ಮಹಿಳೆಯರ ಬಸ್ ಪ್ರಯಾಣವೂ  ಕಿರಾತಕ ಕೀಚಕರ ಕಿರುಕುಳವೂ.., 

ಸರ್ಕಾರಕ್ಕೆ ಮೊರೆ 

ಮಹಿಳೆಯರ ಬಸ್ ಪ್ರಯಾಣವೂ  ಕಿರಾತಕ ಕೀಚಕರ ಕಿರುಕುಳವೂ.., 


ರಾಧ ಹುಳಿಗೆರೆ


      ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಮೇಲೆ ಪುರುಷ ಸಹ ಪ್ರಯಾಣಿಕರ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ ಹೆಚ್ಚಾಗುತ್ತಿದೆ. ಕಂಡಕ್ಟರ್‌ಗಳ ಪಕ್ಕದ ಸೀಟಿನಲ್ಲಿ ಕೂತ ಮಹಿಳೆಯರಿಗೂ ಪುರುಷ ಕಂಡಕ್ಟರ್‌ಗಳೂ ಕಾಟ ಕೊಡುತ್ತಾರೆ. ಬಸ್‌ಗಳಲ್ಲಿ 100ರಲ್ಲಿ 75 ರಷ್ಟು ಗಂಡಸರು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ. 


       ವಯಸ್ಸಾದ ಅಂದರೆ 60-70ದ ಗಂಡಸರ ದುವರ್ತನೆಗಳನ್ನು ಗಮನಿಸಿದಾಗ ಕೆಲವೊಮ್ಮೆ ಯುವಕರೇ ಎಷ್ಟೋ ಮೇಲು ಎನ್ನುವಷ್ಟು ಸಭ್ಯವಾಗಿ ವರ್ತಿಸುತ್ತಾರೆ. ಯುವತಿಯರ ತಂದೆಯಷ್ಟು ವಯಸ್ಸಿನ ಗಂಡಸರು ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡುವುದು ಎಷ್ಟು ಮಟ್ಟಿಗೆ ಸರಿ ? ಅವರ ಕುಟುಂಬದಲ್ಲೂ ತಾಯಿ,ಹೆಂಡತಿ, ಮಗಳು, ಸೊಸೆ, ಮೊಮ್ಮಗಳು ಹೀಗೆ ಯಾವುದಾದರೂ ಸ್ವರೂಪದಲ್ಲಿ ಹೆಣ್ಣು ಇದ್ದೇ ಇರುತ್ತಾಳೆ. ಅವರ ಕುಟುಂಬದ ಹೆಣ್ಣುಮಕ್ಕಳು ಬಸ್‌ಗಳಲ್ಲಿ ಸಂಚರಿಸುವಾಗ ಇತರ ಪುರುಷರು ಹೀಗೇ ನಡೆದುಕೊಂಡರೆ ಹೇಗೆ ಅಂತ ಅವರಿಗೆ ಅನ್ನಿಸುವುದೇ ಇಲ್ಲವೇ? ಅಥವಾ ಅವರ ಕುಟುಂಬದವರಿಗೂ ಮುಂದೆ ಒಂದು ದಿನ ಇಂಥ ಪರಿಸ್ಥಿತಿ ಬರಬಹುದು ಎಂದು ಯೋಚಿಸದೇ ಇರುವಷ್ಟು ಈ ಗಂಡಸರು ಕೆಟ್ಟು ಹೋಗಿದ್ದಾರಾ?  ಎಂಬುದು ನನ್ನ ಪ್ರಶ್ನೆ.


   ಬಸ್‌ಗಳಲ್ಲಿ ಮಹಿಳೆಯರಿಗೆಂದೇ ಮೀಸಲಾಗಿರುವ ಸೀಟುಗಳಲ್ಲಿ ಮಹಿಳೆಯರನ್ನೇ ಕೂರಿಸುವುದು ಹಾಗೂ ಆ ಸೀಟುಗಳು ಖಾಲಿ ಇದ್ದರೂ ಅಥವಾ ಒಬ್ಬರೋ ಇಬ್ಬರೋ ಹೆಣ್ಣುಮಕ್ಕಳು ಕುಳಿತಿದ್ದರೂ ಖಾಲಿ ಇರುವ ಆ ಸೀಟುಗಳಲ್ಲಿ ಪುರುಷರು ಕೂರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆಯಾ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರು ತೆಗೆದುಕೊಳ್ಳಬೇಕು ಅಥವಾ ಸರ್ಕಾರ ಅಂಥ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಅನುಷ್ಟಾನಕ್ಕೆ ತರಬೇಕಿದೆ. 


