ಎತ್ತ ಹೊರಟಿರುವೆ ಹೇಳು ಜೀವವೇ..., ಮೂಲ: ರೋಜರ್‌ ಮಯಿಸ್‌* ಕನ್ನಡಕ್ಕೆ ಕೇಶವ ಮಳಗಿ

ಎತ್ತ ಹೊರಟಿರುವೆ ಹೇಳು ಜೀವವೇ...,  ಮೂಲ: ರೋಜರ್‌ ಮಯಿಸ್‌*  ಕನ್ನಡಕ್ಕೆ ಕೇಶವ ಮಳಗಿ

 

ಎತ್ತ ಹೊರಟಿರುವೆ ಹೇಳು ಜೀವವೇ...,

ಮೂಲ: ರೋಜರ್‌ ಮಯಿಸ್‌*

ಕನ್ನಡಕ್ಕೆ ಕೇಶವ ಮಳಗಿ

 

ತರುಣ ನಿಧಾನಕ್ಕೆ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದ, ಕೈಗಳು ಪ್ಯಾಂಟಿನ ಕಿಸೆಯೊಳಗೆ ಇಳಿದಿದ್ದವು, ಗಂಭೀರ ಸ್ವಭಾವದ ಹರೆಯದ ಫೋರ. ಯಾವುದೇ ಭದ್ರತೆ ಇರದೆ ಭವಿಷ್ಯವನ್ನು ಎದುರಿಸಲು ಎಂಟೆದೆಯಿರಬೇಕು. ಕೆಲವೊಮ್ಮೆ ಧೈರ್ಯ ಕೈಕೊಟ್ಟು ಆತ ತೀರ ಎದೆಗುಂದಿದ್ದಿದೆ. ಅಂಥ ಕಹಿಗಳಿಗೆಯಲ್ಲಿ ಬದುಕೆಂದರೆ ಸವಾಲು, ರೋಮಾಂಚಕ ಅನುಭವವೆನ್ನುವುದನ್ನು ಮರೆತು ಕೂತದ್ದೂ ಇದೆ. ಎಲ್ಲ ಮೀರಿ ಮನುಷ್ಯ ಬಯಸುವುದೇನು? ಮುಕ್ತನಾಗಿ, ನಿರಾಳ ಮನಸ್ಸಿನವನಾಗಿ ಬದುಕುವುದು.

ಆದರೆ, ರಕ್ಷಣೆ ಇದ್ದಲ್ಲಿ ನೀವು ಸ್ವತಂತ್ರವಾಗಿರಲಾರಿರಿ. ನಿಜಕ್ಕೂ ಮುಕ್ತತೆ ಅಲ್ಲಿ ಅಸಾಧ್ಯ. ರಕ್ಷಣೆ ಜವಾಬ್ದಾರಿ ಬಯಸುತ್ತದೆ. ಜವಾಬ್ದಾರಿ ಕಳವಳ ಹುಟ್ಟು ಹಾಕುತ್ತದೆ. ಬದುಕಿನ ಸವಲತ್ತು, ಸುಖಕ್ಕಾಗಿ ಬೆನ್ನಟ್ಟುವುದು ಮತ್ತಷ್ಟು, ಮತ್ತಷ್ಟು ತಲ್ಲಣ ತರುತ್ತದೆ.

ಆದರೆ, ರಕ್ಷಣೆ ಇಲ್ಲದೆ ಬದುಕು-ಭವಿಷ್ಯ ಎದುರಿಸಲು ಭಂಡತನ ಬೇಕಾಗುತ್ತದೆ. ಈ ತರುಣ ಎಷ್ಟೋ ಸಲ ಬದುಕುವುದನ್ನೆ ಬಿಟ್ಟು ಇದರ ಬಗ್ಗೆಯೇ ತಲೆಕೆಡಿಸಿಕೊಂಡು ಯೋಚಿಸುತ್ತ ಕೂತಿದ್ದಾನೆ. ಅದೇ ಸಮಯದಲ್ಲಿ ಒಂದಿಷ್ಟು ಬೇರೆ ಕೆಲಸಗಳನ್ನಾತ ಮಾಡಬಹುದಿತ್ತೇನೋ! ಕೊಂಚ ಉಡಾಫೆತನದಿಂದ ಹೆಜ್ಜೆ ಹಾಕುತ್ತಿದ್ದ ಆತ ಸಣ್ಣಗೆ ಸಿಳ್ಳು ಹಾಕಿ ಹಾಡು ಗುನುಗುತ್ತಿದ್ದ. ಸದ್ಯಕ್ಕೆ ರಾಗವಾಗಿ ಸಿಳ್ಳು ಹಾಕುವುದನ್ನು ಬಿಟ್ಟು ಮಾಡುವುದೇನೂ ಇರಲಿಲ್ಲ. ವಿನಾಕಾರಣ ಆತನಿಗೆ ಅಪರಾಧಿ ಪ್ರಜ್ಞೆ ಆವರಿಸಿತು! ನಿಜಕ್ಕೂ ಈಗ ತನಗೆ ಬೇಕಿರುವುದು ಭದ್ರವಾದ ಒಂದು ಕೆಲಸ ಎಂದು ತೀವ್ರವಾಗಿ ಅನ್ನಿಸಿತು. ತೀರಾ ಆಳದಿಂದ ನೋಡಿದರೆ ಇದು ಸಹ ಬರೀ ಟೊಳ್ಳು ಎಂದೂ ಅವನಿಗೆ ಗೊತ್ತು. ಇರಲಿ, ಹಾಗಂದೆ, ಮತ್ತು ತನ್ನ ಮೂಲ ಮುಗ್ಧತೆ. ಮುಖ್ಯತೆಗೆ ಕಟ್ಟು ಬೀಳಲು ಬಯಸಿದ.

