ದುದನ್ನು ‘ತಣಿದ ಮನ’ ಎಂದು ಬಳಸಿದ್ದೇನೆ).