ಗಾಂಧಿ, ನೆಹರು, ಪಟೇಲ್, ಸುಭಾಷ್ ಚಂದ್ರ ಬೋಸ್  ಕುರಿತ ಭಾಷಣ ಕೇಳಿ ಹೆಮ್ಮೆಯಿಂದ ಬೀಗುತ್ತಿತ್ತು ನನ್ನೆದೆ..,

ಗಾಂಧಿ, ನೆಹರು, ಪಟೇಲ್, ಸುಭಾಷ್ ಚಂದ್ರ ಬೋಸ್  ಕುರಿತ ಭಾಷಣ ಕೇಳಿ ಹೆಮ್ಮೆಯಿಂದ ಬೀಗುತ್ತಿತ್ತು ನನ್ನೆದೆ..,

ಗಾಂಧಿ, ನೆಹರು, ಪಟೇಲ್, ಸುಭಾಷ್ ಚಂದ್ರ ಬೋಸ್    ಕುರಿತ ಭಾಷಣ ಕೇಳಿ ಹೆಮ್ಮೆಯಿಂದ ಬೀಗುತ್ತಿತ್ತು ನನ್ನೆದೆ..,


ಗಾಂಧಿ, ನೆಹರು, ಪಟೇಲ್, ಸುಭಾಷ್ ಚಂದ್ರ ಬೋಸ್ 


ಕುರಿತ ಭಾಷಣ ಕೇಳಿ ಹೆಮ್ಮೆಯಿಂದ ಬೀಗುತ್ತಿತ್ತು ನನ್ನೆದೆ..,

      ನನ್ನ ತಾಯಿಯ ತವರು ಮನೆ ಮಧುಗಿರಿ ಪಟ್ಟಣದಿಂದ 3 ಮೈಲಿ ದೂರದಲ್ಲಿ, ಮಧುಗಿರಿ ಪಾವಗಡ ರಸ್ತೆಯಲ್ಲಿರುವ ಎರಡನೆ ಊರು ಜಡೇಗೊಂಡನಹಳ್ಳಿ, ತಿಪ್ಪನಹಳ್ಳಿಗಿಂತಲೂ ಸ್ವಲ್ಪ ದೊಡ್ಡ ಊರು. ಜತೆಗೆ ಜಿಲ್ಲಾ ಮುಖ್ಯ ರಸ್ತೆಯ ಪಕ್ಕದಲ್ಲಿದ್ದರಿಂದ ಸ್ವಲ್ಪ ಉತ್ತಮ ಗುಣಮಟ್ಟದ ಮನೆಗಳು ಇದ್ದವು. ಆದರೆ ನಮ್ಮ ಊರಿನಂತೆ ಇಲ್ಲಿ ಅಡಿಕೆ-ವೀಳೆಯದೆಲೆ, ತೆಂಗಿನ ತೋಟಗಳು ಇಲ್ಲದೆ ಮಳೆಯಾಶ್ರಿತ ಜಮೀನುಗಳೇ ಹೆಚ್ಚು ಅಲ್ಲೊಂದು-ಇಲ್ಲೊAದು ಕೆರೆಗಳಿದ್ದು ಮಳೆಗಾಲದಲ್ಲಿ ತುಂಬಿಕೊAಡರೆ, ಬೇಸಿಗೆಗೆ ಭತ್ತ, ರಾಗಿ, ಶೇಂಗಾ ಬೆಳೆಯುತ್ತಿದ್ದರು.


     ನಮ್ಮಮ್ಮನ ತಂದೆಯವರ ಹೆಸರಾಗಲೀ, ಅವರ ಕುಟುಂಬದ ವಿವರಗಳಾಗಲಿ ನನಗೆ ಗೊತ್ತಿಲ್ಲ. ಆದರೆ ನಮ್ಮ ತಾಯಿಯವರ ಅಮ್ಮ ಚಿಕ್ಕಮ್ಮಜ್ಜಿಗೆ ನನ್ನನ್ನು ಕಂಡರೆ ಬಲು ಅಕ್ಕರೆ ಎಂದು ಅಮ್ಮ ಆಗಾಗ್ಗೆ ಹೇಳುತ್ತಿದ್ದರು. ಆಜ್ಜಿಗೆ ಪೂರ್ಣವಾಗಿ ದೃಷ್ಟಿ ಕಾಣದೆ ಅಂಧಳಾಗಿ, ಇತರರ ಆಶ್ರಯದಿಂದ ತನ್ನ ದಿನನಿತ್ಯದ ಕಾರ್ಯಗಳನ್ನು ಮುಗಿಸುತ್ತಿದ್ದರು ದಿನಗಳನ್ನು ದೂಡುತ್ತಿದ್ದರು.


