ವಿದ್ಯಾರ್ಥಿಗಳ ಕಣ್ಣಲ್ಲಿ ನೀರು ತರಿಸಿದ  ನನ್ನ ಸೊಹ್ರಾಬ್-ರುಸ್ತುಂ ಪಾಠ

ಹಳ್ಳಿ ಹೈದನ ನೂರೆಂಟು ನೆನಪು

ವಿದ್ಯಾರ್ಥಿಗಳ ಕಣ್ಣಲ್ಲಿ ನೀರು ತರಿಸಿದ  ನನ್ನ ಸೊಹ್ರಾಬ್-ರುಸ್ತುಂ ಪಾಠ

ವಿದ್ಯಾರ್ಥಿಗಳ ಕಣ್ಣಲ್ಲಿ ನೀರು ತರಿಸಿದ 


ನನ್ನ ಸೊಹ್ರಾಬ್-ರುಸ್ತುಂ ಪಾಠ

ಸಿ-ಚಿಕ್ಕಣ್ಣ,

ಒಂದು ದಿನ ಶಾಲೆಯಲ್ಲಿ 9ನೇ ತರಗತಿಯ ಇಂಗ್ಲಿಷ್ ಪಾಠ, ಅದರಲ್ಲಿ ಸೊಹ್ರಾಬ್-ರುಸ್ತುಂ ಎಂಬ ಅಪ್ಪ ಮಗನ ಕಥೆ, ಸೊಹ್ರಾಬ್ ಒಬ್ಬ ವೀರ ಯೋಧ, ರಾಜನ ಸೇನಾಪತಿಯಾಗಿ ರಾಜ್ಯದ ರಕ್ಷಣೆ ಅವನ ಕರ್ತವ್ಯವಾಗಿತ್ತು. ಕೆಲವು ಅವ್ಯಕ್ತ ಕಾರಣಗಳಿಂದಾಗಿ ಅವನು ತನ್ನ ಹೆಂಡತಿಯನ್ನು ಪರಿತ್ಯಾಗ ಮಾಡಿದ್ದ, ಆ ಸಮಯದಲ್ಲಿ ಹೆಂಡತಿ ಗರ್ಭವತಿ, ಗಂಡನಿಂದ ದೂರವಾಗಿ ಯಾರದೋ ಆಶ್ರಯದಲ್ಲಿ ಇರುವಾಗ ಆಕೆಗೆ ರುಸ್ತುಂ ಎಂಬ ಮಗ ಹುಟ್ಟುತ್ತಾನೆ. ಸಿಂಹದ ಹೊಟ್ಟೆಯಲ್ಲಿ ಸಿಂಹದ ಮರಿಯೇ ಹುಟ್ಟುವಂತೆ, ರುಸ್ತುಂ ತನ್ನ ತಾಯಿಯ ಆಶ್ರಯದಲ್ಲಿ ಬೆಳೆದರೂ ತಂದೆಯಂತೆ ವೀರ ಯೋಧನಾಗುತ್ತಾನೆ. ನಂತರ ಮಗದೊಂದು ರಾಜನ ಆಶ್ರಯದಲ್ಲಿ ಸೇನೆಗೆ ಸೇರಿ, ಯುದ್ಧಕ್ಕೆ ಹೋಗುತ್ತಾನೆ. ಶತ್ರು ಸೈನ್ಯದ ಮುಖ್ಯಸ್ಥ ಅವನ ತಂದೆ. ಆದರೆ ಅವನಿಗೆ ಆ ವಿಷಯ ತಿಳಿದಿರಲಿಲ್ಲ. ಇಬ್ಬರಿಗೂ ರಣಾಂಗಣದಲ್ಲಿ ಯುದ್ಧ ನಡೆದು ರುಸ್ತುಂ ಸೊಹ್ರಾಬನನ್ನು ಸಾಯಿಸುವ ಸನ್ನಿವೇಶ, ಅಲ್ಲಿಗೆ ಅವನ ತಾಯಿ ಅಚಾನಕ್ಕಾಗಿ ಬಂದು ಅವರಿಬ್ಬರ ಸಂಬಂಧದ ರಹಸ್ಯವನ್ನು ಹೇಳುತ್ತಾಳೆ, ಆಗ ತಂದೆ ಮಗನ ಮಧ್ಯೆ ನಡೆಯುವ ಸಂಭಾಷಣೆ ತುಂಬಾ ಅರ್ಥಗರ್ಭಿತವೂ, ಮನಕಲಕುವಂತೆಯೂ ನಡೆಯುತ್ತದೆ. ಈ ವಿಷಮ ಸನ್ನಿವೇಶವನ್ನು ಪಠ್ಯಪುಸ್ತಕದಲ್ಲಿ ರಸವತ್ತಾಗಿ ರಚನಾಕಾರರು ವಿವರಿಸಿದ್ದರು. ಈ ಕಥೆಯನ್ನು ನಾನು ನನ್ನದೇ ಆದ ರೀತಿಯಲ್ಲಿ ವಿವರಣೆಯನ್ನು ವಿದ್ಯಾರ್ಥಿಗಳಿಗೆ ನೀಡಿದೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸೊಹಾಬ್ - ರುಸ್ತುಂ ಎರಡೂ ಪಾತ್ರವನ್ನು ಏಕಪಾತ್ರ ಅಭಿನಯದ ಮೂಲಕ ಮನಮುಟ್ಟುವಂತೆ ಮಾಡಿದೆ,


