ಪಾಲಿಕೆಗೆ ಸ್ಕೌಟ್ಸ್ ಭವನ ಸ್ವಾಧೀನ ಪ್ರಕರಣ: ಸ್ಕೌಟ್ಸ್ ಸಂಸ್ಥೆ ಅರ್ಜಿ ವಜಾ

ಪಾಲಿಕೆಗೆ ಸ್ಕೌಟ್ಸ್ ಭವನ ಸ್ವಾಧೀನ ಪ್ರಕರಣ: ಸ್ಕೌಟ್ಸ್ ಸಂಸ್ಥೆ ಅರ್ಜಿ ವಜಾ

ಪಾಲಿಕೆಗೆ ಸ್ಕೌಟ್ಸ್ ಭವನ ಸ್ವಾಧೀನ ಪ್ರಕರಣ:
ಸ್ಕೌಟ್ಸ್ ಸಂಸ್ಥೆ ಅರ್ಜಿ ವಜಾ


ತುಮಕೂರು: ಮಹಾನಗರ ಪಾಲಿಕೆ ಕಚೇರಿ ಆವರಣದ ಹಿಂಭಾಗದಲ್ಲಿರುವ ಸ್ಕೌಟ್ಸ್ ಭವನ ಕಟ್ಟಡವನ್ನು ಹಿಂದಿನ ನಗರಸಭೆಯು ಭಾಗಶಃ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದ್ದ ಕ್ರಮದ ವಿರುದ್ಧ ಅರ್ಜಿ ಸಲ್ಲಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತರು ಸದರಿ ಪ್ರಕರಣದ ವಿಚಾರಣೆಗೆ ಸತತವಾಗಿ ಗೈರುಹಾಜರಾದ ಹಿನ್ನೆಲೆಯಲ್ಲಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾಧಿಕಾರಿಗಳಾದ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ವಜಾಗೊಳಿಸಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.
 ಪ್ರಾದೇಶಿಕ ಆಯುಕ್ತ ನವೀನ್‌ರಾಜ್ ಸಿಂಗ್ ಅವರು ಸೆಪ್ಟೆಂಬರ್ 7 ರಂದು ತೆರೆದ ನ್ಯಾಯಾಲಯದಲ್ಲಿ ತಮ್ಮ ಆದೇಶವನ್ನು ಹೊರಡಿಸಿದ್ದಾರೆ.
 ಪ್ರಕರಣಕ್ಕೆ ಸಂಬAಧಿಸಿದAತೆ ದಿನಾಂಕ 17-08-2021 ರಂದು, ದಿನಾಂಕ 24-08-2021 ರಂದು ಮತ್ತು ದಿನಾಂಕ 07-09-2021 ರಂದು -ಹೀಗೆ ಒಟ್ಟು ಮೂರು ದಿನಗಳು ವಿಚಾರಣೆ ನಡೆದಿತ್ತು. ಅರ್ಜಿದಾರರು ಮತ್ತು ಅವರ ಪರ ವಕೀಲರಿಗೆ ವಾದ ಮಂಡಿಸಲು ಕಾಲಾವಕಾಶ ನೀಡಲಾಗಿತ್ತು. ಆದರೆ ಅರ್ಜಿದಾರರು ಅಥವಾ ಅವರ ಪರ ವಕೀಲರು ವಿಚಾರಣೆಗೆ ಹಾಜರಾಗಿ ವಾದ ಮಂಡಿಸಲು ವಿಫಲರಾಗಿರುವುದರಿಂದ ಅರ್ಜಿದಾರರಿಗೆ ಈ ಪ್ರಕರಣವನ್ನು ಮುಂದುವರೆಸಲು ಆಸಕ್ತಿ ಇಲ್ಲವೆಂದು ಭಾವಿಸಿ, ಅವರ ಅರ್ಜಿಯನ್ನು ವಜಾಗೊಳಿಸಿರುವುದಾಗಿ ಪ್ರಾದೇಶಿಕ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಕರಣದ ವಿವರ
ಹಿಂದಿನ ನಗರಸಭೆಯಲ್ಲಿ ರೋಹಿಣಿ ಸಿಂಧೂರಿ ಅವರು ಪೌರಾಯುಕ್ತರಾಗಿದ್ದಾಗ ಸ್ಕೌಟ್ಸ್ ಭವನದ ಸ್ವಲ್ಪ ಭಾಗವನ್ನು ನಗರಸಭೆಯ ಸ್ವಾಧೀನಕ್ಕೆ ಪಡೆದಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಆಯುಕ್ತರು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. 2012-13 ರಲ್ಲಿ ಜಿಲ್ಲಾಧಿಕಾರಿಗಳು ಈ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದರು. 
ಆದರೆ ಈ ಮಧ್ಯೆ 2013 ರಲ್ಲಿ ರಾಜ್ಯ ಸರ್ಕಾರದ ಅಧಿಸೂಚನೆಯಂತೆ  2013 ರ ಡಿಸೆಂಬರ್ 20 ರಂದು ತುಮಕೂರು ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿತು. ಈ ಹಿನ್ನೆಲೆಯಲ್ಲಿ ಸದರಿ ಪ್ರಕರಣವು ನಿಯಮಾನುಸಾರವಾಗಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ದಿನಾಂಕ 24-06-2021 ರಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಸಕ್ಷಮ ಪ್ರಾಧಿಕಾರಿಯವರ ನ್ಯಾಯಾಲಯಕ್ಕೆ ವರ್ಗಾಯಿಸಲ್ಪಟ್ಟಿತ್ತು. ಬಳಿಕ ಅಲ್ಲಿ ಈ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿಕೊAಡು ಉಭಯ ಪಕ್ಷಗಳಿಗೆ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಅರ್ಜಿದಾರರಾದ ಸ್ಕೌಟ್ಸ್ ಸಂಸ್ಥೆಯವರು ಗೈರುಹಾಜರಾದ ಹಿನ್ನೆಲೆಯಲ್ಲಿ ಅವರ ಅರ್ಜಿ ಇದೀಗ ವಜಾಗೊಂಡಿದೆ.