    ಅಂದಾಜು 1947ರಲ್ಲಿ, ತಿಪ್ಪನಹಳ್ಳಿಯಿಂದ ನಮ್ಮ ಅಜ್ಜಿಯ ಮನೆಗೆ ನನ್ನನ್ನು ಒಂದು ದಿನ ಎತ್ತಿನಗಾಡಿಯಲ್ಲಿ ತಂದು ಬಿಟ್ಟ ತಾಯಿ, “ನೀನು ಇಲ್ಲಿಯೇ ಇದ್ದು ಓದಿ ಕಲಿ' ಎಂದರು. ತಿಪ್ಪನಹಳ್ಳಿಯಲ್ಲಿ ಆಗ ಶಾಲೆಗಳು ಇರಲಿಲ್ಲ. ಜತೆಗೆ ನಾನು ಹುಟ್ಟಿದ 5 ವರ್ಷದಲ್ಲಿ ನನ್ನ ತಮ್ಮಂದಿರಿಬ್ಬರ ಜನನವೂ ಆಗಿ, ಮೂವರು ಮಕ್ಕಳ ಕಡೆ ನಿಗಾ ವಹಿಸುವುದು ನನ್ನಮ್ಮನ ಕೈಲಾಗದು ಎಂದಿರಬಹುದು.


      ದೇಶದ ಎಲ್ಲೆಡೆ ಉತ್ತುಂಗದಲ್ಲಿದ್ದ ಸ್ವಾತಂತ್ರ‍್ಯ ಚಳುವಳಿಗೆ ಉತ್ತಮ ಜನ ಬೆಂಬಲ ಸಿಕ್ಕಿ, ಮಹಾತ್ಮ ಗಾಂಧಿಯವರು ಮತ್ತು ಅವರ ಅನುಯಾಯಿಗಳು ಬ್ರಿಟಿಷರನ್ನು ದೇಶದಿಂದ ತೊಲಗಿಸಿ, ಸ್ವಾತಂತ್ರ‍್ಯವನ್ನು ತಂದು ಕೊಟ್ಟ ಪುಣ್ಯ ಕಾಲ, ಜಡೇಗೊಂಡನಹಳ್ಳಿ ಮಧುಗಿರಿಯಿಂದ 2 ಮೈಲಿ ದೂರ ಇದ್ದುದರಿಂದ ಊರಿನ ಜನ ಪ್ರತಿಯೊಂದಕ್ಕೂ ಮಧುಗಿರಿಗೆ ದಿನನಿತ್ಯ ಹೋಗಿ ಬರುತ್ತಿದ್ದರಿಂದ, ಕೆಲ ವಿದ್ಯಾವಂತ ಹಿರಿಯರು ಒಂದು ರಾತ್ರಿ ಹೊತ್ತು ಅಲ್ಲಿನ ಚೌಡೇಶ್ವರಿ ದೇವಿಯ ಅಂಗಳದಲ್ಲಿ ದಿನವೂ ನಡೆಯುತ್ತಿದ್ದ ಭಜನೆಯ ಮಧ್ಯದಲ್ಲಿ, ಗಾಂಧಿ, ನೆಹರು, ಪಟೇಲ್, ಸುಭಾಶ್ ಚಂದ್ರ ಬೋಸ್ ಮುಂತಾದವರ ಬಗ್ಗೆ ಭಾಷಣ ಮಾಡುತ್ತಿದ್ದರು. ಇದನ್ನು ಕೇಳುತ್ತಿದ್ದ ನನ್ನ ಎದೆ ಅತೀವ್ರವಾಗಿ ಹೆಮ್ಮೆಯಿಂದ ಬೀಗುತ್ತಿತ್ತು.