ಅಂದಿನ ತರಗತಿಯಲ್ಲಿ ಸೂಜಿ ಬಿದ್ದರೂ ಕೇಳಿಸುವಂತೆ ನೀರವ ಮೌನ ಆವರಿಸಿತ್ತು. ಯಾವ ಪರಿವೆಯೂ ಇಲ್ಲದೆ ನನ್ನ ಕಾಲೇಜು ದಿನಗಳ ನಾಟಕದ ಅನುಭವಕ್ಕೆ ಜಾರಿ ಅಭಿನಯಿಸಿದಂತೆ ಭಾಸವಾಯಿತು, ಸುಮಾರು 45 ನಿಮಿಷಗಳಾದ ಮೇಲೆ ಸೊಹ್ರಾಬ್ ರುಸ್ತುಂ ಜತೆಗೆ ಅವರ ತಾಯಿಯ ಸಮಾಗಮವನ್ನು ವರ್ಣಿಸಿ ಹುಡುಗರತ್ತ ನೋಡಿದೆ. ಎಲ್ಲರ ಕಣ್ಣಲ್ಲೂ ನೀರು, ಮುಂದೆ ಕುಳಿತಿದ್ದ ಹುಡುಗಿಯರು ಬಿಕ್ಕಳಿಸುತ್ತಿದ್ದರು. ಅವರನ್ನು ಕಂಡು ನನಗೂ ಆಳು ಬಂತು, ಪ್ಯಾಂಟ್ ಜೇಬಿನಲ್ಲಿದ್ದ ಕರ್ಚೀಫನ್ನು ತೆಗೆದುಕೊಳ್ಳುತ್ತಿದ್ದೆ, ಅಷ್ಟರಲ್ಲಿ 2-3 ಜನ ಉಪಾಧ್ಯಾಯರು ತರಗತಿಗೆ ಬಂದು, ಎಲ್ಲರೂ ಅಳ್ತಾ ಇದ್ದಾರೆ ಕ್ಲಾಸ್‌ನಲ್ಲಿ ಅಂತ ಅಟೆಂಡರ್ ಬಂದು ಹೇಳಿದೆ, ಏನಾಯಿತೋ ಎಂದು ಬಂದೆವು' ಅಂದರು. 'ಏನಿಲ್ಲ, ಸೊಹ್ರಾಬ್ - ರುಸ್ತುಂ ಪಾಠ ಮಾಡುತ್ತಿದ್ದೆ. ಅಲ್ಲಿನ ಸನ್ನಿವೇಶಕ್ಕೆ ಮಕ್ಕಳು ತುಂಬಾ ಹೊಂದಿಕೊಂಡು ಅವರ ಭಾವನೆಯನ್ನು ಆಳುವಿನ ಮೂಲಕ ಹೊರ ಹಾಕಿದ್ದಾರೆ' ಅಂದೆ. 'ಅಷ್ಟೇನಾ' ಅಂದರು ಉಪಾಧ್ಯಾಯ ಸ್ನೇಹಿತರು. ಅಷ್ಟರಲ್ಲಿ ಪೀರಿಯಡ್ ಮುಗಿದು ಬೆಲ್ ಆಯಿತು.


