ಸಾಂಟ್ರೊ ರವಿ ಯಾರು, ಯಾವೂರು, ಏನ್‍ ಕತೆ ಗೊತ್ತಾ..,!

ಒಡನಾಡಿಗಳ ಒಡಲಾಳ

ಸಾಂಟ್ರೊ ರವಿ ಯಾರು, ಯಾವೂರು, ಏನ್‍ ಕತೆ ಗೊತ್ತಾ..,!

ನೊಂದ ಹೆಣ್ಣುಮಕ್ಕಳಿಗೆ ನೆಲೆ ಕಲ್ಪಿಸುವ ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥರಾದ ಸ್ಟಾನ್ಲಿ ಹಾಗೂ ಪರಶು ಅವರು 2016ರಲ್ಲಿ ಬರೆದಿರುವ ಅನುಭವ ಕಥನದ ಅಧ್ಯಾಯದ ಆಯ್ದ ಭಾಗವಿದು, ಇಲ್ಲಿ ಬರುವ ಸಾಂಟ್ರೊ ಭಾಸ್ಕರನೇ ಮೈಸೂರು ಮೂಲದ ಕೆ. ಎಸ್.ಮಂಜುನಾಥ್ ಅಲಿಯಾಸ್ ಈ ಸಾಂಟ್ರೊ ರವಿ, ಹತ್ತಾರು ಅಪರಾಧ ಪ್ರಕರಣಗಳಿವೆ, ಒಂದೆರಡು ಸಲ ಜೈಲಿಗೂ ಹೋಗಿ ಬಂದಿದ್ದಾನೆ.ಈತನ ಹೈಟೆಕ್ ವೇಶ್ಯಾವಾಟಿಕೆಗೆ ಆರ‍್ಶಿತರಾಗುವ ಅಧಿಕಾರ ವಲಯದ ಉನ್ನತ ವ್ಯಕ್ತಿಗಳ ಮೂಲಕ ವರ‍್ಗಾವಣೆ ದಂಧೆಯ ಮುಖ್ಯ ಪಾಲುದಾರನಾಗಿದ್ದಾನೆ. ಮೂರು ದಿನಗಳಿಂದ ಕನ್ನಡದ ಎಲ್ಲ ಟಿವಿಗಳೂ ಈತನ ಜಪ ಮಾಡುತ್ತಿವೆ. ಮಾಜಿ ಮುಖ್ಯಮಂತ್ರಿ ಹೆಚ್‍.ಡಿ.ಕುಮಾರಸ್ವಾಮಿಯವರೂ ಇಂಥ ಹುಳವನ್ನು ಹಿಡಿದು ಒಸಕಿ ಹಾಕಿ ಅಂತ ಒತ್ತಡ ಹಾಕುತ್ತಲೇ ಇದ್ದಾರೆ. - ಸಂಪಾದಕ


ಸ್ಟ್ಯಾನ್ಲಿ-ಪರಶು


ಒಡನಾಡಿಗಳ ಒಡಲಾಳ

ಸಾಂಟ್ರೊ ರವಿ ಯಾರು, ಯಾವೂರು, ಏನ್‍ ಕತೆ ಗೊತ್ತಾ..,!

    ವಾರಕ್ಕೊಮ್ಮೆ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದ ಎದುರಿರುವ ಆವರಣದಲ್ಲಿ ಸೇರುತ್ತಿದ್ದ “ನೆಳಲು-ಬೆಳಕು” ಸಾಂಸ್ಕೃತಿಕ ಸಂಘದಲ್ಲಿ ಉತ್ಸಾಹಿ ಕವಿ ಅರುಣ್ ಕೂಡ ಒಬ್ಬ. ಒಮ್ಮೆ ಅರುಣ ತೀವ್ರ ದುಃಖತಪ್ತನಾಗಿದ್ದಾಗ ಅದನ್ನು ನೋಡಲಾಗದ ತಾಯಿಕವಿ ಮಮಕಾರದೊಡನೆ ಆತನನ್ನು ವಿಚಾರಿಸಲಾಗಿ “ನನ್ನ ತಮ್ಮನ ಅಸಂಬದ್ಧ ನಡವಳಿಕೆಗಳಿಂದ ಕುಟುಂಬದೊಳಗೆ ಆತಂಕ ಸೃಷ್ಠಿಯಾಗಿದೆ” ಎನ್ನುತ್ತಾ ಮತ್ತಷ್ಟು ದುಃಖಿತನಾದಾಗ ನಾವೆಲ್ಲರೂ ಸೇರಿ ಆತನನ್ನು ಸಂತೈಸಿದ್ದೆವು. 


   ಕವಿ ಅರುಣನ ತಂದೆ ಅಬಕಾರಿ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ಘನತೆಯ ಬದುಕನ್ನು ಕಟ್ಟಿಕೊಂಡವರು. ತಮಗೆ ಪಿತ್ರಾರ‍್ಜಿತ ಆಸ್ತಿಯಿದ್ದುದ್ದರಿಂದ ಮಕ್ಕಳಿಗೆ ಕೃಷಿಯ ಅನುಭವವಿರಲೆಂದು ಹಳ್ಳಿಯಲ್ಲಿಯೇ ತಮ್ಮ ಕುಟುಂಬವನ್ನಿರಿಸಿ, ಅವರು ಉನ್ನತ ಶಿಕ್ಷಣಕ್ಕೆ ಬರುವವರೆಗೂ ನಗರಕ್ಕೆ ಅವರನ್ನು ಪರಿಚಯಿಸಿರಲಿಲ್ಲ. ಆದರೆ ತಮ್ಮ ಕೊನೆಯ ಮಗ ಭಾಸ್ಕರನ ವಿಚಾರದಲ್ಲಿ ಮಾತ್ರ ಅವರು ವಿಶೇಷ ವ್ಯಾಮೋಹಕ್ಕೊಳಗಾಗಿ, ಆತನನ್ನು ತಮ್ಮ ಮನೆಯ ಕಣ್ಗಂಬವೆಂದೇ ನಂಬಿ, ಕೇಳಿದ್ದೆಲ್ಲವನ್ನೂ ಕ್ಷಣಾರ‍್ಧದಲ್ಲೇ ಒದಗಿಸುತ್ತಿದ್ದರು. 


   ಈ ನಡುವೆ ಭಾಸ್ಕರನ ಕಾಲೇಜು ವ್ಯಾಸಂಗಕ್ಕಾಗಿ ತಂದೆಯು ಮೈಸೂರಿನ ಸಿದ್ದಾರ‍್ಥನಗರಕ್ಕೆ ಕುಟುಂಬದ ವಾಸ್ತವ್ಯ ಬದಲಾಯಿಸಿದ್ದರು. ಎಡವಟ್ಟುಗಳು ಅಲ್ಲಿಂದಲೇ ಪ್ರಾರಂಭವಾಗಿದ್ದು! ಹತ್ತೊಂಬತ್ತರ ಹರೆಯದ ಭಾಸ್ಕರ ನಗರಕ್ಕೆ ಬಂದೊಡನೆ ತನ್ನ ಹಾವ-ಭಾವಗಳನ್ನು ಬದಲಾಯಿಸಿಕೊಂಡು, ಬ್ರಾಂಡೆಡ್ ಉಡುಪುಗಳನ್ನು, ದುಬಾರಿ ತಂಪು ಕನ್ನಡಕವನ್ನು ಧರಿಸಿಕೊಂಡು ಓಡಾಡುತ್ತಾ, ವಿದ್ಯಾಭ್ಯಾಸವನ್ನು ಕಡೆಗಣಿಸಿ, ತನ್ನ ಏರಿಯಾದವಳೇ ಆದ ಅಯ್ಯಂಗಾರ್ ಹುಡುಗಿಯೊಬ್ಬಳನ್ನು ಪ್ರೀತಿಸತೊಡಗಿದ! ಆಕೆಯೂ ಈತನ ಐಭೋಗಕ್ಕೆ ಮರುಳಾಗಿದ್ದಳು. ಅಪ್ರಾಪ್ತೆಯೊಂದಿಗೆ ಮಗ ಓಡಾಡುತ್ತಿರುವುದನ್ನು ಗಮನಿಸಿದ ಕುಟುಂಬದವರು “ಮಗ ದಿಕ್ಕು ತಪ್ಪುತ್ತಿದ್ದಾನೆ” ಎಂದುಕೊಂಡು ಬುದ್ಧಿ ಹೇಳಿದರು. ಅಭಿಮಾನದ ಮಗನ ನಡತೆಯಿಂದ ಭ್ರಮನಿರಸನಕ್ಕೊಳಗಾದ ತಂದೆ ಖಿನ್ನತೆಗೊಳಗಾದರು. 