    ತಿಪ್ಪನಹಳ್ಳಿಯಂತೆ ಈ ಊರಿನಲ್ಲಿ ಸಹ ಸರ್ಕಾರಿ ಶಾಲೆ ಇರಲಿಲ್ಲ. ಆದರೆ ಪಕ್ಕದ ಮಿಡಿತರಹಳ್ಳಿಯಿಂದ ಗುರುಸಿದ್ದಪ್ಪ ಎಂಬ ಮಾಸ್ತರು ಪ್ರತಿ ದಿನ ಇಲ್ಲಿಗೆ ಬಂದು ಸುಮಾರು ಎರಡು ಗಂಟೆಗಳ ಕಾಲ ಪಾಠ ಮಾಡುತ್ತಿದ್ದರು. ಅದಕ್ಕೆ ಕೂಲಿಮಠ ಎಂದು ಕರೆಯುತ್ತಿದ್ದರು. ಇದು ಸರ್ಕಾರಿ ಶಾಲೆಯಲ್ಲವಾದ್ದರಿಂದ ಗುರುಸಿದ್ಧಪ್ಪ ಮಾಸ್ಟರ್ ಅವರಿಗೆ ಯಾವುದೇ ಸಂಬಳವಿಲ್ಲ. ಶಾಲೆಗೆ ಹೋಗುವ ಮಕ್ಕಳ ಪೋಷಕರು ದವಸ ಧಾನ್ಯಗಳನ್ನು ಕೂಲಿ ರೂಪದಲ್ಲಿ ಇವರಿಗೆ ನೀಡುತ್ತಿದ್ದರಿಂದ ಇದಕ್ಕೆ ಕೂಲಿಮಠ ಎಂಬ ಹೆಸರು ಬಂದಿರಬಹುದೆAದು ನನ್ನ ಭಾವನೆ.


        ಗುರುಸಿದ್ದಪ್ಪ ಮಾಸ್ತರು ಸುಮಾರು 6 ಅಡಿ ಎತ್ತರದ ಅಜಾನುಬಾಹು, ವಿಶಾಲವಾದ ಹಣೆಯ ಮೇಲೆ ಮೂರು ಬೆರಳಿನಿಂದ ತೀಡಿ ಹಚ್ಚಿದ ವಿಭೂತಿ ಪಟ್ಟೆ, ಮಧ್ಯದಲ್ಲಿ ಒಂದು ಕುಂಕುಮದ ಬಟ್ಟು; ಕಚ್ಚೆಪಂಚೆ, ಕರೀಕೋಟು, ಬಿಳಿ ರುಮಾಲು, ಕಾಲಿಗೆ ಎಕ್ಕಡ, ಕಂಕುಳಲ್ಲಿ ಒಂದು ಹುಣಿಸೆ ಬರೆ (ಬರಲು), ಇವರ ಶಾಲೆಗೆ ನನ್ನನ್ನು ಸೇರಿಸಿದ ದಿನ ನನ್ನ ತಾಯಿಯ ಕೊನೆಯ ತಮ್ಮ ಪಾಪಣ್ಣನವರು ತಾವೇ ಬಂದು ಚೌಡೇಶ್ವರಿ ದೇವಿಗೆ ನಮಸ್ಕಾರ ಮಾಡಿಸಿ, ಗುರುಸಿದ್ದಪ್ಪ ಮಾಸ್ತರ ಕಾಲಿಗೆ ಬೀಳಿಸಿ, 'ಇವನು ನಮ್ಮಕ್ಕನ ಮಗ ಚಿಕ್ಕಣ್ಣ ಅಂತ, ಇನ್ಮೇಕೆ ನಿಮ್ ಕೂಲಿಮಠದಲ್ಲೇ ಓದ್ಯೋತಾನೆ. ಸರಿಯಾಗಿ ನೋಡ್ಕೊಳ್ಳಿ. ಸಾವುಕಾರರ ಮಗ, ಹೊಡೆಯೋದು ಬಡಿಯೋದು ಮಾಡಬೇಡಿ' ಎಂದು ತಾಕೀತು ಮಾಡಿ ನನ್ನನ್ನು ಅವರ ಸುಪರ್ದಿಗೆ ಬಿಟ್ಟು ಮನೆಗೆ ಹೋದರು. ತರಗತಿಯಲ್ಲಿ 7 ರಿಂದ 8 ಜನ ವಿದ್ಯಾರ್ಥಿಗಳು, ಅವರ ಸಾಲಿನಲ್ಲಿ ಕಲ್ಲಿನ ನೆಲದ ಮೇಲೆ ನನ್ನನ್ನು ಮಾಸ್ತರರು ಕೂರಿಸಿದರು.


