ಊರಗಲದ ಫುಟ್‍ಪಾತ್‍ಗಳು -ಅಂಗೈಯಗಲದ ರಸ್ತೆಗಳು :ಸ್ಮಾರ್ಟ್ ಸಿಟಿ ಸ್ಪೆಷಲ್!
smart-city-special-broad-foot-path-narrow-roads
ಊರಗಲದ ಫುಟ್‍ಪಾತ್‍ಗಳು -ಅಂಗೈಯಗಲದ ರಸ್ತೆಗಳು :ಸ್ಮಾರ್ಟ್ ಸಿಟಿ ಸ್ಪೆಷಲ್!
ತುಮಕೂರು: ನಮ್ಮ ‘ತುಮಕೂರು ಸ್ಮಾರ್ಟ್ ಸಿಟಿ ಕಂಪನಿ’ಗೆ ಅದೇಕೋ ರಸ್ತೆ ಸೇತುವೆಗಳಿಗಿಂತ ಹೆಚ್ಚು ಪ್ರೀತಿ ಮತ್ತು ಅಕ್ಕರೆ ಫುಟ್‍ಪಾತ್‍ಗಳ ಮೇಲೇ ಎನ್ನುವುದು ಅವರು ನಗರದಲ್ಲಿ ಮಾಡಿರುವ ಮತ್ತು ಮಾಡುತ್ತಿರುವ ಕಾಮಗಾರಿಗಳನ್ನು ನೋಡಿದರೇ ಅರ್ಥವಾಗಿಬಿಡುತ್ತದೆ.
ಅದು ಹಿಂದಿನ ಬಾರ್ ಲೈನ್ ರಸ್ತೆ ಅಥವಾ ಈಗಿನ ಜನರಲ್ ಕಾರ್ಯಪ್ಪ ರಸ್ತೆಯನ್ನು ನೋಡಿದರೆ ಸಾಕು, ಅದೇ ಥರ ಮಂಡಿಪೇಟೆ ಮುಖ್ಯ ರಸ್ತೆಯನ್ನೂ ಇವರು ಅಭಿವೃದ್ಧಿ ಪಡಿಸಿದ್ದು, ಆ ರಸ್ತೆಯಲ್ಲಿ ಸಂಚರಿಸುವ ಎಲ್ಲರೂ ಬಾಯಿಗೆ ಬಂದಂತೆ ಬೈದುಕೊಳ್ಳುವ ಪರಿಸ್ಥಿತಿಯನ್ನು ಈ ಇಂಜಿನಿಯರ್ ಗಳು ಸೃಷ್ಟಿಸಿದ್ದಾರೆ.
ಚರ್ಚ್ ವೃತ್ತದಿಂದ ಚಿಕ್ಕಪೇಟೆ ವೃತ್ತದವರೆಗಿನ ಭಾಗದಲ್ಲಿ ಎತ್ತರಿಸಿದ ಫುಟ್‍ಪಾತ್ ಗಳನ್ನು ಎರಡೂ ಕಡೆ ಮಾಡುವಾಗ ಅಗತ್ಯಕ್ಕಿಂತ ಹೆಚ್ಚಿಗೆ ಅಗಲಗೊಳಿಸುವ ಅವಶ್ಯಕತೆ ಏನಿತ್ತೋ ಆ ಇಂಜಿನಿಯರ್ ಗಳಿಗೇ ಗೊತ್ತು?
ಒಂದು, ಕೆಲವು ಅಂಗಡಿಗಳವರು ಮಾಡಿಕೊಂಡಿದ್ದ ಒತ್ತುವರಿಯನ್ನೂ ತೆರವುಗೊಳಿಸಲಿಲ್ಲ. ಜೊತೆಗೆ ಫುಟ್‍ಪಾತ್‍ಗಳೂ ಅಗಲ ಆಗಿಬಿಟ್ಟವು. ಇದರಿಂದ ಆ ರಸ್ತೆಯ ಅಂಗಡಿಗಳಿಗೆ ಬರುವ ಜನರು ಆಟೋ, ಸಣ್ಣಪುಟ್ಟ ಟೆಂಪೋಗಳಿರಲಿ ಸ್ಕೂಟರ್ ಗಳನ್ನೂ ನಿಲ್ಲಿಸುವಂತಿಲ್ಲ. ಜೊತೆಗೆ ಟ್ರಾಫಿಕ್ ಪೊಲೀಸರೂ ಈ ರಸ್ತೆಯನ್ನು ದಂಡದ ಮಳೆ ಸುರಿಸುವ ಅಕ್ಷಯ ಪಾತ್ರೆ ಎಂದುಕೊಂಡು ಬಿಟ್ಟಿದ್ದು, ಸದಾ ಅಲ್ಲೇ ವೀಲ್ ಲಾಕ್ ಮತ್ತು ಬಿಲ್ಲಿಂಗ್ ಮೆಶಿನ್ ಹಿಡಿದು ಠಳಾಯಿಸುತ್ತ ಇರುತ್ತಾರೆ.
ಊರಗಲದ ಫುಟ್ ಪಾತ್ ಗಳನ್ನು ಮಾಡಿದರೂ ಅವು ಪಾದಚಾರಿಗಳ ಸಂಚಾರಕ್ಕೇನೂ ಸುಗಮವಾಗಿಲ್ಲ. ಈ ರಸ್ತೆಯ ಕೆಲವು ಅಂಗಡಿಗಳವರ ಮಾಲೆಲ್ಲ ಇದೇ ಫುಟ್ ಪಾತನ್ನು ಅತಿಕ್ರಮಿಸಿಕೊಂಡಿರುವುದೇ ಇದಕ್ಕೆ ಕಾರಣ.
ತುಮಕೂರು ನಗರದ ಜನರ ಮನಸ್ಥಿತಿ ತೀರಾ ಜಡ್ಡುಗಟ್ಟಿ ಹೋಗಿರುವುದರಿಂದ ಯಾರು ಏನು ಹೇಳಿದರೂ ಯಾರೂ ಕೇಳುವುದೇ ಇಲ್ಲ. ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವ ಗಾದೆಯಂತೆ ಅಂತೂ ಇಂತೂ ಪಾದಚಾರಿಗಳಿಗೆ ಹಾದಿಯಿಲ್ಲ, ರಸ್ತೆಯಲ್ಲಿ ಒಂದು ಕ್ಷಣ ವಾಹನಗಳನ್ನು ನಿಲ್ಲಿಸುವಂತಿಲ್ಲ.