ಹೀಗಾಗಿ ಅಸಮಾಧಾನಿಯಾಗಿದ್ದ!

ನಕ್ಷತ್ರಗಳೆಲ್ಲ ಇಣುಕಿ ನೋಡುತ್ತಿದ್ದ ರಾತ್ರಿ. ಒಂದಿಬ್ಬರು ಅಲ್ಲಲ್ಲಿ ಓಡಾಡುತ್ತಿದ್ದಾರೆ. ಮಂದ ಬೆಳಕು ತುಂಬಿದ್ದ ಪುಟ್ಟ ಮನೆಯೊಳಗಿಂದ ಖಿಲ್ಲನೆ ನಗು ಚಿಮ್ಮಿ ಬಂತು, ಹೆಣ್ಣಿನ ನಗು, ಯಾವುದೇ ಅಡೆ ತಡೆಯಿರದ ಹೊರಗಿನ ಬದುಕು ಈ ಹುಡುಗನನ್ನು ಬಳಸಿಕೊಂಡು ಸಾಗುತ್ತಿತ್ತು. ಆದರೆ ಈ ರಾತ್ರಿ, ಯಾವುದರಿಂದಲೂ ಖುಷಿಯಾಗದಷ್ಟು ಆತ ಖಿನ್ನನಾಗಿದ್ದ.

ಯಾರದೋ ತೋಟದಲ್ಲಿ ಬೆಳೆದ ದಯಾಳು, ಮರದ ನೆರಳಿನಡಿ ಅಸ್ಪಷ್ಟ ಹೆಣ್ಣು - ಗಂಡಿನ ಆಕೃತಿ. ಸುತ್ತ ಪೊಲೀಸರೂ ಇಲ್ಲ. ಯಾರ ಭಯವೂ ಇಲ್ಲದೆ, ಹೋಗಲು ಬೇರೆ ಜಾಗವೂ ಇಲ್ಲದೆ ಮೈಮರೆತು ನಿಂತ ಜೋಡಿ. ಆ ಜೋಡಿಗೆ ಯಾರೂ ಲೆಕ್ಕಕ್ಕಿಲ್ಲ.

ಸಾಮಾನ್ಯವಾಗಿ ಇಂಥ, ಚಿಕ್ಕ ವಿಷಯಗಳು ಆತನ ಆಳಿಕ್ಕಿಳಿದು ಖುಷಿಪಡಿಸುತ್ತವೆ. ‘ಬದುಕು ಯೋಗ್ಯವಾಗಿದೆ’ ಎಂಬ ಭಾವವನ್ನು ಈ ಜೋಡಿ ಅವನಲ್ಲಿ ತುಂಬಿತು. ಆದರೂ ಈ ರಾತ್ರಿ ತೀರ ಬೇರೆ. ಈ ಖಿನ್ನತೆ ಹೊಸ ಲೆಕ್ಕಾಚಾರದ ಭಾಗವಾಗಿ ಹುಟ್ಟಿದ್ದು. ಮುಗ್ಧತೆ ಕಳೆದು ಹೋಗಿದೆ, ಎನ್ನುವ ಅರಿವಿನಿಂದ ಹುಟ್ಟಿದ್ದು, ಹಾಗೆಂದೇ, ತನ್ನ ಸ್ವಾತಂತ್ರ್ಯದಿಂದ ರೊಚ್ಚಿಗೆದ್ದು ಮತ್ತೆ ಬೋನಿಗೆ ಹೋಗಲು ಬಯಸುವ ಕಾಡು ಪ್ರಾಣಿಯಂತಾಗಿತ್ತು ಆತನ ಮನಸ್ಥಿತಿ.