  ಬಯಸಿದ್ದೆಲ್ಲವನ್ನೂ ಧಕ್ಕಿಸಿಕೊಳ್ಳುತ್ತಿದ್ದ ಮುಂಗೋಪಿ ಹಾಗೂ ಅವಿವೇಕಿ ಭಾಸ್ಕರ ತಾನು ಪ್ರೀತಿಸುತ್ತಿರುವ ಹುಡುಗಿಯು ಭೋಗದ ವಸ್ತುವಿನಂತೆ ತಕ್ಷಣವೇ ಧಕ್ಕಬೇಕು ಎಂದು ಯೋಚಿಸಿದನೇ ಹೊರತು, ಮುಂದಿನ ಪರಿಣಾಮಗಳ ಬಗ್ಗೆ ಯೋಚಿಸದೆ, ಅವಳನ್ನು ಅಪಹರಿಸಿ, ಧರ‍್ಮಸ್ಥಳದಲ್ಲಿ ಬಲವಂತವಾಗಿ ವಿವಾಹವಾಗಿಯೇಬಿಟ್ಟ! ಅಪ್ರಾಪ್ತಳ ಮನೆಯವರು ಅವಮಾನದೊಡನೆ ಕುಪಿತಗೊಂಡು, ಭಾಸ್ಕರನ ವಿರುದ್ಧ ದೂರನ್ನು ದಾಖಲಿಸಿದಾಗ, ಕಾನೂನಿನ ಚೌಕಟ್ಟಿನೊಳಗೆ ಸಿಲುಕಿಕೊಂಡ ಪ್ರೀತಿಗೆ ಮಾನ್ಯತೆ ಸಿಗದೆ ಆತ ಜೈಲುಪಾಲಾದ. ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿದ್ದ ಕುಟುಂಬ ಈ ಘಟನೆಯಿಂದಾಗಿ ಯಾತನೆಯ ದಿನಗಳನ್ನು ನೋಡಬೇಕಾಯಿತು. “ತಮ್ಮ ಸಂಬಂಧಿಕರ ಹುಡುಗಿಯೆಂಬ ಕಾರಣಕ್ಕೆ ಪೊಲೀಸ್ ಕಮೀಷನರ್‌ರವರು ನನ್ನ ಮೇಲೆ ಇಲ್ಲಸಲ್ಲದ ಕೇಸನ್ನು ಹಾಕಿದ್ದಾರೆ. ನಂಬಿದ್ದಕ್ಕೆ ಅಯ್ಯಂಗಾರ್ ಹುಡುಗಿ ಹಾಕಿಬಿಟ್ಟಳು ಪಂಗನಾಮ” ಎಂದು ಭಾಸ್ಕರ ವಿರಹಬರಿಸುವ ಹಳೆಯ ಚಿತ್ರಗೀತೆಗಳನ್ನು ಕೇಳುತ್ತಾ ದುಃಖಿಸುತ್ತಿದ್ದ. 


   ಭಾಸ್ಕರ ಜೈಲಿನಲ್ಲಿದ್ದ ಸಂದರ‍್ಭದಲ್ಲಿ ಹೊಟ್ಟೆನೋವಿನ ಕಾರಣವೊಡ್ಡಿ ಆಸ್ಪತ್ರೆಗೆ ದಾಖಲಾದ. ಅಲ್ಲಿ ತನ್ನೊಡನಿದ್ದ ಇನ್ನಿಬ್ಬರು ಕೊಲೆಗಡುಕರ ಸಹಾಯದಿಂದ ಜೈಲುಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿ ಮತ್ತೊಂದು ಕೇಸನ್ನು ಮೈಮೇಲೆ ಎಳೆದುಕೊಂಡ. ಮಗನ ಗೂಂಡಾ ವರ‍್ತನೆಯಿಂದ ನೊಂದ ಕುಟುಂಬವು ಮೈಸೂರಿನಿಂದ ಮಂಡ್ಯಕ್ಕೆ ಹೋಗಿ ನೆಲೆಸಿತು. ಜೈಲುವಾಸದ ನಂತರ ಮಂಡ್ಯದಲ್ಲಿನ ತಮ್ಮ ಮನೆಯ ಬಳಿಯಿದ್ದ ದಲಿತ ಕುಟುಂಬವೊಂದನ್ನು ಪರಿಚಯಿಸಿಕೊಂಡು, ಅವರ ಮನೆಯ ಹೆಣ್ಣುಮಗಳನ್ನು ಮದುವೆಯಾದ ಭಾಸ್ಕರ, ಅತ್ತ ಶಿಕ್ಷಣವನ್ನೂ ಪೂರೈಸದೆ, ಇತ್ತ ಬದುಕನ್ನೂ ಕಂಡುಕೊಳ್ಳದೆ, ಅತಂತ್ರನಾಗಿ ಹೊಟ್ಟೆಪಾಡಿಗಾಗಿ ಕಾರುಗಳ್ಳತನ ಪ್ರಾರಂಭಿಸಿದ. ಮಗನ ಜೀವನದ ಬಗ್ಗೆ ಅಗಾಧ ಕನಸು ಹೆಣೆದಿದ್ದ ತಂದೆ ಇದೆಲ್ಲದರಿಂದ ತೀವ್ರವಾಗಿ ನೊಂದು ಎದೆಯೊಡೆದು ತೀರಿಕೊಂಡರು. ನಂತರದಲ್ಲಿ ಈತನಿಗೆ ತನ್ನ ಮನೆಯೇ ಅಪರಿಚಿತವಾಗತೊಡಗಿ, ಗೌರವಕ್ಕೆ ಹೆದರುತ್ತಿದ್ದ ಸೋದರರು ದೂರವಾದರು. ಅನುಕಂಪದ ಆಧಾರದಲ್ಲಿ ತಂದೆಯ ಕೆಲಸವನ್ನು ಪಡೆದಿದ್ದ ಅಣ್ಣ ಕವಿ ಅರುಣನನ್ನು ಭಾಸ್ಕರ ಹಣಕ್ಕಾಗಿ ಪೀಡಿಸತೊಡಗಿ, ಆತ ಹಣ ಕೊಡಲೊಪ್ಪದಿದ್ದಾಗ “ತಂದೆಯ ಕೆಲಸ ನನಗೆ ಬರಬೇಕಾಗಿತ್ತು, ಅಣ್ಣ ಕಪಟದಿಂದ ಗಳಿಸಿಕೊಂಡಿದ್ದಾನೆ” ಎಂದು ಪ್ರಾಧಿಕಾರದಲ್ಲಿ ದೂರೊಂದನ್ನು ದಾಖಲಿಸಿದ. 


  ಮೃದುಹೃದಯದ ಕವಿ ಅರುಣ ಬೇಸರಗೊಂಡು, ತಮ್ಮನ ಸಹವಾಸವೇ ಬೇಡವೆಂದು ಕೆಲಸಕ್ಕೆ ತಿಲಾಂಜಲಿಯಿಟ್ಟು ಮಹಾನಗರದ ಪತ್ರಿಕೆಯೊಂದರಲ್ಲಿ ಸೇರಿಕೊಂಡ. ಕಾಲೇಜು ದಿನಗಳಲ್ಲಿ ನಮಗೆ ಕವಿ ಅರುಣನೊಡನೆ ನಿಕಟ ಸಂಬಂಧವಿದ್ದುದ್ದನ್ನು ಅರಿತಿದ್ದ ಭಾಸ್ಕರ, ಅಂದಿನ ಪೊಲೀಸ್ ಆಯುಕ್ತರು ನಮ್ಮೊಡನೆ ಉತ್ತಮ ಒಡನಾಟವಿಟ್ಟುಕೊಂಡಿದ್ದಾರೆಂಬುದನ್ನು ಹೇಗೋ ತಿಳಿದುಕೊಂಡು ಪರಿಚಿತರೊಬ್ಬರ ಮೂಲಕ ನಮ್ಮಲ್ಲಿಗೆ ಬಂದು “ಸಾರ್, ನಾನು ದಲಿತ ಹುಡುಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ಆಕೆಯು ತುಂಬಾ ಬುದ್ಧಿವಂತೆ, ಡಿಗ್ರಿ ಮಾಡಿದ್ದಾಳೆ. ಪೊಲೀಸ್ ಪೇದೆಯ ಹುದ್ದೆಗೆ ಅರ‍್ಜಿ ಹಾಕ್ಕೊಂಡಿದ್ದಾಳೆ ಸಾರ್, ಸಂದರ‍್ಶನಕ್ಕೆ ಪತ್ರ ಬಂದಿದೆ. ದಯಮಾಡಿ ಕಮೀಷನರ್‌ಗೆ ಹೇಳಿ ಸಹಾಯ ಮಾಡಿ” ಎಂದು ವಿನಂತಿಸಿಕೊಂಡಿದ್ದ. 


 “ಪ್ರೀತಿಗಾಗಿ ಎಲ್ಲವನ್ನೂ ಕಳೆದುಕೊಂಡೆ ಸಾರ್ ಆದರೂ ಮತ್ತೊಮ್ಮೆ ಪ್ರೀತಿಸಿಯೇ ಮದುವೆಯಾಗಿದ್ದೇನೆ. ಕುಟುಂಬದಿಂದಲೂ ದೂರತಳ್ಳಲ್ಪಟ್ಟಿದ್ದೇನೆ, ಜೀವನ ನರ‍್ವಹಣೆ ಕಷ್ಟವಾಗಿದೆ, ತಪ್ಪುಗಳೆಲ್ಲವನ್ನೂ ತಿದ್ದುಕೊಂಡು ಬುದ್ಧಿ ಕಲಿತುಕೊಂಡಿದ್ದೇನೆ. ನೀವು ಪೊಲೀಸ್ ಆಯುಕ್ತರಿಗೆ ಹೇಳಿ ಆಕೆಗೊಂದು ಉದ್ಯೋಗ ದೊರಕಿಸಿಕೊಟ್ಟರೆ ನಮ್ಮ ಜೀವನ ಹೇಗೋ ನೆಲೆ ಕಂಡುಕೊಳ್ಳುತ್ತದೆ” ಎಂದು ಮುಗ್ಧ ಮುಖಮಾಡಿ ಹೆಂಡತಿಗೆ ಬಂದಿದ್ದ ಸಂದರ‍್ಶನ ಪತ್ರವನ್ನು ತೋರಿಸಿದ್ದ. ಆತನ ಹೆಂಡತಿಯೂ ಪ್ರೀತಿಗೆ ಸಿಲುಕಿ, ಮದುವೆಯಾಗಿ ಜೀವನ ನಿರ‍್ವಹಣೆ ಮಾಡಲಾಗದ ತಮ್ಮ ಅಸಹಾಯಕತೆಯನ್ನು ಹೇಳಿಕೊಳ್ಳುತ್ತಾ “ನಮಗಲ್ಲದಿದ್ದರೂ ಈ ಮಗುವಿನ ಬದುಕು ಕಟ್ಟಿಕೊಳ್ಳಲಾದರೂ ಸಹಾಯ ಮಾಡಿ” ಎಂದು ಬೊಂಬೆಯಂತಿದ್ದ ವರ‍್ಷದ ಕೂಸನ್ನು ತೋರುತ್ತಾ ಕೋರಿಕೊಂಡಿದ್ದಳು. 