ಸೊಹ್ರಾಬ್-ರುಸ್ತುಂ ಪಾಠ ಶಾಲೆಯಲ್ಲಿ ಎಲ್ಲರ ಬಾಯಲ್ಲೂ, ಗುನುಗಲು ಆರಂಭವಾಯಿತು. ಹೆಡ್ ಮಾಸ್ಟರ್ ಒಂದು ದಿನ ನನ್ನನ್ನು ಕರೆಸಿ ಈ ಪಾಠವನ್ನು ಎಲ್ಲ ಹುಡುಗರ ಮುಂದೆ ದೊಡ್ಡ ಹಾಲ್‌ನಲ್ಲಿ ವ್ಯವಸ್ಥೆ ಮಾಡೋಣ. ಎಲ್ಲರೂ ಆನಂದಿಸಲಿ ಎಂದರು. ಅದರಂತೆ ಒಂದು ದಿನ ಶಾಲೆಯ ಸುಮಾರು 300 ವಿದ್ಯಾರ್ಥಿಗಳು ಹಾಗೂ ಸ್ಟಾಫ್ ಮತ್ತು ಹೆಚ್‌ಎಂ ಅವರ ಮುಂದೆ ಪುನಃ ಪ್ರದರ್ಶನ ನೀಡಿದೆ. ಅಪಾರವಾದ ಮೆಚ್ಚುಗೆ ವ್ಯಕ್ತವಾಯಿತು. ಹೀಗೆ ನನ್ನ ಕಂಗ್ಲಿಷ್ ಉಪಾಧ್ಯಾಯನ ಪಯಣ ಮುಂದುವರಿಯಿತು.


******
ಆ ವರ್ಷದ ಮಳೆಗಾಲ ಉತ್ತಮವಾಗಿದ್ದು ಜೂನ್‌ನಿಂದಲೇ ಕಾಲಕಾಲಕ್ಕೆ ಹದವಾಗಿ ಮಳೆ ಬೀಳಲು ಆರಂಭವಾಯಿತು. ಶಾಲಾ ಪಾಠದ ಜತೆಗೆ ವ್ಯವಸಾಯದ ಕಡೆಗೂ ಗಮನ ಹರಿಸಿದೆ. ಮನೆಯಲ್ಲಿದ್ದ ಇಬ್ಬರು ಆಳುಗಳ ಸಹಾಯದಿಂದ ಮುಡುಪಣ್ಣನ ಖಾಲಿ ಜಾಗದಲ್ಲಿ ಅಡಕೆ ಗಿಡ ಕಟ್ಟಿಸಿದೆವು. ಬಾವಿಗೆ ಜೋಡಿಸಿದ್ದ ಪಂಪ್‌ನಿಂದ ಯಥೇಚ್ಛವಾಗಿ ನೀರು ಬರುತ್ತಿತ್ತು. ಹೆಚ್ಚುವರಿ ನೀರನ್ನು ಪಕ್ಕದವರಿಗೂ ಬಿಡುತ್ತಿದ್ದೆವು. ಗಂಟೆ ಲೆಕ್ಕದಲ್ಲಿ, ತೋಟದ ಜತೆಗೆ ದಿನ್ನೆಯಲ್ಲಿ ರಾಗಿ, ಕಡಲೆಕಾಯಿ ಹುರುಳಿ, ನವಣೆ, ಕೊರಲೆ ಮುಂತಾದ ಬೆಳೆಗಳನ್ನು ಹಾಕಿದ್ದೆವು.


ದಸರಾ ರಜೆಯಲ್ಲಿ ಇದ್ದಕ್ಕಿದ್ದ ಹಾಗೆ ಶಂಕ್ರಪ್ಪ ಕಾಕ, ದೊಡ್ಡಚಿಕ್ಕಪ್ಪ ಕಾಕ, ಗಿರೇಗೊಂಡನಹಳ್ಳಿ ಕರಿಯಣ್ಣ ಮಾವ, ಚೌಡಮ್ಮ ಅತ್ತೆ ನಮ್ಮ ಮನೆಗೆ ಬಂದರು. ಪಡಸಾಲೆ ವಿಶಾಲವಾಗಿತ್ತು. ಅಲ್ಲಿಯೇ ಜಮಖಾನ ಹಾಸಿಕೊಂಡು ಕುಳಿತರು. ಹೊಲಕ್ಕೆ ಹೋಗಿದ್ದ ಅಪ್ಪ ಬಂದರು. ಕರಿಯಣ್ಣ ಮಾವನ ಎರಡನೆ ಮಗ ಕೆ. ಬಾಣದ ರಂಗಯ್ಯನಿಗೆ ದೊಡ್ಡಚಿಕ್ಕಪ್ಪ ಕಾಕನ ಎರಡನೆ ಮಗಳು ಜಯಮ್ಮ ಅವರನ್ನು ಕೊಟ್ಟು ಮದುವೆ ಮಾಡುವ ವಿಚಾರ ಊರಲ್ಲಿ ಆಗಲೇ ಪ್ರಚಾರವಾಗಿತ್ತು. ಅದರ ಮುಂದುವರಿದ ಭಾಗವಾಗಿ ಈ ಸಭೆ ಅಂದುಕೊಂಡು ನಾನೂ ಅದರಲ್ಲಿ ಪಾಲ್ಗೊಂಡೆ. ಅದಕ್ಕೆ ಕಾರಣ ಬಾಣದ ರಂಗಯ್ಯ ಮೈಸೂರಿನಲ್ಲಿ ಎಂ.ಕಾಂ ನಲ್ಲಿ ನನಗೆ 2 ವರ್ಷ ಸೀನಿಯರ್ ಹಾಗೂ ನನಗೆ ರೂಂ ದೊರಕಲು ಸಹಾಯ ಮಾಡಿದ್ದರು. ಜಯಮ್ಮ ದಂಡಿನದಿಬ್ಬದ ಗುರುದೇವ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ. ಅಂದರೆ ನನ್ನ ವಿದ್ಯಾರ್ಥಿಗಳಲ್ಲೊಬ್ಬಳು. ಹಾಗಾಗಿ ನನಗೆ ಕುತೂಹಲ ಇತ್ತು.