ಈಜು ಕಲಿತು ನೀರಿಗೆ ಹಾರು ಅನ್ನುವ ಗಾದೆಯಂತೆ ಅವನೂ ನೀರಿನ ಆಳ ಅರಿತೇ ಬದುಕಿಗೆ ಧುಮುಕಿದ್ದ. ತೌಲನಿಕವಾಗಿ ಒಳ್ಳೆಯ ರಕ್ಷಣೆ ಒದಗಿಸುವ ಸರ್ಕಾರಿ ಆತನಿಗೆ ದೊರಕಿತ್ತು. ಅದರ ಬೆರಳೆಣಿಕ ಅವಧಿಯಲ್ಲಿ, ಕೆಲವೊಮ್ಮ ಆಗುವಂತೆ. ದಿಢೀರನೆ ನೌಕರಿಬಿಟ್ಟು ನಿರುದ್ಯೋಗಿಯಾಗಿದ್ದ. ಸುಲಭವಾಗಿ ಕೈಗೆಟುಕುವ ಸವಲತ್ತಿನ ಜೀವನಕ್ಕೆ ತಾನು ಒಗ್ಗುವುದಿಲ್ಲ ಎನ್ನುವುದು ಆತನಿಗೆ ತಿಳಿದ ವಿಚಾರವಾಗಿತ್ತು. ಅಂತೂ ಆ ಜೀವನ ಅವನಿಗಾಗಿ ಅಲ್ಲ, ಅಷ್ಟೆ! ಇದ್ದಕ್ಕಿದ್ದಂತೆ ಕೆಲಸ ಬಿಟ್ಟು ಆನಂದದಿಂದ ಉಬ್ಬಿ ಮನೆಗೆ ಹೋಗಿ ಎಲ್ಲರನ್ನೂ ದಂಗು ಬಡಿಸಿದ್ದ. ಆತ ಮಾಡಿದ್ದು ಧೈರ್ಯದ ಕೆಲಸವೆಂದೂ ಸಹ ಅವರಿಗೆ ಅನ್ನಿಸಲಿಲ್ಲ. ತಾನು ಮತ್ತೆಂದೂ ಹಳೆಯ ನೌಕರಿಗೆ ಹೋಗುವುದಿಲ್ಲ ಎಂದು ಅವನಿಗೆ ಗೊತ್ತಿತ್ತು. ಅಥವ, ಅವರೇ ಇವನನ್ನು ಸೇರಿಸುತ್ತಿರಲಿಲ್ಲವೆಂದರೂ ಆದೀತು.

ಅದಾದಮೇಲೆ ಈ ಹುಡುಗ ನೂರಾರು ನೌಕರಿ ಮಾಡಿದ, ಸಾವಿರಾರು ಎಂದರೂ ಅಡ್ಡಿಯಿಲ್ಲ. ಕೊನೆಗೆ ತಲೆಕೆಟ್ಟು. ಗೊಣಗಿಕೊಂಡ ಈ ನೌಕರಿಗಳೆಲ್ಲ ನರಕಕ್ಕೆ ತೊಲಗಲಿ, ಈ ನೌಕರಿ-ಗಿವಕರಿಯ ಹಂಗು ತನಗೆ ಬೇಡ. ನನಗೆ ಬೇಕಿರುವುದು – ಬದುಕುವುದು. ಸುಂದರವಾದುದೊಂದನ್ನು ಸೃಷ್ಟಿಸುವುದು. ಆ ಚೆಲುವು ಪುಟ್ಟ ಹುಡುಗಿಯೊಬ್ಬಳ ಹೃದಯದಲ್ಲಿ ಹಾಡು ಹುಟ್ಟುವಷ್ಟು ಸಣ್ಣ ಸಂಗತಿಯಾದರೂ ಚಿಂತೆಯಿಲ್ಲ.

ಹಾಡು, ಪ್ರೀತಿಯ ಹಾಡು. ಹೌದು, ಆ ಹುಡುಗ ಪ್ರೀತಿಯಲ್ಲಿ ಸಿಲುಕಿದ್ದ!