ಅಂದಿನ ಶಿಕ್ಷಣ ಪದ್ಧತಿ ಹೇಗಿತ್ತು ಎಂದು ನನಗೆ ಗೊತ್ತಿಲ್ಲ. ಶಾಲಾ ಪಠ್ಯಕ್ರಮದ ಪರಿಚಯವೂ ನನಗಿರಲಿಲ್ಲ. ಬರೆಯುವ ಸಾಧನಗಳಾದ ಸ್ಟೇಟು, ಬಳಪಗಳಾಗಲಿ, ಕಪ್ಪು ಹಲಗೆ-ಸೀಮೆಸುಣ್ಣವಾಗಲಿ ತರಗತಿಯಲ್ಲಿ ಕಾಣಲಿಲ್ಲ. ಹೀಗೆ ಯೋಚನೆ ಮಾಡುತ್ತಾ ಪಕ್ಕದಲ್ಲಿ ಕೂತಿದ್ದ ಹುಡುಗನ ಮುಂದೆ ಹರಡಿದ್ದ ಮರಳಿನ ರಾಶಿಯನ್ನು ದಿಟ್ಟಿಸಿದೆ. ಇದನ್ನೇ ಗಮನಿಸುತ್ತಿದ್ದ ಮಾಸ್ತರರು ನನ್ನ ಹತ್ತಿರ ಬಂದು 'ಏ ನೋಡು, ಹೊರಗೆ ಮರಳು ಗುಡ್ಡೆ ಇದೆಯಲ್ಲಾ, ಅಲ್ಲಿ ಹೋಗಿ ಈ ಮೊರದ ತುಂಬಾ ಮರಳನ್ನು ತುಂಬಿಕೊAಡು ಬಾ' ಎಂದರು. ಅವರು ಕೊಟ್ಟ ಡಬ್ಬದ ಮೊರ ತೆಗೆದುಕೊಂಡು ಹೋಗಿ ಅದರ ತುಂಬಾ ಮರಳು ತುಂಬಿ ತಂದು, ನಾನು ಕೂತಿದ್ದ ಸ್ಥಳದ ಮುಂದೆ ಸುರಿದೆ, 'ಸರಿ, ಈಗ ಎಲ್ಲರೂ ಅವರ ಮುಂದೆ ಇರುವ ಮರಳನ್ನು ಸಮತಟ್ಟಾಗಿ ಹರಡಿ, ನಾನು ಅಕ್ಷರಾಭ್ಯಾಸ ಮಾಡಿಸುತ್ತೇನೆ' ಎಂದರು. 'ಆ' ಎಂಬ ಅಕ್ಷರದ ಮೊದಲನೆ ಬೀಜವನ್ನು ನನ್ನ ತಲೆಗೆ ತುಂಬಿದ್ದೇ ಅಲ್ಲದೆ, ನನ್ನ ಬಲಗೈಯ ತೋರುಬೆರಳನ್ನು ಮರಳಿನ ಮೇಲೆ ಅಮುಕಿ ಹಿಡಿದು 'ಅ' ಎಂಬ ಅಕ್ಷರವನ್ನು ಮೂಡಿಸಿ ಅದರ ಮೇಲೆ 10 ಸಾರಿ ತಿದ್ದಬೇಕೆಂದು ಸೂಚಿಸಿದರು.

    ಕನ್ನಡದ ಅಕ್ಷರ ಮಾಲೆಯ ಎಲ್ಲಾ  ಅಕ್ಷರಗಳನ್ನು ಮರಳಿನ ಮೇಲೆ ಒತ್ತಿ ಬರೆಸುತ್ತಾ, ಬಾಯಲ್ಲಿ ಪ್ರತಿಯೊಂದು ಅಕ್ಷರವನ್ನು ಹೇಳುತ್ತಾ, ಮೂರು ತಿಂಗಳಲ್ಲಿ ವರ್ಣಮಾಲೆಯ ಎಲ್ಲಾ ಅಕ್ಷರಗಳನ್ನು ತಪ್ಪಿಲ್ಲದೆ ಬರೆಯಲು-ಓದಲು ಕಲಿಸಿದರು. ನಂತರ ವ್ಯಾಕರಣ, ಇತ್ಯಾದಿಗಳು. ಶಾಲೆಯಿಂದ ಮನೆಗೆ ಹೋದ ಮೇಲೆ ಪಾಪಣ್ಣ ಮಾವ ಪಡಸಾಲೆಯಲ್ಲಿ ಒಂದು ಚಾಪೆ ಹಾಸಿ ಅದರ ಮೇಲೆ ಮರಳು ಸುರಿದು ಹರಡಿ, ಅಂದು ನಾನು ಶಾಲೆಯಲ್ಲಿ ಕಲಿತಿದ್ದನ್ನು ಬಾಯಿಪಾಠ ಮಾಡಿಕೊಂಡು ತಿದ್ದಲು ಹೇಳುತ್ತಿದ್ದರು. ನಾನು ಹಾಗೇ ಹೇಳಿಕೊಂಡು ತಿದ್ದಿತೀಡುತ್ತಿದ್ದೆ, ಅಭ್ಯಾಸ ಮಾಡುತ್ತಿದ್ದೆ.