ಒಮ್ಮೆ ಸದರನ್ ಸ್ಟಾರ್ ಹೋಟೆಲಿನಲ್ಲಿ ಔತಣಕ್ಕೆ ಹೋಗಿದ್ದೆವು, ಅಲ್ಲಿ ನಮ್ಮ ಕಣ್ಣಳತೆಯ ದೂರದ ಟೇಬಲ್ಲೊಂದನ್ನು ಭಾಸ್ಕರ, ಅವನ ಪತ್ನಿ ಹಾಗೂ ಸಿನಿಮಾದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ವಯಸ್ಸಾದ ನಟಿಯೊಬ್ಬರು ಆಕ್ರಮಿಸಿಕೊಂಡಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಅಬ್ಬೆಪಾರಿಯಂತೆ ಹರಿದ ಹವಾಯ್ ಚಪ್ಪಲಿ ಹಾಕಿಕೊಂಡು, ಕಷ್ಟದ ಮಾತನಾಡಿ, ಊಟಕ್ಕೆ ಹಾಗೂ ಬಸ್‌ಚಾರ‍್ಜಿಗೆಂದು ನೂರುರೂಪಾಯಿ ಪಡೆದು ಹೋಗಿದ್ದವರ ರೂಪ ಸಂಪೂರ‍್ಣ ಬದಲಾಗಿತ್ತು! ಹೊಸ ಉಡುಪು, ಎತ್ತರದ ಶೂ-ಚಪ್ಪಲಿಗಳಲ್ಲಿ ಗಂಡ-ಹೆಂಡತಿಯರು ಜಗಮಗಿಸುತ್ತಿದ್ದರು. ನಮ್ಮನ್ನು ನೋಡಿ ಸ್ವಲ್ಪ ಗಾಬರಿಗೊಂಡಂತಾದ ಆತ ತಕ್ಷಣ ನಮ್ಮಲ್ಲಿಗೆ ಬಂದು “ನಮ್ಮ ಹತ್ತಿರದ ಸಂಬಂಧಿಯೊಬ್ಬರು ಊಟಕ್ಕೆ ಕರೆದುಕೊಂಡು ಬಂದಿದ್ದಾರೆ, ಅವರು ದೊಡ್ಡ ಹೆಸರು ಮಾಡಿದವರು, ಆಯುಕ್ತರಿಗೂ ಪರಿಚಯದವರಂತೆ. ನನ್ನ ಪತ್ನಿಯ ಕೆಲಸದ ವಿಚಾರದಲ್ಲಿಯೂ ಸಹಾಯ ಮಾಡುತ್ತೇನೆ ಎಂದಿದ್ದಾರೆ” ಎನ್ನುತ್ತಾ, ಹೆಂಡತಿಯತ್ತ ನೋಡಿದಾಗ, ಆಕೆ ಕುಳಿತಲ್ಲಿಂದಲೇ ನಮಗೆ ನಮಸ್ಕರಿಸಿದ್ದಳು. ನಾವು ಯಾವುದೋ ಗಂಭೀರ ವಿಚಾರದಲ್ಲಿದ್ದುದ್ದರಿಂದ “ನೀವು ಊಟಮಾಡಿ” ಎಂದಷ್ಟೇ ಹೇಳಿ ನಮ್ಮ ಮಾತುಕತೆಗೆ ಮರಳಿದರೂ, ಮನದೊಳಗೆ ಮಾತ್ರ ಕೋಲಾಹಲ ಎದ್ದಿತ್ತು.


ಅದೇ ದಿನ ಸಂಜೆ ನಮಗೆ ದೂರವಾಣಿ ಕರೆ ಮಾಡಿದ ಭಾಸ್ಕರ “ಹೋಟೆಲಿನಲ್ಲಿ ನಿಮ್ಮೊಡನೆ ಹೆಚ್ಚು ಮನಬಿಚ್ಚಿ ಮಾತನಾಡಲಾಗದಿದ್ದುದ್ದಕ್ಕೆ ಕ್ಷಮಿಸಿ, ನನ್ನ ಪತ್ನಿಗೆ ಪೊಲೀಸ್ ಕೆಲಸ ಆಗುವಂತಿದೆ. ನೀವು ಪ್ರಯತ್ನ ಮಾಡುತ್ತೇವೆ ಎಂದಿದ್ದಕ್ಕೆ ಧನ್ಯವಾದಗಳು. ಅಲ್ಲದೇ ಹೋಟೆಲಿನಲ್ಲಿ ಸಿಕ್ಕಿದ್ದ ನಮ್ಮ ಪರಿಚಯಸ್ಥರು ಸಣ್ಣ ವ್ಯಾಪಾರ ಮಾಡಲು ನನಗೆ ಬಂಡವಾಳವನ್ನು ನೀಡುವುದಾಗಿಯೂ ಭರವಸೆ ನೀಡಿದ್ದಾರೆ. ನನ್ನ ಕಷ್ಟದ ದಿನಗಳು ಇನ್ನು ದೂರವಾಗಬಹುದು, ದೇವರು ದೊಡ್ಡವನು, ನಾನು ಬದುಕಿ ತೋರಿಸುತ್ತೇನೆ ಸಾರ್” ಎಂದು ಹೇಳಿದ್ದ. “ಒಳ್ಳೆಯದಾಗಲಿ” ಎಂದೆವು.


ಈ ನಡುವೆ ನಮ್ಮ ಮಾಹಿತಿದಾರೆ ಭಾರತಿ ಮಹತ್ತರವಾದ ಸುಳಿವೊಂದನ್ನು ತಂದಿದ್ದರು. “ಆಗಂತುಕನೊಬ್ಬ ಮೈಸೂರಿಗೆ ಬಂದಿದ್ದಾನೆ, ಮಕ್ಕಳನ್ನು ಕೊಂಡು-ಮಾರುವ ವ್ಯವಹಾರದಲ್ಲಿ ಚತುರನಂತೆ. ಎಲ್ಲಾ ಭಾಷೆಗಳನ್ನು ಬಲ್ಲ ಆತ ಇಲ್ಲಿಂದ ದಿಲ್ಲಿಯವರೆಗೂ ಎಲ್ಲಾ ಮಹಾನಗರಗಳ ಸಂಪರ‍್ಕಜಾಲವನ್ನು ಹೊಂದಿದ್ದಾನಂತೆ. ವಿದೇಶಿ ಮಹಿಳೆಯರು ಹಾಗೂ ಮಾದಕವಸ್ತುಗಳನ್ನು ಸಾಗಿಸಿ, ಮಾರಾಟಮಾಡುವ ಆತನಿಗೆ ಎರಡು-ಮೂರು ಜನ ಅಸಿಸ್ಟೆಂಟ್‌ಗಳಿದ್ದಾರೆ, ಕಾರುಬಿಟ್ಟು ಇಳಿಯದ ಆತ ಕೆಲವು ಹಿರಿಯ, ಕಿರಿಯ ಅಧಿಕಾರಿಗಳಿಗೆ ಭೋಜನವೇರ‍್ಪಡಿಸುತ್ತಾ ಬುಟ್ಟಿಯಲ್ಲಿಟ್ಟುಕೊಂಡು, ವ್ಯಾಪಾರವನ್ನು ದುಪ್ಪಟ್ಟು ಮಾಡಿಕೊಳ್ಳುತ್ತಿದ್ದಾನೆ. ನಾವು ಸ್ವಲ್ಪ ನಿಗಾವಹಿಸಿದರೆ ಆತನಿಗೆ ಬಲಿಯಾಗುತ್ತಿರುವ ಪ್ರಾಯದ ಮಕ್ಕಳನ್ನು ಉಳಿಸಬಹುದು, ಈ ನಿಟ್ಟಿನಲ್ಲಿ ಸಾಕ್ಷಿ ಸಂಗ್ರಹಿಸುತ್ತಿದ್ದೇನೆ” ಎಂದರು. 


ಇತ್ತ ಮಾನವ ಸಾಗಾಣಿಕೆ ಜಾಲಗಳನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟುತ್ತಿದ್ದ ನಮ್ಮ ಕಾರ‍್ಯಾಚರಣೆಗಳು ದೇಶವ್ಯಾಪಿ ಸುದ್ದಿಯಾಗುತ್ತಾ ವಿದ್ಯುನ್ಮಾನ ಮಾಧ್ಯಮವನ್ನು ಸಾಕಷ್ಟು ಆಕರ‍್ಶಿಸಿದ್ದವು. 