ಅದೂ ಸಹ ಬಹಳ ದಿನ ಬದುಕಲಿಲ್ಲ. ಪ್ರೀತಿಯೊಂದಿಗೆ ರಕ್ಷಣೆಯ ಬೇಡಿಕೆಯೂ ಬಂದಿತ್ತು. ಅದಕ್ಕಾಗಿ ಮತ್ತೆ ಪ್ರಯತ್ನಿಸಿದೆ. ಮತ್ತೊಂದು ಕೆಲಸವೂ ಸಿಕ್ಕಿತು. ಅಲ್ಲೇ ಸ್ವಲ್ಪ ದಿನವಿದ್ದು ಒಂದಿಷ್ಟು ಹಣವನ್ನೂ ಉಳಿಸಿ ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ದುಡ್ಡು ಚೆಲ್ಲಿ ಅರ್ಧ ಎಕರೆ ಜಮೀನನ್ನು ಕೊಂಡ. ಆದರೆ ದಿನದಿನಕ್ಕೆ ನೆಮ್ಮದಿ ಕಳೆದುಕೊಳ್ಳತೊಡಗಿದ. ಸಹಜವಾಗಿಯೇ ಹುಡುಗಿಯೂ ನೆಮ್ಮದಿ ಕಳೆದುಕೊಂಡಳು. ಯಾಕೆಂದರೆ- ಅವರು ಪರಸ್ಪರ ಪ್ರೀತಿಸಿದ್ದರು.

ತಲೆಕೆಟ್ಟ ಒಂದು ದಿನ ಗೊಣಗಿದ: ಮದುವೆಗಳೆಲ್ಲ ನರಕಕ್ಕೆ ತೊಲಗಲಿ, ನಾನು ಮುಕ್ತನಾಗಿರಬೇಕು. ನನ್ನ ಬದುಕನ್ನು ಬದುಕಬೇಕು. ಆ ಬದುಕಲ್ಲಿ ಚೂರು ನಗು, ಒಂದು ಚೂರು ಪ್ರೀತಿ ಸಾಕು. ಮಿಕ್ಕಿದ್ದೆಲ್ಲ ಗಾಳಿಗೆ ತೂರಿ ಹೋಗಿ, ನನ್ನ ನಗು, ಮುಗ್ಧತೆ ಹಾಗೆ ಉಳಿಯಲಿ, ರಕ್ಷಣೆ ಮಣ್ಣು ತಿನ್ನಲಿ. ಆತ ಮತ್ತೆ ಹೇಳಿಕೊಂಡು ನಾನು ಹೊರಗಿರುವವನು. ಒಳ್ಳೆಯದಕ್ಕೆನ್ನುವಂತೆ ಆ ಹುಡುಗಿ ನಿಶ್ಚಿತಾರ್ಥದ ಉಂಗುರ ಮರಳಿ ತಂದುಕೊಟ್ಟಳು.

ತಾನೊಂದು ಪುಸ್ತಕ ಬರೆಯಬೇಕೆಂದು ಆ ತರುಣ ನಿರ್ಧರಿಸಿದ. ಎಂದೋ ಮುಗಿಸಬೇಕಾಗಿದ್ದ ಕೆಲಸವೊಂದು ಈಗ ತನಗಾಗಿ ಕಾದಿದೆ, ಅಂದುಕೊಂಡ

ಈತನಕ ಬದುಕಿನಿಂದ ತಾನು ಕಲಿತದ್ದನ್ನೆಲ್ಲ ಹೇಗೆ ಆ ಪುಸ್ತಕದಲ್ಲಿ ಒಡಮೂಡಿಸಬೇಕೆಂಬ ಯೋಜನೆ ಒಳ್ಳೆಯದು. ಸುಂದರವಾದದ್ದು. ಉಲ್ಲಾಸ ತುಂಬಿದ್ದು, ಕೆಡುಕಿನದು, ವಿಕಾರವಾದುದು ಯಾವುದನ್ನು ಬಿಡಬಾರದು. ತನ್ನ ಪುಸ್ತಕದಲ್ಲಿ ಸ್ಥಾನ ಪಡೆದಿರುವ ವಿಷಯವೇ ಇರಕೂಡದು. ಅದೊಂದು ಅತ್ಯಂತ ಜನಪ್ರಿಯ ಪುಸ್ತಕವಾಗಬೇಕು ಆಗುವ ಹಾಗೆ ತಾನು ಪ್ರಯತ್ನಿಸಬೇಕು. ಸಣ್ಣಪುಟ್ಟದರ ಬಗ್ಗೆ ಕಹಿಯಾಗಬಾರದು. ಆತನಿಗೆ ಹಣ ಹೊಂದುವುದೆಂದರೆ ರಕ್ಷಣೆ ಹೊಂದುವುದೆಂದು, ರಕ್ಷಣೆ ಎಂದರೆ ಸ್ವಾತಂತ್ರ್ಯದ ಸಮಾಪ್ತಿ ಎಂದು ಮನವರಿಕೆಯಾಗಿತ್ತು. ಜವಾಬ್ದಾರಿಯನ್ನು ತಲೆಯ ಮೇಲೆ ಹೇರಿಕೊಳ್ಳುವುದು, ಅದಕ್ಕಾಗಿ ಮಧುರವಾದ ಕನಸನ್ನು ಮಾರಾಟ ಮಾಡಿ, ಸ್ವಾತಂತ್ರ್ಯಹೀನನಾಗಿ, ಬದುಕಿನ ತಕ್ಷಣದ ಸುಖವನ್ನು ಬಾಚಿ ತಬ್ಬುವ ಅವಕಾಶದಿಂದ ವಂಚಿತನಾಗಿ ಮುಗ್ಧತೆ ಕಳೆದುಕೊಳ್ಳುವುದು ಬೇಡ.