     ಕನ್ನಡ ಅಕ್ಷರ ಮಾಲೆಯ ಜತೆಗೆ ಮಗ್ಗಿಯ ಪಾಠವನ್ನು ಮಾಸ್ತರು ಆರಂಭಿಸಿದರು. ಅವು ಒಂದು-ಎರಡು-ಮೂರು ಇವುಗಳ ಮಗ್ಗಿಯಲ್ಲ. ನಾವು ಎಂದೂ ಕೇಳದ ಅಡ್ಡ, ಹಾಗ, ಮುಪ್ಪಾಗ ಮುಂತಾಗಿ ಮಗ್ಗಿ ಹೇಳಿಕೊಟ್ಟರು. ನನಗೋ ಅದು ಕಬ್ಬಿಣದ ಕಡಲೆಯಾಗಿ ಕಾಣುತ್ತಿತ್ತು. ವರ್ಣಮಾಲೆಯ ಅಕ್ಷರಗಳನ್ನು ಎಷ್ಟು ಸುಲಭವಾಗಿ ಕಲಿತು ಶಾಲೆಯ ಎಲ್ಲರಿಗಿಂತ ಮುಂದೆ ಇದ್ದೆನೋ, ಈ ಮಗ್ಗಿಯಲ್ಲಿ ನಾನು ಎಲ್ಲರಿಗೂ ಹಿಂದೆ ಎನಿಸಿ, ಸದಾ ಕಂಕುಳಲ್ಲಿ ಇಟ್ಟುಕೊಂಡಿರುತ್ತಿದ್ದ ಬರೆ (ದಂಡ) ಯಿಂದ ಒಂದು ದಿನ ನಾಲ್ಕು ಏಟು ತಿಂದಿದ್ದೆ. ಮತ್ತೊಂದು ದಿನ ಒಂಟಿ ಕಾಲಲ್ಲಿ ಒಂದು ಗಂಟೆಗೂ ಹೆಚ್ಚು ಹೊತ್ತು ನಿಂತು ಶಿಕ್ಷೆ ಅನುಭವಿಸಿದ್ದೆ.


ಆಗಸ್ಟ್ 15, 1947 ಅಂದು ಊರಿನಲ್ಲೆಲ್ಲಾ ಹಬ್ಬ


     'ಏಕೆ ಮಾವ ಊರು ತುಂಬಾ ತಮಟೆ ಹೊಡೆದುಕೊಂಡು ಬೀದೀಲಿ ಜನ ಕೇಕೆ ಹಾಕ್ಕೊಂಡು ಕುಣೀತಾರೆ?' ಎಂದು ಮಾವ ಪಾಪಣ್ಣನವರನ್ನು ಕೇಳಿದೆ. ನಮ್ಮ ದೇಶಕ್ಕೆ ಸ್ವಾತಂತ್ರ ಬಂತAತೆ ಕಣ್ಣಾ ಮಗ, ಅದಕ್ಕೆ ಕುಣೀತಾರೆ' ಎಂದು ಹೇಳಿ ಹೆಗಲ ಮೇಲೆ ನನ್ನನ್ನು ಕೂರಿಸಿಕೊಂಡು ಅವರೂ, ತಮಟೆಯ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು; ನಾನೂ ಸಂಭ್ರಮಿಸಿದೆ.