ಅಂದು ತಮಿಳುನಾಡಿನಲ್ಲಿ ಬಹಳಷ್ಟು ಜನಪ್ರಿಯವಾಗಿದ್ದ, ನಟಿ ಜೂಲಿ ಲಕ್ಷ್ಮಿಯವರು ನಡೆಸಿಕೊಡುತ್ತಿದ್ದ ರಿಯಾಲಿಟಿ ಶೋ ‘ಕದೈಯಲ್ಲ ನಿಜಂ’ ಸಂಚಿಕೆಗಳಿಗೆ ಸುದ್ದಿವರದಿಗಾರರಾಗಿದ್ದ ಮಾಧ್ಯಮಮಿತ್ರ ಸಾಯಿರಾಂ ಹಾಗೂ ಆತನ ಸಹದ್ಯೋಗಿ ಗೆಳತಿ ಇಳವರಸಿರವರು ನಮ್ಮ ಕಾರ‍್ಯಾಚರಣೆಯೊಂದನ್ನು ನೇರವಾಗಿ ದಾಖಲಿಸುವ ಸಲುವಾಗಿ ಹಾಗೂ ಈ ಕ್ಷೇತ್ರದ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಕೌತುಕರಾಗಿ ಮೈಸೂರಿನಲ್ಲಿ ಬೀಡುಬಿಟ್ಟಿದ್ದರು. “ನಗರದ ಹೊರವಲಯದ ಹೋಟೆಲೊಂದರಲ್ಲಿ ನಿಗದಿತ ದಿನದಂದು ಆ ಪ್ರಳಯಾಂತಕ ವ್ಯಕ್ತಿಯ ನೇತೃತ್ವದಲ್ಲಿ ಮಾನವ ಕಳ್ಳ ಸಾಗಾಣಿಕೆದಾರರ ಕೂಟ ಸೇರಲಿದೆ” ಎಂದು ಭಾರತಿ ಕೊಟ್ಟಿದ್ದ ಮಾಹಿತಿಯಿಂದ ಪುಳಕಿತರಾದ ಅವರು, ಹೋಟೆಲನ್ನು ಸೇರಿಕೊಂಡು ‘ತಮಿಳು ಸಿನಿಮಾದವರು’ ಎಂದು ಹೋಟೆಲಿನವರಿಗೆ ತಿಳಿಸಿ, ಕೆಲವು ಟೇಬಲ್‌ಗಳನ್ನು ಬುಕ್ ಮಾಡಿ, ಸಿನಿಮಾದ ದೃಶ್ಯವೊಂದಕ್ಕೆ ಸಪ್ಲೈಯರ್‌ಗಳಾಗಿ ನಟಿಸಲು ಸ್ಥಳಾವಕಾಶ ನೀಡಬೇಕೆಂದು ಕೋರಿ, ಒಪ್ಪಿಸಿ, ತಮ್ಮ ಕ್ಯಾಮರಾಮೆನ್‌ಗಳನ್ನು ಕರೆಸಿಕೊಂಡು ಮಾನವ ಸಾಗಾಣಿಕೆದಾರರು ಉಳಿದುಕೊಳ್ಳಬಹುದಾದ, ಚರ‍್ಚಿಸಬಹುದಾದ ಜಾಗಗಳನ್ನು ಗುರುತಿಸಿಕೊಂಡು, ಲೈಟಿನಾದಿಯಾಗಿ ಅತ್ಯಾಧುನಿಕ, ಉತ್ಕೃಷ್ಠ ದರ‍್ಜೆಯ ಚಿತ್ರಗಳನ್ನು ದಾಖಲಿಸುವ ರಹಸ್ಯ ಕ್ಯಾಮರಾಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಿ, ಅದರ ವಿವರಗಳನ್ನು ಖದೀಮ ಜಾಲ ಹಾಗೂ ನಮ್ಮ ನಡುವೆ ಕೊಂಡಿಯಾಗಿ ಕಾರ‍್ಯನರ‍್ವಹಿಸುತಿದ್ದ ರಹಸ್ಯೆ ಮಾಹಿತಿಗಾರ‍್ತಿ ಭಾರತಿಯವರಿಗೆ ಮೊದಲೇ ನೀಡಿದ್ದರು. 


ಕೆಲವು ಕುಟುಂಬಗಳು ರಾತ್ರಿಯೂಟಕ್ಕೆ ಹೋಟೆಲಿಗೆ ಬಂದು ಸೇರತೊಡಗಿದವು, ಹಾಗೆಯೇ ಮಕ್ಕಳ ಶೋಷಕರ ಜಾಲವೂ ಕೂಡ! ಮೂವರು ಎಳೆಮಕ್ಕಳ ನಡುವೆ ಸುತ್ತವರೆದಿದ್ದ ಗ್ಯಾಂಗೊಂದರ ನಡುವೆ “ಆತ ಬರುತ್ತಾನೆ” ಎಂಬ ಚರ‍್ಚೆ ನಡೆಯುತ್ತಿತ್ತು. ಪಿಸುಮಾತುಗಳನ್ನಾಡುತ್ತಿದ್ದ ಅವರೊಳಗೆ ಭೀತಿಯ ಕಣ್ಣಾಲಿಗಳು ಚದುರಾಡುತ್ತಿದ್ದವು. ವರದಿಗಾರ ಸಾಯಿರಾಂಗೋ ಸಂಭ್ರಮ. ಇದ್ದಕ್ಕಿದ್ದಂತೆ ಕಪ್ಪು ಕಾರೊಂದು ಕತ್ತಲೆಯೊಳಗೆ ಬೆಳಕು ಬೀರುತ್ತಾ ಪಾರ‍್ಕಿಂಗ್ ಸ್ಥಳದಲ್ಲಿ ಮೆಲ್ಲನೆ ಬಂದು ನಿಂತಿತು. ಮಂದಬೆಳಕಿನಲ್ಲಿ ಏನನ್ನೋ ಕಂಡು ಕಾರಿನೊಳಗೆ ಸಂಚಲನವೇರ‍್ಪಟ್ಟು, ನಮ್ಮ ವಾಸನೆಯೂ ಅವರಿಗೆ ಬಡಿದು, ಕಾರು ದಢಕ್ಕನೆ ಚಾಲನೆಗೊಳಪಟ್ಟು ಮುನ್ನುಗ್ಗತೊಡಗಿತು!


ಕಾರು ಖದೀಮರದ್ದು ಎಂದರಿತ ನಾವು ವಾಹನಕ್ಕೆ ಮುಮ್ಮುಖವಾಗಿ ಬಂದು ನಿಲ್ಲಿಸುವಂತೆ ಸಂಜ್ಞೆ ಮಾಡುತ್ತಾ ತಡೆಯುವ ಪ್ರಯತ್ನ ಮಾಡಿದಾಗ, ನಮ್ಮನ್ನು ಗುದ್ದಿ ಬೀಳಿಸುವಂತೆ ಶಬ್ಧ ಮಾಡುತ್ತಾ ಕಾರು ಮುನ್ನುಗಿದಾಗ ಕಾರಿನ ಬಾನೆಟ್ಟಿಗೆ ಕೈಕೊಟ್ಟು ಬದಿಗೆ ಹಾರಿ ಬಿದ್ದಾಗಲೂ ಕಾರಿನೊಳಗಿದ್ದವರನ್ನು ಗಮನಿಸಿದಾಗ ಚಾಲಕನ ಕಣ್ಣುಗಳನ್ನು ಸಂಧಿಸಿ ಹೌಹಾರಿಹೋಗಿದ್ದೆವು! “ಓ ಅವನೇ” ಎಂದುಕೊಳ್ಳುವಾಗ ಕ್ಷಣಜಾರಿ ಹೋಗಿತ್ತು. ಆತ ಹೋಟೆಲಿನ ಕಬ್ಬಿಣದ ಗೇಟನ್ನು ‘ಢಮಾರ್’ ಎಂದು ಅಪ್ಪಳಿಸಿ, ಮಿಂಚಿನಂತೆ ಹೆದ್ದಾರಿಯಲ್ಲಿ ಮಾಯವಾಗಿದ್ದ. ನಾವು ಆತನನ್ನು ಹಿಂಬಾಲಿಸಿದರೂ ಮೂರೂ ಬಿಟ್ಟು ಹದ್ದುಮೀರಿದ್ದವನೊಡನೆ ಸ್ರ‍್ಧಿಸಲಾಗದೆ ಹಿಂತಿರುಗುತ್ತಿದ್ದಾಗ ನಮ್ಮೊಳಗೆ ನೀರವ ಮೌನ, ತಳಮಳ. ತಪ್ಪಿಸಿಕೊಂಡ ಕಾರಿಳಿಯದ ಖದೀಮ ನಮ್ಮ ಕವಿ ಅರುಣನ ತಮ್ಮ ಸ್ಯಾಂಟ್ರೋ ಭಾಸ್ಕರ!