ಇದನ್ನೆಲ್ಲ ಆತ ತನ್ನ ಪುಸ್ತಕದಲ್ಲಿ ಬರೆಯುವುದಿತ್ತು. ಎಲ್ಲ ಹಾಳಾಗಿ ಹೋಗಲಿ. ಹಣವನ್ನು ಕಸದಂತೆ ಕಾಣುತ್ತೇನೆ. ಬದುಕನ್ನು, ಸ್ವಾತಂತ್ರ್ಯವನ್ನು ತಬ್ಬುತ್ತೇನೆ. ಮುಗ್ಧತೆ, ನಗು, ಕನಸು ತುಂಬಿದ ಹುಡುಗನಾಗಿಯೇ ಉಳಿಯುತ್ತೇನೆ ಎಂದು ಅಂದುಕೊಂಡ.

ಈಗಿರುವ ಎಲ್ಲದ್ದಕ್ಕಿಂತ ಸುಂದರವಾದುದನ್ನು ಸೃಷ್ಟಿಸುವುದು ಆತನ ಕನಸು. ಬಿಲದೊಳಗಿನ ಪರಿಸರದಲ್ಲಿ ಒಬ್ಬ ವ್ಯಕ್ತಿ ಎಷ್ಟು ಧರ್ಮನಿಷ್ಠನಾಗಿರಬೇಕೊ ಆ ನಿಷ್ಠೆಯನ್ನು ಒಬ್ಬ ಮಗನಾಗಿ, ಯುವಕನಾಗಿ ಆತ ಉಳಿಸಿಕೊಂಡಿರಲಿಲ್ಲ! ಆದರೆ, ಅವನನ್ನು ಪಾಖಂಡಿ ಎಂದು ದೂರುವಂತಿರಲಿಲ್ಲ. ದೇವರು, ಏನೆಂದು ಅವನಿಗೆ ಗೊತ್ತು. ಏಕೆಂದರೆ, ದೇವರೊಡನೆ ಲೆಕ್ಕವಿಲ್ಲದಷ್ಟು ಅವನು ಮಾತುಕತೆ‌ಯಾಡಿದ್ದಾನೆ. ತರುಣನಿಗೆ ಖುದ್ದಾಗಿ ದೇವರ ಪರಿಚಯವಿತ್ತು. ದೇವರು ಪವಿತ್ರನೆಂದಲ್ಲ, ಬದಲಿಗೆ- ತುಸು ಪರಿಚಿತ ಗೆಳೆಯನಾಗಿ, ಸಹಸ್ಪಂದಿಯಾಗಿ, ಕಹಿಗಳಿಗೆಯಲ್ಲಿ ಉದ್ರಿಕ್ತನಾದಾಗ,ಖುಷಿ ತುಂಬಿ ಉಕ್ಕುವಾಗ ಹುಡುಗ ದೇವರೊಂದಿಗೆ ಮಾತುಕತೆಗಿಳಿಯುತ್ತಿದ್ದ:

‘ದೇವರೇ’, ಆತ ಹೇಳುತ್ತಿದ್ದ- ‘ನಾನೊಬ್ಬ ಉಲ್ಲಾಸ ತುಂಬಿದ ತಿಕ್ಕಲ ಮನುಷ್ಯ ದೇವರೇ. ತಲತಲಾಂತರದಿಂದ ಮನುಷ್ಯನಾಗಿ ಬದುಕೋದಕ್ಕೆ ಆಶಿಸುವವನು’. ಲೋಕದ ಹರೆಯದ ಹುಡುಗನೊಬ್ಬ ಈ ರೀತಿ ದೇವರೊಂದಿಗೆ ಮಾತಾಡುವುದಕ್ಕಿಂತ ಕೆಲಸ ಮಾಡುವುದರಲ್ಲಿ ಆ ಖುಷಿ ಅನುಭವಿಸಿದ್ದರೆ ಚೆನ್ನಿತ್ತು ಎಂದು ನಿಮಗನ್ನಿಸಬಹುದು, ಆದರೆ ಆ ಹುಡುಗ ಹಾಗೆ ತಿಳಿದಿರಲಿಲ್ಲ.