     ಹಳೆಗನ್ನಡ, ಕಾಗುಣಿತ, ಮಗ್ಗಿ ಇವುಗಳಿಂದ ನಾನು ಅಧೀರನಾಗಿದ್ದೆ. ಮಾಸ್ತರು ಕೊಡುತ್ತಿದ್ದ ಬರೆ ಏಟುಗಳು ಜಾಸ್ತಿಯಾಗತೊಡಗಿದವು. ಈ ಮಧ್ಯೆ ಎತ್ತಿನ ಗಾಡಿ ಕಟ್ಟಿಸಿಕೊಂಡು ನನ್ನನ್ನು, ಅಜ್ಜಿಯನ್ನು ನೋಡಲು ಬಂದಿದ್ದ ನನ್ನಮ್ಮನ ಮುಂದೆ ನನ್ನ ಆಳಲನ್ನು ತೋಡಿಕೊಂಡು 'ನನ್ನನ್ನು ಹೇಗಾದರೂ ಮಾಡಿ ನಮ್ಮೂರಿಗೆ ಕರೆದುಕೊಂಡು ಹೋಗು' ಎಂದು ದುಂಬಾಲುಬಿದ್ದೆ. ಅಮ್ಮ ಅವರ ಅಣ್ಣಂದಿರಾದ ರಂಗಪ್ಪನವರನ್ನು ತಮ್ಮಂದಿರಾದ ರಂಗಶಾಮಣ್ಣ, ಪಾಪಣ್ಣ ಇವರನ್ನು ಒಪ್ಪಿಸಿದರು. ನಮ್ಮಜ್ಜಿ ನನ್ನ ಮೇಲಿನ ಪ್ರೀತಿಗೆ ಕಟ್ಟುಬಿದ್ದು 'ಅವನು ಇಸ್ಕೂಲಿಗೇ ಹೋಗೋದು ಬ್ಯಾಡ, ಬೇಕಾದಷ್ಟು ಜಮೀನೈತೆ ಅದನ್ನು ನೋಡ್ಕೊಂಡು ಮನೇಲರ‍್ಲಿ . ಇನ್ನೊಂದಾರು ತಿಂಗಳು ನನ್ನ ಜತೆನೆ ಇರಲಿ ಅವನು, ನಂತರ ನಾನೇ ಕಳುಹಿಸುತ್ತೇನೆ' ಎಂದರು. ಅದಕ್ಕೆ ನಾನು ಸುತಾರಾಂ ಒಪ್ಪಲಿಲ್ಲವಾಗಿ ನಿರ್ವಾಹವಿಲ್ಲದೆ ಒಪ್ಪಿದರು. ಮಾರನೆಯ ದಿನ ನನ್ನ ತಾಯಿಯೊಂದಿಗೆ ಕೂಲಿಮಠ ಬಿಟ್ಟು ನಮ್ಮೂರಿಗೆ ಹಿಂದಿರುಗಿದೆ.

    ಸರ್ಕಾರಿ ಶಾಲೆ : ನಮ್ಮ ತಾಯಿಯವರಿಗೆ ಇಬ್ಬರು ತಂಗಿಯರು. ಅವರುಗಳೆಂದರೆ ರಂಗಮ್ಮ ಮತ್ತು ಸಾಕಮ್ಮನವರು. ರಂಗಮ್ಮನವರನ್ನು ಮಧುಗಿರಿ ತಾಲ್ಲೂಕು ಪುರವರ ಹೋಬಳಿ ಗಿರೇಗೌಡನಹಳ್ಳಿಗೆ ಕೊಟ್ಟು ಮದುವೆ ಮಾಡಿದ್ದರೆ, ಸಾಕಮ್ಮನವರನ್ನು ನಮ್ಮ ಊರಿಗೆ ನಮ್ಮ ಚಿಕ್ಕಪ್ಪನವರಾದ ಚಿಕ್ಕಜ್ಜಪ್ಪ ಅವರಿಗೆ ಕೊಟ್ಟು ಲಗ್ನ ಮಾಡಿದ್ದರು. ಕೂಲಿಮಠ ಬಿಟ್ಟು ತಿಪ್ಪನಹಳ್ಳಿಗೆ ಹಿಂದಿರುಗಿದ್ದೆ. ನನಗೆ ಆಗ 5 ವರ್ಷ. ನನ್ನ ಅಪ್ಪನಿಗೆ ನನ್ನನ್ನು ಪ್ರಾಥಮಿಕ ಶಾಲೆಗೆ ಸೇರಿಸುವ ತವಕ, ಆದರೆ ನಮ್ಮೂರಲ್ಲಿ ಆ ಶಾಲೆ ಇರಲಿಲ್ಲ. ಈ ವರ್ಷ ಬಂದೇ ಬರುತ್ತೆ ಎಂದು ಹೇಳುತ್ತಿದ್ದರು, ಆದರೆ ಖಾತ್ರಿ ಇರಲಿಲ್ಲ.