ರಹಸ್ಯ ಮಾಹಿತಿಗಾರ‍್ತಿ ಭಾರತಿ ಹೋಟೆಲು ಆವರಣದೊಳಗೆ ಓಡೋಡಿ ಬರುವುದಕ್ಕೂ, ನಾವು ಹಿಂತಿರುಗಿ ಬಂದುದ್ದಕ್ಕೂ ಸರಿಹೋಯಿತು. ಹೋದ ಕಾರಿನೆಡೆಗೆ ಕೈತೋರುತ್ತಾ ಒಂದೇ ಉಸಿರಿಗೆ ಹೇಳತೊಡಗಿದಾಗ, ತಪ್ಪಿಸಿಕೊಂಡು ಓಡತೊಡಗಿದ್ದ ಕಾರು ಸ್ಯಾಂಟ್ರೋ ಭಾಸ್ಕರನದ್ದೇ ಎಂಬುದು ಸ್ಪಷ್ಟವಾಯಿತು. ರೀತಿ-ನೀತಿಗಳ ಹದ್ದುಮೀರಿ ಹೇಗಾದರೂ ಬದುಕಬಹುದೆಂದುಕೊಂಡಿದ್ದ ಸ್ಯಾಂಟ್ರೋ ಭಾಸ್ಕರನ ಭೀತಿಯಿಲ್ಲದ ಪೈಶಾಚಿಕ ವೇಗದಿಂದಾಗಿ ದಿಕ್ಕುತಪ್ಪಿದ ನಾವು ಹೋಟೆಲಿನತ್ತ ಧಾವಿಸಿ ಬರುವುದರೊಳಗೆ ಅಲ್ಲಿಯ ಆವರಣ ಅಲ್ಲೋಲ-ಕಲ್ಲೋಲವಾಗಿತ್ತು. ನಮ್ಮಿಂದ ತಪ್ಪಿಸಿಕೊಂಡ ಸ್ಯಾಂಟ್ರೋಭಾಸ್ಕರ, ಹುಡುಗಿಯರನ್ನು ಕರೆತಂದಿದ್ದ ದಲ್ಲಾಳಿಗಳಿಗೆ ದೂರವಾಣಿಯ ಮೂಲಕ ನಮ್ಮ ಸುಳಿವು ನೀಡುವುದನ್ನು ಮರೆತಿರಲಿಲ್ಲ. ಹಾಗೆಯೇ ಆಕಸ್ಮಾತ್ ಪೊಲೀಸ್ ದಾಳಿಯೇನಾದರೂ ನಡೆದಲ್ಲಿ ಏನು ಮಾಡಬೇಕೆಂಬುದನ್ನೂ ಮೊದಲೇ ನಿರ‍್ಧರಿಸಿಕೊಂಡಂತಿತ್ತು. ನಾವು ಚಾಪೆಯ ಕೆಳಗೆ ತೂರುವವರಾದರೆ, ಅವರು ರಂಗೋಲಿಯ ಕೆಳಗೆ ತೂರುವಷ್ಟು ಚಾಣಕ್ಷರು. ಕ್ಷಣಾರ‍್ಧದಲ್ಲಿ ದಲ್ಲಾಳಿ ಹೆಂಗಸರು ಸೇರಿದಂತೆ ಕೆಲವರು ಹೋಟೆಲ್ ಹಿಂಭಾಗದ ಕಾಂಪೌಂಡ್ ಹತ್ತಿ ಕತ್ತಲೆಗೆ ಜಿಗಿದು ಓಡತೊಡಗಿದ್ದರು. ಪೊಲೀಸರು ಹಾಗೂ ನಮ್ಮ ಕಾರ‍್ಯರ‍್ತರು ಕಬ್ಬಿನ ಗದ್ದೆಯಲ್ಲಿ ಓಡಾಡಿ ಹತ್ತಾರು ಯುವತಿಯರನ್ನು ರಕ್ಷಿಸಿ ಕರೆತಂದಿದ್ದರಾದರೂ, ಚಲನಚಿತ್ರರಂಗಕ್ಕೆ ಸಹನಟಿಯರನ್ನು ಒದಗಿಸುವವಳೆಂದು ಬಿಂಬಿಸಿಕೊಳ್ಳುತ್ತಾ, ರಾಜ್ಯದ ಉನ್ನತ ಅಧಿಕಾರಿಯೊಬ್ಬರ ನೆರಳಲ್ಲಿದ್ದುಕೊಂಡೇ ಎಳೆಯ ಯುವತಿಯರನ್ನು ಏಮಾರಿಸಿ ಕತ್ತಲಕೂಪಕ್ಕೆ ತಳ್ಳುತ್ತಿದ್ದ ಮಹಿಳೆ ಮಾತ್ರ ತನ್ನ ಪಾದರಕ್ಷೆಗಳನ್ನು ಬಿಟ್ಟು, ಓಡಿ ನಡುರಾತ್ರಿಯಲ್ಲಿ ಬೆಂಗಳೂರು ಸೇರಿಕೊಂಡಿದ್ದಳು. ಮೋಸಕ್ಕೊಳಗಾಗಿ ಸಿನಿಮಾ ನಟಿಯ ಸೆರಗಿಡಿದು ಬಂದಿದ್ದ ಹತ್ತುಜನ ಎಳೆಯ ಹುಡುಗಿಯರು ಸ್ಥಳೀಯ ಠಾಣೆಯಲ್ಲಿ ಮೇಜಿಗೆ ಕೈಯಾನಿಸಿ, ಮುಖಕಾಣದಂತೆ ಕೂದಲನ್ನು ಹರಡಿ, ನೆಲನೋಡುತ್ತಾ ಬಿಕ್ಕುತ್ತಿದ್ದರೆ, ಅವರನ್ನು ಸಂತೈಸುವುದು ನಮ್ಮ ಸರದಿಯಾಗಿತ್ತು.


ಸ್ಯಾಂಟ್ರೋ ಭಾಸ್ಕರ ತನ್ನ ಜಾಲದ ಸಹಾಯದಿಂದ ಅಬಲೆಯರು, ಅನಾಥರು ಹಾಗೂ ಸಂದಿಗ್ಧ ಸ್ಥಿತಿಯಲ್ಲಿನ ಕುಟುಂಬಗಳಲ್ಲಿ ಉದ್ಯೋಗ ಹಾಗೂ ಉತ್ತಮ ಬದುಕಿನ ಕನಸನ್ನು ಬಿತ್ತಿ, ಮಕ್ಕಳನ್ನು ಮಾದಕದ್ರವ್ಯ ವ್ಯಸನಿಗಳನ್ನಾಗಿಸಿ ದಂಧೆಗೆ ತಳ್ಳುತ್ತಿದ್ದ. ಮದ್ದಿನ, ಮತ್ತಿನ ಮಮಕಾರಕ್ಕೆ ಬಿದ್ದು ಎಲ್ಲಾ ಸಂಬಂಧಗಳಿಗೂ ತಿಲಾಂಜಲಿಯಿಡುತ್ತಿದ್ದರು ಎಳೆಯರು.


     ಕ್ರೌರ‍್ಯಕ್ಕೆ ಸಿಲುಕಿದ ಮಕ್ಕಳ ಯಾತನೆಗೆ ಸ್ಪಂದಿಸುವ ಶಕ್ತಿ ಕಳೆದುಕೊಂಡಿದ್ದ ಕೆಲವು ಭ್ರಷ್ಟರು ಆತ ಎರಚುವ ಆಹಾರಕ್ಕಾಗಿ ಜೊಲ್ಲುಗಳಾಗಿ ಕಾಯತೊಡಗಿದ್ದರು. ಈ ಘಟನೆಯ ನಂತರ ಊಹಿಸಿದಂತೆ ಸ್ಯಾಂಟ್ರೋ ಭಾಸ್ಕರ ನಮಗೆ ಕರೆಮಾಡುವ ದುಸ್ಸಾಹಸ ಮಾಡಲಿಲ್ಲ, ಕಾಣಿಸಿಕೊಳ್ಳಲೂ ಇಲ್ಲ.


    ಹಲವು ತಿಂಗಳುಗಳ ನಂತರ ನಮಗೆ ಕರಾರುವಕ್ಕಾದ ಮಾಹಿತಿಯೊಂದನ್ನು ಅರವಿಂದನಗರದ ವ್ಯಕ್ತಿಯೊಬ್ಬರು ನೀಡಿದ್ದರು “ಸಾರ್, ನಾನು ಕೆಲಸ ಮಾಡುವ ಆಸ್ಪತ್ರೆಯ ಪಕ್ಕ ಭವ್ಯವಾದ ಮನೆಯೊಂದಿದೆ. ದೇಶ ಕಾಯುವ ಉನ್ನತ ಹುದ್ದೆಯಲ್ಲಿರುವವರೊಬ್ಬರು ಆ ಮನೆಯ ಮಾಲೀಕರು. ವಾಸಕ್ಕೆಂದು ಆ ಮನೆಯನ್ನು ಬಾಡಿಗೆಗೆ ಪಡೆದವನೊಬ್ಬ ಅಲ್ಲಿ ವೇಶ್ಯಾವಾಟಿಕೆ ನಡೆಸುವುದರೊಡನೆ ಮಾದಕ ಪದಾರ‍್ಥಗಳನ್ನು ಮಾರಾಟ ಮಾಡಿ ಹಣಗಳಿಸುತ್ತಿದ್ದಾನೆ. ಹಲವಾರು ದಿನಗಳಿಂದ ನಾನಿದನ್ನು ಗಮನಿಸಿ, ಖಾತರಿ ಪಡಿಸಿಕೊಂಡು ತಮಗೆ ತಿಳಿಸುತ್ತಿದ್ದೇನೆ. ವಾರವಾರವೂ ಅಲ್ಲಿ ಉಳಿಯುವ ಹೆಣ್ಣುಮಕ್ಕಳು ಬದಲಾಗುತ್ತಿದ್ದಾರೆ, ಅವರಿಗೆ ಹೊಡೆಯುವ ಹಾಗೂ ಅಳುವ ಸದ್ದನ್ನು ಅನೇಕ ಬಾರಿ ಕೇಳಿಸಿಕೊಂಡಿದ್ದೇನೆ. ಕಳೆದ ವಾರ ಹುಡುಗಿಯೊಬ್ಬಳು ಇವರ ಕಾಟ ತಡೆಯಲಾರದೆ ಓಡಿಹೋಗುತ್ತಿದ್ದಾಗ ವ್ಯಕ್ತಿಯೋರ‍್ವ ಕೂದಲು ಹಿಡಿದು ಎಳೆದುತಂದು ಕೂಡಿಹಾಕಿದ್ದನ್ನು ಕಣ್ಣಾರೆ ನೋಡಿದ್ದೇನೆ. ನೀವು ಈಗಿಂದೀಗಲೆ ಬರುವುದಾದರೆ ಕೆಲವು ಹೆಣ್ಣುಮಕ್ಕಳನ್ನು ರಕ್ಷಿಸಬಹುದು” ಎಂದಿದ್ದರು. 