   ಹಳ್ಳಿಗಳಿಂದ ಉದ್ಯೋಗಗಳಿಗೆ ಬರುವ ಮಹಿಳೆಯರು ಊರುಗಳಿಗೆ ಹಿಂದಿರುಗುವ ಹೊತ್ತಿಗೆ ಸಾಮಾನ್ಯವಾಗಿ ರಾತ್ರಿ ಆಗೇ ಬಿಡುತ್ತದೆ. ಬಸ್ ನಗರ ಬಿಟ್ಟ ಕೂಡಲೇ ಚಾಲಕರು ಲೈಟ್‌ಗಳನ್ನು ಆರಿಸಿಬಿಡುತ್ತಾರೆ. ಕತ್ತಲಾಗುವುದನ್ನೇ ಕಾಯುವ ಕಾಮುಕರು ಅಕ್ಕ ಪಕ್ಕ ಕೂತ ಮಹಿಳೆಯರ ಮೇಲೆ ತಮ್ಮ ಕೀಚಕ ವರ್ತನೆ ಶುರು ಮಾಡಿಕೊಳ್ಳುತ್ತಾರೆ. ಹೀಗಾಗಿ ರಾತ್ರಿ ಪ್ರಯಾಣದಲ್ಲಿ ಬಸ್‌ನೊಳಗಿನ ಲೈಟುಗಳನ್ನು ಆರಿಸದಂತೆ ನೋಡಿಕೊಳ್ಳಬೇಕಿದೆ. ಜೊತೆಗೆ ಮಹಿಳಾ ಪ್ರಯಾಣಿಕರ ಮೇಲೆ ಪುರುಷರು ಲೈಂಗಿಕ ಕಿರುಕುಳ ನೀಡದಂತೆ ಕಂಡಕ್ಟರ್ ಹಾಗೂ ಡ್ರೈವರ್‌ಗಳು ನೋಡಿಕೊಳ್ಳಬೇಕಿರುತ್ತದೆ. 


   ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ನಮ್ಮ ಕಾಂಗ್ರೆಸ್ ಸರ್ಕಾರವು ಮಹಿಳೆಯರು ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣಿಸಲೆಂದು ಶಕ್ತಿ ಯೋಜನೆಯನ್ನು ಜಾರಿಗೆ ತಂದಿರುವುದರಿಂದ ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಂಚರಿಸುತ್ತಿರುವುದು ಸಹಜವೇ ಆಗಿದೆ. ಕೆಲವು ಮಾರ್ಗಗಳಲ್ಲಿ ಬಸ್‌ಗಳು ಪ್ರಯಾಣಿಕರಿಂದ ಭರ್ತಿಯಾಗಿರುತ್ತವೆ. ಇಂಥಾ ಹೊತ್ತಿನಲ್ಲಿ ಮಹಿಳೆಯರಿಗೆ ಕಿರಾತಕ ಪುರುಷರಿಂದ ಬಿಡುಗಡೆಯೇ ಇಲ್ಲ ಎನಿಸಿಬಿಡುತ್ತದೆ. ಆದ್ದರಿಂದ ನಮ್ಮ ಸರ್ಕಾರಕ್ಕೆ ಸಾಧ್ಯವಾದಲ್ಲಿ ಸಾರಿಗೆ ನಿಗಮದ ಬಸ್ಸುಗಳಲ್ಲಿ ಸಿಸಿ ಕ್ಯಾಮರ ಅಳವಡಿಸಿಕೊಟ್ಟಲ್ಲಿ ಮಹಿಳೆಯರ ಮೇಲಿನ ಅಸಭ್ಯ ವರ್ತನೆ, ದೌರ್ಜನ್ಯ, ಲೈಂಗಿಕ ಕಿರುಕುಳ ನಿಯಂತ್ರಿಸಬಹುದು ಎಂಬುದು ನನ್ನ ಅಭಿಪ್ರಾಯ. 


  ತುಮಕೂರು ಜಿಲ್ಲೆಯ ಜನಪ್ರಿಯ ಜನಪ್ರತಿನಿಧಿಗಳಾಗಿರುವ ವಾಸಣ್ಣನವರೇ ಕೆಎಸ್‌ಆರ್‌ಟಿಸಿ ಅಧ್ಯಕ್ಷರಾಗಿದ್ದು ಮಹಿಳೆಯರ ಪರವಾದ ಈ ನನ್ನ ಮೊರೆಯನ್ನು ಆಲಿಸುವರೇ.