ಕಾಫೀ ಕೊಡುವುದರಿಂದ ಸಭೆ ಆರಂಭವಾಯಿತು. ಶಂಕ್ರಪ್ಪ ಮೇಷ್ಟ್ರು ತಂದೆಯವರನ್ನು ಉದ್ದೇಶಿಸಿ 'ಅಣ್ಣ ಜಯಮ್ಮನ್ನ ಬಾಣದ ರಂಗಯ್ಯನಿಗೆ ಕೊಟ್ಟು ಮದುವೆ ಮಾಡಿಕೊಡಲು ಮಾತುಕತೆ ಆಗಿ ತೀರ್ಮಾನ ಆಗಿದೆ' ಎಂದರು. ತಂದೆಯವರು 'ಸಂತೋಷ ಮಾಡ್ರೀ, ನನ್ನ ಕೇಳೋದೇನೈತೆÀ' ಆಂದರು ಸ್ವಲ್ಪ ಅಸಮಾಧಾನದಿಂದ, 


ಅದರ ಜತೆಗೆ ಚಿಕ್ಕಣ್ಣನಿಗೆ ಕರಿಯಣ್ಣ ಮಾವನ ಎರಡನೇ ಮಗಳು ಕಾಂತಮ್ಮನನ್ನು ತಂದುಕೊಂಡು ಎರಡೂ ಮದುವೆಗಳನ್ನು ಒಟ್ಟಿಗೇ ಮಾಡಬಹುದು. ಅಂತ ನಮ್ಮ ಅಭಿಪ್ರಾಯ' ಎಂದರು, 


ಅಪ್ಪ ಕೋಪದಿಂದ ಅದು ಸಾಧ್ಯವಿಲ್ಲ,  ಈ ಕರಿಯಪ್ಪ ಹಿಂದೆ ನಮಗೇನು ಮೋಸ ಮಾಡಿದನೆಂದು ನಿನಗೇನು ಗೊತ್ತಿಲ್ವಾ' ಅಂದು ಮತ್ತೆ ತಗಾದೆ ತೆಗೆದರು. ಚೌಡಮ್ಮತ್ತೆ ಎದ್ದು ಬಂದು ಅಪ್ಪನ  ಕೈ ಹಿಂದು ಹಿಂದಿನದೆಲ್ಲಾ ಮರೆತು ಬಿಡಣ್ಣ, ನಾನು ನಿನ್ನ ತಂಗಿ . ನನ್ನ ಕಷ್ಟಾನೂ ಕೇಳು, ನೀನಲ್ಲದೆ ನಮ್ಮ ಕಷ್ಟಕ್ಕಾಗೋರು ಯಾರು' ಎಂದು ಕಣ್ಣೀರು. ಅಸ್ತç  ಪ್ರಯೋಗಿಸಿದರು. 'ಹೌದಣ್ಣ, ಹಳೇದನ್ನೆಲ್ಲಾ ತೆಗೀಬೇಡ, ಅದೊಂದು 20 ವರ್ಷದ ಹಿಂದಿನ ಕತೆ, ಈಗೇಕೆ? ಮುಂದಿನದನ್ನು ನೋಡು' ಎಂದರು. 


ದೊಡ್ಡಚಿಕ್ಕಪ್ಪನವರ ಮೊದಲ ಭೇಟಿಯ ನಿಗೂಡತೆ, ಹಣ ತೆಗೆದುಕೊಳ್ಳದೆ ಮನೆಯನ್ನು ನಮಗೆ ಬಿಟ್ಟುಕೊಟ್ಟು, ತಂದೆಯವರ ಜತೆ ನವಿರಾಗಿ ಮಾತಾಡಿ ಒಪ್ಪಿಸಿದ್ದು ಇದಕ್ಕಾಗಿಯೇ ಎಂದು ಅರ್ಥವಾಯಿತು.