    ಮಾಹಿತಿದಾರರ ಸಹಾಯದಿಂದ ಆ ಮನೆಯ ಒಳ-ಹೊರಗನ್ನು ಗಮನಿಸಿ, ಖಾತರಿಪಡಿಸಿಕೊಂಡು, ಅಂದಿನ ಪೊಲೀಸ್ ಆಯುಕ್ತರಾಗಿದ್ದ ಪ್ರವೀಣ್ ಸೂದ್‌ರವರನ್ನು ಸಂಪರ‍್ಕಿಸಿದಾಗ, ಅವರು ತಕ್ಷಣ ಕೆಲವು ಅಧಿಕಾರಿಗಳನ್ನು ಕಳುಹಿಸಿದ್ದರು. ಕೆ.ಆರ್.ವಿಭಾಗದ ಸಹಾಯಕ ಆಯುಕ್ತರಾಗಿದ್ದ ಬಿ.ಜಯಪ್ರಕಾಶ್, ಕುವೆಂಪುನಗರ ಪೊಲೀಸ್ ಇನ್ಸ್ಪೆಕ್ಟರ್ ಶಾಂತಮಲ್ಲಪ್ಪರವರ ನೇತೃತ್ವದಲ್ಲಿ ಕಾರ‍್ಯಾಚರಣೆ ನಡೆಸಿದಾಗ ಅಲ್ಲಿ ಕೆಲವು ಬಾಲಕಿಯರೊಡನೆ, ಮಾದಕವಸ್ತುಗಳೂ ಸಿಕ್ಕಿದ್ದವು. ರಕ್ಷಿಸಲ್ಪಟ್ಟ ಹೆಣ್ಣುಮಕ್ಕಳು ಹೇಳುತ್ತಿದ್ದುದ್ದು ಒಂದೇ ಹೆಸರು “ಸ್ಯಾಂಟ್ರೋ ಭಾಸ್ಕರ!.” ಅಮಾಯಕನಂತೆ ಸೋಗುಹಾಕಿಕೊಂಡಿದ್ದ ಕ್ರೂರಿಯೊಬ್ಬನ ದಂಧೆಯ ವಿಸ್ತಾರವನ್ನು ಕಂಡು ಆಶ್ಚರ‍್ಯವಾಗಿತ್ತು. ಆತನಿಗೆ ಬದುಕುಗಳ ನೋವಿನ ಸೋಂಕೇ ಇದ್ದಂತಿರಲಿಲ್ಲ. ಸಂರಕ್ಷಿಸಿದ ಬಾಲೆಯೊಬ್ಬಳನ್ನು ಅವಳ ಪೋಷಕರಿಗೆ ಒಪ್ಪಿಸುವಂತೆ ಸಲಹೆ ನೀಡಿದ ಪೊಲೀಸರು ಆಕೆಯನ್ನು ನಮ್ಮ ಸಂಸ್ಥೆಗೆ ಬಿಟ್ಟಿದ್ದರು. 


ನೂರಾರು ಮೈಲು ದೂರದಲ್ಲಿದ್ದ ಮಗುವಿನ ತಾಯಿಯನ್ನು ಪತ್ತೆಹಚ್ಚಿದಾಗ, ಆಕೆ ಗೋಳಿಡುತ್ತಾ ನಮ್ಮ ಸಿಬ್ಬಂದಿಗಳೊಟ್ಟಿಗೆ ತನ್ನ ಮಗಳಿಗಾಗಿ ಕಾತರಿಸಿ ಒಡನಾಡಿಗೆ ಬಂದಿದ್ದಳು. ನಂದಿಹೋದ ಬೆಂಕಿಯಿಂದ ಎದ್ದುಬಂದಂತಿದ್ದ ಮಹಿಳೆ, ತನ್ನ ತೆಳ್ಳಗಾಗಿದ್ದ ಕೂದಲನ್ನೇ ಬಿಗಿಯಾಗಿ ಕಟ್ಟಿ ಪುಟ್ಟ ಕೊಂಡೆಯಾಗಿಸಿ ಹೂದಿಂಡಿನ ತುಂಡೊಂದನ್ನು ಕೂದಲೊಳಗೆ ಸಿಲುಕಿಸಿಕೊಂಡಿದ್ದಳು. ಮಗಳಿಗಾದ ಸ್ಥಿತಿಯನ್ನು ನೆನೆದು, ಹರಿದ ಸೀರೆಯ ಸೆರಗತುದಿಯನ್ನು ಬಾಯಿಗೆ ತುರುಕಿ ಮೂಲೆಯಲ್ಲಿ ನಿಂತು ಬಿಕ್ಕಳಿಸತೊಡಗಿದಳು. ಇವಳ ಅಪ್ಪ ಕುಡುಕ, ಇವಳಿಗೋ ಓದಲು ಇಷ್ಟ, ಯಾರ ಮೂಲಕವೋ ಪರಿಚಯವಾಗಿದ್ದ ಆ ದರಿದ್ರ ಹಾಗೂ ಅವನ ಹೆಂಡತಿ ನಮ್ಮ ಕಷ್ಟಕ್ಕೆ ಲೊಚಗುಟ್ಟಿ, ನಿನಗೇನೂ ಆತಂಕ ಬೇಡ, ನಿನ್ನ ಮಗಳನ್ನು ನಾವು ಓದಿಸುತ್ತೇವೆ, ಅದಕ್ಕೆ ಬದಲಾಗಿ ನಮ್ಮ ಮನೆಯಲ್ಲಿ ಆಕೆ ಒಂದಿಷ್ಟು ಕೆಲಸ ಮಾಡಿದರೆ ಸಾಕು ಎಂದು ಹೇಳಿ, ನಮ್ಮನ್ನು ಮೈಸೂರಿಗೆ ಕರೆತಂದು ಆ ಬಂಗಲೆಯನ್ನು ತೋರಿಸಲಾಗಿ, ನಾನು ಅದನ್ನೆಲ್ಲಾ ನಂಬಿ ಮಗುವನ್ನು ಅವರೊಡನೆ ಕಳುಹಿಸಿಕೊಟ್ಟೆ, ಹೀಗೆ ಬದುಕು ನರಕ ಮಾಡುತ್ತಾರೆಂದು ಗೊತ್ತಾಗದೇ ಹೋಯಿತು.” ಎಂದು ಸಂಕಟವನ್ನು ಹಂಚಿಕೊಂಡಿದ್ದಳು. ಪೊಲೀಸ್ ಆಯುಕ್ತರಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಿದೆವು.


ಆಯುಕ್ತರು ಸ್ಯಾಂಟ್ರೋ ಭಾಸ್ಕರನ ಹಿಂದಿನ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿ, ಆತನಿಗೆ ಹೆಡೆಮುರಿ ಕಟ್ಟಲು ನಿರ‍್ಧರಿಸಿ, ದಿನಾಂಕ :04.07.2005ರಂದು ಆತನ ಸ್ಥಾನಬದ್ಧತೆಗೆ ಕಾರಣವಾದ ಅಂಶಗಳನ್ನಿಟ್ಟುಕೊಂಡು ಸರ‍್ಕಾರಕ್ಕೆ ಪತ್ರವೊಂದನ್ನು ಬರೆದರು. ಅಲ್ಲದೇ ಇಲಾಖಾ ಪತ್ರದ ಮೂಲಕ ಆರೋಪಿ ಸ್ಯಾಂಟ್ರೋ ಭಾಸ್ಕರನಿಗೆ ಆತನ ಹಿನ್ನೆಲೆ ಹಾಗೂ ಅಪರಾಧಗಳನ್ನು ಮನದಟ್ಟು ಮಾಡಿ, ಆತನ ಕೆಟ್ಟ ಸಹವಾಸಗಳು, ವ್ಯಸನಗಳು, ಜೂಜಾಟ ಹಾಗೂ ವೇಶ್ಯೆಯರ ಸಹವಾಸ, ಸುಲಭದ ಹಣಕ್ಕಾಗಿ ಯುವತಿಯರನ್ನು ಮತ್ತು ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ಶೋಷಣೆಯ ವ್ಯಾಪಾರಕ್ಕೆ ಒಳಪಡಿಸುವ ದಂಧೆ, ಅದಕ್ಕಾಗಿ ಆತ ಕಟ್ಟಿಕೊಂಡ ಅನೈತಿಕ ಜಾಲದ ಬಗ್ಗೆ, ವಾಹನಗಳ ಕಳ್ಳತನ ಹಾಗೂ ಸಮಾಜ ವಿದ್ರೋಹಿ ಚಟುವಟಿಕೆಗಳು, ಅದಕ್ಕಾಗಿ ದೂರವಾಣಿ ಬಳಕೆ, ಇವೆಲ್ಲವುಗಳಿಂದ ಹದಗೆಡುತ್ತಿರುವ ಸಾಮಾಜಿಕ ಸ್ವ್ವಾಸ್ಥ್ಯದ  ಬಗ್ಗೆ ವಿವರವಾಗಿ ದಾಖಲಿಸಿ, “ಬೆಂಗಳೂರು, ಮೈಸೂರು ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ನಿಮ್ಮ ಮೇಲೆ ಪ್ರಕರಣಗಳು ದಾಖಲಾಗಿದ್ದರೂ ಸಹ, ಸಮಾಜದ ನೆಮ್ಮದಿ ಕದಡುವ ಚಟುವಟಿಕೆಗಳಿಂದ ಪೂರ‍್ಣವಾಗಿ ನಿಮ್ಮನ್ನು ತಡೆಗಟ್ಟಲು ಸಾಧ್ಯವಾಗಿರುವುದಿಲ್ಲ. ಕೆಲವು ಪ್ರಕರಣಗಳಲ್ಲಿ ದಸ್ತಗಿರಿ ಮಾಡಿದಾಗ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಂದಿದ್ದರೂ, ಇನ್ನೂ ಕೆಲವು ಪ್ರಕರಣಗಳಲ್ಲಿ ದಸ್ತಗಿರಿಯಾಗದೇ, ಕೆಲವೊಂದು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೂ ಹಾಜರಾಗದೇ, ನ್ಯಾಯಾಲಯಗಳಲ್ಲಿ ಪ್ರಕರಣಗಳು ಇತ್ಯೆಥವಾಗದಿರಲು ಕಾರಣವಾಗಿರುತ್ತೀರಿ. ಈ ಎಲ್ಲಾ ಕಾರಣಗಳಿಂದ ನಿಮ್ಮನ್ನು ಗೂಂಡಾ ಹಾಗೂ ಅಕ್ರಮ ಚಟುವಟಿಕೆಗಳ ತಡೆ ಅಧಿನಿಯಮ 1985 ರ ಅಡಿಯಲ್ಲಿ “ಸ್ಥಾನಬದ್ಧತೆ” ಗಾಗಿ ಜೈಲಿಗೆ ಕಳುಹಿಸುತ್ತಿದ್ದೇವೆ” ಎಂಬ ಸುದೀರ‍್ಘ ಕಾರಣಗಳನ್ನು ನೀಡಿ, ಆತನನ್ನು ಜೈಲಿಗಟ್ಟಿದ್ದರು. 