ಸಭ್ಯರಲ್ಲಿ ನಾನೂ ಒಬ್ಬನಾಗುವಾಸೆ. ಹುಚ್ಚು ಹುಚ್ಚು ಆನಂದವನ್ನು ಬೆಳಕಿನ ಒಂದು ಕಿರಣ ಇಡೀ ಪರಿಸರವನ್ನು ಬೆಳಗುವಂತೆ ಎಲ್ಲರಿಗೂ ಹಂಚಬೇಕು. ಯಾವತ್ತೂ ಕೀಳು ಕೆಲಸ ಮಾಡಬಾರದು. ತರುಣನ ಹಿರಿಮೆಯೆಂದರೆ ತಕ್ಷಣವೇ ದೇವರು ಉತ್ತರಕೊಡುವಂತೆ ಮಾಡುತ್ತಿದ್ದುದು.

ಹುಡುಗ ಆಗೀಗ ತನ್ನ ಮಾರ್ಗ ಬಿಟ್ಟು ಮತ್ತೆ ಬಿಲ ಸೇರುತ್ತಿದ್ದ. ಪ್ರತಿ ಸಾರಿ ಹಾಗೆ ಹೊರಬಂದಾಗಲೂ ಅಕ್ಕಪಕ್ಕದ ಜನರಂತೆ, ತಾನೂ ಆ ಉಲ್ಲಾಸವನ್ನು ಅನುಭವಿಸಬೇಕು. ಆ ಸಂತಸವು ಮರವೊಂದು ಋತುಮಾನದ ಎಲ್ಲ ಅತಿರೇಕವನ್ನು ಸಹಿಸಿ ನಿಂತಷ್ಟು ಸದೃಢವಾಗಿರಬೇಕು. ಇಲ್ಲಿನ ಯಾವ ವ್ಯಕ್ತಿಯೂ ಪ್ರತ್ಯೇಕವಲ್ಲ. ಈ ಲೋಕದಲ್ಲಿಯೇ ಆಗಲಿ, ಆಲೋಕದಲ್ಲೇ ಆಗಲಿ ಯಾರಿಗೂ ಪ್ರತ್ಯೇಕ ಸುಖ-ಸವಲತ್ತು ಇರಬಾರದು. ಒಳ್ಳೆಯತನ ಸಂತೋಷ ಎಲ್ಲ ಕಡೆ ತುಂಬ ಟೊಂಗೆ ಟೊಂಗೆಯಾಗಿ ಟಿಸಿಲೊಡೆಯಬೇಕು. ಹಸಿರು ಚಿಮ್ಮಿ ಹೆಮ್ಮರವಾಗಬೇಕು. ಹಾಗೆಂದು ಶಪಥ ಮಾಡುತ್ತಿದ್ದ.

ಆದರೆ ಯಾವುದೇ ರಕ್ಷಣೆಯಿಲ್ಲದೆ ಭವಿಷ್ಯ ಎದುರಿ ಸಲು ಭಂಡ ಧೈರ್ಯಬೇಕು! ಇದೆಲ್ಲ ವ್ಯವಸ್ಥಿತವಾದ ಸಿದ್ಧ ಯೋಜನೆ. ಒಂದು ವೇಳೆ ಅದು ಹಾಗಿಲ್ಲದಿದ್ದರೆ ಇಡೀ ಜಗತ್ತಿನ ತುಂಬ ಕೆಲಸಕ್ಕೆ ಬಾರದ ಹುಡುಗ ಹುಡುಗಿಯರು ತುಂಬಿಬಿಡುತ್ತಿದ್ದರು. ಇದು ಸಮಾಜದ ಘನತೆಗೆ ತಕ್ಕುದಾಗಿರಲಿಲ್ಲ. ಸಮಾಜ ಮತ್ತು ಜಗತ್ತು ಮುಂದುವರಿಯಲೇ ಬೇಕಿತ್ತು.