   ಶಾಲೆ ಪಕ್ಕದ ಬಡವನಹಳ್ಳಿಯಲ್ಲಿತ್ತು. ನಮ್ಮೂರಿಂದ ಅಲ್ಲಿಗೆ 3 ಕಿಮೀ ದೂರ. ಪ್ರೀತಿಯ ಮಗ ದಿನವೂ ಅಷ್ಟು ದೂರ ನಡೆದು ಹೋಗಿ ಬರಲು ಸಾಧ್ಯವೇ ಎಂದು ಅವರ ಯೋಚನೆ. ಹೀಗಿರುವಾಗ ಒಂದು ದಿನ ಅಮ್ಮನ ತಂಗಿಯಾದ ರಂಗಮ್ಮನವರು. ಗಿರೇಗೌಡನಹಳ್ಳಿಯಿಂದ ವರ್ಷಕ್ಕೊಮ್ಮೆ ಬಂದು ಹೋಗುವ ವಾಡಿಕೆಯಂತೆ ಎತ್ತಿನಗಾಡಿಯಲ್ಲಿ ಬಂದಿದ್ದರು. “ಕೂಲಿಮಠ ಬಿಡಿಸಿ ಮಗನನ್ನು ಯಾಕೆ ಕರೆದುಕೊಂಡು ಬಂದಿದ್ದೀರಿ' ಎಂದು ಚಿಕ್ಕಮ್ಮ ಅಮ್ಮನನ್ನು ಪ್ರಶ್ನೆ ಮಾಡುವುದು, ಪಕ್ಕದ ಭತ್ತದ ಮೂಟೆಗಳ ಮೇಲೆ ಕುಳಿತು ಆಟವಾಡುತ್ತಿದ್ದ ನನಗೆ ಕೇಳಿಸಿತು. ಅಮ್ಮ ಏನೋ ಒಂದು ಉತ್ತರ ಹೇಳುತ್ತಿದ್ದರು. ಆಗ ಚಿಕ್ಕಮ್ಮ 'ನಮ್ಮೂರಾಗೆ ಒಂದು ಒಳ್ಳೆ ಗೋರೆಂಟ್ ಇಸ್ಕೂಲ್ ಐತೆ. ರಂಗಶಾಮಣ್ಣ ಮೇಷ್ಟೂ ಚೆನ್ನಾಗಿ ಏಳಿಕೊಡ್ತಾರೆ, ಅಲ್ಲಿಗೇ ಸೇರಿಸಕ್ಕ, ನಮ್ಮ ಮನೇಲಿದ್ದು ಓದಿಕೊಳ್ಳಲಿ' ಎಂಬ ಸಲಹೆಯನ್ನು ಕೊಟ್ಟರು. ಅಮ್ಮ ನಿಮ್ಮ ಯಾಕೆ ತೊಂದರೆ ಎಂದು ಹೇಳಿದರೂ ಅವರು ಒತ್ತಾಯ ಮಾಡುತ್ತಿದ್ದುದನ್ನು ನಾನು ನೋಡುತ್ತಿದ್ದೆ. “ಆಗಲಿ, ಅವರಪ್ಪನ್ನ ಕೇಳಿ ಹೇಳೀನಿ' ಎಂದು ಅಮ್ಮ ಹೇಳಿದರು. ಮಾತುಕತೆ ಮುಗಿಯಿತು.

     ಸಂಜೆ ಅಪ್ಪ ಮಧುಗಿರಿಯಿಂದ ಹಿಂದಿರುಗಿ ಊಟ ಆದ ನಂತರ ಚಿಕ್ಕಮ್ಮನವರ ಅವರ ಕುಟುಂಬದವರ ಯೋಗಕ್ಷೇಮ ವಿಚಾರಿಸಿದರು. ಆಗ ಅಮ್ಮ ಮಧ್ಯೆ ಬಾಯಿ ಹಾಕಿ “ನಮ್ಮ ಚಿಕ್ಕಣ್ಣನ್ನ ಗಿರೇಗೌಡನಹಳ್ಳಿ ಇಸ್ಕೂಲಿಗೆ ಸೇರು ಅಂತ ರಂಗಮ್ಮ ಒತ್ತಾಯ ಮಾಡ್ತಾ ಅವಳೆ. ಮನೆ ಹತ್ತಾನೇ ಇಸ್ಕೊಲೈತಂತೆ, ಯಾಕೆ ಸೇರಿಸಬಾರದು' ಎಂದರು. ಯೋಚನೆ ಮಾಡಿದ ಅಪ್ಪ, 'ಆಗಬಹುದು, ಹೆಂಗೂ ನನ್ನ ತಂಗಿ ಚೌಡಮ್ಮನ್ನೂ ಅಲ್ಲಿಗೇ ಅಲ್ವ ಕೊಟ್ಟಿರೋದು, ಅವರ ಮನೇಲಿ ಇದ್ದುಕೊಂಡು ಸ್ಕೂಲಿಗೆ ಹೋಗಲಿ ಎಂದು ಅಪ್ಪ ಸಲಹೆ ನೀಡಿದರು. ಇದಕ್ಕೆ ಅಮ್ಮ ಸುತಾರಾಂ ಒಪ್ಪಲಿಲ್ಲ. 'ಚೌಡಮ್ಮನಿಗೆ ಎಂಟು ಮಕ್ಕಳಿವೆ. ಅವುಗಳನ್ನು ನೋಡಿಕೊಳ್ಳೋದೆ ಕಷ್ಟವೈತೆ, ಬೇಡ ರಂಗಮ್ಮನ ಮನೇಲೇ ಅವನು ಇರಲಿ' ಎಂದರು. ಚಿಕ್ಕಮ್ಮನವರೂ ಇದಕ್ಕೆ ಒಪ್ಪಿಗೆ ಸೂಚಿಸಿದ ಮೇಲೆ, ಅಪ್ಪ ನನ್ನನ್ನು ಗಿರೇಗೌಡನಹಳ್ಳಿ ಸರ್ಕಾರಿ ಶಾಲೆಗೆ ದಾಖಲಿಸಲು ಒಪ್ಪಿಗೆ ಸೂಚಿಸಿದರು.