ತನ್ನ ಚಟುವಟಿಕೆಯ ತರಬೇತಿ ಸ್ಥಳವು ಕಾರಾಗೃಹವೇ ಎಂದುಕೊಂಡಿದ್ದ ಸ್ಯಾಂಟ್ರೋ ಭಾಸ್ಕರ, ಬಾಲ ಬಿಚ್ಚುವ ಅಧಿಕಾರಿಗಳನ್ನು ಮಣಿಸಿ ಕೈಕಟ್ಟಿ ನಿಲ್ಲಿಸುವುದು ಹೇಗೆ? ಜೊಲ್ಲಿಗಾಗಿ ಕಾದವರಿಗೆ ಬೆನ್ನು ಸವರುವುದು ಹೇಗೆ? ಎಂಬ ಪರಮನೀಚ ವಿಧ್ಯೆಯನ್ನು ಕಾರಾಗೃಹದಲ್ಲೇ ಡಿಪ್ಲೋಮಾ ಮುಗಿಸಿದಂತೆ ಮುಗಿಸಿ, ಒಂದೂವರೆ ವರ‍್ಷದ ನಂತರ ಜಾಮೀನಿನ ಮೇಲೆ ಹೊರಬಂದಿದ್ದ. ಮತ್ತೆ ನ್ಯಾಯಾಲಯಗಳಿಗೆ ಗೈರಾಗತೊಡಗಿ, ಮತ್ತೊಮ್ಮೆ ನ್ಯಾಯಾಲಯದಲ್ಲಿ “ಘೋಷಿತ ಅಪರಾಧಿ” ಎನಿಸಿಕೊಂಡ. ಈತನ ದಿನವೊಂದರ ಕಮಾಯಿಯೇ ಎರಡು ಲಕ್ಷ ರೂಪಾಯಿಗಳನ್ನು ದಾಟಿತ್ತು! ಅದರಲ್ಲಿ ಒಂದು ಭಾಗವನ್ನು ತನ್ನ ರಕ್ಷಣೆಗಾಗಿ ಧಾವಿಸಿದವರಿಗೆ ಹಂಚುತ್ತಾ, ಎಂಜಲು ಕಾಸಿಗೆ ತನ್ನ ಮುಂದೆ ಮುದುಡಿ ನಿಲ್ಲುವ ಕೆಲವು ಭ್ರಷ್ಟರನ್ನು ಮಾಹಿತಿದಾರರನ್ನಾಗಿಸಿಕೊಂಡು, ಬಾಲೆಯರ ಮೈ ಸುಲಿಯಲು ಐಷಾರಾಮಿ ಕಾರುಗಳನ್ನೇ ಬಳಸತೊಡಗಿದ. ಹೋಟೆಲು, ರೆಸರ‍್ಟುಗಳ ಕಾವಲುಗಾರರೆಡೆಗೂ ಹಸಿರು ನೋಟು ಎರಚುತ್ತಾ, ತನ್ನ ಸುಳಿವು ಸಿಗದಂತೆ ನೋಡಿಕೊಳ್ಳತೊಡಗಿದ. 


ಈ ಮಧ್ಯೆ ಎರಡು ಮಹತ್ತರವಾದ ನಾಟಕಗಳು ಸ್ಯಾಂಟ್ರೋ ಭಾಸ್ಕರನ ಮಂಡಳಿಯಿಂದ ನಡೆದವು. ಅರವಿಂದನಗರದ ಅಡ್ಡೆಯ ಮೇಲೆ ಧಾಳಿಯಾದ ನಂತರ ಭಾಸ್ಕರ ಹಾಗೂ ಆತನ ಹೆಂಡತಿಯ ನಡುವೆ ಏನೋ ಮನಸ್ಥಾಪ ಉಂಟಾಗಿ, ಆಕೆ ಪತಿಯ ವಿರುದ್ಧವೇ ತಿರುಗಿಬಿದ್ದಿದ್ದಳು! ಪತ್ನಿಗೆ ಬುದ್ಧಿ ಕಲಿಸಿ, ಮತ್ತೆ ತನ್ನ ಹಾದಿಯಲ್ಲಿ ಬರುವಂತೆ ಮಾಡಲು ಭಾಸ್ಕರ ತನ್ನ ನಾಲ್ಕು ವರ‍್ಷದ ಹೆಣ್ಣುಮಗುವನ್ನೇ ಆಕೆಯಿಂದ ಕದ್ದೊಯ್ದು, ದೂರವಿರಿಸಿಕೊಂಡು “ನೀನು ಬಾರದಿದ್ದರೆ ಮಗುವನ್ನೇ ಇಲ್ಲವಾಗಿಸಿಬಿಡುತ್ತೇನೆ” ಎಂದು ಧಮಕಿ ಹಾಕಿದ್ದ. “ಮಗುವನ್ನು ಕೊಡಿಸಿಕೊಡಿ” ಎಂದು ಭಾಸ್ಕರನ ಪತ್ನಿ ನೀಡಿದ್ದ ದೂರು ಮಾಧ್ಯಮಗಳಲ್ಲೆಲ್ಲಾ ಹರಿದಾಡಿದರೂ, ಮತ್ತೆ ಅವರುಗಳು ಒಂದುಗೂಡಿ ಯಾರ ಗಮನಕ್ಕೂ ಬಾರದೆ ಮತ್ತಷ್ಟು ವ್ಯವಸ್ಥಿತವಾಗಿ ದಂಧೆ ನಡೆಸತೊಡಗಿದರು.


ಹಲವಾರು ತಿಂಗಳುಗಳ ನಂತರ ರಂಗಮ್ಮ ಎಂಬ ವಯಸ್ಸಾದ ಮಹಿಳೆಯೊಬ್ಬಳು ಒಡನಾಡಿಗೆ ಬಂದು ಕರ‍್ನಾಟಕ ಕರ‍್ಕಾರದ ‘ಸಾಂತ್ವನ ಮಹಿಳಾ ಸಹಾಯವಾಣಿ’ಯಲ್ಲಿ ತನ್ನ ಮಗಳನ್ನು ಹುಡುಕಿಕೊಡುವಂತೆ ದೂರೊಂದನ್ನು ದಾಖಲಿಸಿದ್ದಳು. ಪೊಲೀಸ್ ಠಾಣೆಗಳಲ್ಲೂ ಪ್ರಕರಣ ದಾಖಲಾಯಿತು. ಕಾಣೆಯಾಗಿದ್ದವಳು ಬೇರೆ ಯಾರೂ ಅಲ್ಲ, ಸ್ಯಾಂಟ್ರೋ ಭಾಸ್ಕರನ ಪತ್ನಿಯೇ! ಬಂದಿದ್ದವರು ಭಾಸ್ಕರನ ಅತ್ತೆ. ಪ್ರಕರಣದ ನಂತರದ ದಿನಗಳಲ್ಲಿ ಮಂಡ್ಯ ಜಿಲ್ಲೆಯ ಪೊಲೀಸ್ ಠಾಣಾ ಮಿತಿಗೆ ಸೇರುವ ನಾಲೆಯೊಂದರಲ್ಲಿ ತೇಲಿಕೊಂಡು ಬಂದ ಹೆಣವನ್ನು ಗುರುತಿಸಿದ ಆಕೆ “ಆ ಹೆಣ ತನ್ನ ಮಗಳದ್ದೇ” ಎಂದು ಹೇಳಿ ಪ್ರಕರಣವನ್ನು ಮುಕ್ತಾಯಗೊಳಿಸಿಕೊಂಡಿದ್ದರು. ವಿಚಿತ್ರವೆಂದರೆ ಸ್ಯಾಂಟ್ರೋ ಭಾಸ್ಕರನ ಪತ್ನಿ ತೀರಿಕೊಂಡಿರಲಿಲ್ಲ. ಪೊಲೀಸ್ ಕಡತಗಳಲ್ಲಿ ಹೆಣವಾಗಿ, ವಾಸ್ತವ ಪ್ರಪಂಚಕ್ಕೆ ಮತ್ತೊಂದು ಹೆಸರಿನೊಡನೆ ಎದ್ದುಬಂದಿದ್ದ ಆಕೆ ಜಾಲದ ಪ್ರಮುಖ ರೂವಾರಿಯಾಗಿ ಕರ್ತವ್ಯನಿರ‍್ವಹಿಸತೊಡಗಿದಳು! 