ವ್ಯಕ್ತಿ, ವ್ಯಕ್ತಿತ್ವ ಇಲ್ಲಿ ಮುಖ್ಯವಾಗಿರಲಿಲ್ಲ, ಹೀಗಾಗಿ, ಸಾಮಾಜಿಕ ವ್ಯವಸ್ಥೆ ಜಗತ್ತು ಕರೆಯುವ ಜಗತ್ತು ತನ್ನೊಳಗಿನ ಯುವಕ-ಯುವತಿಯರಿಗೆ ರಕ್ಷಣೆ ಹೆಸರಲ್ಲಿ ಬೋನಿನೊಳಗಡೆ ಇಡಬೇಕಾಗಿತ್ತು. ಹಾಗಂದೇ, ತನ್ನ ವಿರುದ್ಧ ಬಂಡೆದ್ದವರ ವಿರುದ್ಧ ತನ್ನ ನಿರ್ದಯ ತಣ್ಣನೆಯ ಕೈಯನ್ನು ಹಾಯಿಸುತ್ತಿತ್ತು. ಪ್ರತಿಯೊಬ್ಬನಿಗೂ ಒಂದು ವ್ಯಕ್ತಿತ್ವವಿದೆ, ಆತನಿಗೂ ಆತ್ಮದ ದನಿಯಿದೆ ಪರಿವೆಯಿರಲಿಲ್ಲ. ನಿರ್ದಿಷ್ಟ ಗುರಿಯಿಲ್ಲದೆ ನಿಧಾನ ಹೆಜ್ಜೆ ಹಾಕುತ್ತಿದ್ದ.

ದೂರದಲ್ಲೆಲ್ಲೋ ಅವಿತುಕೊಂಡಿರುವ ಆಸ್ಪಷ್ಟ ಭವಿಷ್ಯ. ಹೊಟ್ಟೆ ಹೊರೆಯುವ ಅನಿವಾರ್ಯತೆ ನೆನೆಸಿಕೊಂಡು ಹುಡುಗ ಭಯದಿಂದ ತತ್ತರಿಸಿ ರಸ್ತೆಯಂಚನ್ನು ತಲುಪಿದ್ದ. ನೆಲ ನೋಡುತ್ತ ಯಾವುದೋ ಧ್ಯಾನದಲ್ಲಿ ಮುಳುಗಿ ನಡೆಯುತ್ತಿದ್ದವನು ಈ ಲೋಕಕ್ಕೆ ಬಂದದ್ದು ಯಾರೋ ಡಿಕ್ಕಿ ಹೊಡೆದಾಗಲೇ.

’ಯಾಕೆ ಕಣ್ಣು ಕಾಣೋಲ್ಲವೆ? ಎಲ್ಲಿ ಹೋಗ್ತಾಯಿದೀಯ?’ ಕೇಳಿದ್ದು ಹೆಣ್ಣು, ದನಿಯಲ್ಲಿ ಅಸಮಾಧಾನವಿತ್ತು.

ಹುಡುಗ ಅಂದುಕೊಂಡ: ಈಕೆಯ ದೃಷ್ಟಿ ನೆಟ್ಟಗಿದ್ದು. ಎಚ್ಚರಿಕೆಯಿಂದ ನಡೆದಿದ್ದರೆ ಡಿಕ್ಕಿ ಹೊಡೆಯೋದನ್ನ ತಪ್ಪಿಸಬಹುದಿತ್ತಲ್ಲ. ಹೊರಗೆ ಹೇಳಿದ್ದು ಮಾತ್ರ: ‘ದಯವಿಟ್ಟು ಕ್ಷಮಿಸಿ’. ‘ಆಯಿತು. ಪರವಾಯಿಲ್ಲ’, ಹುಡುಗಿ ನಗುತ್ತ ಹೇಳಿ ಮುಂದೆ ನಡೆದಳು. ನಾಲ್ಕು ಮಾರು ನಡೆದು ಹುಡುಗಿಯನ್ನು ನೋಡಲು ಹುಡುಗ ತಲೆ ತಿರುಗಿಸಿದ. ಹುಡುಗಿ ಬೇರೆ ಎಲ್ಲೋ ನೋಡುವಂತೆ ಹುಸಿನೋಟ ಹರಿಸಿದ್ದಳು.

ಹಿಂದಕ್ಕೆ ತಿರುಗಿ ಹೆಜ್ಜೆ ಹಾಕಲೇ? ಕೇಳಿಕೊಂಡ. ಅವಳೂ ಇವನಂತೆ ಒಂಟಿಯಾಗಿದ್ದಳು. ಹೇಳಬೇಕೆಂದರೆ ಖಿನ್ನಳಾಗಿದ್ದಳು. ಭವಿಷ್ಯವನ್ನು ಎದುರಿಸುವುದನ್ನು ನೆನಪಿಸಿಕೊಂಡು ತಲ್ಲಣಗೊಂಡಿದ್ದಳು. ಇಬ್ಬರೂ ಒಬ್ಬರಿಗೊಬ್ಬರು ಸಂತೈಸಿಕೊಳ್ಳಬಹುದಿತ್ತು. ಒಂದಿಷ್ಟು ಸಂತಸ ತುಂಬಿಸಿಕೊಂಡು ದಾರಿ ಸವೆಸಬಹುದಿತ್ತು. ‘ಹಾಳು ನರಕ’, ಹುಡುಗ ಗೊಣಗಿ ಚಿಂತೆಗೆ ಬಿದ್ದ. ಈ ಸಮಾಜ ನಮ್ಮನ್ನು ತಿರಸ್ಕರಿಸುತ್ತದೆ. ಅಷ್ಟೇ ಅಲ್ಲ, ಒಬ್ಬರನ್ನೊಬ್ಬರು ಕಂಡರೆ ತಿರಸ್ಕರಿಸುವಂತೆ ಕಲಿಸುತ್ತದೆ. ಎಲ್ಲರೂ ತೆರೆದ ಸಮುದ್ರದಲ್ಲಿ ತುಣುಕು ಕಟ್ಟಿಗೆಯ ಮೇಲೆ ಕೊಚ್ಚಿಕೊಂಡು ಹೋಗುತ್ತಿದ್ದರೂ ಈ ಭೇದ.