ಈ ಬಗ್ಗೆ ಬಹಳ ಹೊತ್ತು ಕೋಪ-ತಾಪದ ಮಾತುಗಳು ನಡೆದು ಕೊನೆಗೆ ಅಪ್ಪ 'ಚಿಕ್ಕಣ್ಣ ಇಲ್ಲೇ ಇದ್ದಾನೆ, ಅವನು ಒಪ್ಪಿಕೊಂಡರೆ ಆಗಬಹುದು' ಎಂದು ನನ್ನ ಕಡೆ ನೋಡಿದರು. 'ನನಗೆ ಈಗಲೇ ಮಧ್ಯೆ ಬೇಡ, ಸಂಬಂಧದಲ್ಲಿ ಮದುವೆ ಮಾಡ್ಕೊಳ್ಳೋಲ್ಲ' ಎಂದು ಹೇಳಿ ನಾನು ಎದ್ದು ಹೊರಗೆ ಹೋದೆ. ಒಳಗೆ ಸ್ವಲ್ಪ ಹೊತ್ತು ನಿಶ್ಯಬ್ದತೆ ಆವರಿಸಿತು.

ನಾನು ಹಜಾರದಲ್ಲಿ ಕುಳಿತಿದ್ದೆ, ಶಂಕ್ರಪ್ಪ ಮೇಷ್ಟ್ರು 'ಚೌಡಮ್ಮಕ್ಕನಿಗೆ ತವರು ಮನೆ ಇದು. ಕಾಂತಮ್ಮ ಮಿಡಲ್ ಸ್ಕೂಲ್‌ವರೆಗೂ ಓದಿದ್ದಾಳೆ, ಲಕ್ಷಣವಾಗಿದ್ದಾಳೆ, ಪೇಟೆ ಹುಡುಗಿಯರು ನಮಗೆ ಲಗತ್ತಾಗಲ್ಲ, ಸಂಬಂಧದಲ್ಲಿ ಹೆಣ್ಣು ತಂದರೆ ಹೊಂದಿಕೊಂಡು ಹೋಗ್ತಾರೆ' ಅಂತೆಲ್ಲಾ ಅಮ್ಮನ ತಲೆ ತಿಂದು ಒಪ್ಪಿಸುವ ಪ್ರಯತ್ನ ಮಾಡಿದರು. ಅಮ್ಮ 'ಹೂಂ' ಎಂದರು. ಬಿಕಾಂ ಓದುತ್ತಿದ್ದಾಗ ಪರಿಚಯವಾಗಿದ್ದ ಹುಡುಗಿ ಮದುವೆಯಾಗಿ ಕುಟುಂಬಸ್ಥಳಾಗಿದ್ದಾಳೆಂದು ತಿಳಿದ ಮೇಲೆ ನನ್ನ ತಲೆ ಬ್ಲಾಂಕ್ ಆಗಿತ್ತು.


'ಸರಿ ಅಮ್ಮ. ಆದರೆ ಒಂದು ಕಂಡೀಷನ್' ಎಂದೆ. 'ಏನದು' ಅಂದರು. 'ಈ ವರ್ಷದ ಹೈಸ್ಕೂಲ್ ಕೆಲಸ ಮುಗಿದ ಮೇಲೆ ನಾನು ಬೆಂಗಳೂರಿಗೆ ಹೋಗಿ ಬೇರೆ ಕೆಲಸ ಹುಡುಕುತ್ತೀನಿ. ನೀನು ಮನೇಲೇ ಇರಬೇಕೆಂದು ಒತ್ತಾಯ ಮಾಡಕೂಡದು' ಅಂದೆ. 'ಹಂಗೇ ಮಾಡುವಿಯಂತೆ ಇದಕ್ಕೆ ಒಪ್ಕೋ' ಅಂದರು. "ಆಗಲಿ' ಎಂದೆ. ಪಡಸಾಲೆಯಲ್ಲಿ ಕುಳಿತಿದ್ದ ಎಲ್ಲರೂ ಹೊರಗೆ ಬಂದರು. 'ತುಂಬ ಸಂತೋಷ ಕಣಪ್ಪ' ಅಂದರು ಕರಿಯಣ್ಣ ಮಾವ ಮತ್ತು ದೊಡ್ಡಚಿಕ್ಕಪ್ಪ ಕಾಕನವರು.