ನ್ಯಾಯಾಲಯಕ್ಕೆ ಹಾಜರಾಗದೆ, ಚಳ್ಳೆಹಣ್ಣು ತಿನ್ನಿಸುತ್ತಾ “ಘೋಷಿತ ಅಪರಾಧಿ”ಯೆಂದೆನಿಸಿಕೊಂಡಿದ್ದ ಸ್ಯಾಂಟ್ರೊ ಭಾಸ್ಕರನ ಇರುವಿಕೆಯನ್ನು ಪತ್ತೆಹಚ್ಚಿ ಪೊಲೀಸರಿಗೆ ತಿಳಿಸಿ ದಸ್ತಗಿರಿಯಾಗುವ ಸಂದರ‍್ಭ, ಆತ ನಮಗೆ  ಎಂದು ಬೆದರಿಕೆಯೊಡ್ಡಿ ಮತ್ತೆ ಜೈಲು ಸೇರಿದ್ದ. ಒಂದು ವರ‍್ಷದ ನಂತರ ಜಾಮೀನಿನ ಮೇಲೆ ಹೊರಬಂದು ತನ್ನ ಕಾನೂನು ಸಲಹೆಗಾರರ ಸಲಹೆ ಪಡೆದು, ಪತ್ನಿಯ ಮೂಲಕ ನಮ್ಮ ಹಾಗೂ ದಸ್ತಗಿರಿ ಮಾಡಿದ್ದ ಪೊಲೀಸ್ ಅಧಿಕಾರಿಗಳ ಮೇಲೆ “ಜಾತಿನಿಂದನೆ” ಪ್ರಕರಣವನ್ನು ದಾಖಲಿಸಿದ! ಆ ಸನ್ನಿವೇಶದಲ್ಲಿ ಕೆಲವು ಅಧಿಕಾರಿಗಳು ಮಕ್ಕಳ ಭಕ್ಷಕನೊಬ್ಬನ ಕೈಯಲ್ಲಾಡೋ ಬುಗುರಿಯಂತಾಗಿ, ನಮ್ಮ ಮೇಲಿನ ಸುಳ್ಳು ದೂರಿಗೆ ಜೀವತುಂಬುವ ದುಸ್ಸಾಹಸಕ್ಕಿಳಿದರು.


ನಮ್ಮ ಮೇಲೆ ದಾಖಲಾಗಿದ್ದ ‘ಜಾತಿನಿಂದನೆ’ಯ ಪ್ರಕರಣ ಸಾಕಷ್ಟು ಸಾಮಾಜಿಕ ಚರ‍್ಚೆ ಹಾಗೂ ಸಂಚಲನವನ್ನು ಉಂಟುಮಾಡಿತ್ತು. ನ್ಯಾಯಾಲಯದಲ್ಲಿ ಜಾಮೀನು ದೊರೆಯುವುದು ದುಸ್ತರವೆನಿಸುತ್ತಿದ್ದ ಸಂದರ‍್ಭದಲ್ಲಿ ಸಮಾಜದ ಅಸಮಾನತೆಯ ಹೆಣಹೊತ್ತು, ಅಂತ್ಯಸಂಸ್ಕಾರ ಮಾಡುವ ದೇವನೂರ ಮಹದೇವ ಹಾಗೂ ರಾಜಶೇಖರ ಕೋಟಿಯವರು ನಮ್ಮ ಉಳಿವಿಗಾಗಿ ದನಿಯೆತ್ತಿದ್ದರು. ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದ ದೇವನೂರರು “ಎಷ್ಟೋ ಅತಂತ್ರರನ್ನು ಮಡಿಲಿಗಾಕಿಕೊಂಡು ಬೆಳೆಸುತ್ತಿರುವ ಇವರನ್ನು ಸರ‍್ಕಾರ ಗೌರವಿಸಬೇಕು, ಇಲ್ಲವಾದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಪೊಲೀಸ್ ಇಲಾಖೆಗೆ ಪೂರಕವಾಗಿ ಕಾರ‍್ಯ ನಿರ‍್ವಹಿಸುತ್ತಾ, ಮಾನವ ಕಳ್ಳಸಾಗಾಣಿಕೆ ವಿರುದ್ಧ ಹೋರಾಟ ಮಾಡುವ ಇವರನ್ನು ಸೌಜನ್ಯದಿಂದ ನಡೆಸಿಕೊಳ್ಳಬೇಕು. ಅಂತಃಕರಣ ಮಿಡಿಯುವ ಸಾಧನೆ ಮಾಡಿ, ಸಮಾಜಕ್ಕೆ ಮಾದರಿಯಾಗಿರುವ ಒಡನಾಡಿಯ ಬೆಂಬಲಕ್ಕೆ ನಾವಿದ್ದೇವೆ. ಇದೊಂದು ಸುಳ್ಳು ಮೊಕದ್ದಮೆ ಎಂದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಒಡನಾಡಿಯ ಸೇವೆ ಸಹಿಸದ ಕೆಲವರು ರೂಪಿಸಿದ ಸಂಚು ಎಂಬ ಅನುಮಾನವೂ ಹುಟ್ಟುತ್ತದೆ. ಹುಸಿದೂರನ್ನು ಪಡೆದು ಬಂಧಿಸಿ, ಚಿತ್ರಹಿಂಸೆ ನೀಡುವುದು ಸರಿಯಲ್ಲ” ಎಂದಿದ್ದರು. ಹಾಗೆಯೇ ಅವರ ನೋವಿಗೆ ಸಮಾಜವು ಮಿಡಿಯಬೇಕೆಂದು ತಿಳಿಸಿ, ಆಂದೋಲನ ದಿನಪತ್ರಿಕೆಯ ಮೂಲಕ ಒಡನಾಡಿಯ ಪರ ಜನಾಭಿಪ್ರಾಯ ಮೂಡಿಸಿ, ಸಾಮಾನ್ಯ ಜನರಿಂದ ಸಂಗ್ರಹಿಸಲ್ಪಟ್ಟ ಅತ್ಯಮೂಲ್ಯ ದೇಣಿಗೆಯನ್ನು ಒಡನಾಡಿಗೆ ನೀಡಿದ್ದರು. ಅದು ಹಣವಷ್ಟೇ ಆಗಿರಲಿಲ್ಲ, ಸಮಾಜ ನಮಗೆ ನೀಡಿದ್ದ ಬೃಹತ್ ನೈತಿಕ ಶಕ್ತಿಯಾಗಿತ್ತು. ಸಂತಸದ ವಿಷಯವೇನೆಂದರೆ, ಕರ‍್ನಾಟಕದ ಮಾನ್ಯ ಉಚ್ಛ ನ್ಯಾಯಾಲಯವೂ ಕೂಡ ನಮ್ಮ ಮನವಿಯನ್ನು ಮಾನವೀಯವಾಗಿ ಕೈಗೆತ್ತಿಕೊಂಡು, ಒಡನಾಡಿಯ ಜಾತ್ಯತೀತ, ಧರ‍್ಮಾತೀತ ಹಾಗೂ ದಲಿತಪರ ಹಿನ್ನೆಲೆಯನ್ನು ಪರಿಗಣಿಸಿ, ಅದುವರೆಗೂ ಜಾಮೀನು ಲಭಿಸದಿದ್ದ ‘ಜಾತಿನಿಂದನೆ’ ಪ್ರಕರಣಗಳಿಗೆ ಹೊರತುಪಡಿಸಿದಂತೆ, ನಮಗೆ ಜಾಮೀನನ್ನು ನೀಡಿ ನಮ್ಮ ನೈತಿಕ ಸ್ಥೈರ‍್ಯವನ್ನು ಬಲಗೊಳಿಸಿತ್ತು.


ಆತ್ಮವಂಚನೆಯೊಡನೆ ಸ್ಯಾಂಟ್ರೋ ಭಾಸ್ಕರನ ಹಿಂದೆ ಓಡಾಡುವ ಭ್ರಷ್ಠರ ಹಿಂಡೇ ಇದೆ, ಅದುವೇ ಅವರ ಸೋಂಕು ಹಿಡಿದ ಕರ‍್ತವ್ಯನಿಷ್ಠೆಯಾಗಿದೆ. ಭ್ರಷ್ಟ ವ್ಯವಸ್ಥೆಯಿಂದಾಗಿ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಾ ಧೂರ‍್ತ ನಿಶ್ಚಿಂತನಾಗಿದ್ದಾನೆ.