ಯಾಕೆಂದರೆ, ಯುವಕ ಯುವತಿಯರು ತಮ್ಮ ಭವಿಷ್ಯವನ್ನು ತಮ್ಮ ಕೈಗೆ ತೆಗೆದುಕೊಂಡು ತಮ್ಮ ಬದುಕನ್ನು ತಾವೇ ಪ್ರಾಮಾಣಿಕವಾಗಿ, ಮುಗ್ಧವಾಗಿ ಬದುಕುವಂತೆ ಮಾಡದಿರಲು. ನಾವು ಮುಖಾಮುಖಿಯಾದರೆ ನಮ್ಮ ಪಾಡಿಗೆ ನಾವು ಏನಾದರೂ ಸಾಧಿಸಬಹುದು. ಈ ದರಿದ್ರ ಸಮಾಜದ ಮೇಲೆ ಉಡಾಳರು ಹೇಳುವ ಕಣಿ ಇದು. 'ಸಮಾಜ' ಕೂಡ ಭಾರೀ ಬುದ್ಧಿಯುಳ್ಳದು. ಅದಕ್ಕೆ ಇದೆಲ್ಲ ಗೊತ್ತು.

ಹೊರಟಿರೋದು ಎತ್ತ ಅಂತ ನೋಡೋಕ್ಕೆ ಆಗಲ್ವೆ? ಆಕೆ ಕೇಳಿದ್ದಳು. ಒಳ್ಳೆ ಕಥೆಯಾಯ್ತಲ್ಲ. ಆಕೆಯೇ ಯಾಕೆ ಅದನ್ನ ಮಾಡಬಾರದು? ಉತ್ತರ ಸರಳವಾಗಿತ್ತು. ಇಬ್ಬರೂ ಒಂದೇ ತಿರುವು ದಾರಿಯಲ್ಲಿ ಬಂದು ನಿಂತಿದ್ದರು. ಅವರಿಗೆ ಹೋಗಲು ಬೇರೆ ದಾರಿ, ಆಯ್ಕೆ ಇರಲಿಲ್ಲ. ಹಾಳು ನರಕ, ಹುಡುಗ ಗೊಣಗಿ, ಯಾಕೆ ಹಿಂದೆ ತಿರುಗಿಹೋಗಿ, ಆ ಹುಡುಗಿಯೊಂದಿಗೆ ಮಾತಾಡಬಾರದು? ಯೋಚಿಸಿದ. ಆದರೆ ಅಷ್ಟರಲ್ಲಿ ಆ ಹುಡುಗಿ ರಸ್ತೆಯ ಕಡೆಯ ತಿರುವಲ್ಲಿ ಕರಗಿ ಹೋಗಿದ್ದಳು.

ಯಾರದೋ ತೋಟದಲ್ಲಿ ಬೆಳೆದು ಪ್ರೀತಿಗೊಂದಿಷ್ಟು ನೆರಳು ನೀಡುವ ದೊಡ್ಡ ಮರದಾಚೆ ಆ ತರುಣ-ತರುಣಿ ಮೈಮರೆತು ಪ್ರೇಮ ಸಲ್ಲಾಪದಲ್ಲಿ ಮುಳುಗಿದ್ದರು.

ಈ ಹುಡುಗ-ಹುಡುಗಿ ಮಾತ್ರ ಯಾರ ಗಣನೆಗೂ ಬಾರದ, ಲೆಕ್ಕಕ್ಕೇ ಇಲ್ಲದ, ಹೋಗಲು ಬೇರೊಂದು ಜಾಗವಿಲ್ಲದ ಜೋಡಿಯಾಗಿದ್ದರು, ಅಷ್ಟೇ!

(Look where you are going)

 *ರೋಜರ್‌ ಮಯಿಸ್‌ (Roger Mais) ಜಮೈಕ ದ್ವೀಪದ ಕೆರಿಬಿಯನ್‌ ಕಥೆಗಾರ