     1948ನೇ ಇಸವಿ ಏಪ್ರಿಲ್ ತಿಂಗಳು, ಅಪ್ಪ ಕಮಾನುಗಾಡಿ ಸಜ್ಜಗೊಳಿಸಿ ಮಿಣಮಿಣ ಮಿಂಚುತ್ತಿದ್ದ ಹೋರಿಗಳನ್ನು ಪ್ರಯಾಣಕ್ಕೆ ಅಣಿ ಮಾಡಿ ತಾವೇ ಗಾಡಿಗೆ ಸಾರಥಿಯಾದರು. ತಿಪ್ಪನಹಳ್ಳಿಯಿಂದ ಗಿರೇಗೊಂಡನಹಳ್ಳಿಗೆ ನಮ್ಮ ಪ್ರಯಾಣ ಸಾಗಿತು. ಗಾಡಿಯಲ್ಲಿ ಅಮ್ಮ ನಾನು, ಅಕ್ಕ ಇದ್ದೆವು. ಗಾಡಿ ಅರ್ಧ ಭಾಗ ಹಿಂದಕ್ಕೆ ಒಂದು ಚೀಲ ಅಕ್ಕಿ, 5-6 ದೊಡ್ಡ ಹಲಸಿನ ಹಣ್ಣುಗಳು, ಎರಡು ಬಿದಿರು ಗೂಡೆ ತುಂಬಾ ಮಾವಿನ ಕಾಯಿ ಮುಂತಾದ ಸಾಮಾನುಗಳನ್ನು ಜೋಡಿಸಿದ್ದರು. ಗಿರೇಗೌಡನಹಳ್ಳಿಯ ಚಿಕ್ಕಮ್ಮ ಮತ್ತು ಚೌಡತ್ತೆ ಮನೆಯವರಿಗೆ ಇವುಗಳನ್ನು ಹಂಚಬೇಕು. ಬೆಳಗಿನ ಜಾವಕ್ಕೆ ತಿಪ್ಪನಹಳ್ಳಿ ಬಿಟ್ಟು ಮಧುಗಿರಿಯ ಕಲ್ಲುಮಣ್ಣು ದಾರಿ ಸವೆಸಿ, ಮಧ್ಯೆ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಗಾಡಿ ನಿಲ್ಲಿಸಿ ಬುತ್ತಿ ಊಟ ಮಾಡಿ, ಹೋರಿಗಳಿಗೆ ದಣಿವಾರಿಸಿಕೊಳ್ಳಲು ಪಕ್ಕದ ಸಿದ್ದಾಪುರ ಕೆರೆಗೆ ಹೋಗಿ ನೀರು ಕುಡಿಸಿಕೊಂಡು ಬಂದು ಪ್ರಯಾಣ ಮುಂದುವರೆಸಿದರು. ಮಧುಗಿರಿ, ಪುರವರ, ಬಡಕನಹಳ್ಳಿ ಮೂಲಕ ಗಿರೇಗೊಂಡನಹಳ್ಳಿ ಸೇರುವ ಹೊತ್ತಿಗೆ ರಾತ್ರಿ ಊಟದ ಸಮಯವಾಗಿತ್ತು. ಸುಮಾರು 30 ಕಿಮೀಗಳ ದೂರದ ಪ್ರಯಾಣವಾದರೂ ಯಾವುದೇ ಅವಘಡಗಳಿಲ್ಲದೆ ಬಂದು ಸೇರಿದೆವು.